ಜೇನುಗೂಡು
ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿ
ತಟ್ಟೆಯಾಕಾರದಲಿ ಜೇನುಗೂಡು
ಕಟ್ಟುಪಾಡುಗಳಿರುವ ಕಷ್ಟಕರ ಜೀವನದಿ
ಒಟ್ಟಾಗಿ ಬಾಳುತಿಹ ಚಂದವನು ನೋಡು
ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿ
ಹಡೆವಳೈ ನೂರಾರು ಮಕ್ಕಳನು ತಾನು
ಮಂತ್ರಿ ಮಾಗಧರಿಲ್ಲ ಕಹಳೆ ಓಲಗವಿಲ್ಲ
ಸಾಮ್ರಾಜ್ಯ ಸುಂದರವು ಅದ ನೋಡು ನೀನು
ಅಸಂಖ್ಯ ಆಳುಗಳು ಅರಸುವವು ಸುಮಗಳನು
ಮಕರಂದ ತುಂಬುತಲಿ ಗುಟುಕು ಗುಟುಕಾಗಿ
ಕಾಲಲಿ ಪರಾಗವ ತರುತ ಬೇಸರವಿರದೆ
ಪುಷ್ಪ ಫಲಿತಕೆ ತಾವೆ ಸತತ ನೆರವಾಗಿ
ಅಷ್ಟಕೋನಾಕೃತಿಯ ಅದ್ಭುತವೀ ಗೂಡು
ಅತಿಚತುರ ಶಿಲ್ಪಿಗಳು ಈ ನೊಣಗಳು
ಗೂಡಿನಾ ಮನೆಗಳಲಿ ತುಂಬಿ ತುಳುಕುವ ಮಧುವ
ಹೀರಿ ಬದುಕುವ ಈ ಪುಟ್ಟ ಭ್ರಮರಗಳು
ತುಂಬಿ ನಿಂತಿಹ ಮಧುರ ಮಧುವನ್ನು ತಾ ಬಿಡದೆ
ಪಡೆದು ಬೀಗುವ ಸ್ವಾರ್ಥಿ ಮನುಜರಿಹರು
ಪ್ರಕೃತಿಯೊಡಗೂಡಿ ಬಾಳುವುದೆ ಸಾರ್ಥಕವು
ತಿಳಿಯಬೇಕಿದೆ ಇದನು ಜಗದ ಜನರು
–ಶಂಕರಿ ಶರ್ಮ
ಜೇನಿನ ನಿಸ್ವಾರ್ಥ ಸೇವೆ ಮನುಜನ ಸ್ವಾರ್ಥ ಬದುಕಿನ ಹೊರಣವನ್ನು ಕವನದ ಮೂಲಕ ಪಡಿಮೂಡಿಸಿ.. ಸ್ವಲ್ಪ ಹೊತ್ತು ಯೋಚಿಸಿ ತಮ್ಮ ಜೀವಿತಾವಧಿಯಲ್ಲಿ ಏನು ಮಾಡಬೇಕು ಮಾಡಬಹುದು.. ಎನ್ನುವ ಕಡೆ ಲಕ್ಷ್ಯ ವಹಿಸುವಂತಹ ಸಂದೇಶ ನೀಡಿದೆ.ಧನ್ಯವಾದಗಳು ಮೇಡಂ
ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನಾ ಮೇಡಂ ಅವರಿಗೆ.
ಸುಂದರವಾದ ಕವನ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.
ಒಗ್ಗಟ್ಟಾಗಿ ಬದುಕುವ ಕುರಿತಾಗಿ ಸುಂದರವಾದ ಪಾಠ ಕಲಿಯಬಹುದಾದ ಜೇನ್ನೊಣಗಳ ಜೀವನ ಶೈಲಿಯನ್ನು ಗಮನಿಸದೆ ಅವು ಶೇಖರಿಸಿಟ್ಟ ಮಧುವನ್ನು ದೋಚುವ ಮಾನವ ಎಂಥಹ ಕ್ರೂರಿ? ಸೊಗಸಾದ ಕವಿತೆ
ಸಹೃದಯೀ ಕವನ!
ಆಹಾ….ಚಂದದ ಕವನ
ಜೇನುಗೂಡಿನ, ಜೇನುಹನಿಯಷ್ಟೇ ಮಧುರ ಕವನ