ರಾಧೆಯಳಲು

Share Button

ಬರುವನೇ ಮತ್ತೆ ಮಾಧವ?
ನನ್ನ ಕಾಣದೆ ಹಾಗೆಯೇ ಹೋದವ!

ಅರಳಿದ ಹೂವಲಿ ಬೆರೆತ ಕೊಳಲಗಾನವ
ತನ್ಮಯದಿ ಕೇಳುತ ನಿನ್ನರಸಿ ಬಂದೆ

ನನ್ನ ತಪ್ಪಿಸಿ ಸುಳ್ಳನೊಪ್ಪಿಸಿದವ
ಅನ್ಯರನೊಲಿದ ಪರಿ ನೋಡಿ ನೊಂದೆ.

ಲೋಕನಿಂದೆಯ ಮರೆತು ಅನುರಾಗದಲಿ ಬೆರೆತು
ನಿನ್ನೆಡೆಗೆ ಓಡೋಡಿ ಬಂದೆ

ಯಮುನೆಯ ನೀರಲಿ ಕಲೆತ ಒಲವಧಾರೆಯ
ನೆನಹುತ ತೇಲುತ ವಿರಹವ ಬೆದಕಿದೆ

ಚಂದಿರನಿಲ್ಲದ ಇರುಳಿನ ಕತ್ತಲ ಕಚಗುಳಿ
ತನುಮನ ಅಪ್ಪುತ ಬೆದರಿಸಿದೆ

ನೀ ಬಂದೇ ಬರುವೆ ಎಂಬ ಕನಸಿನೋಕುಳಿ
ಜೀವವ ಮೀಟುತ ಹಾಡನು ಕಟ್ಟಿದೆ.

ಎಲ್ಲರ ಬಿಟ್ಟು ಅನುರಾಗಕೆ ಸೋತು ಯಮುನೆಯ
ದಡದಲಿ ಜಡವಾಗಿರುವೆ

ಜುಳು ಜುಳು ದನಿಯಲಿ ಮುರಲಿಯ ಗಾನವ
ಬೆದಕುತ ಬೆಸಲಾಗಿರುವೆ

ನನ್ನನೇ ಕೊಟ್ಟು ನೈವೇದ್ಯವನಿಟ್ಟು ಸಮರ್ಪಿತಗೊಳ್ಳಲು
ಕಾಯುತ ಕುಳಿತಿರುವೆ

ಬರುವನೊ? ಬಾರದಿಹನೊ? ಚಿಂತೆಯ ತೂಗುಯ್ಯಾಲೆಗೆ
ತಾಗುತ ಚಡಪಡಿಸುತಿರುವೆ

ನನ್ನ ಸಡಗರವ ಅರಿಯದೇ ಹೋದವ, ‘ಮಾಧವ ಎಲ್ಲಿಗೆ
ಹೋಗಿರುಹೋಗುತಿರುವೆ!

ಬರುತಲೇ ಬಿಗಿದಪ್ಪಿ ಕಣ್ಣೀರಾಗುತ ಅದುರುವ ಅಧರಕೆ
ಮಧುರವಾಗೆಂದು ಕೂಗಿ ಕರೆಯುವೆ

ಹೊಳೆಯ ರಭಸವನು ನನ್ನುಸಿರಿಗೆ ಬೆರೆಸಿ ಮಂದ ಮಾರುತಕೂ
ಆವೇಗದಬ್ಬರದ ಪಾಠ ಕಲಿಸುವೆ

ಅವನೊಳಗೆ ಇಳಿದು ಇರುಳೆಲ್ಲ ನಲಿದು ಕೈಯ ಕೊಳಲಾಗುತ
ಬಯಲಾಗಿ ಬಸವಳಿವೆ

ಮದವನಳಿಸಿ ಮುದವನರಳಿಸಿ ನಗುವ ನಲ್ಲ ಗೋಪಾಲಗೆ
ಕರಣವಾಗಿ ಹರಣವಾಗುವೆ

ಖಾಲಿಯಾಗಿ ಭರ್ತಿಯಾಗುವೆ; ಮಧುರ ಭಕ್ತಿಗೆ ಹೆಸರಾಗಿ ಹಗುರಾಗುವೆ!

ಈಗ ಹೇಳು; ನನ್ನಂತರಂಗವ ಕೇಳು:
ಬರುವನೇ ಮಾಧವ; ನನ್ನ ಕಾಣದೆ ಹಾಗೆಯೇ ಹೋದವ

ಮೀರಳಿಗೆ ಗಿರಿಧರನಾಗಿ
ಮಹದೇವಿಯಕ್ಕಗೆ ಚನ್ನಮಲ್ಲನಾಗಿ
ಒಪ್ಪಿಸಿಕೊಂಡವ…….

ನಿಜಕೂ ನನ್ನ ನೆನೆದು, ನನ್ನೊಳಗೆ ನೆನೆಯಲೆಂದು
ಮತ್ತೆ ಬಂದೇ ಬರುವನೇ?
ಅಥವಾ ಮರೆತು ದೇವರಾಗಿ ಪತಿ-ವ್ರತೆಯರ ಪೂಜೆಯಾಗುವನೆ?
ಅಥವಾ ರಾಜವಲ್ಲಭನಾಗಿ ಮತ್ತೊಬ್ಬ ದುಷ್ಯಂತನಾಗುವನೆ?

ಹೇಳೇ ಶಕುಂತಲೆ?
ಇದು ರಾಧೆಯಳಲೇ??

-ಡಾ. ಹೆಚ್‌ ಎನ್‌ ಮಂಜುರಾಜ್‌, ಹೊಳೆನರಸೀಪುರ

11 Responses

  1. MANJURAJ H N says:

    ಪ್ರಕಟಿಸಿದ್ದಕಾಗಿ ಧನ್ಯವಾದಗಳು

  2. ಕವಿತೆ ದೀರ್ಘ ವೆನಿಸಿದರೂ..ಅಂತರಂಗದ ಅಳಲಿನ ಅನಾವರಣ ಸೊಗಸೆನಿಸಿದೆ.. ಸಾರ್…

    • Manjuraj says:

      ಹೌದು ಮೇಡಂ.

      ಅವಳ ಅಳಲಿನಂತೆ ನನ್ನ ಬರೆಹವೂ
      ಕಾಯುತಿರುವ ಕಡಲ ಕುದಿತವೂ…..!

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

  3. Anonymous says:

    Radheyalalu bareyada Kavita illaveno. Eshtureeti baredaroo radheyalalu navanaveena, nitya nootana. Sogasaagide sir

  4. ನಯನ ಬಜಕೂಡ್ಲು says:

    ಬಹಳ ಸೊಗಸಾಗಿದೆ

  5. Anonymous says:

    ನನಗೆ ನೆನಪಾಗಿ ಬಂದಿದ್ದು ಜಯದೇವನ ಅಷ್ಟ ಪದಿಗಳು ಸಾರ್. ಚಿತ್ರ, ಚಿತ್ರಣ ಬಹಳ ಚೆನ್ನಾಗಿದೆ

  6. Manjunatha says:

    ಕವನ ಚೆನ್ನಾಗಿ ಮೂಡಿ ಬಂದಿದೆ..ರಾಧೆಯ ಅಂತರಂಗದ ಭಾವನೆಗಳನ್ನು ಅತ್ಯಂತ ಸೊಗಸಾಗಿ ಪದಗಳಲ್ಲಿ ನಿರೂಪಿಸಿದ್ದಾರೆ..

  7. Anonymous says:

    ಕವನದ ಶೀರ್ಷಿಕೆ ಬಹಳ ಅರ್ಥಪೂರ್ಣವಾಗಿದೆ..

  8. ಶಂಕರಿ ಶರ್ಮ says:

    ಕವಿತೆ ಚೆನ್ನಾಗಿದೆ.

  9. ನಾಗರಾಜ್ says:

    ಸೊಗಸಾದ ನೀಳ್ಗವನ..ರಾಧೆಯೊಡಲಿನ ಅಳಲನ್ನು ಇನ್ನೂ ದೀರಗೊಳಿಸಿ ವಿಸ್ತರಿಸಬಹುದಿತ್ತು ಮೇಘಸಂದೇಶದಂತೆ.

  10. Padma Anand says:

    ವಿರಹಿ ರಾಧೆಯ ಮನದಳಲಿನ ಚಿತ್ರಣದ ಮನಮುಟ್ಟುವ ಕವಿತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: