ದೇವ ದೇವನಾದ ಶ್ರೀಕೃಷ್ಣನ ಜನಕ ವಸುದೇವ

Share Button

ದಶಾವತಾರಗಳಲ್ಲಿ ಎಂಟನೇ ಅವತಾರವೆನಿಸಿದ ಕೃಷ್ಣಾವತಾರವು ಶ್ರೇಷ್ಠವಾದುದು. ಕೃಷ್ಣನ ಜನನದಿಂದ ಹಿಡಿದು ಪೂತನಿ ಸಂಹಾರ, ಗೋವರ್ಧನೋದ್ದಾರ ಕಾಳಿಯ ಮರ್ಧನ ಮೊದಲಾದ ಬಾಲಲೀಲೆಯ ಸಾಹಸಗಳು ಅವತಾರ ಪುರುಷನಿಗಲ್ಲದೆ ಅನ್ಯಥಾ ಸಾಧ್ಯವಿಲ್ಲ ಅಲ್ಲವೇ ?  ದುಷ್ಟ ಸಂಹಾರ, ಶಿಷ್ಟ-ರಕ್ಷಣೆ, ಪಾಂಡವ-ಕೌರವ ಯುದ್ದದಲ್ಲಿ ಪಾಂಡವರ ಪಕ್ಷದಲ್ಲಿದ್ದು ಅರ್ಜುನನ ಸಾರಥ್ಯ, ಇವೆಲ್ಲವುಗಳೂ ಧರ್ಮ ಸಂಸ್ಕೃತಿಯ ಜಾಗೃತಿ, ತತ್ತೋಪದೇಶ, ಲೋಕಕಲ್ಯಾಣಕ್ಕಾಗಿ.

ದುಷ್ಟರು ಮಿತಿ ಮೀರಿದರೆ ಧರ್ಮ ಸಂಸ್ಥಾಪನಾರ್ಥಾಯ ‘ಸಂಭವಾಮಿ ಯುಗೇ ಯುಗೇ’ ಎಂದು ಶ್ರೀಕೃಷ್ಣ, ಅರ್ಜುನನಿಗೆ ಗೀತೆಯಲ್ಲಿ ಹೇಳಿದ್ದಾನೆ. ಧರ್ಮಸೇತುವಿನ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಅವತರಿಸಿ, ಭೂಮಿಯನ್ನು ಬೆಳಗಿಸಿದ ಶ್ರೀಕೃಷ್ಣ ಲೋಕತ್ರಯದ ಉಪಕಾರಕ್ಕಾಗಿ ಆಧ್ಯಾತ ಗ್ರಂಥಗಳ ಮುಕುಟಮಣಿಯೆನಿಸಿ ಮನುಕುಲದ ವಿಶ್ವಕೋಶವೆನಿಸಿದ ಭಗವದ್ಗೀತೆಯನ್ನು ಉಪದೇಶ ಮಾಡಿದ ದೈವ-ಮಾನವ ಕೃಷ್ಣ.ಈ ಅವತಾರ ಪುರುಷನಿಗೆ ಜನ್ಮ ಕೊಟ್ಟವನಾರು? ಆತನೂ ನಮಗೆ ಪ್ರಾತ: ಸ್ಮರಣೀಯನಲ್ಲವೇ ? ಹೌದು, ಸಂಶಯವೇ ಇಲ್ಲ. ಅವನೇ ವಸುದೇವ, ದೇವ ದೇವನಾದ ಶ್ರೀಕೃಷ್ಣನ ಜನಕ. ಇವನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಯದುವಂಶೋತ್ಪನ್ನನಾದ ದೇವಗರ್ಭನ ಮಗ ಶೂರ, ಈತನ ಪತ್ನಿ ಮಾರಿಷೆ. ಈ ದಂಪತಿಗಳ ಸುಪುತ್ರನೇ ವಸುದೇವ. ಇವನು ಜನಿಸಿದ ಸಂದರ್ಭದಲ್ಲಿ, ಮುಂದೆ ಈತನ ಗೃಹದಲ್ಲಿ ಭಗವಂತನ ಅವತಾರವಾಗುವುದೆಂದು  ಯೋಗದೃಷ್ಟಿಯಿಂದ ದೇವತೆಗಳು ತಿಳಿದು ದುಂದುಭಿ ಮೊದಲಾದವುಗಳನ್ನು ಬಾರಿಸಿದರಂತೆ. ಆದುದರಿಂದ ಇವನಿಗೆ ಅನಕದುಂದುಭಿ ಎಂಬ ಹೆಸರಾಯಿತಂತೆ. ಇವನಿಗೆ ಪೌರವಿ,ಮದಿರೆ, ಭದ್ರೆ,  ವೈಶಾಲಿ, ದೇವಕಿ, ಮೊದಲಾದ ಪತ್ನಿಯರಿದ್ದರು. ಇವರಲ್ಲಿ ರೋಹಿಣಿಗೆ ಬಲಭದ್ರ, ಶಠ, ಸಾರಣ, ದುರ್ಮದ, ಮೊದಲಾದ ಮಕ್ಕಳೂ ವೈಶಾಲಿ ಎಂಬವಳಿಗೆ ಕೌಶಿಕನೂ, ದೇವಕಿಗೆ ಕೀರ್ತಿವಂತ, ಸುಷೇಣ, ದಾಯು, ಭದ್ರಸೇನ, ಋಜುದಾಸ, ಭದ್ರದೇವರೆಂಬ ಆರು ಮಂದಿ ಮಕ್ಕಳೂ ಕ್ರಮವಾಗಿ ಹುಟ್ಟಿದರು. ಇವರನ್ನೆಲ್ಲ ಕಂಸ ಕೊಂದನು.

ಅನಂತರ ಏಳನೆಯ ಗರ್ಭವನ್ನು ಅರ್ಧರಾತ್ರಿಯಲ್ಲಿ ಭಗವತ್ ಪ್ರೇರಿತೆಯಾದ ಯೋಗಮಾಯೆ ಆಕರ್ಷಿಸಿ ರೋಹಿಣಿಯ ಉದರದಲ್ಲಿ ಹಾಕಿದಳು. ಆಕರ್ಷಿಸಿ  ಹುಟ್ಟಿದವನಾದ ಬಲರಾಮನಿಗೆ ಸಂಕರ್ಷನೆಂದು ಹೆಸರಾಯಿತು. ಎಂಟನೆಯ ಗರ್ಭದಲ್ಲಿ ಜನಿಸಿದವನೇ ಶ್ರೀಕೃಷ್ಣ,

ವಸುದೇವನ ತಮ್ಮನಾದ ದೇವಭಾಗನಿಗೆ ಭಕ್ತಾಗ್ರೇಸರನೆನಿಸಿದ ಉದ್ದವನು ಜನಿಸಿದನು. ಮಹಾವಿದ್ವಾಂಸನೂ ದೇವಸಮಾನವಾದ ಕೀರ್ತಿಶಾಲಿಯೂ ಆದ ಇವನಿಗೆ ದೇವಶ್ರವ ಎಂಬ ಹೆಸರೂ ಇದೆ. ವಸುದೇವನ ಇನ್ನೊಬ್ಬ ತಮ್ಮನಾದ ಅನಾದೃಷ್ಟಿಗೆ ಅಶ್ಮಕಿ ಎಂಬವಳಲ್ಲಿ ನಿವೃತ್ತ ಶತ್ರು ಎಂಬ ಮಗನಾದನು. ದೇವಶಿವ ಎಂಬ ಸೋದರನಿಗೆ ಶತ್ರುಘ್ನನೆಂಬ ಮಗನು ಹುಟ್ಟಿದನು. ಇವನ ತಂದೆಯು ಯಾವುದೋ ಕಾರಣಕ್ಕಾಗಿ ಅಡವಿಯಲ್ಲಿ ಬಿಟ್ಟು ಅಲ್ಲಿ ಬಿಲ್ಲವರಿಂದ ಪೋಷಿತನಾದುದರಿಂದ ಈತನು ಏಕಲವ್ಯ ಎಂಬ ಹೆಸರಿನಿಂದ ಪ್ರಸಿದ್ಧ ಬಿಲ್ಲುಗಾರನಾದನು. ವಸುದೇವನ ಪತ್ನಿ ದೇವಕಿ. ಇವಳು ದೇವಕನ ಮಗಳು, ಕಂಸನ ತಂಗಿ, ದೇವಕಿಯ  ವಿವಾಹ ಸಂದರ್ಭದಲ್ಲಿ, ‘ದೇವಕಿಯ ಎಂಟನೆಯ ಗರ್ಭದಿಂದ ಸೋದರ ಮಾವನಾದ ಕಂಸನಿಗೆ ಮರಣ’ ಎಂದು ಅಶರೀರವಾಣಿಯಾಯಿತು. ಇದನ್ನಾಲಿಸಿದ ಕಂಸನು ದೇವಕಿಯನ್ನು ಅಲ್ಲಿಯೇ ಕೊಲ್ಲಲು ಮುಂದಾದನು. ಆಗ ವಸುದೇವನು ‘ಬೇಡ… ಬೇಡ… ಅವಳನ್ನು ಕೊಲ್ಲಬೇಡ. ಅವಳಿಗೆ ಹುಟ್ಟಿದ ಮಕ್ಕಳನ್ನೆಲ್ಲ ನಿನಗೆ ಒಪ್ಪಿಸುವೆ’ನೆಂದೂ ಭರಸೆಯಿತ್ತು ತಡೆದನು.

ಕಾರಾಗೃಹದಲ್ಲಿರಿಸಿದ ತುಂಬು ಗರ್ಭಿಣಿ ದೇವಕಿಯೊಂದಿಗೆ ವಸುದೇವನನ್ನೂ ಕೂಡಿ ಹಾಕಿಸಿದ್ದ ಕಂಸ, ಶ್ರಾವಣ ಬಹುಳ ಅಷ್ಟಮಿಯಂದು ರೋಹಿಣಿ ನಕ್ಷತ್ರ ನಡುರಾತ್ರಿಯಲ್ಲಿ ಶ್ರೀಕೃಷ್ಣನ ಜನನವಾಯಿತು. ‘ನಂದಗೋಕುಲದಲ್ಲಿ ಯಶೋಧೆಗೆ ಹೆಣ್ಣು ಮಗು ಜನಿಸಿದೆ. ಅದನ್ನು ಇಲ್ಲಿ ತಂದು ಬಿಡು, ಈ ಮಗುವನ್ನು ಯಶೋದೆ ಬಳಿ ಬಿಡು’ ಎಂಬ ಅಶರೀರವಾಣಿ ವಸುದೇವನಿಗೆ ಕೇಳಿಸಿತು. ಪರಮಾಶ್ಚರ್ಯ!! ಅವನಿಗೆ ಕಟ್ಟಿದ್ದ ಕಬ್ಬಿಣ ಸರಪಳಿಗಳೆಲ್ಲವೂ ತನ್ನಿಂತಾನೇ ಬಿಚ್ಚಲ್ಪಟ್ಟವು. ಬಾಗಿಲುಗಳು ತೆರೆದುಕೊಂಡವು . ಈ ಅದ್ಭುತ ದೃಶ್ಯಗಳನ್ನು ಕಂಡ ವಸುದೇವನಿಗೆ ಈಗ ಜನಿಸಿದ ಮಗುವು ಅವತಾರ ಪುರುಷನೆಂದು ತಿಳಿಯುತ್ತದೆ. ಶಿಶುವನ್ನು ಹೊತ್ತು ಯಮುನಾ ನದಿಯನ್ನು ದಾಟುತ್ತಿರುವಾಗ ಇದ್ದಕ್ಕಿದ್ದಂತೆ ನೀರು ಮೊಣಕಾಲಿನಿಂದ ಕೆಳಗೆ ಬರುತ್ತದೆ.’ದೇವರೊಲಿದರೆ ಯಾವ ಭಯವೂ ಇಲ್ಲ’ ಎಂಬುದಕ್ಕೆ ಈ ಅದ್ಭುತಗಳೆಲ್ಲ ನಿದರ್ಶನಗಳು.

ವಸುದೇವನಿಗೆ ತನ್ನ ಮಕ್ಕಳಾದ ಬಲರಾಮ-ಶ್ರೀಕೃಷ್ಣರು ಪ್ರಕೃತಿ-ಪುರುಷ ಸ್ವರೂಪರೆಂದೂ ಸಾಕ್ಷಾತ್ ಈಶ್ವರ ಸ್ವರೂಪರೆಂದೂ ತಿಳಿದಿರುತ್ತದೆ. ಇದರಿಂದಾಗಿ ಮುಂದೆ ಅವರಿಬ್ಬರೂ ದೊಡ್ಡವರಾದ ಮೇಲೆ ಅವರನ್ನು ಪ್ರೇಮಪೂರ್ವಕವಾಗಿ,ಅಭಿನಂದನಾ ಪೂರ್ವಕವಾಗಿ ಮಾತನಾಡಿಸುತ್ತಾನೆ ವಸುದೇವ. ವಸುದೇವನು ಕುರುಕ್ಷೇತ್ರದಲ್ಲಿ ಪರಮ ಧಾರ್ಮಿಕವಾದ ಯಾಗಯಜ್ಞಗಳನ್ನು ಮಾಡುತ್ತಾನೆ. ಕೃಷ್ಣನನ್ನು  ಬಾಲ್ಯದಲ್ಲಿ ಸಾಕಿ ಸಲಹಿದ ನಂದಗೋಪನನ್ನೂ-ಯಶೋಧೆಯನ್ನೂ ಸನ್ಮಾನಿಸಿಕೊಂಡು ಬಹುಮೂಲ್ಯವಾದ ಆಭರಣ, ವಸ್ತ್ರ, ಉತ್ತಮೋತ್ತಮವಾದ ಸಾಮಗ್ರಿಗಳನ್ನೂ ನೀಡಿ ಗೌರವಿಸುತ್ತಾನೆ.

ದುಷ್ಟರ ಸಂಹಾರ ಮಾಡಿ ಭೂಭಾರ ಇಳಿಸಲು, ಶಿಷ್ಟರ ರಕ್ಷಣೆಗಾಗಿ ಧರೆಯಲ್ಲಿ ಅವತಾರವೆತ್ತಿದ ದೇವ ದೇವೋತ್ತಮನಾದ ಶ್ರೀಕೃಷ್ಣನ ಜನಕ, ವಸುದೇವನ ಸ್ಮರಣೆ ನಮಗೆ ಸದಾ ಬೇಕಲ್ಲ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

3 Responses

  1. ನಯನ ಬಜಕೂಡ್ಲು says:

    ಕೃಷ್ಣನ ಬಗ್ಗೆ ಎಷ್ಟೇ ಗೊತ್ತಿದ್ದರೂ, ಮತ್ತೆ ಓದುವಾಗಲೂ ಬೇಸರ ಅನ್ನಿಸದಂತಹ ಲೇಖನ ಮೇಡಂ ನಿಮ್ಮದು.

  2. ಬಿ.ಆರ್.ನಾಗರತ್ನ says:

    ಪೌರಾಣಿಕ ಕಥೆಗಳನ್ನು ಚೆಂದವಾಗಿ ಚೌಕಟ್ಟಿನಲ್ಲಿ ಕಟ್ಟಿಕೊಡುವ ನಿಮ್ಮ ಬರವಣಿಗೆ ಗೆ ನನ್ನದೊಂದು ನಮನ ಮೇಡಂ.

  3. ಶಂಕರಿ ಶರ್ಮ, ಪುತ್ತೂರು says:

    ದೇವರ ದೇವ ಶ್ರೀಕೃಷ್ಣ ಪರಮಾತ್ಮನ ಬಗ್ಗೆ ತಿಳಿದಿರುವಷ್ಟು ಅವನ ತಂದೆ ವಸುದೇವನ ಬಗ್ಗೆ ನಮ್ಮೆಲ್ಲರಿಗೆ ತಿಳುವಳಿಕೆ ಕಡಿಮೆ. ಅದನ್ನು ತುಂಬಿಕೊಟ್ಟಿತು ತಮ್ಮ ಸೊಗಸಾದ ಲೇಖನ..ಧನ್ಯವಾದಗಳು ವಿಜಯಕ್ಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: