ಕಾದಂಬರಿ : ಕಾಲಗರ್ಭ – ಚರಣ 11
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮನಸ್ಸಿನಲ್ಲಿ ನಿರಾಸೆಯಾದರೂ ಹೊರಗೆ ತೋರ್ಪಡಿಸಿಕೊಳ್ಳದೆ ”ಹೋಗಲಿ ಬಿಡು ಮಹೀ, ಬೇಸರಮಾಡಿಕೊಳ್ಳಬೇಡ. ತೊಗೋ ಈ ಹಾಲು ಕುಡಿ. ಚೆನ್ನಾಗಿ ಮಲಗಿ ನಿದ್ರೆಮಾಡು. ಬೆಳಗ್ಗೆಯ ಹೊತ್ತಿಗೆ ಆರಾಮವಾಗುತ್ತದೆ. ಇಲ್ಲದಿದ್ದರೆ ನಿಮ್ಮ ಗೆಳೆಯ ಡಾ.ಚಂದ್ರಾರವರಿಗೆ ಫೋನ್ ಮಾಡಿ ಮನೆಗೇ ಕರೆಸಿದರಾಯಿತು. ಇಲ್ಲ ನಾವೇ ಒಂದ್ಹೆಜ್ಜೆ ಅವರ ಕ್ಲಿನಿಕ್‌ಗೆ ಹೋಗಿ ಬಂದರಾಯಿತು ” ಎಂದು ಸಮಾಧಾನ ಮಾಡಿ ಹಾಲಿನ ಲೋಟವನ್ನು ಕೈಯಲ್ಲಿ ಹಿಡಿದು ಅವನಿಗೆ ಸ್ವಲ್ಪ ಎದ್ದು ಕೂಡುವಂತೆ ಹೇಳಿದಳು ದೇವಿ.
ಒಲ್ಲದ ಮನಸ್ಸಿನಿಂದಲೇ ಮೇಲೆದ್ದ ಮಹೇಶ ಹಾಲಿನ ಲೋಟದ ಕಡೆ ನೋಡುತ್ತ ”ಅಬ್ಬಬ್ಬಾ ಇದಕ್ಕಿಂತ ದೊಡ್ಡ ಲೋಟ ನಿಮ್ಮ ಮನೆಯಲ್ಲಿ ಇಲ್ಲವಾ? ಇದು ನೋಡಲಿಕ್ಕೆ ಹಾಲು ಅಳತೆ ಮಾಡುವ ಲೀಟರ್‌ನಂತಿದೆ ಎಂದು ನಗುತ್ತಾ ಟಿಪಾಯಿ ಮೇಲಿದ್ದ ಇನ್ನೊಂದು ಲೋಟಕ್ಕೆ ಅರ್ಧ ಬಗ್ಗಿಸಿಕೊಂಡು ಕುಡಿದು ಮಿಕ್ಕದ್ದನ್ನು ನೀನು ಮುಗಿಸು. ವೆರಿಸಾರೀ ದೇವಿ ಈಗ ನಾನು ನಿದ್ರೆಮಾಡುತ್ತೇನೆ” ಎಂದು ಹಾಸಿಗೆಯ ಮೇಲೆ ಉರುಳಿಕೊಂಡ.
ಅವನು ತೆಗೆದುಕೊಂಡಿದ್ದ ಮಾತ್ರೆಯ ಪ್ರಭಾವಕ್ಕೋ, ಜ್ವರದ ತಾಪಕ್ಕೋ ಸ್ವಲ್ಪ ಹೊತ್ತಿನಲ್ಲೇ ನಿದ್ರೆಗೆ ಜಾರಿದ ಮಹೇಶ. ಅವನ ಕಾಲಬುಡದಲ್ಲಿದ್ದ ಬ್ಲಾಂಕೆಟ್ಟನ್ನು ಸರಿಯಾಗಿ ಹೊದಿಸಿ ಪಕ್ಕದಲ್ಲಿ ಮಲಗಲು ಇಚ್ಛೆಯಾಗದೆ ಕೆಳಗಿಳಿದಳು ಮಾದೇವಿ.
ಮಹೇಶ ಬಗ್ಗಿಸಿಟ್ಟಿದ್ದ ಹಾಲನ್ನೂ ಕುಡಿಯಲಾಗದೆ ಹಾಗೇ ಬಿಟ್ಟರೆ ಬೆಳಗ್ಗೆ ಹಿರಿಯರ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ ಎಂದು ಬಾತ್‌ರೂಮಿನ ಸಿಂಕಿನೊಳಕ್ಕೆ ಸುರಿದು ಲೋಟವನ್ನು ತೊಳೆದಿಟ್ಟಳು. ವಾರ್ಡ್‌ರೋಬಿನಲ್ಲಿ ಮೊದಲೇ ತೆಗೆದಿರಿಸಿದ್ದ ರಾತ್ರಿಯುಡುಗೆಯನ್ನು ಧರಿಸಿ ಅಲ್ಲಿದ್ದ ದಿವಾನಾದ ಮೇಲೆ ಮಲಗಿಕೊಂಡಳು ದೇವಿ. ಮಹೇಶನ ದೇಹಾಲಸ್ಯ ಅವಳಿಗೆ ಅಪಶಕುನದಂತೆ ಗೋಚರಿಸಿತು. ಚೀ..ನಾನೇಕೆ ಹಾಗೆ ಯೋಚಿಸುತ್ತಿದ್ದೇನೆ. ಅವನ ಬದಲು ನನಗೇ ಆಲಸ್ಯವಾಗಿದ್ದರೆ.. ಹೀಗೇ ಆಲೋಚಿಸುತ್ತಾಹೊರಳಾಡಿ ಹೊರಳಾಡಿ ಯಾವಾಗಲೋ ನಿದ್ರಾದೇವಿಗೆ ಶರಣಾದಳು.
ತಣ್ಣನೆಯ ಗಾಳಿ ಮುಖದ ಮೇಲೆ ಸುಳಿದಂತಾಗಲು ಎಚ್ಚರವಾಯ್ತು ದೇವಿಗೆ. ಕಣ್ಣುಬಿಟ್ಟಳು. ತಾನೆಲ್ಲಿ ಮಲಗಿದ್ದೇನೆಂಬ ಅರಿವಾಗುತ್ತಿದ್ದಂತೆ ಎದುರಿಗೆ ತೆರೆದಿದ್ದ ಕಿಟಕಿಯ ಕಡೆ ಕಣ್ಣು ಹಾಯಿಸಿದಳು. ಮುಂಜಾನೆ ಸೂರ್ಯನ ನಸುಗೆಂಪು ಬಣ್ಣ ಅಂಬರವನ್ನು ಸ್ವಲ್ಪಸ್ವಲ್ಪವೇ ಆವರಿಸುತ್ತಿರುವಂತೆ ಗೋಚರಿಸಿತು. ”ಓ..ತೀರಾ ತಡವೇನೂ ಆಗಿಲ್ಲ” ಎಂದುಕೊಂಡಳು. ರಾತ್ರಿ ನಡೆದ ಘಟನೆ ಕಣ್ಮುಂದೆ ನಿಂತಿತು. ಇನ್ನೂ ಹೊದಿಕೆಯೊಳಗೆ ಮಲಗಿದ್ದಾನೇನೊ ತನ್ನ ಪ್ರಾಣಕಾಂತಎಂದು ಅತ್ತ ಕಡೆಗೆ ನೋಡಿದಳು. ಮಹೇಶನು ಮಲಗಿದ್ದ ಜಾಗ ಖಾಲಿಯಾಗಿತ್ತು. ಹಾಗಾದರೆ ಎದ್ದು ಕೆಳಗೇನಾದರು ಹೊಗಿಬಿಟ್ಟರೇ? ರಾತ್ರಿ ರೂಮಿಗೆ ಕಳುಹಿಸುವಾಗ ಅಮ್ಮ ಬೇಗ ಎದ್ದು ಅಲ್ಲೆ ಬಾತ್‌ರೂಮಿನಲ್ಲಿ ಸ್ನಾನ ಮುಗಿಸಿಕೊಂಡು ಬಾ. ಮಡಿಬಟ್ಟೆಗಳನ್ನು ವಾರ್ಡ್‌ರೋಬಿನಲ್ಲಿರಿಸಿದ್ದೇನೆ.ಎಂದು ಕಿವಿಯಲ್ಲಿ ಪಿಸುಗುಟ್ಟಿದ್ದರು. ಆದರೆ ಇವರು ಮೊದಲೇ..ಲಗುಬಗೆಯಿಂದ ಮಲಗಿದ್ದಲ್ಲಿಂದ ಇಳಿಯುತ್ತಿರುವಾಗಲೇ ”ಹಲೋ ಗುಡ್ ಮಾರ್ನಿಂಗ್” ಎಂಬ ಧ್ವನಿ ಅವಳನ್ನು ಅತ್ತ ತಿರುಗುವಂತೆ ಮಾಡಿತು. ಅಲ್ಲಿ ಕಂಡ ದೃಶ್ಯ,,ಬಾತ್‌ರೂಮಿನಿಂದ ತಲೆ ಒರೆಸಿಕೊಳ್ಳುತ್ತಾ ಬರುತ್ತಿದ್ದ ಮಹೇಶ.
”ಮಹೀ ನಿಮಗೆ ಬುದ್ಧಿ ಇದೆಯಾ? ರಾತ್ರಿಯೆಲ್ಲ ಜ್ವರದ ತಾಪದಿಂದ ನರಳುತ್ತಿದ್ದಿರಿ. ಜ್ವರ ಪೂರ್ತಿ ಬಿಟ್ಟಿದೆಯೋ ಇಲ್ಲವೋ, ಅಂತಹುದರಲ್ಲಿ ಸ್ನಾನ ಮಾಡಿದ್ದೀರಿ ಏನಾದರು ಹೆಚ್ಚುಕಡಿಮೆಯಾದರೆ ಏನು ಗತಿ?” ಎಂದು ಗಾಭರಿಯಿಂದ ಪ್ರಶ್ನಿಸಿದಳು ದೇವಿ.
”ದೇವೀ ..ಕೂಲ್..ಕೂಲ್..ಹೆದರಬೇಡ. ನಮ್ಮಮ್ಮ ಸ್ನಾನಮಾಡದೆ ರೂಮಿನಿಂದ ಹೊರಗೆ ಬರಬಾರದೆಂದು ಆಜ್ಞೆಮಾಡಿದ್ದರು. ಅದಕ್ಕೇ ಲೈಟಾಗಿ ಸ್ನಾನ. ಹೆಚ್ಚು ಹೊತ್ತು ಮಾಡ್ಲಿಲ್ಲ. ಸುಮ್ಮನೆ ನೀರು ಸುರಿದುಕೊಂಡು ಬಂದೆ. ನಡೆ ನೀನೂ ಸ್ನಾನ ಮುಗಿಸಿ ಬಾ. ಒಟ್ಟಿಗೆ ಕೆಳಗೆ ಹೋಗೋಣ ”ಎಂದು ಮಂಚದ ಪಕ್ಕದಿಂದ ಒಂದು ಕವರನ್ನು ಕೈಗೆತ್ತಿಕೊಂಡ. ಮಹೇಶ.
”ಓಹೋ ರಾತ್ರಿ ನನಗೆ ನನ್ನಮ್ಮ ಹೇಳಿದಂತೆ ಅವರಿಗೂ ಹೇಳಿರಬೇಕು. ಮಡಿ ಬಟ್ಟೆಬರೆ ಕಳುಹಿಸಿರಬೇಕು. ಇದನ್ನು ನಾನು ಗಮನಿಸಿಯೇ ಇಲ್ಲ. ಹೇಗೆ ಸಾಧ್ಯವಿತ್ತು? ಊಹೆಗೂ ನಿಲುಕದಂತೆ ಒದಗಿದ ಸನ್ನಿವೇಶ” ಎಂದುಕೊಂಡು ಹಾಸಿಗೆಯನ್ನು ಸರಿಪಡಿಸಿ, ಹೊದಿಕೆಗಳನ್ನು ಮಡಿಸಿಟ್ಟು ಮಡಿಬಟ್ಟೆಯನ್ನು ತೆಗೆದುಕೊಂಡು ಬಾತ್‌ರೂಮಿಗೆ ಹೋದಳು ದೇವಿ.
ಅದನ್ನು ಓರೆಗಣ್ಣಿಂದಲೇ ಗಮನಿಸಿದ ಮಹೇಶ ”ಪಾಪ ಅವಳು ಎಷ್ಟೊಂದು ಕನಸುಗಳನ್ನು ಕಟ್ಟಿಕೊಂಡು ಬಂದಿದ್ದಳೋ, ಮೇಲ್ನೋಟಕ್ಕೆ ಅವಳಿಗಾದ ನಿರಾಸೆಯನ್ನು ತೋರಿಸಿಕೊಳ್ಳದಂತೆ ನನಗೇ ಸಮಾಧಾನ ಹೇಳಿದಳು. ಆದರೆ ಅವಳು ಜ್ವರದ ತಾಪದಿಂದ ಬಳಲುತ್ತಿದ್ದವನಿಗೆ ತೊಂದರೆಯಾಗಬಾರದೆಂದೋ ಅಥವಾ ಈ ಹಾಸಿಗೆಯ ಸಹವಾಸವೇ ಬೇಡವೆಂದೋ ದೀವಾನದ ಮೇಲೆ ಮಲಗಲು ಆಯ್ದುಕೊಂಡಳು. ನನಗೆ ಅದು ಗೊತ್ತಾಗಲೇ ಇಲ್ಲ. ಇರಲಿಬಿಡು ಜೀವನ ಪರ್ಯಂತ ಒಟ್ಟಿಗಿರಗಬೇಕೆಂದು ನಾವೇ ಆಯ್ಕೆ ಮಾಡಿಕೊಂಡಿದ್ದೇವೆ. ಒಂದುದಿನ ಏನು ಮಹಾ. ಆದರೆ ಗುರುಗಳು ಸೂಚಿಸಿದ್ದ ಮುಹೂರ್ತ. ನನ್ನಮ್ಮನ ಕಿವಿಗೇನಾದರೂ ಇದು ಬಿದ್ದರೆ ಇಲ್ಲದ ಲೆಕ್ಕಾಚಾರ ಹಾಕುತ್ತಾರೆ. ದೇವಿಗೆ ಮೊದಲೇ ಹೇಳಬೇಕು” ಎಂದುಕೊಳ್ಳುವಷ್ಟರಲ್ಲಿ ಅವಳೇ ಸ್ನಾನ ಮುಗಿಸಿ ತಲೆಗೊಂದು ಟವೆಲ್ ಬಿಗಿದುಕೊಂಡು ಹೊರಬಂದಳು.
”ಇಲ್ಲಿ ಬಾ ದೇವಿ ನಿನಗೇನೋ ಹೇಳಬೇಕು” ಎಂದು ಕರೆದನು ಮಹೇಶ.
”ಏನು ಮಹೀ, ಅಲ್ಲಿಂದಲೇ ಹೇಳಿ”ಎಂದಳು ದೇವಿ ಬಿಗುಮಾನದಿಂದ.
”ಓ ..ನಿನಗೆ ನನ್ನ ಮೇಲೆ ಕೋಪ ಬಂದಿರಬೇಕಲ್ಲಾ, ಸಾರೀ..ಸಾರೀ..ನೆನ್ನೆ ನನಗೆ ಬಂದಿದ್ದ ಜ್ವರದಿಂದ ನಿನ್ನೊಡನೆ ಕುಳಿತು ಮಾತನಾಡಲೂ ಆಗಲಿಲ್ಲ ಮತ್ತು ನಿನ್ನ ಸನಿಹಕ್ಕೂ ಬರಲಾಗಲಿಲ್ಲ” ಎಂದ ಮಹೇಶ.
”ಅದೆಲ್ಲ ಏನೂ ಇಲ್ಲ ಮಹೀ, ಅದನ್ಯಾಕೆ ಪದೇಪದೇ ನೆನಪಿಸಿಕೊಳ್ಳುತ್ತೀರಿ. ಈಗೇನು ಹೇಳಬೇಕೆಂದಿದ್ದೀರೊ ಹೇಳಿ” ಎಂದಳು.
”ಏನಿಲ್ಲ ಅದು..ಅದೂ. ನನಗೆ ಜ್ವರ ಬಂದು ಮಲಗಿಬಿಟ್ಟಿದ್ದೆ ಎಂದು ಹೊರಗಡೆ ಎಲ್ಲೂ ಯಾರ ಮುಂದೆಯೂ ಬಾಯಿಬಿಡಬೇಡ ಪ್ಲೀಸ್. ಯಾರು ಏನೆಂದುಕೊಳ್ಳುತ್ತಾರೋ ತಿಳಿಯದು. ಆದರೆ ನಮ್ಮಮ್ಮ ಇಲ್ಲದ ಲೆಕ್ಕಾಚಾರ ಹಾಕುತ್ತಾರೆ ” ಎಂದು ಅವಳ ಬಳಿಗೆ ಬಂದು ಭುಜದಮೇಲೆ ಕೈಯಿಟ್ಟು ಕೇಳಿಕೊಂಡ ಮಹೇಶ.
ಹಾಗೇ ತನ್ನತ್ತ ತಿರುಗಿಸಿಕೊಂಡು ರಮಿಸುತ್ತಾನೆಂದು ಕಣ್ಮುಚ್ಚಿ ಏನೇನೋ ಕನಸುಕಾಣುತ್ತಿದ್ದಳು ದೇವಿ. ಊಹುಂ, ಹಿಡಿದಿದ್ದ ಭುಜವನ್ನು ಅವನ ಕೈ ಬಿಟ್ಟಂತಾಯಿತು. ಹಾಗೇ ”ದೇವಿ ಏನು ಯೋಚಿಸುತ್ತಿದ್ದೀಯೆ? ನಡೆ ಕೆಳಗೆ ಹೋಗೋಣ. ದೇವರಿಗೊಂದು ನಮಸ್ಕಾರ ಮಾಡಿ ನನಗೊಂದಿಷ್ಟು ಗಂಜಿಯನ್ನೋ ಕಷಾಯವನ್ನೋ ಮಾಡಿಕೊಡುವೆಯಂತೆ. ಆಮೇಲೆ ನಾನು ಗೆಳೆಯನ ಕ್ಲಿನಿಕ್ಕಿಗೆ ಹೋಗಿಬರುತ್ತೇನೆ. ಹೇಗೊ ಮ್ಯಾನೇಜ್ ಮಾಡುತ್ತೇನೆ, ನೀನೂ ಹಾಗೇ ಮಾಡು” ಎಂದು ಹೇಳಿ ಅವಳಿಗಿಂತ ಮುಂದಾಗಿ ತಾನೇ ರೂಮಿನಿಂದ ಹೊರನಡೆದ ಮಹೇಶ.
”ಒಳ್ಳೆ ಅರಸಿಕ ಶಿಖಾಮಣಿ ಇದ್ದಹಾಗೆ ಇದ್ದಾರೆ, ಅಮ್ಮನ ಮಗ ” ಎಂದುಕೊಂಡು ಅವನನ್ನು ಹಿಂಬಾಲಿಸಿದಳು ದೇವಿ.
ಕೆಳಗಡೆ ಆಗಲೇ ಎಲ್ಲರದ್ದೂ ಸ್ನಾನವಾದಂತಿತ್ತು. ತಾತನವರ ಪೂಜೆ ಇನ್ನೂ ನಡೆಯುತ್ತಿದೆ ಎನ್ನುವುದಕ್ಕೆ ಪೂಜಾರೂಮಿನಿಂದ ಕೇಳಿಬರುತ್ತಿದ್ದ ಶ್ಲೋಕವೇ ಸಾಕ್ಷಿಯಾಗಿತ್ತು. ”ಮಹೀ ನಮ್ಮ ತಾತನವರು ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದ್ದಾರೆ” ಎಂದು ತುಂಟತನದಿಂದ ಪಿಸುಗುಟ್ಟಿದಳು.
”ಷ್..ಪೂಜಾ ಸಮಯದಲ್ಲಿ ಹಾಗೆಲ್ಲ ಹಗುರವಾಗಿ ಮಾತನಾಡಬಾರದು ದೇವಿ” ಎಂದು ಪಿಸುದನಿಯಲ್ಲೇ ಉತ್ತರಿಸಿ ಆಕೆಯನ್ನು ಎಚ್ಚರಿಸಿದ ಮಹೇಶ.
ಅವನ ನುಡಿಗಳನ್ನು ಕೇಳಿದ ದೇವಿ ”ಓ.! ಈ ನನ್ನ ಮನದನ್ನನನ್ನು ಅರ್ಥಮಾಡಿಕೊಳ್ಳುವುದು ಸಾಕಷ್ಟಿದೆ. ಗೆಳೆಯರಾಗಿದ್ದಾಗ ನಾವು ಮಾತನಾಡುತ್ತಿದ್ದ ವಿಚಾರಗಳು ಸಾಮಾನ್ಯವಾಗಿ ಓದಿನ ಬಗ್ಗೆ, ಅಲ್ಲಿನ ಪರಿಸರ, ಸ್ನೇಹಿತರ ಒಡನಾಟ, ನಂತರ ಇಲ್ಲಿಗೆ ಬಂದು ನೆಲೆಸಿದಾಗ ಕೃಷಿಗೆ ಸಂಬಂಧಿಸಿದ ಸಂಗತಿಗಳು. ಇಬ್ಬರೂ ಸಾಹಿತ್ಯ ಪ್ರೇಮಿಗಳಾದ್ದರಿಂದ ಪುಸ್ತಕಗಳ ಓದು ಚರ್ಚೆ, ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಮನೆ ವಿಚಾರಗಳು ಅಷ್ಟೇ, ನಮ್ಮ ಮನೆಗಳಲ್ಲಿ ವಧೂ ವರರ ಹುಡುಕಾಟ ನಡೆಯುತ್ತಿದ್ದಾಗಲೂ ಅವುಗಳ ಬಗ್ಗೆ ಚರ್ಚಿಸುತ್ತಿರಲಿಲ್ಲ. ವಿವಾಹದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿದ್ದವರು ಮನೆಯ ಹಿರಿಯರುಗಳು. ನಾವಿಬ್ಬರೂ ಚೆನ್ನಾಗಿದ್ದೇವೆ ಜೋಡಿ ಏಕಾಗುವುದಿಲ್ಲ ಎನ್ನುವ ಬಗ್ಗೆ ಪೇಚಾಡಿಕೊಂಡಿದ್ದೂ ಇಲ್ಲ. ಕೊನೆಗೆ ಹಿರಿಯರೇ ವಿಷಯವನ್ನು ಪ್ರಸ್ತಾಪಿಸಿ ನಮ್ಮನ್ನು ಅಭಿಪ್ರಾಯ ಕೇಳಿದಾಗಲೇ ಒಪ್ಪಿಗೆ ಸೂಚಿಸಿದ್ದೆವು. ನನಗಂತೂ ಬಯಸಿದ ಬಳ್ಳಿ ಕಾಲಿಗೆ ಸುತ್ತಿಕೊಂಡಂತಾಯಿತು. ಆನಂತರವೂ ನಮ್ಮಿಬ್ಬರಲ್ಲಿ ಭಾವೀ ಭವಿಷ್ಯದ ಬಗ್ಗೆ ಚಿಂತನ ಮಂಥನಗಳೇನೂ ನಡೆಯಲೇ ಇಲ್ಲ. ಮದುವೆಯ ನಿಶ್ಚಿತಾರ್ಥದ ನಂತರದ ದಿನಗಳಲ್ಲಿ ಸ್ವಲ್ಪ ಬಿಗುವಿನ ವಾತಾವರಣ, ಹಿರಿಯರ ನಿರ್ಬಂಧ ಮತ್ತು ಕಾರ್ಯಬಾಹುಳ್ಯದಿಂದ. ಫೋನಿನಲ್ಲಿಯೂ ಮಾತುಕತೆಗಳು ಔಪಚಾರಿಕವಾಗಿ ಮಾತ್ರ. ಇನ್ನು ಆಚಾರ ವಿಚಾರಗಳು ನಮ್ಮ ಮನೆಯಂತೆಯೇ ಅವರಲ್ಲಿಯೂ. ನಾನೇ ನೋಡಿದ್ದೆ. ಆದರೆ ಮಹೇಶನ ತಾಯಿ ಸ್ವಲ್ಪ ಆತಂಕ ಸ್ವಭಾವದವರು ಎಂದು ಗೊತ್ತಿತ್ತು. ಈಗ ಈ ಮಹಾರಾಯ !
”ಏ..ದೇವೀ, ಎಲ್ಲಿದ್ದೀಯೆ? ಅತ್ತೆ ಕರೆದ ಹಾಗಿತ್ತು” ಎಂದಾಗ ತನ್ನ ಆಲೋಚನೆಯಿಂದ ಹೊರಗೆ ಬಂದಳು. ”ಸಾರೀ, ಕೇಳಿಸಲಿಲ್ಲ ಮಹೀ” ಎಂದು ಅಡುಗೆ ಮನೆಯತ್ತ ನಡೆದಳು. ಅವಳತ್ತಲೇ ನೋಡುತ್ತಾ ಒಳ್ಳೆ ಭಾವನಾಲೋಕದಲ್ಲಿ ವಿಹರಿಸುವ ಹುಡುಗಿ ಎಂದು ನಕ್ಕ ಮಹೇಶ. ಅಷ್ಟರಲ್ಲಿ ಪೂಜೆ ಮುಗಿಸಿ ಹೊರಬಂದರು ನೀಲಕಂಠಪ್ಪನವರು. ಮಹೇಶನನ್ನು ನೋಡಿದರು. ”ಶುಭೋದಯ ಮಹೇಶಪ್ಪ. ನಮ್ಮ ಕೂಸೆಲ್ಲಿ? ಹೋಗಿ ಪೂಜೆ ಮಾಡಿಕೊಳ್ಳಿ. ಒಟ್ಟಿಗೆ ತಿಂಡಿ ತಿನ್ನೋಣ” ಎಂದರು.
‘ಇದೇನು? ನನಗೆ ಬಹುವಚನ ಪ್ರಯೋಗವೇನೂ ಬೇಡಿ. ಮೊದಲು ಹೇಗೆ ಕರೆಯುತ್ತಿದ್ದಿರೋ ಹಾಗೆ ಕರೆಯಿರಿ ‘ಎಂದ ಮಹೇಶ.
‘ಅಲ್ಲಪ್ಪಾ ಅದ್ಹೇಗೆ ಆಗುತ್ತೆ, ನೀನೀಗ ಈ ಮನೆಯ ಅಳಿಯನಲ್ಲವಾ ಗೌರವ ಕೊಡಬೇಕು’ ಎಂದು ಹೇಳುತ್ತಾ ಅಲ್ಲಿಗೆ ಬಂದ ತಾಯಿ ಗೌರಮ್ಮನವರನ್ನು ನೋಡಿದ ಮಹೇಶ.
‘ಓಹೋ ! ನೀವಾಗಲೇ ಹಾಜರಾತಿ ಹಾಕಿದ್ದೀರಿ, ಅಪ್ಪ ಎಲ್ಲಿ?’ ಎಂದು ಕೇಳಿದ.
‘ಅವರು ಪೂಜೆ ಮುಗಿಸಿ ಬರ್‍ತಾರೆ. ಇವತ್ತು ನಮಗೆಲ್ಲ ಇಲ್ಲೇ ತಿಂಡಿ’ ಎಂದು ಹೇಳುತ್ತಾ ಒಳನಡೆದರು ಗೌರಮ್ಮ.
‘ಹೂ..ಇವರುಗಳ ಸರಬರ ಓಡಾಟ ಇನ್ನೂ ಮುಗಿದ ಹಾಗೇ ಕಾಣಿಸುತ್ತಿಲ್ಲ. ನಮ್ಮ ಅಮ್ಮನ ಕಣ್ಣು ತಪ್ಪಿಸಿ ಹೇಗೆ ಕಷಾಯ ಮಾಡಿಕೊಂಡು ತರುತ್ತಾಳೋ ದೇವಿ’ ಎಂದುಕೊಂಡು ಪೂಜಾಕೋಣೆಗೆ ಹೋದ ಮಹೇಶ.
ಒಳಗಿದ್ದ ದೇವಿಗೆ ಅತ್ತೆ ಗೌರಮ್ಮನವರ ಧ್ವನಿ ಕೇಳಿತ್ತು. ಲಗುಬಗೆಯಿಂದ ತಾನು ತಯಾರಿಸುತ್ತಿದ್ದ ಕಷಾಯವನ್ನು ಒಂದು ಲೋಟಕ್ಕೆ ಬಗ್ಗಿಸಿ ಅಲ್ಲಿಯೇ ಗೂಡೊಂದರಲ್ಲಿ ಮುಚ್ಚಿಟ್ಟು ತಾನೂ ಪೂಜೆ ಮುಗಿಸಿ ಬರುತ್ತೇನೆಂದು ನೆಪವೊಡ್ಡಿ ಹೊರಬಂದಳು.
”ಮದುವೆ ಮುಗಿದು ಎಂಟು ದಿವಸಗಳಾದರೂ ತಿಂಡಿಯ ಸಂತರ್ಪಣೆ ಮುಗಿಯಲಿಲ್ಲವೇ?” ಎಂದು ಅಜ್ಜಿಯನ್ನು ಕೇಳಿದಾಗ ”ಹೂ ಪುಟ್ಟೀ ಬರುವ, ಹೋಗುವ ನೆಂಟರಿಗೆಲ್ಲಿ ಈ ಗಂಜಿ,ಕಷಾಯಗಳು ಹಿಡಿಸುತ್ತವೋ ಇಲ್ಲವೋ. ಮೇಲಾಗಿ ದಾರಿಗೆ ಒಯ್ಯುವ ಬುತ್ತಿ ಬೇರೆ ಇರುತ್ತೆ. ತಿಂಡಿಯ ಜೊತೆಗೆ ಸ್ವಲ್ಪ ಬುತ್ತಿಕಾರದ ಕಲಸನ್ನ ಮತ್ತು ಒಗ್ಗರಣೆ ಹಾಕಿದ ಮೊಸರನ್ನ ಕಟ್ಟಿಕೊಟ್ಟರೆ ಒಳ್ಳೆಯದಲ್ಲವಾ? ಇವೆಲ್ಲ ಒಂದು ಹದಕ್ಕೆ ಬರುವವರೆಗೆ ಹೀಗೇ” ಎಂದು ಹೇಳಿದ್ದರು. ಹೀಗಾಗಿ ಅವತ್ತಿನ ತಿಂಡಿ ಇಡ್ಲಿ, ಚಟ್ನಿ, ಸಾಗು, ಕಾಫಿ ಅಥವಾ ಟೀ. ಸೇರಿದ್ದು ತಿನ್ನುವವರಿಗೆ ಕೊಡುವ, ಹೋಗುವವರಿಗೆ ಕಟ್ಟಕೊಡುವ ಕೆಲಸ ನಡೆದಿತ್ತು.
ಪೂಜಾ ಕೋಣೆಯನ್ನು ಹೊಕ್ಕ ಮಹೇಶನಿಗೆ ಅಲ್ಲಿನ ತಯಾರಿ ಅಚ್ಚುಕಟ್ಟುತನ ನೋಡಿ ಮನಸ್ಸು ಮುದಗೊಂಡಿತು. ಆಗ ತಾನೇ ಪೂಜೆ ಮುಗಿಸಿ ಹೋಗಿದ್ದರು ಯಜಮಾನರು. ಎಲ್ಲಿಯೂ ಚೆಲ್ಲಿದ ನೀರಾಗಲಿ, ಹರಡಿದ ವಸ್ತ್ರವಾಗಲೀ, ಅಸ್ತವ್ಯಸ್ತವಾದ ಯಾವುದೇ ವಸ್ತುವಾಗಲೀ ಕಾಣಲಿಲ್ಲ. ಕ್ರಮಬದ್ಧವಾಗಿತ್ತು. ಎಷ್ಟೋ ವರ್ಷಗಳ ಒಡನಾಟವಿದ್ದರೂ ಸೂಕ್ಷ್ಮವಾದ ಅವಲೋಕನ ಮಾಡದೆ ಇದ್ದದ್ದು ಗಮನಕ್ಕೆ ಬಂದಿತು.
”ಏನು ಮಾಡುತ್ತಿದ್ದೀರಿ ಮಹೀ? ಪೂಜೆ ಆಯಿತೇ? ನಿಮ್ಮ ಮನೆಯಲ್ಲಿದ್ದ ಹಾಗೇ ನಮ್ಮ ಮನೆಯಲ್ಲು ಹೆಚ್ಚಿನ ದೇವರ ಪಟಗಳಾಗಲಿ, ವಿಪರೀತವಾದ ವ್ಯಭವೋಪೇತ ಪ್ರದರ್ಶನಗಳಿಲ್ಲ. ಪೂಜಾ ಸಮಯದ ಬಗ್ಗೆ ಹೇಳುವುದಾದರೆ ನಮ್ಮ ತಾತ ಮತ್ತು ನಾನು ಸ್ವಲ್ಪ ಹೆಚ್ಚು ತೆಗೆದುಕೊಳ್ಳುತ್ತೇವೆ. ಮಿಕ್ಕವರೆಲ್ಲ ಅಷ್ಟಿಲ್ಲ. ಆದರೂ ಸ್ನಾನ, ಪೂಜಾಪಾಠ ಇತ್ಯಾದಿಗಳು ಕ್ರಮಬದ್ಧವಾಗಿವೆ. ನಿಮ್ಮದು ಹೇಗೆ?” ಎಂದು ಕೇಳಿದಳು ಮಾದೇವಿ.
”ಹೂ..ನಮ್ಮ ಮನೆಯಲ್ಲೂ ಅಮ್ಮ ಸ್ವಲ್ಪ ಹೆಚ್ಚು. ಅಪ್ಪ ಇತ್ತೀಚೆಗೆ ಜಾಸ್ತಿ ಟೈಂ ತೊಗೋತಾರೆ. ನಾನು ತೀರಾ ಜಾಸ್ತಿ ಅಲ್ಲದಿದ್ದರೂ ನಂಬಿಕೆಯಿದೆ ಮಾಡುತ್ತೇನೆ” ಎಂದ ಮಹೇಶ.
”ಸರಿ ಮಗಿಸಿ ಹೊರಗೋಗೋಣ ಬನ್ನಿ” ಎಂದು ಅಂದಿನ ಉಪಾಹಾರದ ಬಗ್ಗೆ ಚುಟುಕಾಗಿ ಹೇಳಿ ಅನುಮಾನ ಬಾರದಂತೆ ನಿಭಾಯಿಸಲು ಎಚ್ಚರಿಸಿದಳು.
ಅಂತೂ ಒಬ್ಬರಾದ ನಂತರ ಒಬ್ಬರು ಪೂಜೆ ಮುಗಿಸಿದರು. ಹೊರಬಂದವರನ್ನು ನೋಡಿದ ನೀಲಕಂಠಪ್ಪ ”ಏನು ಕೂಸೇ ಇವತ್ತು ಶಿವಪ್ಪನ ಪೂಜೆಯಲ್ಲಿ ಮಂತ್ರ, ಶ್ಲೋಕ, ವಚನ ಯಾವುದೂ ಇಲ್ಲದಂತೆ ಮೂಕಪೂಜೆ ಮಾಡಿದಂತಿತ್ತು” ಎಂದು ಚುಡಾಯಿಸಿದರು.
”ಹೂ ತಾತಾ ಇವತ್ತು ಹಾಗೆಯೇ, ನಾಳೆಯಿಂದ ಎಲ್ಲವೂ ಸರಿಹೋಗುತ್ತೆ. ಬನ್ನಿ ತಿಂಡಿಗೆ” ಎಂದು ಮಾತು ಮರೆಸುತ್ತ ಒಳ ನಡೆದಳು. ಮೊದಲೇ ಸೂಚನೆ ಕೊಟ್ಟಿದ್ದರಿಂದ ಅವಳಿತ್ತ ಇಡ್ಲಿ ಚಟ್ನಿ, ಸಾಗು ಎಷ್ಟು ಸೇರುತ್ತೋ ಅಷ್ಟು ಸೇರಿಸಿ ”ನನಗೆ ಸ್ವಲ್ಪ ಕಷಾಯ ಕೊಡು ಗಂಟಲಲ್ಲಿ ಸ್ವಲ್ಪ ತೊಂದರೆ” ಎಂದು ತಾನಾಗಿಯೇ ತರಿಸಿಕೊಂಡು ಕುಡಿದು ಜಾಗ ಖಾಲಿ ಮಾಡಿದ ಮಹೇಶ.
ಸ್ವಲ್ಪ ಹೊತ್ತು ಅದೂ ಇದೂ ಮಾತನಾಡುತ್ತಾ ಮಹಡಿ ಮೇಲಕ್ಕೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಂದ. ಇನ್ನೇನು ಚಪ್ಪಲಿ ಮೆಟ್ಟಿ ಹೊರಗೆ ಹೋಗಬೇಕೆನ್ನುವಷ್ಟರಲ್ಲಿ ಗೌರಮ್ಮನವರ ದೃಷ್ಟಿ ಅವನ ಮೇಲೆ ಬಿತ್ತು. ”ಅರೇ ಮಹೇಶ ಎಲ್ಲಿಗೆ ಹೊರಟೆ? ಹಸಿಮೈಯಲ್ಲಿ ಇನ್ನೊಂದೆರಡು ದಿವಸ ಹೊರಗೆಲ್ಲೂ ಅಡ್ಡಾಡಬೇಡ” ಎಂದರು.
”ಇಲ್ಲೇ ಸ್ವಲ್ಪ ಕೆಲಸವಿತ್ತು. ಹತ್ತಿರದಲ್ಲೇ ಹೋಗಿ ಬರುತ್ತೇನಮ್ಮ” ಎಂದ ಮಹೇಶ.
”ಊಹುಂ ಕೂಡದು, ಗೌರಕ್ಕ ಹೇಳಿದ್ದು ಕೇಳಿಸಿತಲ್ಲವೇ? ನಂದೂ ಅದೇ ಅಭಿಪ್ರಾಯ” ಎಂದಳು ಶಾರದೆ. ವಿಧಿಯಿಲ್ಲದೆ ಮತ್ತೆ ಮಹಡಿಯೇರಿದ ಮಹೇಶ. ರೂಮಿನೊಳಕ್ಕೆ ಬಂದ ಮಹೇಶ ರಾತ್ರಿ ತಾನು ತೆಗೆದುಕೊಂಡಿದ್ದ ಮಾತ್ರೆಯನ್ನೇ ಮತ್ತೊಮ್ಮೆ ತೆಗೆದುಕೊಂಡರಾಯಿತು. ಸಮಯ ನೋಡಿ ಗೆಳೆಯ ಡಾ.ಚಂದ್ರುವಿಗೆ ಫೋನ್ ಮಾಡಿ ಹೇಗಾದರೂ ಇಲ್ಲಿಗೆ ಬರುವಂತೆ ಮಾಡಬೇಕೆಂದುಕೊಂಡು ತಾನು ತಂದಿದ್ದ ಚೀಲವನ್ನೆತ್ತಿಕೊಂಡ. ಅದರಲ್ಲೇನಿದೆ ಬರೀ ಬಟ್ಟೆಗಳು. ಪರ್ಸ್ ಮತ್ತು ಮೊಬೈಲ್ ಇತ್ತು.
”ಓ ಆ ಸ್ಲಿಪ್ ನನ್ನ ರೂಮಿನ ವಾರ್ಡ್‌ರೋಬಿನಲ್ಲಿದೆ. ಅಲ್ಲಿಗಾದರೂ ಹೋಗಿ ತರಬೇಕು. ಈ ನನ್ನಮ್ಮನಿಗೆ ಏನೆಂದು ಹೇಳುವುದು. ನಮ್ಮ ಮನೆ ತಾನೇ, ಅಲ್ಲಿಯೇ ಹೋಗಿ ರೆಸ್ಟ್ ತೆಗೆದುಕೊಂಡರಾಯಿತು” ಎಂದುಕೊಂಡು ರೂಮಿನ ಹೊರಗೆ ಬರುವುದಕ್ಕೂ ಮೆಟ್ಟಿಲು ಹತ್ತಿ ಗೆಳೆಯ ಚಂದ್ರು ಬರುವುದಕ್ಕೂ ಒಂದೇ ಆಯಿತು.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40678
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
Beautiful
ಧನ್ಯವಾದಗಳು ನಯನಮೇಡಂ
ಚಂದದಿಂದ ಮುಂದುವರೆಯುತ್ಯಿದ್ದ ಕಥಾನಕದಲ್ಲಿ ಏನೋ ಒಡಕು ಮೂಡುತ್ತಿರುವಂತೆ ಅನ್ನಿಸಿ ಆತಂಕ ಉಂಟಾಯಿತು.
ಧನ್ಯವಾದಗಳು ಪದ್ಮಾ ಮೇಡಂ
ಬಹಳ ಚೆನ್ನಾಗಿದೆ ಮೇಡಂ
ಧನ್ಯವಾದಗಳು ವನಿತಾ ಮೇಡಂ
ಪ್ರಾರಂಭದಲ್ಲೇ ಮಹೀ ಮತ್ತು ಮಾದೇವಿ ದಾಂಪತ್ಯದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾಸವಾಗುತ್ತಿದೆ…. ಒಳ್ಳೆಯ ಕುತೂಹಲಕಾರಿ ತಿರುವು…!! ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ