ಭಕ್ತಿ ಎಂಬ ಭರವಸೆ

Share Button

ಹಚ್ಚ ಹಸುರಿನಿಂದಾವೃತ ಕಾನನ ,
ನಡುವೆ ನೆಲೆಸಿರೋ ಶಿವ ಸನ್ನಿಧಾನ ,
ಪ್ರಕೃತಿಯ ಮಡಿಲ ಈ ತಾಣ ,
ನೆಲೆಸುವಂತೆ ಮಾಡಿಹುದು ಇಲ್ಲಿನ ಜನರ ಮನದಲ್ಲಿ ನೆಮ್ಮದಿಯನ್ನ.

ದೇವರೆಂದರೆ ನಂಬಿಕೆ ,
ಅದಿಲ್ಲದಿರೆ ಶೂನ್ಯ ಈ ಬದುಕೇ ,
ಭಕ್ತಿಯಲ್ಲಿರುವುದು ಕೋರಿಕೆ ,
ಏನೇ ಇದ್ದರೂ ನೆರವೇರಿಸುವನವನು ಭಕ್ತರ ಮನದ ಪ್ರತಿಯೊಂದು ಬಯಕೆ .

ನಟವರ , ಗಂಗಾಧರ ,
ಇಲ್ಲಿ ನಿನ್ನ ಪೂಜಿಸುವರು ಕರೆದು ಮಹಾಲಿಂಗೇಶ್ವರ ,
ನಿನ್ನ ನಾಮಗಳೋ ಹತ್ತು ಹಲವು,
ಆದರೆ ಒಂದೇ ಎಲ್ಲಾ ಭಕ್ತಿಯ ಸಾರ.

ನಿನಗಿಲ್ಲ ಶ್ರೀಮಂತ ಬಡವನೆಂಬ ಭೇದ ಭಾವ,
ಬೀರುವೆ ಎಲ್ಲರ ಮೇಲೂ ಒಂದೇ ಸಮನಾದ ಪ್ರಭಾವ ,
ಅವರವರ ಹಣೆಬರಹಕ್ಕೆ ತಕ್ಕಂತೆ ಹಂಚಿ ನೋವು ನಲಿವ ,
ಪೊರೆಯುವುದೆಲ್ಲರ ನಿನ್ನ ಸ್ವಭಾವ.

ನಡೆಸಿ ಉತ್ಸವ ಎಲ್ಲರೂ ಜತೆಗೂಡಿ ಎಳೆವಾಗ ನಿನ್ನ  ತೇರು ,
ಕಾಣಬಹುದಿಲ್ಲಿ ಹಬ್ಬಿದ ಒಗ್ಗಟ್ಟಿನ ಬೇರು ,
ಉಳಿದಂತೆ ಇದ್ದರೂ ಭಿನ್ನಮತ ನೂರು,
ಆ ದೇವನ ಸಾನಿಧ್ಯದಲ್ಲಿ ಎಲ್ಲರೂ ಸಮಾನರು.

ಎಲ್ಲೆಡೆ ನಡೆಯೋ ಶಿವರಾತ್ರಿಯ ಆಚರಣೆ ,
ಒಂದು ಸಂಭ್ರಮದ ಜಾಗರಣೆ ,
ಇತಿಹಾಸದಲ್ಲೂ ಕಾಣ ಸಿಗುವುದು ಇದರ ಪ್ರತಿ ಹಲವು ಉದಾಹರಣೆ ,
ಕೆಲವರ ಪಾಲಿಗಿದು ಹಬ್ಬ, ಇನ್ನು ಕೆಲವರ ಪಾಲಿಗೆ ಪ್ರೇರಣೆ.

ಇರಬೇಕು ಬಾಳಲ್ಲಿ ದೇವರ ಭಯ ,
ಹಿಡಿದು ಸಾಗಲು ಸರಿಯಾದ ಹಾದಿಯ,
ಒಮ್ಮೊಮ್ಮೆ ಅನಿಸಿದರೂ ಅವನದ್ದು ಕಲ್ಲು ಹೃದಯ ,
ಕೊಟ್ಟೇ ಕೊಡುವನಿಲ್ಲಿ ನಂಬಿದಲ್ಲಿ ಸರಿಯಾದ ನ್ಯಾಯ .

ಒಂದೊಂದು ಊರಿಗೂ ಒಂದೊಂದು ದೇವಾಲಯ ,
ವಿಭಿನ್ನ ಇಲ್ಲಿನ ಪ್ರತಿಯೊಂದು ಸಂಪ್ರದಾಯ ,
ಯಾವ ದೇವರಾದರೇನು ಪರಿಶುದ್ಧವಾಗಿದ್ದಲ್ಲಿ ಹೃದಯ ,
ನಾವೆಲ್ಲಿರುವೆವೋ ಅದೇ ಮಂತ್ರಾಲಯ .

–  ನಯನ ಬಜಕೂಡ್ಲು

2 Responses

  1. Hema says:

    ಚೆಂದದ ಕವನ . ‘ಯಾವ ದೇವರಾದರೇನು ಪರಿಶುದ್ಧವಾಗಿದ್ದಲ್ಲಿ ಹೃದಯ ,
    ನಾವೆಲ್ಲಿರುವೆವೋ ಅದೇ ಮಂತ್ರಾಲಯ ‘ ..ಈ ಸಾಲು ಬಹಳ ಇಷ್ಟವಾಯಿತು .

  2. Shankari Sharma says:

    ದೇವರೆಂದರೆ ನಂಬಿಕೆ.. ಅದಿಲ್ಲದಿರೆ ಎಲ್ಲವೂ ಶೂನ್ಯ..
    ಶಿವ ನಮನ ತುಂಬಾ ಚೆನ್ನಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: