ಒಂದು ಚಹಾ ಕುಡಿದ ಹಾಗೆ
ನಿನ್ನೊಲುಮೆಯೆಂದರೆ,
ಒಂದು ಚಹಾ ಕುಡಿದ ಹಾಗೆ..
ಗುಟುಕರಿಸಿ ನಾಲಗೆ ಮೇಲುಳಿದ
ಸಕ್ಕರೆಯ ಸಿಹಿ, ಬಾಯ್ತುಂಬಿ
ಅಡರುವ ಏಲಕ್ಕಿಯ ಘಮ ಘಮ..
ನಿನ್ನೊಲುಮೆ ಎಂದರೆ, ನಡುಗುವ
ಚಳಿಗೆ ಅಂಗೈ ನಡುವೆ ಚಹಾದ ಬಟ್ಟಲು
ಹಿಡಿದಾಗ ತಾಕುವ ಬಿಸಿಯ ಬಿಸುಪದು
ವಿರಹದಲಿ ಕಾಡುವ ನೆನಪಿನ ಧಗೆ…
ನಿನ್ನೊಲುಮೆ ಎಂದರೆ, ಉರಿಬೆಂಕಿಯ
ಒಡಲಿಗೊಡ್ಡಿದ ಪಾತ್ರೆಗೆ ಸುರಿದ ನೀರ
ಕುದಿಯಲ್ಲಿ ಅರಳಿಕೊಳ್ಳುವ ಅಸಂಖ್ಯ
ಮುರುಟಿದ ಎಲೆಗಳು…
ರಂಗೇರಿ, ಸ್ವಾದ ಆಸ್ವಾದ ಅಲೆ
ಅಲೆಯಲಿ ತೇಲಿ ಬಂದು ರುಚಿಯ
ಮೊಗ್ಗ ಅರಳಿಸಿ, ತುಟಿಗೆ ತಾಕಿದಾಗ
ಆ ಗುಟುಕನು ಪ್ರೇಮವಲ್ಲವೆನಲು
ಹೇಗೆ ಸಾಧ್ಯ ನನಗೆ…?!
ಉರಿದದ್ದು, ಕುದಿದದ್ದು, ಸೋಸಿದ್ದು
ಮುಗಿದ ಮೇಲೆ ಉಳಿದದ್ದು ಚಹಾದ
ಚರಟ ಮಾತ್ರ ಎನ್ನಲು ಮನಸ್ಸಾಗದು.
ಹುಮ್ಮಸ್ಸೊಂದು ಒಲವಾಗಿ ಚಹಾದ
ಕಪ್ಪಿನೊಳಗೆ ಲೀನವಾಗಿರುವಾಗ…
–ವಸುಂಧರಾ ಕೆ ಎಂ., ಬೆಂಗಳೂರು
ಚೆಂದದ ಕವಿತೆ ವಸುಂಧರ
ಚೆನ್ನಾಗಿದೆ ಕವಿತೆ
ಟೀ ಕುಡೀತಾ ಈ ಕವಿತೆಯನ್ನು ಆಸ್ವಾದಿಸಬೇಕು ಅದರ ಮಜಾನೇ ಬೇರೆ . Nice one madam ji
ಚಹದ ಮಧುರತೆಯಂತಿದೆ ಕವನ.