ಪುಸ್ತಕ ಪರಿಚಯ: ಪಳುವಳಿಕೆ, ಲೇ : ಡಾ.ಜೆ.ಕೆ.ರಮೇಶ

Share Button

ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್” ಎಂದು ಕವಿರಾಜಮಾರ್ಗದಲ್ಲಿ ಪ್ರಸ್ತಾಪಿತವಾಗಿರುವ ಸಾಲು ಅಕ್ಷರಶ: ಅನ್ವಯಿಸುವುದು ಜಾನಪದ ಸಾಹಿತ್ಯಕ್ಕೆ ಎಂದರೆ ಅತಿಶಯೋಕ್ತಿಯಲ್ಲ. ಗ್ರಾಮೀಣರು ಕೃಷಿಕತನದ ಬದುಕಿನ ದುಗುಡ ದುಮ್ಮಾನ ಬೇನೆ ಬೇಸರಿಕೆ ಏರಿಳಿವು ಸಂಭ್ರಮ ಸಡಗರಗಳನ್ನೆಲ್ಲ ಹಾಡಿನ ರೂಪದಲ್ಲಿ ವ್ಯಕ್ಪಡಿಸಿದ್ದಾರೆ. ಮೂಲತ: ಅನಕ್ಷರಸ್ಥರಾಗಿರುವ ಈ ಹಾಡುಗಳ ರಚನಾಕಾರರ ಮಾಗಿದ ಬದುಕಿನ ಅನುಭವವೇ ಈ ಜಾನಪದ ಸಾಹಿತ್ಯದ ಹೂರಣ. ಈ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಸಾಹಿತ್ಯ ಕೃಷಿ ಮಾಡಿರುವವರು ಡಾ.ಜೆ.ಕೆ.ರಮೇಶರವರು. ಅವರ 2020 ರ ಕೃತಿ “ಪಳುವಳಿಕೆ”. ವಿಶಿಷ್ಟ ಎಂದೆನಿಸುವಂತಹ ಶೀರ್ಷಿಕೆ ಕೂಡ ಕೃತಿಯು ಅನಾವರಣಗೊಳಿಸುವ ಜಾನಪದೀಯ ಅಂಶಗಳಿಗೆ ಅನುಗುಣವಾಗಿದೆ. ದೀಪಾವಳಿ ಹಬ್ಬದಲ್ಲಿ ಅಂದವಾಗಿ ಜೋಡಿಸಿಟ್ಟ ಕೃಷಿ ಸಲಕರಣೆಗಳ ಮೇಲ್ಭಾಗದಲ್ಲಿ ಅಡಿಕೆ ದಬ್ಬೆ, ಬಿದಿರುಗಳಗಳಿಂದ ಮಾಡಿದ ಹಂದರದಲ್ಲಿ ಅಡಿಕೆ ಬಾಳೆ ಸೌತೆ ಮುಂತಾದ ಫಲಾವಳಿಗಳನ್ನೆಲ್ಲ ನೇಲಿಸಿರುವುದೇ ಪಳುವಳಿಕೆ. ಸಿವಿಜಿ ಪಬ್ಲಿಕೇಷನ್ಸ್‌ನ ಬೆಳ್ಳಿಹಬ್ಬದ ಅಂಗವಾದ ಪ್ರಕಟಣೆಗಳಲ್ಲೊಂದಾಗಿ ಹೊರಬಂದಿರುವ ಈ ಕೃತಿಗೆ ಜಾನಪದ ವಿದ್ವಾಂಸರಾದ ಡಾ.ತೀ.ನಂ. ಶಂಕರನಾರಾಯಣರವರು ಮುನ್ನುಡಿ ಬರೆದಿದ್ದರೆ, ಖ್ಯಾತ ಸಾಹಿತಿಗಳಾದ ಡಾ. ಮೀರಾಸಾಬಿ ಶಿವಣ್ಣರವರು ಬೆನ್ನುಡಿ ಬರೆದಿದ್ದಾರೆ.

“ಪಳುವಳಿಕೆ” ಹೊತ್ತಗೆಯಲ್ಲಿ ಮೂರು ಬಗೆಯ 12 ಲೇಖನಗಳಿವೆ. ಮೊದಲಿನ ಭಾಗದಲ್ಲಿ ಮಲೆನಾಡಿಗೇ ವಿಶಿಷ್ಟ ಸಂಪ್ರದಾಯವಾದ ‘ಅಂಟಿಗೆ ಪಂಟಿಗೆ’ ಕುರಿತ ಸಾದ್ಯಂತ ವಿಶ್ಲೇಷಣಾತ್ಮಕ ವಿವರಗಳಲ್ಲದೆ ಹೋಳಿ, ಮೊಹರಂ, ಮಾರ್ನವಮಿ ಹಬ್ಬಗಳ ಹಾಡುಗಳು, ಆಚರಣೆ ಕುರಿತ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಶ್ರೀ ಮತಿಘಟ್ಟ ಕೃಷ್ಣಮೂರ್ತಿ ಹಾಗೂ ಪ್ರೊ.ದೇ.ಜವರೇಗೌಡರ ಜಾನಪದ ಕ್ಷೇತ್ರದ ಕೊಡುಗೆ, ಸಾಧನೆಗಳ ವಿವರಗಳಿವೆ. ಮೂರನೆಯ ಭಾಗದಲ್ಲಿ ಶ್ರೀ ಹೊಸತೋಟ ಮಂಜುನಾಥ ಭಟ್ಟರ ಯಕ್ಷಗಾನ ಕ್ಷೇತ್ರದ ಸಾಧನೆ, ಪ್ರೊ.ಶ್ರೀಕಂಠ ಕೂಡಿಗೆಯವರ ಕನ್ನಡ ಲಾವಣಿಗಳು ಹಾಗೂ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ ಎತ್ತಪ್ಪ ಮತ್ತು ವ್ಯಾಸ ಮಂಡಲ ಎಂಬ ಕೃತಿಗಳ ವಿಮರ್ಶೆಗಳಿವೆ.

‘ಜನಪದ’ ಎಂಬ ಮಾತಿಗೆ ಗ್ರಾಮ್ಯ, ನಾಗರಿಕವಲ್ಲದ ಎಂಬ ಅರ್ಥವಿದ್ದು ಈ ಗ್ರಾಮ್ಯತೆಯೇ ಜನಪದ ಕಲೆಯ ಒಂದು ಮುಖ್ಯ ಲಕ್ಷಣವಾಗಿದೆಯೆನ್ನುವ ಲೇಖಕರು ಮಲೆನಾಡ ಜನಪದ ಕಲೆಗಳನ್ನು ಗೀತ, ನೃತ್ಯ, ಅಭಿನಯದ ಪ್ರಕಾರಗಳೆಂಬ ಮೂರು ಗುಂಪುಗಳನ್ನಾಗಿಸಿ ನೋಡುವ ನೋಟವನ್ನಿಲ್ಲಿ ನೀಡಿದ್ದಾರೆ. ಇವುಗಳಲ್ಲಿ ಗೀತ ಪ್ರಕಾರಗಳಲ್ಲಿ ಮಲೆನಾಡಿನಲ್ಲಿ ಅತ್ಯಂತ ಪ್ರಮುಖವಾಗಿರುವುದು ‘ಅಂಟಿಗೆ ಪಂಟಿಗೆ’. ಇದು ಜನಪದ ಕಲೆ ಮತ್ತು ಸಾಹಿತ್ಯ ಪ್ರಪಂಚಕ್ಕೆ ಮಲೆನಾಡಿನ ಕೊಡುಗೆ. “ಅಂಟಿಗೆ ಪಂಟಿಗೆ ಹಾಡು” ಎಂಬ ಅಧ್ಯಾಯದಲ್ಲಿ ಐದು ದಿನಗಳ ದೀಪಾವಳಿ ಹಬ್ಬದಲ್ಲಿ ಮೂರು ರಾತ್ರಿಗಳು ಗಂಡಸರು ತಂಡ ಕಟ್ಟಿಕೊಂಡು ಮನೆಮನೆಗೆ ಗಂಡಸರು ಹೋಗಿ ಹಾಡಿ ದೀಪ ನೀಡುವಾಗ ಹಾಡುವ ಹಾಡುಗಳು, ಈ ಹಾಡುಗಳಲ್ಲಿನ ಸಾಂದರ್ಭಿಕ ಪದಗಳು, ಜಾತಿ ಬೆಡಗುಗಳು ಮುಂತಾದ ವೈವಿಧ್ಯತೆಗಳನ್ನು ವಿವರಿಸಿರುವ ಆಕರ್ಷಕ ರೀತಿ ಓದುಗರನ್ನು ಸೆರೆ ಹಿಡಿದಿಡುತ್ತದೆ. ಅಂಟಿಗೆ ಪಂಟಿಗೆ ಕುರಿತಾಗಿಯೇ “ನೀತ್ಯುಳ್ಳ ಜ್ಯೋತಿ ನಡೆ ಮುಂದೆ” ಎಂಬ ಪುಸ್ತಕವನ್ನು ಈ ಹಿಂದೆಯೇ ಪ್ರಕಟಿಸಿರುವವರು ಲೇಖಕರು. ತಮವನ್ನು ತಿವಿದು, ಅರಿವನ್ನು ಬೆಳಗುವ ಜ್ಯೋತಿಯೇ ಪ್ರಧಾನವಾದ ಅಂಟಿಗೆ ಪಂಟಿಗೆ ಹಾಡುಗಳಲ್ಲಿ ಜ್ಯೋತಿಗೇ ಜಾತಿ ಅಂಟಿಕೊಂಡಿರುವುದರ ಕುರಿತು ಬೆಳಕು ಚೆಲ್ಲುತ್ತಾ ವ್ಯಸನಪಡುತ್ತಾರೆ, ಲೇಖಕರು. ಇಂದಿನ ಯುವ ಜನತೆ ನಿದ್ದೆಗೆಟ್ಟು ಕೈಗೊಳ್ಳಬೇಕಾದ ಈ ಕಲೆಯ ಬಗ್ಗೆ ಅನಾಸಕ್ತಿ ಹೊಂದಿದ್ದು, ಸಾಂಸ್ಕೃತಿಕವಾದ ಅಮೂಲ್ಯ ಆಸ್ತಿಯೊಂದರ ಅಳಿವಿನ ವಾಸ್ತವವನ್ನು ತೆರೆದಿಟ್ಟಿದ್ದಾರೆ. ಅದೇ ರೀತಿ ನವರಾತ್ರಿ ಹಬ್ಬದ ಹೂವಿನ ಕೋಲಿನ ಮಾರ್ನವಮಿ ಪದಗಳು ಕೂಡ ಚೌಪದಿ ರೂಪದ ಸುಲಲಿತ ಸಾಹಿತ್ಯ ಪ್ರಕಾರ. ವಿಜಯನಗರದ ಅರಸರ ಕಾಲದಲ್ಲಿ ಆರಂಭವಾಗಿರಬಹುದಾದ ಈ ಸಂಪ್ರದಾಯ ಮೈಸೂರರಸರಿಂದ ಪೋಷಿಸಲ್ಪಟ್ಟಿತು. ಗುರುಗಳೇ ತಮ್ಮ ಶಿಷ್ಯರನ್ನು ಈ ಹಾಡುಗಳಿಗೆ ಸಿದ್ಧಪಡಿಸುತ್ತಿದ್ದು ಇದು ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿಯೂ, ಗುರು ಶಿಷ್ಯ ಸಾಮರಸ್ಯಕ್ಕೆ ಪೂರಕವಾಗಿಯೂ ಇತ್ತು. ಇದರಲ್ಲಿಯೂ ಹುಡುಗರ ಎರಡು ತಂಡಗಳಲ್ಲಿ ಒಗಟುಗಳನ್ನು ಒಡೆಯುವ ವಿಧಾನವೂ ಇದ್ದಂತಹ ಅತ್ಯಂತ ಸುಂದರವೂ ಶ್ರೀಮಂತವೂ ಆಗಿದ್ದಂತಹ ಕಲೆ ಇಂದು ಸದ್ದಿಲ್ಲದೇ ಕಣ್ಮರೆಯಾಗುತ್ತಿದೆ.

ಉಳಿದಂತೆ ಮಲೆನಾಡಿನ ಕಥನಗೀತೆಗಳು, ಲಾವಣಿಗಳು, ಹಬ್ಬ ಮದುವೆ ಮುಂಜಿಗಳಲ್ಲಿ ಹಾಡುವ ಭಕ್ತಿ ಪ್ರಧಾನವಾದ ಸಂಪ್ರದಾಯದ ಹಾಡುಗಳು, ಜೋಗಿಪದಗಳ ಸಾರವಂತಿಕೆಯನ್ನು ಮುಂದಿಡಲಾಗಿದೆ.

ಎರಡನೆಯದಾದ ನೃತ್ಯ ಪ್ರಕಾರದ ಜನಪದ ಕಲೆಯಲ್ಲಿ ಸಾರ್ವತ್ರಿಕವಾಗಿಯೂ ಸಲ್ಲುವ ಕೋಲಾಟ, ಮರಾಟಿಗರ ಹೋಳಿ ಸಂದರ್ಭದ ಗುಮಟೆ ಕುಣಿತ, ಕುಣುಬಿಗಳ ಮದ್ದಲೆ ಕುಣಿತದ ಬಗ್ಗೆ, ಹೋಳಿ ಹಾಡುಗಳ ಬಗ್ಗೆ ವಿಸ್ತಾರವಾಗಿ ಬಣ್ಣಿಸಿರುವ ಒಂದು ಅಧ್ಯಾಯವೇ ಇದೆ. ಹುಲಿವೇಷ, ಬುಡುಬುಡಕೆಯ ಹಾಲಕ್ಕಿ, ದೊಂಬರಾಟ ಮುಂತಾದ ಕಲೆಗಳು, ಕಲಾವಿದರನ್ನು ಪರಿಚಯಿಸಲಾಗಿದೆ.

ಮೂರನೆಯದಾದ ಅಭಿನಯ ಪ್ರಕಾರದಲ್ಲಿ ಪ್ರಮುಖವಾದ ಯಕ್ಷಗಾನವು ಕರಾವಳಿ ಮೇಳಗಳಿಗೆ ಮಲೆನಾಡು ಸಂಪನ್ಮೂಲದ ಸ್ಥಳವಾಗಿರುವಂತೆಯೇ ಇಲ್ಲಿಯೂ ಹಲವರು ಪ್ರಸಿದ್ಧ ಕಲಾವಿದರು, ಭಾಗವತರು ಇರುವುದನ್ನು ಪ್ರಸ್ತಾಪಿಸುತ್ತಾ ಮಳೆಗಾಲದಲ್ಲಿ ಯಕ್ಷಗಾನವು ತಾಳಮದ್ದಲೆಯಾಗಿ ಪರಿವರ್ತಿತವಾಗಿ ಜನಮನ ರಂಜಿಸುವುದರ ಕುರಿತು ಹೇಳಿದ್ದಾರೆ. ಅಂತೆಯೇ ಬಸವನಾಟ, ಕರಡಿಕುಣಿತ ಮುಂತಾದವುಗಳ ಕುರಿತೂ ಪ್ರಸ್ತಾಪವಿದೆ.

“ಮೊಹರಂ ಹಾಡು” ಎಂಬ ಅಧ್ಯಾಯದಲ್ಲಿ ಮೊಹರಂನ ಮೂಲನೆಲೆ, ಅದು ರೂಢಿಗೆ ಬಂದುದರ ಕುರಿತು ಸವಿಸ್ತಾರವಾಗಿ ಹೇಳಲಾಗಿದೆ. ಮೊಹರಂ ಭಾರತದಲ್ಲಿ ನೆಲೆಗೊಳ್ಳಲು ಕಾರಣಗಳು, ಕರ್ನಾಟಕದಲ್ಲೇಕೆ ಜನಪ್ರಿಯವಾಗಿದೆ ಎಂಬುದನ್ನೆಲ್ಲ ವಿಶ್ಲೇಷಿಸಿದ್ದಾರೆ. ಮೊಹರಂ ಹಾಡುಗಳ ರಚನಾಕಾರರೂ ಅವಿದ್ಯಾವಂತ ಹಳ್ಳಿಗರೇ ಆದರೂ ಕಾವ್ಯ ರಚನಾ ಸಾಮರ್ಥ್ಯ ಹೊಂದಿದ್ದ ಪ್ರತಿಭಾಶಾಲಿಗಳು. ಹಿಂದೂ ರಚನಾಕಾರರೂ ಇದ್ದಾರೆ. ಹಿಂದೂ ಸಮಾಜಕ್ಕೆ ಸೇರಿದ ವಸ್ತುವಿನ ಮೊಹರಂ ಹಾಡುಗಳೇ ಸಾಕಷ್ಟಿವೆ. ಮೊಹರಂ ಹಾಡುಗಳಲ್ಲಿ, ಕುಣಿತಗಳಲ್ಲಿರುವ ವೈವಿಧ್ಯಮಯ ಪ್ರಕಾರಗಳನ್ನೂ ಗುರ್ತಿಸಲಾಗಿದೆ. ಎಲ್ಲ ಜನಪದ ಕಲೆ ಸಾಹಿತ್ಯಗಳಲ್ಲಿ ಆಗಿರುವಂತೆ ಮೊಹರಂ ಹಾಡುಗಳ ಮೇಲೂ ಆಧುನಿಕತೆಯ ಪರಿಣಾಮ ಆಗಿದ್ದು, ಈಗೀಗ ಮೊಹರಂ ಹಾಡುಗಳು ಕಣ್ಮರೆಯಾಗುತ್ತಾ ಒಂದು ಶ್ರೀಮಂತ ಜನಪದ ಸಂಪ್ರದಾಯ, ಕಲೆ, ಸಾಹಿತ್ಯ ಅವನತಿಯ ಹಾದಿ ಹಿಡಿದಿರುವುದರ ಕುರಿತ ನೋವು ವ್ಯಕ್ತವಾಗಿದೆ.

ಪ್ರಾಚೀನವೂ ಗ್ರಾಮ್ಯವೂ ಆದ ಈ ಜನಪದ ಕಲೆಗಳೆಲ್ಲ ನಮ್ಮ ಸಂಸ್ಕೃತಿಯ ದ್ಯೋತಕಗಳೆಂಬ ಒಂದೇ ಕಾರಣಕ್ಕೆ ಅವುಗಳನ್ನು ಪ್ರದರ್ಶನದ ಸರಕುಗಳಂತೆ ಬಳಸಿಕೊಂಡು ವೈಭವೀಕರಿಸುವುದು ಅಪಾಯಕಾರಿ ಎಂದು ಎಚ್ಚರಿಸುತ್ತಾರೆ ಲೇಖಕರು. ಅವು ಎಷ್ಟೇ ಸುಂದರವಾಗಿದ್ದರೂ ಮತ ಮೌಢ್ಯ ಮೂಢನಂಬಿಕೆಗಳನ್ನು ಹೇಳುವಂಥವು, ಜೀವ ವಿರೋಧಿಯಾಗಿರುವಂಥವನ್ನು ತಿರಸ್ಕರಿಸಬೇಕೆಂಬ ಕುವೆಂಪು ಆಶಯದ ಕುರಿತು ಪ್ರಸ್ತಾಪಿಸುತ್ತಾ, ನಾವಿಂದು ಅವುಗಳನ್ನು ಅಂಧಶ್ರದ್ಧೆ, ಮೌಢ್ಯಗಳಿಂದ ಬೇರ್ಪಡಿಸಿ ಮಾರ್ಪಡಿಸಿ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಜನುಮದ ಜೋಡಿ ಚಿತ್ರದಲ್ಲಿ ಕಂಸಾಳೆ ಪದವನ್ನು ಅಳವಡಿಸಿ ಅದಕ್ಕೆ ಪುನರ್ಜನ್ಮ ನೀಡಿದ್ದನ್ನು ಸೂಚಿಸುತ್ತಾ ಅಂತಹ ಪರ್ಯಾಯ ವಿಧಾನಗಳು ಜನಪದ ಕಲೆಗಳನ್ನು ಸಮಕಾಲೀನ ಸಂದರ್ಭದಲ್ಲೂ ಪ್ರಸ್ತುತವಾಗಿಸಬಲ್ಲ ಮಾರ್ಗೋಪಾಯಗಳು ಎಂಬ ಕ್ರಿಯಾಶೀಲ ವಿಧಾನದತ್ತಲೂ ಲೇಖಕರು ಚಿಂತಿಸಿರುವುದು ಜನಪದ ಕಲೆಗಳ ಉಳಿವಿಗಾಗಿ ಪರಿತಪಿಸುವ ಅವರ ಕಳಕಳಿಯ ದ್ಯೋತಕ. ಹೀಗೆ ಕೃತಿಯು ಓದುಗರಲ್ಲಿ ಜನಪದ ಕಲೆಗಳ ಕುರಿತು ಅಕ್ಕರೆ ಆಸ್ಥೆ ಅಭಿಮಾನ ಕಾಳಜಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. “ಪಳುವಳಿಕೆ” ಎಂಬುದು ಪಳೆಯುಳಿಕೆ ಎಂಬುದರ ಗ್ರಾಮ್ಯರೂಪ ಕೂಡ ಎನ್ನುವ ಲೇಖಕರು ಜನಪದ ಕಲೆಗಳು ಪಳೆಯುಳಿಕೆಗಳಾಗದಿರಲೆಂಬ ಆಶಯವನ್ನು ಕೃತಿಯಾದ್ಯಂತ ವ್ಯಕ್ತಪಡಿಸಿದ್ದಾರೆ. “ಮರೆಗೆ ಸರಿಯುತ್ತಿರುವ ಜಾನಪದದ ಒಂದು ಸ್ಮೃತಿ ಚಿತ್ರಕ್ಕೆ ಕೃತಿ ಕನ್ನಡಿ ಹಿಡಿಯುತ್ತದೆ” ಎಂದು ಬೆನ್ನುಡಿಯಲ್ಲಿ ಹೇಳಿರುವ ಮಾತು ಅಕ್ಷರಶ: ನಿಜವಾದುದು.

ಕೃತಿ: ಪಳುವಳಿಕೆ
ಲೇಖಕರು–ಡಾ.ಜೆ.ಕೆ.ರಮೇಶ
ಪುಟಗಳು–140
ಬೆಲೆ–ರೂ.150
ಪ್ರಕಾಶಕರು–ಸಿವಿಜಿ ಪಬ್ಲಿಕೇಷನ್ಸ್
ನಂ.277, ೫ನೇ ಅಡ್ಡ ರಸ್ತೆ,
ವಿಧಾನ ಸೌಧ ಬಡಾವಣೆ,
ಲಗ್ಗೆರೆ, ಬೆಂಗಳೂರು-560 058

ಕೆ.ಆರ್.ಉಮಾದೇವಿ ಉರಾಳ

7 Responses

  1. Anonymous says:

    ಲೇಖನ ಪ್ರಕಟಿಸಿರುವುದಕ್ಕಾಗಿ ಸುರಹೊನ್ನೆ ಬಳಗಕ್ಕೆ ಧನ್ಯವಾದಗಳು.

  2. ನಾಗರತ್ನ ಬಿ. ಅರ್. says:

    ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ ಸಾರ್ ಧನ್ಯವಾದಗಳು.ಓದಬೇಕೆಂಬ ಹಂಬಲ ಹುಟ್ಟಿಸುವಂತಿದೆ.

  3. padmini says:

    ಜನಪದ ಕಲೆಗಳ ಕುರಿತ ಅಕ್ಕರೆಯ ಕನ್ನಡಿ!

  4. ನಯನ ಬಜಕೂಡ್ಲು says:

    ತುಂಬಾ ಸೊಗಸಾಗಿದೆ ಕೃತಿ ಪರಿಚಯ. ಪುಸ್ತಕದ ಕುರಿತಾಗಿ ಕುತೂಹಲ ಮೂಡಿಸಿದೆ

  5. . ಶಂಕರಿ ಶರ್ಮ says:

    ಸೊಗಸಾದ ಕೃತಿಯೊಂದರ ವಿಮರ್ಶಾತ್ಮಕ ಪರಿಚಯವು ಬಹಳ ಚೆನ್ನಾಗಿ ಮೂಡಿಬಂದಿದೆ.

  6. Padma Anand says:

    ಜನಪದ ಕಲೆಯ ಕುರಿತಾದ ವಿವರಣಾತ್ಮಕ ವಿಷಯಗಳನ್ನು ಒಳಗೊಂಡ ಕೃತಿಯ ಪರಿಚಯ ಆಸಕ್ತದಾಯವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: