ಸೃಷ್ಟಿಕರ್ತ ಬ್ರಹ್ಮನಿಗೊಂದು ಸಾರಿ ವಿಚಿತ್ರವಾದ ಆಲೋಚನೆ ಬಂದಿತು. “ನಾನು ಇಡೀ ಪ್ರಪಂಚವನ್ನು ಸೃಷ್ಟಿಮಾಡಿದೆ. ಪಶು, ಪಕ್ಷಿಗಳನ್ನು ಸೃಷ್ಟಿಸಿದೆ. ಆದರೂ ನನಗೆ ತೃಪ್ತಿ ಇಲ್ಲ” ಎಂದುಕೊಂಡು ಯೋಚಿಸಿ ಯೋಚಿಸಿ ತನ್ನಂತೆಯೇ ಇರುವ ಒಂದು ಜೀವಿಯ ಪ್ರತಿಸೃಷ್ಟಿಯನ್ನೇ ಮಾಡಿದ. ಅದಕ್ಕೆ ಉಳಿದೆಲ್ಲ ಜೀವಿಗಳಿಗಿಂತ ಉನ್ನತವಾದ ಮೆದುಳನ್ನು ಕೊಟ್ಟ. ಸ್ವತಂತ್ರವಾದ ಆಲೋಚನೆ ಶಕ್ತಿ, ಬುದ್ಧಿವಂತಿಕೆ, ಧೈರ್ಯ, ಸಾಹಸ, ನಂಬಿಕೆ, ಆತ್ಮವಿಶ್ವಾಸ, ಭವಿಷ್ಯದಬಗ್ಗೆ ಚಿಂತಿಸುವುದು, ಹೀಗೆ ಎಲ್ಲಾ ಸಾಮರ್ಥ್ಯಗಳನ್ನು ಅದಕ್ಕೆ ನೀಡಿದ. ಅದನ್ನು ಮನುಷ್ಯನೆಂದು ಕರೆದ. ಹೀಗೆ ಸಕಲ ಗುಣಗಳನ್ನು ತುಂಬಿಕೊಂಡ ಮನುಷ್ಯನನ್ನು ಭೂಮಿಯ ಮೇಲೆ ಬಿಡುವಾಗ ಬ್ರಹ್ಮನಿಗೆ ಒಂದು ಆತಂಕವೂ ಎದುರಾಯಿತು. ಈ ಮನುಷ್ಯ ಬೆಳೆದು ತನಗಿರುವ ಶಕ್ತಿಗಳನ್ನೆಲ್ಲ ಅಭಿವೃದ್ಧಿ ಪಡಿಸಿಕೊಂಡು ಮುಂದೊಂದು ದಿನ ಕಾಲಾಂತಕ, ಪ್ರಾಣಾಂತಕ, ದೇವಾಂತಕನಾಗಿ ಬಿಡಬಹುದು ಎಂದು. ಆ ಕಾರಣದಿಂದ ಇನ್ನೂ ಕೊಡಬೇಕಾದ ಮಹಾಚೈತನ್ಯವನ್ನು ನೇರವಾಗಿ ಮನುಷ್ಯನಿಗೆ ನೀಡುವುದು ಹೇಗೆ? ಎಂಬ ಚಿಂತೆ ಕಾಡಿತು.
ಆಗ ಆಕಾಶದಲ್ಲಿ ಹಾರಾಡುತ್ತಿದ್ದ ಗರುಡನು ಬಂದು “ಬ್ರಹ್ಮದೇವಾ ಆ ಮಹಾಚೈತನ್ಯಶಕ್ತಿಯನ್ನು ನನಗೆ ದಯಪಾಲಿಸು ಅದು ಮನುಷ್ಯನಿಗೆ ಸಿಗದಂತೆ ಆಕಾಶದ ಎತ್ತರದಲ್ಲಿ ಬಚ್ಚಿಡುತ್ತೇನೆ” ಎಂದನು. ಬ್ರಹ್ಮನು “ಬೇಡ ಬೇಡ ಮನುಷ್ಯ ಮುಂದೊಂದು ದಿನ ಆಕಾಶವನ್ನೂ ಶೋಧಿಸಬಲ್ಲ. ಆಗ ಅದು ಅವನ ಕೈವಶವಾಗಬಹುದು” ಎಂದನು. ಸಮುದ್ರದಾಳದಲ್ಲಿ ಚಲಿಸುವ ದೊಡ್ಡ ಮೀನೊಂದು “ಬ್ರಹ್ಮದೇವಾ ಆ ಶಕ್ತಿಯನ್ನು ನನಗೆ ಕೊಡು. ನಾನು ಅದನ್ನು ಸಾಗರದ ಅತ್ಯಂತ ಆಳದಲ್ಲಿ ಬಚ್ಚಿಡುತ್ತೇನೆ” ಎಂದಿತು. ಅದಕ್ಕೂ ಬ್ರಹ್ಮನು ಒಪ್ಪಲಿಲ್ಲ. “ಮನುಷ್ಯನನ್ನು ನಂಬಲಿಕ್ಕಾಗದು ಅವನು ಮುಂದೊಂದು ಕಾಲಕ್ಕೆ ಇಡೀ ಸಾಗರವನ್ನು ಶೋಧಿಸಬಲ್ಲ” ಎಂದನು. ಆಗ ಅಲ್ಲಿಗೆ ಬಂದ ಇಲಿಯೊಂದು “ಬ್ರಹ್ಮದೇವಾ ಆ ಚೈತನ್ಯಶಕ್ತಿಯನ್ನು ನನಗೆ ಕೊಡು. ನಾನು ಅದನ್ನು ಮಹಾನ್ ಪರ್ವತದ ಅಡಿಯಲ್ಲಿ ಬಚ್ಚಿಡುತ್ತೇನೆ. ಅದು ಅವನಿಗೆ ಸಿಗುವುದಿಲ್ಲ” ಎಂದಿತು . ಬ್ರಹ್ಮನು ಅದಕ್ಕೂ ಒಪ್ಪಲಿಲ್ಲ. “ಮುಂದೊಂದು ದಿನ ಮಹಾತ್ವಾಕಾಂಕ್ಷಿಯಾದ ಮನುಷ್ಯನು ಇಡೀ ಭೂಮಂಡಲವನ್ನೆಲ್ಲ ಅಗೆದು ತೆಗೆದುಬಿಡುತ್ತಾನೆ.” ಎಂದನು
ಇದನ್ನೆಲ್ಲ ಗಮನಿಸುತ್ತಿದ್ದ ಮಂಗನೊಂದು ಕೊಂಬೆಯಿಂದ ಕೊಂಬೆಗೆ ಜಿಗಿದಾಡುತ್ತಿತ್ತು. ಅದು “ಬ್ರಹ್ಮದೇವಾ, ಮನುಷ್ಯನು ನನ್ನಂತೆ ಚಂಚಲಚಿತ್ತನು. ಅವನು ಸುತ್ತೆಲ್ಲ ಕಂಡದ್ದನ್ನೆಲ್ಲ ಶೋಧಿಸುತ್ತಾನೆ. ಆದರೆ ತನ್ನಂತರಂಗದೊಳಕ್ಕೆ ಗಮನ ಹರಿಸುವುದೇ ಇಲ್ಲ. ಆದ್ದರಿಂದ ನೀನು ಅವನಿಗೇ ಅರಿವಿಲ್ಲದಿರುವ ಅವನ ಅಂತರಂಗದಲ್ಲೇ ಚೈತನ್ಯಶಕ್ತಿಯನ್ನು ಬಚ್ಚಿಟ್ಟುಬಿಡು. ಅವನೆಂತಹ ಸಾಹಸ ಮಾಡಿದರೂ ಅಂತರಂಗದ ಶೋಧನೆ ಮಾಡಿಕೊಳ್ಳನು. ಅವನದೇನಿದ್ದರೂ ಭೌತಿಕವಾದ ಆಲೋಚನೆಗಳು. ಆದ್ದರಿಂದ ಇದೇ ಸರಕ್ಷಿತ ತಾಣ” ಎಂದಿತು. ಬ್ರಹ್ಮದೇವನಿಗೂ ಮಂಗನ ಮಾತೇ ಸರಿಯೆನ್ನಿಸಿತು.
ಮಹಾಚೈತನ್ಯವನ್ನು ಮನುಷ್ಯನ ಅಂತರಂಗದಲ್ಲಿಯೇ ಬಚ್ಚಿಟ್ಟಿದ್ದಾನೆ. ಅದನ್ನು ಶೋಧಿಸುವವರು ಏನಿದ್ದರೂ ಮಹಾ ಯೋಗಿಗಳು ಮಾತ್ರ. ಅವರಿಂದ ಯಾರಿಗೂ ಅಪಾಯವಿಲ್ಲವೆಂದು ಬ್ರಹ್ಮನಿಗೆ ಖಚಿತ. ಅವನ ದುಗುಡ ಕೊನೆಗೊಂಡಿತು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

ಪ್ರಕಟಣೆಗಾಗಿ ಸುರಹೊನ್ನೆಯ ಪತ್ರಿಕೆಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು