ಮಳೆಯಲ್ಲವಿದು…
ಮಳೆಯಲ್ಲವಿದು…
ಶಿವನ ತಾಂಡವ ನರ್ತನಕೆ
ಜಟೆಯಲಿರುವ ಗಂಗೆ
ಭಯಭೀತಳಾಗಿ ಮಿಡಿದ
ಕಣ್ಣೀರ ಕೋಡಿಯೇ ಇದು.
ಮಳೆಯಲ್ಲವಿದು…
ಸಾಗರ ಮಧ್ಯೆ ವಿಷ್ಣುವಿನ ಎದೆಗೊರಗಿ ಸರಸದಿಂದಿರುವಾಗ
ಭೃಗುಮುನಿಯ ಕಾಲೊದೆತಕೆ ಕೋಪಗೊಂಡ ಲಕ್ಷ್ಮಿ
ಸಾಗರದಿ ಬಿರಬಿರನೆ ಓಡಿದಾಗ
ಎದ್ದ ನೀರಿನಲೆಗಳ ತುಂತುರುಗಳಿವು.
ಮಳೆಯಲ್ಲವಿದು…
ತಾಯ ಆಣತಿಯಂತೆ ಬಾಗಿಲ ಕಾಯ್ದ
ಮಗುವಿನ ಶಿರ ಉರುಳಿದ ಕಂಡ
ಕನಲಿದ ಪಾರ್ವತಿ ಆಕ್ರೋಶಿಸಿದಾಗ
ಧರೆಗುರುಳಿದ ಒದ್ದೆಮೈಯ್ಯ ಹನಿಗಳಿವು.
ಮಳೆಯಲ್ಲವಿದು…
ತುಂಬಿದ ರಾಜಸಭೆಯಲಿ
ದ್ರೌಪದಿಯ ಸಿರಿಮುಡಿಯ ಹಿಡಿದು ಎಳೆತಂದು
ದುಶ್ಯಾಸನ ಸೀರೆ ಸೆಳೆಯುವಾಗ ಕೃಷ್ಣಾ ಎಂದು
ಒರಲಿ ಅತ್ತ ಪಾಂಚಾಲಿಯ ಕಣ್ಣೀರ ಧಾರೆಯಿದು
ಮಳೆಯಲ್ಲವಿದು…
ವನವಾಸದಲಿ ಸೀತೆಯನು
ರಾವಣ ಹೊತ್ತೊಯ್ಯುವಾಗ
ರಾಮಾ ರಾಮಾ ಎಂದು ಸೀತೆ
ಕಣ್ಣೀರಿಟ್ಟಾಗ ಬುವಿಗುರುಳಿದ ಅಶ್ರುಬಿಂದುಗಳಿವು.
(ರಾಜ್ಯದಲ್ಲಿ ಅಗಸ್ಟ್ ಮೊದಲವಾರದಲ್ಲಿ ಕುಂಭದ್ರೋಣ ಮಳೆ ಸುರಿದಾಗ ಬರೆದ ಕವನವಿದು.)
-ಪ್ರಕಾಶ ದೇಶಪಾಂಡೆ, ಹುಕ್ಕೇರಿ
ಅರ್ಧವಾಯಿತೆನೊ ಅನಿಸುತ್ತದೆ
ಸುಂದರವಾದ ಕವನ .
ಒಳ್ಳೆಯ ಕವನ.
ಸು೦ದರ ಅತಿ ಸುಂದರ