ಲೋಕದಲ್ಲಿ ಶ್ರೇಷ್ಠತಮ ಗುರುಕಾಣಿಕೆ

Share Button

ವಿದ್ಯೆ ನೀಡಿದ  ಗುರುಗಳಿಗೆ ವಿದ್ಯಾರ್ಥಿ ಅನಂತಕಾಲ ಶರಣಾಗಿರಬೇಕು. ಅಷ್ಟು ಮಾತ್ರವಲ್ಲ ತಾನು ವಿದ್ಯಾಭ್ಯಾಸ ಮುಗಿಸಿ ಹಿಂತಿರುಗುವಾಗ ತನ್ನ ಕೈಲಾದ ಕಾಣಿಕೆ ನೀಡಬೇಕು ಎಂಬುದು ಶಾಸ್ತ್ರ ವಿದಿತ. ಗುರುದಕ್ಷಿಣೆ ಇಲ್ಲದೆ; ಕಲಿತ ವಿದ್ಯೆ ಸಿದ್ಧಿಸಲಾರದು. ಇಂತಹ ಗುರುದಕ್ಷಿಣೆಯನ್ನು ಯಾವರೂಪದಿಂದಲೂ  ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಅರಸರು ಹಾಗೂ ಅಸುರರು, ಧನ, ಕನಕ, ಭೂಮಿ, ದಾನಮಾಡಿದ ಅದೆಷ್ಟೋ ದೃಷ್ಟಾಂತ ಪುರಾಣ, ಇತಿಹಾಸಗಳಲ್ಲಿ ಓದುತ್ತೇವೆ. ಹಾಗೆಯೇ ಶ್ರೀಮಂತಿಕೆ ಉಳ್ಳವರು ಮಾತ್ರವಲ್ಲ ಶುದ್ಧ ಮನಸ್ಸುಳ್ಳವರೂ ಮನತುಂಬಿ ಧನಸಹಾಯ ಮಾಡುತ್ತಾರೆ. ಇಷ್ಟು ಮಾತ್ರವಲ್ಲ ತನ್ನ ದೇಹದ ಒಂದು ಭಾಗವನ್ನೇ ಗುರುವಿನ ಅಪೇಕ್ಷೆಯನುಸಾರ ದಾನಮಾಡಿದ ಗುರುಭಕ್ತನೊಬ್ಬನಿದ್ದಾನೆ ಅವನೇ ಏಕಲವ್ಯ!.ವಿದ್ಯೆ ಕಲಿಸಲು ಒಪ್ಪದಿದ್ದ ಗುರುವಿನ ಪ್ರತಿಮೆಯನ್ನಾದರೂ ಮಾಡಿ; ಪ್ರತ್ಯಕ್ಷ ಗುರುವೆಂದು ನಂಬಿ ಬಿಲ್ಲು ವಿದ್ಯೆ ಕಲಿತು ಯೋಗ್ಯ ಬಿಲ್ಲುಗಾರನೆನಿಸಿದ ಏಕಲವ್ಯ!. ಇದನ್ನರಿತ ಗುರು ಅರ್ಜುನನ ಹಿತಕಾಯುವ ಗುರು ದ್ರೋಣಾಚಾರ್ಯರು ಆತನ ಹೆಬ್ಬೆರಳನ್ನೇ ಕಾಣಿಕೆ ನೀಡೆಂದು ಕೇಳಿದಾಗ; ಗುರುವಿನಾಜ್ಞೆಯನ್ನು ಪಾಲಿಸಿದ ಅಪ್ರತಿಮ ಶಿಷ್ಯ ಏಕಲವ್ಯ!.

ಶಿಷ್ಯರ ಮುಖೇನ ತಮ್ಮ ಸ್ವಂತ ಅಥವಾ ಲೋಕಮುಖಿ ಕೆಲಸವಾಗಬೇಕೆಂದು ತಮ್ಮ ಬೇಡಿಕೆಯನ್ನು ಶಿಷ್ಯರ ಮುಂದಿಟ್ಟು ಗುರುದಕ್ಷಿಣೆ ನೆಪದಲ್ಲಿ ಆ ಮಹತ್ಕಾರ್ಯವನ್ನು ಸಾಧಿಸಿಕೊಳ್ಳುತ್ತಿದ್ದ ಗುರುಗಳನ್ನು ಪುರಾಣದಲ್ಲಿ ಕಾಣುತ್ತೇವೆ. ಈನಿಟ್ಟಿನಲ್ಲಿ ಸಾಂದೀಪನಿ ಮುನಿ ನೆನಪಿಗೆ ಬರುತ್ತಾರೆ. ಇವರು ಯಾವ ಗುರುದಕ್ಷಿಣೆ ಅಪೇಕ್ಷಿಸಿದರು ನೋಡೋಣ.

’ಸಾಂದೀಪನಿ’ ಒಬ್ಬ ವಿದ್ವಾಂಸ ಬ್ರಾಹ್ಮಣ. ಮಾಳವ ರಾಜ್ಯದಲ್ಲಿ ವಾಸಿಸುತ್ತಿದ್ದವ. ಈತನ ಮನೆಯಲ್ಲಿ ಕೃಷ್ಣ ಮತ್ತು ಬಲರಾಮರು ವಿದ್ಯೆ ಕಲಿತವರು. ಸಾಂದೀಪನಿಯು ಹಿಂದೊಮ್ಮೆ ಪ್ರಭಾಸಕ್ಷೇತ್ರಕ್ಕೆ ಹೋಗಿದ್ದಾಗ ರಾಕ್ಷಸ ಸಂಹ್ಲಾದನನ ಮಗ ಪಂಚಜನು, ಅವನ ಮಗ ‘ಪುನರ್ದತ್ತನ’ನನ್ನು  ಎತ್ತಿಕೊಂಡು ಸಮುದ್ರ ತಳದಲ್ಲಿರಿಸುತ್ತಾನೆ.  ತಮ್ಮ  ಏಕಮಾತ್ರ ಪುತ್ರನ ಅಗಲುವಿಕೆಯ   ಕೊರಗು ಗುರು ಹಾಗೂ ಗುರುಪತ್ನಿಯರಲ್ಲಿ ಆಳವಾಗಿ ಬೇರೂರಿರುತ್ತದೆ.

ಇತ್ತ ಶ್ರೀಕೃಷ್ಣನು ವಿದ್ಯೆ ಕಲಿತು ಹೊರಡುವ ವೇಳೆ “ಗುರುದಕ್ಷಿಣೆಯಾಗಿ ಏನು ಕೊಡಬೇಕು” ಎಂದು  ಗುರುದಂಪತಿಗಳ ಮುಂದಿಟ್ಟಾಗ; “ತಮ್ಮ ಮಗ ಪುನರ್ದತ್ತನನನ್ನು ಸಂಹ್ಲಾದನನ ಮಗ ಪಂಚಜನು ಎತ್ತಿಕೊಂಡು ಸಮುದ್ರ ತಳದಲ್ಲಿರಿಸಿದ್ದಾನೆ. ಮಗನನ್ನು ಜೀವ ಸಹಿತ ತಮಗೆ ತಂದೊಪ್ಪಿಸಬೇಕು. ಇದುವೇ ನಾವು ಅಪೇಕ್ಷಿಸುವ ಗುರುದಕ್ಷಿಣೆ” ಎನ್ನುತ್ತಾರೆ. ಗುರುವಿನ ಮಾತನ್ನು ಶಿರಸಾವಹಿಸಿದ ಶ್ರೀಕೃಷ್ಣನು ಸಮುದ್ರನನ್ನು ಸಂಪರ್ಕಿಸಿ ’ಪಂಚಜ’ನಿರುವ ಸ್ಥಳವನ್ನು ಹುಡುಕಿ ನೋಡಿದಾಗ ಅಲ್ಲಿ ಗುರುಪುತ್ರನು ಕಾಣಲಿಲ್ಲ. ಗುರುಪುತ್ರ ಯಮಲೋಕದಲ್ಲಿದ್ದಾನೆಂದು ತಿಳಿಯಿತು. ಕೂಡಲೇ ಈ ರಾಕ್ಷಸ ಪ್ರವೃತ್ತಿಯವನಾದ ’ಪಂಚಜ’ನನ್ನು ಕೊಂದು ಅವನ ಮೂಳೆಯಿಂದ  ’ಪಾಂಚಜನ್ಯ’ವೆಂಬ ಶಂಖವನ್ನು ನಿರ್ಮಿಸಿಕೊಂಡು ಯಮಲೋಕಕ್ಕೆ ಹೋದನು. ’ಪಾಂಚಜನ್ಯ’ದ ಸಹಾಯದಿಂದ ಯಮಲೋಕಕ್ಕೆ ಹೋಗಲು ಸುಲಲಿತವಾಯಿತು. ಯಮನ ಪಟ್ಟಣವಾದ ಶೈಮಿನಿಯಲ್ಲಿಗೆ ಬಂದು ತನ್ನ ಗುರುಪುತ್ರನನ್ನು ಪಡೆದು; ತನ್ನ ಗುರು ದಂಪತಿಗಳಲ್ಲಿಗೆ ತೆರಳಿ ’ಸಾಂದೀಪನಿ’ ಮಹರ್ಷಿಗೆ ಜೀವಸಹಿತ ಒಪ್ಪಿಸಿದನು.

ಪುತ್ರನನ್ನು ಹಿಂತಿರುಗಿ ಪಡೆದ ಗುರುದಂಪತಿಗಳು ಹರ್ಷಿತರಾದರು.ಗುರುವಿನ ಅಪೇಕ್ಷೆಯನ್ನು ಈಡೇರಿಸಿದ ಶ್ರೀಕೃಷ್ಣನ ಮನದಲ್ಲೂ ಧನ್ಯತಾಭಾವ ಮೂಡಿತು.

-ವಿಜಯಾಸುಬ್ರಹ್ಮಣ್ಯ, ಕುಂಬಳೆ.  

5 Responses

  1. ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

  2. Madhurakananaganapathibhat says:

    V nice narration of story

  3. ನಯನ ಬಜಕೂಡ್ಲು says:

    ಗುರು – ಶಿಷ್ಯರ ಸಂಬಂಧ ವನ್ನು ವರ್ಣಿಸಿದ ಪರಿ ಸೊಗಸಾಗಿದೆ.

  4. Anonymous says:

    ಮಧರಕಾನ ಗಣಪತಿ ಭಟ್ ಹಾಗೂ ನಯನ ಬಜಕ್ಕೂಡೆಲು ಅವರಿಗೆ ಧನ್ಯವಾದಗಳು.

  5. krishnaprabha says:

    ಚೆಂದದ ಬರಹ ವಿಜಯಕ್ಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: