ಅಮ್ಮ ಎಂಬ ಅಭಿಮಾನ…
“ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ ಮೊದಲು ಹೊರಬೀಳುವ ಶಬ್ದ “ಅಮ್ಮಾ.” ಎಂದಾಗಿರುತ್ತದೆ. ಮಗು ಬೆಳೆದು ಎಷ್ಟೇ ದೊಡ್ಡವನಾ/ಳಾದರೂ “ಅಮ್ಮ” ಎಂಬ ಆಪ್ತ ಸಂಬಂಧದಿಂದ ಕಳಚಿಕೊಳ್ಳಲು ಸಾಧ್ಯವೇ ಇಲ್ಲ. ಕ್ರೂರ ಹೃದಯದ ಕಟುಕನಿಗೂ “ಅಮ್ಮ” ಎಂಬ ಪದ ಉಚ್ಛರಿಸುವಾಗ ಮನಸ್ಸು ಆರ್ದ್ರವಾಗುತ್ತದೆ.
ಪ್ರತಿಯೊಬ್ಬರಿಗೂ ಅಮ್ಮನ ಕುರಿತು ಹೇಳಲು ನೂರಾರು ವಿಷಯಗಳಿರುತ್ತವೆ. ನನಗೂ ಅಮ್ಮ ಎಂದಾಗ ನೂರಾರು ನೆನಪುಗಳು ಒಂದರ ಹಿಂದೆ ಒಂದಾಗಿ ಲಗ್ಗೆಯಿಡುತ್ತವೆ. ಕೇವಲ ಐದನೇ ಕ್ಲಾಸು ಕಲಿತ, ಅಪ್ಪಟ ಹಳ್ಳಿಗಳಾದ ನನ್ನಮ್ಮ ಕನ್ನಡ ಹಾಗೂ ಮಲಯಾಳಂ ಭಾಷೆಗಳ ಪುಸ್ತಕಗಳನ್ನು ಯಾವುದೇ ತಡೆಯಿಲ್ಲದೇ ಓದುತ್ತಿದ್ದರು. ನನ್ನ ಅಪ್ಪನಂತೆ ಅಮ್ಮನಿಗೂ ಇತ್ತು ಓದುವ ಹವ್ಯಾಸ. ನಾವು ಚಿಕ್ಕವರಿರುವಾಗ ಅಮ್ಮ ತಾನು ಶಾಲೆಯಲ್ಲಿ ಕಲಿತ ಕೆಲವು ಹಾಡುಗಳನ್ನೂ, ಕತೆಗಳನ್ನೂ ಹೇಳಿಕೊಡುತ್ತಿದ್ದರು. ಹಟಮಾರಿ. ನಾನು ಕಾಪಿ ಬರೆಯದೇ ಅತ್ತು ಕರೆದು ರಂಪ ಮಾಡಿ ಅಮ್ಮನ ಕೈಯಲ್ಲಿ ಬರೆಸಿಕೊಂಡು ಹೋಗುತ್ತಿದ್ದುದೂ ಉಂಟು. ನನ್ನಮ್ಮನ ಕುರಿತ ನನ್ನ ನೆನಪುಗಳಲ್ಲಿ ಅತ್ಯಂತ ಸ್ಪಷ್ಟವಾದುದು ತಲೆಯ ಮೇಲೊಂದು, ಸೊಂಟದ ಮೇಲೊಂದು ಕೊಡ ಹೊತ್ತು ದೂರದಿಂದ ನೀರು ಹೊತ್ತು ತರುತ್ತಿದ್ದುದು. ಕಟ್ಟಿಗೆ ಒಲೆಯಲ್ಲಿ ಬೆಂಕಿ ಉರಿಸಲು ಗಾಳಿಯೂದಿ ಹೊಗೆಯಿಂದ ಕಣ್ಣು ಕೆಂಪಾದರೂ ದಿನ ಪೂರ್ತಿ ಅಡುಗೆ ಮನೆಯಲ್ಲೇ ಕಳೆಯುತ್ತಿದ್ದ ನನ್ನಮ್ಮ, ಅಡಿಕೆ, ತೆಂಗು, ರಬ್ಬರ್ ಈ ರೀತಿ ವಿವಿಧ ರೀತಿಯ ಕೃಷಿಗಳು ಪ್ರಾರಂಭದ ಹಂತದಲ್ಲಿದ್ದ ಆ ಕಾಲದಲ್ಲಿ ಸಾಲದ ಕಾರಣದಿಂದ ಬಡತನವಿದ್ದರೂ ಅಪ್ಪನೊಂದಿಗೆ ಹೆಗಲಿಗೆ ಹೆಗಲಾಗಿ ದುಡಿದು ಮನೆವಾರ್ತೆ ನಿಭಾಯಿಸುತ್ತಿದ್ದ ನನ್ನಮ್ಮ, ದನಕರು, ಆಡು, ಕೋಳಿಗಳನ್ನು ಕೂಡಾ ಸಾಕಿ, ಆಡು ಅಥವಾ ಕೋಳಿ ಮಾರಿದ ಹಣದಿಂದ ನಮಗೆ ಕಾಲ್ಗೆಜ್ಜೆ ಹಾಗೂ ಕಿವಿಯೋಲೆ ಮಾಡಿಸಲು ಹರಸಾಹಸ ಪಡುತ್ತಿದ್ದ ನನ್ನಮ್ಮ ಹೀಗೆ ಅಮ್ಮನ ಕುರಿತ ಇನ್ನೂ ಹಲವು ಚಿತ್ರಗಳು ಸುರುಳಿ ಬಿಚ್ಚುತ್ತವೆ.
ಅಮ್ಮನ ಕೆಲವು ಕೆಲಸಗಳಲ್ಲಿ ನಮ್ಮ ಅಳಿಲು ಸೇವೆ ಇರುತ್ತಿತ್ತು. ಅದೆಲ್ಲಾ ಬಹಳ ಇಷ್ಟಪಟ್ಟು ನಾವಾಗಿ ಮಾಡುತ್ತಿದ್ದುದಲ್ಲ. ಒಮ್ಮೊಮ್ಮೆ ಕೆಲಸ ಮಾಡುವುದು ನಮಗೆ ಒಂದು ಆಟದಂತೆ ಅನಿಸಿದರೆ, ಇನ್ನು ಕೆಲವೊಮ್ಮೆ ಅಮ್ಮನಿಂದ ನನ್ನ ಇಷ್ಟದ ಬೆಲ್ಲದ ತುಂಡನ್ನು ಪಡೆಯಲು ಕೆಲಸ ಮಾಡುತ್ತಿದ್ದೆ. ಹೀಗೆ ದನವನ್ನು ಬಿಚ್ಚಿ ಕಟ್ಟುವುದಕ್ಕೋ ಇನ್ಯಾವುದೋ ಕೆಲಸಕ್ಕೋ ತೋಟದ ಕಡೆ ಹೋದಾಗ ನನ್ನ ಕಾಲ್ಗೆಜ್ಜೆಯೋ ಚಿನ್ನದ ಕಿವಿಯೋಲೆಯೋ ಕಳೆದು ಹೋದದ್ದೂ ಇದೆ. ಆಗ ಅಳುತ್ತಾ ಬಂದು ಅಮ್ಮನಿಗೆ ಹೇಳಿದರೆ ಅವರು ” ನೀನು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ನಿಂತು ಈ ಪ್ರಾರ್ಥನೆ ಹೇಳು. ನಂತರ ಅದು ಕಳೆದು ಹೋದಲ್ಲಿ ಹುಡುಕು” ಎನ್ನುತ್ತಿದ್ದರು. ನಾನು ಹಾಗೆಯೇ ಪ್ರಾರ್ಥಿಸಿ ಹುಡುಕುತ್ತಿದ್ದೆ. ಕಳೆದು ಹೋದದ್ದು ಸಿಗುತ್ತಿತ್ತು. ಇದರಿಂದಲೂ, ಅವರು ಹೇಳುತ್ತಿದ್ದ ಕೆಲವು ಕತೆಗಳಿಂದಲೂ ನನ್ನ ಆಧ್ಯಾತ್ಮಿಕತೆಯೂ ಬೆಳೆಯಿತು.
ಸಣ್ಣವಳಿರುವಾಗ ನನ್ನ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಕಿವಿ ನೋವು, ಕೆಮ್ಮು, ಜ್ವರ ನನಗೆ ಆಗಾಗ ಮರುಕಳಿಸುವಾಗ ನನ್ನಮ್ಮ ರಾತ್ರಿಯೂ ಎಚ್ಚರವಾಗಿದ್ದು ನನ್ನನ್ನು ನೋಡಿಕೊಳ್ಳುತ್ತಿದ್ದುದು ನೆನಪಾಗುತ್ತದೆ. ತನ್ನ ಐವರು ಮಕ್ಕಳಲ್ಲಿ ನಾಲ್ಕೂ ಹೆಣ್ಣಾದುದಕ್ಕೆ ಕುಟುಂಬದವರೆಲ್ಲರೂ ಮೂದಲಿಸಿದಾಗ ಸ್ವಲ್ಪ ವಿಚಲಿತರಾಗುತ್ತಿದ್ದರೂ ನಮಗೆ ಅವರು ಧೈರ್ಯ ತುಂಬುತ್ತಿದ್ದರು. ಅವರ ಪ್ರಾರ್ಥನೆಯ ಫಲವೋ ಏನೋ ನಾವೆಲ್ಲರೂ ಕಲಿಯುವುದರಲ್ಲಿ ಜಾಣರಾಗಿದ್ದೆವು. ಉತ್ತಮ ವಿದ್ಯಾಭ್ಯಾಸ ಪಡೆದು ಎಲ್ಲರೂ ಒಂದಿಲ್ಲೊಂದು ಉದ್ಯೋಗವನ್ನೂ ಪಡೆದೆವು. ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ನಾವು ಪರೀಕ್ಷೆಗೆ ಓದುತ್ತಿರಬೇಕಾದರೆ ಅಮ್ಮ ಕೂಡಾ ಎಚ್ಚರವಾಗಿದ್ದು ಯಾವುದಾದರೂ ಮಲಯಾಳಂ ಮ್ಯಾಗಸಿನ್ ಅಥವಾ ಬೈಬಲ್ ಓದುತ್ತಾ ಕುಳಿತಿರುತ್ತಿದ್ದರು. ಬೆಳಗ್ಗೆ ತಾವು ಬೇಗ ಎದ್ದು ನಮ್ಮನ್ನು ಎಬ್ಬಿಸಿ ಓದಿಸುತ್ತಿದ್ದರು. ನಮಗೆ ನಿದ್ರೆ ಬರದಿರಲೆಂದು ಚಹಾ ಮಾಡಿ ಕೊಡುತ್ತಿದ್ದರು. ಬೆಳಗ್ಗೆ ಐದು ಐದೂವರೆಗೆ ಎದ್ದು ಕೆಲಸ ಪ್ರಾರಂಭಿಸುವ ಅಮ್ಮ ಮಲಗುವಾಗ ರಾತ್ರಿ ಹನ್ನೊಂದು ಗಂಟೆ ಕಳೆಯುತ್ತಿತ್ತು. ವಿವಿಧ ಮಿಶ್ರ ಕೃಷಿಗಳನ್ನು ಮಾಡುತ್ತಿದ್ದ ಕಾರಣ ನಮ್ಮ ಮನೆಯಲ್ಲಿ ಯಾವಾಗಲೂ ಕೆಲಸಕ್ಕೆ ಜನರಿರುತ್ತಿದ್ದರು. ಹಾಗಾಗಿ ಅಮ್ಮನಿಗೆ ದಿನವಿಡೀ ಅಡುಗೆ ಕೆಲಸ ಮಾಡಬೇಕಾಗುತ್ತಿತ್ತು. ಸಾಮಾನ್ಯವಾಗಿ ಮರಗೆಣಸು ಬೇಯಿಸಿದ್ದು, ಒಣ ಮೀನು ಸಾರು ಹಾಗೂ ಗಂಜಿ ಬೆಳಗ್ಗಿನ ಉಪಾಹಾರವಾಗಿರುತ್ತಿತ್ತು. ಮಧ್ಯಾಹ್ನ ಅನ್ನ ಸಾರು, ಪಲ್ಯ, ಹಪ್ಪಳ ಅಥವಾ ಒಣಮೀನು ಫ್ರೈ, ಹಸಿ ಮೀನಿನ ಸೀಸನ್ ನಲ್ಲಿ ಹಸಿಮೀನಿನ ಸಾರು ಹಾಗೂ ಫ್ರೈ ಈ ತರ ಇರುತ್ತಿತ್ತು ಮೆನು. ರಾತ್ರಿಯೂಟಕ್ಕೆ ಪುನಃ ಅನ್ನ, ಪದಾರ್ಥ ತಯಾರಾಗಬೇಕಿತ್ತು. ಇದರ ಮಧ್ಯೆ ಬಟ್ಟೆ ಒಗೆಯುವುದು, ದನದ ಹಟ್ಟಿ ಸ್ವಚ್ಛಗೊಳಿಸುವುದು, ಹಾಲು ಕರೆಯುವುದು, ಅಪ್ಪನಿಗೆ ಆಗಾಗ ಕುಡಿಯಲು ಬ್ಲಾಕ್ ಟೀ ಮಾಡಿಕೊಡುವುದು ಹೀಗೆ ಹಲವು ಕೆಲಸಗಳನ್ನೂ ಅಮ್ಮ ಮಾಡಬೇಕಿತ್ತು. ನಾವು ಮಲಯಾಳಿಗಳಾದುದರಿಂದ ನಮ್ಮ ವಿಶೇಷ ತಿನಿಸುಗಳಾದ ಪುಟ್ಟು, ಇಡಿಯಪ್ಪಂ(ಸೇಮಿಗೆ) ಇತ್ಯಾದಿ ತಯಾರಿಗಾಗಿ ಬೆಳ್ತಿಗೆ ಅಕ್ಕಿಯನ್ನು ನೆನೆಹಾಕಿ ಒರಳಲ್ಲಿ ಹಾಕಿ ಕುಟ್ಟಿ ಪುಡಿಮಾಡಿ, ಜರಡಿ ಹಿಡಿದು, ಸಣ್ಣಗೆ ಫ್ರೈ ಮಾಡಿ, ತಣಿಸಿ ಆ ಹಿಟ್ಟನ್ನು ಡಬ್ಬಿಯಲ್ಲಿ ತುಂಬಿಡುತ್ತಿದ್ದರು. ಅಜ್ಜಿಯೋ, ನಾವು ಮಕ್ಕಳೋ ಈ ಕೆಲಸದಲ್ಲಿ ಸಣ್ಣ ಮಟ್ಟಿನ ಸಹಾಯ ಮಾಡುತ್ತಿದ್ದೆವು. ನಮ್ಮ ಮನೆಗೆ ಇನ್ನೂ ವಿದ್ಯುತ್ತಿನ ಆಗಮನವೇ ಆಗದ ಆ ಕಾಲದಲ್ಲಿ ಏನೇ ಮಸಾಲೆ ಅರೆಯಬೇಕಾದರೂ ಅರೆಯುವ ಕಲ್ಲಲ್ಲೇ ಅರೆಯಬೇಕಿತ್ತು. ದೋಸೆ ಇತ್ಯಾದಿಗಳ ಹಿಟ್ಟನ್ನೂ ಕಲ್ಲಲ್ಲೇ ರುಬ್ಬಬೇಕಿತ್ತು. ಆಡು, ಕೋಳಿ, ದನ, ನಾಯಿ, ಬೆಕ್ಕು ಇತ್ಯಾದಿ ಸಾಕು ಪ್ರಾಣಿಗಳಿಗೆ ಆಯಾ ಸಮಯಕ್ಕೆ ಆಹಾರ, ನೀರು ಕೊಡುವುದು ಕೂಡಾ ಅಮ್ಮನ ಕೆಲಸವೇ ಆಗಿತ್ತು.
ಈ ರೀತಿ ನೂರಾರು ಕೆಲಸಗಳಿದ್ದರೂ ಕೆಲಸ ಹೆಚ್ಚಾಯಿತೆಂದು ಅಮ್ಮ ದೂರು ಹೇಳುತ್ತಿದ್ದುದನ್ನು ನಾನು ಕಂಡಿಲ್ಲ. ಎಲ್ಲಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ಉದಾಸೀನದಿಂದ ಅವರು ಕುಳಿತುದನ್ನು ನಾನೆಂದೂ ನೋಡಿಲ್ಲ. ಕಡಿಮೆ ಸಂಪನ್ಮೂಲಗಳಲ್ಲೇ ಕಂಪ್ಲೇಂಟ್ ಇಲ್ಲದೇ ಮನೆ ನಿಭಾಯಿಸುತ್ತಿದ್ದರು. ಬಟ್ಟೆಬರೆ, ಒಡವೆಗಳಿಗಾಗಿ ಅವರು ಅಪ್ಪನನ್ನು ಪೀಡಿಸುತ್ತಲೂ ಇರಲಿಲ್ಲ. ಬಹುಶಃ ಆ ಕಾಲದಲ್ಲಿ ಪರಿಸ್ಥಿತಿಯೇ ಹಾಗಿತ್ತು. ಹೆಚ್ಚಿನ ಎಲ್ಲಾ ಅಮ್ಮಂದಿರೂ ಹೆಚ್ಚು-ಕಡಿಮೆ ನನ್ನ ಅಮ್ಮನಂತೆಯೇ ಇದ್ದರು. ಕೃಷಿಕರಾದುದರಿಂದ ನನ್ನ ಅಮ್ಮನಿಗೆ ಸ್ವಲ್ಪ ಹೆಚ್ಚೇ ಕೆಲಸವಿತ್ತು .ನಾವು ನಾಲ್ವರು ಹೆಣ್ಣು ಮಕ್ಕಳಾದುದರಿಂದ ನಮ್ಮೆಲ್ಲರ ಹೆರಿಗೆ,ಬಾಣಂತನ ಎಂದು ಇನ್ನಷ್ಟೂ ಕೆಲಸದ ಭಾರ ಅವರಿಗೆ ಬಿತ್ತು. ನಾವು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾದರೂ, ವಿವಿಧ ಕಾರಣಗಳಿಗೆ ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗಲೂ ಅಮ್ಮನೇ ನಮಗೆಲ್ಲಾ ಶುಶ್ರೂಷಕಿ. ಈ ರೀತಿಯ ಬಿಡುವಿಲ್ಲದ ದುಡಿಮೆಯಿಂದಲೋ ಏನೋ, ನನ್ನ ಅಮ್ಮನಿಗೀಗ ಮೂಳೆ ಸವೆತದಿಂದ ಮೊಣಕಾಲು ಗಂಟು ಸವೆದು ನಡೆದಾಡುವುದೇ ತ್ರಾಸದಾಯಕವೆನಿಸಿದೆ. ಆ ತ್ಯಾಗ ಮೂರುತಿಗೆ ವಿಶ್ರಾಂತಿ ಪಡೆದು ಆರಾಮವಾಗಿರಬೇಕಾದ ಈ ಕಾಲದಲ್ಲಿ ರೋಗಗಳು ಜೊತೆಯಾದದ್ದು ನಮಗೆಲ್ಲಾ ಬಹಳಷ್ಟು ಬೇಸರ ತಂದಿದೆ, ನನಗೆ ತೀರಿಸಲಾಗದ ಅತಿ ದೊಡ್ಡ ಋಣವೆಂದರೆ ನನ್ನಮ್ಮನ ಋಣವೊಂದೇ ಅನಿಸುತ್ತದೆ.
ಎಲ್ಲರಿಗೂ ಅಮ್ಮಂದಿರ ದಿನದ ಶುಭಾಶಯಗಳು.
– ಜೆಸ್ಸಿ ಪಿ.ವಿ
ಆಪ್ತ ಬರಹ. ಇಷ್ಟವಾಯಿತು.
ಅಮ್ಮ ಎಂದರೆ ಅಷ್ಟೇ ಸಾಕು..
ತುಂಬ ಚೆನ್ನಾಗಿದೆ. ಅಮ್ಮನ ಋಣ ತೀರಿಸುವುದು ಅಸಾಧ್ಯವೇ ಸರಿ.