ಒಂದು ಖಾಲಿ ಜಾಗ
ಎಲ್ಲರ ಬಳಿಯೂ ಎಲ್ಲರೊಳಗೂ
ಇರಬಹುದು ಒಂದೊಂದು ಖಾಲಿ ಜಾಗ.
ಹಿತ್ತಲಿನಲ್ಲಿಯೋ? ಮುಂದಣ ಅಂಗಳದಲ್ಲಿಯೋ?
ಒಳಕೋಣೆಯೊಳಗೋ? ಅಥವಾ ಯಾವುದೋ
ಅದೃಶ್ಯ ಎಡೆಯಲ್ಲಿ ತೀರಾ ಖಾಸಾಗಿಯಾಗಿ.
ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದ
ಕುರಿತು ಯೋಚಿಸಿಯೇ ಇರುತ್ತಾರೆ.
ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ?
ಭತ್ತ ಬೆಳೆಯುವುದಾ?
ತುಸು ಹೆಚ್ಚೇ ಇದ್ದರೆ ಕಟ್ಟಡ ಕಟ್ಟಿಸಿ
ಬಿಕರಿಗಿಡುವುದಾ?
ಅವರವರ ಅನುಕೂಲಕ್ಕೆ ತಕ್ಕ ಹಾಗೆ
ಅಗತ್ಯಕ್ಕೆ ತಕ್ಕ ಹಾಗೆ.
ಇವರೇ ವಾರಸುದಾರರು ಅಂತ
ಬೆಟ್ಟು ಮಾಡಿ ತೋರಿಸಲಾಗದ ಅಸಹಾಯಕತೆಯಲ್ಲಿ
ಖಾಲಿ ಜಾಗವೊಂದು ಅವರಿವರ ಕೈಗೂಸಾಗುತ್ತಲೇ ಸಾಗುತ್ತದೆ
ವ್ಯಾಪಾರ-ವಹಿವಾಟು ಭರದಲ್ಲಿ ಕುದುರುತ್ತದೆ.
ಕಟ್ಟಡವಾದರೆ ಉಸಿರಾಡದೆಯೂ
ಹಲವು ಕಾಲ ಹಾಗೇ ಉಳಿದುಕೊಂಡು ಬಿಡುತ್ತದೆ.
ಬಿತ್ತಿದ್ದು ಬೆಳೆದದ್ದು ಕಾಲಕಾಲಕ್ಕೆ
ಹುಟ್ಟಿ,ಸತ್ತು,ಮರುಹುಟ್ಟು ಪಡೆದು
ಬದಲಾಗುತ್ತಲೇ ಇರುತ್ತದೆ.
ಹಾಗೇ..
ಎಷ್ಟು ಸುಲಭದಲ್ಲಿ ಈ ಖಾಲಿ ಜಾಗಗಳು
ತುಂಬಿಕೊಳ್ಳುತ್ತಲೇ ಬರಿದಾಗುತ್ತವೆ
ಕ್ರಯ-ವಿಕ್ರಯಗಳ ತಕ್ಕಡಿಯೊಳಗೆ
ತೂಗಿಸಿಕೊಂಡೇ ನಿಲ್ಲುತ್ತವೆ.
ಬಹುಕಾಲದಿಂದ ನೋಡುತ್ತಲೇ ಇರುವೆ
ಇಲ್ಲೊಂದು ಅಗೋಚರ ಖಾಲಿ ಸ್ಥಳ
ಹಾಗೇ ಉಳಿದುಕೊಂಡು ಬಿಟ್ಟಿದೆ.
ನಿರಾಕಾರ ಗಾಳಿ ಹೊತ್ತು ತರುವ ಅಪರೂಪದ
ಪರಿಮಳವಷ್ಟೇ ಅಲ್ಲಿ ಸುಳಿದಾಡುತ್ತದೆ.
ಒಂದು ನಿಶ್ಯಬ್ದ ಮಿಡುಕಾಟ
ಕಂಡದ್ದೂ ಕಾಣದ್ದೂ ಎಂದಿಗೂ ದೊರಕದ್ದು ಮಾತ್ರ
ಆ ಖಾಲಿಯೊಳಗೆ ತುಂಬಿಕೊಳ್ಳುತ್ತಲೇ ಇದೆ.
ಆದರೂ ಆ ಖಾಲಿ ಖಾಲಿಯಾಗಿಯೇ ಉಳಿದಿದೆ.
ಕುತೂಹಲವಿದ್ದರೆ, ಒಮ್ಮೆ ಮುಟ್ಟಿ
ಕಣ್ಬಿಟ್ಟು ನೋಡಿಕೊಳ್ಳಿ.
ಆ ಒಂದು ಖಾಲಿ ಜಾಗ ಬಹುಷ:
ನಿಮ್ಮದೇ ಇರಬಹುದೇನೋ..?.
-ಸ್ಮಿತಾ ಅಮೃತರಾಜ್. ಸಂಪಾಜೆ
“ಆ ಖಾಲಿಯೊಳಗೆ ತುಂಬಿಕೊಳ್ಳುತ್ತಲೇ ಇದೆ.
ಆದರೂ ಆ ಖಾಲಿ ಖಾಲಿಯಾಗಿಯೇ ಉಳಿದಿದೆ.’ ..ಎಂತಹಾ ವಿಶಿಷ್ಟ ಭಾವ! ಚೆಂದದ ಕವನ ..
ಖಾಲಿತನವನ್ನೆಲ್ಲ ಖಾಲಿಮಾಡುವಂತಹ ಚೆಂದದ ಕವನ
ಸ್ಮಿತಾ ಬರಹವೆಂದರೆ ಮತ್ತೆ ಮಾತನಾಡುವಂತೆಯೇ ಇಲ್ಲ… ಅರ್ಥಗರ್ಭಿತ ಕವನ ಸ್ಮಿತಾ..
ಉತ್ತಮ ಕವಿತೆ, ಅಂತರಂಗದ ಸೂಕ್ಷ್ಮತೆಯನ್ನು ತೆರೆದಿಡುತ್ತದೆ,