ಅವಿಸ್ಮರಣೀಯ ಅಮೆರಿಕ-ಎಳೆ 42
ಮಾಯಾಲೋಕ… ವೇಗಸ್
ವೇಗಸ್ ನಲ್ಲಿ ಮೊದಲ ದಿನದ ಬೆಳಗು… ಹೊರಗಡೆಗೆ ಉಲ್ಲಾಸದಾಯಕ ಚುಮುಗುಟ್ಟುವ ಚಳಿಯ ವಾತಾವರಣ. ನಾವು ಹೊರಹೊರಡಲು ಸಜ್ಜಾಗುತ್ತಿದ್ದಂತೆಯೇ, ಇಷ್ಟು ದಿನ ಕಾಣದಿದ್ದ ಅಚ್ಚರಿಯೊಂದು ಕಾದಿತ್ತು! ಊಟದ ಮೇಜಿನ ಮೇಲಿತ್ತು…ಇಡ್ಲಿ, ಉತ್ತಪ್ಪಂ, ಚಟ್ನಿ, ಸಾಂಬಾರ್!! ಅಬ್ಬಾ… ಇದ್ಯಾವ ಮಾಯಾಲೋಕದಿಂದ ಇಳಿದು ಬಂತು ಎಂದು ತಿಳಿಯಲೇ ಇಲ್ಲ! ಆಗಲೇ ಗೊತ್ತಾಯ್ತು ನೋಡಿ…ಅಲ್ಲೇ ಇದ್ದ Indian Hotelನಿಂದ ಅಳಿಯ ತಂದಿದ್ದ! ನಮ್ಮೆಲ್ಲರ ಧನ್ಯವಾದಗಳ ಸುರಿಮಳೆ…ಅವನ ಮೇಲೆ! ಹಲವಾರು ದಿನಗಳಿಂದ ಹುಲ್ಲು ಸಿಗದಿದ್ದ ಹಸುವಿನಂತೆ, ಗಬಗಬನೆ ತಿಂದು ಕ್ಷಣಮಾತ್ರದಲ್ಲಿ ಖಾಲಿ ಮಾಡಿದೆವು… ಬಕಾಸುರ ಕೂಡಾ ಹೀಗೆ ತಿಂದಿದ್ದನೋ ಇಲ್ಲವೋ?! ನಾನಂತೂ, ಸ್ವರ್ಗದ ಅಮೃತ ಕೂಡಾ ಇವುಗಳ ಮುಂದೆ ಬಹಳ ಸಪ್ಪೆ ಅಂದುಕೊಂಡೆ! ನಾವಿದ್ದ ವಸತಿಗೃಹವು ತಾತ್ಕಾಲಿಕವಾಗಿದ್ದು; ಸಂಜೆ ಮೂರು ಗಂಟೆಗೆ ಅದನ್ನು ಬಿಟ್ಟುಕೊಡಬೇಕಾಗಿತ್ತು. ಆದರೆ ನಾವು ಈ ಮೊದಲೇ ಕಾದಿರಿಸಿದ್ದ Polo Towers ಹೋಟೆಲ್ ನಲ್ಲಿ ವಸತಿಯು ಸಂಜೆ 5 ಗಂಟೆ ಮೇಲೆ ಸಿಗುವುದಿತ್ತು. ನಾವು ಬೆಳಗ್ಗೆ ಸುತ್ತಾಡಲು ಹೊರಟರೆ, ರಾತ್ರಿ ಮೇಲೆ ಹೋಟೆಲ್ ಗೆ ತಲಪುವುದರಿಂದ, ನಮ್ಮೆಲ್ಲಾ ಸಾಮಾನುಗಳನ್ನು ಒಟ್ಟುಗೂಡಿಸಿ Polo Towersನ ಲಗ್ಗೇಜ್ ರೂಂನಲ್ಲಿ ಇರಿಸಿ, ನಗರ ಸುತ್ತಲು ಹೊರಟಿತು, ನಮ್ಮ ಕಾರು.
ಹೀಗೆ, ವಾಹನದಿಂದಲೇ ಕುತೂಹಲದಿಂದ ನೋಡುತ್ತಾ ಹೋದಂತೆ, ವಿಶಾಲವಾದ ರಸ್ತೆಯ ಇಕ್ಕೆಲಗಳಲ್ಲಿ ವರ್ಣನಾತೀತ, ವೈಭವೋಪೇತ ದೃಶ್ಯಗಳು ಕಣ್ತುಂಬಿದವು. ಬೇರೇನನ್ನು ನೋಡದಿದ್ದರೂ ವೇಗಸ್ ನ ವೈಭವವನ್ನು ಕಣ್ತುಂಬಿಕೊಳ್ಳಲೆಂದೇ ಜಗತ್ತಿನಾದ್ಯಂತ ಪ್ರವಾಸಿಗರು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಇಂದ್ರನ ಅಮರಾವತಿಯನ್ನೂ ನಾಚಿಸುವಂತಹ ವೈಭವವು ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ. ಜಗತ್ತಿನಲ್ಲಿ ಇಂತಹ ಅದ್ಭುತವಿದೆಯೆಂದು ನೋಡಿದರೆ ಮಾತ್ರ ತಿಳಿಯುವುದೆಂಬ ಮಗಳ ಮಾತು ಸತ್ಯವೆನಿಸಿತು.
ಒಂದು ಕಡೆ ನಮ್ಮ ವಾಹನವನ್ನು ನಿಲ್ಲಿಸಿ, ನಮ್ಮ ವಸತಿಗೃಹದಿಂದ ಗೋಚರಿಸುತ್ತಿದ್ದ Circus Circus ಕ್ಯಾಸಿನೋ (ಜೂಜುಕೇಂದ್ರ)ದ ಒಳಕ್ಕೆ ನುಗ್ಗಿದೆವು. ಇದು 1968ರಲ್ಲಿ ಆರಂಭವಾದಾಗ ಬರೇ 15 ಮಹಡಿಗಳನ್ನು ಹೊಂದಿದ್ದ ಹೋಟೆಲ್ ಮತ್ತು ಕ್ಯಾಸಿನೋ ಆಗಿತ್ತು. ಆದರೆ, ಆಗಾಗ ವಿಸ್ತರಣೆ ಹೊಂದುತ್ತಾ, ಈಗ 35 ಮಹಡಿಗಳನ್ನು ಹೊಂದಿದ್ದು 3,767 ಸುಸಜ್ಜಿತ ಕೋಣೆಗಳನ್ನು ಒಳಗೊಂಡಿದೆ. ಸುಮಾರು 1,25,928 ಚ. ಅಡಿಗಳಷ್ಟು ವಿಸ್ತಾರಕ್ಕೆ ಹರಡಿರುವ ಈ ಕ್ಯಾಸಿನೋದ ಒಡೆತನ ಮತ್ತು ನಿರ್ವಹಣೆ ಫಿಲ್ ರಫಿಲ್ ಎಂಬುವರದ್ದಾಗಿದೆ. ಇದು ಜಗತ್ತಿನ ಅತಿ ದೊಡ್ಡ ಸರ್ಕಸ್ ಕಂಪೆನಿಯನ್ನು ಒಳಗೊಂಡಿರುವುದು ಮಾತ್ರವಲ್ಲದೆ, ಇಲ್ಲಿ ನಿರಂತರ ಸರ್ಕಸ್ ಪ್ರದರ್ಶನವು ಕೂಡಾ ನಡೆಯುತ್ತಿರುತ್ತದೆ.
ಒಳಹೊಕ್ಕಾಗ ನನಗಂತೂ ಒಳಗೊಳಗೇ ಅಳುಕು…ಏನೇನಿದೆಯೋ ಎಂದು! ಆಗ ಬೆಳಗ್ಗೆ ಗಂಟೆ 11 ಆಗಿದ್ದರೂ ಒಳಗಡೆಗೆ ಸೂರ್ಯನ ಬೆಳಕು ಇನಿತೂ ಪ್ರವೇಶಿಸುತ್ತಿರಲಿಲ್ಲ. ಒಳಗಡೆ ಹೋದೊಡನೆ ಬೆಳಕಿನ ಭವ್ಯ ಸ್ವಾಗತ! ಅತ್ಯಂತ ವಿಶಾಲವಾದ ಹಜಾರದಲ್ಲಿ ಮಾತ್ರವಲ್ಲದೆ, ಪೂರ್ತಿ ಕಟ್ಟಡದ ಒಳಗಡೆಗೆ, ಕಣ್ಸೆಳೆಯುವ ದೀಪಾಲಂಕಾರವು ಝಗಝಗಿಸುತ್ತಿತ್ತು. ಒಂದು ಕಡೆಗೆ, ವಿವಿಧ ರೀತಿಯ ನೂರಾರು ಅದೃಷ್ಟದಾಟದ ಮಳಿಗೆಗಳು, ಇನ್ನೊಂದೆಡೆಗೆ ಜೂಜಾಟದ ಯಂತ್ರಗಳು ತಮ್ಮೆಡೆಗೆ ಜನಗಳನ್ನು ಅವ್ಯಾಹತವಾಗಿ ಸೆಳೆಯುತ್ತಿದ್ದವು! ಎಲ್ಲೆಂದರಲ್ಲಿ ಮಕ್ಕಳ ಸುಂದರ ಆಟಿಕೆಗಳು ಸೊಗಸಾಗಿ ಜೋಡಿಸಲ್ಪಟ್ಟರೆ, ಅಲ್ಲೇ ಪಕ್ಕದಲ್ಲಿ ಅವರಿಗಾಗಿ ಅದೃಷ್ಟದಾಟಗಳು ಎಡೆಬಿಡದೆ ನಡೆಯುತ್ತಿದ್ದವು. ನಮ್ಮೂರ ಜಾತ್ರೆಯಂತೆ ಜನರನ್ನು ಕರೆಯುತ್ತಾ, ಆಡಲು ಪ್ರೋತ್ಸಾಹಿಸುತ್ತಾ ಡಾಲರ್ ಗಟ್ಟಲೆ ಹಣವನ್ನು ಜೇಬಿಗೆ ಸೇರಿಸಿಕೊಳ್ಳುತ್ತಿದ್ದರು… ಅದರ ಮಾಲಿಕರು. ಇಲ್ಲಿ, ಹಗಲನ್ನೇ ರಾತ್ರಿಯಾಗಿಸಿ, ಆ ಸುಂದರ ಕಟ್ಟಡದೊಳಗೆ ವೈಭವದ ಸಾಮ್ರಾಜ್ಯ ನಡೆದಿತ್ತು. ಇದರೊಳಗೆ, ಶುಲ್ಕರಹಿತ ಸರ್ಕಸ್ ಇಡೀ ದಿನ ಅರ್ಧ ಗಂಟೆಗೊಮ್ಮೆ, ಪೂರ್ತಿ ವರ್ಷ ಅವ್ಯಾಹತವಾಗಿ ನಡೆಯುತ್ತಿರುವುದು ವಿಶೇಷ. ಇದಕ್ಕಾಗಿ, ಮುಂಭಾಗದಲ್ಲಿರುವ ವಿವರವಾದ ಸಮಯ ಸೂಚಿ ಬಹಳ ಉಪಯೋಗವಾಯ್ತು. ಅಂತೆಯೇ, ಮುಂದಿನ ಪ್ರದರ್ಶನಕ್ಕೆ ಇನ್ನೂ ಸ್ವಲ್ಪ ಸಮಯವಿರುವುದರಿಂದ ಅಲ್ಲೇ ಸುತ್ತಾಡಲು ಹೊರಟೆವು. ಅಳಿಯ ಅದೃಷ್ಟದಾಟದಲ್ಲಿ ಸೋತು ಕೆಲವು ಡಾಲರ್ ಗಳನ್ನು ಕಳಕೊಂಡ. ಉಳಿದ ನಾವಾರೂ ಆ ತಪ್ಪು ಮಾಡಲಿಲ್ಲವೆನ್ನಿ! ಇನ್ನು ಆಟ ಬೇಡವೆಂದು ನಾನು ತಡೆದಾಗ ಮಗಳದು ಸಮಜಾಯಿಸುವ ಉತ್ತರ ಬಂತು…ಅಲ್ಲಿ ಕಳೆಯಲೆಂದೇ ಒಂದಿಷ್ಟು ಹಣವನ್ನು ಕಾದಿರಿಸಿದ್ದರಂತೆ! ಆದರೂ ನನ್ನ ಹೊಟ್ಟೆಯುರಿ ಕಡಿಮೆಯಾಗಲಿಲ್ಲ ನೋಡಿ. ಈ ತರಹದ ಆಟಗಳಲ್ಲಿ; 1, 2, 5… ಹೀಗೆ ಡಾಲರ್ ಹಣವನ್ನು ನಿಗದಿಪಡಿಸಿ, 3, 5, 9…ಬಾರಿ ಅದೃಷ್ಟ ಪರೀಕ್ಷಿಸಲು ಅವಕಾಶ ಕೊಡುವರು. ಒಂದೆರಡು ಡಾಲರ್ ಮಾತ್ರ ಗಳಿಸಿದರೆ, ಹಣ ಕೊಡದೆ, ಅಲ್ಲಿರಿಸಿರುವ ತರೆಹೇವಾರು ಗೊಂಬೆಗಳಿಂದ ಒಂದನ್ನು ಆಯ್ದುಕೊಳ್ಳಲು ಸೂಚಿಸುವರು. ಕೆಲವು ಕಡೆಗಳಲ್ಲಿ ನಮ್ಮ ಅದೃಷ್ಟ ಚೆನ್ನಾಗಿದ್ದರೆ ಒಳ್ಳೊಳ್ಳೆಯ ಸಾಮಗ್ರಿಗಳೂ ಸಿಗುವುದಿದೆ.
ಅಷ್ಟರೊಳಗೆ ಸರ್ಕಸ್ ನೋಡುವ ನಮ್ಮ ಸರದಿ ಬಂತು.. ನಾವು ಅದರ ಒಳಹೊಕ್ಕೆವು. ಮಧ್ಯಭಾಗದಲ್ಲಿ ವೇದಿಕೆಯಿದ್ದು, ಸುತ್ತಲೂ ಸುಮಾರು ನೂರು ಮಂದಿ ಪ್ರೇಕ್ಷಕರಿಗಾಗಿ ಗ್ಯಾಲರಿ ಆಸನದ ವ್ಯವಸ್ಥೆ ಇರುವ ಚಿಕ್ಕದಾದ ಸುಸಜ್ಜಿತ ಥಿಯೇಟರ್ ತುಂಬಿತುಳುಕುತ್ತಿತ್ತು. ಜಾದೂ ತರಹದ ಸರ್ಕಸ್ ಪ್ರದರ್ಶನ ಬಹಳ ವಿಶೇಷವೆನಿಸಿತು. ನೆರೆದ ಪ್ರೇಕ್ಷಕರೊಡನೆ ಸಂಭಾಷಿಸುತ್ತಾ, ತಮಾಶೆ ಮಾಡುತ್ತಾ ಪ್ರದರ್ಶನ ನೀಡುವ ಕಲಾವಿದರ ಚಾತುರ್ಯವನ್ನು ನಿಜವಾಗಿಯೂ ಮೆಚ್ಚಲೇಬೇಕು. ಅಲ್ಲಿಯ ಸುತ್ತಾಟ ಮುಗಿಯುತ್ತಿದ್ದಂತೆಯೇ ನಮ್ಮ ಹೊಟ್ಟೆ ತಾಳಹಾಕಲಾರಂಭಿಸಿತು…ಊಟಕ್ಕಾಗಿ ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ Indian Hotel ಕಾಯುತ್ತಿತ್ತು…ನನಗಂತೂ ಹೆಸರೇ ಬಹಳ ಖುಷಿ ಕೊಟ್ಟದ್ದಂತೂ ಸತ್ಯ!
ಹೌದು… ಅದು ಚಿಕ್ಕದಾಗಿದ್ದರೂ ಅತ್ಯಂತ ಸ್ವಚ್ಛ.. ಒಳಗಡೆಗೆ ಮುಂಭಾಗದಲ್ಲಿತ್ತು ದೀಪ ಬೆಳಗಿ, ಊದುಬತ್ತಿ ಹಚ್ಚಿಟ್ಟ ದೇವರ ಫೊಟೋ! ಅದು ಮುಂಬೈಯವರ ಹೋಟೆಲ್ ಆಗಿತ್ತು… ಅಪರೂಪಕ್ಕೆ ಹಿಂದಿ ಭಾಷೆ ಕೇಳಿ ನಮಗೆಲ್ಲ ಸಂಭ್ರಮ! ಅಲ್ಲಿದ್ದ ಗಿರಾಕಿಗಳೂ ನಮ್ಮ ದೇಶದ ವಿವಿಧ ಭಾಗಗಳಿಂದ ಬಂದವರಾಗಿದ್ದರೂ ಬಹಳ ಆತ್ಮೀಯವಾಗಿ ಬಿಟ್ಟರು. ಬಹಳ ಸಂತಸದಿಂದ ಎಲ್ಲರನ್ನೂ ಮಾತಾನಾಡಿಸಿದ್ದೇ ಮಾತನಾಡಿಸಿದ್ದು! ಅಬ್ಬಾ..ನಿಜವಾಗಿಯೂ ಒಮ್ಮೆಗೆ ನಾವೆಲ್ಲಿರುವೆವೆಂಬುದು ಮರೆತು ಹೋಗಿ, ನಾವು ನಮ್ಮ ದೇಶದಲ್ಲಿರುವಂತೆ ಭಾಸವಾಯಿತೆನ್ನಿ! ಅಲ್ಲಿ ಅಪರೂಪಕ್ಕೆ ಸಿಕ್ಕಿದ ಸ್ವಲ್ಪವೇ ಅನ್ನವನ್ನು ಬೇರೇನೂ ಲೆಕ್ಕಿಸದೆ ಊಟ ಮಾಡಿದ ತೃಪ್ತಿ ನನಗೆ! ನೆನಪಿಗಾಗಿ, ಅಲ್ಲೇ ಪಕ್ಕದಲ್ಲಿದ್ದ ಪುಟ್ಟ ಅಂಗಡಿಯಿಂದ Las Vegas ಚಿತ್ರವಿರುವ ಟೀ ಶರ್ಟ್ ಗಾಗಿ ಹುಡುಕಿದ್ದೇ ಹುಡುಕಿದ್ದು. ಬಹಳ ತುಟ್ಟಿ ಎನಿಸಿದರೂ, ನಮಗದರ ಅಗತ್ಯವಿರುವುದರಿಂದ ಒಂದೆರಡನ್ನು ಹುಡುಕಿ ತೆಗೆಯುವುದರಲ್ಲೇ ಸುಸ್ತು ಹೊಡೆಯಿತು! ಅದಾಗಲೇ ಮಧ್ಯಾಹ್ನ ಗಂಟೆ 2:30 ದಾಟಿದ್ದರೂ ಹಿತವಾದ ಹವೆ.. ಚುರುಗುಟ್ಟುವ ಬಿಸಿಲಿನೊಂದಿಗೇ ತಂಪುಗಾಳಿ ಬೀಸುತ್ತಿತ್ತು.
ಇಲ್ಲಿ ಪ್ರತಿಯೊಂದು ಜೂಜಿನ ಕೇಂದ್ರವೂ ವಿವಿಧ ರೀತಿಯ ಜಗತ್ಪ್ರಸಿದ್ಧ ತಾಣಗಳ ಹೆಸರುಗಳೊಂದಿಗೆ, ಅವುಗಳ ಪ್ರತಿರೂಪದಂತೆ ಕಟ್ಟಡಗಳ ಬಾಹ್ಯ ವಿನ್ಯಾಸಗಳಿರುತ್ತವೆ. ಪ್ರತಿ ಕ್ಯಾಸಿನೋಗಳೂ ಗ್ರಾಹಕರನ್ನು ಸೆಳೆಯಲು ಇಂತಹ ವಿವಿಧ ತಂತ್ರಗಳನ್ನು ಹೂಡುತ್ತವೆ… ಇಂತಹ ಸುಮಾರು 15 ಕ್ಯಾಸಿನೋಗಳಿವೆ. ಸಮಯದ ಅಭಾವದಿಂದಾಗಿ ನಾವು ಎಲ್ಲಾ ಕಡೆಗಳಿಗೆ ಹೋಗುವುದು ಅಸಾಧ್ಯವಾಗಿತ್ತು. ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಕನಿಷ್ಟ 20 ನಿಮಿಷಗಳಷ್ಟು ದೂರ ನಡೆಯಲೇಬೇಕು. ಕನಿಷ್ಟ ನಡಿಗೆಗಾಗಿ, ಅಲ್ಲಲ್ಲಿ ಮೇಲ್ಸೇತುವೆಗಳು, ಲಿಫ್ಟ್ ಗಳು, ಎಲಿವೇಟರ್ ಗಳ ವ್ಯವಸ್ಥೆ! ಆದರೆ ನಡೆದಾಡಲೇ ಕಷ್ಟ..ಎಲ್ಲೆಲ್ಲೂ ನಮ್ಮೂರ ಜಾತ್ರೆಯಂತೆ ಜನಗಳ ಹಿಂಡೇ ಹಿಂಡು! ನಾವಿದ್ದ ಸಾಂತಾಕ್ಲಾರದಲ್ಲಿ ಅತಿ ವಿರಳ ಜನರನ್ನು ಕಂಡ ನನಗೆ ಇದು ನಿಜಕ್ಕೂ ಅಚ್ಚರಿಯೆನಿಸಿತು!
ಹೀಗೆ ಸಾಗುವಾಗ ಕಾಣುವ ಇಡೀ ಪಟ್ಟಣದ ಅಚ್ಚುಕಟ್ಟಾದ ವ್ಯವಸ್ಥೆಯಂತೂ ದಂಗುಬಡಿಸುವಂತಿದೆ! ಈ ಪ್ರದೇಶವಿಡೀ ಮರುಭೂಮಿಯ ಮರಳುಗಾಡಾಗಿತ್ತು ಎಂಬುದನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ! (ದುಬೈಯಂತೆ) ಸ್ವಚ್ಛವಾದ, ವಿಶಾಲವಾದ ಬೀದಿಗಳು, ಇಕ್ಕೆಲಗಳಲ್ಲೂ ಅಷ್ಟೇ ಅಗಲವಾದ ಕಾಲುದಾರಿಗಳು, ಪಕ್ಕಗಳಲ್ಲಿ ಅತ್ಯಂತ ಸುಂದರವಾದ ಹೂಗಿಡಗಳು ಹಾಗೂ ಆಗಸದೆತ್ತರ ಬೆಳೆದು ನಿಂತ ತಾಳೆ ಜಾತಿಯ ಮರಗಳು, ಅಲ್ಲಲ್ಲಿ ಎರಡೂ ಬದಿಗಳಲ್ಲಿ ಕೂಡಲು ಆಸನಗಳು, ಎಲ್ಲೆಂದರಲ್ಲಿ ಕಾಣುವ, ಕಸ ಹಾಕಲೋಸುಗ ಅಲಂಕಾರಿಕವಾಗಿ ಇರಿಸಿದ, ದೊಡ್ಡ ದೊಡ್ಡ ಕಸದ ತೊಟ್ಟಿಗಳು…ಆಹಾ…ಎಲ್ಲವೂ ಕಣ್ತುಂಬುತ್ತವೆ…ನೋಡಿಯೇ ಅನುಭವಿಸಬೇಕು! ಸುಖವಾಗಿ ನಿದ್ರಿಸಿದ ಮಗು, ನಾವು ತಳ್ಳುತ್ತಿದ್ದ ಕೈಗಾಡಿಯಲ್ಲಿ(Stroller) ದ್ದರೆ, ದೊಡ್ದ ಮಗು ನಿರಾತಂಕವಾಗಿ ಓಡಾಡುತ್ತಿತ್ತು…ಆದರೆ ನಾವು, ದಟ್ಟ ಜನಸಂದಣಿಯ ಮಧ್ಯೆ ಜಾಗರೂಕರಾಗಿರಬೇಕಾದುದೂ ಅಷ್ಟೇ ಮುಖ್ಯವಾಗಿತ್ತು. ಮುಂದಕ್ಕೆ ನಾವು ಭವ್ಯವಾದ ಕ್ಯಾಸಿನೊ ಒಂದರ ಒಳಗೆ ಅಡಿ ಇಟ್ಟಾಗ….
(ಮುಂದುವರಿಯುವುದು….)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36336
–ಶಂಕರಿ ಶರ್ಮ, ಪುತ್ತೂರು.
ಅಮೆರಿಕಾ.. ಪ್ರವಾಸ…ನೋಟ…ಊಟ..ಅನುಭವದ..ಅಭಿವ್ಯಕ್ತಿ… ಚೆನ್ನಾಗಿದೆ.. ಮೇಡಂ… ಧನ್ಯವಾದಗಳು.
ನೋಟ, ಊಟ ಚೆನ್ನಾಗಿದೆ!
Beautiful
ವಾವ್ ಅಕ್ಕಾ ಸೂಪರ್ ಪುಣ್ಯ ಮಾಡಬೇಕು ಇಂಥವುಗಳನ್ನು ನೋಡಲು ಸ್ವರ್ಗ ಅಂದರೆ ಇದೆಯಾ