ಬದುಕು ಬದಲಿಸಿದ 2020

Share Button

“ಸ್ನೇಹಿತರೇ, ಬದುಕು ಎಷ್ಟೊಂದು ವಿಚಿತ್ರ ಅಲ್ವಾ?”. ಯಾಕೆ ಈ ರೀತಿ ಹೇಳುತ್ತಿದ್ದಾಳೆ ಅಂದುಕೊಂಡಿರಾ? ಕಾರಣವಂತೂ ಇದ್ದೇ ಇದೆ. ಕಳೆದ ವರ್ಷ “ಮರೆಯಲಾರದ ವರುಷ ಗತಿಸಿ ಹೋಯಿತು” ಎಂದು 2019 ರ ಬಗ್ಗೆ ಲೇಖನ ಬರೆದಿದ್ದೆ. 2019 ನನ್ನ ಪಾಲಿಗೆ ಮರೆಯಲಾರದ ವರುಷವಾಗಿದ್ದರೆ, 2020 ವಿಶ್ವದ ಪ್ರತಿಯೊಬ್ಬರ ಪಾಲಿಗೆ ಮರೆಯಲಾರದ ವರ್ಷವಾಗಿ ಬಿಟ್ಟಿತು. 2020 ಸರಿಯಾಗಿ ಹೆಜ್ಜೆ ಊರುವ ಮೊದಲೇ ಚೀನಾದ ವೂಹಾನಿನಲ್ಲಿ ಕೊರೋನಾ ವೈರಾಣು ಬಗ್ಗೆ ಸುದ್ದಿಗಳು ತೇಲಿಬರುತ್ತಿದ್ದವು. ದೂರದ ಊರಿನಲ್ಲಿ ತಾನೇ? ನಮಗೇನೂ ತೊಂದರೆಯಿಲ್ಲ ಅಂದುಕೊಂಡದ್ದೇ ಬಂತು. ಕಣ್ಣಿಗೆ ಕಾಣಿಸದ ವೈರಾಣು ಜಗತ್ತಿನಾದ್ಯಂತ ತನ್ನ ಪ್ರಭಾವವನ್ನು ತೋರಿಸಿಬಿಟ್ಟಿತು. ಅದೆಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡರು ಅನ್ನುವುದಕ್ಕೆ ಲೆಕ್ಕವಿಡುವುದನ್ನು ಬಿಟ್ಟು ಅದೆಷ್ಟೋ ತಿಂಗಳುಗಳೇ ಕಳೆದು ಹೋದುವು. ಕೊರೋನಾದ ನಡುವೆಯೇ ನಾವೀಗ ಬದುಕುತ್ತಿದ್ದೇವೆ. ಕೊರೋನಾ ಕೊನೆಯಾಗುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ಕೊರೋನಾ ಎರಡನೇ ಅಲೆ ಅಪ್ಪಳಿಸಲಿದೆ ಅನ್ನುವ ಸುದ್ದಿ ಹಳತಾಗುತ್ತಿದೆ. ಬ್ರಿಟನ್ನಿಗೆ ಹೋಗಿ ಬಂದವರಿಂದ ರೂಪಾಂತರಿ ಕೊರೋನಾ ವೈರಸ್ ಹರಡುತ್ತಿದೆ ಅನ್ನುವ ಭಯ ಆವರಿಸುತ್ತಲಿದೆ.

ಹಾಗಾದರೆ 2020 ವರ್ಷ ಹೇಗಿತ್ತು? ಹೊಸತಾಗಿ ಕಲಿತಿದ್ದೇನು? ಕೊರೋನಾದಿಂದ ಜೀವನಶೈಲಿ ಬದಲಾಗಿದೆಯೇ? ಯೋಚನಾಶೈಲಿ ಬದಲಾಗಿದೆಯೇ? ಅಂತೆಲ್ಲಾ ನನ್ನನ್ನೇ ನಾನು ಕೇಳಿಕೊಂಡರೆ ಉತ್ತರ ಹಲವಾರು. ಹೌದು. ನಾನು ಬದಲಾಗಿದ್ದೇನೆ. ನನ್ನ ಯೋಚನೆಗಳು ಬದಲಾಗಿದೆ. ಮೊದಲೆಲ್ಲಾ ಪರಿಚಿತರು ಅಥವಾ ಆತ್ಮೀಯರು ಸಮಾರಂಭಕ್ಕೆ ಕರೆಯಲಿಲ್ಲ ಅಂದರೆ ಬೇಸರಪಟ್ಟುಕೊಳ್ಳುವುದಿತ್ತು. ಈಗ ಹಾಗನ್ನಿಸುವುದೇ ಇಲ್ಲ. ಕರೆಯದಿದ್ದರೆ ಕ್ಷೇಮ ಅಂದುಕೊಳ್ಳುವುದುಂಟು. ಮಾಸ್ಕು, ಸ್ಯಾನಿಟೈಸರ್ ನಿತ್ಯಸಂಗಾತಿಯಾಗಿದೆ. ಅನಗತ್ಯ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಮೊದಲಿನ ಹಾಗೆ ಬೇಕಾದ ಕಡೆಗೆ ಹೋಗಲಾಗುವುದಿಲ್ಲ ಅನ್ನುವ ನೋವು ಕಾಡುವುದಂತೂ ಸತ್ಯ. ನಾವು ಯೋಚಿಸಿದಂತೆ ಬಾಳಿನಲ್ಲಿ ನಡೆಯದು ಅನ್ನುವ ಪರಮಸತ್ಯ ಇನ್ನೂ ಚೆನ್ನಾಗಿ ಅರ್ಥ ಆಗಿದೆ. ಇವತ್ತಿದ್ದ ಹಾಗೆಯೇ ನಾಳೆ ಇರುವುದಿಲ್ಲ. ಈ ಕ್ಷಣ ಮಾತ್ರ ನಮ್ಮದು ಅಂದುಕೊಂಡು ಬದುಕುವ ಪಾಠವನ್ನು 2020 ಹೇಳಿಕೊಟ್ಟಿದೆ.

ಕಾಲೇಜು ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನವನ್ನು ಹಿಡಿದಿಟ್ಟುಕೊಂಡು (ಹಾಗಂತ ಅಂದುಕೊಳ್ಳುವುದರಲ್ಲ್ಲೇನೂ ತಪ್ಪಿಲ್ಲ ತಾನೇ?) ಸೀಮೆಸುಣ್ಣ ಬಳಸಿ ಕರಿಹಲಗೆಯ ಮೇಲೆ ಬರೆದು ಪಠ್ಯವಿಷಯಗಳನ್ನು ವಿವರಿಸುತ್ತಿದ್ದ ದಿನಗಳು, ಪಾಠವನ್ನು ಕೇಳಿ ಅರ್ಥೈಸಿಕೊಂಡ ವಿದ್ಯಾರ್ಥಿಗಳ ಮುಖದಲ್ಲಿ ಮೂಡುವ ಸಮಾಧಾನ…. ಮರೆತೇ ಹೋದ ಹಾಗಿದೆ. ಕೀಬೋರ್ಡ್, ಮೌಸ್ ಬಳಸಿ ಲ್ಯಾಪ್-ಟಾಪಿನಲ್ಲಿ ಪವರ್-ಪೋಯಿಂಟ್ ತಯಾರಿ, ಮೊಬೈಲ್ ಅಥವಾ ಲ್ಯಾಪ್-ಟಾಪ್ ಬಳಸಿ ಗೂಗಲ್ ಮೀಟ್ ಮೂಲಕ ತರಗತಿಯ ಲಿಂಕ್ ಕಳಿಸಿ, ಆ ಲಿಂಕನ್ನು ಬಳಸಿ ತರಗತಿಗೆ ಹಾಜರಾಗುವ ಮಕ್ಕಳು ತದೇಕಚಿತ್ತದಿಂದ ಪಾಠ ಕೇಳುತ್ತಿದ್ದಾರೆ ಅಂತ ಧನಾತ್ಮಕವಾಗಿ ಎಣಿಸಿಕೊಂಡು, ಒಬ್ಬಳೇ ಕುಳಿತು ಪಾಠ ಮಾಡುವ ಆ ಶಿಕ್ಷೆ ಯಾರಿಗೂ ಬೇಡ ಮಾರಾಯರೇ. ಪಾಠದ ಮಧ್ಯದಲ್ಲಿ ಪ್ರಶ್ನೆ ಕೇಳುವಾಗಲೇ ಗೊತ್ತಾಗುವುದು “ಫೋನ್ ಆನ್ ಇಟ್ಟು ವಿದ್ಯಾರ್ಥಿ ಗಾಯಬ್” ಅಂತ! ತರಗತಿ ಮುಗಿಯಿತು ಅಂದರೂ ಕನಿಷ್ಟ ಐದಾರು ವಿದ್ಯಾರ್ಥಿಗಳು ತರಗತಿ ಬಿಟ್ಟು ಹೋಗುವುದೇ ಇಲ್ಲ ಅಂತೀನಿ!

ಪ್ರತಿವರ್ಷ ಎರಡು ಅಥವಾ ಮೂರು ವಿಚಾರಸಂಕಿರಣಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತು. ಆದರೆ ಈ ಸಲ ಸುಮಾರು ನಲ್ವತ್ತರಷ್ಟು ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದೇನೆ (ಆನ್-ಲೈನ್ ಮೂಲಕ). 2020ರಲ್ಲಿ ಸಾಹಿತ್ಯದ ಓದು ಮತ್ತೆ ಬರವಣಿಗೆ ಅಲ್ಲದೆ ಹೊಸಹಾಡಿನ ಕಲಿಕೆ ಮತ್ತು ಹಾಡಿನ ಪ್ರಸ್ತುತಿ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ಉದಯವಾಣಿಯಲ್ಲೊಂದು ಸಣ್ಣಕಥೆ, ಪ್ರಜಾವಾಣಿಯಲ್ಲಿ ಎರಡು ಅನಿಸಿಕೆಗಳು, ಮಂಗಳ ವಾರಪತ್ರಿಕೆಯಲ್ಲೊಂದು ಲೇಖನ ಪ್ರಕಟವಾಗಿದೆ ಅನ್ನುವುದು ಖುಷಿಯ ಸಂಗತಿ. ಪಾಂಚಜನ್ಯ ಕಮ್ಮೂನಿಟಿ ರೇಡಿಯೋ ಹಾಗೂ ಸಿರಿದನಿ ಪಾಡ್-ಕಾಸ್ಟಿನಲ್ಲಿ ಒಂದೊಂದು ಚಿಂತನಶೀಲ ವಿಷಯಗಳು ಪ್ರಸಾರವಾಗಿದೆ. ಗಾಯನ ಸ್ಪರ್ಧೆಯೊಂದರಲ್ಲಿ ಬಹುಮಾನ ಪಡೆದು ಸಂಭ್ರಮಿಸಿದ್ದಕ್ಕೆ (ಅದು ಜೀವಮಾನದ ಮೊದಲ ಸಂಭ್ರಮ)  ಹಾಗೂ ಮುಖಪುಟದ ಒಂದು ಗುಂಪಿನಲ್ಲಿ ವೈಕುಂಠ ಏಕಾದಶಿಯ ದಿನ ಸುಮಾರು ಮೂವತ್ತೈದು ನಿಮಿಷಗಳ ಕಾಲ 8 ದೇವರನಾಮಗಳನ್ನು ಫೇಸ್ಬುಕ್ ಲೈವ್ ಮೂಲಕ ಪ್ರಸ್ತುತಪಡಿಸಿದ್ದಕ್ಕೆ 2020 ಸಾಕ್ಷಿಯಾಗಿದೆ. ನನ್ನ ಉದ್ಯೋಗದ ನಡುವೆ ಸಿಗುವ ಅಲ್ಪ ಸಮಯದಲ್ಲಿ, ಮುಖಪುಟಗಳಲ್ಲಿರುವ ಹಲವು ಸಾಹಿತ್ಯ ಗುಂಪುಗಳಲ್ಲಿ ಹಾಗೂ ಹಾಡುವ ಗುಂಪುಗಳಲ್ಲಿ ನನ್ನನ್ನು ತೊಡಗಿಸಿಕೊಂಡು ಖುಷಿ, ಆತ್ಮಸಂತೋಷ ಅನುಭವಿಸುತ್ತಿರುವುದು 2020ರ ಮಹತ್ತರ ಕೊಡುಗೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಬೇಸರ, ಏಕತಾನತೆಯನ್ನು ಮೆಟ್ಟಿ ನಿಂತು, ಬದುಕನ್ನು ಬಂದ ಹಾಗೆ ಸ್ವೀಕರಿಸುವ ಮನೋಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ ವರ್ಷ 2020. ಕುಟುಂಬ ಸದಸ್ಯರೊಡನೆ ಕಳೆದ ಜಾಸ್ತಿ ಸಮಯ,  ಅನೇಕ ಹೊಸರುಚಿಗಳ ಪ್ರಯೋಗ, ನಿರಂತರ ಓದು ಹಾಗೂ ಬರಹ, ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುವಿಕೆ, ನಿರ್ಲಿಪ್ತತೆಯ ಕಡೆಗೆ ಹೊರಳುವಿಕೆ,…..ಇವೆಲ್ಲವುಗಳಿಗೆ 2020ರಲ್ಲಿ ಬಂದ ಕೋವಿಡ್-2019 ಕಾರಣವಾಯಿತು. ಕೊರೋನಾ ನಿರ್ನಾಮವಾಗಲಿ, ವಿಶ್ವದಲ್ಲೆಡೆ ಜನಜೀವನ ಸಹಜ ಸ್ಥಿತಿಗೆ ಮರಳಲಿ. ಕೊರೋನಾ ಕಲಿಸಿದ ಬದುಕಿನ ಪಾಠಗಳು ಮುಂದಿನ ದಿನಗಳಿಗೆ ದಾರಿ ತೋರುವ ಹಣತೆಗಳಾಗಲಿ ಅನ್ನುವ ಸದಾಶಯ.

-ಡಾ.ಕೃಷ್ಣಪ್ರಭಾ ಎಂ.ಮಂಗಳೂರು

16 Responses

  1. ನಯನ ಬಜಕೂಡ್ಲು says:

    ಬಹಳ ಚಂದ ಹೇಳಿದ್ರಿ ಮೇಡಂ, ನಾವೂ 2020ರಲ್ಲಿ ಕಲಿತ ಪಾಠ ತುಂಬಾ ಇದೆ.

    • KRISHNAPRABHA M says:

      ನಿಮ್ಮ ಮೆಚ್ಚುಗೆಭರಿತ ಪ್ರತಿಕ್ರಿಯೆಗೆ ಧನ್ಯವಾದಗಳು ನಯನಾ

  2. ಬಿ.ಆರ್.ನಾಗರತ್ನ says:

    ಕಲಿತೆ ಪಾಠ ಬದುಕಿ ಅನುಭವದ ಮೊಗ್ಗಲಿನ ಅನಾವರಣ ನಿಮ್ಮ ಲೇಖನ ದಿಲ್ಲಿ ಚೆನ್ನಾಗಿ ಮೂಡಿ ಬಂದಿದೆ.ಮೇಡಂ ಅಭಿನಂದನೆಗಳು.

    • Gayathri P S murty says:

      ಬಹಳ ಅರ್ಥವತ್ತಾಗಿ ಸರಳ ನುಡಿಗಳಲ್ಲಿ ನಿಮ್ಮ ಬರಹ ಇದೆ ಮೇಡಂ. ನೀವು ಬರೆದ ಅಷ್ಟೂ ವಿಷಯಗಳು ಸತ್ಯ ಮತ್ತು 2020ರಾ ಎಲ್ಲರ ಜೀವನ ಆಗಿತ್ತು. ಓದಿ ಖುಷಿಯಾಯ್ತು.

      • KRISHNAPRABHA M says:

        ಓದಿ ನೀವು ಪ್ರತಿಕ್ರಿಯಿಸಿದಾಗ ಮನಸ್ಸಿಗೆ ಆನಂದವಾಗುವುದು. ಧನ್ಯವಾದಗಳು ಗಾಯತ್ರಿ ಅವರಿಗೆ

    • KRISHNAPRABHA M says:

      ಸಿಕ್ಕ ಅಲ್ಪ ಸಮಯದಲ್ಲಿ ಮನಸ್ಸಿಗೆ ಅನ್ನಿಸಿದ್ದನ್ನು ಬರಹರೂಪಕ್ಕೆ ಇಳಿಸುತ್ತೇನೆ. ಮೆಚ್ಚುಗೆಗೆ ಹೃತ್ಪೂರ್ವಕ ವಂದನೆಗಳು ನಾಗರತ್ನ ಅವರೇ

  3. ವಿಜಯಲಕ್ಷ್ಮಿ ಶಿವಪ್ರಸನ್ನ says:

    ನಿಮ್ಮ ೨೦೨೦ ರ ಸಿಹಿಕಹಿ ಅನುಭವಗಳ ಬಗ್ಗೆ ಬಹಳ ಆಪ್ತವಾಗಿ ಬರೆದಿದ್ದೀರಿ ಅಕ್ಕ.ಖುಷಿಯಾಯ್ತು

    • KRISHNAPRABHA M says:

      ನನ್ನ ಲೇಖನ ಮೆಚ್ಚಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  4. Dharmanna dhanni says:

    ವಿಚಾರಗಳು ಅರ್ಥಪೂರ್ಣವಾಗಿವೆ. ಧನ್ಯವಾದಗಳು

    • KRISHNAPRABHA M says:

      ಧನ್ಯೋಸ್ಮಿ. ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು

  5. ಸಂತೋಷ್ ಕುಮಾರ್ ಶೆಟ್ಟಿ says:

    ಬದುಕು ಬದಲಿಸಿದ 2020… ಅದೊಂದು ಉತ್ತಮ ಶೀರ್ಷಿಕೆ. ಲೇಖನ ವನ್ನು ಅದರ ಮಿತಿಗೆ ಅನುಸಾರವಾಗಿ ಸಂಕ್ಷಿಪ್ತ ಗೊಳಿಸಿದಿರಿ ಅನ್ನಿಸಿತು. Forth gear ನಲ್ಲಿ ಚಲಿಸುತ್ತಿರುವ ಗಾಡಿಗೆ ಒಮ್ಮೆಲೆ ಬ್ರೇಕ್ ಹಾಕಿದ್ದೀರಿ ; ಹಲವರ ಮೇಲೆ ಹಲವು ರೀತಿಯ ಪರಿಣಾಮ ಬೀರಿದ ವರ್ಷ ಅದು; ಅದನ್ನೂ ಕ್ಯಾಪ್ಚರ್ ಮಾಡಿದ್ದಲ್ಲಿ….. ಸುಂದರ ಲೇಖನಕ್ಕೆ ಇನ್ನಷ್ಟು ಸೊಬಗು ನೀಡುತ್ತಿತ್ತೇನೋ..ಅನ್ನಿಸಿತು.

    • KRISHNAPRABHA M says:

      ೨೦೨೦ ವರ್ಷದ ಬಗ್ಗೆ ಬರೆಯಹೋದರೆ ಪುಟಗಳೂ ಜಾಸ್ತಿ ಬೇಕು, ಸಮಯವೂ ಜಾಸ್ತಿ ಬೇಕು. ಯಾರೂ ಊಹಿಸಿಯೂ ಇಲ್ಲದ ಪಾಠಗಳನ್ನು ಕಲಿತಿದ್ದಾರೆ. ನನ್ನ ಅನುಭವಗಳನ್ನು ಸಹಾ ಸಂಕ್ಷಿಪ್ತಗೊಳಿಸಿಯೇ ಬರೆದೆ

  6. ಶಂಕರಿ ಶರ್ಮ, ಪುತ್ತೂರು says:

    ಹಿಂದೆ ಸರಿದ, ಅತಿ ದೀರ್ಘವೆನಿಸಿ ಮನುಜಕುಲಕ್ಕೆ ಸವಾಲಾಗಿ ನಿಂತ ವರ್ಷದ ಬಗ್ಗೆ ಮಾಡಿದ ಸಿಂಹಾವಲೋಕನ ಬಹಳ ಚೆನ್ನಾಗಿದೆ.. ಆತ್ಮೀಯವಾಗಿದೆ. ಹೆಚ್ಚಿನ ಓದುಗರ ಮನದ ಮಾತೇ ನಿಮ್ಮ ಲೇಖನದಲ್ಲಿ ಒಡಮೂಡಿದೆ . ‌ಪ್ರತಿಯೊಬ್ಬರೂ ದೀರ್ಘ ಲೇಖನ ಬರೆಯಬಲ್ಲ ಕಟುವರ್ಷವಾಗಿ,, ಪಾಠ ಕಲಿಸಿ ನೇಪಥ್ಯಕ್ಕೆ ಸರಿದ 2020ರ ಬಗೆಗಿನ ತಮ್ಮ ಸಾಲುಗಳು ಅರ್ಥಪೂರ್ಣ..ಧನ್ಯವಾದಗಳು.

    • KRISHNAPRABHA M says:

      ತುಂಬಾ ಸುಂದರವಾಗಿ ನಿಮ್ಮ ಪ್ರತಿಕ್ರಿಯೆ ನೀಡಿರುವಿರಿ. ಇಡೀ ಲೇಖನವನ್ನು ಎರಡು ವಾಕ್ಯಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದೀರಿ.ವಂದನೆಗಳು ಶಂಕರಿ ಅಕ್ಕ

  7. Hema says:

    ಸೊಗಸಾದ ಬರಹ. ಇರುವುದರಲ್ಲಿ ನೆಮ್ಮದಿ ಕಂಡುಕೊಳ್ಳಲು ಕಲಿಸಿದ ವರ್ಷವಿದು.

  8. Malathi jain says:

    ನಿಮ್ಮ ಸಿಹಿಕಹಿ ಅನುಭವ ಬಹಳ ಚಂದ ಬರೆದಿರುವಿರಿ. ಅಭಿನಂದನೆಗಳು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: