ಎದೆಯೊಳಗೊಂದು ನದಿಯ ಹರಿವು
ಬಾಲ್ಯದಿಂದಲೇ ನದಿಯನ್ನು ನೋಡುತ್ತಾ, ನದಿಯಲ್ಲಿ ಕೆಲಸ ಮಾಡುತ್ತಾ, ನದಿಯೊಂದಿಗೆ ಆಡುತ್ತಲೇ ಬೆಳೆದವಳು. ಇಂತಹ ನದಿಯೊಂದು ನನ್ನ ಬದುಕಿನ ಅವಿಭಾಜ್ಯ ಅಂಗವೇನೋ ಎನ್ನುವಷ್ಟರ ಮಟ್ಟಿಗೆ ಬೆಸೆದು ಕೊಂಡಿತ್ತು. ನಾನು ಎಳವೆಯಲ್ಲಿ ಶಾಲೆ ಕಲಿಯಲೆಂದು ಅಜ್ಜಿ ಮನೆಗೆ ಸೇರಿದ ಹೊತ್ತಲ್ಲಿ ನನಗೆ ಕೇವಲ ಮೂರು ವರುಷ. ಅಮ್ಮ-ಅಪ್ಪನ ನೆನಪಾಗಿ ದು:ಖ ಉಮ್ಮಳಿಸಿ ಬಂದು ಬಿಕ್ಕಿ ಬಿಕ್ಕಿ ಅಳುವಾಗ, ಸಂತೈಸಲೋಸುಗ ಚಿಕ್ಕಮ್ಮ ನನ್ನನ್ನು ಹೊಳೆಯ ಬದಿಗೆ ಕರೆದು ಕೊಂಡು ಹೋಗಿ ಅಲ್ಲಿ ನನ್ನನ್ನು ಆಡಲು ಬಿಡುತ್ತಿದ್ದಳು. ತತ್ ಕ್ಷಣಕ್ಕೆ ಅಪ್ಪ-ಅಮ್ಮ ಎಲ್ಲಾ ಮರೆತು ಹೋಗಿ ನೀರಿನಲ್ಲಿ ಕೆಲ ಹಾಗೇ ಆಡಿಕೊಂಡೇ ಇರುತ್ತಿದ್ದೆ. ಹಾಗೆ ನದಿಯ ದಂಡೆಯ ಬದಿಗೆ ಬಂದು ನಿಂತಾಗ ಪುಳಕ್ಕನೆ ಬಂದು ಕಾಲಿಗೆ ಕಚ್ಚಿ ಕಚಗುಳಿ ಇಡುವ ಪೊಡಿ ಮೀನುಗಳು. ಅವುಗಳನ್ನು ಹಿಡಿಯಲು ಯತ್ನಿಸಿ ಸುಸ್ತಾಗಿ ಚಿಕ್ಕಮ್ಮನೊಂದಿಗೆ ವಾಪಾಸು ಮನೆಯ ಹಾದಿ ಹಿಡಿಯುತ್ತಿದ್ದೆ. ಮನೆಯ ನೆನಪು ಮರೆತು ಹೋಗಿ ಮತ್ತೆ ಪುನ: ಹೊಳೆಗೆ ಹೋಗುವ ಅಂತ ರಚ್ಚೆ ಹಿಡಿಯುತ್ತಿದ್ದ ನೆನಪು. ಎಷ್ಟೋ ವರುಷಗಳ ನಂತರ ಬಾಲ್ಯ ಕಳೆದು, ಹರೆಯ ಹತ್ತಿ ಇಳಿಯುವ ಹೊತ್ತಲ್ಲಿ ನದಿಯೆಂಬುದು ಮನಸಿನ ದುಗುಡವನ್ನು ಶಮನಗೊಳಿಸುವ ಶಕ್ತಿ ದೇವತೆ ಅಂತ ಅರಿವಿಗೆ ಬರತೊಡಗಿದ್ದು.
ನಾನು ಶಾಲೆಗೆ ಹೋಗುವ ಸಮಯದಲ್ಲಿ ಆ ಹೊಳೆ ದಾಟಿಯೇ ಶಾಲೆಗೆ ಹೋಗಬೇಕಿತ್ತು. ಬೇಸಿಗೆಯಲ್ಲಿ ನೋಡಿದರೆ ಅದೊಂದು ಪಾಪದ ಸಣಕಲು ನದಿ. ಸ್ವಲ್ಪ ಲಂಗವನ್ನು ಎತ್ತಿ ಕಟ್ಟಿದರೆ ಸಾಕು, ಹಾಗೇ ಸಲೀಸಾಗಿ ನದಿ ದಾಟಿ ಬಿಡುತ್ತಿದ್ದೆವು. ಮಳೆಗಾಲದಲ್ಲಿ ಮಾತ್ರ ಅದು ರೂಪಾಂತರಿಯಾಗಿ ಹುಚ್ಚುಗಟ್ಟಿ ಹರಿಯುತ್ತಿತ್ತು. ಆಗ ನದಿ ದಾಟಲೆಂದು ಒಂದು ಪಾಲವನ್ನು ಜೋಡಿಸುತ್ತಿದ್ದರು. ದಾಟುವಾಗ ಆಯತಪ್ಪದಂತೆ ಹಿಡಿದು ಕೊಳ್ಳಲೊಂದು ಕೈತಾಂಗ. ಜಾಗರೂಕತೆಯಿಂದ ಬರೇ ಪಾಲವನ್ನಷ್ಟೇ ನೋಡುತ್ತಾ,ಕೆನ್ನೀರಿನ ಕಡೆಗೆ ಸ್ವಲ್ಪವೂ ಕಣ್ಣು ಹಾಯಿಸದೆ ಅದು ಹೇಗೋ ಆಚೆ ತುದಿ ದಾಟಿದಾಗ ಅರಿವಿಲ್ಲದೆಯೇ ನಿಡಿದಾದ ಉಸಿರೊಂದು ಹೊರ ಹಾಕಿ ಬಿಡುತ್ತಿದ್ದೆವು. ಈಗ ಆ ಪಾಲ ದಾಟಿದ್ದು ನೆನೆದು ಕೊಳ್ಳುವಾಗಲೆಲ್ಲಾ ಪ್ರತೀದಿನ ಜೀವ ಕೈಯೊಳಗಿಟ್ಟು ಮರು ಹುಟ್ಟು ಪಡೆದು ಬಂದಂತೆ ಅನ್ನಿಸುತ್ತಿದೆ. ನಾವುಗಳು ಯಾವ ಸಾಹಸಿಗಳಿಗಿಂತಲೂ ಕಡಿಮೆಯೇನಿಲ್ಲ ಅನ್ನುವುದು ಈ ಹೊತ್ತಿನ ನೆನಪು. ಬಹುಷ; ಪೊರೆಯುವ ಗುಣ ಇದ್ದಂತೆಯೇ ಛಲದ ಗುಣ ನದಿಯುಲ್ಲಿ ಐಕ್ಯವಾಗಿರುವ ಕಾರಣ ಆ ನದಿಯನ್ನು ದಾಟಿದವರ ಮೈಯಲ್ಲೂ ಕೂಡ ಅದು ಅವಾಹಿಸಿಕೊಳ್ಳುತ್ತಿತ್ತೇನೋ. ಆ ನದಿಯ ಎದೆಗಾರಿಕೆಯನ್ನು ಮೆಚ್ಚಲೇ ಬೇಕು. ಅದೊಂದು ಸಣಕಲು ತೊರೆಯಂತ ನದಿ ತನ್ನ ಪಾಡಿಗೆ ಬೇಸಿಗೆಯಲ್ಲಿ ಮೂಳೆ ಚಕ್ಕಳ ತೋರಿಸಿಕೊಂಡು ಹರಿಯುತ್ತಾ, ಮಳೆ ಬಂದದ್ದೇ ತಡ, ಒಂದೇ ಸಮನೆ ಇದೇ ತಕ್ಕ ಸಮಯವೆಂಬಂತೆ ತಿರುಗಿಯೂ ನೋಡದಂತೆ ಹಾರುತ್ತಾ, ನೆಗೆಯುತ್ತಾ, ಕೆನೆಯುತ್ತಾ ಸಾಗುತ್ತಿತ್ತು. ಅದು ಹರಿಯುವ ರಭಸದ ಸದ್ದು ನಮ್ಮ ಮನೆಯ ಕಿಟಕಿಯವರೆಗೂ ಹಾದು ಹೋಗುತ್ತಿತ್ತು. ಪುಟ್ಟ ತೊರೆಯೊಂದು ಮಳೆಗಾಲದಲ್ಲಿ ನದಿಯಾಗಿ ಹರಿದು ಅರಬ್ಬಿ ಸೇರಿ ತಾನೇ ಕಡಲಾಗಿ ತೆರೆಗಳನ್ನು ಹಾಯಿಸಿದ್ದರಲ್ಲಿ ಅಂತಹ ವಿಶೇಷತೆಯೇನು ಇಲ್ಲ ಅಂತ ಈಗ ಅನ್ನಿಸುತ್ತಿದೆ. ಛಲ, ಧ್ಯೇಯವಿದ್ದರೆ ನಮ್ಮೆಲ್ಲರ ಗುರಿಗಳು ಗಮ್ಯ ಸೇರುವುವು ಎಂಬುದೇ ನದಿ ಕಲಿಸಿಕೊಟ್ಟ ಬಹುದೊಡ್ಡ ಜೀವನದ ಪಾಠ. ಇದಕ್ಕೆ ಬಹುಷ; ಯಾವುದರಿಂದಲೂ ಬೆಲೆ ತೆರಲು ಸಾಧ್ಯವಿಲ್ಲವೇನೋ.
ಆ ಹಳ್ಳಿ ಈ ಹಳ್ಳಿ ಎರಡು ಹಳ್ಳಿಗಳ ನಡುವೆ ಆ ನದಿಯೊಂದು ಹಾದು ಹೋಗುತ್ತಿತ್ತು. ಒಂದು ಸೇತುವೆಯೋ, ಒಂದು ಪಾಲದ ಮೂಲಕವೋ ಆಚೆ ಬದಿ ಮತ್ತು ಈಚೆ ಬದಿಯ ತಂತುವಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಮ್ಮೂರ ಕಡೆ ಕೆಡ್ಡಾಸ ಅನ್ನುವ ಹಬ್ಬ ಮಾಡುತ್ತಾರೆ. ಆ ಹಬ್ಬದ ದಿನ ಹೊಳೆಯಿಂದ ಮೀನು ಹಿಡಿಯುವ ಸಂಭ್ರಮ. ಸುಲಭಕ್ಕೆ ಮೀನು ಹಿಡಿಯುವ ಸಲುವಾಗಿ ಯಾರೋ ಪೋಕರಿ ತಂಟೆಕೋರರು ಹೊಳೆ ನೀರಿಗೆ ಮದ್ದು ಕದಡಿ ಹಾಕಿಬಿಡುತ್ತಿದ್ದರು. ಹಾಗಾಗಿ ಅದೆಷ್ಟೋ ಮೀನುಗಳು ಸತ್ತು ಹೋಗಿ ಬಿಡುತ್ತಿದ್ದವು. ಆದರೆ ಸಮಾಧಾನದ ಸಂಗತಿಯೆಂದರೆ ಯಾವುದೋ ರಾಸಯನಿಕ ವಿಷಕಾರಕ ವಸ್ತುಗಳನ್ನು ಹಾಕದೆ ಬೆಪ್ಪರಕಾಯಿ ಅಥವಾ ಕಾಯರ ಕಾಯಿಯ ದ್ರಾವಣವನ್ನು ಯಾರೋ ಕಿಡಿಗೇಡಿಗಳು ನದಿಯ ಮೂಲದಲ್ಲಿ ಹಾಕಿದರೆ ಅದರ ಪ್ರಭಾವ ಎಷ್ಟು ಇರುತ್ತಿತ್ತು ಎಂದರೆ ಅದು ಹರಿಯುತ್ತಾ ಬರುವಲ್ಲಿಯವರೆಗೆ ಮೀನುಗಳು ತಲೆ ತಿರುಗಿ ಮೇಲೆ ಕೆಳಗೆ ಒದ್ದಾಡುತ್ತಿದ್ದವು. ನಮ್ಮಂತಹ ಪೊಡಿ ಮಕ್ಕಳಿಗೆಲ್ಲಾ ಬಾರಿ ಕುಷಿಯೆಂದರೆ ಅರೆ ಜೀವವಾದ ಈ ಮೀನುಗಳನ್ನು ಯಾವುದೇ ತ್ರಾಸವಿಲ್ಲದೆ ಹಿಡಿಯುತ್ತಾ ಸಾಗುವುದು. ಒಂದಷ್ಟು ಭಯದ ಲವಲೇಶವೂ ಇಲ್ಲದೇ, ಜೊತೆಗೆ ನಮ್ಮದೇ ವಯಸ್ಸಿನ ಜತೆಗಾರರಿದ್ದಾರೆ ಅನ್ನುವ ಯಾವುದೋ ಹುಚ್ಚು ಧೈರ್ಯದಲ್ಲಿ ಅದೆಷ್ಟೋ ದೂರದವರೆಗೆ ನದಿಯಲ್ಲಿ ಸಾಗುತ್ತಾ ಮತ್ತೊಂದು ಊರನ್ನು ಯಾವುದೇ ಪ್ರಯಾಸವಿಲ್ಲದೆ ತಲುಪಿ ಬಿಡುತ್ತಿದ್ದೆವು. ನಮ್ಮ ಬುಟ್ಟಿಯೊಳಗೆ ಹಿಂದೆಂದೂ ಕಂಡರಿಯದಂತಹ ಅದೆಷ್ಟು ತರೇವಾರಿ ಮೀನುಗಳು. ಹೊಟ್ಟೆಯಡಿಯಲ್ಲಿ ಕೆಂಪು ಗುರುತಿರುವಂತಹ ಗೆಂಡೆ ಮೀನುಗಳು, ರೆಕ್ಕೆ ಬದಿಯಲ್ಲಿ ಕಪ್ಪು ದೃಷ್ಠಿ ಬೊಟ್ಟಿರುವಂತಹ ಕಾಜೋವು ಮೀನು, ಚೂಪು ಮೂತಿಯ ಕೊಂತಿ ಮೀನು, ಕಲ್ಲಿನ ಅಡಿಯಲ್ಲಿ ಮಲಗಿಕೊಂಡು ಕಲ್ಲನ್ನೇ ತಿನ್ನುವಂತಹ ಕಲ್ಲುಕರ್ಪ ಮೀನು, ಕಲ್ಲು ಮುಳ್ಳ, ಮೊರಂಟೆ,ಮಡಂಜಿ ಒಂದೇ ಎರಡೇ?. ಜೊತೆಗೆ ದೊಡ್ಡ ಕೊಂಬಿನ ಎರಡು ಏಡಿಗಳು. ಇನ್ನು ಅದೆಷ್ಟು ವೈವಿಧ್ಯಮಯ ಜಲಚರಗಳನ್ನು ನದಿ ತನ್ನ ಒಡಲೊಳಗೆ ಹುದುಗಿಸಿ ಕೊಂಡಿದೆಯೆಂಬುದು ಹೊರ ನೋಟಕ್ಕೆ ಕಾಣಲಿಕ್ಕೆ ಸಿಗುವಂತದ್ದಲ್ಲ. ಆದರೆ ಆ ಅಮಾಯಕ ಮೀನುಗಳ ಮರಣ ಅದೆಷ್ಟೋ ದಿನ ರಾತ್ರೆಗಳಲ್ಲಿ ಕನಸಲ್ಲಿ ಬಂದು ಕಾಡುತ್ತಾ ಮನಸು ಭಾರ ಅನ್ನಿಸುತ್ತಿತ್ತು.
ಹಾಗೇ ಒಂದು ದಿವಸ ಜೋರು ಮಳೆ. ರಾತ್ರೆಯೆಂದರೆ ಕರಿಗೂಟಿ ಕತ್ತಲೆ. ಮನೆಯಲ್ಲಿ ಪ್ರೀತಿಯ ಬಗ್ಗೆ ವಿರೋಧವಿದ್ದ ಪ್ರೀತಿಸುವ ಆ ಎರಡು ಹರೆಯದ ಜೋಡಿಗಳು ಏಕಾ ಏಕಿ ಆ ರಾತ್ರೆ ಬಿರು ಮಳೆಯ ನಡುವೆ ಓಡಿ ಹೋಗಿ ಬಿಟ್ಟರೆಂದು ಊರಿಡೀ ಗುಸು ಗುಸು ಸುದ್ದಿ ಮಳೆಯಂತೆ ಹರಿಯಿತು. ಆ ನಡು ರಾತ್ರೆಯಲ್ಲಿ ಅವ ಆಚೆ ಕರೆ ಪಾಲ ತುದಿಯಲ್ಲಿ ಬಂದು ನಿಂತರೆ ಇವಳು ಈಚೆ ಕರೆಗೆ ಬಂದು ನಿಂತದ್ದೇ ತಡ, ಅವ ಕೈ ಹಿಡಿದು ದಾಟಿಸಿಯೇ ಬಿಟ್ಟಿದ್ದ. ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಆ ಹೊಳೆ ಹರಿಯುತ್ತಲೇ ಇತ್ತು. ಮಾರನೇ ದಿನ ಎರಡು ಬದಿಯಲ್ಲಿ ಕೆಸರಿನ ಹೆಜ್ಜೆ ನೋಡಿದ ಮೇಲಷ್ಟೆಯೇ ವಿಷಯದ ಸ್ಪಷ್ಟೀಕರಣಕ್ಕೆ ನೈಜ್ಯ ಸಾಕ್ಷಿ ದೊರಕಿದ್ದು. ಅಂತೂ ಆ ಮಳೆಗೆ ಆ ಹೆಜ್ಜೆ ಗುರುತುಗಳು ಅಳಿಸಿ ಹೋಗದೆ ಹೆತ್ತವರ ಎದೆ ಭಾರ ಕಡಿಮೆ ಮಾಡಲೇನೋ ಎಂಬಂತೆ ಉಳಿದುಕೊಂಡಿತ್ತು. ಅದೇನೇ ಇರಲಿ, ಆ ಕ್ಷಣಕ್ಕೆ ಆ ನದಿಯ ಹುಚ್ಚು ಆವೇಶಗಳನ್ನು, ಹುಚ್ಚು ಧೈರ್ಯವನ್ನು ಎದೆಗೊತ್ತಿಕೊಂಡು ಹಾಗೇ ಓಡಿ ಹೋದವರು ಎಂಬ ಹೆಸರು ಗಿಟ್ಟಿಸಿಕೊಂಡವರು, ಒಂದಷ್ಟು ದಿನ ಕಾಣೆಯಾಗಿ ಮತ್ತೆ ಮಳೆ ನಿಂತು ಹೊಳೆ ಯಥಾಸ್ಥಿತಿ ಶಾಂತವಾದಂತೆ ಇವರೂ ಕೂಡ ಅಷ್ಟೇ ಸಹಜವಾಗಿ ಊರಲ್ಲೇ ವಾಸಿಸುತ್ತಿದ್ದಾರೆ. ಈಗೀಗ ನಡು ಹಗಲೆಲ್ಲಾ ನಿರ್ಭೀತಿಯಿಂದ ಅದೇ ಹೊಳೆಯನ್ನು ದಾಟಿ ಆಗೊಮ್ಮೆ ಈಗೊಮ್ಮೆ ಈಚೆಕರೆಗೆ ಬಂದು ಹೋಗುವುದು ಕಾಲದ ಕರುಣೆ.
ನನಗಂತೂ ಒಂದೇ ಒಂದು ದಿನವೂ ಹೊಳೆಗೆ ಇಳಿಯದಿದ್ದರೆ ಸಮಾಧಾನವೇ ಇರುತ್ತಿರಲಿಲ್ಲ. ಆದಿತ್ಯವಾರ ಶಾಲೆಗೆ ರಜೆ ಆದ ಕಾರಣ ಎಳವೆಯಲ್ಲಿ ಹೊಳೆ ಬದಿಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಮನೆಕೆಲಸದಲ್ಲಿ ನೆರವಾಗುವ ನೆಪದಲ್ಲಿ ಒಂದಷ್ಟು ಬುಟ್ಟಿಯಲ್ಲಿ ಪಾತ್ರೆ ತುಂಬಿ ಕೊಂಡು ಬಂದು ಬಿಡುತ್ತಿದ್ದೆ. ಅದು ಹೇಗೋ ನನ್ನ ಕಣ್ಣು ತಪ್ಪಿಸಿ ಹೊಳೆ ಪಾಲಾದ ಪಾತ್ರೆಗಳು ಅಲ್ಲೇ ಸ್ವಲ್ಪ ತಳದಲ್ಲಿ ನಿಂತು ಮತ್ತೊಮ್ಮೆ ಕೆಡ್ಡಾಸ ಹಬ್ಬ ಬರುವಾಗ ಗುಂಡಿ ನೀರಿನಲಿ ಬೆಳ್ಳಿಯಂತೆ ಹೊಳೆಯುತ್ತಾ ಮತ್ತೆ ನನ್ನ ಕೈ ಸೇರಿದ್ದನ್ನ ಯಾರಿಗೂ ಹೇಳದೆ ಹಾಗೇ ಮೆಲ್ಲನೆ ಅಡುಗೆ ಮನೆಯ ಮೂಲೆಯಲ್ಲಿ ತಂದು ಇಟ್ಟು ಬಿಡುತ್ತಿದ್ದದ್ದು ಈಗ ಇತಿಹಾಸ. ಇನ್ನು ಹೊಳೆ ನನಗೆ ಕಲಿಸಿದ ಪಾಠಗಳು ಅನೇಕ. ಅದರಲ್ಲೂ ಸೊಂಟದ ಮೇಲೊಂದು ತಲೆಯ ಮೇಲೊಂದು ತುಂಬಿದ ಕೊಡಪಾನವನ್ನು ಏಕಕಾಲದಲ್ಲಿ ಹೊತ್ತು ಕೊಂಡು ಬರುವ ಸಮತೋಲನದ ಕಲೆಯನ್ನು ಎಳವೆಯಲ್ಲಿಯೇ ಕರಗತ ಮಾಡಿಕೊಳ್ಳಲು ಸಾಧ್ಯವಾದದ್ದು ಈ ಹೊಳೆಯಿಂದಲೇ. ಬೇಗ ಬೇಗ ನೀರು ಹೊತ್ತು ಮುಗಿಯಲೆಂದು ಎರೆಡೆರಡು ಕೊಡಪಾನದಲ್ಲಿ ನೀರು ಹೊರುತ್ತಿದ್ದೆವು. ಇದಕ್ಕೆ ಸಹಾಯ ಮಾಡಲು ಯಾರಾದರೊಬ್ಬರು ಬೇಕೇ ಬೇಕು. ಅದು ಎಲ್ಲಾ ಸಮಯದಲ್ಲಿ ಒದಗಿ ಬರುತ್ತಿರಲಿಲ್ಲ. ಅದೂ ಅಲ್ಲದೇ ನಾವು ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್ ಬಿಂದಿಗೆ ನಾವು ಸರ್ಕಸ್ ಮಾಡಿಕೊಂಡು ಏರಿಸಲು ಹೋದರೆ ಅದು ಒಡೆದು ಚೂರಾಗುವುದು ಖಚಿತ. ಹಾಗಾಗಿ ನಾನೋ ಹೊಳೆಯ ನಡುವಲ್ಲಿ ನಿಂತು ಎರಡು ಬಿಂದಿಗೆಗೂ ನೀರು ತುಂಬಿ ಒಂದನ್ನು ತಲೆಯ ಮೇಲಿಟ್ಟು ಮತ್ತೊಂದನ್ನು ಸೊಂಟದ ಮೇಲಿಡಲು ಪ್ರಯತ್ನಿಸುತ್ತಿದ್ದೆ. ಎಷ್ಟೋ ಭಾರಿ ಹೀಗೆ ಬ್ಯಾಲೆನ್ಸ್ ಮಾಡುವಾಗ ತಲೆಯ ಮೇಲಿದ್ದ ಕೊಡಪಾನ ನದಿಯೊಳಗೆ ಬೀಳುತ್ತಿತ್ತು. ಆದರೆ ಒಡೆಯುತ್ತಿತಲಿಲ್ಲ. ಹಾಗೇ ಇಟ್ಟು , ಬೀಳಿಸಿ, ಎತ್ತಿ ಇಟ್ಟು ಒಂದೊಮ್ಮೆ ನಾನೇ ಸಲೀಸಾಗಿ ಕೊಡಪಾನ ಬೀಳಿಸದೇ ಸೊಂಟಕ್ಕೇರಿಸಲು ಕಲಿತು ಕೊಂಡೆ. ಅಲ್ಲ, ನದಿಯೇ ಕಲಿಸಿದ ಪಾಠ. ಅದು ಸಾಥ್ ನೀಡುತ್ತಾ ಸಹಕರಿಸಿದ ಕಾರಣ ಇದು ಸಾಧ್ಯವಾದದ್ದು. ಅದರ ಜೊತೆಗೆ ಬದುಕಿನಲ್ಲಿ ಹೇಗೆ ಸಮತೋಲನ
ಕಾಯ್ದುಕೊಳ್ಳಬೇಕೆಂಬುದನ್ನ ಅದು ಹಾಗೇ ಕಲಿಸಿಕೊಟ್ಟಿತ್ತು.
ಆ ನದಿಯೊಳಗೆ ಹುದುಗಿ ಕೊಂಡಿರುವ ಕತೆಗಳು ಒಂದೆರಡಲ್ಲ. ನದಿಯ ಕುರಿತು ಧ್ಯಾನಿಸಲು ತೊಡಗಿದರೆ, ಒಬ್ಬೊಬ್ಬರು ಒಂದೊಂದು ಕತೆಯನ್ನು ಬಿಚ್ಚಿಡುತ್ತಾ ಸಾಗುತ್ತಾರೆ. ಹಾಗೇ ಅದೆಷ್ಟೋ ನದಿಗಳು, ಅದೆಷ್ಟೋ ಕತೆಗಳು ಹರಿಯುತ್ತಲೇ ಇವೆ. ಒಂದೊಮ್ಮೆ ಪಕ್ಕದ ನದಿಗೆ ಅಮ್ಮ ಬಟ್ಟೆ ತೊಳೆಯಲೆಂದು ಹೋದಾಗ ಸಣ್ಣ ಮಗುವನ್ನು ತನ್ನೊಂದಿಗೆ ಕರೆದೊಯ್ದಿದ್ದಳು. ಇದು ಯಾವೊತ್ತು ರೂಡಿ. ಇವಳದ್ದು ಪಾತ್ರೆ ತೊಳೆದು ಮುಗಿಯುವಲ್ಲಿಯವರೆಗೆ ಮಗು ನೀರಿನಲ್ಲಿ ಚಳಪಳ ಅಂತ ಸದ್ದು ಮಾಡಿಕೊಂಡು ಆಡುತ್ತಲೇ ಇರುತ್ತಿತ್ತು. ಒಂದು ದಿನ ಆಕೆಗೆ ಅದೇನು ತುರ್ತು ಕೆಲಸವಿತ್ತೋ ಗೊತ್ತಿಲ್ಲ, ಬಟ್ಟೆ ತೊಳೆಯುವ ತರಾತುರಿಯಲ್ಲಿ ಮಗು ಆಡುತ್ತಾ ಆಡುತ್ತಾ ನೀರಿನಾಳಕ್ಕೆ ತಲುಪುವಾಗಲೇ ಆಕೆಯ ದಿಟ್ಟಿ ಆಚೆಗೆ ಹಾಯ್ದದ್ದು. ಒಮ್ಮೆಗೇ ಜೀವ ಹೋದಂತೆ ಬೊಬ್ಬಿರಿಯುತ್ತಾ ಮಗುವಿನೆಡೆಗೆ ಕೈ ಚಾಚುತ್ತಾ ಧಾವಿಸಿದವಳು ಮತ್ತೆ ಬರಲೇ ಇಲ್ಲ. ಯಾವಾಗಲೋ ಒಮ್ಮೆ ಹೀಗೆ ಮಾತಿನ ನಡುವೆ ಚಿಕ್ಕಮ್ಮ ಹೇಳಿದ ಕತೆಯಂತ ಈ ನಿಜ ಸಂಗತಿಯೊಂದು ಆಗಾಗ್ಗೆ ನದಿ ನೋಡುವಾಗಲೆಲ್ಲಾ ನೆನಪಾಗುತ್ತಾ ಮನಸು ಹನಿಗಣ್ಣಾಗಿ ಬಿಡುತ್ತದೆ. ಯಾಕೋ ಮರೆತೆನೆಂದರೂ ಮರೆಯಲಾಗುತ್ತಿಲ್ಲ. ಅಷ್ಟೇ ಏಕೆ ಮೊನ್ನೆ ಮೊನ್ನೆ ನನ್ನೂರಿನಲ್ಲಿ ಶತಮಾನ ಕಂಡರಿಯದಂತಹ ಜಲಸ್ಪೋಟವಾಗಿ ನದಿಯೇ ಉಕ್ಕಿ ಹರಿದು, ಸಣ್ಣ ಸಣ್ಣ ತೊರೆಗಳೆಲ್ಲ ನದಿಗಳಾಗಿ ಇಡೀ ಊರಿಗೇ ಊರೇ ಜಲಾವ್ರತಗೊಂಡದ್ದು,ಅದೆಷ್ಟೋ ಜನರ ಬದುಕು ಪರ್ಯಾವಸನ ಗೊಂಡದ್ದು ಒಂದು ಮರೆಯಲಾಗದ ದುರಂತ ಕತೆ. ನದಿಯ ಮೋಹಕ ರಮಣೀಯತೆಯನ್ನು, ರೌದ್ರ ನರ್ತನವನ್ನು ಏಕಕಾಲದಲ್ಲಿ ಕಂಡುಂಡ ಜೀವ ನಮ್ಮದು. ಆಗೆಲ್ಲಾ ನದಿಯೊಳಗೆ ಅಡಗಿ ಕೊಂಡ ಅನೇಕ ಹೃದಯವಿಧ್ರಾವಕ ಘಟನೆಗಳು ಎದೆಯೊಳಗೆ ನಡುಕ ಹುಟ್ಟಿಸಿ ನದಿಯ ಕಡೆ ಮುಖ ಮಾಡಲೇ ಬಾರದು ಎನ್ನುವಷ್ಟು ಮನಸು ಕಳವಳಗೊಳ್ಳುತ್ತದೆ. ಅಷ್ಟಕ್ಕೂ ಅದರಲ್ಲಿ ನದಿಯ ಪಾತ್ರವೇನಿದೆ? ಕೈ ಮೀರಿ ಸಂಭವಿಸಿಬಿಡುವ ಅನಾಹುತಗಳನ್ನೆಲ್ಲಾ ಅದು ಗಣನೆಗೆ ತೆಗೆದುಕೊಂಡು ಬಿಟ್ಟರೆ ಅದು ತನ್ನ ಹರಿಯುವಿಕೆಯನ್ನೇ ನಿಲ್ಲಿಸಿ ಬಿಡಬೇಕಾಗುತ್ತದೆಯೇನೋ. ಎಲ್ಲ ಮರೆತಂತೆ ನದಿ ಈಗ ಮತ್ತೆ ಶಾಂತವಾಗಿ ಹರಿಯುತ್ತಿದೆ.
ಬಯಲು ಸೀಮೆಯವರಿಗೆ ನದಿಯೆಂದರೆ ಜೀವ. ಆಗಾಗ ಪರಿಚಿತರು ಕೇಳೋದಿದೆ, ನಿಮ್ಮ ಅಂಗಳದ ಬದಿಯಲ್ಲೇ ನದಿ ಕಲಕಲನೆ ಹರಿದು ಹೋಗುತ್ತದೆಯಲ್ಲ?, ಸ್ವರ್ಗದಿಂದ ಗಂಗೆ ನಿಮ್ಮ ಅಂಗಳಕ್ಕೆ ಇಳಿದಿದ್ದಾಳೆ ನೋಡಿ, ದೇವರು ನಮಗೆ ತುಂಬಾ ಅನ್ಯಾಯ ಮಾಡಿ ಬಿಟ್ಟಿದ್ದಾನೆ ಕಣ್ರೀ ಅನ್ನುತ್ತಾ ಅವಲತ್ತುಕೊಳ್ಳುವಾಗಲೆಲ್ಲಾ ನದಿಯ ಬಗ್ಗೆ ಮತ್ತೆ ಮತ್ತಷ್ಟು ಅಕ್ಕರೆ ಹುಟ್ಟಿ ಬಿಡುತ್ತದೆ.
ಇಡೀ ಊರನ್ನೇ ಬಳಸಿ ಹೋಗುವ ನಮ್ಮೂರ ಪಯಸ್ವಿನಿ ನದಿಯೇ ನಮ್ಮ ಊರಿನವರ ಕೃಷಿ ಬದುಕಿಗೆ ಜೀವನಾಧಾರ. ಸಾಹಿತ್ಯದ ಮೂಲಕ ಪರಿಚಿತರಾದ ಅದೆಷ್ಟೋ ಆತ್ಮೀಯರು ನಮ್ಮೂರಿಗೆ ಬಂದಾಗಲೆಲ್ಲಾ ಧಾವಿಸುವುದು ನದಿಯ ಕಡೆಗೆ. ನದಿಯ ಆಳ ಅಗಲ ನಿಗೂಡತೆಗಳನ್ನೆಲ್ಲಾ ಎದೆಯೊಳಗೆ ಹಿಡಿದಿಟ್ಟುಕೊಳ್ಳುತ್ತೇವೆ ಎಂಬಂತೆ ನದಿಯನ್ನೇ ತದೇಕಚಿತ್ತದಿಂದ ನೋಡುತ್ತಾ ಅದರೊಂದಿಗೆ ಅನುಸಂಧಾನಕ್ಕಿಳಿಯುತ್ತಾರೆ. ನದಿಗೆ ಮಾತು ಬರುವುದಿಲ್ಲ ನಿಜ, ಆದರೆ ನಮ್ಮ ಎದೆಯ ಮಿಡಿತವನ್ನು, ಕಣ್ಣಿನ ಭಾವವನ್ನು, ಅದು ಅರ್ಥೈಸಿಕೊಳ್ಳಬಲ್ಲುದು ಎಂಬುವುದು ನನ್ನ ಭಾವನೆ. ಇಲ್ಲದಿದ್ದರೆ ನದಿಯ ದಂಡೆಯ ಬದಿಯಲ್ಲಿ ನಿಂತಾಕ್ಷಣ ಅದು ಹೇಗೆ ತಾನೇ ನಮ್ಮೆಲ್ಲರ ಎದೆಯ ಭಾರ ಹಗುರವಾಗುವುದು?,ಹಾಗೇ ನಿರ್ಭಾವುಕ ಎದೆಯೊಳಗು ಒಂದು ಕವಿತೆ ಹಾಡಾಗಿ ಉಲಿಯುವುದು?. ಈಗ ಈ ಬರಡು ನೆಲದಲ್ಲಿ ಎದೆಯೊಳಗೊಂದು ನದಿ ಹಾಗೇ ಸದ್ದಿಲ್ಲದೆ ಹರಿಯುತ್ತಾ ಪೊರೆಯುವ ಜೀವ ಕಾರುಣ್ಯದಂತೆ ಭಾಸವಾಗುತ್ತಿದೆ.
-ಸ್ಮಿತಾ ಅಮೃತರಾಜ್. ಸಂಪಾಜೆ
” ಎದೆಯೊಳಗೊಂದು ನದಿಯ ಹರಿವು “.
ವಾವ್….. ಟೈಟಲ್ಲೇ ಸೂಪರ್ಬ್ ಆಗಿದೆ . ಸಿಹಿ ಕಹಿ ಎರಡೂ ಘಟನೆಗಳನ್ನೊಳಗೊಂಡಂತಹ ಬರಹ . ನದಿಗೆ ಸಂಬಂಧ ಪಟ್ಟ ವಿವರಗಳು ಮನಸಿಗೆ ಬಹಳ ಖುಷಿ ನೀಡುವಂತಿದೆ .
“ಎದೆಯೊಳಗೊಂದು ನದಿಯ ಹರಿವು ,
ಇರಬಹುದೇ ಇದು ಒಲವು ?,
ತೊರೆ ಝರಿಗಳಿಂದಾವೃತ ಪ್ರಕೃತಿಯ ಚೆಲುವು ,
ನಿವಾಳಿಸಿ ಎಸೆಯುವುದು ಮನದೆಲ್ಲಾ ನೋವು “
ನದಿಯ ನಿಗೂಡತೆಯ ಸ್ಪಷ್ಟ ಚಿತ್ರಣ, ಅಚ್ಚುಕಟ್ಟಾದ
ಸಾಹಿತ್ಯ.
ಥ್ಯಾಂಕ್ಸ್ ನಿಮಗೆಲ್ಲ
ನದಿಯ ನಡಿಗೆ ಬಾಲ್ಯದಿಂದ ಹರೆಯ ದಾಟಿ ಹರಿದದ್ದು….
ಅದು ಎದೆಯಲ್ಲಿ ಜೀವ ಕಾರುಣ್ಯ ತರುವುದು ಅತ್ಯಂತ ಸ್ಪುಟವಾಗಿ ದಾಖಲಾಗಿದೆ. ನದಿ ಸುಖದುಃಖಗಳ ಜೊತೆ ಹರಿಯುವುದು , ನೀವು ನದಿಯೇ ಆಗಿ ಬರೆಯುವುದು ಸೊಗಸು. ಪ್ರಬಂಧಕ್ಕೆ ಕತೆಯ ಛಾಪು ಇದೆ ….