(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನಗಳು ಉರುಳುತ್ತಿದ್ದವು. ವಾರುಣಿಯ ಹೊಸ ಫ್ರೆಂಡ್ ಬಕುಳ ತುಂಬಾ ಒಳ್ಳೆಯ ಹುಡುಗಿ. ಅವರೇನು ತುಂಬಾ ಶ್ರೀಮಂತರಲ್ಲ. ಅವಳ ತಂದೆ-ತಾಯಿ ಇಬ್ಬರೂ ಟೆಲಿಫೋನ್ ಎಕ್ಸ್ಚೇಂಜ್ನಲ್ಲಿದ್ದರು. ಆದರೆ ದೊಡ್ಡ ಸಂಸಾರ. ಅವಳ ತಂದೆಯ ತಂದೆ ಹೋಗಿಬಿಟ್ಟಿದ್ದರು. ತಾಯಿ ಇದ್ದರು. ಅವರ ತಂದೆ ನಿರಂಜನ್ ಅವರ ದೊಡ್ಡ ಅಕ್ಕ ಚಿಕ್ಕ ವಯಸ್ಸಿಗೇ ವಿಧವೆಯಾಗಿ ತವರು ಸೇರಿದ್ದಳು. ಅವಳು ಅವಳ ಮಗಳ ಜವಾಬ್ದಾರಿಯಿತ್ತು. ಬಕುಳಾ ಅಕ್ಕನ ಮದುವೆಯ ಸಾಲ ತೀರಿಸಬೇಕಿತ್ತು. ಬಕುಳಾಳ ಅಣ್ಣನನ್ನು ಬಿ.ಇ. ಓದಿಸಿದ್ದರು. ಅವನು ಅಮೇರಿಕಾಕ್ಕೆ ಹಾರಿದವನು ಹೆತ್ತವರ ಸಂಪರ್ಕ ಕಡೆದುಕೊಂಡಿದ್ದ. ಬಕುಳಾ ತಮ್ಮ ಹೈಸ್ಕೂಲ್ನಲ್ಲಿದ್ದ. ಅವಳು ಆದಷ್ಟು ಬೇಗ ಕೆಲಸಕ್ಕೆ ಸೇರಬೇಕೆನ್ನುತ್ತಿದ್ದಳು.
ಒಂದು ಭಾನುವಾರ ಬೆಳಿಗ್ಗೆ ಏಳುತ್ತಿದ್ದಂತೆ ನಾಗರಾಜ ಕಾಲ್ ಮಾಡಿದ.
“ಏನು ನಾಗರಾಜ? ಹನಿಮೂನ್ ಆಯ್ತಾ?”
“ಆಯಿತು. ನಾವು ಇವತ್ತು ಸಾಯಂಕಾಲ ನಿಮ್ಮ ಮನೆಗೆ ಬರೋಣ ಅಂತಿದ್ದೇವೆ. ಬರಬಹುದಾ?”
“ಆಂಟಿ ಪ್ರೋಗ್ರಾಂ ಗೊತ್ತಿಲ್ಲ. ತಿಳಿದುಕೊಂಡು ನಾನೇ ಫೋನ್ ಮಾಡ್ತೀನಿ.”
“ಆಗಲಿ ಆಂಟೀನ್ನ ಕೇಳಿ ಹೇಳು.”
ವರು ಚಂದ್ರಾ ಆಂಟಿಗೆ ವಿಷಯ ತಿಳಿಸಿದಳು.
“ಬರಲಿ ಬಿಡು. ಕಾಲ್ ಮಾಡಿಕೊಡು. ನಾನೇ ಮಾತಾಡ್ತೀನಿ.”
ವರು ಕಾಲ್ ಮಾಡಿದಳು.
“ಆಂಟಿ ಹೇಗಿದ್ದೀರಾ?”
“ನಾನು ಚೆನ್ನಾಗಿದ್ದೀನಿ. ಸಾಯಂಕಾಲ ಖಂಡಿತಾ ಬನ್ನಿ.”
“ಬರ್ತೀವಿ. ದಯವಿಟ್ಟು ನೀವು ಊಟ-ತಿಂಡಿ ಎನೂ ಅರೇಂಜ್ ಮಾಡಬೇಡಿ. ನಮಗೆ ಮದುವೆಯಾದಾಗಲಿಂದ ಎಲ್ಲರ ಮನೆಗೆ ಹೋಗಿ ತಿಂದು ಬೇಜಾರಾಗಿದೆ.”
“ಕಾಫಿ ಕೊಡ್ತೀನಿ ಬನ್ನಿ.”
“ಆಂಟಿ ನಾವು ಬಂದಾಗ ನಿಮ್ಮ ತಮ್ಮನವರನ್ನು ಭೇಟಿ ಮಾಡಬಹುದಾ?”
“ಇವತ್ತು ಭಾನುವಾರವಾಗಿರುವುದರಿಂದ ಸಾಯಂಕಾಲ ಮೆಸ್ಗೆ ರಜ. ನಾನು ಅವನಿಗೆ ಹೇಳ್ತೀನಿ. ನೀವು ಬನ್ನಿ.”
ಸುಮಾರು 5 ಗಂಟೆಯ ಹೊತ್ತಿಗೆ ನಾಗರಾಜ-ರೇಖಾ ಬಂದರು.
“ಬನ್ನಿ ಹೇಗಿದೆ ಲೈಫ್?” ಎನ್ನುತ್ತಾ ಚಂದ್ರಾವತಿ ಸ್ವಾಗತಿಸಿದರು.
“ಚೆನ್ನಾಗಿದೆ. ವರು ಇಲ್ವಾ?”
“ಇದಾಳೆ. ನಾಳೆ ಯಾವುದೋ ಪ್ರೆಸೆಂಟೇಷನ್ ಇದೆ. ಪ್ರಿಪೇರ್ ಆಗ್ತಿದ್ದಾಳೆ. ಬರ್ತಾಳೆ.”
ಅಷ್ಟರಲ್ಲಿ ವಾರುಣಿ ಅಲ್ಲಿಗೆ ಬಂದಳು.
“ವರೂ ಮೊದಲು ನಾನು ನಿನ್ನನ್ನು ಸಾರಿ ಕೇಳಬೇಕು. ನಮ್ಮಮ್ಮನ ಬುದ್ಧಿ ಗೊತ್ತಿರುವುದರಿಂದ ನೀನು ಬೇಜಾರುಮಾಡಿಕೊಂಡಿಲ್ಲಾಂತ ತಿಳಿದಿದ್ದೀನಿ.”
“ನೀನ್ಯಾಕೆ ಸಾರಿ ಕೇಳಬೇಕು? ನಟ್ಟು, ಶರು ಎಲ್ಲರೂ ಯೋಚಿಸಬೇಕಿತ್ತು ಅಲ್ವಾ?”
“ನಟ್ಟು ಅಮ್ಮ ಹಾಕಿದ ಗೆರೆ ದಾಟಲ್ಲ. ಆದರೆ ಶರು ಯಾಕೆ ಹೀಗಾದಳು ಅರ್ಥವಾಗ್ತಿಲ್ಲ.”
“ಅವಳಿಗೆ ಓದಕ್ಕೆ ಬೇಜಾರು. ಕೆಲಸಕ್ಕೆ ಸೇರಕ್ಕೆ ಇನ್ನೂ ಬೇಜಾರು. ಮದುವೆ ಆಗಕ್ಕೆ ತುದಿಗಾಲಿನಲ್ಲಿ ನಿಂತಿದ್ದಾಳೆ. ಅತ್ತೆ ಇವಳಿಗೆ ‘ನೀನೇ ನನ್ನ ಸೊಸೆ’ ಅಂದ ತಕ್ಷಣ ಖುಷಿಯಾಗಿಬಿಟ್ಟಿದ್ದಾಳೆ.”
“ಬೇಡ ಈ ಸಂಬಂಧ ಅಂದಿದ್ದಕ್ಕೆ ಸುಮ್ಮನಿದ್ದಾಳಾ?”
“ಅವಳು ಬೇಡಾಂತ ಅನ್ನುವ ಹಾಗೆ ಮಾಡಿದ್ದು ಚಂದ್ರಾ ಆಂಟಿ. ಆ ಕ್ರೆಡಿಟ್ ಇವರಿಗೆ ಹೋಗಬೇಕು.”
“ಆ ವಿಚಾರ ಬಿಡಿ. ನೀವು ಯಾಕೆ ನನ್ನ ತಮ್ಮನ್ನ ಭೇಟಿ ಮಾಡಲು ಬಯಸುತ್ತೀರ?”
“ನಮ್ಮ ತಂದೆ ಇವರಿಗೆ ಕೆಲಸ ಬಿಟ್ಟು ಬಿಸಿನೆಸ್ ಶುರು ಮಾಡು ಅಂತಿದ್ದಾರೆ. ನಮ್ಮ ಮುಂದೆ ಇರುವುದು ಎರಡು ಐಡಿಯಾಗಳು. ಒಂದು ದಿನಸಿ ಅಂಗಡಿ ಶುರು ಮಾಡುವುದು. ಎರಡನೇಯದು ಹೋಟೆಲ್ ಶುರು ಮಾಡೋದು.”
“ನನ್ನ ತಮ್ಮನ್ನ ಕೇಳಿ ಹೇಳ್ತಾನೆ. ಕಾಫಿ ಕೊಡಲಾ?”
“ನಿಮ್ಮ ತಮ್ಮ ಬಂದ ಮೇಲೆ ಕೊಡಿ.”
ಅಷ್ಟರಲ್ಲಿ ಕೃಷ್ಣ-ಅವರ ಹೆಂಡತಿ ಇಬ್ಬರೂ ಬಂದರು. ಕೃಷ್ಣ ಒಂದು ದೊಡ್ಡ ಪ್ಯಾಕೆಟ್ ಅಕ್ಕನ ಮುಂದಿಟ್ಟು ಹೇಳಿದ.
“ಅಕ್ಕ ಮೆಣಸಿನಕಾಯಿ ಬಜ್ಜಿ. ಬಿಸಿಬಿಸಿಯಾಗಿದೆ. ಎಲ್ಲರಿಗೂ ಕೊಡು.”
ವರು ಎಲ್ಲರಿಗೂ ಪ್ಲೇಟ್ ತಂದಳು. ಮೆಣಸಿನಕಾಯಿ ಬಜ್ಜಿ ಜೊತೆ ಕಾಲಾ ಜಾಮೂನ್ ಇಟ್ಟು ಕೊಟ್ಟಳು. ರೇಖಾ ತುಂಬಾ ಖುಷಿಯಿಂದ ತಿನ್ನುತ್ತಾ ಹೇಳಿದಳು. ನಮ್ಮನ್ನು ಮನೆಗೆ ಕರೆದರ್ಯಾರೂ ಇಂತಹ ತಿಂಡಿ ಕೊಟ್ಟಿರಲಿಲ್ಲ.”
ನಂತರ ಕಾಫಿ ಬಂತು.
ನಾಗರಾಜ ಕೃಷ್ಣನಿಗೆ ತಮ್ಮ ಆಲೋಚನೆಗಳನ್ನು ತಿಳಿಸಿದ.
“ಬಿಸಿನೆಸ್ ಮಾಡೋದು ಸುಲಭವಲ್ಲ. ಹೋಟೆಲ್ ಶುರು ಮಾಡಬೇಡಿ. ಅದರ ಬದಲು ಕ್ಯಾಟರಿಂಗ್ ಶುರುಮಾಡಿ.”
“ಅದರಿಂದ ಪ್ರಯೋಜನವಿದೆಯಾ?”
“ಇತ್ತೀಚೆಗೆ ಬಹಳ ಜನ ವಯಸ್ಸಾದವರು ಕ್ಯಾಟರಿಂಗ್ ಸರ್ವೀಸ್ ನಂಬಿಕೊಂಡಿದ್ದಾರೆ. ನೀವು ಇಷ್ಟು ಮಂದಿಗೆ ಊಟ ಕಳುಹಿಸೋದು ಅಂತ ಗೊತ್ತು ಮಾಡಿಕೊಂಡರೆ ವ್ಯವಸ್ಥಿತವಾಗಿ ಕೆಲಸ ಮಾಡಬೇಕು. ಮೊದಮೊದಲು ಕರಿದ ತಿಂಡಿಗಳ ಮಾರಾಟ ಇಟ್ಟುಕೊಳ್ಳಿ. ಕೊಂಚ ವ್ಯಾಪಾರ ಕುದುರಿದ ಮೇಲೆ ಸಣ್ಣ ಸಣ್ಣ ಫಂಕ್ಷನ್ಗಳಿಗೆ ಊಟ-ತಿಂಡಿ ಮಾಡಿಕೊಡಲು ಆರಂಭಿಸಬಹುದು.”
“ಇದು ವರ್ಕ್ಔಟ್ ಆಗುತ್ತದಾ?”
“ಇದೇ ವರ್ಕ್ಔಟ್ ಆಗೋದು. ನಿಮಗೆ ಇಷ್ಟೇ ಜನರಿಗೆ ಊಟ ಕಳಿಸಬೇಕೂಂತ ಗೊತ್ತಿರುತ್ತದೆ. ಆದ್ದರಿಂದ ನೀವು ಅಷ್ಟೇ ಅಡಿಗೆ ಮಾಡ್ತೀರ. ತುಂಬಾ ಜನರಿಗೆ ಕಳುಹಿಸಲು ಹೋಗಬೇಡಿ. ಆಮೇಲೆ ತುಂಬಾ ಕಷ್ಟವಾಗತ್ತೆ.”
“ನಾನು ನನ್ನ ತಮ್ಮ ಇಬ್ಬರೂ ನೋಡಿಕೊಳ್ತೇವೆ.”
“ನಾಗರಾಜ ನಾನು ಹೀಗಂತೀನೀಂತ ತಪ್ಪು ತಿಳಿಯಬೇಡ. ನಟ್ಟೂಗೆ ಅಷ್ಟು ಜವಾಬ್ದಾರಿಯಿಲ್ಲ. ಸರಿಯಾಗಿ ಜವಾಬ್ದಾರಿ ಅರಿತವರನ್ನು ಆ ಕೆಲಸಕ್ಕೆ ನೇಮಿಸಿಕೋ” ವರು ಹೇಳಿದಳು.
“ನೀವು ಯಾವ ಏರಿಯಾದಲ್ಲಿ ಶುರು ಮಾಡ್ತಿದ್ದೀರಾ?”
“ಜೆ.ಪಿ.ನಗರದಲ್ಲಿ ಅಲ್ಲಿ ನಮ್ಮದೊಂದು ಮನೆ ಇದೆ. ಕೆಳಗೆ ಮೇಲುಗಡೆ ದೊಡ್ಡ ಹಾಲ್ ಇದೆ.”
“ಏರಿಯಾ ಚೆನ್ನಾಗಿದೆ…..”
“ಸಧ್ಯಕ್ಕೆ ನಾವೆಲ್ಲಾ ಜೆ.ಪಿ.ನಗರಕ್ಕೆ ಶಿಫ್ಟ್ ಆಗುತ್ತೇವೆ. ವಿದ್ಯಾರಣ್ಯಪುರಂ ಮನೆ ರಿನೋವೇಟ್ ಮಾಡಿಸೋಣಾಂತ ಇದ್ದೇವೆ.”
“ಮುಂದುಗಡೆ ಅಂಗಡಿ ಇಡುವ ಹಾಗೆ ಮಾಡಿಸಿ. ನಟ್ಟೂಗೆ ಆ ಜವಾಬ್ದಾರಿ ವಹಿಸಿ. ಅತ್ತೆ ಇದ್ದಾಗ ಯಾರೂ ನಟ್ಟೂನ್ನ ಏಮಾರಿಸಲು ಸಾಧ್ಯವಿಲ್ಲ” ವರು ಹೇಳಿದಳು.
“ಗುಡ್ ಐಡಿಯಾ. ಆದರೆ ಅಮ್ಮ ಅಡಿಗೆ-ತಿಂಡೀಂತ ಒಳಗೆ ಉಳಿದರೆ ನಟ್ಟು ನಿಭಾಯಿಸ್ತಾನಾ?”
“ಅಡಿಗೆಯವರನ್ನು ಇಡೋಣ. ಇಲ್ಲ ನಮ್ಮ ಕ್ಯಾಟರಿಂಗ್ ಸೆಂಟರ್ನಿಂದ ಊಟ ತಿಂಡಿ ಬರುವಂತೆ ಮಾಡೋಣ” ಎಂದಳು ರೇಖಾ.
“ಒಂದು ಮಾತು ಹೇಳಲಾ?” ಕೃಷ್ಣ ಕೇಳಿದರು.
“ಹೇಳಿ.”
“ಅಡಿಗೆ ಮಾಡುವುದರಲ್ಲಿ ಅನುಭವ ಇರುವವರನ್ನು ಸೇರಿಸಿಕೊಳ್ಳಿ. ಅವರೇ ಅವರಿಗೆ ಸಹಾಯ ಮಾಡಲು ಅವರೇ ಕರೆ ತರ್ತಾರೆ. ಆದರೆ ಅವರ ಮೇಲೆ ಒಬ್ರು ಕಣ್ಣಿಟ್ಟಿರಲೇ ಬೇಕು. ಕ್ಯಾಟರಿಂಗ್ ಸೆಂಟರ್ ಆಗಿರೋದ್ರಿಂದ ಪಾತ್ರೆ ತೊಳೆಯಲು, ಗುಡಿಸಲು ಒರೆಸಲು ಜನಬೇಕು. ಸಾಮಾನ್ಯವಾಗಿ ಅಡಿಗೆಯವರು ಕೆಲಸದವರು ಒಂದಾಗಿ ಬಿಡ್ತಾರೆ. ಆದ್ದರಿಂದ ಬಹಳ ಕೇರ್ಫುಲ್ ಆಗಿರಬೇಕು.”
“ನೀವೇ ಯಾರಾದರೂ ಒಳ್ಳೆಯ ಅಡಿಗೆಯವರಿದ್ದರೆ ತಿಳಿಸಿ.”
“ಮೊದಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಿ. ಆಮೇಲೆ ನಾವು ಅಡಿಗೆಯವರನ್ನು ಸಜೆಸ್ಟ್ ಮಾಡ್ತೀವಿ.”
“ಎನೇನು ಸಿದ್ಧತೆ ಮಾಡಿಕೊಳ್ಳಬೇಕು ನೀವೇ ತಿಳಿಸಿ.”
“ಮುಂದಿನ ಭಾನುವಾರ ನಾನು ನಿಮ್ಮನೆಗೆ ಬಂದು ಅಡಿಗೆ ಮನೆ ಹೇಗಿರಬೇಕು? ನೀವು ಎಂತಹ ಪಾತ್ರೆಗಳನ್ನು ಕೊಳ್ಳಬೇಕು, ಊಟ ಕಳಿಸುವ ವ್ಯವಸ್ಥೆ ಹೇಗೆ ಮಾಡಬೇಕು ಎಲ್ಲಾ ಹೇಳಿಕೊಡ್ತೀನಿ.”
“ತುಂಬಾ ಥ್ಯಾಂಕ್ಸ್” ಎಂದ ನಾಗರಾಜ.
ಅಂದು ರಾತ್ರಿ ವರು ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದಳು.
“ನಂಗೆ ಒಂದು ತರಹ ಸಮಾಧಾನವಾಯತು. ನಟ್ಟು ಸೆಟ್ಲ್ ಆದರೆ ಅಕ್ಕ ಸಮಾಧಾನವಾಗಿರ್ತಾಳೆ. ರೇಖಾ ಒಳ್ಳೆಯ ಹುಡುಗಿ. ಅತ್ತೇನ್ನ ಚೆನ್ನಾಗಿ ನೋಡಿಕೊಳ್ತಾಳೆ. ಆದಷ್ಟು ಬೇಗ ಸುಮಿಗೊಂದು ಹುಡುಗ ಗೊತ್ತಾದರೆ ಸಾಕು ಕಣಮ್ಮ.”
“ಯೋಚಿಸಬೇಡಿ ಅಪ್ಪ. ನಾಗರಾಜಂಗೆ ತಾಯಿ, ತಂಗಿ, ತಮ್ಮನ ಬಗ್ಗೆ ಕಾಳಜಿಯಿದೆ. ಯಾವುದೋ ಮ್ಯಾಟಿಮೋನಿಯಲ್ನಲ್ಲಿ ಸುಮೀದು ರಿಜಿಸ್ಟರ್ ಮಾಡಿಸಿದ್ದಾನೆ.”
“ಒಳ್ಳೆಯದಾಯ್ತಮ್ಮ. ನಿನ್ನ ತಂಗೀನೂ ಆರಾಮವಾಗಿದ್ದಾಳೆ. ಒಂದೊಂದು ಸಲ ಇವಳು ನನ್ನ ಮಗಳಾಂತ ಆಶ್ಚರ್ಯವಾಗತ್ತೆ. ‘ನೀವಿಬ್ಬರೂ ಅಕ್ಕ-ತಂಗಿಯರಾದರೂ ನಿಮ್ಮ ಸ್ವಭಾವಗಳಲ್ಲಿ ಎಷ್ಟು ವ್ಯತ್ಯಾಸ?”
“ನಿಮ್ಮ ಅಣ್ಣ-ತಮ್ಮಂದಿರ ಸ್ವಭಾವಗಳೆಲ್ಲಾ ಒಂದೇ ತರಹವಿದೆಯಾ ಮಿ||ರಾವ್” ಗೊಗ್ಗರು ಧ್ವನಿಯಲ್ಲಿ ಕೇಳಿದಳು ವರು.
“ಯೂ ನಾಟಿ” ಎನ್ನುತ್ತಾ ರಾವ್ ನಗುತ್ತಾ ಕಾಲ್ ಕಟ್ ಮಾಡಿದರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44347
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

