ಜೂನ್ ನಲ್ಲಿ ಜೂಲೇ : ಹನಿ 18
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಥಿಕ್ಸೆ ಮೊನಾಸ್ಟ್ರಿ, ರಾಂಚೋ ಶಾಲೆ
ದಾರಿಯಲ್ಲಿ, ‘ಥಿಕ್ಸೆ’ ಎಂಬಲ್ಲಿರುವ ಮೊನಾಸ್ಟ್ರಿಗೆ ಭೇಟಿ ಕೊಟ್ಟೆವು. 12 ಮಹಡಿಗಳುಳ್ಳ ಈ ಮೊನಾಸ್ಟ್ರಿಯು ಲೇಹ್ ನಲ್ಲಿ ಅತ್ಯಂತ ದೊಡ್ಡದು . ಇಲ್ಲಿರುವ ಮೈತ್ರೇಯ ಬುದ್ಧನ ಪ್ರತಿಮೆಯು 15 ಅಡಿ ಎತ್ತರವಿದ್ದು, ಲೇಹ್ ನಲ್ಲಿರುವಾ ಅತಿ ಎತ್ತರದ ಬುದ್ಧನ ಪ್ರತಿಮೆಯಾಗಿದೆ. ಟಿಬೆಟ್ ನ ಲ್ಹಾಸಾದಲ್ಲಿರುವ ಅರಮನೆಯ ಮಾದರಿಯಲ್ಲಿ ಈ ಮೊನಾಸ್ಟ್ರಿಯನ್ನು ರಚಿಸಲಾಗಿದೆ.
ತ್ರೀ ಈಡಿಯಟ್ಸ್’ ಸಿನೆಮಾ ಖ್ಯಾತಿಯ ‘ರಾಂಚೋ’ ಶಾಲೆ….
ಪ್ರಯಾಣ ಮುಂದುವರಿದು ಲೇಹ್ ನ ಸಮೀಪ ತಲಪದಲ್ಲಿರುವ ‘ತ್ರೀ ಈಡಿಯಟ್ಸ್’ ಚಿತ್ರೀಕರಣ ನಡೆಸಿದ್ದ Druk Padma Karpo ಶಾಲೆಗೆ ತಲಪಿದೆವು . ಪ್ರಸಿದ್ಧವಾದ ಚಲನಚಿತ್ರವೊಂದು ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ . ಈ ಶಾಲೆಯನ್ನು ಈಗ ‘ರಾಂಚೋ ಶಾಲೆ’ ಎಂದು ಗುರುತಿಸುತ್ತಾರೆ. ಚಿತ್ರೀಕರಣ ನಡೆಸಿದ ಕ್ಲಾಸ್ ರೂಮಿನ ಹೊರಗೋಡೆಯ ಮೇಲೆ ‘ಈಡಿಯಟ್ಸ್’ ಗಳ ಗುರುತನ್ನು ಮೂಡಿಸಿದ್ದಾರೆ. ಶಾಲಾ ಅವಧಿಯ ನಂತರ, ಪ್ರವಾಸಿಗರಿಗೆ ಇಲ್ಲಿ ಪ್ರವೇಶಕ್ಕೆ ಅನುಮತಿ ಇದೆ. ಪಕ್ಕದಲ್ಲಿ ‘ರಾಂಚೋ ಕೆಫೆಟೇರಿಯ’ ಇದೆ. ‘ಈಡಿಯಟ್ಸ್’ ಗಳ ನಾಯಕನಾಗಿದ್ದ ‘ರಾಂಚೊ’ ಹೆಸರಿನ ಟಿ- ಶರ್ಟ್, ಪುಸ್ತಕ ಇತ್ಯಾದಿ ಮಾರಾಟಕ್ಕೆ ಲಭ್ಯವಿವೆ. ಶಾಲಾ ಆವರಣವು ಬಹಳ ಸೊಗಸಾಗಿ, ಅಚ್ಚುಕಟ್ಟಾಗಿ ಇದೆ.
ಮರಳಿ ಗೂಡಿಗೆ
ರಾಂಚೋ ಶಾಲೆಯ ಭೇಟಿಯ ನಂತರ ಪುನ: ಹೋಟೆಲ್ ಗ್ಯಾಲಕ್ಸಿಯತ್ತ ಹೊರಟೆವು. ನಿಗದಿತ ವೇಳಾಪಟ್ಟಿ ಪ್ರಕಾರ, ಅಂದಿಗೆ ನಮ್ಮ ಪ್ರವಾಸ ಕೊನೆಗೊಳ್ಳುತ್ತದೆ. 5 ದಿನಗಳ ಕಾಲ ನಮ್ಮನ್ನು ಸುರಕ್ಷಿತವಾಗಿ ಲೇಹ್ -ಲಡಾಕ್ ಸುತ್ತಾಡಿಸಿದ ಸಮರ್ಥ ಡ್ರೈವರ್ ನೋಬ್ರುವಿಗೆ ಧನ್ಯವಾದ ತಿಳಿಸಿದೆವು. ಮರುದಿನ ನಮ್ಮನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ತಾನು ಬರುವೆನೆಂದ.
ಹೋಟೇಲ್ ಗೆ ಬಂದು ಸಂಜೆಯ ವೇಳೇ ಮಾರ್ಕೆಟ್ ನಲ್ಲಿ ಸ್ವಲ್ಪ ಸುತ್ತಾಡಿದೆವು. ಕೊಳ್ಳುವಂತಹ ವಿಶೇಷ ವಸ್ತುಗಳೇನೂ ಕಾಣಿಸಲಿಲ್ಲ. ಬೌದ್ಧರ ಪೂಜಾ ಸಾಮಗ್ರಿಗಳು, ಟಿಬೆಟಿಯನ್ ಅಲಂಕಾರಿಕ ವಸ್ತುಗಳು, ಬೆಚ್ಚಗಿನ ಉಡುಪುಗಳು ಇಂಥಹವೇ ಇದ್ದುವು. ಈ ನಡುವೆ, ನನಗೆ ದಿಲ್ಲಿಯಿಂದ ಬೆಂಗಳೂರಿಗೆ ಹೋಗುವ ವಿಮಾನದ ಟಿಕೆಟ್ ಗಳು ಇನ್ನೂ ಬಂದಿಲ್ಲ ಎಂದು ಕಿರಿಕಿರಿಯಾಗತೊಡಗಿತು. ಲೇಹ್ ನ ಮಾರ್ಕೆಟ್ ನಲ್ಲಿ ಇಂಟರ್ನೆಟ್ ಕೆಫೆ ಇದೆಯಾ ಎಂದು ಹುಡುಕಿದೆವು. ಒಂದೆಡೆ ಸಿಕ್ಕಿತು. ಅಲ್ಲಿಂದ ಫೋನಾಯಿಸಿ ದಿಲ್ಲಿಯ ಓಯೋ ಟ್ರಾವೆಲ್ಸ್ ನವರಿಗೆ ಪುನ: ಎಚ್ಚರಿಸಿಯಾಯಿತು. ಆಕೆ , ತಾನು ಈಗಾಗಲೇ ಟಿಕೆಟನ್ನು ನಮಗೆ ಕಳುಹಿಸಿದ್ದಾಳೆಂದೂ, ಲೇಹ್ ನಲ್ಲಿ ನಮ್ಮ ಫೋನ್ ಕೆಲಸ ಮಾಡದಿರುವುದರಿಂದ ಸಿಗಲಿಲ್ಲವೆಂದೂ ಗೊತ್ತಾಯಿತು. ಹೋಟೆಲ್ ನ ವೈ-ಫೈ ರಾತ್ರಿ ಸ್ವಲ್ಪ ಸಮಯ ಸಂಪರ್ಕ ಪಡೆದಿತ್ತು. ಆಗ ಟಿಕೆಟ್ ವಾಟ್ಸಾಪ್ ಮೂಲಕ ಬಂದಿತ್ತು . ಹಾಗಾಗಿ ನಿರಾತಂಕವಾಯಿತು. ಮರಳಿ ಗೂಡಿಗೆ ಬರಲು ಪ್ಯಾಕ್ ಮಾಡಲಾರಂಭಿಸಿದೆವು.
ಹೋಟೆಲ್ ಗ್ಯಾಲಕ್ಸಿಯಲ್ಲಿ ಎಂದಿನಂತೆ ರಾತ್ರಿಯ ಊಟವಾಯಿತು. ಸ್ಥಳೀಯ ಓಯೋ ಟ್ರಾವೆಲ್ಸ್ ನ ಆಯೋಜಕರು ನಮ್ಮನ್ನು ಭೇಟಿಯಾಗಿ ಪ್ರವಾಸದ ಅನುಭಗಳನ್ನು ತಿಳಿಸಿ ಎಂದಾಗ ‘ಲೇಹ್ ನಲ್ಲಿ ಚೆನ್ನಾಗಿತ್ತು, ಆದರೆ ದಿಲ್ಲಿ ಓಯೋ ಟ್ರಾವೆಲ್ಸ್ ಬಗ್ಗೆ ವಿಪರೀತ ಅಸಮಾಧಾನವಿದೆ, ನಾವು ಕೊಟ್ಟ ಹಣಕ್ಕೆ ಇದಕ್ಕಿಂತ ಉತ್ತಮ ಸೇವೆಯನ್ನು ಬಯಸಿದ್ದೆವು’ ಎಂದೆವು.
30 ಜೂನ್ 2018 ರಂದು ಬೆಳಗ್ಗೆ ಉಪಾಹಾರದ ನಂತರ ಹೋಟೆಲ್ ನ ಮಾಲಿಕ ದಂಪತಿ ಹಾಗೂ ಸಿಬ್ಬಂದಿ ವರ್ಗದವರೆಲ್ಲರಿಗೆ ಧನ್ಯವಾದ ಹೇಳಿ, ಫೊಟೋ ಕ್ಲಿಕ್ಕಿಸಿಕೊಂಡು, ಸಿಬ್ಬಂದಿ ವರ್ಗದವರಿಗೆ ಮತ್ತು ಡ್ರೈವರ್ ನೊಬ್ರುವಿಗೆ ಸ್ವಲ್ಪ ಭಕ್ಷೀಸನ್ನೂ ಕೊಟ್ಟು ಲೇಹ್ ವಿಮಾನ ನಿಲ್ದಾಣದತ್ತ ಹೊರಟೆವು. ತಂಡದ ಎಲ್ಲರಿಗೂ ವಿದಾಯ ಕೋರಿ, ಮಧುರ ನೆನಪುಗಳೊಂದಿಗೆ ಲೇಹ್ ಬಿಟ್ಟಾಗ ಬೆಳಗ್ಗೆ 1030 ಗಂಟೆ. ದಿಲ್ಲಿಯವರೆಗೆ ಒಂದೇ ವಿಮಾನದಲ್ಲಿದ್ದೆವು. ಆಮೇಲೆ ಭಾವ ಮತ್ತು ಅಕ್ಕ ಮಂಗಳೂರಿಗೆ ಹೊರಡುವ ವಿಮಾನವನ್ನೇರಿದರು. ಭಾರತಿ ಮತ್ತು ನಾನು ಬೆಂಗಳೂರು ಮೂಲಕ ಮೈಸೂರಿಗೆ ತಲಪಿದೆವು. ಎಲ್ಲರೂ ರಾತ್ರಿ ಅವರವರ ಮನೆಗೆ ಸೇರಿದೆವು. ಹೀಗೆ ನಮ್ಮ ಒಂದುವಾರದ ಲೇಹ್ -ಲಡಾಕ್ ಪ್ರವಾಸ ಸಂಪನ್ನವಾಯಿತು.
ಇದುವರೆಗೆ ಪ್ರವಾಸಕಥನವನ್ನು ಓದುತ್ತಾ, ಪ್ರತಿಕ್ರಿಯಿಸುತ್ತಾ, ಕ್ಷಿಪ್ರವಾಗಿ ಬರೆಯಲು ಪ್ರೇರೇಪಿಸಿದ ನಿಮಗೆಲ್ಲರಿಗೂ ಜೂಲೇ…ಜೂಲೇ !!
(ಮುಗಿಯಿತು)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37579
-ಹೇಮಮಾಲಾ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತೇನೋ ನಿಜ ಕೊನೆಯಲ್ಲಿ ಮುಕ್ತಾಯ ನೋಡಿ ಅಯ್ಯೋ ಆಗೇಹೊಯತೇ ಎನ್ನಿಸಿತು..ನಾವು ನಿಮ್ಮೊಡನೆ ಪ್ರವಾಸ ಮಾಡಿದಷ್ಟೇ ಅನುಭವವಾಯಿತು..ಅಷ್ಟರಮಟ್ಟಿಗೆ ನಿಮ್ಮ ನಿರೂಪಣೆ ಇತ್ತು..ತುಂಬಾ ಮುದ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.. ಗೆಳತಿ ಹೇಮಾ…
ಪ್ರವಾಸಕಥನದ ಎಲ್ಲಾ ಕಂತುಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು..
ನಿಜ ಮೇಡಂ, ನನಗೂ ಹೀಗೆಯೇ ಅನ್ನಿಸಿತು
Beautiful. ಎಲ್ಲ ಕಂತುಗಳು ಬಹಳ ಸುಂದರವಾಗಿ ಮೂಡಿ ಬಂದವು.
ಲೇಹ್- ಲಡಾಕ್ ಪ್ರವಾಸದ ಸುಂದರ ಅನುಭವಗಳ ಬುತ್ತಿಯನ್ನು ಈ ವರೆಗೆ ನಮಗೆಲ್ಲರಿಗೂ ಹಂಚಿದ ನಿಮಗೆ ಪ್ರೀತಿಯಿಂದ ಧನ್ಯವಾದಗಳು…ಮಾಲಾ.
ಹೇಮಮಾಲಾ ಮೇಡಂ, ಮಧುರ ನೆನಪನ್ನು ಉಳಿಸುವ ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿತ್ತು. ಇನ್ನೂ ನಿಮಗೆ ಹೇಳುವುದು ತುಂಬಾ ಇದೆ ಎಂದೆನ್ನಿಸಿತು.
ನಮ್ಮನ್ನು ಕೂತಲ್ಲೆ ಲೇಹ್-ಲಡಾಕ್ ಸುತ್ತಾಡಿಸಿ ಮನಸ್ಸನ್ನು ಮುದಗೊಳ್ಳುವಂತೆ ಮಾಡಿದ ಹೇಮಮಾಲಾ, ನಿಮಗೆ ತುಂಬು ಮನದ ಅಭಿನಂದನೆಗಳು.
ಉತ್ತಮ ಪ್ರವಾಸದ ಅನುಭವ ಕಥನ .ಬಹಳ ಚೆನ್ನಾಗಿದೆ ಮೇಡಂ
ಕೆ.ರಮೇಶ್
ಒಂದು ಉತ್ತಮ ಪ್ರವಾಸದ ಅನುಭವ ದ ಚಿತ್ರಣ.ಧನ್ಯವಾದಗಳು ಮೇಡಂ.
ಕೆ ರಮೇಶ್