ನ್ಯೂಯಾರ್ಕ್ : ಸ್ಟೇಚ್ಯೂ ಆಫ್ ಲಿಬರ್ಟಿ
ಅಮೇರಿಕಾದಲ್ಲಿರುವ ಸವಲತ್ತುಗಳಲ್ಲಿ ನನಗೆ ಆಶ್ಚರ್ಯವೂ ಆನಂದವೂ ಆದ ವಿಚಾರವಿದು.. ಒಂದು ಕಡೆ ಕಾರನ್ನು ಬಾಡಿಗೆಗೆ ಪಡೆದು ತಾವೇ ಚಲಾಯಿಸಿಕೊಂಡು, ಬೇಕಾದಂತೆ ಬೇಕಾದ ಕಡೆ ಕೊಂಡುಹೋಗಿ ಅಲ್ಲಿಯೇ ಬಿಟ್ಟು ಹೋಗಬಹುದು. ಹಾಗೆಯೇ ನಾವು ಬಫೆಲೋದ ವಿಮಾನ ನಿಲ್ದಾಣದಲ್ಲಿ ಕಾರೊಂದನ್ನು ಬಾಡಿಗೆಗೆ ಪಡೆದು, ಅದ್ಭುತ ನಯಾಗರವನ್ನು ವೀಕ್ಷಿಸಿ, ಅಲ್ಲಿಂದ 370 ಮೈಲಿಗಳಷ್ಟು ದೂರವಿರುವ ಅಮೇರಿಕಾದ ಅತೀ ದೊಡ್ಡ ಮುಖ್ಯ ಪಟ್ಟಣವಾದ ನ್ಯೂಯಾರ್ಕ್ ಕಡೆಗೆ ನಮ್ಮ ಪಯಣ. ಸಂಜೆ 5ಗಂಟೆಗೆ ಹೊರಟ ನಾವು ರಾತ್ರಿ 8ಗಂಟೆಗೆ ಮಾರ್ಗ ಮಧ್ಯೆ ಸಿಕ್ಕಿದ ಪುಟ್ಟ ಪಟ್ಟಣ ಎಂಡಿಕೊಟ್ (Endicott) ಎಂಬಲ್ಲಿಯ ತಾಜ್ ತಂದೂರಿ ರೆಸ್ಟೋರೆಂಟ್ ನಲ್ಲಿ ನಮಗೆಲ್ಲರಿಗು ರಾತ್ರಿಯೂಟವನ್ನು ಕಟ್ಟಿಸಿಕೊಂಡಾಗ ತಿಳಿದ ವಿಷಯ ಕುತೂಹಲ ಕಾರಿಯಾಗಿತ್ತು. IBM ನಂತಹ ಬೃಹತ್ ಕಂಪೆನಿಯ ಪ್ರಾರಂಭ ಅದೇ ಊರಲ್ಲಿ ಆಗಿತ್ತಂತೆ.
ನ್ಯೂಯಾರ್ಕ್ ತಲಪಿದಾಗ ರಾತ್ರಿ 11ಗಂಟೆ. ಕೊಂಡೊಯ್ದ ಕಾರನ್ನು ನಾವು ಅಲ್ಲೇ ಬಿಡಬೇಕಾಗಿತ್ತು. ಇಡೀ ಅಮೇರಿಕಾ ದಲ್ಲೇ ತುಂಬಾ ದುಬಾರಿ ಪಟ್ಟಣವೆಂದು ನ್ಯೂಯಾರ್ಕ್ ಹೆಸರುವಾಸಿ. ಹೋಟೇಲ್ ನ್ನು ಮೊದಲೇ ಕಾದಿರಿಸಿದ್ದುದರಿಂದ ಅದರ ಭಯವಿರಲಿಲ್ಲ. ಚಿಕ್ಕದಾದರೂ ಚೊಕ್ಕವಾಗಿ ದ್ದವು ರೂಮುಗಳು. ಊಟ-ತಿಂಡಿಗಳಿಗೆ ಸಸ್ಯಾಹಾರಿ ಹೋಟೇಲ್ ಗಳು ಇಲ್ಲಿ ಲಭ್ಯ ವಿರುವುದಿಲ್ಲ. ಆದರೆ ನಾವೇ ಅಡಿಗೆ ಮಾಡಿಕೊಳ್ಳಲು ಅನುಕೂಲತೆ ಇರುವ ಹೋಟೆಲ್ ರೂಮುಗಳು ಸಿಗುತ್ತವೆ. ಅಡಿಗೆ ಸಾಮಾನುಗಳನ್ನು ಮಾತ್ರ ನಾವೇ ಒಯ್ಯುಬೇಕಷ್ಟೆ. ಆದ್ದರಿಂದ ನಮ್ಮ ಹತ್ತು ದಿನಗಳ ಪ್ರವಾಸದಲ್ಲಿ ಆಹಾರದ ಸಮಸ್ಯೆ ಇರಲಿಲ್ಲ.
ನ್ಯೂಯಾರ್ಕ್ ಎಂಬುದು ಅದೇ ಹೆಸರಿನ ರಾಜ್ಯದ ಮುಖ್ಯ ಪಟ್ಟಣ, ಹಲವು ದ್ವೀಪಗಳ ಸಮೂಹ. ಅಟ್ಲಾಂಟಿಕ್ ಮಹಾಸಾಗರವನ್ನು ಸೇರುವ ಮುಖ್ಯ ನದಿ *ಹಡ್ಸನ್ ( Hudson)* ಈ ಮಹಾ ನಗರವನ್ನು ಆವರಿಸಿಕೊಂಡಿದೆ. ನಮ್ಮಲ್ಲಿರುವ ಮೆಟ್ರೋ ದಂತೆ, ಅಲ್ಲಿ ಸಬ್ ವೇ (Subway) ಎಂಬ ಭೂಗತ ರೈಲುಗಳು ಜಗತ್ಪ್ರಸಿದ್ಧ. ಅತೀ ಜನ ದಟ್ಟಣೆಯಿಂದ ಕೂಡಿದ ಮುಂಬೈ ನಗರದ ರೈಲುಗಳಂತೆ ಪಟ್ಟಣದ ಅಲ್ಲಿಯ ಜನರ ಜೀವನಾಡಿಯೇ ಇದಾಗಿದೆ . ಅಮೇರಿಕಾದ ಬೇರೆ ಕಡೆಗಳಲ್ಲಿ ಕಂಡುಬರುವ ಕಾರುಗಳ ದಟ್ಟಣೆ ಇಲ್ಲಿ ಕಂಡುಬರುವುದಿಲ್ಲ. ಅತೀ ಸುವ್ಯವಸ್ಥಿತ, ಅಚ್ಚುಕಟ್ಟಾದ, ನಾಗರಿಕರಿಗೆ ಸುಲಭ ಸಾಧ್ಯವಾದ ಈ ಅದ್ಭುತ ವ್ಯವಸ್ಥೆಯನ್ನು ನೋಡುವಾಗ ಆಶ್ಚರ್ಯವೆನಿಸುತ್ತದೆ. ಪ್ರತೀ ನಿಲ್ದಾಣದಲ್ಲಿ ಕೇವಲ 40-45 ಸೆಕೆಂಡುಗಳಷ್ಟು ಸಮಯ ಮಾತ್ರ ನಿಲ್ಲುವ ಈ ವಿದ್ಯುತ್ ರೈಲುಗಳು ಅತ್ಯಂತ ವೇಗವಾಗಿ ಚಲಿಸುತ್ತವೆ.
ಜಗತ್ಪ್ರಸಿದ್ಧವಾದ ಸ್ಟೇಚ್ಯೂ ಆಫ್ ಲಿಬರ್ಟಿ (Statue of Liberty) ಯನ್ನು ನೋಡುವುದು ನಮ್ಮ ಮೊದಲನೇ ಆದ್ಯತೆಯಾಗಿತ್ತು. ಗುಲಾಮಗಿರಿಯ ಸಂಕಲೆಯನ್ನು ತೊಡೆದು, ತನ್ನ ಬಲದ ಕೈಯಲ್ಲಿ ಬೆಳಕಿನ ದೀವಟಿಗೆ ಹಿಡಿದು ಜಗತ್ತಿಗೇ ಸ್ವಾತಂತ್ರ್ಯದ ಬೆಳಕನ್ನು ಬೆಳಗಿಸುವ ಪ್ರತೀಕವಾಗಿ ಈ ಪ್ರತಿಮೆಯು ಸ್ಥಾಪಿಸಲ್ಪಟ್ಟಿದೆ. ಹಡ್ಸನ್ ನದಿಯ ಮಧ್ಯದ ಎಲ್ಲೀಸ್ ದ್ವೀಪ ( Ellis Island)ದಲ್ಲಿರುವ ಈ ಬೃಹದಾಕಾರದ ಸ್ತ್ರೀ ಮೂರ್ತಿ ನ್ಯೂಯಾರ್ಕ್ ನ ಹೆಗ್ಗುರುತು(Land mark) ) ಕೂಡಾ ಹೌದು. ಇದು ಫ್ರಾನ್ಸ್ ನಾಗರಿಕರಿಂದ 1886ರಲ್ಲಿ ಕೊಡುಗೆಯಾಗಿ ನೀಡಲ್ಪಟ್ಟಿತು.
ತಾಮ್ರದಿಂದ ತಯಾರಿಸಲ್ಪಟ್ಟ ಈ ಪ್ರತಿಮೆಯ ತಲೆಯ ಮೇಲಿನ ಕಿರೀಟದ ಸುತ್ತಲೂ ಇರುವ 7 ಮೊನಚಾದ ಆಕಾರಗಳೇ ಮಿಂಚಿನಿಂದ ರಕ್ಷಿಸಲು ಅಳವಡಿಸಿರುವ ಮಿಂಚು ನಿರೋಧಕಗಳು. ನೆಲದಿಂದ ತಲೆ ವರೆಗೆ 305 ಅಡಿಗಳಷ್ಟು ಎತ್ತರವಿದ್ದರೆ, ಬರೀ ಪ್ರತಿಮೆಯ ಎತ್ತರ 46ಮೀಟರುಗಳಷ್ಟು. ವರ್ಷದಲ್ಲಿ ಸುಮಾರು ಮೂರು ಮಿಲಿಯದಷ್ಟು ಜನರು ಇದನ್ನು ವೀಕ್ಷಿಸಲು ಬರುತ್ತಾರೆ.
ನಾಲ್ಕೈದು ಕ್ರೂಸ್ ಗಳು ಸಂಜೆ 6ಗಂಟೆ ವರೆಗೆ ಆಕಡೆಯಿಂದ ಈಕಡೆಗೆ ಮತ್ತು ಈಕಡೆಯಿಂದ ಆಕಡೆಗೆ ಜನರನ್ನು ಕೊಂಡೊಯ್ಯತ್ತಲೇ ಇರುತ್ತವೆ. ಅದೂ ಅಲ್ಲದೆ ಅಕ್ಕ ಪಕ್ಕದ ದ್ವೀಪಗಳ ಜನರೂ ಅವರ ದಿನ ನಿತ್ಯದ ವ್ಯವಹಾರಗಳಿಗೆ ಇವುಗಳಲ್ಲಿಯೇ ಸಂಚರಿಸುವರು. ನಾವು ಸಂಜೆ ತನಕ ಅಲ್ಲಿದ್ದು ಬೇಕಾದಷ್ಟು ಫೋಟೋ ಕ್ಲಿಕ್ಕಿಸಿ ಹಿಂತಿರುಗಿದಾಗ, ಆ ಪ್ರತಿಮೆಯು ಕಣ್ಣಿನಿಂದ ದೂರವಾದಂತೆ, ನಮ್ಮ ನೆನಪಿನ ಕಣ್ಣಿಗೆ ಹತ್ತಿರವಿರಿಸಲು ಪ್ರಯತ್ನಿಸಿದೆವು…ಇನ್ನೂ ಪ್ರಯತ್ನಿಸುತ್ತಲೇ ಇರುವೆವು..
– ಶಂಕರಿ ಶರ್ಮ, ಪುತ್ತೂರು.
ಆಪ್ತವಾಗುವಂತೆ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದೀರಿ.. ಬರಹ ಬಹಳ ಚೆನ್ನಾಗಿದೆ.
ಧನ್ಯವಾದಗಳು
ಆವಾಗ ಅವಾಗ ಸ್ಟ್ಯಾಚ್ಯು ಒಫ್ ಲಿಬರ್ಟಿಯ ಹೆಸರು ಕೇಳ್ತಿದ್ದೆವು, ಇವತ್ತು ನಿಮ್ಮ ಲೇಖನದ ಮೂಲಕ ಅದರ ಕುರಿತು ಸಾಕಷ್ಟು ವಿಚಾರಗಳು ತಿಳಿದವು. Nice
ಧನ್ಯವಾದಗಳು
ಬಹಳ ಸುಂದರ ಪ್ರವಾಸ ಕಥನ.
ಧನ್ಯವಾದಗಳು