ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 17

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ವೈಜ್ಞಾನಿಕ ಕ್ಷೇತ್ರದಲ್ಲಿ ಸ್ತ್ರೀಯರು : 

ಸ್ತ್ರೀಯರು ಶಿಕ್ಷಣವನ್ನು ಪಡೆಯಲು ಅದರಲ್ಲೂ ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿ ಪಡೆಯಲು ಪೂರಕವಾದ ವಾತಾವರಣ ಎಲ್ಲಾ ದೇಶಗಳಲ್ಲೂ ಇರದಿದ್ದಂತೆ ಬ್ರಿಟಿಷ್‌ ಭಾರತದಲ್ಲಿಯೂ ಇರಲಿಲ್ಲ. ಇಂಥ ಕಾಲಘಟ್ಟದಲ್ಲಿ 1861ರಲ್ಲಿ ಬಸು ಕುಟುಂಬದಲ್ಲಿ ಜನಿಸಿ ವಿವಾಹದ ನಂತರ ಗಂಗೂಲಿ ಕುಟುಂಬಕ್ಕೆ ಸೇರಿದ ಕಾದಂಬಿನಿ 1882ರಲ್ಲಿ ಕಲ್ಕತ್ತೆಯಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ನಂತರ ಪಾಶ್ಚಾತ್ಯ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಲು ಕಲ್ಕತ್ತ ಮೆಡಿಕಲ್‌ ಕಾಲೇಜಿಗೆ ಪ್ರವೇಶ ಪಡೆದರು. 1886ರಲ್ಲಿ ಮೆಡಿಕಲ್‌ ಪದವಿಯನ್ನು ಪಡೆದರು. 

ಸತಿ ಪದ್ಧತಿ, ಬಾಲ್ಯವಿವಾಹ ಮತ್ತಿತರ ಕಿರುಕುಳಗಳು ಸ್ತ್ರೀಯರನ್ನು ಪೀಡಿಸುತ್ತಿದ್ದ ಕಾಲಘಟ್ಟದಲ್ಲಿ ಕಾದಂಬಿನಿ ಹುಡುಗಿಯರಿಗೆ ಪ್ರವೇಶವಿಲ್ಲದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು, ವಿಜ್ಞಾನ ಕ್ಷೇತ್ರದಲ್ಲಿ ಪದವಿ ಪಡೆದರು. ಆನಂತರ ಲೇಡಿ ಡಫ್ರಿನ್‌ ಹಾಸ್ಪಿಟಲ್ ನಲ್ಲಿ 200 ರೂಪಾಯಿಗಳ ಸಂಬಳದೊಂದಿಗೆ ಕೆಲಸಕ್ಕೆ ಸೇರಿದರು. ಅಷ್ಟೇ ಅಲ್ಲದೆ 1892ರಲ್ಲಿ ಉನ್ನತ ಶಿಕ್ಷಣ ಪಡೆಯಲು ಲಂಡನ್ನಿಗೆ ತೆರಳಿದರು. ಪ್ರತಿಷ್ಠಿತ LRCP (Edinburgh), GFPC (Dublin), and LRCS (Glasgow) ಕ್ವಾಲಿಫಿಕೇಷನ್‌ ಗಳೊಂದಿಗೆ ಭಾರತಕ್ಕೆ ಹಿಂದಿರುಗಿ ಖಾಸಗಿಯಾಗಿ ವೈದ್ಯಕೀಯ ಸೇವೆಯನ್ನು ಆರಂಭಿಸಿದರು. 

ಭಾರತದ ಪ್ರಪ್ರಥಮ ಪದವೀಧರೆಯರಲ್ಲಿ ಒಬ್ಬರಾದದ್ದು ಮತ್ತು ಪ್ರತಿಷ್ಠಿತ ಅರ್ಹತೆಗಳ ಪ್ರಮಾಣ ಪತ್ರ ಪಡೆದವರಲ್ಲಿ ಕಾದಂಬಿನಿ ಪ್ರಪ್ರಥಮರಾದದ್ದು; ವಿದೇಶಿ ಅರ್ಹತಾ ಪತ್ರಗಳೊಂದಿಗೆ ಪಾಶ್ಚಾತ್ಯ ವೈದ್ಯಶಾಸ್ತ್ರವನ್ನು ಜನರ ಸೇವೆಗಾಗಿ ಬಳಸಿದ ಪ್ರಪ್ರಥಮ ಏಷ್ಯನ್‌ ಮಹಿಳೆ ಎಂದೂ ಪರಿಗಣಿತರಾದದ್ದು ಕೇವಲ ಸ್ತ್ರೀಯರ ಶೈಕ್ಷಣಿಕ ಪಥದಲ್ಲಿಯ ಗಮನಾರ್ಹ ಸಾಧನೆ ಮಾತ್ತ ಆಗಿರದೆ ಇವರಿಂದ ವಸಾಹತು-ಭಾರತದಲ್ಲಿ ಸ್ತ್ರೀಯರ ವಿಜ್ಞಾನ-ಶಿಕ್ಷಣ ಅಭಿಯಾನ ಆರಂಭವಾಯಿತು. ಈ ಅಭಿಯಾನದ ಯಶಸ್ಸಿನ ಮುಖಗಳು ಹಲವಾರು ಎಂಬುದು ಮುಖ್ಯವಾದ ಸಂಗತಿ:

ಗಂಡ ವಿದ್ಯಾಭ್ಯಾಸ ಮಾಡಿ ಸಂಪಾದನೆಯ ಮಾರ್ಗವನ್ನು ಕಂಡುಕೊಂಡ ನಂತರ ತನ್ನೊಂದಿಗೆ ಸಂಸಾರ ನಡೆಸಲಿ ಎನ್ನುವ ಅಪೇಕ್ಷೆ 1864ರಲ್ಲಿ ಪುಣೆಯಲ್ಲಿ ಜನಿಸಿದ ರುಕ್ಮಾಬಾಯಿಯದು ಮತ್ತು ಆಕೆಯ ತಾಯಿ, ಬಲತಂದೆಯರದು ಆಗಿತ್ತು. ಇದನ್ನು ತಿರಸ್ಕರಿಸಿ ರುಕ್ಮಬಾಯಿಯೊಂದಿಗೆ ಸಂಸಾರ ನಡೆಸುವುದು ತನ್ನ ಹಕ್ಕು ಅದನ್ನು ಕೊಡಿಸಿಕೊಡಬೇಕು ಎಂದು ಆಕೆಯ ಗಂಡ ಭಿಕಾಜಿ ಕೋರ್ಟಿನಲ್ಲಿ ದಾವೆ ಹೂಡಿದರು. ಸ್ತ್ರೀಶಿಕ್ಷಣವನ್ನು ಬಲವಾಗಿ ಬೆಂಬಲಿಸುತ್ತಿದ್ದ ಪರಿಸರದಲ್ಲಿ ಬೆಳೆದ ರುಕ್ಮಬಾಯಿ ವೈದ್ಯಕೀಯ ಶಿಕ್ಷಣವನ್ನು ವಿದೇಶದಲ್ಲಿ ಪಡೆಯಲು ಬಯಸಿದರು, ವೈವಾಹಿಕ ಬದುಕನ್ನು ನಿರಾಕರಿಸಿದರು. ಅವರ ಈ ನಿಲುವಿನ ವಿರುದ್ಧ ಬಲವಾದ ಅಲೆ ಅವರ ಸಮಾಜದಲ್ಲಿ ಇದ್ದಂತೆ ಅವರ ಪರವಾಗಿಯೂ ಇದ್ದುದರಿಂದ ಅವರಿಗೆ ಜೈಲುಶಿಕ್ಷೆಯೂ ದೊರೆಯಲಿಲ್ಲ, ಗೃಹಬಂಧನವೂ ಉಂಟಾಗಲಿಲ್ಲ. ಬದಲಿಗೆ ವಿದೇಶದಲ್ಲಿ ಶಿಕ್ಷಣ ಪಡೆಯುವ ಅವಕಾಶ ದೊರೆಯಿತು! ಅವರು ವೈದ್ಯಕೀಯ ಪದವಿ ಪಡೆದು ಭಾರತದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ ಪ್ರಥಮ ಮಹಿಳೆಯರಲ್ಲಿ ಒಬ್ಬರು ಎಂಬ ಖ್ಯಾತಿಗೆ ಭಾಜನರಾದರು.

ಡಾ.ರುಕ್ಮಾಬಾಯಿ

ಪಾಶ್ಚಾತ್ಯ ಮೆಡಿಕಲ್‌ ಕೋರ್ಸಿಗೆ ಪ್ರವೇಶ ಪಡೆದು ಪ್ರಪ್ರಥಮ ಭಾರತೀಯ ಮಹಿಳಾ ವೈದ್ಯರ ಪಟ್ಟಿಗೆ ಸೇರುವ ಆನಂದೀಬಾಯಿ ಮಹಾರಾಷ್ಟ್ರದಲ್ಲಿ 1865ರಲ್ಲಿ ಜನಿಸಿದರು. ಸ್ತ್ರೀ ಶಿಕ್ಷಣ-ಪರವಾದಿ ಚಿಂತಕ ಗಂಡ ಗೋಪಾಲರಾವ್‌ ಜೋಷಿಯವರ ಪ್ರಬಲವಾದ ಒತ್ತಾಸೆಯಿಂದಾಗಿ ಬಾಂಬೆ ಪ್ರೆಸಿಡೆನ್ಸಿ ಆಫ್‌ ಇಂಡಿಯಾದಲ್ಲಿ ವಿದ್ಯಾಭ್ಯಾಸ ಮಾಡಿ ಪದವೀಧರೆಯಾದರು. ಆನಂತರ 2 ವರ್ಷದ ಮೆಡಿಕಲ್‌ ಪದವಿಯನ್ನು ಯುನೈಟೆಡ್‌ ಸ್ಟೇಟ್ಸ್‌ನ ಫಿಲಡೆಲ್ಫಿಯಾದ Woman’s Medical College of Pennsylvania” ದಲ್ಲಿ ಪಡೆದರು. ಅಪರಿಚಿತ ಮತ್ತು ಅನನುಕೂಲ ಪರಿಸರವಾಗಿದ್ದರೂ ಆನಂದೀಬಾಯಿ 1886ರಲ್ಲಿ ವೈದ್ಯಕೀಯದಲ್ಲಿ ಎಂ.ಡಿ. ಪದವಿಯನ್ನು ಪಡೆದ ನಂತರವೇ ಭಾರತಕ್ಕೆ ಹಿಂದಿರುಗಿದರು. ಮರಣಕಾರಕ ಅನಾರೋಗ್ಯದ ಕಾರಣದಿಂದಾಗಿ 1887ರ ಫೆಬ್ರವರಿಯ ವರೆಗೆ ಮಾತ್ರ ವೈದ್ಯೆಯಾಗಿ ಸೇವೆ ಸಲ್ಲಿಸಲು ಸಮರ್ಥರಾದ ಇವರು ಎಂ.ಡಿ. ಪದವಿ ಪಡೆಯಲು ಸಲ್ಲಿಸಿದ “Obstetrics among the Aryan Hindoos.” ಪ್ರಬಂಧವು ಆಯುರ್ವೇದ ಮತ್ತು ಅಮೆರಿಕನ್‌ ಮೆಡಿಕಲ್‌ ಪಠ್ಯಗಳಲ್ಲಿ ರೆಫೆರೆನ್ಸ್‌ ಪಠ್ಯವಾಗಿ ಮರ್ಯಾದಿತವಾಯಿತು.

1880ರಲ್ಲಿ ಹುಡುಗಿಯರಿಗೆ ಪ್ರವೇಶಾತಿ ಇರದ ಮದ್ರಾಸ್‌ ಮೆಡಿಕಲ್‌ ಕಾಲೇಜಿನಲ್ಲಿ ಅಬಲಾ ಬೋಸ್ ಮೆಡಿಕಲ್‌ ವಿದ್ಯಾರ್ಥಿನಿಯಾಗ ಬಯಸಿದರು. ಪ್ರತಿಕೂಲ ಪರಿಸರವಿದ್ದರೂ ತಮ್ಮ ಈ ಆಸೆಯನ್ನು ಕೈ ಬಿಡಲಿಲ್ಲ. ಮಹೇಂದ್ರ ಪಾಲ್‌ ಸರ್ಕಾರ್‌ ಅವರಿಂದ ಬೆಂಬಲವನ್ನು ಪಡೆದು ಪ್ರವೇಶವನ್ನು ದೊರಕಿಸಿಕೊಂಡರು. ಅನಾರೋಗ್ಯದ ಕಾರಣದಿಂದಾಗಿ ಅವರಿಗೆ ಮೆಡಿಕಲ್‌ ಪದವಿಯನ್ನು ಪಡೆಯಲಾಗಲಿಲ್ಲ. ಆದರೆ ವ್ಯದ್ಯಕೀಯ ವಿಜ್ಞಾನದಲ್ಲಿ ದೃಢವಾದ ಆಸಕ್ತಿಯನ್ನು ಜೀವಂತವಾಗಿರಿಸಿಕೊಂಡಿದ್ದರು ಅದು ಜಗದೀಶ ಚಂದ್ರ ಬೋಸರನ್ನು ಮದುವೆಯಾದ ನಂತರ ಸಮಾಜಮುಖಿಯಾಯಿತು.

ಅದೇ ರೀತಿ ಸರಲಾ ದೇವಿ ಮಹೇಂದ್ರ ಪಾಲ್‌ ಸರ್ಕಾರ್‌ ಅವರ ಸಂಸ್ಥೆಯಲ್ಲಿ ನಡೆಯುವ ಸಂಧ್ಯಾಕಾಲದ ಉಪನ್ಯಾಸಗಳನ್ನು ಕೇಳಲು ಅವಕಾಶವನ್ನು ಕಲ್ಪಿಸಿಕೊಂಡು ಭೌತಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದರು, ವಿಜ್ಞಾನದ ವಿದ್ಯಾರ್ಥಿನಿಯರಾಗಲು ಬಯಸುತ್ತಿದ್ದವರಿಗೆ ಮಾರ್ಗವನ್ನು ತೆರೆದರು. 

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ:  http://surahonne.com/?p=36349

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

3 Responses

  1. ನಾಗರತ್ನ ಬಿ. ಆರ್ says:

    ಮಾಹಿತಿ… ಪೂರ್ಣ.. ಲೇಖನ..
    ಓದಿಸಿಕೊಂಡು..ಹೋಗುತ್ತಿದೆ..
    ಧನ್ಯವಾದಗಳು ಮೇಡಂ

  2. Padmini Hegde says:

    ಧನ್ಯವಾದಗಳು ಮೇಡಂ

  3. ನಯನ ಬಜಕೂಡ್ಲು says:

    Very nice

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: