ವಿಶೇಷ ದಿನ

ಕುವೆಂಪು ಹಾಕಿದ ‘ವಿಮರ್ಶಾತ್ಮಕ’ ಸವಾಲು !

Share Button

ನೀನೇರಬಲ್ಲೆಯಾ ನಾನೇರುವೆತ್ತರಕೆ ?
ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ ?
ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ ?

ಇಲ್ಲ ? ನಡೆ, ದೂರಸರಿ ! ಹೌದು ? ಬಾ, ಹತ್ತಿರಕೆ !
ನಿನ್ನ ನಾಡಿಯಲಿ ಕೆನ್ನೆತ್ತರು ಹಸುರ್ಗಟ್ಟಿ
ನೋಡುತಿರೆಯಿರೆ ನೀನೆ ನೋಡುವಾ ಮರವಾಗಿ
ತೆಂಗಾಳಿಯಲಿ ತಳಿರ ತೊಂಗಲ ತಲೆಯ ತೂಗಿ
ನಲಿವನ್ನೆಗಂ ದೂರ? ಬಳಿಕ ಬಾ ಮೈಮುಟ್ಟಿ.
ಭಾವ ಬುದ್ಧಿಗಳಮಲ ವಿದ್ಯುದಾಲಿಂಗನಕೆ,
ಹೃದಯಾಗ್ನಿ ಸ್ಪರ್ಶಕ್ಕೆ, ಜಡವೆಲ್ಲ ಕಿಡಿಯಾಗಿ
ಹುಡಿಮಣ್ಣು ಮಿಂಚುವುದೆ ಚೇತನದ ಗುಡಿಯಾಗಿ ?

ಎನಿತು ಹಿರಿದಾದರೂ ನಿನ್ನ ಪಂಡಿತತನಕೆ
ನಿಲುಕೆನೈ: ನಾನು ಆನಂದ-ಉನ್ಮಾದಿನಿ,
ದಿವ್ಯಾನುಭೂತಿ ಸಂಭೂತ ರಸವಾಹಿನಿ !

ರಸಋಷಿ ಕವಿ ಕುವೆಂಪು ಅವರು 1934 ರಲ್ಲೇ ಬರೆದ ಕವಿತೆಯಿದು. ಕವಿತೆ ಎಂಬುದಕಿಂತ ಏಕಕಾಲಕೆ ತಮ್ಮ ಕಾವ್ಯಸಾಗರ ಯಾನದ ದೀಪಸ್ತಂಭವನು ತಾವೇ ನಿರ್ಮಿಸಿ, ತೋರಿದ ಒಂದು ರೀತಿಯ ಅಫಿಡೆವಿಟ್ಟು. ಇದು ಅವರ ‘ಕೃತ್ತಿಕೆ’ ಕವನ ಸಂಕಲನದಲ್ಲಿದೆ. ಹೆಸರು: ನನ್ನ ಕವಿತೆ ತನ್ನ ವಿಮರ್ಶಕನಿಗೆ! ಸವಾಲಿನೋಪಾದಿಯಲ್ಲಿ ಬರೆದುಕೊಂಡು ಹೋದ ಇದರ ಸಾಲುಗಳು ಬಿಟ್ಟು ಕೊಡುವ ಸತ್ಯಗಳು ಹಲವಾರು. ಮುಂದೆ ಬಂದ ಹಲವರು ತಮ್ಮ ಬರೆಹದಲ್ಲಿ ಈ ಕವಿತೆಯ ಮೊದಲ ಮೂರು ಸಾಲುಗಳನ್ನು ಉದ್ಧರಿಸಿ, ಕುವೆಂಪು ಕವಿತೆಯನ್ನು ವ್ಯಾಖ್ಯಾನಿಸುವುದು ಇಲ್ಲಿ ಗಮನಾರ್ಹ. ಇದರ ಮೊದಲ ಮೂರು ಸಾಲುಗಳನ್ನು ಉದ್ಧರಿಸುವ ಬಹಳ ಮಂದಿಗೆ ಇದರ ಪೂರ್ಣ ಪಾಠ ಬಹುಶಃ ತಿಳಿಯದು. ಆ ಮಟ್ಟಿಗೆ ಈ ಮೂರು ಸಾಲುಗಳು ಬಹು ಜನಪ್ರಿಯತೆಯನ್ನು ಪಡೆದುಕೊಂಡು ಬಿಟ್ಟವು. ಈ ಒಂದು ಪದ್ಯದಿಂದ ಕುವೆಂಪು ಅವರ ಮನೋಧರ್ಮವನ್ನೇ ಸಾರಾಸಗಟಾಗಿ ಹೇಳುವಂಥ ವಿಮರ್ಶಕರು ಸಹ ಹುಟ್ಟಿಕೊಂಡು ಬಿಟ್ಟರು. ಪುಟ್ಟಪ್ಪನವರು ಮೂಲತಃ ಸೃಜನಶೀಲ ಕವಿಗಳಾಗಿರುವುದರಿಂದ ಅವರಿಗೊಂದು ಕಡೆ ವಿಮರ್ಶಕರನ್ನು ಕುರಿತಂತೆ ಅಸಡ್ಡೆ ಇದೆ, ಉಪೇಕ್ಷೆ ಇದೆ, ಅವರನ್ನು ಕೆಳಗಿಟ್ಟು ನೋಡುವ ಇರಾದೆಯಿದೆ ಎಂದೆಲ್ಲಾ ಭಾವಿಸತೊಡಗಿದರು. ಕುವೆಂಪು ಅವರ ಹಲವಾರು ತಾತ್ತ್ವಿಕ ಪರಿಕಲ್ಪನೆಗಳಲ್ಲಿ ಒಂದಾದ ಮತ್ತು ಅವರು ಕೊನೆಯವರೆಗೂ ಪ್ರತಿಪಾದನೆ ಮಾಡಿಕೊಂಡು ಬಂದ ಪಂಚಮಂತ್ರಗಳಲ್ಲಿ ಒಂದಾದ ಪೂರ್ಣದೃಷ್ಟಿಯೆಂಬ ವಿಮರ್ಶಾತ್ಮಕ ತತ್ತ್ವವನ್ನು ಅನ್ವಯಿಸಿ ನೋಡಿದರೆ ಇಂಥವೆಲ್ಲಾ ತಪ್ಪೆಂದು ಮನವರಿಕೆ ಆಗುವುದು ಖಂಡಿತ. ಕುವೆಂಪು ಅವರು ವಿಮರ್ಶಕರ ವಿರೋಧಿಯಲ್ಲ ಮತ್ತು ಸ್ವತಃ ಅವರೇ ಓರ್ವ ಅದ್ಭುತ ವಿಮರ್ಶಕರಾಗಿದ್ದರೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ವಿಮರ್ಶೆ ಮತ್ತು ಮೀಮಾಂಸೆಗೆ ಕೊಟ್ಟ ಹಲವಾರು ಅಮೋಘ ಕೊಡುಗೆಗಳನ್ನು ನಾವಿಂದೂ ಅಧ್ಯಯನ ಮಾಡಬೇಕು ಮತ್ತು ಮಾಡುತ್ತಿದ್ದೇವೆ. ಅವರು ಹಾಕಿಕೊಟ್ಟ ನೂರು ಸಾವಿರ ರಾಜಮಾರ್ಗಗಳಲ್ಲಿ ಇಂಥವೂ ಸೇರಿವೆ. ಇಷ್ಟಕೂ ಈ ಪದ್ಯವನ್ನು ಅವರು ಬರೆದಿರುವುದು 1934 ರಲ್ಲಿ. ಅಂದರೆ ಅವರ ಸಾಹಿತ್ಯಕ ಕೃಷಿಯ ಪ್ರಾರಂಭಿಕ ಹಂತದಲ್ಲಿ.

ಸಾಹಿತ್ಯವನ್ನು ಓದುವ ಒಂದು ಶಿಸ್ತಿದೆ. ಅದೇನೆಂದರೆ, ಪ್ರತಿ ಪದವೂ ಅನ್ಯಾರ್ಥವನ್ನು ಹೊಂದಿರುತ್ತದೆಂಬುದು. ‘ನಾನು ಬೆಳಗ್ಗೆ ಎದ್ದಾಗ ಎಂಟು ಗಂಟೆಯಾಗಿತ್ತು; ಜಗತ್ತು ಆಗಲೇ ಎದ್ದು ಬಿದ್ದು ಭರದಿಂದ ಓಡುತ್ತಿತ್ತು’ ಎಂದು ಬರೆದರೆ ಅದು ನಾನು ಆಗಿರಬೇಕಿಲ್ಲ! ಸೃಜನಪ್ರಧಾನ ಬರೆವಣಿಗೆಯಲ್ಲಿ ಅದು ಯಾವುದೋ ಒಂದು ಪಾತ್ರವೂ ಆಗಿರಬಹುದು. ಹೀಗಾಗಿ ಓದುವ ಅತಿಮುಖ್ಯವಾದ ಶಿಸ್ತಿನಲ್ಲಿ ಲೋಪವುಂಟಾದರೆ, ಮಿಸ್ ರೀಡಿಂಗೂ ಆಗುತ್ತದೆ ಮತ್ತು ಮಿಸ್ ಲೀಡಿಂಗೂ ಆಗುತ್ತದೆ. ಈ ಪದ್ಯವನ್ನು ಓದಿಕೊಳ್ಳುವ ರೀತಿನೀತಿಗಳಲ್ಲಿ ಆಗಿದ್ದೂ ಇದೇ. ಇದರ ಶೀರ್ಷಿಕೆಯಲ್ಲಿ ‘ನನ್ನ ಕವಿತೆ’ ಎಂಬುದನ್ನು ಕುವೆಂಪು ಅವರ ರಚನೆಗಳೆಂದೂ ಅದನ್ನು ವಿಮರ್ಶಿಸುವ ಎಲ್ಲರಿಗೂ ಕವಿಯು ಇಂಥ ಸವಾಲುಗಳನ್ನು ಹಾಕುತ್ತಿದ್ದಾರೆಂದೂ ಭಾವಿಸಬಾರದು. ಇಷ್ಟಕೂ ಹಾಗೆ ಭಾವಿಸಿದರೂ ತಪ್ಪೇನಿದೆ? ಎಂಬುದೇ ನನ್ನ ಅಂತಿಮ ಪ್ರಶ್ನೆ. ಹಾಗೆ ಭಾವಿಸಿದರೂ ಕವಿತೆಗೇನೂ ಕುಂದಾಗುವುದಿಲ್ಲ ಮತ್ತು ವಾಚ್ಯವೋ ಸೂಚ್ಯವೋ ಯಾವ ಅರ್ಥವನ್ನು ಕೊಟ್ಟರೂ ಕವಿತೆಯ ಆಂತರ್ಯ ಮಾತ್ರ ಅಪೂರ್ವವಾಗಿದೆ, ಬುದ್ಧಿಗಿಂತ ಹೃದಯಕ್ಕೆ ಮನ್ನಣೆಯಿತ್ತಿದೆ. ವಿಮರ್ಶಕನದು ಬುದ್ಧಿಕೇಂದ್ರಿತ ಬುದ್ಧಿಪೂರ್ವಕ. ಆದರೆ ಸೃಜನಶೀಲ ಕವಿಯದು ಹೃತ್ಪೂರ್ವಕ ಮತ್ತು ಬುದ್ಧಿಪೂರ್ವ! ಎಷ್ಟಾದರೂ ವಿಮರ್ಶೆಯದು ಸೆಕೆಂಡ್ ಹ್ಯಾಂಡ್; ಯಾವತ್ತೂ ಒರಿಜಿನಲ್ ಆದುದು ಕವಿಯ ಅನುಭವ!! ವಿಮರ್ಶೆಯನ್ನೋ ವಿಮರ್ಶಕರನ್ನೋ ಕೆಳಗಿಟ್ಟು ನೋಡಿದರೆಂದರೆ ಅದು ಸೃಜನಾತ್ಮಕತೆಯ ನಂತರವೇ ಬರುವಂಥದು. ಕವಿಯು ಏನನ್ನೂ ರಚಿಸದಿದ್ದರೆ ಅವರೇನು ವಿಮರ್ಶಿಸುವರು? ಅಲ್ಲವೇ. ಸರಿಯಾಗಿ ನೋಡಿದರೆ ಕವಿಯೇ ಮೊದಲ ವಿಮರ್ಶಕ! ಬರೆಯುವಾಗಲೇ ಇದು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ತನ್ನ ಕಾರ್ಯ ನಿರ್ವಹಿಸುತ್ತಿರುತ್ತದೆ.

ಮೊದಲು ಭಾಷೆ ಆಮೇಲೆ ಸಾಹಿತ್ಯ ಹಾಗೆಯೇ ಮೊದಲು ಕವಿತೆ ಆಮೇಲೆ ವಿಮರ್ಶೆ. ವಿಮರ್ಶೆ ಇಲ್ಲದೆಯೂ ಕವಿತೆ ಬಾಳೀತು. ಆದರೆ ಸಾಹಿತ್ಯ ರಚನೆಯಾಗದೇ ವಿಮರ್ಶೆಗೆ ಅಸ್ತಿತ್ವವಿಲ್ಲ. ಮೊದಲು ಭಾಷೆ ಆಮೇಲೆ ಹೇಗೆ ವ್ಯಾಕರಣವೋ ಹಾಗೆಯೇ ಮೊದಲು ಸೃಜನಾತ್ಮಕತೆ. ತದನಂತರ ಅದನ್ನು ಓದುಗರಿಗೆ ಸೇತುವೆಯೋಪಾದಿಯಲ್ಲಿ ನಡುವೆ ಬಂದು ನಿಲ್ಲುವುದು ಇಂಥ ವಿಮರ್ಶೆಯ ವಿವರಣೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನ. ಹೀಗಾಗಿ ಕವಿತೆಯು ಒಂದು ವಿಧವಾದ ಸವಾಲನ್ನೊಡ್ಡಿ, ನಾನೇರುವೆತ್ತರಕೂ ಹಾರುವಗಲಕ್ಕೂ ಮುಳುಗುವಾಳಕ್ಕೂ ಜೊತೆಗೆ ಸ್ಪಂದಿಸಲು ನಿನಗೆ ಸಾಧ್ಯವೇ?’ ಎಂದು ಪ್ರಶ್ನಿಸುತ್ತದೆ. ಇಂಥ ಪ್ರಶ್ನೆಯ ಹಿಂದೊಂದು ಸಕಾರಾತ್ಮಕ ಧೋರಣೆಯೂ ಅಡಕವಾಗಿದೆ. ಅದೆಂದರೆ, ಸೃಜನ ಸಾಹಿತ್ಯದೊಂದಿಗೆ ಚಿಂತನ ಸಾಹಿತ್ಯವೂ ಅದರಲ್ಲೂ ಬಹುಮುಖ್ಯವಾಗಿ ವಿಮರ್ಶೆಯು ಸಹ ಜೊತೆಯಾಗಿ ಏರಬೇಕು, ಹಾರಬೇಕು ಮತ್ತು ಮುಳುಗಬೇಕು ಎಂದು! ಇಲ್ಲಿ ‘ನೀನೇರಬಲ್ಲೆಯಾ?’ ಎಂದಾಗ ಅದು ಕೇವಲ ಪ್ರಶ್ನೆಯಾಗಿ ಉಳಿಯುವುದಿಲ್ಲ; ನೀನೇರಬೇಕುಎಂಬ ಸಹಿತಾರ್ಥವೂ ಅಡಗಿದೆ. ಈ ಕವನದ ಮೊದಲ ಮೂರು ಸಾಲುಗಳನ್ನು ಉಳಿದ ಸಾಲುಗಳೊಂದಿಗಿಟ್ಟು ಓದಿಕೊಂಡಾಗ ಅರ್ಥ ಸುಭಗವಾಗುತ್ತದೆ; ನಕಾರಾತ್ಮಕ ಭಾವ ಇಲ್ಲವಾಗುತ್ತದೆ. ಅಷ್ಟಲ್ಲದೇ ಕವಿಯು ತನ್ನ ನಾಲ್ಕನೆಯ ಸಾಲಿನಲ್ಲಿ ‘ಹೌದು, ಬಾ, ಹತ್ತಿರಕೆ!’ ಎಂದು ಸ್ವಾಗತಿಸುತ್ತಿರಲೇ ಇಲ್ಲ!!

ಮೇಲಕೂ ಅಗಲಕೂ ಆಳಕೂ ಏರುವಂಥ, ಹರಡಿಕೊಳ್ಳುವಂಥ, ಇಳಿಯುವಂಥ ಕ್ರಿಯೆಯೇನಿದೆ, ಅದು ಏಕಕಾಲಕ್ಕೆ ಸೃಷ್ಟಿಶೀಲ ಸಾಹಿತ್ಯದ ಸಲ್ಲಕ್ಷಣ. ಕೇವಲ ಮೇಲುಮೇಲಿನ ರಚನೆಗಳಾಗಬಾರದು. ಏರುವ ಮೂಲಕ ಇನ್ನಷ್ಟು ಎತ್ತರವನ್ನು ಸಾಧಿಸಬೇಕು. ಹಾರುವ ಮೂಲಕ ಇನ್ನಷ್ಟು ವಿಸ್ತರಿಸಿಕೊಳ್ಳಬೇಕು ಮತ್ತು ಇಳಿಯುವ ಮೂಲಕ ಇನ್ನಷ್ಟು ಶೋಧಿಸಬೇಕು ಎಂಬುದು ಇಂಥಲ್ಲಿ ಅಪೇಕ್ಷಣೀಯ. ಅಷ್ಟೇ ಅಲ್ಲದೇ ಕವಿಗೂ ಓದುಗರಿಗೂ ಸೇತುವೆಯಾಗಬೇಕಾದ ವಿಮರ್ಶೆ ಕೂಡ ಹೀಗೆಯೇ ಇಂಥ ಹಾದಿಯಲ್ಲಿ ಸಂಚರಿಸಬೇಕು. ಅರ್ಥೈಸುವ ಭರದಲ್ಲಿ ಅನರ್ಥಗಳನ್ನೂ ಅಪಾರ್ಥಗಳನ್ನು ಸೃಷ್ಟಿಸಬಾರದು. ಹೊಂದಿಕೊಳ್ಳದ ಹಲವು ಬೌದ್ಧಿಕ ಸಿದ್ಧಾಂತಗಳನ್ನು ಎಳೆತಂದು ಲಗತ್ತಿಸಿ ವ್ಯರ್ಥ ಜಿಜ್ಞಾಸೆ ಮಾಡಬಾರದು. ಆ ಮೂಲಕ ಸೃಜನಕ್ಕೆ ಅನ್ಯಾಯ ಮಾಡಬಾರದು. ನಮ್ಮ ಬೌದ್ಧಿಕ ಅಹಂಕಾರವನ್ನು ಮೆರೆಸಲು ಸೃಜನಸಾಹಿತ್ಯವನ್ನು ನೆಪ ಮಾಡಿಕೊಳ್ಳಬಾರದು ಎಂದೆಲ್ಲಾ ಭಾವಗಳನ್ನು ಆರೋಪಿಸಬಹುದು. ಈ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡ ಕವಿಯು ‘ನನ್ನ ಕವಿತೆಯು ತನ್ನ ವಿಮರ್ಶಕನಿಗೆ’ ಹೀಗೆ ಹೇಳಲು ಇಚ್ಛಿಸುತ್ತದೆಂದು ತಿಳಿಸುವರು. ‘ದೂರ ಸರಿ’ ಎಂಬ ಪದ ಪ್ರಯೋಗದಿಂದ ನಿನ್ನದೇನಿದ್ದರೂ ನನ್ನ ನಂತರದ್ದು, ಜೊತೆಗೆ ಹೆಜ್ಜೆ ಹಾಕುವ ಅರ್ಹತೆಯಿಲ್ಲವೆಂದು ಕಟಕಿಯಾಡುವರು. ಇದೊಂದು ರೀತಿಯಲ್ಲಿ ಸರಿ. ಏಕೆಂದರೆ ಸಾಹಿತ್ಯ ವಿಮರ್ಶೆಯು ಸೃಜನ ಸಾಹಿತ್ಯವನ್ನು ಹಿಂಬಾಲಿಸಬೇಕು; ಅದೇ ವಿಜೃಂಭಿಸಬಾರದು. ಒಂದು ಹಂತದಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಯು ದಿಕ್ಕು ತಪ್ಪಿದ್ದು ನಿಜ. ಅದು ತನ್ನ ವಿನಯವನ್ನು ಮರೆತಿದ್ದು ಸಹ ಅಷ್ಟೇ ನಿಜ. ಈ ಎಲ್ಲ ವಿದ್ಯ-ಮಾನಗಳ ಹಿಂದೆ ಕವಿ ಕುವೆಂಪು ಅವರ ಸೂಕ್ಷ್ಮ ಸಂವೇದನೆಯು ಹೀಗೆ ನುಡಿಸಿದೆ. ಇನ್ನೂ ಒಂದು ಹೆಜ್ಜೆ ಮುಂಬರಿದು ಹೇಳುವುದಾದರೆ, ಹೊಸಗನ್ನಡ ಸಾಹಿತ್ಯ ವಿಮರ್ಶೆಯು ಮುಂದೊಂದು ಕಾಲದಲ್ಲಿ ತೋರಿದ ತನ್ನ ಅತೀವ ವಿಜೃಂಭಣೆಗೆ ಉತ್ತರವನ್ನಾಗಿ ಸಹ ಈ ಕವಿತೆ ಪೂರ್ವಾನ್ವಯವಾಗಿ ಕೊಟ್ಟಿದೆ ಎಂದೇ ಹೇಳಬೇಕು. ನವೋದಯ ವಿಮರ್ಶೆಯನ್ನು ಟೀಕಿಸಿ ತನ್ನದೇ ಆದ ಸೈದ್ಧಾಂತಿಕ ವಿಮರ್ಶೆಯನ್ನು ಅನ್ಯಜ್ಞಾನ ಶಿಸ್ತುಗಳ ಮೂಲಕ ಕೊಡಲು ಹೋದ ನವ್ಯ ವಿಮರ್ಶೆಯು ಸೃಜನಪ್ರಧಾನ ರಚನೆಯನ್ನೇ ಮಸುಳಿಸಿ ಮೆರೆದಾಡಿತು. 1934 ರಲ್ಲಿ ಕುವೆಂಪು ಬರೆದ ಈ ಕವಿತೆಯನ್ನು ನೆನಪಿಸಿಕೊಳ್ಳುವಷ್ಟರಮಟ್ಟಿಗೆ ಅದು ಹಾದಿ ಬಿಟ್ಟು ಯತ್ವಾದತ್ವವಾಯಿತು. ಅಂದರೆ ಕುವೆಂಪು ಅವರ ಈ ಕವಿತೆಯು ಸಾರ್ವಕಾಲಿಕವಾದದ್ದು. ವಿಮರ್ಶೆಗಿಂತ ಹೆಚ್ಚಾಗಿ ವಿಮರ್ಶಕನಿಗೆ ಚಾಟಿಯೇಟಿನಂತೆ ಪ್ರಯೋಗವಾಗಲು ಅರ್ಹವಾಗಿದೆ. ನಿನ್ನಲ್ಲಿ ನಿಯತ್ತು ಮತ್ತು ತಾಕತ್ತು ಇದ್ದರೆ ಸೃಜನ ರಚನೆಗಳು ಏರುವ, ಹಾರುವ ಮತ್ತು ಇಳಿಯುವ ಈ ಮೂರೂ ಆಯಾಮ (ಡೈಮನ್ಷನ್) ಗಳಿಗೆ ಒಳಗಾಗು. ಅದು ಬಿಟ್ಟು ಮೇಲು ಮೇಲಿನ ‘ಚೆನ್ನಾಗಿದೆ, ಚೆನ್ನಾಗಿಲ್ಲ, ಪಾತ್ರ ಸೋತಿದೆ, ಭಾಷೆ ಪೇಲವ’ ಎಂದೆಲ್ಲಾ ವಿಮರ್ಶಿಬೇಡ. ಸೃಜನದ ಜೊತೆ ಜೊತೆಗೆ ನಡೆಯಲು ಅಥವಾ ಅದರೊಂದಿಗೆ ಹೆಜ್ಜೆ ಹಾಕಲು ಪ್ರಯತ್ನಿಸು. ಯಾವತ್ತೂ ಕವಿಯೇ ಸಾರ್ವಭೌಮ. ‘ಯಥಾಸ್ಮೈ ರೋಚತೇ ವಿಶ್ವಂ, ತಥೇದಂ ಪರಿವರ್ತತೇ’ ಕಾವ್ಯಜಗತ್ತಿನಲ್ಲಿ ಕವಿಯೇ ಬ್ರಹ್ಮ. ಅವನ ಪ್ರತಿಭೆಯು ಶಿವನ ಮೂರನೆಯ ಕಣ್ಣಿದ್ದಂತೆ! ಇದನರಿಯಲು ಪ್ರಯತ್ನಿಸು ಎಂದು ಬೋಧಿಸುತ್ತದೆ. ವಾಸ್ತವವಾಗಿ ಕುವೆಂಪು ಅವರಿಗೆ ವಿಮರ್ಶೆಗಿಂತ ವಿಮರ್ಶಕರೆನಿಸಿಕೊಂಡವರ ಮೇಲೆ ಒಂದು ಬಗೆಯ ಸಾತ್ತ್ವಿಕ ಸಿಟ್ಟು ಯಾಕಿತ್ತೆಂಬುದಕೆ ಹಲವು ಕಾರಣಗಳಿದ್ದವು. ಕುವೆಂಪು ಅವರು ಮೂಲತಃ ತತ್ತ್ವಾನ್ವೇಷಕ ಕವಿ. ಜೊತೆಗೆ ಚಿಂತನಶೀಲ ಕವಿ. ಹಾಗೆಂದು ಅವರ ಭಾವವನ್ನು ಮರೆಯುವುದಿಲ್ಲ. ಭಾವನೆಯನ್ನೂ ಚಿಂತನೆಯನ್ನೂ ಜೊತೆ ಜೊತೆಗೊಯ್ಯುವುದು ಅವರ ಸ್ವಭಾವ. ನವೋದಯದ ಧನಾತ್ಮಕ ಅಂಶಗಳನ್ನು ನಕಾರಾತ್ಮಕವಾಗಿ ನೋಡುವ ಮನೋಧರ್ಮವನ್ನು ಅವರು ಪ್ರಶ್ನಿಸಿದರು. ಕವಿಯೇ ಬೇರೆ; ವ್ಯಕ್ತಿಯೇ ಬೇರೆ ಎಂಬುದನ್ನು ಅವರು ನಂಬಿದ್ದವರು. ಅದಕಾಗಿಯೇ ನವೋದಯದ ಬಹಳಷ್ಟು ಮಂದಿಯು ಕಾವ್ಯನಾಮವನ್ನು ಇಟ್ಟುಕೊಂಡಿದ್ದವರು. ಜೊತೆಗೆ ಸ್ಫೂರ್ತಿ ತತ್ತ್ವದಲ್ಲಿ ಅಚಲ ನಂಬುಗೆ. ಭಾರತದ ಆರ್ಷೇಯ ಪರಂಪರೆಯಲ್ಲಿ ಅಪರಿಮಿತ ಶ್ರದ್ಧೆ ಮತ್ತು ಭಕ್ತಿ. ರಾಷ್ಟ್ರೀಯತೆ ಮತ್ತು ನಿಸರ್ಗದ ಆರಾಧನೆಗಳಲ್ಲಿ ಎತ್ತಿದ ಕೈ. ಇವೆಲ್ಲ ಹಿನ್ನೆಲೆಗಳನ್ನು ಗಮನಿಸದೇ ಕೇವಲ ಕೃತಿಕೇಂದ್ರಿತ ವಿಮರ್ಶೆಯನ್ನು ಮಾಡುವ ಮತ್ತು ರಚನಾಕಾರರ ಸಾಹಿತ್ಯಕ ಧೋರಣೆಗಳನ್ನು ಪಕ್ಕಕಿಟ್ಟು ಮಾತಾಡುವ ಮಂದಿಯ ಬಗ್ಗೆ ಅವರಿಗೆ ಹೇವರಿಕೆ ಇದ್ದುದರಿಂದ ಇಂಥ ಕವಿತೆ ಜನಿಸಿತು. ಮುಖ್ಯವಾಗಿ ಕವಿಯ ಕಲ್ಪಕತೆ ಮತ್ತು ಅಂತರ್ದೃಷ್ಟಿಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ವಿಮರ್ಶಕನನ್ನು ಅವರು ತರಾಟೆಗೆ ತೆಗೆದುಕೊಂಡರು. ನನ್ನ ಎತ್ತರವೇನು? ಅಗಲವೇನು? ಹುಡುಕಾಟವೇನು? ನಿನಗೆ ಗೊತ್ತುಂಟೆ? ಎಂದವರು ನಕ್ಕರು. ಬುದ್ಧಿ ಭಾವಗಳ ವಿದ್ಯುದಾಲಿಂಗನವ ಅರಿಯದ ಹೆಳವರು ಈ ವಿಮರ್ಶಕರು ಎಂದು ಹೇವರಿಸಿದರು. ಸ್ಫೂರ್ತಿ, ಕಲ್ಪಕತೆ, ಪ್ರತಿಭೆ, ಅಂತರ್ದೃಷ್ಟಿ (ಪ್ರತಿಭಾನ), ಕಲಾತ್ಮಕತೆಗಳನು ಒಟ್ಟುಗೂಡಿಸಿಕೊಂಡು, ಒಂದು ನಿಗದಿತ ‘ಛಂದ’ ಚೌಕಟ್ಟಿನಲ್ಲಿ ನಿರೂಪಿಸುವಾಗ ರವಿ ಕಾಣದ್ದನ್ನೂ ಕವಿ ಕಾಣುವನು! ಇದವನ ಅರ್ಹತೆ ಮತ್ತು ಯೋಗ್ಯತೆ. ಇದೇ ಅರ್ಥದಲ್ಲಿ ಪು ತಿ ನರಸಿಂಹಾಚಾರ್ಯರು ಬರೆದ ಕವಿತೆಯೊಂದಿದೆ: ‘ವ್ಯಥೆಗಳ ಕಳೆಯುವ ಕಥೆಗಾರ, ನಿನ್ನ ಕಲೆಗೆ ಯಾವುದು ಭಾರ? ಯಾವುದು ವಿಸ್ತರ, ಯಾವುದು ದುಸ್ತರ, ನಿನಗೆಲೆ ಹರ್ಷದ ಹರಿಕಾರ. ಕಪಿ ಹಾರಿತು ಹೆಗ್ಗಡಲನು ಎಂಬೆ; ಕಡಲನು ಕಡೆದರು ಬೆಟ್ಟದೊಳೆಂಬೆ, ನಿನ್ನೂಹೆಯ ಹೇರಾಳವ ತುಂಬೆ, ಸೃಷ್ಟಿಕರ್ತನಿಗೂ ಅರಿವೆಂಬೆ!’ ಇನ್ನೂ ಮುಂಬರಿದು, ‘ಅರಿವರಾರೋ ನಿನ್ನಿಂದ್ರಜಾಲ’ ಎಂದು ಚಕಿತಗೊಳ್ಳುತ್ತಾರೆ. ಕವಿಗೆ ಗೊತ್ತು ಇನ್ನೋರ್ವ ಕವಿಯ ಮನದಂತರಾಳ. ಹಾಗಾಗಿ, ಕುವೆಂಪು ಅವರದೊಂದೇ ತಕರಾರು: ಸ್ಫೂರ್ತಗೊಂಡು ಮೈದುಂಬಿ ಬರೆಯುವ ಕವಿಗೂ ಒಮ್ಮೊಮ್ಮೆ ಆತ ಹತ್ತಿದ ಎತ್ತರ, ಹರಡಿಕೊಂಡ ವಿಸ್ತಾರ ಮತ್ತು ಕೆಳಗಿಳಿದ ಪಾತಾಳ ಭರಪೂರಗಳು ಗೊತ್ತಾಗುವುದಿಲ್ಲ! ಏಕೆಂದರೆ ಇದು ಬುದ್ಧಿಭಾವಗಳ ಸಮನ್ವಯ; ಕರುಳೂ ಮಿದುಳೂ ಒಂದಾದ ಅನನ್ವಯ. ವಿಮರ್ಶಕನು ಅನುಸರಿಸಿ ಬರಬೇಕು; ಕವಿಯು ಮುಂದೋಡುತಿರಬೇಕು. ಆನಂದ ಉನ್ಮಾದಿನಿಯೂ ರಸವಾಹಿನಿಯೂ ಆದ ಕವಿಯೆಂದೂ ವಿಮರ್ಶಕನಿಗೆ ನಿಲುಕನೈ! ಅಷ್ಟೇಕೆ? ಬರೆದಿಟ್ಟ ಮೇಲೆ ಕವಿಗೂ ಅದು ನಿಲುಕುವುದಿಲ್ಲ, ಕೈಗೆಟುಕುವುದಿಲ್ಲ, ಅಷ್ಟರಮಟ್ಟಿಗೆ ಅದೊಂದು ಮಹೂರ್ತ, ಸುಮಹೂರ್ತ, ಸುಸಮಯ. ಬರೆದ ಮೇಲೆ ವಿವರಿಸುವಲ್ಲಿ ಕವಿಯೂ ಅಸಹಾಯಕ, ಆತ ಅದಕ್ಕೆ ಅನ್ಯ. ಇದು ಬರೆಹದ ಸೃಷ್ಟಿಶೀಲ ನಿಗೂಢವನ್ನೂ ಮಾಂತ್ರಿಕತೆಯನ್ನೂ ಬೊಟ್ಟು ಮಾಡಿ ತೋರಿಸುವಂಥದು. ಏಕೆಂದರೆ ಕುವೆಂಪು ಅವರು ಇದನ್ನು ಬರೆವ ಹೊತ್ತಲ್ಲಿ ನವೋದಯ ಸಿದ್ಧಾಂತಗಳ ರಮ್ಯಗುಣಕ್ಕೆ ಮನ ಸೋತಿದ್ದವರು; ತಮ್ಮದೇ ಆದ ದಾರಿಯೊಂದರ ಅನ್ವೇಷಣೆಯಲ್ಲಿದ್ದವರು.

‘ಕುವೆಂಪು ಅವರಿಗೆ ಯಾಕಿಷ್ಟು ರೋಷಾಕ್ರೋಶ!’ ಎಂದು ಕೇಳಿಕೊಳ್ಳಲು ಹೊರಟರೆ ಈ ಕವಿತೆಯ ಮುಂದಿನ ಸಾಲುಗಳು ನಮಗೆ ಉತ್ತರವಾಗಿ ದೊರಕುತ್ತವೆ. ಅವರು ಮೂಲತಃ ಚಿಂತನಶೀಲ ಕವಿಯಾದರೂ ವಿಮರ್ಶೆಯು ಪಕ್ಕಕ್ಕಿಡುವ ಭಾವನಾತ್ಮಕತೆಯನ್ನು ಅದಮ್ಯವಾಗಿ ಧರಿಸುವಂಥವರು. ಅದರಲ್ಲೂ ಅವರ ನಿಸರ್ಗ ಪ್ರಧಾನ ಕವಿತೆಗಳು ನಿಜವಾದ ತಪಸ್ಸೇ ಸರಿ. ‘ನಿನ್ನ ನಾಡಿಯಲಿ ಕೆನ್ನೆತ್ತರು ಹಸುರ್ಗಟ್ಟಿ ನೋಡುತಿರೆಯಿರೆ ನೀನೆ ನೋಡುವಾ ಮರವಾಗಿ……’ ನೋಡುತ್ತಿರುವದಕ್ಕೂ ನೋಡುಗನಿಗೂ ಯಾವ ಅಂತರವೂ ಇರಬಾರದು. ಐಕ್ಯವಾಗದಿದ್ದರೆ ಭಾವಸಮಾಧಿಗೆ ಅವಕಾಶವೆಲ್ಲಿ? ಹರಿಯುತಿರುವ ಕೆಂಪು ರಕುತವು ಹಸುರಾಗಬೇಕು, ಮರವನ್ನು ಹಾಗೆ ಕಾಣಬೇಕು! ಭಾವ ಬುದ್ಧಿಗಳಮಲ ವಿದ್ಯುದಾಲಿಂಗನವಾಗಬೇಕು. ಹೃದಯಾಗ್ನಿ ಸ್ಪರ್ಶಕೆ ಜಡವೂ ಚೇತನದ ಗುಡಿಯಾಗಬೇಕು. ನಿಸರ್ಗವನ್ನು ಕಾಣುವುದೆಂದರೆ ನಿಸರ್ಗವೇ ಆಗಿಬಿಡಬೇಕು. ಈ ತಾದಾತ್ಮ್ಯವೇ ಅಧ್ಯಾತ್ಮ ಎಂಬುದು ಕುವೆಂಪು ನಿಲುವು. ವಿಮರ್ಶೆಗೆ ಇದು ಸಾಧ್ಯವಾಗುವುದಿಲ್ಲ. ಅದರದೇನಿದ್ದರೂ ‘ಹೊರಗಿನ’ ಬಾಧ್ಯತೆ. ಏಕೆಂದರೆ ವಿಮರ್ಶಕನೂ ಕವಿಯಾಗಿಬಿಟ್ಟರೆ ವಿಮರ್ಶೆಯೇ ಜನಿಸುವುದಿಲ್ಲ; ಮತ್ತೊಬ್ಬ ಸಹೃದಯ ಅವತರಿಸಿ ಬಿಡುತ್ತಾನೆ! ಕವಿ ಕುವೆಂಪು ಅವರು ತಮ್ಮ ‘ರಸಸಿದ್ಧಿ’ ಎಂಬ ಇನ್ನೊಂದು ಕವಿತೆಯಲ್ಲಿ ‘ಗಗನವನು ನೋಡು ಮೈ ನೀಲಿಗಟ್ಟುವವರೆಗೆ, ಕಡಲನೀಕ್ಷಿಸು ವಾರಿರಾತಿ ಧಮನಿಗಳಲ್ಲಿ, ಧುಮ್ಮಿಕ್ಕಿ ಮೊರೆವನ್ನೆಗಂ, ಕಟ್ಟಿರುಳಿನಲ್ಲಿ ನೀನೆ ಕತ್ತಲೆಯಾಗಿ, ನಿನ್ನೊಳಗೆ ಮಿರುಮಿರುಗೆ ಕೋಟಿ ಸಂಖ್ಯೆ ತಾರೆಯನ್ನೆಗಂ ಧ್ಯಾನಗೈ’ ಎಂದು ಬರೆಯುತ್ತಾರೆ. ‘ಮೈ ನೀಲಿಗಟ್ಟುವುದೆಂದರೆ’ ಲೌಕಿಕಾರ್ಥದಲ್ಲಿ ವಿಷವೇರಿ ಸಾಯುವುದೆಂದರ್ಥ. ಆದರೆ ಕವಿಯು ಇದರ ಅರ್ಥವನ್ನೇ ಬದಲಿಸಿ ಬಿಡುತ್ತಾರೆ. ನೀಲಾಕಾಶವನ್ನು ನೋಡುತಿದ್ದರೆ ನನ್ನ ಮೈ ಸಹ ನೀಲಿಗಟ್ಟಬೇಕು ಅಂದರೆ ಆ ಮಟ್ಟಿಗೆ ನಾನೂ ನೀಲಗಗನದ ಒಂದಂಗವಾಗಿ ಬಿಡಬೇಕು. ಕಡಲನು ನೋಡುತಿದ್ದರೆ ನನ್ನ ಧಮನಿಗಳಲಿ ಹರಿವ ರಕುತ ಸಹ ಧುಮ್ಮಿಕ್ಕುವಂತಿರಬೇಕು. ಹಾಗೆಯೇ ಕಡುಗತ್ತಲೆಯಾಗಿ ನಾನೇ ಕತ್ತಲಾಗಿ ಮಿರುಮಿರನೆ ಮಿಂಚುತಿರುವ ಕೋಟಿ ತಾರೆಗಳಾಗುವ ಧ್ಯಾನಸ್ಥತೆಯಲಿ ಮಗ್ನವಾಗಬೇಕು. ಇದುವೇ ಏಕತೆ; ಭಾವೇಕತೆ. ಇಂತಲ್ಲದೇ ರಸಸಿದ್ಧಿಯಾಗಲಾರದು. ಇದು ಕವಿಯ ಭಾವಪ್ರಪಂಚ. ಅನುಭವಸಾಂದ್ರತೆಯು ಸಾವಯವಸಂಬಂಧವಾಗುವ ಪವಾಡವಿದು.

ಹಸುರು ಎಂಬ ಅವರ ಇನ್ನೊಂದು ಕವಿತೆಯಲ್ಲಿ, ‘ಹಸುರಾಗಸ, ಹಸುರು ಮುಗಿಲು, ಹಸುರು ಗದ್ದೆಯಾ ಬಯಲು; ಹಸುರಿನ ಮಲೆ, ಹಸುರು ಕಣಿವೆ, ಹಸುರು ಸಂಜೆಯೀ ಬಿಸಿಲು!’ ಎಂದುಬಿಡುತ್ತಾರೆ. ಲೋಕಸತ್ಯವು ಭಾವಸತ್ಯವಾಗುವ ಪರಿವರ್ತನೆಯಲ್ಲಿ ಕವಿಯೂ ಇನ್ನೋರ್ವ ಬ್ರಹ್ಮ. ಗದ್ದೆ, ಕಣಿವೆ, ಬೆಟ್ಟಗಳೆಲ್ಲ ಹಸುರೆಂದುದು ಸರಿ; ಆದರೆ ಅದರ ಮೇಲೆ ಬಿದ್ದ ಸಂಜೆಯ ಬಿಸಿಲು ಸಹ ಹಸುರು ಎಂದರೆ!? ಇದು ಕವಿಯ ಕಾಣ್ಕೆಯಲ್ಲದೇ ಬೇರೇನಲ್ಲ. ಬಿಸಿಲಿನ ಬಣ್ಣ ಬಿಳಿ ಅಥವಾ ಬಿಳಿಯಂಥದು. ಆದರೆ ಕವಿಯ ಭಾವಲೋಕದಲ್ಲಿ ಅದು ಸಹ ಹಸುರೇ. ಇನ್ನೂ ಮುಂದುವರೆದು, ‘ಹಸುರತ್ತಲ್, ಹಸುರಿತ್ತಲ್, ಹಸುರೆತ್ತಲ್ ಕಡಲಿನಲಿ; ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ!’ ಎಂದುಬಿಡುವರು. ಇದಂತೂ ಅತಿರೇಕವೇ ಆಯಿತು! ಹಸುರು ಅಲ್ಲಿಯೂ ಇಲ್ಲಿಯೂ ಎಲ್ಲಿಯೂ ಕೊನೆಗೆ ಕಡಲಿನಲ್ಲಿಯೂ. ಇದರಿಂದಾಗಿ ಏನಾಯಿತೆಂದರೆ, ಕವಿಯಾತ್ಮ ಕೂಡ ಹಸುರ್ಗಟ್ಟಿತು, ಒಡಲಿನ ಕೆಂಪುರಕುತವೂ ಹಸುರಾಗಿಬಿಟ್ಟಿತು!! ಹಸುರ ನೋಡಿ ನೋಡಿ ಕವಿಯ ಸಕಲವೂ ಹಸುರಾಯಿತು. ಎಲ್ಲವೂ ಅದೇ ಆಗಿಬಿಡುವ ನೋಡುವುದರ ಭಾಗವಾಗಿಬಿಡುವ ಅನನ್ಯತೆ ಮತ್ತು ಅನ್ಯೋನ್ಯತೆಗೆ ಪರಮ ಪ್ರತೀಕವಿದು. ಇದುವೇ ಪೂರ್ಣದೃಷ್ಟಿ. ಖಂಡತುಂಡವಲ್ಲ; ಅಖಂಡ. ಇಲ್ಲಿ ನೋಡುಗನಿಗೂ ನೋಡುತ್ತಿರುವುದಕ್ಕೂ ಭೇದ ಅಳಿದು ಅದ್ವೈತದ ಜನನ; ಅದೇ ಇದಾಗಿಬಿಡುವ ಪರಮದರ್ಶನ. ಜೀವಾತ್ಮವು ಪರಮಾತ್ಮವಾಗಿಬಿಡುವ ವಿಸ್ಮಯ. ಈಗ ನೀವೇ ಹೇಳಿ, ಇದನೆಂದಿಗೂ ವಿಮರ್ಶಕ ಅರಿಯಲಾರ. ಅರಿತರೆ ಆತನೂ ಇನ್ನೋರ್ವ ಕವಿಯಾಗಿ ಬಿಡುವ! ಇದನ್ನೇ ಕವಿ ಹೇಳುತ್ತಿರುವುದು: ‘ಭಾವ ಬುದ್ಧಿಗಳಮಲ ವಿದ್ಯುದಾಲಿಂಗನ.’ ಅದಕೇ ಕವಿ ಕುವೆಂಪು ಅವರು ಅಪರಿಮಿತ ಆತ್ಮವಿಶ್ವಾಸದಿಂದ ಕವಿತೆಯನ್ನು ಕೊನೆಗೊಳಿಸುತ್ತಾರೆ: ಎನಿತು ಹಿರಿದಾದರೂ ನಿನ್ನ ಪಂಡಿತತನಕೆ ನಿಲುಕೆನೈ ಪಾಂಡಿತ್ಯವು ಏನಿದ್ದರೂ ಚತುರ ಚಮತ್ಕಾರದ ತರ್ಕ-ವಾದ ಪ್ರಾವೀಣ್ಯ. ಅಲ್ಲಿ ಬುದ್ಧಿಯದೇ ಮೇಲುಗೈ. ಮತಿ ಅದರ ಇತಿಮಿತಿ. ಇಂಥ ರಸಾನಂದಕೆ ಭಾವೋತ್ಕರ್ಷ ಕಾರಣ. ಅದು ಕವಿಕರ್ಮದ ಕಾಣ್ಕೆ. ಅದಕೇ ಹೇಳುತ್ತಾರೆ: ‘ನಾನು ಆನಂದ-ಉನ್ಮಾದಿನಿ, ದಿವ್ಯಾನುಭೂತಿ ಸಂಭೂತ ರಸವಾಹಿನಿ!’ ಇದುವೇ ರಸಧ್ವನಿ. ರಸವನೀಂಟುವ ಮೀಟುವ ಮೀಟುಗೋಲಾಗಬೇಕು ವಿಮರ್ಶೆ. ಅದಕಾಗಿ ಕವಿಯ ಜೊತೆಗೇ ಸಾಗಬೇಕು; ಕವಿಯ ದಾರಿಯಲೇ ನಡೆಯಬೇಕು. ಕವಿಯೊಂದಿಗೆ ಕುಂತು ಮಾತಾಡಬೇಕು. ಅದು ಬಿಟ್ಟು ಕೇವಲ ಭವಿಯಾದರೆ ವಿಮರ್ಶೆಯು ಕೇವಲ ಕವಿ-ತೆಯಾಚೆಗಿನ ಹರಟೆಯಾದೀತೆಂಬ ಎಚ್ಚರಿಕೆ ಸಹ ಈ ಕವನದಲ್ಲಿದೆ. ಯಾವುದೇ ಕವಿತೆಯನ್ನು ವಿಮರ್ಶಿಸುವ ಮುನ್ನ ಅಂದರೆ ಅದನು ಅರ್ಥೈಸುವ ಮುನ್ನ, ವ್ಯಾಖ್ಯಾನಿಸುವ ಮುನ್ನ, ಹಲವು ಪಂಥ ಏನೆಂಥ ಸಿದ್ಧಾಂತಗಳನ್ನು ಅಳವಡಿಸಿ, ವಿಶ್ಲೇಷಿಸುವ ಮುನ್ನ ಈ ಭಾವಸತ್ಯವನ್ನರಿಯಬೇಕೆಂಬುದು ಕವಿತೆಯ ಸಾಧಾರಣೀಕರಣ. ಕವಿಯ ಭಾವಪ್ರಕಾಶವನ್ನೂ ಭಾವೋತ್ಕರ್ಷವನ್ನೂ ಅರಿಯದೇ ಕೇವಲ ಸಲ್ಲದ ಚಿಂತ-ನೆಯನ್ನು ಹೇರಿದರೆ ಅದು ಕವಿಗೂ ಕವಿತೆಗೂ ಮಾಡುವ ಅನ್ಯಾಯ. ಇದೆಲ್ಲವನ್ನು ಮನಗಂಡೇ ಕುವೆಂಪು ಅವರು ‘ದರ್ಶನ ವಿಮರ್ಶೆ’ ಎಂಬ ಹೊಸದಾದ ಹಾದಿಯನ್ನು ತೋರಿಸಿ ಕೊಟ್ಟರು. ಇದು ಕೇವಲ ಕನ್ನಡಕ್ಕೆ ಮಾತ್ರವಲ್ಲ, ಜಗತ್ತಿನ ಸಾಹಿತ್ಯಕ್ಕೆ ಕುವೆಂಪು ಅವರು ಕೊಟ್ಟ ಅಮೂಲ್ಯ ಕೊಡುಗೆಗಳಲ್ಲಿ ಮಹತ್ತಾದುದು.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *