ಮುಖಕವಚವೂ, ಲಾವಂಚದ ಬೇರೂ…..

Share Button

ಮುಖಕವಚಕ್ಕೂ, ಲಾವಂಚದ ಬೇರಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತ ಯೋಚಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಓದಿ.

ವಿಶ್ವವ್ಯಾಪಿಯಾಗಿರುವ ಕೊರೋನಾ ಕಾರಣದಿಂದಾಗಿ, ಪ್ರತಿಯೊಬ್ಬರ ಬದುಕಿನಲ್ಲಿ ಕಂಡು ಕೇಳರಿಯದ ಬದಲಾವಣೆಗಳು. ಬದುಕಿನ ಶೈಲಿ ಬದಲಾಗುತ್ತಿದೆ. ಸುರಕ್ಷತಾ ಕ್ರಮವಾಗಿ ಮುಖಕವಚ ಧರಿಸುವುದು, ಸ್ಯಾನಿಟೈಸರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬದುಕಿನ ಭಾಗವಾಗಿದೆ. ಸ್ವಹಿತ, ಪರಹಿತ, ಲೋಕಹಿತಕ್ಕಾಗಿ ಅನುಸರಿಸಬೇಕಾದ ಅನಿವಾರ್ಯ ಬದಲಾವಣೆಗಳು. ಉದ್ಯೋಗಕ್ಕೆ ಹೋಗುವವರಿಗಂತೂ ದಿನವಿಡೀ ಮುಖ ಕವಚ ಧರಿಸಬೇಕಾದ ಅನಿವಾರ್ಯತೆ. ತುಸು ಕಿರಿ ಕಿರಿ ಎನಿಸಿದರೂ ವೈಯಕ್ತಿಕ ಹಾಗೂ ಪರರ ಆರೋಗ್ಯದ ಹಿತದೃಷ್ಟಿಯಿಂದ ಮುಖಕವಚ ಧಾರಣೆ ಮಾಡಲೇ ಬೇಕಾಗಿದೆ. ಇಡೀ ದಿನ ಒಂದೇ ಮುಖಕವಚ ಧರಿಸಿದೆವು ಎಂದಿಟ್ಟುಕೊಳ್ಳೋಣ. ಮುಖಕವಚದೊಳಗೆ ನಮ್ಮ ಉಸಿರಿನ ವಾಸನೆಯೇ ನಮಗೆ ಅಸಹನೀಯವಾಗುತ್ತದೆ. ಅದಕ್ಕೆಂದೇ ಕೆಲವರು ದಿನಕ್ಕೆ ಎರಡು, ಮೂರು ಮುಖಕವಚ ಬಳಸುವುದುಂಟು.

ಲಾವಂಚದ ಬೇರು

ಒಂದು ಗೃಹೋಪಯೋಗಿ ವಸ್ತುಗಳ ಮಳಿಗೆಗೆ ಭೇಟಿಯಿತ್ತಾಗ, ಪರಿಸರ ಸ್ನೇಹಿ ಮುಖಕವಚ ಕಣ್ಣಿಗೆ ಬಿತ್ತು. ಶುದ್ಧ ಹತ್ತಿಯ ಬಟ್ಟೆಯಿಂದ ತಯಾರಿಸಿದ ಮುಖಕವಚ. ಅದರ ಒಳಭಾಗದಲ್ಲೊಂದು ಕಿಸೆ. ಮುಖಕವಚಕ್ಕೆ ಕಿಸೆಯೇ ಎಂದು ಹುಬ್ಬೇರಿಸಬೇಡಿ. ಆ ಕಿಸೆಯ ಒಳಗೆ ಲಾವಂಚದ ಬೇರನ್ನು ಹಾಕಿ ಇಟ್ಟಿದ್ದರು. ಕೇವಲ ಲಾವಂಚದ ಬೇರು ಮಾತ್ರವಲ್ಲ, ಪರಿಮಳಯುಕ್ತ ಔಷಧೀಯ ಗಿಡಗಳಾದ ತುಳಸಿ, ಪುದೀನಾ ಎಲೆಗಳನ್ನು ಕೂಡಾ ಆ ಮುಖಕವಚದ ಕಿಸೆಯ ಒಳಗೆ ಇಡಬಹುದು ಎನ್ನುವ ವಿವರಣೆ ನೀಡಿದರು. ಆ ಮುಖಕವಚವನ್ನು ಖರೀದಿಸಿ ತಂದದ್ದೂ ಆಯಿತು. ದಿನವೂ ಬಳಸುವ ಒಗೆದಿಟ್ಟ ಮುಖಕವಚಗಳ ಜೊತೆ ತೆಗೆದಿರಿಸಿದ್ದೂ ಆಯಿತು.

ಮರುದಿನ ಉದ್ಯೋಗಸ್ಥಳಕ್ಕೆ ಹೊರಟಾಗ ಹೊಸ ಮುಖಕವಚವನ್ನು ಬಳಸಲು ಮನಸ್ಸಾಗಲಿಲ್ಲ. ಹಳೆಯ ಮುಖಕವಚವನ್ನೇ ಹಾಕಿಕೊಂಡಾಗ ಲಾವಂಚದ ಸುವಾಸನೆ ತನ್ನ ಇರುವಿಕೆಯನ್ನು ತಿಳಿಯಪಡಿಸಿತ್ತು. ಹೊಸ ಮುಖಕವಚದೊಳಗಿದ್ದ ಲಾವಂಚದ ಬೇರಿನ ಸುವಾಸನೆ ಎಲ್ಲಾ ಮುಖಕವಚಗಳಿಗೂ ಹರಡಿತ್ತು. ಇಡೀ ದಿನವೂ ಆಹ್ಲಾದದ ಅನುಭೂತಿ, ಉಸಿರಿನ ವಾಸನೆಯಿಲ್ಲ, ತಾಜಾತನದ ಅನುಭವ, ಮನಸ್ಸಿಗೆ ಖುಷಿ.  ಕೊರೋನಾ

ಕಾರಣದಿಂದ  ವಿವಿಧ ವಿನ್ಯಾಸದ, ವಿವಿಧ ರೀತಿಯ ಮುಖಕವಚಗಳನ್ನು ಧರಿಸುವಾಗಲೂ ಕಾಡಿದ್ದ ಸಮಸ್ಯೆಗೆ ಉತ್ತರ ದೊರಕಿತ್ತು. ಒಗೆದು ಒಣಗಿಸಿದ ಮುಖಕವಚಗಳ ಜೊತೆ ಸ್ವಲ್ಪ ಲಾವಂಚದ ಬೇರುಗಳನ್ನು ಇಟ್ಟರಾಯಿತು. ಲಾವಂಚದ ಬೇರು ಸುವಾಸನಾಯುಕ್ತ ಹಾಗೂ  ಅಗಾಧ ಔಷಧೀಯ ಗುಣಗಳ ಆಗರ.

ಲಾವಂಚದ ಬೇರಿನ  ಕಿರುಪರಿಚಯ: ಹುಲ್ಲಿನ ಜಾತಿಗೆ ಸೇರಿದ ಸಸ್ಯ. ರಾಮಂಚ, ರಾಮಚ್ಚೆ, ಮುಡಿವಾಳ, ವೆಟಿವೆರ್ ಬೇರು, ಖಸ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಸಸ್ಯ ಮಜ್ಜಿಗೆಹುಲ್ಲಿನ ಜಾತಿಗೆ ಸೇರಿದೆ. ಮಣ್ಣಿನ ಸವಕಳಿಯನ್ನು ತಡೆಯಬಲ್ಲ ಸಾಮರ್ಥ್ಯ ಅಲ್ಲದೆ ನೀರನ್ನು ಹಿಡಿದಿಡುವ ಗುಣಗಳಿಂದಾಗಿ ಲಾವಂಚದ ಗಿಡ ಕೃಷಿಕರ ಆಪ್ತ ಮಿತ್ರ ಎಂದರೂ ತಪ್ಪಿಲ್ಲ. ಇದರ ಬೇರು ಸುವಾಸನಾಯುಕ್ತವಾಗಿದ್ದು, ಹಲವು ಔಷಧೀಯ ಗುಣಗಳನ್ನು ಹೊಂದಿದೆ.  ಲಾವಂಚದ ಬೇರನ್ನು ಕುದಿಸಿ ಬೇರ್ಪಡಿಸಿ ತೆಗೆದ ಸುವಾಸನಾ ದ್ರವ್ಯವು ಸ್ನಾನದ ಸಾಬೂನು, ಸುಗಂಧದ್ರವ್ಯ, ಅಗರಬತ್ತಿ, ಸಂಸ್ಕರಿತ ಆಹಾರವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ನಮ್ಮ ಹಿಂದಿನ ತಲೆಮಾರಿನವರು ಈ ಬೇರನ್ನು ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದರು. ಕುಡಿಯುವ ನೀರಿಗೆ, ಬಿಸಿನೀರಿಗೆ ಲಾವಂಚದ ಬೇರನ್ನು ಹಾಕುತ್ತಿದ್ದರು. ಸ್ನಾನ ಮಾಡುವ ಬಿಸಿ ನೀರಿಗೂ ಇದರ ಬೇರು ಹಾಕುತ್ತಿದ್ದರು. ಸ್ನಾನ ಮಾಡುವಾಗ ಮೈ ಉಜ್ಜಲು ಸಹಾ ಲಾವಂಚದ ಬೇರುಗಳನ್ನು ಕೆಲವೆಡೆ ಬಳಸುತ್ತಿದ್ದರು. ದೇಹದ/ಕೊಠಡಿಯ ಉಷ್ಣತೆಯನ್ನು ಕಡಿಮೆ ಮಾಡುವ ಗುಣ ಈ ಬೇರು ಹೊಂದಿದೆ. ಹಾಗೆಯೇ ನೋವು ನಿವಾರಕ ಗುಣ ಈ ಬೇರಿಗಿದೆ. ಕ್ರಿಮಿನಾಶಕ ಗುಣವನ್ನೂ ಹೊಂದಿರುವ ಈ ಬೇರುಗಳನ್ನು ತಮ್ಮ ಬೆಲೆಬಾಳುವ ರೇಷ್ಮೆ ಸೀರೆಗಳ, ಮಗುಟಗಳ ಜೊತೆ  ಇಟ್ಟು, ಜಿರಳೆ ಹಾಗೂ ಗೆದ್ದಲುಗಳಿಂದ ಸಂರಕ್ಷಿಸುತ್ತಿದ್ದರು. ನಮ್ಮ ಹಿರಿಯರ ಅಮೋಘ ಬುದ್ಧಿಶಕ್ತಿಗೆ ತಲೆಬಾಗಿ ನಮಿಸಲೇ ಬೇಕು!

ಲಾವಂಚ -ಹುಲ್ಲು ಜಾತಿಯ ಸಸ್ಯ

ಮಾನಸಿಕ ಖಿನ್ನತೆಯನ್ನು ದೂರ ಮಾಡುವ ಶಕ್ತಿಯೂ ಲಾವಂಚದ ಬೇರಿಗಿದೆಯಂತೆ! ಆಯುರ್ವೇದ ಔಷಧಿ ಅಂಗಡಿಗಳಲ್ಲಿ ಈ ಬೇರು ಸಿಗುತ್ತದೆ. ತಮ್ಮ ತಮ್ಮ ಮನೆಗಳಲ್ಲಿಯೂ ಈ ಗಿಡವನ್ನು ಬೆಳೆಸಬಹುದು. ಹಾಗಾದರೆ ಇನ್ನೇಕೆ ತಡ? ನಿಮಗೆ ಸಾಧ್ಯವಾದರೆ, ಪರಿಸರಸ್ನೇಹಿ ಮುಖಕವಚ ತಯಾರಿಸಿ. ಸಮಯವಿಲ್ಲದಿದ್ದರೆ ಚಿಂತಿಸಬೇಡಿ. ಒಗೆದು ಒಣಗಿಸಿದ ಮುಖಕವಚಗಳ ಜೊತೆ ಸ್ವಲ್ಪ ಲಾವಂಚದ ಬೇರುಗಳನ್ನು ಇಟ್ಟು ಬಿಡಿ. ಉಲ್ಲಾಸಕರ ಉಸಿರು ಮುಖಕವಚದೊಳಗೆ ಸಂಚರಿಸಿ ತಾಜಾತನದ ಅನುಭವ ಪಡೆಯೋಣ ಆಗದೇ? ಏನಂತೀರಾ?

-ಡಾ.ಕೃಷ್ಣಪ್ರಭಾ ಎಂ., ಮಂಗಳೂರು

18 Responses

  1. ಆಶಾ ನೂಜಿ says:

    ಸುಪರ್ ವಿವರಣೆ ಯುಕ್ತ ಬರಹ

  2. Hema says:

    ಸಕಾಲಿಕ, ಉಪಯುಕ್ತ ಮಾಹಿತಿ

    • KRISHNAPRABHA M says:

      ಲೇಖನ ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿರುವ ನಿಮಗೆ ಧನ್ಯವಾದಗಳು ಅಕ್ಕ

  3. Sunanda k says:

    ನಮ್ಮ ಮನೆಯಲ್ಲಿ ಲಾವಂಚದ ಒಂದು ಗಿಡ ಇದೆ.ಅದರ ಬೇರನ್ನು ತೆಗೆಯುವ ಸಮಯ ಯಾವುದು ಅಂತ‌ಗೊತ್ತಿಲ್ಲ.ಅದನ್ನು ಮುಖ ಕವಚಕ್ಕೂ ಬಳಸ ಬಹುದೆಂಬ. ಮಾಹಿತಿ ಕೊಟ್ಟಿದ್ದೀರಿ..ಧನ್ಯವಾದಗಳು

    • KRISHNAPRABHA M says:

      ನಾನೂ ಆ ಬಗ್ಗೆ ಜಾಸ್ತಿ ತಿಳಿದುಕೊಂಡಿಲ್ಲ. ಮೆಚ್ಚುಗೆಗೆ ಧನ್ಯವಾದಗಳು ಅಕ್ಕ

  4. ಬಿ.ಆರ್.ನಾಗರತ್ನ says:

    ಅತ್ಯುತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಅಭಿನಂದನೆಗಳು ಮೇಡಂ.

    • KRISHNAPRABHA M says:

      ಮೆಚ್ಚುಗೆಯ ಮಾತುಗಳಿಗೆ ತುಂಬು ಹೃದಯದ ಧನ್ಯವಾದಗಳು

  5. ನಯನ ಬಜಕೂಡ್ಲು says:

    ಹೊಸ ವಿಚಾರವನ್ನೊಳಗೊಂಡ, ಮಾಹಿತಿಪೂರ್ಣ ಲೇಖನ ಚೆನ್ನಾಗಿದೆ.

  6. Very informative and useful article….

  7. ಹರ್ಷಿತಾ says:

    ಹೊಸ ವಿಧದ ಆರೋಗ್ಯಸ್ನೇಹಿ ಮುಖಕವಚವನ್ನು ಪರಿಚಯಿಸಿದ್ದೀರಿ… ಧನ್ಯವಾದಗಳು

    • KRISHNAPRABHA M says:

      ಹೊಸತನವನ್ನು ಹುಡುಕುವ ಮನುಷ್ಯನ ಬುದ್ಧಿವಂತಿಕೆಗೆ ತಲೆದೂಗಲೇ ಬೇಕು

  8. Thrishanth Kumar says:

    ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು

  9. KRISHNAPRABHA M says:

    ಮೆಚ್ಚುಗೆಗೆ ಧನ್ಯವಾದಗಳು

  10. ಶಂಕರಿ ಶರ್ಮ, ಪುತ್ತೂರು says:

    ನಮ್ಮಲ್ಲಿ ಲಾವಂಚ ಬೇರಿನ ಉಪಯೋಗವಿದೆ. ಬಟ್ಟೆ ಕಪಾಟಿನೊಳಗೆ ಅದಿರಲೇಬೇಕು. ಕುಡಿಯುವ ನೀರಿಗೆ ಹಾಕುವುದು ನಡೆದೇ ಇದೆ. ಮಳೆಗಾಲ ಮುಗಿದು ಬೇಸಿಗೆ ಬಂದ ಬಳಿಕ ಯಾವಾಗ ಬೇಕಾದರೂ ಸಣ್ಣ ಬೇರುಗಳನ್ನು ಬೇರ್ಪಡಿಸಿ ಉಳಿದ ಗಡ್ಡೆಯನ್ನು ಪುನಃ ನೆಡಬಹುದು. ನಮ್ಮಲ್ಲಿ ಇನ್ನು ಮುಖಕವಚವನ್ನೂ
    ಪರಿಮಳಯುಕ್ತವನ್ನಾಗಿಸುತ್ತೇವೆ. ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: