ಶೀರ್ಷಿಕೆ ನೋಡಿಯೇ ‘ಇದೇನು ಛಂದಸ್ಸಿನ ವಿಚಾರವನ್ನು ಕುರಿತ ಬರೆಹವೇ?’ ಎಂದು ಹುಬ್ಬೇರಿಸದಿರಿ. ನಾನು ಛಂದಸ್ಸಿನ ಗೋಜಿಗೆ ಹೋಗುತ್ತಿಲ್ಲ. ಬದುಕಿನ ‘ಚಂದ’-ಸ್ಸಿನ ಸಿಲಬಸ್ಸಿಗೆ ಕೈ ಹಾಕುತ್ತಿರುವೆ. ಒಂದಲ್ಲ ಒಂದು ಕಾರಣಕ್ಕಾಗಿ ನಾವು ನಿತ್ಯ ನುಂಗುವ ಮಾತ್ರೆ ಅಂದರೆ ಗುಳಿಗೆಗಳನ್ನು ಕುರಿತು ಬರೆಯಲು ಹೊರಟಿರುವೆ. ನನ್ನಂಥವರ ಜೀವನದ ಅವಿಭಾಜ್ಯವೇ ಆಗಿರುವ ಮಾತ್ರೆಗಳನ್ನು ಎಲ್ಲ ಗುರುಹಿರಿಯರುಗಳಿಗಿಂತ ಮುಂಚೆಯೇ ನೆನಪಿಸಿಕೊಳ್ಳಬೇಕು. ಏಕೆಂದರೆ ಗುರುಹಿರಿಯರಿಲ್ಲದೇ ಜೀವಿಸಬಹುದು; ಇವಿಲ್ಲದೇ ಸಾಧ್ಯವೇ ಇಲ್ಲ. ಅಂಥ ಪರಿಸ್ಥಿತಿ, ಮನಸ್ಥಿತಿ ಮತ್ತು ಮನೆಸ್ಥಿತಿಗಳು ನನ್ನದಾಗಿವೆ. ಊಟ ಬಿಟ್ಟರೂ ಗುಳಿಗೆ ನುಂಗುವುದ ಬಿಡಲಾಗದು ಎಂಬ ಹೊಸ ಗಾದೆಯನ್ನೇ ಮಾಡಿಕೊಳ್ಳಬಹುದು. ಆ ಮಟ್ಟಿಗೆ ಅದರಲ್ಲೂ ನನ್ನ ಮಟ್ಟಿಗೆ ಮಾತ್ರೆಗಳು ಅವುಷಧ ಆಗುವ ಬದಲು ಆಹಾರವೇ ಆಗಿಬಿಟ್ಟಿವೆ. ನಾನೇನಾದರೂ ಗುಳಿಗೆ ನುಂಗುವುದ ಬಿಟ್ಟರೆ ಒಂದೋ ನಾನು ಇಲ್ಲವಾಗುತ್ತೇನೆ ಅಥವಾ ಆ ಗುಳಿಗೆಗಳ ಕಂಪೆನಿಯು ಇಲ್ಲವಾಗುತ್ತದೆ ಎಂಬಷ್ಟರಮಟ್ಟಿಗೆ ನನಗೂ ಗುಳಿಗೆಗೂ ಸಂಬಂಧ; ಯಾವುದೋ ಜನ್ಮಾಂತರ ಅನುಬಂಧ. ಒಂದು ಕಾಲದಲ್ಲಿ ಬಹುತೇಕರಂತೆ ನಾನೂ ಗುಳಿಗೆ ನುಂಗುವುದರ ವಿರೋಧಿಯಾಗಿದ್ದೆ. ಈಗಲೂ ವಿರೋಧಿಯೇ. ಆದರೆ ವಿರೋಧವೇ ಬೇರೆ; ಬದುಕೇ ಬೇರೆ! ಇದನ್ನೇ ಗ್ರಹಚಾರ ಎನ್ನುವುದು. ನಮ್ಮ ಹಣೆಯಬರೆಹ ಎಂದು ಹಿರಿಯರು ಹೆಚ್ಚು ಕೆದಕದೇ ಸುಮ್ಮನಾಗುತ್ತಿದ್ದರು. ನಾವು ‘ಕೋತಿ ಹುಣ್ಣು ; ಬ್ರಹ್ಮರಾಕ್ಷಸ’ ಎಂಬಂತೆ, ಕೆರೆದೂ ಕೆರೆದೂ ದೊಡ್ಡದು ಮಾಡಿಕೊಂಡಿದ್ದೇವೆ. ಇರಲಿ.
ನಮ್ಮ ಮನೆಯಲ್ಲಿ ನಮ್ಮ ತಾಯಿಯವರಿಂದಾಗಿ ಮಾತ್ರೆಗಳು ಪ್ರತ್ಯಕ್ಷವಾಗುತ್ತಿದ್ದವು. ಮನೆಯ ಸಮೀಪದಲ್ಲೇ ಇದ್ದ ಕಿರಾಣಿ ಅಂಗಡಿಯಿಂದ ಕಾಯಿಚೂರು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಇತ್ಯಾದಿ ದಿನಬಳಕೆಯ ಆಹಾರ ಪದಾರ್ಥಗಳನ್ನು ಪ್ರತಿದಿನವೂ ತರುವಾಗ ಸಾರಿಡಾನು, ಅನಾಸಿನ್ನು, ಆಸ್ಪ್ರೋ ಎಂಬಂಥ ತಲೆನೋವಿನ ಮಾತ್ರೆಗಳನ್ನು ತರುವುದು ಸಹ ವಾಡಿಕೆಯಾಗಿ ಹೋಗಿತ್ತು. ವಂಶಪಾರಂಪರ್ಯವಾಗಿ ಬಂದಂಥ ಮನೆತನದ ಆಸ್ತಿಯನ್ನಾಗಿ ನಮ್ಮಮ್ಮ ತಲೆನೋವನ್ನು ಪರಿಗಣಿಸಿದ್ದರು. ನಮ್ಮ ವಂಶವೇ ತಲೆನೋವಿನದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಷ್ಟು ಮತ್ತು ಕೇಳಿದವರಿಗೆ ತಲೆಶೂಲೆ ಬರುವಷ್ಟು! ನನಗೆ ಬುದ್ಧಿ ಬರುವಾಗ್ಗ್ಯೆ (ಬಂದಿದೆ ಎಂದುಕೊಂಡರೆ) ನಮ್ಮಮ್ಮನ ಕಡೆಯವರ ತಲೆನೋವು ನನಗೆ ಸುಪರಿಚಿತವಾಗಿ ಹೋಗಿತ್ತು. ಯಾರ್ಯಾರಿಗೆ ಇದೆ, ಯಾರು ಹೇಗೆ ನರಳುತ್ತಾರೆ, ಯಾರು ಯಾವ ವೈದ್ಯರನ್ನು ಕಂಡಿದ್ದರು? ಯಾರ್ಯಾರು ತಲೆನೋವಿನಿಂದಲೇ ನರಳಿ ಪ್ರಾಣ ಬಿಟ್ಟರು (ಬ್ರೈನ್ ಹೆಮರೇಜ್) ಎಂಬಿತ್ಯಾದಿ ಮಾಹಿತಿಗಳನ್ನು ಕೇಳಿ ಕೇಳಿ ನನಗೆ ಆಗಲೇ ತಲೆನೋವು ಬಂದಂತಾಗಿತ್ತು. ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ನಾನು ಹತ್ತನೇ ತರಗತಿಯ ಪರೀಕ್ಷೆಗಳನ್ನು ಬರೆದು ಮುಗಿಸಿ ಬಂದ ಇಸವಿ (ಶಕವರ್ಷ 1985) ಯಲ್ಲಿ. ಅಲ್ಲಿಯವರೆಗೂ ನನಗೆ ತಲೆನೋವು ಎಂಬುದು ಮನೆತನದ ಮಾಮೂಲೀ ಸಮಾಚಾರವೇ ಆಗಿಹೋಗಿತ್ತು. ಸ್ವತಃ ಅನುಭವಿಸದಿದ್ದರೂ ನೋಡಿ, ಕೇಳಿ ಅಭ್ಯಾಸವಾಗಿ ಹೋಗಿತ್ತು. ಗುಳಿಗೆಗಳ ಪರಿಚಯವಾಗಿದ್ದೇ ಹೀಗೆ. ಮೆಡಿಕಲ್ ಶಾಪು ಕಂಡಾಗ ಶೀಟುಗಟ್ಟಲೆ ತೆಗೆದುಕೊಳ್ಳುತ್ತಿದ್ದೆವು. ಅದು ಮುಗಿದು ಹೋಗಿದ್ದಾಗ ನನ್ನನ್ನು ಕಾಕನ ಅಂಗಡಿಗೆ ಓಡಿಸುತ್ತಿದ್ದರು. ಅನಾಸಿನ್ನು ಹದಿನೈದು ಪೈಸೆ, ಸಾರಿಡಾನು ಇಪ್ಪತ್ತೈದು ಪೈಸೆ, ಮಾತ್ರೆ ತೊಗೊಂಡು ಬಾರೋ ಎಂದಾಗ ಅನಾಸಿನ್ನೋ, ಸಾರಿಡಾನೋ? ಎಂದು ಕೇಳುವಷ್ಟರಮಟ್ಟಿಗೆ ನಾನು ಬೆಳೆದಿದ್ದೆ. (ಶೀತ ನೆಗಡಿಗೆ ವಿಕ್ಸ್ ಆ್ಯಕ್ಷನ್ ಫೈಹಂಡ್ರೆಡ್ ಗುಳಿಗೆ) ತಮ್ಮ ತಲೆನೋವಿನ ಪ್ರಮಾಣವನ್ನು ಗಮನಿಸಿ ಯಾವುದೆಂದು ಹೇಳುತ್ತಿದ್ದರು. ಅನಾಸಿನ್ನೇ ಇರಲಿ ಎನ್ನುವುದೇ ತಡ ಓಡುತ್ತಿದ್ದೆ ಕೈಯಲ್ಲಿ ಬಾಯಲ್ಲಿ ಬಸ್ಸು ಬಿಟ್ಟುಕೊಂಡು. ಏಕೆಂದರೆ ನನಗೆ ಅಂಗಡಿಗೆ ಹೋಗುವುದೆಂದರೆ ಇಷ್ಟ. ಮನೆಯ ಹೊರಗಿನ ಪ್ರಪಂಚವನ್ನು ನೋಡಲು ಅನುಮತಿ ಸಿಗುತ್ತಿದ್ದುದೇ ಆಗ. ಒಮ್ಮೊಮ್ಮೆ ನಮ್ಮಮ್ಮನು ಮನೆಯ ಹಜಾರವನ್ನು (ಬಾಡಿಗೆ ಮನೆಯಲ್ಲಿ ಇದ್ದುದೇ ಒಂದು ಪುಟ್ಟ ಕೋಣೆ. ನಡುವೆ ಒಂದು ಪುಟ್ಟ ಅಡ್ಡಗೋಡೆ. ಚಿಕ್ಕದು ಅಡುಗೆಮನೆ, ದೊಡ್ಡದು ಸಕಲಕ್ಕೂ. ನೀರುಮನೆ, ಲೆಟ್ರಿನುಗಳೆಲ್ಲ ಇಡೀ ವಠಾರಕ್ಕೆ ಒಂದೋ ಎರಡೋ, ಅದೂ ಹೊರಭಾಗದಲ್ಲಿ. ನಾನು ಸರ್ಕಾರಿ ಉದ್ಯೋಗಕ್ಕೆ ಸೇರಿದ ಮೇಲೆ ರೂಮುಗಳಿರುವ ಮನೆಯನ್ನು ಬಾಡಿಗೆಗೆ ಹಿಡಿದಿದ್ದು) ಕತ್ತಲು ಮಾಡಿ, ಟವೆಲೊಂದನ್ನು ಸುರುಳಿ ಸುತ್ತಿ, ತಲೆಗಿಟ್ಟುಕೊಂಡು, ‘ಗಲಾಟೆ ಮಾಡಬೇಡಿ, ಮಾತಾಡಬೇಡಿ, ಎಲ್ಲರೂ ಮನೆಯಿಂದ ಹೊರಗೆ ಹೋಗಿ’ ಎಂದರೆ, ‘ಗುಳಿಗೆ ಇದೆಯೇ? ತರಬೇಕೆ?’ ಎಂದು ಪ್ರಶ್ನಿಸುತ್ತಿದ್ದೆ. ಆ ರೀತಿಯಾಗಿ ನನಗೆ ಗುಳಿಗೆಗಳ ಪರಿಚಯ, ಹಾಗಾಗಿ ನಮ್ಮ ಕುಟುಂಬದ ಪಾಲಿಗೆ ಮಾತ್ರೆಗಳು ಎಂದರೆ ಆಹಾರ ಪದಾರ್ಥಗಳ ಒಂದು ಭಾಗವಷ್ಟೇ. ಕೆಲವು ಬಾರಿ ಮಾತ್ರೆ ನುಂಗಿದರೂ ಗಂಟೆಗಟ್ಟಲೆ ಕಡಮೆಯಾಗದೇ ನರಳುವಾಗ ಮಾತ್ರ ಕುಟುಂಬ ವೈದ್ಯರ ಬಳಿ ಹೋಗಿ ಸೂಜಿ ಚುಚ್ಚಿಸಿಕೊಂಡು ಬರುತ್ತಿದ್ದುದು. ಅಲ್ಲಿಯೂ ಗುಳಿಗೆಗಳ ಕಾರ್ಖಾನೆಯೇ. ಆರ್ಎಂಪಿ ವೈದ್ಯರಾದರೆ (ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್) ಗಾಜಿನ ದೊಡ್ಡ ಬಾಟಲಿಗಳಲ್ಲಿ ಬಣ್ಣಬಣ್ಣದ ಅವುಷಧಿ ನೀರನ್ನು ತುಂಬಿಸಿಟ್ಟು, ಅಲ್ಲಿಯೇ ಕುಡಿಯಲು ಕೊಡುತ್ತಿದ್ದರು. ಗಂಟಲು ನೋವೆಂದು ಹೋದರೆ, ದೊಡ್ಡ ಕಡ್ಡಿಯ ತುದಿಗೆ ಹತ್ತಿ ಸುತ್ತಿ ಅದಕ್ಕೆ ಅವುಷಧಿ ಮೆತ್ತಿ, ಬಾಯಿ ತೆಗೆಸಿ ಸವರುತ್ತಿದ್ದರು. ಎದ್ದು ಬಿದ್ದ ಗಾಯಗಳಿಗೆ ಔಷಧವನ್ನು ತಾವೇ ಕೈಯ್ಯಾರೆ ಹಚ್ಚುತ್ತಿದ್ದರು. ಏನೇ ಖಾಯಿಲೆಯ ವಿಚಾರವಾಗಿ ಹೋದರೂ ಸಮಗ್ರ ಪರೀಕ್ಷೆಯನ್ನು ಸ್ವತಃ ಮಾಡುತ್ತಿದ್ದರು. ಕಣ್ಣು, ನಾಲಗೆ, ಉಗುರು, ಚರ್ಮದ ಪರೀಕ್ಷೆ, ನಾಡಿಮಿಡಿತ ಇತ್ಯಾದಿ. ಈಗಿನಂತೆ ಸ್ಕ್ಯಾನಿಂಗು, ಲ್ಯಾಬು, ರಿಪೋರ್ಟು ಅಂತಿರಲಿಲ್ಲ. ನನ್ನ ಪ್ರಕಾರ ಈಗಿನವರು ವೈದ್ಯರೇ ಅಲ್ಲ, ಏಕೆಂದರೆ ಅವರು ಲ್ಯಾಬು ರಿಪೋರ್ಟುಗಳ ಪರಾವಲಂಬೀ ಜೀವಿಗಳು; ಲ್ಯಾಬಿನವರು ವೈದ್ಯರಿಂದ ಜೀವಿಸುವವರು!
‘ಎಲ್ಲಕ್ಕೂ ಮಾತ್ರೆಗಳು ಒಳ್ಳೆಯದಲ್ಲ; ಮನೆಮದ್ದು ಬಳಸಿ’ ಎಂದು ನಮ್ಮ ಮನೆಗೆ ಬರುವ ಹಲವರು ಅಲವತ್ತುಕೊಳ್ಳುತ್ತಿದ್ದುದು ಉಂಟು. ಮನೆಮದ್ದಿಗೆ ಜಗ್ಗುವುದಿಲ್ಲ ಎಂದು ಉಪೇಕ್ಷೆ ಮಾಡಿ, ಅವರ ಮುಂದೆಯೇ ಮಾತ್ರೆಗಳನ್ನು ನಮ್ಮಮ್ಮ ನುಂಗುತ್ತಿದ್ದರು. ಅಷ್ಟೋ ಇಷ್ಟೋ ಬುದ್ಧಿ ಬಂದ ಮೇಲೆ ನಾನು ಸಹ ಗುಳಿಗೆಗಳ ವಿರೋಧಿಯಾಗಿ ಬೆಳೆದಿದ್ದೆ. ನನಗೆ ಮೊದಲಿಗೆ ತಲೆನೋವು ಕಾಣಿಸಿಕೊಂಡಾಗ ನಮ್ಮಮ್ಮನಿಗೆ ಆತಂಕಕ್ಕಿಂತ ಸಮಾಧಾನವೇ ಆಯಿತು. ‘ನಿನಗೂ ಬಂತಾ? ಮೊದಲೇ ಹೇಳುತ್ತಿರಲಿಲ್ಲವೇ, ನಮ್ಮದು ತಲೆನೋವು ವಂಶ ಎಂದು!’ ಅಂದು ‘ಗುಳಿಗೆ ನುಂಗು’ ಎಂದು ಶಿಫಾರಸು ಮಾಡಿದರು. ಇನ್ನು ಮೇಲೆ ಇನ್ನೊಂದು ಶೀಟು ಹೆಚ್ಚಿಗೆ ತರಬೇಕು, ಬಳಕೆದಾರರ ಸಂಖ್ಯೆ ಹೆಚ್ಚಿದೆ ಎಂಬಂತೆ ಅವರ ವರ್ತನೆ ಇತ್ತು. ನಾನು ತಲೆ ಅಲ್ಲಾಡಿಸಿ, ಮುಸುಕೆಳೆದು ಮಲಗಿ ಬಿಡುತ್ತಿದ್ದೆ. ಜ್ವರ ಬಂದರೂ ವೈದ್ಯರ ಬಳಿಗೆ ಹೋಗಲು ನಿರಾಕರಿಸುತ್ತಿದ್ದೆ. ಮನೆ ಮದ್ದು ಎಂದೆಲ್ಲಾ ಬಡಬಡಿಸುತ್ತಿದ್ದೆ. ‘ಅವು ಗುಳಿಗೆಗಳಲ್ಲ; ವಿಷದ ಉಂಡೆಗಳು’ ಎಂದೇ ನನ್ನ ಆಗಿನ ಪ್ರಬಲ ವಾದವಾಗಿತ್ತು. ಅಂಥ ವಾದ ತರ್ಕ ಪ್ರವೀಣನಾಗಿದ್ದ ನಾನು ಕಳೆದ ಮೂವತ್ತು ವರುಷಗಳಿಂದ ತಪ್ಪದೇ ಮಾತ್ರೆಗಳನ್ನು ನುಂಗುವ ದಾಸನಾಗಿ ಬದಲಾಗಿದ್ದು ಬದುಕಿನ ಅಲ್ಲಲ್ಲ, ಜಗತ್ತಿನ ಬಹು ದೊಡ್ಡ ವಿಪರ್ಯಾಸ. ಈಗಂತೂ ಪ್ರತಿದಿನ ನಾನು ನುಂಗುವ ಮಾತ್ರೆ, ಅವುಷಧಿಗಳ ಮೊತ್ತ ದಿನವೊಂದಕ್ಕೆ ಮುನ್ನೂರು ರೂ ಬೆಲೆಯಷ್ಟು. ಮಾತ್ರೆಗಳನ್ನು ನುಂಗಿ ನುಂಗಿ ಆದ ಅಡ್ಡ ಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲೂ ಮತ್ತೆ ಮಾತ್ರೆಗಳಿಗೇ ಶರಣು! ಇದೊಂದು ವಿಷಚಕ್ರ. ಈ ಚಕ್ರವ್ಯೂಹದಿಂದ ಹೊರ ಬರಲಾಗದೇ ಒದ್ದಾಡುತ್ತಿರುವೆ.
ಪದವಿ ಮುಗಿಸಿ, ಎಂಎ ಕೋರ್ಸಿಗೆ ಸೇರಿದ ಮೇಲೆ ಗುಳಿಗೆ ನುಂಗುವ ಪರಿಪಾಠ ಹೆಚ್ಚಾಗುತ್ತಾ ಬಂದಿತು. ನಮ್ಮ ತಾಯಿಯವರನ್ನು ಬೆಂಗಳೂರಿನ ನಿಮ್ಹಾನ್ಸಿಗೆ ದಾಖಲು ಮಾಡಿದಾಗ ನನ್ನನ್ನೂ ಪರೀಕ್ಷೆಗೆ ಒಳಪಡಿಸಿದ್ದರು. ನಾನಾಗ ಪದವಿ ಓದುತ್ತಿದ್ದೆ. ಹಲವು ತಜ್ಞ ವೈದ್ಯರು ಇದು ಸಾಮಾನ್ಯ ತಲೆನೋವಲ್ಲ, ತಲೆನೋವುಗಳಲ್ಲೇ ರಾಜ ಎಂದು ಸುವಿಖ್ಯಾತವಾದ ಮೈಗ್ರೇನು ಎಂದರು. ಇದಕ್ಕೆ ನೇರವಾದ ಚಿಕಿತ್ಸೆ ಇಲ್ಲ. ಮೆಡಿಕೇಷನ್ನು ಮತ್ತು ಮೆಡಿಟೇಷನ್ನು ಜೊತೆಗಿರಬೇಕೆಂದರು. ಜೀವನವಿಧಾನ, ಆಹಾರದ ಅಭ್ಯಾಸಗಳು, ಸ್ವಭಾವ ಮತ್ತು ಪ್ರವೃತ್ತಿಗಳನ್ನು ಬದಲಿಸಿಕೊಳ್ಳಬೇಕೆಂದರು. ಇದಕ್ಕಿಂತ ಸಾರಿಡಾನು ನುಂಗಿ ಮಲಗುವುದೇ ಒಳ್ಳೆಯದೆಂದು ನಮ್ಮಮ್ಮ ತೀರ್ಮಾನಿಸಿ, ತಮ್ಮ ಎಂದಿನ ಚರ್ಯೆಯನ್ನು ಮುಂದುವರಿಸಿದರು. ವೈದ್ಯರು ಶಿಫಾರಸು ಮಾಡಿದ ಪ್ರತಿದಿನ ತೆಗೆದುಕೊಳ್ಳುವ ಮಾತ್ರೆಗಳ ಜೊತೆಗೇನೇ ನೋವು ನಿವಾರಕಗಳೂ ಜೊತೆಗೂಡಿದ್ದವು. ಅಂದರೆ ಗುಳಿಗೆಗಳು ನಮ್ಮ ಮನೆಯಲ್ಲಿ ಇನ್ನೂ ಹೆಚ್ಚಾದವೇ ವಿನಾ ಕಡಮೆಯಾಗಲಿಲ್ಲ. ಈ ತಲೆನೋವಿನಿಂದಾಗಿ ನಾವೇ ಸ್ವತಃ ನಮ್ಮನ್ನು ದಿಗ್ಬಂಧನಕ್ಕೆ ಒಳಪಡಿಸಿಕೊಂಡಿದ್ದೆವು. ಪ್ರಯಾಣ ಕಡಮೆ, ಸಭೆ ಸಮಾರಂಭಗಳು ನಿಷಿದ್ಧ. ಜನಜಂಗುಳಿಯಿಂದ ದೂರ. ಮನೆಗೆ ಬಂದ ಯಾವ ನೆಂಟರಿಷ್ಟರೂ ತಂಗದೇ ಹೊರಟು ಹೋಗುವಂಥ ಸ್ಥಿತಿ. ರಾತ್ರೀ ಬೆಳಗೂ ಮಲಗುವುದೇ. ಅಕ್ಕಪಕ್ಕದವರ ಗಲಾಟೆ, ಜೋರು ಮಾತು, ಗದ್ದಲಗಳಿಂದ ಮನಸು ವಿಕ್ಷಿಪ್ತ. ಅದಕಾಗಿ ಬಯ್ಯುವುದು ಮತ್ತು ಅವರಿಂದ ಬಯ್ಯಿಸಿಕೊಳ್ಳುವುದು. ಇವೆಲ್ಲ ನಮ್ಮ ಬದುಕಿನ ರೊಟೀನು ಆದವು. ಹಾಗಾಗಿ ತಲೆನೋವು ನಮ್ಮ ಮನೆಯ ದೇವರೇ ಆಯಿತು; ದೆವ್ವವೂ ಆಗಿಬಿಟ್ಟಿತು. ವೃತ್ತಿ ನಿಮಿತ್ತ ಒಂದು ತಿಂಗಳ ತರಬೇತಿ ಕಾರ್ಯಾಗಾರದಲ್ಲಿ ನನ್ನ ಸ್ನೇಹಿತರೊಬ್ಬರು ನನ್ನನ್ನು ‘ಗುಳಗನಾಥರು’ ಎಂದೇ ಛೇಡಿಸುತ್ತಿದ್ದರು. ಕನ್ನಡದ ಸೇವಕ, ಹೊಸಗನ್ನಡದ ಆದ್ಯ ಕಾದಂಬರಿಕಾರ ಆಚಾರ್ಯ ಗಳಗನಾಥರು ಪುಸ್ತಕಗಳನ್ನು ಹೊತ್ತುಕೊಂಡು ಓಡಾಡಿದಂತೆ, ನಾನು ಥರಾವರೀ ಮಾತ್ರೆಗಳನ್ನು ಇಟ್ಟುಕೊಂಡು ಓಡಾಡುತ್ತೇನೆಂಬುದು ಅವರ ಪ್ರೀತಿಯ ಅಣಕವಾಗಿತ್ತು. ‘ಇವತ್ತೆಷ್ಟು ಮಾತ್ರೆ ನುಂಗಿದಿರಿ?’ ಎಂದು ದ್ವಿಪದಿಯೋ, ತ್ರಿಪದಿಯೋ, ಚೌಪದಿಯೋ, ಷಟ್ಪದಿಯೋ ಎಂದು ಕೇಳಿದಾಗ ನಾನು ಅದಾವುದೂ ಅಲ್ಲ, ದ್ರೌಪದಿ ಎಂದಿದ್ದೆ. ಅಂದರೆ ಐದು ಮಾತ್ರೆಗಳು ಎಂದಿದರ ಭಾವ.
ಇವೆಲ್ಲವನ್ನೂ ಪಕ್ಕಕಿಟ್ಟು, ಮಾತ್ರೆಗಳನ್ನು ಕುರಿತಷ್ಟೇ ಮಾತಾಡೋಣ. ಅವು ವಿಷದ ಗುಳಿಗೆಗಳು ಎಂಬುದನ್ನು ನನ್ನಂಥವರು ಒಪ್ಪಲು ಸಾಧ್ಯವೇ ಇಲ್ಲ. ಏಕೆಂದರೆ ನನ್ನ ಪಾಲಿಗವು ಅಮೃತದ ಬಿಂದು. ಖಾಯಿಲೆಗಳನ್ನು ಹೊಡೆದೋಡಿಸಿ (ಹಾಗೆಂದುಕೊಳ್ಳುವುದು ಭ್ರಮೆ) ನಮ್ಮನ್ನು ಮತ್ತೆ ಬದುಕುವಂತೆ ಮಾಡಬಲ್ಲ ಶಕ್ತಿ ಅವಕ್ಕಿರುವುದರಿಂದ ನನ್ನಂಥವರ ಪಾಲಿಗೆ ಮೆಡಿಕಲ್ ಸ್ಟೋರುಗಳು ದಿನಸಿ ಅಂಗಡಿಗಳಿಗೆ ಸಮಾನ. ಹಾಗೆ ನೋಡಿದರೆ ದಿನಸಿ ಅಂಗಡಿಯ ಖರ್ಚಿಗಿಂತಲೂ ಇದರ ಪಾಲೇ ಹೆಚ್ಚು. ‘ಏನ್ಸಾರ್, ತುಂಬಾ ದಿನಗಳಾದವು. ನೀವೀ ಕಡೆ ಬಂದೇ ಇಲ್ಲ, ಮಾತ್ರೆಗಳು ಬೇಕಾದರೆ ಮೂರ್ನಾಲ್ಕು ದಿವಸ ಮೊದಲೇ ಹೇಳಿಬಿಡಿ, ಏಕೆಂದರೆ ನಿಮ್ಮದು ಅಪರೂಪದವು. ತರಿಸಿ ಕೊಡಬೇಕಲ್ಲ!’ ಎಂದು ಅನುನಯವಿಟ್ಟು ಫೋನು ಮಾಡುತ್ತಾರೆ ಮೆಡಿಕಲ್ ಸ್ಟೋರಿನವರು. ಮೈಸೂರಿನಲ್ಲೊಂದು, ಹೊಳೆನರಸೀಪುರದಲ್ಲೊಂದು ಇಂಥ ಅಮೃತ ಮಾರುವ ಅಂಗಡಿಯನ್ನು ಗುರುತಿಟ್ಟುಕೊಂಡಿದ್ದೇನೆ. ಒಂದೊಂದು ಸಲಕ್ಕೂ ಹತ್ತಾರು ಸಾವಿರ ರೂಗಳ ಮಾತ್ರೆಗಳನ್ನು ಖರೀದಿ ಮಾಡುವುದರಿಂದ ನನ್ನಂಥ ಗಿರಾಕಿಗಳು ಅವರಿಗೂ ಬೇಕು. ನಮ್ಮ ‘ರೆಗ್ಯುಲರ್ ಕಸ್ಟಮರು’ ಎಂಬ ಅಭಿಧಾನ ಬೇರೆ. ಹಾಗಾಗಿ ಹೆಚ್ಚಿನ ಡಿಸ್ಕೌಂಟು ಕೊಟ್ಟು ನನ್ನನ್ನು ತಮ್ಮ ಆದ್ಯತಾ ಪಟ್ಟಿಯಲ್ಲಿ ಕಾಪಿಟ್ಟು ಆಗಾಗ ಫೋನು ಮಾಡುತ್ತಿರುತ್ತಾರೆ. ಅಂಥ ಸಂದರ್ಭದಲ್ಲಿ, ‘ಇನ್ನೂ ಇದೆ, ಬೇಕಾದಾಗ ಫೋನು ಮಾಡುವೆ’ ಎಂದು ಉತ್ತರಿಸಿ ವೈದ್ಯರುಗಳಿಗಿಂತ ಮೆಡಿಕಲ್ ಸ್ಟೋರಿಗೇ ಹೆಚ್ಚಿನ ವಂದನೆಗಳನ್ನು ಮನದಲ್ಲಿ ಸಲ್ಲಿಸುತ್ತೇನೆ.
ಹಾಗಾಗಿ ಮಾತ್ರೆಗಳು ವಿಷ ಎಂಬುದನ್ನು ಸ್ವಲ್ಪ ಕಾಲ ಮರೆತು ವಿಚಾರ ಮಾಡಿದರೆ ನಮ್ಮ ದೃಷ್ಟಿ ಬದಲಾಗುವುದು ಖಚಿತ. ವೈದ್ಯರ ಬಳಿ ಹೋಗುವುದಕ್ಕಿಂತಲೂ ಈ ಮಾತ್ರೆ ಮಾರುವ ಅಂಗಡಿಗೆ ಹೋಗುವುದೇ ಹೆಚ್ಚು. ದಿನಸಿ ತೆಗೆದುಕೊಳ್ಳುವಂತೆ ನಾನು ಮಾತ್ರೆ, ಅವುಷಧಿಗಳನ್ನು ಕೊಂಡುಕೊಂಡರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ!? ಮೈಗ್ರೇನು ತಲೆನೋವಿಗೆ ಇರುವ ನೋವು ನಿವಾರಕಗಳೆಲ್ಲವನ್ನೂ ವಿಧ ವಿಧ ಚಿಕಿತ್ಸಾ ಪದ್ಧತಿಗಳಡಿಯಲ್ಲಿ ಪ್ರಯತ್ನ ಪಟ್ಟು ಕಳೆದ ಮೂವತ್ತು ವರುಷಗಳಿಗಿಂತಲೂ ಹೆಚ್ಚು ಕಾಲ ‘ಮಾತ್ರಾಗಣದ ಪರ್ಮನೆಂಟು ಮೆಂಬರು’ ಆಗಿರುವೆ. ಹೃದಯದ ಏರುರಕ್ತದೊತ್ತಡದಂತೆಯೇ ನಿಮ್ಮದು ಮಿದುಳಿನ ಏರುರಕ್ತದೊತ್ತಡ (ಸಿಂಪಲ್ಲಾಗಿ ಹೇಳುವುದಾದರೆ ಬ್ರೈನ್ ಬೀಪಿ) ಎಂಬುದಾಗಿ ಮೊದಲ ಬಾರಿಗೆ ನಿಮ್ಹಾನ್ಸಿನ ನರರೋಗ ತಜ್ಞರು ಮಾತ್ರೆ ಬರೆದುಕೊಟ್ಟರು. ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ನರರೋಗವೈದ್ಯರನ್ನು ಭೇಟಿ ಮಾಡಿ ಬದಲಾಯಿಸಿದ ಮಾತ್ರೆಗಳನ್ನು ಕೊಂಡುಕೊಂಡು ನುಂಗುತ್ತಿರುವೆ. ಈ ಮಾತ್ರಾಸೇವನೆಯಿಂದ ಹೃದಯದ ಏರುರಕ್ತದೊತ್ತಡವೂ ಅಟಕಾಯಿಸಿ ಕೊಂಡಿತು. ‘ನಿಮ್ಮದು ಶಾಂತ ಸ್ವಭಾವ; ನಿಮಗೆ ಬೀಪಿ ಇದೆಯೆಂದರೆ ಆಶ್ಚರ್ಯ’ ಎಂದೇ ಬಲ್ಲಮಿತ್ರರು ಸೋಜಿಗಪಡುವಾಗ ನನ್ನೊಳಗೊಂದು ವಿಷಾದರಾಗ ಗುನುಗಾಡುತ್ತದೆ. ಮೈಗ್ರೇನ್ ಸಂಬಂಧಿತ ಹಲವು ಬಗೆಯ ನೋವು ನಿವಾರಕಗಳು, ಮೂಗು ಕಟ್ಟಿಕೊಳ್ಳುವುದರಿಂದ ಅದಕೆ ಸುರಿದುಕೊಳ್ಳುವ ಡ್ರಾಪ್ಸು, ಕಣ್ಣುರಿಗಾಗಿ ಬಿಟ್ಟುಕೊಳ್ಳುವ ಐ ಡ್ರಾಪ್ಸು, ಗ್ಯಾಸ್ಟ್ರಿಕ್ ಸಮಸ್ಯೆಗೆ ತೆಗೆದುಕೊಳ್ಳುವ ಲಿಕ್ವಿಡು ಮತ್ತು ಅದರ ಮಾತ್ರೆ, ಥೈರಾಯಿಡ್ಡು ಮತ್ತು ಕೊಲೆಸ್ಟರಾಲು ಇರುವುದರಿಂದ ಅದರ ಉಪಶಮನಕ್ಕೆ ತೆಗೆದುಕೊಳ್ಳುವ ಮಾತ್ರೆ, ಲಿವರು ವೀಕಿರುವುದರಿಂದ ಅದರ ಸಶಕ್ತತೆಗೆ ತೆಗೆದುಕೊಳ್ಳುವ ಟಾನಿಕ್ಕು, ನೋವು ತಿನ್ನುವ ಸಾಮರ್ಥ್ಯ ಹೆಚ್ಚಳಕಾಗಿ ಆಯುರ್ವೇದದ ಆರೋಗ್ಯಂ ಕಂಪೆನಿಯ ಗೋ ಮೈಗ್ರೇನ್ ಗುಡ್ಬೈ ಮೈಗ್ರೇನ್ ಮಾತ್ರೆ, ಶಿರಶೂಲಾದಿ ವಜ್ರವಟಿ, ಮಿದುಳಿನ ನರಗಳ ನಿಶ್ಶಕ್ತತೆ ನಿವಾರಿಸುವ ಹಿಮಾಲಯ ಕಂಪೆನಿಯ ಮೆಂಟಾಟ್ ಮಾತ್ರೆ, ಹೃದಯದ ಆರೋಗ್ಯಕ್ಕಾಗಿ ಮಗನು ವಿದೇಶದಿಂದ ಕಳಿಸಿಕೊಡುವ ಫ್ಲಾಕ್ಸ್ಸೀಡ್ ಆಯಿಲ್ ಎಂಬ ಒಮೆಗಾ ತ್ರಿ ಮಾತ್ರೆ ಹೀಗೆ ನನ್ನ ಗುಳಿಗಾಯಾನದ ಪಟ್ಟಿ ದೊಡ್ಡದಿದೆ. ಇಷ್ಟು ಸಾಲದೆಂಬಂತೆ, ನೆಗಡಿ-ಕೆಮ್ಮು-ಜ್ವರಕ್ಕಾಗಿ ಕಾಯ್ದಿರಿಸಿಕೊಂಡ ಅಲೊಪತಿ ಮತ್ತು ಆಯುರ್ವೇದದ ಟ್ಯಾಬ್ಲೆಟ್ಟುಗಳು ಒಂದೇ ಎರಡೇ ಲೆಕ್ಕ ಹಾಕಿದರೆ ನಿದ್ದೆಯಲ್ಲೂ ಅವುಗಳ ಹೆಸರುಗಳನ್ನು ತಪ್ಪಿಲ್ಲದೇ ಪಠಿಸಬಲ್ಲೆ. ಯಾವ ಮಾತ್ರೆಯು ಯಾವ ಕಂಪೆನಿಯದು? ಅದರ ಕಂಪೋಸಿಷನ್? ಬೇರೆ ಬೇರೆ ಕಂಪೆನಿಗಳಲ್ಲಿ ಮಾತ್ರೆಗಳ ಹೆಸರು ಬದಲಾಗುವ ಚೋದ್ಯ ಇವೆಲ್ಲವನ್ನೂ ಬಲ್ಲೆ. ಏಕೆಂದರೆ ಶಕವರ್ಷ 1990 ರಿಂದ ಪ್ರಾರಂಭವಾದ ಗುಳಿಗೆಯ ಸ್ನೇಹ ಹೆಚ್ಚಾಗುತ್ತ ಬಂತೇ ವಿನಾ ಕಡಮೆಯಾಗಲೇ ಇಲ್ಲ. ಸುಮಾರು ಇಪ್ಪತ್ತು ಥರದ ಮೈಗ್ರೇನ್ ನಿವಾರಕಗಳನ್ನು ಕೊಟ್ಟು ವೈದ್ಯರು ಪ್ರಯೋಗ ಮಾಡಿದರು. ‘ಇಟ್ ಈಸ್ ನಾಟ್ ಕ್ಯೂರೆಬಲ್’ ಎಂಬುದು ಶತಸಿದ್ಧವಾಯಿತೇ ವಿನಾ ನಾನು ಗುಣಮುಖನಾಗಲೇ ಇಲ್ಲ. ನರರೋಗ ವೈದ್ಯರಿಗೆ ನಾನು ಪ್ರಯೋಗಪಟುವಾದೆ. ನನ್ನ ಮೇಲೆ ಹಲವು ನಮೂನೆಯ ನೋವು ನಿವಾರಕಗಳನ್ನು ಪ್ರಯೋಗಿಸಿದರು. ಜೊತೆಗೆ ಇವನ್ನು ಹೆಚ್ಚು ತೆಗೆದುಕೊಳ್ಳಬೇಡಿ, ಉದರ-ಲಿವರು-ಕಿಡ್ನಿ ಮೊದಲಾದವುಗಳನ್ನು ಡ್ಯಾಮೇಜ್ ಮಾಡುತ್ತವೆ ಎಂದೂ ಸಲಹಿಸಿದರು. ಅವರು ಬೇಡವೆಂದರೂ ನಾನೀಗ ಕೇಳುವ ಸ್ಥಿತಿಯಲ್ಲಿ ಇಲ್ಲ. ಊಟತಿಂಡಿ ಬಿಟ್ಟರೂ ಸರಿಯಾಗಿ ಪ್ರತಿ ಏಳೆಂಟು ತಾಸು ಕಳೆಯುತ್ತಿದ್ದಂತೆ ನೋವು ನಿವಾರಕಗಳ ಮೊರೆ ಹೋಗುವಂತಾಗಿದೆ. ಅಂದರೆ ದಿನದಲ್ಲಿ ಮೂರು ಬಾರಿ ಮಾತ್ರೆಗಳನ್ನು ನುಂಗಬೇಕಾಗಿರುವುದರಿಂದ ನನ್ನ ಪಾಲಿಗೆ ಇವು ದಿನಸಿ ಐಟಂಗಳಿಗಿಂತಲೂ ಮಹತ್ವದ್ದೇ ತಾನೇ! ಒಂದಂತೂ ಸತ್ಯ. ಅಲೊಪತಿ ಮಾತ್ರೆಗಳ ದೀರ್ಘಕಾಲೀನ ಸೇವನೆಯಿಂದ ಒಂದೊಂದಾಗಿ ಸೈಡ್ ಎಫೆಕ್ಟು ಕಾಣಿಸಿಕೊಂಡಿವೆ. ಚರ್ಮದ ಒಣತನ, ದೇಹ ದಪ್ಪಗಾಗುವುದು, ತಲೆಗೂದಲುದುರುವುದು, ಮಂಡಿಸ್ನಾಯುಗಳ ನಿಶ್ಶಕ್ತತೆ, ಉದರಸಂಬಂಧೀ ಖಾಯಿಲೆ, ದಂತಪಂಕ್ತಿ ಸಡಿಲಿಕೆ ಇನ್ನೂ ಹಲವು ಹೇಳಬಹುದಾದ ಮತ್ತು ಹೇಳಲಾಗದ ಹಲವು ತೊಡಕು ತೊಂದರೆಗಳ ವಿಷಜಾಲದಲ್ಲಿ ಸಿಕ್ಕು ಒದ್ದಾಡುತ್ತಿರುವೆ. ಇವುಗಳಿಂದಾಗಿ ಮಾತ್ರಾಸೇವನೆ ಹೆಚ್ಚಾಗುತ್ತಿದೆಯೇ ವಿನಾ ಕಡಮೆಯಾಗುತ್ತಿಲ್ಲ. ಮಾತ್ರೆ ಬಿಟ್ಟರೆ ತಲೆಶೂಲೆ ಸಹಿಸಲಾಗದೇ ಜೀವವೇ ಹೊರಟು ಹೋಗುವ ಸಂದರ್ಭಗಳೇ ಹೆಚ್ಚಿರುವಾಗ ಗುಳಿಗೆಗೆ ದಾಸನಾಗಲೇಬೇಕಿದೆ.
ಇನ್ನು ಆಯುರ್ವೇದೀಯ, ಹೋಮಿಯೋಪತಿ, ಯುನಾನಿ ವೈದ್ಯ ಪದ್ಧತಿ, ಬಯಲುಗುಪ್ಪೆಯ ಚೈನೀಸ್ ಮೆಡಿಸನ್ ಹೀಗೆ ಹಲವು ನಮೂನೆಯ ವೈದ್ಯಪದ್ಧತಿಗಳಲ್ಲೂ ತಲೆಶೂಲೆ ನಿವಾರಣೆಗೆ ಸತತ ಪ್ರಯತ್ನ ಪಟ್ಟು, ಸುಮಾರು ಮೂವತ್ತಕ್ಕೂ ಹೆಚ್ಚಿನ ವೈದ್ಯರುಗಳನ್ನು ಕಂಡು ಪರಿಹಾರಕ್ಕಾಗಿ ಬೇಡಿಕೆಯಿಟ್ಟು ಅಲ್ಲಿಯೂ ಮಾತ್ರೆಗಳ ಸಹವಾಸ. ಇಷ್ಟು ಸಾಲದೆಂಬಂತೆ, ಅಲ್ಲೆಲ್ಲೋ ಹಸಿರೌಷಧ ಕೊಡುತ್ತಾರೆ, ಮೂಗಿಗೆ, ಕಿವಿಗೆ ಬಿಡುತ್ತಾರೆಂದು ಸುದ್ದಿ ಕೇಳಿ ಒಲ್ಲದ ಮನಸಿನಲ್ಲಿ (ಏಕೆಂದರೆ ಶಾಶ್ವತ ಕಿವುಡುತನ ಆದೀತೆಂದು ವೈದ್ಯರು ಆತಂಕಪಡುವರು) ಹೋಗಿ ಅವುಷಧಿ ಬಿಡಿಸಿಕೊಂಡಿದ್ದೂ ಇದೆ. ಕೊನೆಗೆ ನನ್ನ ಹಣೆಯಬರೆಹವಿಷ್ಟೇ ಎಂದು ತೀರ್ಮಾನಿಸಿ ವಿಧಿಯಿಲ್ಲದೇ ಇಂಗ್ಲಿಷ್ ಮೆಡಿಸನ್ನಿನ ಪ್ರಮುಖ ರೂಪವಾದ ಗುಳಿಗೆಗಳಿಗೆ ಅಡಿಕ್ಟಾಗಿದ್ದೇನೆ. ಈಗ ನೀವೇ ಹೇಳಿ, ಮಾತ್ರೆಗಳನ್ನು ಕುರಿತು ಬರೆಯದಿದ್ದರೆ ತಪ್ಪಾಗುವುದಿಲ್ಲವೇ? ಗುಳಿಗೆಗಳು ನನ್ನ ಬದುಕಿನ ಆಸ್ತಿ; ಆಹಾರಕ್ಕಿಂತ ಇವುಗಳ ಸೇವನೆಯೇ ಜಾಸ್ತಿ!
ಈ ವೈಯಕ್ತಿಕ ನೋವು ನಿವೇದನೆಗಳನ್ನೆಲ್ಲಾ ಪಕ್ಕಕಿಟ್ಟು ನೋಡಿದರೆ ಗುಳಿಗೆಗಳ ಬಣ್ಣ, ಆಕಾರ, ಅವುಗಳನ್ನು ಪ್ಯಾಕು ಮಾಡಿಟ್ಟ ವಿಧಾನ ಎಲ್ಲವೂ ಕಲಾತ್ಮಕವಾಗಿ ಕಾಣುವ ಅಂದಚೆಂದವನ್ನು ಆಸ್ವಾದಿಸಬೇಕು. ಒಂದೊಂದು ಗುಳಿಗೆಯದೂ ಒಂದೊಂದು ಬಣ್ಣ, ವಾಸನೆ ಮತ್ತು ಆಕಾರ. ಅವುಗಳ ನಡುವೆಯೊಂದು ಗೆರೆ. ಮಾತ್ರೆಯನ್ನು ಅರ್ಧರ್ಧ ಚೂರು ಮಾಡಲು ಕಂಪೆನಿಯೇ ಹಾಕಿಕೊಟ್ಟ ರೇಖೆ. ಒಂದಕ್ಕೊಂದು ಒತ್ತಿ, ಒಳಗೇ ಪುಡಿಯಾಗಬಾರದೆಂಬ ಕಾರಣಕ್ಕಾಗಿ ಮಾತ್ರೆಗಳನ್ನು ಪ್ಯಾಕು ಮಾಡುವ ವಿಧಾನವೇ ಬದಲಾಯಿತು. ಪುಡಿಯಾಗಬಾರದು; ಆದರೆ ರೋಗಿಗಳು ಸುಲಭವಾಗಿ ಅವನ್ನು ಹೊರತೆಗೆಯಬೇಕು! ಇಂಥದೊಂದು ಲೆಕ್ಕಾಚಾರದಲ್ಲಿ ಇವು ಬಂಧಿ. ಕೆಲವು ಪಾರದರ್ಶಕ; ಇನ್ನು ಹಲವು ಅಪಾರದರ್ಶಕ. ಆಕರ್ಷಕ ಡಬ್ಬಿಗಳು, ಪ್ಲಾಸ್ಟಿಕ್ ಬಾಕ್ಸು, ಕೆಲವು ಟಾನಿಕ್ಕು, ಸಿರಪ್ಪುಗಳಿಗೆ ಗಾಜಿನ ಶೀಸೆ, ಇನ್ನು ಹಲವಕ್ಕೆ ಪ್ಲಾಸ್ಟಿಕ್ ಬಾಟಲು. ಹಾಗಾಗಿ ನನಗೆ ಮೆಡಿಕಲ್ ಸ್ಟೋರುಗಳು ಒಪ್ಪ ಓರಣವಾಗಿ ಜೋಡಿಸಿಟ್ಟ ಫ್ಯಾನ್ಸಿ ಸ್ಟೋರಿನಂತೆ ಕಣ್ಮನ ಸೆಳೆದು, ಹೆಚ್ಚು ಕಾಲ ನಿಲ್ಲುವಂತೆ ಮಾಡುತ್ತವೆ. ಯಾವುದನ್ನು ಹೇಗೆ ಜೋಡಿಸಿಟ್ಟಿದ್ದಾರೆಂದು ನೋಡಲು ಶುರುವಿಡುತ್ತೇನೆ. ನಾವು ಕೇಳಿದಾಕ್ಷಣ ಅವರು ತೆಗೆದುಕೊಡುವ ಅಚ್ಚರಿಯನ್ನು ಇಂದಿಗೂ ಅನುಭವಿಸುತ್ತೇನೆ. ಒಂದೊಂದರ ಹೆಸರೂ ವಿಭಿನ್ನ ಮತ್ತು ವಿಶಿಷ್ಟ. ಸುಲಭದಲ್ಲಿ ನೆನಪಾಗದಂಥ ಇಂಗ್ಲಿಷ್ ಹೆಸರುಗಳು. ಜೋಡಿಸಿಡುವ ಮತ್ತು ತೆಗೆದುಕೊಡುವ ವಿದ್ಯೆ ಮತ್ತು ಕೌಶಲಗಳನ್ನು ಡಿ ಫಾರ್ಮಾ ಮತ್ತು ಬಿ ಫಾರ್ಮಾ ಕೋರ್ಸುಗಳಲ್ಲಿ ಕಲಿಸಿಕೊಟ್ಟಿರುತ್ತಾರೆಂಬುದನ್ನು ನಾನು ಬಲ್ಲವನಾದರೂ ಈ ಕುತೂಹಲ ನನ್ನಲ್ಲಿ ಇನ್ನೂ ಉಳಿದೇ ಇದೆ. ಅಲ್ಲಿ ಕೆಲಸ ನಿರ್ವಹಿಸುವವರು ಕೋರ್ಸುಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದಾಗಿ ಔಷಧದ ಅಂಗಡಿಯಲ್ಲಿ ಪಳಗಿ ತಿಳಿದುಕೊಂಡಿರುವವರೇ ಹೆಚ್ಚು. ಅದರಲ್ಲೂ ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಮೈಸೂರಿನ ರಘುಲಾಲ್, ಶಾರದಾ, ಜನತಾ ಬಜಾರು, ಅಪೊಲೊ ಫಾರ್ಮಸಿ ಮೊದಲಾದ ಅಂಗಡಿಗಳಲ್ಲಿ ಜೋಡಿಸಿಕೊಂಡಿರುವ ಮತ್ತು ಕೆಲಸ ಮಾಡುವ ವಿಧಾನವಂತೂ ಇನ್ನೂ ಆಶ್ಚರ್ಯ ತರುವಂಥದು. ಇತ್ತೀಚೆಗೆ ಗ್ರಾಹಕರು ಡಿಸ್ಕೌಂಟು ಕೇಳುತ್ತಾರೆಂಬುದನ್ನು ಬಿಟ್ಟರೆ ಯಾರೂ ಪಾತ್ರೆ, ಬಟ್ಟೆ ಅಂಗಡಿಗಳಂತೆ ಮೆಡಿಕಲ್ ಸ್ಟೋರುಗಳಲ್ಲಿ ಚೌಕಾಸಿ ಮಾಡುವುದಿಲ್ಲ ಮತ್ತು ಸಾಲ ಕೇಳುವುದಿಲ್ಲ! ಬಹಳಷ್ಟು ಮಂದಿಯಂತೂ ವೈದ್ಯರ ಸಲಹಾ ಚೀಟಿಯನ್ನೂ ತರುವುದಿಲ್ಲ. ಮಾತ್ರೆ ತೆಗೆದುಕೊಳ್ಳುವುದಕ್ಕೂ ದುಡ್ಡು ಕೊಡುವುದಕ್ಕೂ ಮೊಬೈಲ್ ಫೋನುಗಳೇ ಪ್ರಧಾನ ಸಾಧನ ಸಲಕರಣೆ. ‘ಇದು ಕೊಡಿ’ ಎಂದು ಮೊಬೈಲು ತೋರುವುದು, ಕೊಟ್ಟ ಮೇಲೆ ಸ್ಕ್ಯಾನು ಮಾಡಿ ದುಡ್ಡನ್ನೂ ಹಾಕುವುದು ಕಾಮನ್ನಾಗಿ ಬಿಟ್ಟಿದೆ. ‘ಈ ಕಂಪೆನಿಯದ್ದು ಇಲ್ಲ; ಬೇರೆ ಕಂಪೆನಿಯದು ಇದೆ, ಕೊಡಲೇ?’ ಎಂಬುದು ಸಹ ಅಷ್ಟೇ ಸಾಮಾನ್ಯ. ತಮ್ಮ ಅಂಗಡಿಯ ರೆಗ್ಯುಲರ್ ಕಸ್ಟಮರಾದರೆ, ಪುಸ್ತಕದಲ್ಲಿ ಬರೆದುಕೊಂಡು, ಬಂದ ಮೇಲೆ ಫೋನು ಮಾಡಿ, ‘ಬಂದಿದೆ, ಬನ್ನಿ’ ಎಂದು ಹೇಳುವ ಅಂಗಡಿಯವರೂ ಇದ್ದಾರೆ. ನಾನಂತೂ ಇಂಥವು ಇಷ್ಟು ಸಂಖ್ಯೆಯಲ್ಲಿ ಬೇಕೆಂದು ಫೋನಿನಲ್ಲೇ ಹೇಳಿಬಿಡುತ್ತೇನೆ; ಹೋಗಲು ಆಗದಿದ್ದರೆ ಅಂಗಡಿಯವರೇ ಮನೆಗೆ ತಲಪಿಸುತ್ತಾರೆ. ಒಟ್ಟಿನಲ್ಲಿ ಗುಳಿಗೆಗಳು ಜೀವಕ್ಕೆ ಗಂಡಾಂತರ ಎಂದಾದರೂ ಜೀವನಕ್ಕೆ ಮೂಲಾಧಾರ ಎಂಬಂತಾಗಿವೆ.
ಈಗಂತೂ ಹೆಚ್ಚೂ ಕಡಮೆ ಎಲ್ಲರೂ ಒಂದಲ್ಲ ಒಂದು ವಿಧವಾದ ರೋಗರುಜಿನಗಳಿಗಾಗಿ ಟ್ಯಾಬ್ಲೆಟ್ಟು ನುಂಗುವವರೇ. ನುಂಗದಿರುವ ಹಠವಾದಿಗಳು ಎಲ್ಲೋ ಅಲ್ಲೋ ಇಲ್ಲೋ ಇದ್ದಾರಾದರೂ ಅವರಿಗೂ ಮಾತ್ರೆಗಳ ಪರಿಚಯವುಂಟು. ರೆಗ್ಯುಲರಾಗಿ ನುಂಗುವವರು, ಖಾಯಿಲೆ ಬಂದಾಗ ಮಾತ್ರ ನುಂಗುವವರು ಮತ್ತು ಫುಡ್ ಸಪ್ಲಿಮೆಂಟ್ ರೂಪದಲ್ಲಿ ಸೇವಿಸುವವರು ಹೀಗೆ ನಾನಾ ನಮೂನೆಯವರಿದ್ದಾರೆ. ಮಡದಿಯು ಮನೆಯಲ್ಲಿ ಇಲ್ಲದಿದ್ದಾಗ ನಾನೇ ಅಡುಗೆ ಮಾಡಿಕೊಳ್ಳುವ ಅನಿವಾರ್ಯ ಎದುರಾದಾಗಲೆಲ್ಲಾ ಹಸಿವು ನೀಗಿಸುವ ಕ್ಯಾಪ್ಸೂಲ್ಗಳು ಇದ್ದಿದ್ದರೆ ಎಷ್ಟು ಚೆನ್ನಿರುತ್ತಿತ್ತು ಎನಿಸಿದ್ದಿದೆ. ಮರುಕ್ಷಣ, ‘ಈಗ ತೆಗೆದುಕೊಳ್ಳುತ್ತಿರುವ ಮಾತ್ರೆಗಳೇ ಮುಂದಿನ ಹತ್ತು ಜನ್ಮಕ್ಕಾಗುವಷ್ಟಾಗಿದೆ, ಮತ್ತೂ ಮಾತ್ರೆಗಳ ಯೋಚನೆಯೇ’ ಎಂದು ಒಳಗೊಳಗೇ ನಕ್ಕಿದ್ದಿದೆ. ಹಾಗಾಗಿ ಯಾರು ಏನೇ ಹೇಳಲಿ, ಮಾತ್ರೆಗಳು ನಮ್ಮೀ ಯುಗದ ವಿಚಿತ್ರ ವ್ಯಾಖ್ಯಾನಗಳಿಗೆ ಈಡಾದ ತಬ್ಬಲಿಕೂಸು. ಅನಾರೋಗ್ಯಕ್ಕೆ ಅವು ಬೇಕು; ಆದರೆ ಅವುಗಳನ್ನು ದೂರವಿಡಬೇಕು! ನಾನು ಮಾತ್ರ ಹೀಗೆ ಆಲೋಚನೆ ಮಾಡದೇ ಇವೇ ನನ್ನ ಪ್ರಾಣ ಕಾಪಾಡುತ್ತಿರುವ ಸನ್ಮಿತ್ರ ಎಂದು ಆದರಿಸುತ್ತೇನೆ, ನೇವರಿಸುತ್ತೇನೆ ಮತ್ತು ಇವೇ ನನ್ನ ಜೀವ ಎಂದು ಅಪ್ಪಿಕೊಳ್ಳುತ್ತೇನೆ. ಯಾರ್ಯಾರಿಗೋ ಯಾವುದೋ ಪ್ರಾಣವಾದರೆ ನನಗೆ ಮಾತ್ರೆಗಳೇ ಜೀವ ಮತ್ತು ಜೀವನ. ಇದಕ್ಕೆ ನಗಬೇಕೋ ಅಳಬೇಕೋ ಗೊತ್ತಿಲ್ಲ. ಒಮ್ಮೊಮ್ಮೆ ನಾನು ತಮಾಷೆಗೆ ಹೇಳುವುದುಂಟು: ವಿಷ ಕುಡಿದರೂ ನನಗದು ಪರಿಣಾಮ ಬೀರುವುದಿಲ್ಲ; ಏಕೆಂದರೆ ಪ್ರತಿದಿನವೂ ವಿಷವನ್ನೇ ಸೇವಿಸಿ, ವಿಷಕಂಠನೇ ಆಗಿಬಿಟ್ಟಿದ್ದೇನೆಂದು! ಇದು ಮೊದಲೇ ಗೊತ್ತಿದ್ದವರಂತೆ ನನ್ನ ತಾಯ್ತಂದೆಯರು ‘ನಂಜುಂಡ’ ಎಂಬುದರ ಬದಲಿಗೆ ಈಶ್ವರನನ್ನು ನೆನೆವ ಹೆಸರನ್ನೇ ಇಟ್ಟುಬಿಟ್ಟಿದ್ದಾರೆ!!

–ಡಾ. ಹೆಚ್ ಎನ್ ಮಂಜುರಾಜ್



