ಅವಿಸ್ಮರಣೀಯ ಅಮೆರಿಕ – ಎಳೆ 53

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

5 ವರ್ಷಗಳ ಬಳಿಕ …..

ಹೌದು…ಬರೇ ಪ್ರವಾಸ ಮಾಡುತ್ತಾ ಆನಂದಿಸುವುದಕ್ಕಾಗಿಯೇ ನಮ್ಮಿಬ್ಬರನ್ನು ಮೂರು ತಿಂಗಳ ವಾಸ್ತವ್ಯಕ್ಕಾಗಿ ಮತ್ತೊಮ್ಮೆ ಅಮೆರಿಕಕ್ಕೆ ಕರೆದಿದ್ದರು..ಮಗಳು ಮತ್ತು ಅಳಿಯ; ಮೊಮ್ಮಕ್ಕಳು ಸ್ವಲ್ಪ ದೊಡ್ಡವರಾದುದರಿಂದ ಸುತ್ತಾಡಲು ಅನುಕೂಲವೆಂಬ ಭಾವನೆಯೊಂದಿಗೆ.  ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಇಂಡಿಯನ್ ಏರ್ ಲೈನ್ಸ್ ನವರ  ನೇರ ವಿಮಾನವು  ಅದಾಗಲೇ ಪ್ರಾರಂಭವಾಗಿತ್ತು… ಈ ಸಲ ಅದರಲ್ಲೇ ಪ್ರಯಾಣಿಸುವುದಿತ್ತು. ಅಮೆರಿಕದಲ್ಲಿರುವ ಮಕ್ಕಳು ಮತ್ತು ಮೊಮ್ಮಕ್ಕಳಿಗಾಗಿ ನಮ್ಮ ದೊಡ್ಡ ದೊಡ್ಡ ಸೂಟ್ಕೇಸ್ ಗಳು ತರೆಹೇವಾರಿ ಸಾಮಾನು, ತಿಂಡಿ ಇತ್ಯಾದಿಗಳಿಂದ ತುಂಬಿ ತಮ್ಮ ಉದರ ದೊಡ್ಡದಾಗಿಸಿಕೊಂಡು ತಯಾರಾಗಿ ಕೂತವು. ಮೇ ತಿಂಗಳ 26ರಂದು ಪುತ್ತೂರಿನಿಂದ ಬೆಂಗಳೂರು ಸೇರಿ,  27ನೇ ತಾರೀಕಿನಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿ ಅಂತಾರಾಷ್ಟ್ರೀಯ ನಿಲ್ದಾಣದತ್ತ ನಾವು ಕುಳಿತ ವಿಮಾನವು ಹಾರಿತು. ಮೊದಲೆರಡು ಬಾರಿ ವಿಮಾನ ಬದಲಾವಣೆಗಳು ಹಾಂಗ್ ಕಾಂಗ್ ಮತ್ತು ದುಬೈಯಲ್ಲಿ , ಅಂದರೆ ಬೇರೆಯೇ ದೇಶಗಳಲ್ಲಿ ಆಗಿದ್ದಾಗ ಸಹಜವಾಗಿಯೇ ಸ್ವಲ್ಪ ಆತಂಕವಿತ್ತು. ಇಲ್ಲಿ ನಾವು ನಮ್ಮ ದೇಶದೊಳಗೇ ಇರುವುದರಿಂದ ಮನಸ್ಸಿಗೆ ಸ್ವಲ್ಪ ಸುಭದ್ರ ಅನುಭವ ಎನ್ನಬಹುದು. ಬಹು ದೊಡ್ಡದಾದ ಜಂಬೋ ವಿಮಾನದಲ್ಲಿ ಕುಳಿತಾಗಲೂ ಆಕಡೆ ಈಕಡೆಗಳಿಂದ ಕೇಳುವ ನಮ್ಮ ದೇಶದ ಹಲವು ಭಾಷೆಗಳು ಮನಸ್ಸಿಗೆ ಮುದನೀಡಿದವು. ಅಲ್ಲದೆ, ನಮ್ಮೂರಲ್ಲೇ ಇದ್ದಂತಹ ಭಾವನೆ ಮನಸ್ಸಿಗೆ ಗೆಲುವನ್ನು ನೀಡಿದುದು ಸುಳ್ಳಲ್ಲ. ನಮ್ಮ ದೇಶದ ವಿಮಾನವಾದುದರಿಂದ, ಊಟ, ತಿಂಡಿಗಳಿಗೆ ಇಡ್ಲಿ, ಸಾಂಬಾರ್, ಅನ್ನ, ಪಲ್ಯ, ಸೊಗಸಾದ ದಪ್ಪ ಮೊಸರು ನೀಡಿದುದು ನಿಜಕ್ಕೂ ಖುಷಿಕೊಟ್ಟಿತು. ಆದರೆ, ಮೊದಲಿನ ವಿಮಾನದಲ್ಲಿ ಇದ್ದಷ್ಟು ಸೊಗಸಾದ ಸೌಲಭ್ಯಗಳು, ಅಚ್ಚುಕಟ್ಟುತನ ಇರಲಿಲ್ಲವೆನ್ನಬಹುದು. ಜೊತೆಗೆ, ಕುಳಿತುಕೊಳ್ಳುವ ಆಸನಗಳ ಗಾತ್ರವೂ ಸ್ವಲ್ಪ ಚಿಕ್ಕದಾಗಿತ್ತು. ಈ ಬಾರಿಯ ಇನ್ನೊಂದು ಸಮಸ್ಯೆ ಎಂದರೆ, ಸುಮಾರು 21ಗಂಟೆಗಳಷ್ಟು ಸುದೀರ್ಘ ಪ್ರಯಾಣಕ್ಕಾಗಿ  ನಾವು ನಮ್ಮನ್ನು ಮಾನಸಿಕವಾಗಿ  ಸಿದ್ಧಗೊಳಿಸಬೇಕಾದುದು ಅತೀ ಅವಶ್ಯವಾಗಿತ್ತು.

SFO ತಲಪಿದಾಗ, ನಮ್ಮನ್ನು ಸ್ವಾಗತಿಸಲು ಬರಬೇಕಿದ್ದ ಮಕ್ಕಳು ಬರುವುದು ತಡವಾದ್ದರಿಂದ ಒಂದರ್ಧ ತಾಸು ಕಾಯಬೇಕಾಯಿತು. ಈ ಸರ್ತಿ ನಾವಿಬ್ಬರು ಇದ್ದುದರಿಂದ ಹಿಂದಿನಂತೆ ಹೆಚ್ಚು ಆತಂಕವೇನೂ ಆಗಲಿಲ್ಲವೆನ್ನಿ. ಅವರು ಬಂದಾಗ, ಮೊಮ್ಮಕ್ಕಳ ಕೈಗಳಲ್ಲಿ ನಗುತ್ತಿದ್ದ ಸ್ವಾಗತ ಬಲೂನುಗಳು, ಹೂಗುಚ್ಛ, ಇನ್ನಿಲ್ಲದ ಸಂತಸವನ್ನು ನೀಡಿದವು.

ಮನೆಗೆ ತಲಪಿ, ನಮ್ಮ ಜೆಟ್ ಲ್ಯಾಗ್  ಮಾಯಾಂಗನೆಯನ್ನು ತಹಬಂದಿಗೆ ತರಲೋಸುಗ ಒಂದು ವಾರದ ವಿಶ್ರಾಂತಿ ಪಡೆದ ಬಳಿಕ, ಹತ್ತು ದಿನಗಳ ಪೂರ್ವ ಅಮೆರಿಕದ ಪ್ರವಾಸಕ್ಕೆ ಸಜ್ಜಾದೆವು. ಮೊತ್ತ ಮೊದಲಾಗಿ; ಉತ್ತರ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ನಾವು, ಸುಮಾರು 4,290ಕಿ.ಮೀ. ದೂರದ ಪೂರ್ವ ಕರಾವಳಿಯಲ್ಲಿರುವ, ಬಫೆಲೊ (Buffalo) ಎಂಬ ವಿಚಿತ್ರ ಹೆಸರಿನ  ಪಟ್ಟಣಕ್ಕೆ ಹಾರಬೇಕಿತ್ತು ….ಯಾಕೆ ಗೊತ್ತಾ..?? ಅಲ್ಲಿದೆ ಜಗತ್ತಿನ  ಪ್ರಾಕೃತಿಕ ಅದ್ಭುತಗಳಲ್ಲೊಂದಾದ ನಯಾಗರ ಜಲಪಾತ. ಕಳೆದ ಬಾರಿಯೇ ಅಲ್ಲಿಗೆ ನಮ್ಮಿಬ್ಬರನ್ನು ಕಳುಹಿಸಿ, ಅಲ್ಲಿರುವ ನಮ್ಮ ಬಂಧುಗಳ ಮೂಲಕ ಈ ತಾಣವನ್ನು ವೀಕ್ಷಿಸಲು ತಯಾರಿ ನಡೆದಿದ್ದರೂ, ಬಂಧುಗಳಿಗೆ ಬಿಡುವಿಲ್ಲದುದರಿಂದ ಅದು ರದ್ದಾಗಿತ್ತು. ಇದರಿಂದಾಗಿ ನಮಗೆ ಒಳ್ಳೆಯದೇ ಆಯಿತೆನ್ನಬಹುದು..ಇದೇ ದಿನಗಳಲ್ಲಿ ನಾವು ಸುಂದರ ಗುಲಾಬಿ ನಗರ ಪೋರ್ಟ್ ಲ್ಯಾಂಡ್ ನ್ನು ವೀಕ್ಷಿಸುವಂತಾಯ್ತು!  ನಾನು ಮೊತ್ತ ಮೊದಲಾಗಿ ನಮ್ಮ ಜೋಗದ ಜಲಪಾತವನ್ನು ನೋಡಿದಾಗ ಅದೆಷ್ಟು ಸಂಭ್ರಮಪಟ್ಟಿದ್ದೆ… ಪರಮಾಶ್ಚರ್ಯದಿಂದ ಮೂಕ ವಿಸ್ಮಿತಳಾಗಿದ್ದೆ! ಆದರೆ ಆಗ, ಜಗದ್ವಿಖ್ಯಾತ ನಯಾಗರ ಜಲಪಾತದ (Niagara Falls) ರಮಣೀಯ ದೃಶ್ಯವನ್ನು ಸವಿಯುವ ಭಾಗ್ಯ ಜೀವನದಲ್ಲೊಮ್ಮೆ ನನ್ನದಾಗಬಹುದೆಂದು ಕನಸು ಮನಸಿನಲ್ಲೂ ಉಹಿಸಿರಲಿಲ್ಲ. ಜೂನ್ 4ರಂದು ಮಧ್ಯಾಹ್ನ 2ಗಂಟೆಗೆ ಮನೆಯಿಂದ ಹೊರಟ ನಾವು ಸೇನೋಸೆಯಲ್ಲಿರುವ ದೇಶೀಯ ವಿಮಾನ ನಿಲ್ದಾಣದಿಂದ American Express ವಿಮಾನವೇರಿ ಬಫೆಲೊದತ್ತ ಹಾರಿದೆವು.                

ಬಫೆಲೊದಲ್ಲಿ ಇಳಿದಾಗ

ಬಫೆಲೊ ಪಟ್ಟಣವು ನ್ಯೂಯಾರ್ಕ್ ರಾಜ್ಯದ ಗಡಿ ಭಾಗದಲ್ಲಿರುವ Erie ಪ್ರಾಂತ್ಯದಲ್ಲಿದೆ ಹಾಗೂ ನ್ಯೂಯಾರ್ಕ್ ನಗರದ ಪಶ್ಚಿಮದಲ್ಲಿದೆ. ಇದು ರಾಜ್ಯದ ಎರಡನೇ ಅತೀ ದೊಡ್ಡ ನಗರವಾಗಿದ್ದು, Erie ಪ್ರಾಂತದ ಪ್ರಮುಖ ಪಟ್ಟಣವೂ ಹೌದು. ಕೆನಡಾ ದೇಶದ ಸರಹದ್ದಿನಲ್ಲಿರುವ ಈ ನಗರವು, ಸುಮಾರು 136ಚ. ಕಿ. ಮೀ ವಿಸ್ತೀರ್ಣವನ್ನು ಹೊಂದಿದೆ. ಬೇಸಿಗೆಯಲ್ಲಿ ಇಲ್ಲಿಯ ವಾತಾವರಣ ಹಿತಕರವಾಗಿದ್ದು; ಚಳಿಗಾಲದಲ್ಲಿ ಇಲ್ಲಿಯ ಉಷ್ಣತೆಯು -11°c ನಷ್ಟು ಕೆಳಗಿಳಿಯುತ್ತದೆ. ಇಲ್ಲಿಯ ಜನಸಂಖ್ಯೆಯು ಸುಮಾರು 2,78,400ರಷ್ಟಿದ್ದು, ಇದು ಕ್ಲೀವ್ ಲ್ಯಾಂಡ್ ಮತ್ತು ಬೋಸ್ಟನ್ ನಡುವಿನ ವ್ಯಾಪಾರದ ಬಹುಮುಖ್ಯ ಕೊಂಡಿಯೂ ಹೌದು. 17ನೇ ಶತಮಾನದ ಮೊದಲು, ಪೇಲಿಯೊ ಇಂಡಿಯನ್ಸ್(Paleo Indiyans) ಎಂಬ ಮೂಲನಿವಾಸಿಗಳು ಇಲ್ಲಿ ನೆಲೆಸಿದ್ದರು. ಆನಂತರದ ದಿನಗಳಲ್ಲಿ; ಯುರೋಪಿನಿಂದ ಬಂದ ಕ್ರೈಸ್ತಮತ ಪ್ರಚಾರಕರಿಂದ ಮೂಲ ನಿವಾಸಿಗಳ ನೆಲೆ ತಪ್ಪಿದಂತಾಯಿತು. 20ನೇ ಶತಮಾನದಿಂದೀಚೆಗೆ ಈ ನಗರವು ಜಗತ್ತಿನ ಬೇಳೆಕಾಳುಗಳ ರಫ್ತು ಮತ್ತು ಹಿಟ್ಟಿನ ಗಿರಣಿಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.

ಸೆನೋಸೆಯಿಂದ ಬಫೆಲೊ ನಗರಕ್ಕೆ ವಿಮಾನದಲ್ಲಿ 4 ಗಂಟೆಗಳ ಪಯಣ. ನಾವು ಕುಳಿತಿರುವ ವಿಮಾನವು ಸಂಜೆ 6 ಗಂಟೆಗೆ ಆಕಾಶದಲ್ಲಿ ಹಾರತೊಡಗಿತ್ತು. ಆ ಲೆಕ್ಕಾಚಾರದಲ್ಲಿ ನಾವು ರಾತ್ರಿ ಹತ್ತು ಗಂಟೆಗೆ ಬಫೆಲೊ ತಲಪಬೇಕಾಗಿತ್ತು ತಾನೆ? ಆದರೆ ವಿಚಿತ್ರವೆಂದರೆ ಇಲ್ಲಿ ಹಾಗಾಗುವುದಿಲ್ಲ… ಯಾಕೆಂದರೆ ಅಮೆರಿಕದ ಪೂರ್ವ  ಕರಾವಳಿಯ ಸಮಯವು ಪಶ್ಚಿಮ ಕರಾವಳಿಯ ಸಮಯಕ್ಕಿಂತ 4 ತಾಸುಗಳಷ್ಟು ಮುಂದಿದೆ! ಇದರಿಂದ ನಮಗೆ ಅಮೆರಿಕ ಭೂಭಾಗದ ಅಗಾಧತೆಯ ಅರಿವಾಗುತ್ತದೆ! ಇದರಿಂದಾಗಿ, ಜೂನ್ ಐದನೇ ತಾರೀಕು ಬುಧವಾರದಂದು 2 ಗಂಟೆ ಮಧ್ಯರಾತ್ರಿ (ಮುಂಜಾನೆ?) ಹೊತ್ತಿಗೆ ನಾವು  ಬಫೆಲೊ ತಲಪಿದೆವು. ಇದು  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೂ ಅದರ  ಸೊಬಗನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ… ನಡುರಾತ್ರಿಯಾಗಿತ್ತು… ವಿಮಾನ ನಿಲ್ದಾಣದಲ್ಲಿ ಜನಸಂಚಾರವಿಲ್ಲದೆ ಬಿಕೋ ಅನ್ನುತ್ತಿತ್ತು. ಅಲ್ಪಸ್ವಲ್ಪ ಮಳೆ ಕೂಡಾ ಬರುತ್ತಿತ್ತು. ಅಮೆರಿಕದ ಸಾರಿಗೆ ಅನುಕೂಲತೆಗಳಲ್ಲಿ ಒಂದಾದ ಬಾಡಿಗೆ ಕಾರುಗಳ ಲಭ್ಯತೆಯು ನಮ್ಮಂತಹ ಪ್ರವಾಸಿಗರಿಗೆ ಬಹಳ  ಉಪಯೋಗವೆನಿಸುತ್ತದೆ. ಹಾಗೆಯೇ, ಬಾಡಿಗೆ ಕಾರನ್ನು ಅಂತರ್ಜಾಲದ ಮೂಲಕ ಮೊದಲೇ ಕಾದಿರಿಸಿರುವುದರಿಂದ, ಅಲ್ಲದೆ ಅದರ ಪೂರ್ತಿ ವಿವರಗಳು ಲಭ್ಯವಿರುವುದರಿಂದ, ವಿಮಾನ ಇಳಿದ ತಕ್ಷಣ ಸೀದಾ ಕಾರಿನ ಬಳಿಗೆ ಹೋದೆವು. ಸಹಜವಾಗಿಯೇ ಚಳಿ ಪ್ರದೇಶವಾಗಿರುವ ಇಲ್ಲಿ, ಈ ಸಣ್ಣ ಹನಿಯ ಜಿಟಿಜಿಟಿ ಮಳೆಯು ವಾತಾವರಣವನ್ನು ಇನ್ನಷ್ಟು ತಂಪುಗೊಳಿಸಿ  ನನ್ನನ್ನು ಗದಗುಟ್ಟುವಂತೆ ಮಾಡಿತು. ನಾವು ಈ ಮೊದಲೇ ನಾವು ಬರುವ ಬಗ್ಗೆ ಬಂಧುಗಳಿಗೆ ತಿಳಿಸಿದಾಗ ಅವರು ಸಂತೋಷದಿಂದಲೇ ಒಪ್ಪಿಗೆ ಸೂಚಿಸಿ ಪ್ರೀತಿಯಿಂದ ಆಹ್ವಾನಿಸಿದ್ದರೂ, ಈ ಅಪರರಾತ್ರಿಯಲ್ಲಿ ಅವರಿಗೆ ತೊಂದರೆ ಕೊಡಬೇಕಲ್ಲಾ ಎನ್ನುವ ಸಂಕೋಚ ಬೇರೆ! ಅಂತೂ ನಮಗೆ ಈ ಪರವೂರಲ್ಲಿ ಬೇರೆ ದಾರಿಯೇನೂ ಇಲ್ಲವಲ್ಲ. ನಿಲ್ದಾಣದ ಒಳಭಾಗದಲ್ಲೇ ಇರುವ ವಾಹನಗಳ ನಿಲುಗಡೆಯೊಳಗೆ ಹೋಗುವಾಗ ಮುಂದುಗಡೆಯಲ್ಲಿ, ಹೂ ತುಂಬಿದ, ಹಸಿರಾದ ಲತಾ ಕಮಾನು ಆ ನಸುಗತ್ತಲಲ್ಲೂ ತನ್ನ ಇರವನ್ನು ಸೂಚಿಸಿತು. ಹತ್ತು ನಿಮಿಷಗಳಲ್ಲಿ ಚಂದದ ಕಾರೊಂದರ ಕೀಲಿಕೈ ಅಳಿಯನ ಕೈಗೆ ಬಂತು. ಮಧ್ಯರಾತ್ರಿಯ ನಿಶ್ಶಬ್ದ ಮೌನ ತುಂಬಿರುವ ರಸ್ತೆಯಲ್ಲಿ ನಮ್ಮ ಪಯಣ ಮುಂದುವರಿದಂತೆ; ಅಕ್ಕಪಕ್ಕಗಳಲ್ಲಿ ಮಳೆಯ ಮುತ್ತಿನ ಮಣಿಗಳಿಂದ ತೊಯ್ದ ನಿಸರ್ಗದ ದಟ್ಟ ಹಸಿರು ರಸ್ತೆ ದೀಪದ ಬೆಳಕಲ್ಲಿ ಕಣ್ತುಂಬಿತು. ಅಹ್ಲಾದಕರ ವಾತಾವರಣವು ಆ ರಾತ್ರಿಯ ಸೊಗಸನ್ನು ಇನ್ನಷ್ಟು ಹೆಚ್ಚಿಸಿತ್ತು! ಸರಿಯಾಗಿ 2 ಗಂಟೆಯ ಸಮಯಕ್ಕೆ ಬಂಧುಗಳ ಮನೆ ಮುಂದೆ ನಮ್ಮ ಕಾರನ್ನು ಆದಷ್ಟು ನಿಶ್ಶಬ್ದವಾಗಿ ನಿಲ್ಲಿಸಲಾಯಿತು…ಅವರಿಗೆ ತೊಂದರೆಯಾಗಬಾರದೆಂದು! ಆದರೂ ಕರೆಗಂಟೆ ಒತ್ತಲೇ ಬೇಕಲ್ಲ.. ಬಹಳ ಸಂಕೋಚದಿಂದಲೇ ನಮ್ಮ ಕರ್ತವ್ಯವನ್ನು ನಿಭಾಯಿಸಿದೆವೆನ್ನಿ! ಗಾಢ ನಿದ್ರೆಯಲ್ಲಿದ್ದ ಅವರು ಪ್ರೀತಿಯಿಂದಲೇ ಬರಮಾಡಿಕೊಂಡು, ನಮ್ಮ ಪ್ರಯಾಣದ ಆಯಾಸ ಪರಿಹಾರಕ್ಕಾಗಿ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಇನ್ನೇನು, ಸ್ವಲ್ಪವೇ ಸಮಯದಲ್ಲಿ ಬೆಳಕು ಬೀರಲು ತಯಾರಿ ನಡೆಸಿದ್ದ ಸೂರ್ಯನನ್ನು ಸ್ವಾಗತಿಸಲು ಸಜ್ಜಾಗುತ್ತಾ ಸಣ್ಣ ಸಿಹಿ ನಿದ್ದೆಗೆ ಜಾರಿದೆವು….

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38301

-ಶಂಕರಿ ಶರ್ಮ, ಪುತ್ತೂರು. 

4 Responses

  1. ಪ್ರವಾಸ ಕಥನ ದ ಅನುಭವವನ್ನು ಒಂದೊಂದು ಇಂಚೂ ಬಿಡದೆ..ಅಭಿವ್ಯಕ್ತಿ ಸುವ ನಿಮಗೆ.. ಧನ್ಯವಾದಗಳು ಶಂಕರಿಮೇಡಂ..

  2. ನಯನ ಬಜಕೂಡ್ಲು says:

    Very nice

  3. R. K. Nadgir says:

    ಪುತ್ತೂರು ನಿವಾಸಿ ಶ್ರೀಮತಿ ಶಂಕರಿ ಶರ್ಮ ಅವರಿಗೆ ಧನ್ಯವಾದಗಳು ಅರ್ಪಿಸುತ್ತ.. ನೀವು ಅಮೇರಿಕದಲ್ಲಿ ಸಂದರ್ಶಸಿದ ಪ್ರತಿಯೊಂದು ಸ್ಥಳದ ವಿವರಣೆ. ಅದರ ಹಿನ್ನೆಲೆ ವರ್ಣಿಸಿದ ರೀತಿ ಮನಕ್ಕೆ ಮುದ ನೀಡಿತು. ನಾನು ಸಹ ಭಾರ್ಯೆಯೊಡನೆ
    2010 ರಲ್ಲಿ ನಯಾಗರಕ್ಕೆ ಹೋಗಿ ಬಂದ ನೆನಪು ನಿಮ್ಮ ಲೇಖನದಿಂದ ಮರುಕಳಿಸಿತು.. ನಿಮ್ಮ ಪ್ರವಾಸ ಕಥನ.
    ಸುಂದರ ಹಾಗೂ ಮನಸ್ಸಿಗೆ ತಾಕುವಲ್ಲಿ
    ಯಶಸ್ವಿ ಆಗಿದೆ. ಇದನ್ನು ಪ್ರಕಟಿಸಿದ ಸುರಹೊನ್ನೆ ಪತ್ರಿಕೆಯ ಸಂಪಾದಕಿ ಶ್ರೀಮತಿ
    ಹೇಮಾಮಾಲಾ ಅವರಿಗೂ ವಂದನೆಗಳು.
    ರಂಗನಾಥ. ನಾಡಗೀರ ಹುಬ್ಬಳ್ಳಿ
    9916927315.

  4. Padma Anand says:

    ಸುಂದರ ನಿರೂಪಣೆಯ ಪ್ರವಾಸ ಕಥನ ಮುದ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: