ಪುಸ್ತಕ ಪರಿಚಯ -ಹಗಲು ಹೊಳೆವ ನಕ್ಷತ್ರ
“ಹಗಲು ಹೊಳೆವ ನಕ್ಷತ್ರ” ಆಕರ್ಷಕ ಶೀರ್ಷಿಕೆ ಹಾಗೂ ಮುಗ್ಧ, ತುಂಟ ,ಮುದ್ದುಕೃಷ್ಣ ನಂತಹ ಪುಟ್ಟ ಮಗುವಿನ ಚಿತ್ರದಿಂದ ಕೂಡಿದ ಮುಖಪುಟ ವಿನ್ಯಾಸವನ್ನು ಹೊಂದಿರುವ ಭಾರತಿ ಜಗದೀಶ್ ಕಾಕುಂಜೆ ಅವರ ಕವನ ಸಂಕಲನ.
ಮನಸ್ಸಿನ ಕತ್ತಲೆಯ ಹೊಡೆದೋಡಿಸಿ ಜ್ಞಾನದ ಬೆಳಕನ್ನು ತುಂಬುವಂತೆ ಜ್ಞಾನ ದೇವಿಯ ಅನುಗ್ರಹ ಬೇಡಿ ಬರೆಯಲ್ಪಟ್ಟ ಪ್ರಾರ್ಥನೆ ಬಹಳ ಅರ್ಥಪೂರ್ಣ. ಮಾತಲ್ಲಿ ಅರುಹದಿದ್ದರೂ ಮನದಾಳವನ್ನು ಅರಿಯುವ, ಮೌನದ ಭಾಷೆಯನ್ನು ಅರ್ಥೈಸಿ ಅಂತರಂಗದ ಇಚ್ಛೆಗಳನ್ನು ಪೂರೈಸುವ, ಪ್ರತಿ ನೋವು ನಲಿವಿನಲ್ಲೂ ಸ್ಪಂದಿಸುವ ಬಾಳಸಂಗಾತಿ, ಇನಿಯನ ಬಣ್ಣನೆ ತುಂಬಿದ ಕವನ ಹೊನ್ನ ಚಿತ್ತಾರ .
ಮನಸಿನ ಭಾವನೆಗಳನ್ನ ಅನಾವರಣಗೊಳಿಸುವ ಪರಿಯನ್ನು ಅರಿಯುವಲ್ಲಿ ತೊಡರುತ್ತ ಇರುವಾಗ,ಅಂತರಂಗದ ಭಾವಕ್ಕೆ ಅಕ್ಷರ ರೂಪ ಕೊಡಲು ಹೆಣಗಾಡುತ್ತಿರುವಾಗ, ಪದಗಳ ಹೆಣೆಯಲು ಪರದಾಡುತ್ತಿರುವ ಬಗೆಯನ್ನು ಇಲ್ಲಿ “ಮಾಗಿದ ಕವನ” ವಾಗಿಸಿದ ರೀತಿ ಬಹಳ ಸುಂದರ. ಥಳುಕು ಬಳುಕಿನ ಪ್ರಪಂಚದ ವಾಸ್ತವದ ತುಲನೆ ಇಲ್ಲಿ ಹಿಂದೆ ಬರೆಯಲ್ಪಟ್ಟ ಮಹಾಕಾವ್ಯದ ಪಾತ್ರಗಳೊಂದಿಗೆ ಆಗಿದೆ. ಅಲ್ಲಿ ರಾಕ್ಷಸರು ಇದ್ದರು. ಇಲ್ಲಿ ಮಾನವ ರೂಪದ ದಾನವ. ಇಬ್ಬರ ನಡುವೆಯೂ ಇರುವುದು ಕಾಲದ ವ್ಯತ್ಯಾಸ ಮಾತ್ರ .ಗುಣದಲ್ಲಿ ಅಂದಿನವರು ಇಂದಿನವರು ಸಮಾನ ಅನ್ನುವುದನ್ನು ಸಾರುವ ಕವನ “ಇಂದಿನ ರಾಮಾಯಣ “.
ಹಿಂದಿನ ಕಿರಿಯರ ಬಾಲ್ಯಕ್ಕೂ ಇಂದಿನವರ ಬಾಲ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕುವ ಪದ್ಧತಿಗಿಂತ ದಿನನಿತ್ಯದ ಅತಿಸಾಮಾನ್ಯ ವಿಚಾರಗಳಲ್ಲಿ ಮಕ್ಕಳನ್ನು ಪಳಗಿಸಿ ಶಿಕ್ಷಿತರನ್ನಾಗಿಸುವ ಪದ್ದತಿ ಇತ್ತು. ಆದರೆ ಇಂದು ಮಣ ಭಾರದ ಬ್ಯಾಗುಗಳನ್ನು ಹೊತ್ತು ಸಾಗುವ ಕಂದಮ್ಮಗಳಲ್ಲಿ ಬಹಳ ಚಿಕ್ಕ ಚಿಕ್ಕ ವಿಚಾರಗಳ ಬಗ್ಗೆ ಇರಬೇಕಾದ ಸಾಮಾನ್ಯಜ್ಞಾನದ ಕೊರತೆ ಎದ್ದು ಕಾಣುತ್ತದೆ. ಇದರ ಕುರಿತಾಗಿ ಬರೆಯಲ್ಪಟ್ಟ ಕವನ ಇಂದಿನ ವಾಸ್ತವದ ಚಿತ್ರಣವನ್ನು ನೀಡುತ್ತದೆ.
ಮಾತಿನ ಕುರಿತಾದ ಸುಂದರ ವರ್ಣನೆ. ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನುವ ನಾಣ್ಣುಡಿಯನ್ನು ನೆನಪಿಸುವಂತೆ ಇದೆ. ಎಲ್ಲಾ ಸಂಬಂಧಗಳನ್ನು ಬೆಸೆಯುವುದು, ಕಡಿಯುವುದು ನಾವು ಆಡುವ ಮಾತಿನ ಮೇಲೆಯೇ ನಿರ್ಧರಿತ ಅನ್ನುವುದಂತೂ ಸಾರ್ವಕಾಲಿಕ ಸತ್ಯ. “ಅಮ್ಮ” ಅನ್ನುವುದೊಂದು ಪದ ಮಾತ್ರ ಅಲ್ಲ .ಬಣ್ಣನೆಗೆ ನಿಲುಕದ ತ್ಯಾಗಮಯಿ, ಮಮತಾಮಯಿ ಅವಳು .ಒಂದಷ್ಟು ಸಾಲುಗಳು ಇಲ್ಲಿ ಅಮ್ಮನ ಕುರಿತಾಗಿ ಕವಯಿತ್ರಿಯ ಭಾವವನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿವೆ .
ಕವನ, ಕವಿತೆ ಎಲ್ಲವೂ ಬರೆಯುವವರ ಮನಸ್ಸಿಗೆ ಹಿಡಿಯುವ ಕನ್ನಡಿ ಅಂತಾನೇ ಹೇಳಬಹುದು. ಭಾರತಿ ಜಗದೀಶ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮನಸ್ಸನ್ನು ಹೊಕ್ಕ ಭಾವವನ್ನು ಪದಗಳಲ್ಲಿ ಪೋಣಿಸಿ ಸಂಕಲನ ರೂಪದಲ್ಲಿ ಹೊರತಂದ ರೀತಿ ಈ ಭಾವಗಳು ಹಲವು ಓದುಗರನ್ನು ತಲುಪುವಲ್ಲಿ ಸಹಾಯಕ. ಪ್ರತಿಯೊಂದು ಕವಿತೆಯೂ ಬಹಳ ಸುಂದರವಾಗಿ ಪದಗಳಿಂದ ಅಲಂಕೃತಗೊಂಡಿದೆ. ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಸೆರೆಹಿಡಿಯುವುದೇನು ಸುಲಭದ ಮಾತಲ್ಲ . ಆದರೆ ಭಾರತಿಯವರು ಇದರಲ್ಲಿ ಸಫಲರಾಗಿದ್ದಾರೆ . ಸೊಗಸಾದ ಕವನ ಸಂಕಲನವನ್ನು ಸಾಹಿತ್ಯ ಜಗತ್ತಿಗೆ ನೀಡಿದ ಭಾರತಿ ಜಗದೀಶ್ ಅವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು. ಇನ್ನೂ ಹಲವಾರು ಉತ್ತಮ ಕೃತಿಗಳು ನಿಮ್ಮಿಂದ ರಚಿಸಲ್ಪಡಲಿ ಅನ್ನುವ ಹಾರೈಕೆ .
–ನಯನ ಬಜಕೂಡ್ಲು
ಕವನ ಸಂಕಲನದಲ್ಲಿನ ಕೆಲವು ಕವನಗಳನ್ನು ವಿಶ್ಲೇಷಿಸಿ ವಿವರಿಸಿರುವ ರೀತಿ ಅರ್ಥಪೂರ್ಣ ವಾಗಿದೆ ಮೇಡಂ.
ಧನ್ಯವಾದಗಳು ಮೇಡಂ
nice introduction
ಧನ್ಯವಾದಗಳು ಮೇಡಂ
ಕೆಲವು ಕವನಗಳ ಉತ್ತಮ ವಿಮರ್ಶೆಯೊಂದಿಗೆ ಕವನ ಸಂಕಲವನ್ನು ಪರಿಚಯಿಸಿದ ರೀತಿ ಬಹಳ ಇಷ್ಟವಾಯಿತು. ಧನ್ಯವಾದಗಳು ನಯನಾ ಮೇಡಂ.
ವೈವಿಧ್ಯಮಯ ಆಸಕ್ತಿದಾಯಕ ವಸ್ತುಗಳನ್ನು ಕುರಿತಾದ ಕವನ ಸಂಕಲನದ ಪುಸ್ತಕ ಪರಿಚಯ ಸೊಗಸಾಗಿದೆ.