ಆನೆ ಸಾಕಲು ಹೊರಟವಳೊಂದಿಗೆ ಒಂದು ನಡಿಗೆ
ಕೊಡಗು ಮತ್ತು ದ. ಕ. ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದಲ್ಲಿದ್ದುಕೊಂಡು ತನ್ನ, ಸ್ವಾನುಭವ, ಪ್ರಾಮಾಣಿಕ , ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತ ಹೆಸರು ಶ್ರೀಮತಿ ಸಹನಾ ಕಾಂತಬೈಲು. ಇತ್ತೀಚೆಗೆ ಬಲು ಪ್ರಚಲಿತದಲ್ಲಿರುವ ಅವರ ಕೃತಿ ’ಆನೆ ಸಾಕಲು ಹೊರಟವಳು ’ . ಪುಸ್ತಕದ ತಲೆ ಬರಹ ನೋಡಿ ಇದೆಂತಾ ಆನೆ ಸಾಕಲು ಹೊರಟಿರುವುದು ಅಂತ ನೀವು ಭಯ ಬೀಳುವುದ್ದಕ್ಕೆ ಮುಂಚೆ ಒಂದೆರಡು ಸಾಲು ಈ ಕೃತಿಯ ಕುರಿತು ಹೇಳಬೇಕೆನ್ನಿಸಿದೆ.
ಈ ಕೃತಿ ಓದಿಯಾದ ಮೇಲೆ ಬದುಕಿನ ಕುರಿತು ಭಯ ನಿವಾರಣೆಗೆ, ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆಯಿದು ಎಂದು ಹೇಳಿದರೆ ಅತಿಶಯೋಕ್ತಿಯೆನ್ನಿಸಲಾರದು. ವಿಶಿಷ್ಟ ಶೀರ್ಷಿಕೆಯ ವಿಭಿನ್ನ ಅರ್ಥ ಕೊಡುವ ಈ ಸಾಲೇ ಹೇಳುವಂತೆ, ಒಂದು ಕಡೆ ಇದು ಆನೆಯನ್ನು ಸಾಕಲು ಹೊರಟವಳ ಕತೆಯಾದರೆ ಮತ್ತೊಂದು ಕಡೆಯಲ್ಲಿ ನೆಮ್ಮದಿಯನ್ನು ಅರಸುತ್ತಾ ಹೊರಡುವುದು ಎನ್ನುವ ಅರ್ಥವೂ ಇದೆ. ’ಆನೆ ’ ಪದಕ್ಕಿರುವ ಈ ವಿಶಾಲ ಅರ್ಥವ್ಯಾಪ್ತಿ ನನ್ನನ್ನು ಅಚ್ಚರಿಗೊಳಿಸಿ ಹಲವು ಬಗೆಯಲ್ಲಿ ಇಲ್ಲಿಯ ಬರೆಹಗಳನ್ನು ಗ್ರಹಿಸಲು ಸಾಧ್ಯವಾಯಿತು. ಈ ಪುಸ್ತಕದಲ್ಲಿರುವ ಇಡೀ ಬರಹಗಳ ಒಟ್ಟು ಸಾರ ನೆಮ್ಮದಿಯನ್ನು ಅರಸುವುದೇ ಆಗಿದೆ. ಅಂದರೆ ನೆಮ್ಮದಿ ಬೇರೆಲ್ಲೂ ಇಲ್ಲ ಒಳಗಣ್ಣು ತೆರೆದು ನೋಡಿದರೆ ನೆಮ್ಮದಿಯ ಸಂತುಷ್ಟ ಬದುಕು ನಮ್ಮೊಳಗೆ, ನಾವು ನಿಂತ ಜಾಗದಲ್ಲಿ, ನಮ್ಮ ಸುತ್ತಮುತ್ತಲೇ ಇದೇ ಅನ್ನುವಂತದ್ದು ನಮ್ಮ ಗ್ರಹಿಕೆಗೆ ದಕ್ಕುತ್ತದೆ. ಹಳ್ಳಿಯಲ್ಲಿ ನಿಂತು ಕೊಂಡು ನಾವು ಪೇಟೆಯನ್ನು ಯಾವಾಗ ಧ್ಯಾನಿಸುತ್ತೇವೋ, ಅಥವಾ ಹಳ್ಳಿಯಿಂದ ವಿಮುಖರಾಗಿ ಪೇಟೆಯ ಕಡೆಗೆ ಮುಖ ಮಾಡಿದೆವೋ, ಮಣ್ಣಿನಿಂದ ಕಿತ್ತು ತಂದ ಆಹಾರ, ಗಿಡ ಮೂಲಿಕೆಗಳ ಬಿಟ್ಟು, ಫಳ ಫಳ ಗಾಜಿನ ಬಿರಡೆಯೊಳಗಿಂದ, ಪಾರದರ್ಶಕ ಪ್ಲಾಸ್ಟಿಕ್ ಪೊಟ್ಟಣದೊಳಗಿನ ಆಹಾರಕ್ಕೆ ನಾವು ಒಗ್ಗಿಕೊಂಡೆವೋ ಅಲ್ಲಿಗೆ ನಮ್ಮ ಸುಖ ಸಂತೋಷ ಅರ್ಥ ಕಳೆದುಕೊಂಡು, ನಮ್ಮೊಳಗಿನ ಆರೋಗ್ಯ, ನೆಮ್ಮದಿ ಮರೀಚಿಕೆಯಾಗಿದೆ ಎನ್ನುವುದ್ದನ್ನ ಲೇಖಕಿ ಬಲ್ಲರು. ಅದಕ್ಕೆಲ್ಲಾ ಅವರು ಹೇಳಿಕೆಗಳನ್ನು ಕೊಡದೆ ಇಲ್ಲಿಯ ಬರೆಹಗಳ ಮೂಲಕ ಸೂಚ್ಯವಾಗಿ ಕಟ್ಟಿ ಕೊಡಬಲ್ಲರು. ಈ ಕೃತಿ ನಾಡಿನ ಪ್ರಮುಖ ದಿನಪತ್ರಿಕೆಯಾದ ಉದಯವಾಣಿಯಲ್ಲಿ ಪ್ರಕಟಗೊಂಡ ಅಂಕಣ ಬರಹಗಳ ಗುಚ್ಚ. ಈಗಾಗಲೇ ಈ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ ಮತ್ತು ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಲಭ್ಯವಾಗಿ ಕೃತಿಗೆ ಮತ್ತಷ್ಟು ಮಹತ್ತನ್ನು ಒದಗಿಸಿಕೊಟ್ಟಿದೆ.
ದ್ವಿತೀಯ ಪಿ.ಯು.ಸಿ ಯನ್ನಷ್ಟೇ ಪೂರೈಸಿದ ಹುಡುಗಿಯೊಬ್ಬಳು ಹದಿನೇಳು ವರುಷಕ್ಕೇ ಮದುವೆಯಾಗಿ ಕೃಷಿಕನ ಮಡದಿಯಾಗಿ ಹಳ್ಳಿಯ ಮೂಲೆಯನ್ನು ಸೇರುವುದು,ಮನೆ ತೋಟ ಎರಡನ್ನೂ ನಿಭಾಯಿಸುತ್ತಾ, ಓದಿನ ಹಸಿವು, ಬರವಣಿಗೆಯ ತುಡಿತವನ್ನು ಒಡಲೊಳಗೆ ಬಚ್ಚಿಟ್ಟುಕೊಂಡು, ಸಿಕ್ಕ ವೇಳೆಯಲ್ಲಿ ಹೇಗೆ ಸೃಜನ ಶೀಲವಾಗಿ ಬದುಕಿ ಲೋಕಕ್ಕೆ ತೆರೆದುಕೊಳ್ಳಬಹುದು ಎನ್ನುವುದ್ದಕ್ಕೇ ಲೇಖಕಿಯೇ ಬದುಕು ಮತ್ತು ಬರೆಹವೇ ಒಂದು ಉದಾಹರಣೆ. ಬದುಕನ್ನು ಎಲ್ಲಾ ಕೋನಗಳಿಂದಲೂ ಸೂಕ್ಷ್ಮವಾಗಿ ಅವಲೋಕಿಸುತ್ತಾ, ಪರಾಮರ್ಶಿಸುತ್ತಾ, ತನ್ನ ನೈಜ ಅನುಭವ ಮತ್ತು ಪ್ರಾಮಾಣಿಕ ಅನಿಸಿಕೆಗಳನ್ನೇ ಮಂಡಿಸುವ ಇಲ್ಲಿಯ ಬರೆಹಗಳಲ್ಲಿ ತಾಜಾತನವಿದೆ,. ಎಲ್ಲೂ ಒಣ ಉಪದೇಶಗಳಾಗಲಿ, ಎಲ್ಲಿಂದಲೋ ಕತ್ತರಿಸಿ ತಂದ ಉದ್ದುದ್ದ ವ್ಯಾಖ್ಯಾನಗಳಾಗಲಿ ಇಲ್ಲಿ ಕಂಡು ಬರುವುದಿಲ್ಲ. ತಾನು ಏನನ್ನು ಬದುಕುತ್ತಿದ್ದೇನೋ ಅದನ್ನೇ ದಾಖಲಿಸುವ ಇಲ್ಲಿಯ ಬರಹಗಳು ನಮ್ಮನ್ನು ಬಲು ಬೇಗ ಮುಟ್ಟುತ್ತವೆ. ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಓದಿ ಡಿಗ್ರಿ ಪಡೆಯದೇ ಇದ್ದರೂ , ತಾನೇ ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿತ ಅಥಿತಿಯಾಗಿ ಬೇಟಿ ಕೊಟ್ಟು ಅಲ್ಲಿಯ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಟ್ಟು ಬರುವಷ್ಟು ಪ್ರಬುದ್ಧತೆಯನ್ನು ಬೆಳೆಸಿಕೊಂಡಿದ್ದಾರೆಂದರೆ , ಇದು ಅಕಾಡೆಮಿಕ್ ಓದಿನಿಂದಷ್ಟೇ ದಕ್ಕುವಂತದ್ದಲ್ಲ. ಅನುಭವವೆಂಬ ವಿಶ್ವ ವಿದ್ಯಾನಿಲಯ ಕೊಡುವ ಜ್ಞಾನ ಅಪಾರ. ಹಾಗಾಗಿ ಇದು ಗ್ರಾಮೀಣ ಮಹಿಳೆಯೊಬ್ಬಳ ನಿರಂತರ ಸ್ವ- ಅಧ್ಯಯನ ಮತ್ತು ಪರಿಶ್ರಮದಿಂದಷ್ಟೇ ಸಾಧ್ಯ ಅನ್ನುವುದು ಮನವರಿಕೆಯಾಗುತ್ತದೆ. ಹಳ್ಳಿ ಮಹಿಳೆಯೊಬ್ಬಳು ಬರೆದ ಬರೆಹದಲ್ಲಿ ಏನಿರುತ್ತೆ ಅಂತ ಯಾರೂ ಉದಾಸೀನ ,ಮಾಡುವಂತಿಲ್ಲ. ತನ್ನ ಕೈಯಳತೆಯ ಬದುಕನ್ನೇ ಅಧ್ಯಯನ ಮಾಡುತ್ತಾ, ಸೊಪ್ಪು,ತರಕಾರಿ, ಬಿಸಿನೀರ ಹಂಡೇ,ಜೇನು ಪೆಟ್ಟಿಗೆ, ಜಲವಿಧ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ತನ್ನ ಬದುಕು ಮತ್ತು ಬವಣೆಗಳ ಕುರಿತು ಬರೆಯುತ್ತಲೇ ಅವರು ಜಾಗತಿಕ ಸಮಸ್ಯೆಯೊಂದನ್ನ ನಮ್ಮ ಮುಂದೆ ತಣ್ಣಗೆ ಹರವಿಟ್ಟು ಅದಕ್ಕೆ ಪರ್ಯಾಯ ಮಾರ್ಗವನ್ನು ತಮ್ಮದೇ ರೀತಿಯಲ್ಲಿ ಬಿತ್ತರಪಡಿಸುತ್ತಾರೆ. ಮುಗಿದು ಹೋಗುವ ಸಂಪನ್ಮೂಲಗಳ ಕುರಿತು ಅವರು ಹಳ್ಳಿ ಮೂಲೆಯಲ್ಲಿ ಕುರಿತು ಚಿಂತಿಸುತ್ತಾರೆ, ಅದಕ್ಕಾಗಿ ಮತ್ತೊಬ್ಬರಿಗೆ ಅದು ಉಪಯೋಗವಾಗುವ ನಿಟ್ಟಿನಲ್ಲಿ ತಾನೇ ಕಾರ್ಯಪ್ರವೃತ್ತರಾಗುತ್ತಾರೆ. ಜಗತ್ತಿನ ಅದೆಷ್ಟೋ ಸಮಸ್ಯೆಗಳಿಗೆ ಸುಮ್ಮಗೆ ಉದಾಹರಣೆಯ ಉತ್ತರ ಕೊಡದೆ , ತನ್ನ ಕೆಲಸವೇ ಅದಕ್ಕೆ ಉತ್ತರವೆಂಬಂತೆ ಬದುಕಿ ತೋರಿಸುತ್ತಾರೆ. ಅದಕ್ಕಾಗಿಯೇ ಅವರ ಚಿಂತನ ಕ್ರಮ ಉಳಿದವರಿಗಿಂತ ಭಿನ್ನವಾಗಿದೆ. ದುಡ್ಡು ತೆತ್ತು ಕೊಳ್ಳುವ ವಸ್ತುಗಳು ನಮ್ಮ ಘನತೆಯನ್ನು ಹೆಚ್ಚಿಸುತ್ತವೆ ಅಂದು ಕೊಳ್ಳುವ ಮನಸಿನ ಮುಂದೆ, ನಾವು ಬೆಳೆಯಬಹುದಾದ ಬೆಳೆಗಳನ್ನ ದುಡ್ಡು ತೆತ್ತು ಕೊಳ್ಳುವುದು ತೀರಾ ಅಪಮಾನವೆನ್ನಿಸುತ್ತದೆ ಅವರಿಗೆ. ನಿಜಕ್ಕೂ ಅಪಮಾನ ನಮಗೆ ಯಾವುದಕ್ಕೆ ಆಗಬೇಕು?. ಎಷ್ಟು ಸರಳವಾಗಿ ಒಂದು ಗಹನವಾದ ಪ್ರಶ್ನೆಯನ್ನು ಇಲ್ಲಿ ನಮ್ಮ ಮುಂದೆ ತಂದು ನಿಲ್ಲಿಸುತ್ತಾರೆ.
ಸಹನಾ ಕಾಂತಬೈಲುರವರ ಇಡೀ ಬರಹದುದ್ದಕ್ಕೂ ಒಂದು ಮಗುವಿನ ಮುಗ್ಧತೆ ಇದೆ. ಆ ಕಾರಣದಿಂದಲೇ ಅವರು ತಮಗೆ ಅನ್ನಿಸಿದ್ದನ್ನು ಯಾವ ಮತ್ತು ಯಾರ ಮುಲಾಜಿಯೇ ಇಲ್ಲದೇ ಪ್ರಶ್ನಿಸಬಲ್ಲರು, ಅವರ ಕುತೂಹಲವನ್ನು ತಣಿಸಿಕೊಳ್ಳಬಲ್ಲರು ಮತ್ತು ಅದನ್ನು ಇತರರಿಗೆ ಹಂಚಬಲ್ಲರು. ಆ ಕಾರಣಕ್ಕಾಗಿಯೇ ಇಲ್ಲಿಯ ಬರಹಗಳು ಓದಿಸಿಕೊಂಡು ಹೋಗುತ್ತಲೇ, ನಮ್ಮೊಳಗೆ ಇಳಿಯುತ್ತಾ ನಮ್ಮ ನೋಡುವ ದಿಸೆಯನ್ನೇ ಬದಲಿಸುವಂತೆ ಮಾಡುತ್ತವೆ. ಕಾಂತಬೈಲಿನಲ್ಲಿ ಕಾಡು ಮೂಲೆಯಲ್ಲಿ ವಾಸಿಸುವ ಲೇಖಕಿ, ತಾನು ದೇಶ ವಿದೇಶ ಸುತ್ತಿ ಸುಮ್ಮಗೆ ಬರಲಿಲ್ಲ. ಅಲ್ಲಿಯ ಎಲ್ಲಾ ಸಂಗತಿಗಳನ್ನ ಬಿಡುಗಣ್ಣಿನಿಂದ ನೋಡುತ್ತಲೇ, ತನ್ನ ನೆಲಕ್ಕೂ ಅಲ್ಲಿಯ ನೆಲಕ್ಕೂ ಕೊಂಡಿ ಜೋಡಿಸುತ್ತಲೇ, ಎಲ್ಲ ಪೂರ್ವಗ್ರಹಗಳಿಗೆ ಉತ್ತರವೆಂಬಂತೆ ಅಲ್ಲಿಯೂ ಅವರು ದಾಂಪತ್ಯದ ಗಟ್ಟಿತನವನ್ನು ಕಂಡು ಕೊಳ್ಳುತ್ತಾರೆ, ಅಮ್ಮನೆಂಬ ಭಾವ ಎಲ್ಲಾ ದೇಶಗಳಲ್ಲೂ ಒಂದೇ ಅನ್ನುವುದನ್ನ ಘಟನೆಗಳ ಮೂಲಕ ವಿವರಿಸುತ್ತಾರೆ.
ಛಲ ಮತ್ತು ಆತ್ಮವಿಶ್ವಾಸ ಇಲ್ಲಿಯ ಬರಹಗಳಲ್ಲಿ ಎದ್ದು ಕಾಣುವ ಅಂಶ. ಅದು ಅವರ ಬದುಕಿನ ಪ್ರತಿ ಘಟ್ಟದಲ್ಲೂ ಅವರು ಅದನ್ನು ನಿಭಾಯಿಸಿದ ಪರಿಯಲ್ಲಿ ವ್ಯಕ್ತವಾಗುತ್ತದೆ. ಅದು ಬದುಕಿನ ಒಂದು ಭಾಗವಾದ ಬರವಣಿಗೆಗೆ ಪೂರಕವಾದ ಕಂಪ್ಯೂಟರ್ ಕೆಟ್ಟು ಹೋದಾಗ ಆಗಿರಬಹುದು, ಜೇನು ಪೆಟ್ಟಿಗೆಯಿಂದ ಜೇನು ತೆಗೆಯುವಾಗ ಇರಬಹುದು, ಜಲವಿಧ್ಯುತ್ ತಯಾರಿಕೆಗೆ ಇಳಿದಾಗ ಇರಬಹುದು, ಅಥವಾ ಅವರ ಇಡೀ ಸಂಕಲವನ್ನು ಪ್ರತಿನಿಧಿಸುವ ಶೀರ್ಷಿಕೆಯೇ ಹೇಳುವ ’ಆನೆ ಸಾಕು’ ಪಯಣ ಇರಬಹುದು , ಎಲ್ಲಾ ರೋಚಕ ಅನುಭವಗಳನ್ನು ಅವರು ಸಾವಧಾನದಿಂದ ಅದರ ಹಿಂದೆ ಬಿದ್ದು ಹೋಗಿ ಪೂರ್ಣ ಗೊಳಿಸಿ ಯಶಸ್ವಿಯಾಗ ಬಲ್ಲರು. ನಮ್ಮ ಕೃಷಿಕರನ್ನು ಕಾಡುವ ಬಹು ದೊಡ್ಡ ಸಮಸ್ಯೆಯೆಂದರೆ ಆನೆ , ಮಂಗಗಳ ಹಾವಳಿ. ನಮ್ಮ ಕೃಷಿ ಬೆಳೆಗಳು ನಮಗೆ ಕೈಗೆ ಬಂದದ್ದು ಬಾಯಿಗೆ ಬರದಂತೆ ಮಾಡಿ ಬಿಡುತ್ತವೆ. ಆದರೆ ಸುಮ್ಮಗೆ ಪ್ರಾಣಿಗಳ ಮೇಲೆ ಹರಿಹಾಯದೆ, ವ್ಯವಸ್ಥೆಯನ್ನು ದೂಷಿಸದೆ , ಅವುಗಳ ಕಡೆಯಿಂದಲೂ ಯೋಚಿಸಿ ಕಾರ್ಯತತ್ಪರರಾಗುತ್ತಾರೆ. ಹಾಗಾಗಿ ಅವರು ಎಂದೋ ತಿಂದ ಕಲ್ಲು ಬಾಳೆ ಹಣ್ಣನ್ನು ಸುಮ್ಮಗೆ ತಿಂದು ಬರಲಿಲ್ಲ, ಬಾಳೆ ಹಣ್ಣಿನ ಇಡೀ ವಿಚಾರವನ್ನು ತಿನ್ನುತ್ತಲೇ ಮಾಹಿತಿ ಕಲೆ ಹಾಕಿಕೊಳ್ಳುತ್ತಾರೆ. ಆನೆಗೆ ಪ್ರಿಯವಾದ ಕಲ್ಲು ಬಾಳೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಬೀಜ ಬಿತ್ತಲು ತೊಡಗುತ್ತಾರೆ. ಈ ರೀತಿಯ ಸಮಷ್ಟಿಯ ಚಿಂತನೆ ಮತ್ತು ಎದೆಗಾರಿಕೆ ಎಷ್ಟು ಜನರಲ್ಲಿದೆ?. ಸುಮ್ಮಗೆ ಭಾಷಣ, ಬರವಣಿಗೆಯ ಪ್ರವಚನಕ್ಕಿಂತ ಅದನ್ನು ಕಾರ್ಯಗತ ಗೊಳಿಸುವಲ್ಲಿ ಎಷ್ಟು ಜನ ಮುಂದಾಗುತ್ತಾರೆ?. ತನ್ನ ಕಾಯಕದಲ್ಲೇ ಅದನ್ನು ಮಾಡಿ ತೋರಿಸುವುದಕ್ಕಿಂತ ಉತ್ತಮ ನಿದರ್ಶನ ಎಲ್ಲಿ ಸಿಗುವುದು?.
ಇಲ್ಲಿಯ ಬರಹಗಳಲ್ಲಿ ಪದಲಾಲಿತ್ಯವಾಗಲಿ,ಕಾವ್ಯಾತ್ಮಕ ಭಾಷೆಯಾಗಲಿ ಇಲ್ಲದಿದ್ದರೂ ,ಹೇಳಬೇಕಾದ ವಿಷಯಗಳನ್ನು ನೇರವಾಗಿ ಸಣ್ಣ ಸಣ್ಣ ವಾಕ್ಯಗಳ ಮೂಲಕ ಹೇಳುತ್ತಾ ಒಂದು ಘಟನೆಯನ್ನು ನಮ್ಮ ಕಣ್ಣ ಮುಂದೆ ತೆರೆದು ತೋರಿಸುವಂತೆ ಬರೆಯುತ್ತಾರೆ. ಆ ಮೂಲಕ ಇಡೀ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುತ್ತಾ ನಾವೂ ಆ ಘಟನೆಯ ಹಿಂದೆ ಸಾಗುತ್ತಾ ಹೋಗುತ್ತೇವೆ.ಇದು ಅವರ ಭಾಷೆಯ ವೈಶಿಷ್ಟ್ಯತೆ. ಈ ಕಾರಣಕ್ಕಾಗಿ ಸಹನಾರ ’ಆನೆ ಸಾಕಲು ಹೊರಟವಳು ’ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದದ್ದು ಮತ್ತು ಮುಖ್ಯವಾದದ್ದು ಅನ್ನಿಸುತ್ತದೆ. ನೀವೂ ಆನೆ ಸಾಕಲು ಹೊರಟವಳೊಂದಿಗೆ ಒಂದು ನಡಿಗೆ ನಡೆದು ನೋಡಿ.
-ಸ್ಮಿತಾ ಅಮೃತರಾಜ್. ಸಂಪಾಜೆ
ನಿಮ್ಮ ಅಕ್ಷರ ಪ್ರೀತಿಗೆ ಶರಣು.ವಂದನೆಗಳು ಸುರಹೊನ್ನೆ._ ಸ್ಮಿತಾ
ಅವರೇನೋ ಆನೆ ಸಾಕಿದರು ಬಿಡಿ, ಆದರೆ ನೀವು ಅದನ್ನು ಹಿಂಬಾಲಿಸಿ ಕೊಂಡು ಹೋದದ್ದು ಮಾತ್ರ ವಿಶೇಷ.. ಇಬ್ಬರದ್ದೂ ಒಳ್ಳೆಯ(ಭಯಂಕರ)ಪ್ರಯತ್ನ. ಧನ್ಯವಾದಗಳು ಈರ್ವರೀಗೂ.
ಉದಯವಾಣಿ ಪತ್ರಿಕೆಯಲ್ಲಿ ಬಹಳ ಸೊಗಸಾಗಿ ಮೂಡಿ ಬಂದ ಸಹನಾ ಕಾಂತಬೈಲು ಅವರ ಅಂಕಣ ಬರಹಗಳನ್ನು ಓದಿದ್ದೆ. ನಿಮ್ಮ ಪುಸ್ತಕ ಪರಿಚಯವೂ ಚೆಂದ,ಆಪ್ತ. ಇಬ್ಬರಿಗೂ ಅಭಿನಂದನೆಗಳು.
ಎಷ್ಟು ಚೆನ್ನಾಗಿ ಗ್ರಹಿಸಿದ್ದಾರೆ.. ಸರಳವಾದ.. ಆಕರ್ಷಕವಾದ ಬರವಣಿಗೆ..
ಚಂದದ ಪುಸ್ತಕ ಪರಿಚಯ ಸ್ಮಿತಾ… ಆ ಪುಸ್ತಕ ಓದ ಬೇಕು ಅನ್ನಿಸುವಂತೆ ಮಾಡಿತು…
ಕೃತಿಯನ್ನು ಒಮ್ಮೆ ಓದಿದ್ದರೂ ಮತ್ತೊಮ್ಮೆ ಕೈಗೆತ್ತಿಕೊಳ್ಳಲು ಪ್ರೇರಣೆ ನೀಡುವಂತಹ ಚಂದದ ಪರಿಚಯ.
ಅಭಿನಂದನೆಗಳು ಸ್ಮಿತಾ, ಸಹನಾ.
ಪುಸ್ತಕದ ಬಗ್ಗೆ ಸ್ಮಿತಾ ಳ ವಿವರಣೆ ಓದಿ ನನಗೂ ಸಹನಾ ಕಾಂತ ಬೈಲು ರವರ ಲೇಖನಗಳನ್ನು ಓದುವ ಆಸೆಯಾಗಿದೆ.
ಸೊಗಸಾದ ಪುಸ್ತಕ ಪರಿಚಯ. ಅಭಿನಂದನೆಗಳು ಕೃಷಿಕರೂ ಬರಹಗಾರರೂ ಆಗಿರುವ ಇಬ್ಬರಿಗೂ…
ತಮ್ಮ ಸರಳ ಬರವಣಿಗೆ ಮೂಲಕ ರೈತ ಮಹಿಳೆಯರಿಗೆ ಒಂದು ದೊಡ್ಡ ಗೌರವ ದೊರೆಕಿಸಿ ಕೊಟ್ಟು, ಸ್ವಾವಲಂಬನೆಯ ಸಂಕೇತದಂತೆ
ತೋರುತ್ತಾರೆ ಸಹನಾ ಕಾಂತಬೈಲು ಅವರು. ಅಷ್ಟೇ ಚಂದದ ಪರಿಚಯ ಸ್ಮಿತಾ ಅವರದು. ….ಇಷ್ಟವಾಯಿತು ಕಣ್ರೀ…
ಪುಸ್ತಕ ಓದುತ್ತಾ ಇದ್ದರೆ ನಮ್ಮಲ್ಲೇ ಹಿಂದೆ ರೈತರಾಗಿದ್ದ ನಮ್ಮದೇ ಅನುಭವ ಅನಿಸಿತು
ಸ್ಮಿತಾ ಅವರ ಪುಸ್ತಕ ವಿಮರ್ಶಾತ್ಮಕ ಪರಿಚಯ ,’ ಆನೆ ಸಾಕಲು ಹೊರಟವಳು..’ ಅವಳೊಂದಿಗೆ ಓದುಗನು ಹೆಜ್ಜೆ ಹಾಕುವಂತೆ ಉತ್ಸಾಹ ತುಂಬಿದ ಬರಹ ಇದಾಗಿದೆ…
ಮೇಲ್ನೋಟಕ್ಕೆ ಇದೊಂದು ಆತ್ಮ ಚರಿತ್ರೆಯಂತೆ ಭಾಸವಾಗುತ್ತದೆ….
ಆನೆಯನ್ನು ಸಮೀಕರಣ ಮಾಡಿ ಬರೆದ ಸ್ಮಿತಾ ಬರಹದಲ್ಲಿ ಸೇರಿಸ ಬಹುದಾದರೆ ಆನೆಯನ್ನ ಕುರುಡರ ವಿಶ್ಲೇಷಣೆಯಂತೆ ಬಳಸಿರಬಹುದು….
ಸ್ಮಿತಾ ಅವರ ಬರಹ ಓದಿದಾಗ ಪುಸ್ತಕ ಕೊಂಡು ಓದಬೇಕು ಅನಿಸಿದ್ದು ಸುಳ್ಳಲ್ಲ ಆದರೆ ಕಷ್ಟ ಪ್ರಾದೇಶಿಕ ಸಾಹಿತಿಗಳಲ್ಲಿ ನಮ್ಮ ಭಾಗದ ಸಾಹಿತ್ಯ ಕೃತಿಗಳ ವಿನಿಮಯ ಸಂಪ್ರದಾಯಗಳಲ್ಲ….
ಮಾರಾಟ ವ್ಯವಸ್ಥೆಯೂ ಕರ್ನಾಟಕದ ಮೂಲೆಮೂಲೆಗಳಲ್ಲಿ ಆಗಬೇಕು.
ಸಹನಾ ಮತ್ತು ಸ್ಮಿತಾ ಇಬ್ಬರೂ ಕೃಷಿಕ ಮಹಿಳೆಯರೇ . ಅವರು ತಾವು ನಿಂತ ನೆಲೆಯಲ್ಲಿ ತಮಗೆ ದಕ್ಕಿದ ಜೀವನವನ್ನು ಹೇಗೆ ಪ್ರೀತಿಸಿ ಬರವಣಿಗೆಯ ಮೂಲಕ ಕಟ್ಟಿಕೊಟ್ಟಿದ್ದಾರೆಂಬುದಕ್ಕೆ ಈ ಲೇಖನವೇ ಸಾಕ್ಷಿ. ಇಬ್ಬರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು.
Very nice. ಪುಸ್ತಕವನ್ನು ಓದುವ ಮನಸಾಗಿದೆ ನಿಮ್ಮ ವಿಶ್ಲೇಷಣೆ ಓದಿ.
ಸೊಗಸಾದ ಪುಸ್ತಕ ಪರಿಚಯವಿದು. ಪುಸ್ತಕ ಓದಿದಷ್ಟೇ ಅನುಭವವಾಯಿತು.
ಸಹನಾ ಅವರ ಬದುಕು-ಬರಹ ಎರಡನ್ನೂ ವಿಶ್ಲೇಷಿಸಿ ಬರೆದ ಲೇಖನ ತುಂಬಾ ಚೆನ್ನಾಗಿದೆ
ಸ್ಮಿತಾ ಅವರೇ ಸೊಗಸಾದ ವಿಶ್ಲೇಷಣೆ ತಿನ್ನು ಓದಿ ಸಹನಾರವರ ಈ ಪುಸ್ತಕವನ್ನು ಓದಲೇ ಬೇಕು ಎಂದು ಅನಿಸಿದೆ…ನಿಮ್ಮಿಬ್ಬರ ಹಲವಾರು ಸಂವೇದನಾ ಶೀಲ ಬರಹಗಳನ್ನು ಓದಿರುವೆ… ಅಭಿನಂದನೆಗಳು
ಸೊಗಸಾದ ಪುಸ್ತಕ ಪರಿಚಯ.ಪುಸ್ತಕ ಓದಬೇಕೆನ್ನುವ ಹಂಬಲ ಬಹಳ ದಿನಗಳಿಂದ ಇದೆ.ಸ್ಮಿತಾ ಮತ್ತು ಸಹನಾರವರ ಕೃಷಿ ಪ್ರೀತಿ,ಬರವಣಿಗೆ ಪ್ರೀತಿ ನನಗೆ ಸದಾ ಸ್ಪೂರ್ತಿ ಮತ್ತು ಬೆರಗು .ಅಭಿನಂದನೆಗಳು
ಸೊಗಸಾದ ಪುಸ್ತಕ ಪರಿಚಯ..ಧನ್ಯವಾದಗಳು.