ದಿಲ್ಲಿ- ಆಗ್ರಾ ರೋಟಿ-ಪಾರ್ಟಿ
ಜನವರಿ ತಿಂಗಳಿನ ಕೊನೆಯ ವಾರದಲ್ಲಿ ನಾನು ನನ್ನ ಸಹೋದ್ಯೋಗಿಗಳಾದ ರೇಖಾ, ಕಿರಣ್ ಹಾಗೂ ಶ್ರವಣ್ ಜತೆಯಲ್ಲಿ ದಿಲ್ಲಿಗೆ ಕೆಲಸದ ಪ್ರಯುಕ್ತ ಹೋಗುವ ಕಾರ್ಯಕ್ರಮವಿತ್ತು. ಹೇಗೂ ದಿಲ್ಲಿ ವರೆಗೆ ಬಂದವರು ಆಗ್ರಾ ನೋಡಲು ಹೋಗದಿದ್ದರೆ ಏನು ಪ್ರಯೋಜನ ಎಂದು ಚರ್ಚೆ ಮಾಡಿಕೊಂಡು, ಇರುವ ಅಲ್ಪ ಸಮಯಾವಕಾಶದಲ್ಲಿ ಆಗ್ರಾಕ್ಕೆ ಹೋಗುವ ಆಲೋಚನೆ ಮಾಡಿದೆವು.
ನಮ್ಮ ಗುಂಪಿನ ವ್ಯವಹಾರ ಚತುರೆ ರೇಖಾ ಕೂಡಲೇ ಕಾರ್ಯೋನ್ಮುಖರಾದರು. ಸರಿ, ಅತಿ ಹೆಚ್ಚು ಪ್ರವಾಸಿ ತಾಣಗಳನ್ನು , ಅತಿ ಕಡಮೆ ದರದಲ್ಲಿ ತೋರಿಸುತ್ತೆeವೆಂದು ಹೇಳಿಕೊಂಡ ಒಬ್ಬಾತನ ಕಾರನ್ನು ಬಾಡಿಗೆಗೆ ಒಪ್ಪಿಸಿದರು. ಬೆಳ್ಳಂ ಬೆಳ್ಳಗ್ಗೆ , ನಮ್ಮ ಪಟಾಲಂ ದಿಲ್ಲಿಯಿಂದ ಹೊರಟಿತು. ನಾವು ಉಳಕೊಂಡಿದ್ದ ಹೋಟೆಲಿನಿಂದ ಅನತಿ ದೂರದಲ್ಲಿದ್ದ ‘ಕುತುಬ್ ಮಿನಾರ್’ ಅನ್ನು ಹೊರಗಡೆಯಿಂದ ವೀಕ್ಷಿಸಿದೆವು. ಹಲವಾರು ಮೊಘಲ ದೊರೆಗಳ ಸಮಾಧಿಗಳನ್ನು ನೋಡಿ ಬಂದೆವು. ಅಷ್ಟು ಬೆಳಗ್ಗೆ ಅಲ್ಲಿ ಯಾರೂ ಇರಲಿಲ್ಲ.
ಕಾರು ಆಗ್ರಾ ಕಡೆಗೆ ಚಲಿಸಿತು .ದಾರಿಯುದ್ದಕ್ಕೂ ಎಕ್ಕೆಲಗಳಲ್ಲಿ ಸಾಸಿವೆ ಬೆಳೆಯುವ ಹೊಲಗಳಲ್ಲಿ ಅರಳಿ ನಿಂತ ಹಳದಿ ಬಣ್ಣದ ಹೂವುಗಳು ಮನಸಿಗೆ ಮುದ ಕೊಟ್ಟವು.
ಮಧ್ಯದಲ್ಲಿ ಸುಮಾರು ಒಂಭತ್ತು ಘಂಟೆಗೆ, ತಿಂಡಿಗೆಂದು ಒಂದು ಡಾಭಾ ಮುಂದೆ ಕಾರು ನಿಂತಿತು. ನಾನು ಗಮನಿಸಿದ ಒಂದು ಅಂಶವೆಂದರೆ ಅಲ್ಲೆಲ್ಲೂ ದೊಡ್ಡದಾದ ಹೋಟೆಲ್ ಗಳು ಕಾಣಿಸಲಿಲ್ಲ. ದಕ್ಷಿಣ ಭಾರತದ ಸಸ್ಯಾಹಾರಿಗಳಾದ ನಮಗೆ ಉತ್ತರ ಭಾರತದ ಎಲ್ಲಾ ತಿನಿಸುಗಳು ಅಷ್ಟಾಗಿ ರುಚಿಸಲಿಲ್ಲ. ಆದರೆ ಚಳಿ-ಚಳಿ ಹವೆಯಲ್ಲಿ ಬಿಸಿ-ಬಿಸಿ ರೋಟಿ ಹಾಗೂ ಟೀ ತುಂಬ ಇಷ್ಟವಾಯಿತು.
ನಾವು ಕುಳಿತಲ್ಲಿಗೆ ಅಡುಗೆಮನೆ ಕಾಣಿಸುತ್ತಿತ್ತು. ತಂದೂರಿ ಒಲೆಯಲ್ಲಿ ರೋಟಿ ಮಾಡುವವನ ಕೈಚಳಕ ನೋಡಿ ಫೋಟೋ ತೆಗೆಯಬಹುದೇ ಎಂದು ಗಲ್ಲಾಪೆಟ್ಟಿಗೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಕೇಳಿದೆ. ನನ್ನ ಕ್ಯಾಮೆರಾವನ್ನು ಪಡೆದುಕೊಂಡು ಅಡುಗೆಮನೆಗೆ ಹೋಗಿ ಫೋಟೋ ಕ್ಲಿಕ್ಕ್ಕಿಸಿ ಕ್ಯಾಮೆರಾವನ್ನು ಕೊಟ್ಟರು. ಆತನ ಸೌಜನ್ಯತೆ ಇಷ್ಟವಾಯಿತು.
ಮುಂದೆ ದಾರಿಯುದ್ದಕ್ಕೂ ನಮಗೆ ಅದೇ ಲಭಿಸಿದ್ದು. ಆದರೆ ಎರಡು ದಿನಗಳಲ್ಲಿ ರೋಟಿ ಸಾಕು ಸಾಕೆನಿಸಿತು.
– ನೀಹಾರಿಕಾ
ನೀಹಾರಿಕಾ ಅವರೇ, ಒಳ್ಳೆಯ ಬರಹ. ಇನ್ನಷ್ಟು ಪಯಣಾನುಭವಗಳನ್ನು ಬರೆಯಿರಿ.
ಚಿಕ್ಕ ಚೊಕ್ಕ ಲೇಖನ .