ಬದುಕಿನ ಹಾದಿಯಲ್ಲಿ ಬಂದವರೆಲ್ಲಾ ಬಂಧ ಬೆಸೆಯುವರೇ?

Share Button

ಈ ತನಕದ ಬದುಕಿನ ಹಾದಿಯಲ್ಲಿ ಬಂದು ಹೋಗುವವರೆಲ್ಲಾ ಬಂಧುಗಳಾಗಿ ಬಂಧ ಬೆಸೆಯುವರಾ..?

 

ಎಷ್ಟೊಂದು ಆತ್ಮೀಯತೆಯ ಸೋಗು ಹಾಕಿ ಬಿಟ್ಟಳು..? ಹೀಗೊಂದು ಮುಖವಾಡ ಹಾಕಿ ನಾಟಕ ಮಾಡಲು ಎಲ್ಲರಿಗೂ ಸಾಧ್ಯನಾ..?ನನ್ನ ಮುಗಿಯದ ತಾಪತ್ರಯಗಳನ್ನ,ಸಂಕಟಗಳನ್ನ,ನೋವಿನ ಕಥೆಗಳನ್ನ,ದೈನಂದಿನ ರಗಳೆಗಳನ್ನ ಅವಳೊಂದಿಗೆ ತೆರೆದಿಟ್ಟಾಗ ಹಾಯೆನ್ನಿಸುತ್ತಿತ್ತು.ಅವಳು ನೀಡುತ್ತಿದ್ದ ಸಾಂತ್ವನದ ಮಾತುಗಳು,ಜೀವನೋತ್ಸಾಹದ ನುಡಿಗಳನ್ನು ಕೇಳಿ ನನ್ನಲ್ಲಿ ಮತ್ತೆ ಹುರುಪು ಆವಾಹಿಸಿಕೊಳ್ಳುವ ತುಡಿತವೇ ಅವಳೊಂದಿಗೆ ನನ್ನೆಲ್ಲಾ ಸಂಕಟಗಳನ್ನ ತೋಡಿಕೊಳ್ಳುವಂತೆ ಮಾಡುತ್ತಿತ್ತು.ಆದರೆ ಅವಳ ಬಳಿ ನನ್ನಲ್ಲಿ ತೋಡಿ ಕೊಳ್ಳಲು ಏನೂ ಉಳಿದಿಲ್ಲವೇ? ಎಂಬುದರ ಕಡೆಗೆ ಗಮನವೇ ಹರಿಸದಷ್ಟು.ಈಗ ನೋಡಿದರೆ ಸದ್ದಿಲ್ಲದೆ ಎಲ್ಲರೆದುರು ಟಾಂ ಟಾಂ ಮಾಡಿ ನನ್ನ ಒಡಲಾಳದ ಒಳತೋಟಿಗಳನ್ನೆಲ್ಲಾ ಸುದ್ದಿ ಮಾಡಿ ಬಿತ್ತರಿಸುತ್ತಿದ್ದಾಳೆ.ಇನ್ನೇನು ಮಾಡಲು ಸಾಧ್ಯ? ಅಂತ ಅವಳ ಗೆಳೆತನವನ್ನು ಕಡಿದುಕ್ಕೊಂಡ ಗೆಳತಿಯೊಬ್ಬಳು ಅವಲತ್ತುಕೊಳ್ಳುತ್ತಿದ್ದಾಳೆ.

ಇಂತಹ ಖಯಾಲಿಯೊಂದು ಕೆಲವರಿಗೆ ಇರುತ್ತದೆಯೆಂಬುದು ನಮಗೆ ಹೊರನೋಟಕ್ಕೆ ಸುಲಭದಲ್ಲಿ ಗ್ರಾಸವಾಗುವುದಿಲ್ಲ.ಇದು ಅವಳೊಬ್ಬಳ ಸಮಸ್ಯೆಯಲ್ಲ.ಹೇಳಿಕ್ಕೊಂಡಾದ ಮೇಲೆ ಮೋರೆ ಸಪ್ಪೆ ಮಾಡಿಕ್ಕೊಳ್ಳುವ ಪರಿಸ್ಥಿತಿ ಹೆಚ್ಚಿನವರು ಅನುಭವಿಸಿಬಿಡುತ್ತಾರೆ. ಅವರ ಮನಸ್ಸನ್ನ ಅರಿಯಲಾರದೆ ನಮ್ಮ ಅಂತರಂಗವನ್ನೆಲ್ಲಾ ಬಸಿದುಕೊಟ್ಟು ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯ ಗೋಚರವಾಗುವುದು ಅನುಭವವೇದ್ಯವಾದ ಮೇಲೆ.ಹಾಗಂತ ಸಮಸ್ಯೆಗಳು ಸಂಕಟಗಳು ಯಾರಿಗಿಲ್ಲದಿಲ್ಲ ಹೇಳಿ?.ಎಲ್ಲರ ಮನೆ ದೋಸೆ ತೂತು,ನಮ್ಮ ಮನೆ ಕಾವಲಿಯೇ ತೂತು ಅಂದ ಹಾಗೆ ಸಮಸ್ಯೆಗಳ ರೂಪಗಳು ಬೇರೆ ಬೇರೆ ಆಯಾಮಗಳನ್ನ ಪಡೆದುಕ್ಕೊಂಡಿರುತ್ತವಷ್ಟೆ.ಸರಳೀಕರಣಗೊಳಿಸಲು ಹೋಗಿ ಮತ್ತೆ ಗೋಜಲಾಗಿಸಿಕೊಳ್ಳುವುದು ಒಬ್ಬೊಬ್ಬರ ಬದುಕಿನಲ್ಲಿ ಬಂದೊದಗಿಬಿಡುವ ವಿಪರ್ಯಾಸ ಮತ್ತು ನಮ್ಮ ಕೈ ಮೀರಿ ನಡೆದು ಹೋಗಿ ಬಿಡುವ ದುರಂತ.

ಎಳವೆಯಲ್ಲಿ ಅಕ್ಕಪಕ್ಕ ಕುಳಿತುಕ್ಕೊಂಡು ನಮ್ಮದೇ ಪ್ರಪಂಚದಲ್ಲಿ ಹರಟೆ ಕೊಚ್ಚಿಕೊಳ್ಳುತ್ತಿದ್ದದ್ದು.ರಹಸ್ಯಗಳನ್ನ ಹಂಚಿಕೊಳ್ಳುತ್ತಿದ್ದದ್ದು. ಯಾರ ಜೊತೆಗೂ ಹೇಳಬಾರದೆಂದು ಆಣೆ ಮಾಡಿಕ್ಕೊಂಡ ಗುಟ್ಟುಗಳನ್ನ ಇಲ್ಲಿಯವರೆಗೆ ಯಾರ ಜೊತೆಗೂ ಹೇಳಿಕೊಳ್ಳದೆ ಗುಟ್ಟು ರಟ್ಟಾಗದೆ ಇರುವ ಹಾಗೆ ಕಾಯ್ದುಕ್ಕೊಂಡು ಬಂದದ್ದು..ಇವೆಲ್ಲವೂ ಕೂಡ ಇಂದು ನಾವು ಪ್ರಬುದ್ಧರಾಗಿ, ಬದುಕಿನ ಯಾವುದ್ಯಾವುದೋ ದಿಕ್ಕಿನಲ್ಲಿ ಬದುಕುತ್ತಿದ್ದರೂ ಆ ಸಂಗತಿಗಳ್ಯಾವುದೂ ಮಾಸಿಲ್ಲ. ಮರೆತಿಲ್ಲ. ಬಾಲಿಶ ಅಂತನೂ ಅನ್ನಿಸುವುದಿಲ್ಲ.ಏನೆಲ್ಲಾ ಕಾರ್ಯ ಒತ್ತಡಗಳ ನಡುವೆಯೂ ಆ ನೆನಪುಗಳು ಆಗಾಗ್ಗೆ ನುಗ್ಗಿ ಹಿತಕೊಡುತ್ತವೆ.ಆ ಮೂಲಕದ ಆತ್ಮೀಯ ಒಡನಾಟದ ನೆನಪ ಸೆಲೆ ಇನ್ನೂ ಪಸೆ ಆರದಂತೆ ಜಿನುಗಿಕ್ಕೊಂಡಿರುತ್ತದೆ.ಅದಕ್ಕೇ ಹೇಳುವುದು ಸ್ನೇಹಿತರಿರಲಿ ಬಾಳಲಿ ಅಂತ.ಆದರೆ ಎಂತ ಸ್ನೇಹಿತರು ನಮ್ಮ ಬದುಕ್ಕಲ್ಲಿ ಇರಬೇಕೆಂದು ಎಚ್ಚರ ವಹಿಸಿ ಆಯ್ಕೆ ಮಾಡುವುದು ನಮ್ಮ ಜಾಣತನಕ್ಕೆ ಬಿಟ್ಟ ವಿಷಯ.

ಈ ಧಾವಂತದ ಬದುಕಿನಲ್ಲಿ ಅವಸರ ಅವಸರವಾಗಿ ಚಲಿಸುವಾಗ ಎಷ್ಟೊಂದು ಮಂದಿ ನಮ್ಮ ಮುಂದೆ ಹಾದು ಹೋಗುವುದಿಲ್ಲ?ಪರಿಚಿತರಾಗುವುದಿಲ್ಲ? ಪರಿಚಿತರೆಲ್ಲಾ ತೆಳ್ಳಗೆ ನಕ್ಕು ಒಂದೆರಡು ಔಪಚಾರಿಕ ನುಡಿಗಳನ್ನು ಆಡಿ ಬಿಟ್ಟ ಮಾತ್ರಕ್ಕೆ ..ಎಲ್ಲರೂ ಆತ್ಮೀಯರಾಗೋಕೆ ಸಾಧ್ಯಾನಾ? ಹಾಗಂದುಕ್ಕೊಂಡು ನಾವುಗಳು ನಮ್ಮೊಳಗಿನ ನೋವು-ನಲಿವುಗಳನ್ನು ಕೇಳೋಕ್ಕೊಂದು ಕಿವಿ ಸಿಕ್ಕಿತು ಅಂತ ಓತಪ್ರೋತವಾಗಿ ನಮ್ಮ ಭಾವನೆಗಳನ್ನು ಹರಿಯಬಿಟ್ಟರೆ ಅಷ್ಟೇ ಅವಸರದಲ್ಲಿ ನಾವು ಅಪಾಯವನ್ನ ಎಳೆದುಕ್ಕೊಂಡಂತೆಯೇ ಸರಿ.ಹುಟ್ಟಿದ ನದಿ ತೊರೆಗಳೆಲ್ಲವೂ ಕಡಲು ಸೇರುವುದಿಲ್ಲ.ಹೆಚ್ಚಿನ ಸಣ್ಣ ಪುಟ್ಟ ತೊರೆಗಳೆಲ್ಲಾ ಅಲ್ಲೇ ಇಂಗಿ ಬುವಿಯ ದಾಹವಾರಿಸಿಬಿಡುತ್ತದೆ.ಕೆಲವಕ್ಕಷ್ಟೇ ಮತ್ತೊಂದು ನದಿಯ ಸಾಂಗತ್ಯ ಪಡೆದುಕೊಂಡು ಸಾಗರದ ಕಡೆ ಮುಖ ಮಾಡಿ ಹರಿದು ಗಮ್ಯ ಸೇರಿಬಿಡುತ್ತದೆ.ಅಂತೆಯೇ ಸಿಕ್ಕ ಗೆಳೆತನಗಳೆಲ್ಲಾ ಹೃದಯದಾಳಕ್ಕೆ ಇಳಿದು ಬಿಡುವುದಿಲ್ಲ.ಕೆಲವರಿಗಷ್ಟೆ ಪರಿಪೂರ್ಣ ಸ್ನೇಹವ ಸವಿಯುವ ಭಾಗ್ಯ.

promise

ಯಾಕೋ ಕೆಲವೊಮ್ಮೆ ಒಬ್ಬೊಬ್ಬರು ವಿನಾಕಾರಣ ಇಷ್ಟವಾಗಿ ಬಿಡುತ್ತಾರೆ.ಮೇಲ್ನೋಟಕ್ಕೆ ಅವರು ಹಾಯಿಸುವ ಮುಗುಳ್ನಗೆಗೋ..?ಮಾತಿನ ವೈಖರಿಗೋ..? ಸರಳತೆಗೋ..?ಅವರಲ್ಲಿನ ಬುದ್ದಿಮತ್ತೆಗೋ..?ಹೀಗೆ ನಾನಾ ಕಾರಣಗಳನ್ನು ಕೊಡುತ್ತಾ ಹೋಗಬಹುದು.ಈ ರೀತಿಯಾಗಿ ಇಷ್ಟವಾಗುವ ಗುಣಗಳಿಂದಾಗಿ ಒಂದು ಸ್ನೇಹ ಬಂಧ ಮೆಲ್ಲಗೆ ಚಿಗುರೊಡೆಯುತ್ತದೆ.ದಿನ ಕಳೆದಂತೆ ಭಾವನೆಗಳನ್ನು ಹಂಚಿ ಕೊಳ್ಳಬೇಕೆಂದು ಮನಸ್ಸು ತುಯ್ಯುತ್ತದೆ.ಇಂತಹ ಒಂದು ಸಂದರ್ಭದಲ್ಲಿ ನಾವುಗಳು ಯಾವ ಮಾನದಂಡವನ್ನು ಇಟ್ಟುಕ್ಕೊಂಡು ,ಅವರುಗಳನ್ನು ನಂಬಿ ನಮ್ಮ ವಿಚಾರಗಳನ್ನು ಅವರೊಂದಿಗೆ ಧಾರೆ ಎರೆಯುತ್ತೇವೋ ಗೊತ್ತಿಲ್ಲ.ಯಾವುದೋ ಒಂದು ವಿಚಾರಕ್ಕೆ ಇಷ್ಟವಾದರು ಎಂದ ಮಾತ್ರಕ್ಕೆ ಅವರು ಒಳ್ಳೆಯವರಾಗಿಯೇ ಇರುತ್ತಾರೆ ಎಂಬುದಕ್ಕೆ ಎಲ್ಲಿದೆ ಪುರಾವೆ?.ಅವರಲ್ಲಿ ನಾವು ಮೆಚ್ಚಿಕ್ಕೊಂಡ ಅಂಶಕ್ಕೂ ಅವರೊಳಗಿನ ಒಳ್ಳೆಯತನಕ್ಕೂ ನಡುವೆ ಆಳವಾದ ಅಂತರವಿರುವುದು ನಮ್ಮ ಅರಿವಿಗೆ ಬಾರದ ಸಂಗತಿ. ಇದು ನಾವು ಅಂದುಕೊಳ್ಳುವ ಒಂದು ಕಾಲ್ಪನಿಕ ನಂಬುಗೆಯಷ್ಟೆ.ಎಲ್ಲ ಸಂಗತಿಗಳ ಹಂಚಿಕೊಂಡು ಬಿಟ್ಟೆವಲ್ಲಾ ಅಂತ ಹಳ ಹಳಿಸಿಕ್ಕೊಂಡು ಮೂರ್ಖರಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಆದರೂ ಆ ಸಮಯದಲ್ಲಿ ವ್ಯಥೆ ಟ್ಟುಕೊಳ್ಳದೆ ಕೆಲವು ಕ್ಷಣಗಳನ್ನ ನಿರಾಳಗೊಳಿಸಿದ ಅವರ ಸಾಂಗತ್ಯಕ್ಕೆ ನಮಿಸುವುದಷ್ಟೇ ನಾವು ಸ್ನೇಹಕ್ಕೆ ತೋರಿಸುವ ಒಳ್ಳೆತನ.

ನಮ್ಮಲ್ಲಿ ತೋಡಿಕೊಳ್ಳಲು ವಿಷಯಕ್ಕೇನು ಬರ?ಇದು ಮನುಷ್ಯ ಸಹಜವಾದದ್ದು.ಇದರಲ್ಲಿ ತಪ್ಪೇನಿಲ್ಲ.ಕೆಲವರಿಗೆ ಚಿನ್ನ ಖರೀದಿ ಮಾಡಿದ್ದು,ಮನೆಗೆ ಪೀಠೋಪಕರಣ ತಂದದ್ದು,ಮಗಳಿಗೆ ವರ ಗೊತ್ತಾದದ್ದು, ಮಗನಿಗೆ ಮೆಡಿಕಲ್ ಸೀಟ್ ಸಿಕ್ಕಿದ್ದು, ಆಸ್ತಿ ಖರೀದಿ ಮಾಡಿದ್ದು..ಹೀಗೆ ಎಲ್ಲವನ್ನೂ ಚಾಚು ತಪ್ಪದೆ ಗಿಣಿ ಪಾಠ ಒದರಿದಂತೆ ಉಲಿದರಷ್ಟೇ ಸಂತೋಷ.ಇದರಲ್ಲಿ ಅಪರಾಧವೇನು ಇಲ್ಲ.ಆದರೆ ನಮ್ಮದು ಬಿಟ್ಟು ಇನ್ನೊಬ್ಬರದ್ದು ಹೇಳಹೊರಡುವುದು ಮಾತ್ರ ಅಪಾಯಕಾರಿ.ಆಶ್ಚರ್ಯ ಎಂದರೆ ನಮಗೆ ನಮ್ಮ ಬಗ್ಗೆ ನಾವು ಹೇಳಿಕೊಳ್ಳುವುದು ಕೆಲವೇ ಸಮಯ.ಉಳಿದಂತೆ ಮಾತು ಹೊರಳಿಕೊಳ್ಳುವುದೇ ಮೂರನೆಯವರ ಬಗ್ಗೆ.ಕೆಲವೊಮ್ಮೆ ನಮ್ಮ ವಿಷಯವೇ ಆದರೂ ಹೇಳುವ ತರಾತುರಿಯಲ್ಲಿ ,ಆತುರತೆಯಲ್ಲಿ ಎದುರಿನವರು ಏನು ತಿಳಿದುಕೊಂಡಾರೆಂಬ ಗಣನೆಯೇ ಇಲ್ಲ.ಕೆಲವರಿಗೆ ಇದು ಉತ್ಪ್ರೇಕ್ಷೇ ಅಂತ ಅನ್ನಿಸಿ ಅಕ್ಕಪಕ್ಕದವರ ಮುಂದೆ ನೀವೊಂದು ಮಾತಿನ ವಸ್ತುವಾಗುವ ಸಂಭವವೂ ಕೂಡ ಇದೆ.ಇನ್ನು ನಮ್ಮ ಅಳಲನ್ನ ತೋಡಿಕೊಳ್ಳಲು ಹೋದರೆ ಪ್ರಾಮಾಣಿಕವಾಗಿ ಸ್ಪಂದಿಸುವ ಮಂದಿ ಎಷ್ಟಿರಬಹುದು?ಜಗತ್ತಿನ ನೋವೆಲ್ಲಾ ಇವರೊಬ್ಬರ ಹೆಗಲ ಮೇಲೆ ಮಾತ್ರ ಇದೆ ಅಂತ ಹಿಂದಿನಿಂದ ಕುಹಕವಾಡಲೂ ಬಹುದು.ನಿರಾಳವಾಗುವ ಹಪ ಹಪಿಯಲ್ಲಿ ಅರಿವಿಲ್ಲದೆ ಇನ್ನೊಬ್ಬರ ಮುಂದೆ ನಾವು ಪರಿಹಾಸ್ಯದ ವಸ್ತುವಾಗಲೂ ಬಹುದು.

ನಮಗೊಂದು ಖುಷಿ ಆದರೆ ಅದನ್ನು ಆತ್ಮೀಯರೊಂದಿಗೆ ತೋರ್ಪಡಿಸಿಕೊಂಡಾಗಲೇ ಆ ಖುಷಿ ಇಮ್ಮುಡಿಗೊಳ್ಳುತ್ತದೆ.ಖುಷಿಗಳೇ ಹಾಗೆ ಅದಕ್ಕೆ ಪಸರಿಸುವ ಗುಣ ಹೆಚ್ಚು.ಆದರೆ ನೋವುಗಳು ಹಾಗಲ್ಲ.ನೋವುಗಳನ್ನು ತುಂಬಾ ಜನರ ಜೊತೆ ಹಂಚಿಕೊಳ್ಳಬೇಕೆಂದು ಅನ್ನಿಸುವುದೇ ಇಲ್ಲ.ಒಂದಿಬ್ಬರ ಹಂಚಿಕ್ಕೊಂಡರೂ ಅದು ಪಕ್ಕನೆ ತಗ್ಗಿ ಬಿಡುತ್ತದೆ.ಇದು ನೋವು-ನಲಿವುಗಳ ವೈರುಧ್ಯ ಗುಣ ಸ್ವಭಾವಗಳು ಅಂದರೂ ಸರಿಯೆ.ಆದರೆ ಇಲ್ಲಿ ಮುಖ್ಯವೆನ್ನಿಸುವುದು ನಾವು ಹಂಚಿಕೊಳ್ಳಬಯಸಿದ ಜನರ ಮನಸ್ಥಿತಿಯಷ್ಟೆ.

ಮನುಷ್ಯ ಸಂಘಜೀವಿ ಆದ ಕಾರಣ ಸ್ನೇಹಕ್ಕೆ ಹಂಬಲಿಸುವುದು ತೀರಾ ಸಹಜ.ಮನೆ ಮಂದಿಯೊಂದಿಗೆ ಹಂಚಿಕೊಳ್ಳಲಾಗದ್ದನ್ನ ಆತ್ಮೀಯರಲ್ಲಿ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತೇವೆ.ನಮ್ಮ ಮನೆಯಲ್ಲಿರುವ ಪುಟಾಣಿ ಮಕ್ಕಳೂ ತಮ್ಮ ಓರಗೆಯ ಮಕ್ಕಳೊಂದಿಗೆ ಕೆಲವೊಂದು ಸಂಗತಿಗಲನ್ನು ಹಂಚಿಕೊಳ್ಳುವುದನ್ನು ನಾವು ಗಮನಿಸಿರಬಹುದು.ಹಾಗಾಗಿ ಹೇಳಿಕೊಳ್ಳುವ ,ಕೇಳಿಸಿಕೊಳ್ಳುವ ,ಅದನ್ನು ಮಸಾಲೆ ಸೇರಿಸಿ ಅರೆದು ರವಾನಿಸುವ ಪದ್ಧತಿ ನಿನ್ನೆ ಮೊನ್ನೆಯದ್ದಲ್ಲ.ಇದು ಅನಾದಿಯಿಂದಲೇ ನಡೆದುಕ್ಕೊಂಡು ಬಂದಿದೆ.ಮಂಥರೆ ಕೈಕೆಯಿಯ ಕಿವಿ ಚುಚ್ಚಿ ರಾಮಾಯಣವಾದದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೆ.

ದುರ್ಯೋಧನ ಕರ್ಣನಿಗೆ ಆಪತ್ಕಾಲದಲ್ಲಿ ತೋರಿಸಿದ ಸ್ನೇಹಕ್ಕೆ,ಕುಂತಿ ಅರುಹಿದ ಸತ್ಯವನ್ನು ಅರಗಿಸಿಕೊಂಡು ತನ್ನ ಸ್ಥಾನಮಾನ ಅರಿತ ಮೇಲೂ ಅಂತಹ ಸಂಧಿಗ್ದ ಪರಿಸ್ಥಿಯಲ್ಲೂ ಕರ್ಣ ಸ್ನೇಹಕ್ಕೆ ಚ್ಯುತಿ ಬಾರದಂತೆ ನಡೆದುಕ್ಕೊಂಡ.ಇದು ಸ್ನೇಹದ ಔಚಿತ್ಯ.

ಸಿರಿವಂತಿಕೆಯಿರಲಿ, ಬಡತನವಿರಲಿ,ಅಪ್ಪಟ ನಿರ್ಮಲ ಸ್ನೇಹದ ಔದಾರ್ಯದ ನೆರಳು ಚಾಚಿಕೊಂಡಿದ್ದರೆ ಬದುಕು ಬರಡಾಗುವುದಿಲ್ಲ.ಬದುಕಿನಲ್ಲಿ ಇಂತಹ ಸುಮಧುರ ಬಂಧಗಳಿದ್ದರೆ ಮಾತ್ರ ಬದುಕಿಗೂ ಒಂದು ರೀತಿಯ ಲವಲವಿಕೆ.ಈ ನಡುವಿನ ಬದುಕಿನಲ್ಲಿ ಬಂದು ಹೋಗುವವರೆಲ್ಲಾ ಬಂಧ ಬೆಸೆಯಲಾರರು.ತೂಗಿ ತುಲನೆ ಮಾಡಿ ಆಳಕ್ಕಿಳಿದು ಯಾರ ಮನಸನ್ನು ಬಗೆಯಲು ಸಾಧ್ಯವಾಗದಿದ್ದರೂ,ಪೂರ್ಣ ಸ್ನೇಹ ಅರಿವಾಗುವವಲ್ಲಿವರೆಗೂ ಮಿತಿಯೊಳಗಿದ್ದರೆನೇ ಹಿತ. ಆ ಮಿತಿಯೇ ನಮ್ಮೊಳಗೆ ಅಪರಿಮಿತ ಸಂತೋಷ ತಂದಿಕ್ಕಬಲ್ಲವು.ನೈಜ್ಯ ಸ್ನೇಹದ ಆತ್ಮೀಯ ಭಾಂದವ್ಯ ಎಂದಿಗೂ ಹಳಸಲಾಗುವುದಿಲ್ಲ.ಸಡಿಲಗೊಳ್ಳುವುದಿಲ್ಲ.ಬದಲು ಭದ್ರಗೊಳ್ಳುತ್ತಾ ಹಸನಾಗಬಲ್ಲದು.

 

-ಸ್ಮಿತಾ ಅಮೃತರಾಜ್.

6 Responses

  1. ravivarma says:

    mana kaaduva baraha…

  2. BH says:

    ಉತ್ತಮ ಬರಹ 🙂
    ನಿಜ.ಬೆನ್ನ ಹಿಂದೆ ಚೂರಿ ಹಾಕುವವರು, ಅಪಹಾಸ್ಯ ಮಾಡುವವರು…ಈ ಜಗತ್ತಿನಲ್ಲಿ ಇರುತ್ತಾರೆ.ನಮ್ಮ ಎಚ್ಛರಿಕೆಯಲ್ಲಿ ನಾವಿರಬೇಕು.

  3. jayashree says:

    So true Smitha.That way, as Francis Bacon says, books are cold; but real friends.

  4. Nayana Bajakudlu says:

    ಬದುಕಿನ ಸ್ನೇಹ ಎಂಬ ಇಡೀ ಅಧ್ಯಾಯವೇ ಕಣ್ಣ ಮುಂದೆ ಬಂದು ನಿಂತ ಹಾಗಾಯಿತು. ಸ್ನೇಹದಲ್ಲಡಗಿರೋ ಒಳಿತು, ಕೆಡುಕು ಎರಡನ್ನೂ ಹಂತ ಹಂತವಾಗಿ ವಿವರಿಸಿದ್ದೀರಿ . very nice.

  5. Divya says:

    Very beautifully written about friendship Smitha keep writing about more topics.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: