ಕಂಡಲೀ ಕಾ ಸಾಗ್

Share Button

ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟಾಗ, ಅಲ್ಲಿಯ ಸ್ಥಳೀಯರನ್ನು ಮಾತಿಗೆಳೆದು, ಲಭ್ಯವಿದ್ದರೆ ಸ್ಥಳೀಯ ಸ್ಪೆಷಲ್ ಅಡುಗೆಯ ರುಚಿ ನೋಡಿ, ಇಷ್ಟವಾದರೆ ನಮ್ಮ ಮನೆಯ ಕಿಚನ್ ನಲ್ಲಿಯೂ ಪ್ರಯೋಗ ಮಾಡುವುದು ನನ್ನ ಹವ್ಯಾಸ.

ಆಗಸ್ಟ್ ೨೦೧೯ ರಲ್ಲಿ , ಉತ್ತರಾಖಂಡ ರಾಜ್ಯದ ‘ಹೂಗಳ ಕಣಿವೆ’ Valley of Flowers ಗೆ ಚಾರಣ ಹೋಗಿದ್ದೆವು. ನಮ್ಮ ಗೈಡ್ ಅನ್ನು ಸ್ಥಳೀಯ ಅಡುಗೆಗಳ ಬಗ್ಗೆ ವಿಚಾರಿಸಿದಾಗ ‘ಮಂಡುವಾ ಕಾ ರೋಟಿ (ರಾಗಿ/ಗೋಧಿ ಹಿಟ್ಟಿನ ಜೊತೆ ಸೇರಿಸಿ ತಯಾರಿಸುವ ರೋಟಿ) , ಜಂಗುರಾ ಕಾ ಖೀರ್ (ಸಾಮೆ ಅಕ್ಕಿಯ ಪಾಯಸ) ‘ ಘರ್ ವಾಲ್ ಕಾ ಸ್ಪೆಷಲ್ ಹೈ’ ಅಂದರು. ಹೆಸರಿನ ಮೂಲಕವೇ ಈ ರೆಸಿಪಿಗಳನ್ನು ಅಂದಾಜಿಸಬಹುದು.

‘ ಹಮ್ ಪಹಾಡಿ ಲೋಗ್ ಸೀಸಮ್ ಮೆ ಕಂಡಲೀ ಕಾ ಸಾಗ್ ಭೀ ಬನಾತೆ ಹೈ..ವೊ ಹರಾ ಸಬ್ಜಿ ಬಹುತ್ ಅಚ್ಚಾ ಹೋತಾ ಹೈ.. ‘ ಅಂದರು. ಘರ್ ವಾಲಿ ಭಾಷೆಯಲ್ಲಿ ಕಂಡಲೀ ಅಥವಾ ‘ಬಿಚು ಘಾಸ್’ Stinging Nettle ಎಂದು ಕರೆಯಲ್ಪಡುವ ಗಿಡ ಯಾವುದೆಂಬ ಕುತೂಹಲದಿಂದ ಕೇಳಿದಾಗ ಅವರು ತೋರಿಸಿದ ಸಸ್ಯ ಯಾವುದೆಂದರೆ, ಗುಡ್ಡಗಾಡಿನಲ್ಲಿ ತನ್ನಿಂತಾನೇ ಬೆಳೆಯುವ ‘ತುರುಚೇ ಗಿಡ’! ನಡೆಯುವಾಗ ಅಕಸ್ಮಾತ್ ಕೈ-ಕಾಲು ಸೋಕಿದರೆ ತುರಿಕೆ, ಬಾವು ಬರಿಸುವ ಸಸ್ಯವಿದು. ಇದೇ ಕಾರಣಕ್ಕೆ ತುರುಚೇಗಿಡಕ್ಕೆ ನಮ್ಮ ಆಡುಭಾಷೆಯಲ್ಲಿ ‘ಉರಿಸಣಿಕೆ’ ಅಂತಲೂ ಹೆಸರಿದೆ. ಚಿಕ್ಕಂದಿನಲ್ಲಿ ಇನ್ನೊಬ್ಬರಿಗೆ ಕೀಟಲೆ ಕೊಡಲೆಂದು ಈ ಗಿಡದ ಎಲೆಯನ್ನು ಅವರಿಗೆ ಗೊತ್ತಾಗದಂತೆ ಶಾಲಾ ಚೀಲದಲ್ಲೋ ಕೊಡೆಯ ಒಳಗೋ ಇರಿಸಿದವರಿದ್ದಾರೆ! ಆದರೆ, ಇದನ್ನೂ ಆಹಾರವಾಗಿ ಬಳಸಬಹುದೆಂದು ಈಗಷ್ಟೇ ಗೊತ್ತಾಯಿತು.

‘ಕಂಡಲೀ ಕಾ ಸಾಗ್ ‘ ಪಾಕವಿಧಾನ :
ತುರುಚೇ ಗಿಡದ ಎಳೆಯ ಎಲೆಗಳನ್ನು ಚಿಮಟದ ಸಹಾಯದಿಂದ ಜಾಗರೂಕತೆಯಿಂದ ಕಿತ್ತು, ಒಂದು ಕ್ಷಣ ಬೆಂಕಿಗೆ ಹಿಡಿದು (ಆಗ ಅದರಲ್ಲಿರುವ ತುರಿಕೆಗೆ ಕಾರಣವಾಗುವ ಅಂಶ ಕಡಿಮೆಯಾಗುತ್ತದೆ), ನೀರಿನಲ್ಲಿ ತೊಳೆದು, ಸಾಕಷ್ಟು ನೀರು ಸುರಿದು ಬೇಯಿಸಿ, ಬೆಂದ ಸೊಪ್ಪನ್ನು ಸೌಟಿನಿಂದ ಮಸೆಯುತ್ತಾರೆ.

ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಚಿಟಿಕೆಯಷ್ಟು ‘ಜಕಿಯಾ’ ಅಥವಾ ಸೆಣಬಿನ ಬೀಜಗಳನ್ನು ( Hemp seeds) ಹಾಕಿ , ಅದು ಚಟಪಟ ಸಿಡಿದಾಗ ಮಸೆದ ಸೊಪ್ಪನ್ನು ಸೇರಿಸಿ, ಕುದಿಸಿ, ಉಪ್ಪು ಹಾಕಿದರೆ ‘ಕಂಡಲೀ ಕಾ ಸಾಗ್’ ಸಿದ್ದ. ಮೂಲತ: ಕೇವಲ ನಾಲ್ಕೇ ವಸ್ತುಗಳನ್ನು ಬಳಸಿ ಮಾಡುವ ಪಹಾಡಿ ಅಡುಗೆಯಿದು. (ಈಗಿನವರು ಬೇರೆ ವಸ್ತುಗಳನ್ನು ಸೇರಿಸಿ ರುಚಿ ಹೆಚ್ಚಿಸಬಹುದು).

ವರ್ಷದ ಹೆಚ್ಚಿನ ಸಮಯವೂ ಹಿಮಾವೃತವಾಗಿರುವ ಪರ್ವತ ಪ್ರದೇಶಗಳಲ್ಲಿ ಲಭ್ಯವಿರುವ ಕನಿಷ್ಟ ವಸ್ತುಗಳನ್ನು ಬಳಸಿ ಅಡುಗೆ ಮಾಡುವ ಅನಿವಾರ್ಯತೆ ಇರುವ, ಕಷ್ಟದ ಪಹಾಡಿ ಜೀವನ ಶೈಲಿಯನ್ನು ಇದು ಸೂಚಿಸುತ್ತದೆ.

ಘರ್ ವಾಲ್ ಪ್ರದೇಶದಲ್ಲಿ ಬೆಳೆಯುವ ವಿವಿಧ ಸಿರಿಧಾನ್ಯಗಳನ್ನು ಬಳಸಿ ತಯಾರಿಸುವ ‘ಮುದ್ದೆ’ , ಅನ್ನ ಅಥವಾ ರೋಟಿಯೊಂದಿಗೆ ‘ಕಂಡಲೀ ಕಾ ಸಾಗ್ ‘ಅನ್ನು ಸವಿಯಬಹುದು. ಇದು ಅಧಿಕ ಕಬ್ಬಿಣಾಂಶವನ್ನು ಹೊಂದಿದ್ದು ಮಹಿಳೆಯರ ಆರೋಗ್ಯಕ್ಕೆ ಬಹಳ ಉತ್ತಮವಾದ ಪೋಷಕಾಂಶಗಳುಳ್ಳ ಆಹಾರವಂತೆ.

ನಮ್ಮ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ತುರುಚೇಗಿಡಗಳಿವೆ. ‘ಜಕಿಯಾ’ ಬೀಜಗಳ ಬದಲು ‘ಸಾಸಿವೆ/ಜೀರಿಗೆ’ ಒಗ್ಗರಣೆ ಕೊಡಬಹುದು..ಆದರೆ ‘ಕಂಡಲೀ ಕಾ ಸಾಗ್ ‘ ಅಲಿಯಾಸ್  ‘ತುರುಚೇಸೊಪ್ಪಿನ ಮಸ್ಸಾರು ‘ಮಾಡಿ ತಿನ್ನಲು ಧೈರ್ಯ ಸಾಕಾಗುತ್ತಿಲ್ಲ!

ಚಿತ್ರಕೃಪೆ: ಅಂತರ್ಜಾಲ

-ಹೇಮಮಾಲಾ.ಬಿ

10 Responses

  1. ನಯನ ಬಜಕೂಡ್ಲು says:

    Nice ಹೇಮಕ್ಕ . ಆ ತುರಿಸುವ ಸಸಿಗೆ ಈ ಕಡೆ ಬಹುಷಃ ತುಳುವಲ್ಲಿ ಆಕಿರೆ ಅಂತ ಹೇಳ್ತಾರೆ . ನೀವು ಹೇಳಿದ ಹಾಗೆಯೇ ಅದು ತುರಿಸುವುದು ಅಂತ ಗೊತ್ತಿದ್ದ ಕಾರಣ ಪ್ರಯೋಗ ಮಾಡಲು ಕಷ್ಟ .

  2. Shankari Sharma says:

    ಹೌದು..ತುರುಸಣಿಕೆ ಚಟ್ನಿ ತಿಂದು ತುಸುವಾದರೂ ತೊಂದರೆ ಆದರೆ ಸಾಕು ಮತ್ತೆ!! ಲೇಖನ ಚೆನ್ನಾಗಿದೆ ಮಾಲಾ.

  3. Anasuya Joshi says:

    ನಮ್ಮ ಹವ್ಯಕರು ಇದೊಂದು ಗಿಡದ ಸೊಪ್ಪನ್ನು ಮುಟ್ಟುತ್ತಿರಲಿಲ್ಲ. ಇನ್ನು ಅಷ್ಟೆ ಕಥೆ

  4. Gopalakrishna Bhat says:

    Very interesting and good information.

  5. Manjunath Suresh says:

    Olle bhaya thariso thinisu idu.alva.

  6. Madhu Rani says:

    ಅಷ್ಟು ಭಯದಲ್ಲಿ ಯಾಕೆ ಮಾಡಿ ತಿನ್ನಬೇಕು.. ಬಿಟ್ಟಾಕಿ..
    ನಂಗೆ ನೋಡೋಕೆ‌ ಸಾಕಾಯ್ತು..

  7. Geetha Kote says:

    ಟಿವಿ ಯಲ್ಲಿ ನೋಡಿದ್ದೆ. ನನಗೂ ಮಾಡಲು ಧೈರ್ಯ ಬರಲಿಲ್ಲ.

  8. Krishnaveni Kidoor says:

    ಏನು ಸಿಗುತ್ತೋ ಅದರ ಬಳಕೆ.

  9. Savithri bhat says:

    ತೋಟದಲ್ಲಿ ಇದನ್ನು ನೋಡಿದ ಕೂಡಲೇ ಬೆತ್ತದಿಂದ ಹೊಡೆಯುತ್ತಾರೆ . ತುಳುವಿನಲ್ಲೇ ಹೇಳುವುದಾದರೆ “ಬಡುಟ್ಟು ಆಕೊಡು” ಹಾಗೆ” ಆಕಿರೆ”ಎನುದು ಕರೆಯುತ್ತಾರೆ . ಇದನ್ನು ಅಡಿಗೆ ಮಾಡುವುದಂತೂ ದೂರದ ಮಾತು. ಏನೇ ಇರಲಿ ಬರಹ ಮಾಹಿತಿ ಚೆನ್ನಾಗಿದೆ

  10. Hema says:

    ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: