ಜೂನ್ ನಲ್ಲಿ ಜೂಲೇ : ಹನಿ 1
ಲಡಾಕ್ ಪ್ರವಾಸ ಕಥನ
ಪ್ರಯಾಣ, ಪ್ರವಾಸದ ವಿಚಾರ ಬಂದಾಗ ಸದಾ ಆಸಕ್ತಳಾಗಿದ್ದು, ಸಮಯ ,ಸಂದರ್ಭ ಅನುಕೂಲವಾಗಿದ್ದರೆ ಜೈ ಎಂದು ಹೊರಡುವ ಜಾಯಮಾನದವಳಾದ ನನಗೆ, ತೀರಾ ಅನಿರೀಕ್ಷಿತವಾಗಿ, 2018 ರ ಜೂನ್ ತಿಂಗಳಿನ ಮಧ್ಯಭಾಗದಲ್ಲಿ ಪುನ: ಹಿಮಾಲಯದತ್ತ ಹೋಗುವ ಅವಕಾಶ ಒದಗಿ ಬಂತು. ಮೈಸೂರಿನಲ್ಲಿರುವ ಸ್ನೇಹಿತೆ ಭಾರತಿ ಅವರು ತನ್ನ ಬಂಧುಗಳೊಡನೆ ಲೇಹ್ – ಲಡಾಕ್ ಪ್ರವಾಸದ ಪ್ಯಾಕೇಜ್ ಒಂದನ್ನು ಆಗಲೇ ಕಾಯ್ದಿರಿಸಿಕೊಂಡಿದ್ದರು. ಕಾರಣಾಂತರದಿಂದ ಅವರ ಬಂಧುಗಳಿಗೆ ಈ ಬಾರಿ ಪ್ರಯಾಣಿಸಲು ಸಾಧ್ಯವಾಗದೆಂದು ಗೊತ್ತಾಯಿತು.
ನನಗೆ ಎಂದೋ ಓದಿದ್ದ ಭಾರತದ ಅತಿ ಎತ್ತರದಲ್ಲಿರುವ ಕಠಿಣ ಹವಾಮಾನದ ಪರಿಸ್ಥಿತಿಯ ಹಿಮಾಲಯದ ಬರಡುಭೂಮಿಯಾದ ಲಡಾಕ್ ಬಗ್ಗೆ ಕುತೂಹಲವಿತ್ತು. ಹಾಗಾದರೆ, ಖಾಲಿ ಇರುವ ಜಾಗಕ್ಕೆ ನಾನು ಹೋಗಲೇ ಎಂದು ಆಲೋಚಿಸಿ, ಸಂಬಂಧಿತ ಓಯೋ ಟ್ರಾವೆಲ್ಸ್ ನವರನ್ನು ಸಂಪರ್ಕಿಸಿ ಕೂಡಲೇ ಹಣ ಪಾವತಿ ಮಾಡಿಯಾಯಿತು. ಬೆಂಗಳೂರಿನಿಂದ ದಿಲ್ಲಿ ಮಾರ್ಗವಾಗಿ ಲೇಹ್ ತಲಪಿ, ಅಲ್ಲಿ 6 ದಿನಗಳ ವಾಸ್ತವ್ಯ, ಸ್ಥಳೀಯ ಪ್ರೇಕ್ಷಣೀಯ ತಾಣಗಳಿಗೆ ಭೇಟಿ, ವಸತಿ, ಊಟೋಪಚಾರ ಮತ್ತು ಪುನ: ಬೆಂಗಳೂರಿಗೆ ಹಿಂತಿರುಗುವ ವಿಮಾನದ ಟಿಕೆಟ್ ದರ – ಇವಿಷ್ಟನ್ನು ಒಳಗೊಂಡ ಪ್ಯಾಕೇಜ್ ಗೆ 46,000/- ರೂ. ಕೊಟ್ಟಾಯಿತು.
ಇತ್ತೀಚೆಗೆ, ನಮ್ಮೊಂದಿಗೆ ಮುಕ್ತಿನಾಥ ಯಾತ್ರೆಯಲ್ಲಿ ಪಾಲ್ಗೊಂಡಿದ್ದ, ಪುತ್ತೂರಿನಲ್ಲಿರುವ ಭಾವ-ಅಕ್ಕ ಇನ್ನು ಮುಂದೆಯೂ ಹಿಮಾಲಯದ ಕಡೆಗೆ ಹೋಗುವುದಾದರೆ, ತಮಗೂ ತಿಳಿಸಿದರೆ, ಅನುಕೂಲವಾದರೆ ಬರುವೆವೆಂದು ಹೇಳಿದ್ದರು. ಹಾಗಾಗಿ ಅವರಿಗೆ ಫೋನಾಯಿಸಿ, ಟ್ರಾವೆಲ್ಸ್ ನವರಲ್ಲಿಯೂ ವಿಚಾರಿಸಿ, ಸೀಟು ಇದೆಯೆಂದು ಖಾತ್ರಿಯಾಗಿ ಅಂತೂ ದಿಢೀರ್ ಆಗಿ ನಿರ್ಧರಿಸಿ, ಒಂದೇ ವಾರದಲ್ಲಿ ಲೇಹ್ – ಲಡಾಕ್ ಪ್ರವಾಸಕ್ಕೆ ಹೊರಟೇ ಬಿಟ್ಟೆವು.
ಓಯೋ ಟ್ರಾವೆಲ್ಸ್ ನವರ ಸೇವೆ ಸಮಯಕ್ಕೆ ತಕ್ಕುದಾಗಿಲ್ಲ ಎಂದು ಹೊರಡುವ ಮೊದಲೇ ಅನುಭವವಾಯಿತು. ನಾವು ಜೂನ್ 23 ರಂದು ಬೆಂಗಳೂರಿನಿಂದ ಹೊರಟು ದಿಲ್ಲಿ ತಲಪಬೇಕಿತ್ತು ಎಂದು ವೇಳಾಪಟ್ಟಿಯಲ್ಲಿ ನಮೂದಿಸಿದ್ದರಾದರೂ, ಪದೇ ಪದೇ ನೆನೆಪಿಸಿದರೂ, ಮುನ್ನಾ ದಿನದ ವರೆಗೂ ಸರಿಯಾದ ಟಿಕೆಟ್ ನಮ್ಮ ಕೈಗೆ ಬಂದಿರಲಿಲ್ಲ. ಮೊಬೈಲ್ ಮತ್ತು ಇಂಟರ್ನೆಟ್ ಅನ್ನು ಸದಾ ನಂಬಿದರೆ ಕಷ್ಟ, ಅಕಸ್ಮಾತ್ ವಿಮಾನ ನಿಲ್ದಾಣದಲ್ಲಿ ಇಂಟರ್ ನೆಟ್ ಸಿಗದೆ, ವಾಟ್ಸಾಪ್ ನಲ್ಲಿ ಟಿಕೆಟ್ ತೋರಿಸಲಾಗದೆ ಇದ್ದರೆ ಎಷ್ಟು ಮುಜುಗರ ಇತ್ಯಾದಿ ತಳಮಳ ಇದ್ದೇ ಇತ್ತು. ನಮಗೆ ಮುದ್ರಿತ ಟಿಕೆಟ್ ಕೈಯಲ್ಲಿ ಇದ್ದರೇ ಅನುಕೂಲ, ಕನಿಷ್ಟ ಮುನ್ನಾದಿನ ಸಂಜೆಯ ಒಳಗೆ ಟಿಕೆಟ್ ಅನ್ನು ಕಳುಹಿಸಿ ಎಂದು ಗೋಗರೆದರೂ, ಬೈದರೂ ಏನೂ ಪ್ರಯೋಜನವಾಗಲಿಲ್ಲ. “ನಾವು ಟಿಕೆಟ್ ಕಳುಹಿಸುತ್ತೇವೆ, ನೀವು ನಿಶ್ಚಿಂತರಾಗಿರಿ, ನೀವು ಹೊರಡುವ ಮೊದಲು ನಿಮ್ಮ ವಾಟ್ಸಾಪ್ ನಲ್ಲಿ ಟಿಕೆಟ್ ಇರುತ್ತದೆ, ನಾವು ಗ್ರೂಪ್ ಬುಕ್ ಮಾಡಿರುವುದರಿಂದ ಮೊದಲೇ ವೈಯುಕ್ತಿಕ ಟಿಕೆಟ್ ಅನ್ನು ಮೊದಲೇ ಕೊಡಲಾಗುವುದಿಲ್ಲ..” ಇತ್ಯಾದಿ ಸಮಜಾಯಿಶಿ ಕೊಡುತ್ತಿದ್ದರು.
ದುಡ್ಡು ಕೊಟ್ಟ ಮೇಲೆ, ಓಯೋ ಟ್ರಾವೆಲ್ಸ್ ನವರು ಪತ್ತೆಯೇ ಇಲ್ಲ ಎಂಬಂತಿದ್ದರು. ನಾವೇ ಫೋನ್ ಮಾಡಿದರೆ, ನಮಗೆ ಅರ್ಥವಾಗದ ಹಿಂದಿಯಲ್ಲಿ ಒಬ್ಬಾಕೆ ಅರ್ಧಂಬರ್ಧ ಉತ್ತರಿಸುತ್ತಿದ್ದಳು. ಸ್ಪಷ್ಟವಾಗಿ ಇಂಗ್ಲಿಷ್ ನಲ್ಲಿ ಮಾತನಾಡಲು ಆಕೆಗೆ ಬಾರದು. ಇಂಗ್ಲಿಷ್ ಬಲ್ಲ ಯಾರಿಗಾದರೂ ಫೋನ್ ಕೊಡಿ, ನಮಗಾದ ತೊಂದರೆ ಹೇಳಿಕೊಳ್ಳುತ್ತೇವೆ ಅಂದರೆ ಒಬ್ಬಾತನಿಗೆ ಫೋನ್ ಕೊಡುತ್ತಿದ್ದಳು. ಆತ ಮಾತಿನಲ್ಲಿ ಜಾಣನಿದ್ದ, ಆದರೆ ಕಾರ್ಯದಲ್ಲಿ ಶೂನ್ಯ. ಆಕೆ ಈ ನಡುವೆ ಕೆಲಸ ತ್ಯಜಿಸಿದ್ದಳೆಂದು ಆಮೇಲೆ ಗೊತ್ತಾಯಿತು. ಆದರೂ, ಸಂಸ್ಥೆಯ ಇತರರು ಯಾರಾದರೂ ಗ್ರಾಹಕರಿಗೆ ಅನಾನುಕೂಲತೆಯಾಗದಂತೆ ಜವಾಬ್ದಾರಿ ವಹಿಸಬೇಕಿತ್ತು.
ಅನಿರೀಕ್ಷಿತವಾಗಿ ದಕ್ಕುವ ಪ್ರಯಾಣದಲ್ಲಿ ಹೀಗೆ ಅನಾನುಕೂಲವೂ ಬೋನಸ್ ನಂತೆ ಸಿಗುತ್ತದೆ ಎಂದೆನಿಸಿತು. ಕಿರಿಕಿರಿ ಅನುಭವಿಸುತ್ತಲೇ ಪ್ಯಾಕಿಂಗ್ ಮುಗಿಸಿದೆ. ಪುತ್ತೂರಿನಿಂದ ನಮ್ಮ ಭಾವ ಮತ್ತು ಅಕ್ಕ ಮೈಸೂರಿಗೆ ಬಂದು ತಲಪಿದರು. ಕೊನೆಗೂ ಜೂನ್ 22 ರ ರಾತ್ರಿ ನನ್ನ ವಾಟ್ಸಾಪ್ ಗೆ ಟಿಕೆಟ್ ಬಂದಾಗ ನಿರಾಳವಾಯಿತು. 23 ಜೂನ್ ಬೆಳಗ್ಗೆ 05.30 ಗಂಟೆಗೆ, ಮನೆಗೆ ಕಾರು ಬರಹೇಳಿದ್ದೆವು. ನಮ್ಮನ್ನು ಮತ್ತು ಗಳತಿ ಭಾರತಿಯನ್ನು ಒಳಗೊಂಡ ಕಾರು ಬೆಂಗಳೂರಿನ ವಿಮಾನನಿಲ್ದಾಣಕ್ಕೆ ತಲಪುವಾಗ ಗಂಟೆ 10 ಆಗಿತ್ತು.
ಅಂತೂ, 1130 ಗೆ ಹೊರಟ ವಿಮಾನದಲ್ಲಿ ಪ್ರಯಾಣಿಸಿ, ಮಧ್ಯಾಹ್ನ ಮೂರು ಗಂಟೆಯ ಅಂದಾಜಿಗೆ ದಿಲ್ಲಿ ವಿಮಾನನಿಲ್ದಾಣ ತಲಪಿದೆವು. ನಿಗದಿತ ವೇಳಾಪಟ್ಟಿ ಪ್ರಕಾರ, ಅಲ್ಲಿಂದ ನಮ್ಮನ್ನು ಹೋಟೆಲ್ ಅನೂಪ್ ಎಂಬಲ್ಲಿಗೆ ಕರೆದೊಯ್ಯಲು ಟ್ಯಾಕ್ಸಿ ಬರಬೇಕಿತ್ತು. ನಮಗೆ ಕೊಟ್ಟಿದ್ದ ಹೆಸರಿನ ವ್ಯಕ್ತಿ ಕಾಣಿಸಲಿಲ್ಲ. ಫೋನ್ ಮಾಡಿದಾಗ, ಪ್ರಿ-ಪೈಡ್ ಟ್ಯಾಕ್ಸಿ ಯಲ್ಲಿ ಬನ್ನಿ, ನಾವು ಆ ಖರ್ಚನ್ನು ಭರಿಸುತ್ತೇವೆ ಎಂಬ ಉತ್ತರ ಸಿಕ್ಕಿತು. ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದು, ಹೋಟೆಲ್ ಅನೂಪ್ ತಲಪಿದೆವು. ತೀರಾ ಸಾಧಾರಣ ದರ್ಜೆಯ ಹೋಟೆಲ್ ಅದು. ಹೋಟೆಲ್ ನಮ್ಮ ನಿರೀಕ್ಷೆಗೆ ತಕ್ಕಷ್ಟು ಚೆನ್ನಾಗಿರಲಿಲ್ಲ. ದಿಲ್ಲಿಯಲ್ಲಿ ವಿಪರೀತ ಸೆಕೆಯಿತ್ತು. ಎ.ಸಿ.ಯಲ್ಲಿ ಸದ್ದು ಮಾತ್ರ ಬರುತ್ತಿತ್ತು. ಫ್ಯಾನ್ ಇದ್ದರೂ, ತಂಪಾಗಲಿಲ್ಲ. ಹೋಟೆಲ್ ನವರ ಬಳಿಯೂ ಮುನಿಸು ತೋರಿಸಿ, ಇದ್ದುದರಲ್ಲಿ ಉತ್ತಮ ರೂಮ್ ಗಳಿಸಿಕೊಂಡೆವು. “ದುಡ್ಡು ತೆತ್ತಾಗಿದೆ, ಬಂದಾಗಿದೆ, ಇನ್ನು ಯಾರನ್ನೂ ದೂಷಿಸಿ ಏನೂ ಪ್ರಯೋಜನವಿಲ್ಲ, ಇರುವುದಲ್ಲಿ ಹೊಂದಾಣಿಕೆ ಮಾಡಿಕೊಂಡು ಪ್ರವಾಸ ಮುಗಿಸೋಣ, ಇನ್ನು ಮುಂದೆ ಅಪರಿಚಿತ ಟ್ರಾವೆಲ್ಸ್ ಮೂಲಕ ಹೋಗುವುದು ಬೇಡ” ಎಂದು ಆಗಲೇ ತೀರ್ಮಾನಿಸಿದೆವು.
ಅದೇ ಹೋಟೇಲ್ ನಲ್ಲಿ ಒಂದಿಷ್ಟು ಊಟ ತರಿಸಿ ಹೊಟ್ಟೆ ತುಂಬಿಸಿಕೊಂಡು, ಸಂಜೆ ಹೋಟೇಲ್ ನ ಸುತ್ತುಮುತ್ತ ಅಡ್ಡಾಡಿದೆವು. ಇಂಡಿಯಾ ಗೇಟ್ ನ ಬಳಿಗೂ ಹೋಗಿ ಚಿತ್ರ ಕ್ಲಿಕ್ಕಿಸಿದೆವು. ಪುನ: ಹೋಟೆಲ್ ಗೆ ಬಂದು ಸ್ವಲ್ಪ ತಿಂದು ವಿರಮಿಸಿದೆವು. ಮರುದಿನ ಬೆಳಗ್ಗೆ 0800 ಗಂಟೆಗೆ ದಿಲ್ಲಿಯಿಂದ ಲೇಹ್ ಗೆ ಹೊರಡುವ ವಿಮಾನಕ್ಕೆ ನಾವು ಹೊರಡಬೇಕಿತ್ತು. ಅದಕ್ಕಾಗಿ ಟ್ಯಾಕ್ಸಿ ವ್ಯವಸ್ಥೆಯನ್ನು ನಾವೇ ಮಾಡಿಕೊಂಡು, 24 ಜೂನ್ ಬೆಳಗ್ಗೆ ಹೋಟೆಲ್ ಅನೂಪ್ ನಿಂದ ದಿಲ್ಲಿ ವಿಮಾನನಿಲ್ದಾಣಕ್ಕೆ ಹೊರಟೆವು.
(ಮುಂದುವರಿಯುವುದು)
-ಹೇಮಮಾಲಾ.ಬಿ. ಮೈಸೂರು
ಇನ್ನು ಮುಂದಿನ ಪ್ರವಾಸದ ಕತನಕ್ಕೆ ಕಾಯುವೆ
ಲಡಾಕ್ ಪ್ರವಾಸ ಕಥನ ಪ್ರಾರಂಭ..ಆಯಿತು.
ಆರಂಭದಲ್ಲಿನ ಪಟ್ಟಿ ಓದಿದ್ದಾಯಿತು ನಂತರ ದ ಪ್ರವಾಸ.
ಕೇಳುವ ಕುತೂಹಲ.. ಹುಟ್ಟಿದೆ.
ನಿಮ್ಮ ಪ್ರವಾಸ ಲೇಖನಗಳನ್ನು ಓದುವುದೆಂದರೆ ಮನಸಿಗೆ ಆಹ್ಲಾದ. ಬಹಳ ಸುಂದರವಾಗಿದೆ.
ವಾವ್..ಮುಂದಿನ ಸಂಚಿಕೆಗೆ ಕಾಯುವಂತಾಗಿದೆ
ಹಲವು ಕಿರಿಕಿರಿಗಳ ನಡುವೆ ಲಡಾಕ್ ಪ್ರವಾಸ ಪ್ರಾರಂಭವಾಗಿದೆ… ಮುಂದೇನು? ಎನ್ನುವ ಕುತೂಹಲ ಮನವನ್ನು ಹೊಕ್ಕಿದೆ…
ಸೊಗಸಾದ ನಿರೂಪಣೆ … ಓದಿ ಖುಷಿಯಾಯ್ತು.
ಮುಂದೇನು ಎಂದು ಕಾಯುವಂತೆ ಪ್ರವಾಸ ಕಥನದ ಆರಂಭ ಇದೆ
ಚೆನ್ನಾಗಿದೆ
ಅಂಜಲಿ ರಾಮಣ್ಣ
ಕ್ಲಿಷ್ಟಕರ ಹಿಮಾಲಯ ಪ್ರಯಾಣಕ್ಕೆ ಆರಂಭದಲ್ಲೇ ಕಿರಿಕಿರಿಯಾಯಿತಲ್ಲ, ಮುಂದೆ ಹೇಗೋ ಎಂದು ಕಾಯುವಂತಾಗಿದೆ.
ಬರಹವನ್ನು ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.