ಬಂಧ ಕಳಚಿದ ಮೇಲೆ
ನನ್ನದೇ ಸರಿ ಎಂಬ ಹುಚ್ಚು
ನಿನ್ನ ಬಿಡಲಿಲ್ಲ
ಕೇಳಿಕೊಂಡು ಸುಮ್ಮನಾಗುವುದನ್ನು
ನಾನು ಅರಿಯಲಿಲ್ಲ
ನಮ್ಮೊಳಗಿನ ಹುಚ್ಚು
ನಮ್ಮಿಬ್ಬರಿಗೂ ಬಿಡಲಿಲ್ಲ
ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವುದು ಕಲಿಯಲಿಲ್ಲ
ಹುಚ್ಚು ಕುದುರೆಯಂತೆ
ಲಂಗು ಲಗಾಮಿಲ್ಲದೆ
ಓಡುವುದ ಬಿಡಲಿಲ್ಲ
ಜೊತೆಯಾಗಿ ಕುಳಿತು
ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿಲ್ಲ
ಅರ್ಥ ಮಾಡಿಕೊಂಡರೆ
ಎಲ್ಲವನ್ನು ಬಗೆಹರಿಸಬಹುದಿತ್ತಲ್ಲ
ಹೊಂದಾಣಿಕೆಯ ಮನಸ್ಥಿತಿ
ಯಾರಲ್ಲೂ ಇರಲಿಲ್ಲ
ನಾನೊಂದು ತೀರ
ನೀನೊಂದು ತೀರ
ಎಂದು ತೀರ್ಮಾನಿಸಿದ ಮೇಲೆ
ಯೋಚಿಸಿ ಫಲವಿಲ್ಲ
ಅಹಂನ ಬಿರುಗಾಳಿಗೆ ಸಿಕ್ಕ ಮೇಲೆ
ಬದುಕಿಗೆ ಉಳಿವಿಲ್ಲ
ಯೋಚಿಸಿ ನೋಡುವ ತಾಳ್ಮೆ
ಯಾರಲ್ಲೂ ಇರಲಿಲ್ಲ
ಅಳಿದುಳಿದ ಸಮಯ ಇದ್ದರೂ
ನಮ್ಮದಾಗಿರುವುದಿಲ್ಲ
ಕಳೆದುಕೊಳ್ಳುವುದು ಕಷ್ಟವಲ್ಲ ಪಡೆದುಕೊಳ್ಳುವುದು ಸುಲಭವಲ್ಲ
ಬಂಧ ಕಳಚಿದ ಮೇಲೆ
ಸಂಬಂಧಗಳಿಗೆ ಇಲ್ಲಿ
ಬೆಲೆಯು ಇಲ್ಲ ನೆಲೆಯೂ ಇಲ್ಲ
ನೆಮ್ಮದಿಯು ದೂರವಾಯಿತಲ್ಲ
-ನಾಗರಾಜ ಜಿ. ಎನ್. ಕುಮಟ, ಉತ್ತರ ಕನ್ನಡ.
ವಾಸ್ತವಿಕ ಬದುಕಿನ ಚಿತ್ರಣದ ಕವಿತೆ..ಚೆನ್ನಾಗಿ ದೆ ಸಾರ್
ಚೆನ್ನಾಗಿದೆ.
ಅಹಂನ ಬಿರುಗಾಳಿಗೆ ಸಿಕ್ಕ ಮೇಲೆ ಬದುಕಿಗೆ ಉಳಿವಿಲ್ಲ – ಎಷ್ಟು ಅರ್ಥಪೂರ್ಣ ಸಾಲುಗಳು!
ಚಿಂತನೆಗೆ ಹಚ್ಚುವ ಚಂದದ ಕವಿತೆ.
ಮಮ ಮತ್ತು ಅಹಂ ಎಂಬ ಪದಗಳಿಗೆ ಸಿಕ್ಕ ಬದುಕು ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ
ಚಂದದ ಕವನ
ಬಿರುಕುಬಿಟ್ಟ ವೈವಾಹಿಕ ಜೀವನವನ್ನು ಅನಾವರಣಗೊಳಿಸಿದ ಚಂದದ ಕವನ.
ಬದುಕಿನ ಸಹಜ ಸನ್ನಿವೇಶ ಕವನವಾಗಿದೆ. ವಾಸ್ತವದ ಕೈಗೆ ಕನ್ನಡಿಯ ಹಿಡಿದು ತೋರಿಸಿದಂತಿದೆ ಸಾಲುಗಳು. ಸರಳ ಯಾಚನೆ ಯೋಚನೆ ಇಲ್ಲಿದೆ. ಕವಿತೆಯ ಆಶಯ ಚೆನ್ನಾಗಿದೆ.