ಕಡಲಾಳದಿಂದ ಮುತ್ತೊಂದ ತಂದೆ…..
ಮಸುಕಾಗುತ್ತಿರುವ ನೇಸರನ ಎದುರಾಗಿ ಅಳಿಸಿ ಹೋಗುತ್ತಿರುವ ಹೆಜ್ಜೆಗಳ ಪಕ್ಕದಲ್ಲಿ ಹೆಜ್ಜೆ ಮೂಡಿಸುತ್ತಾ ದೊಡ್ಡ ಸವಾಲಾಗಿ ನಡೆಯುತ್ತಿದ್ದೆ. ತಣ್ಣನೆ ನೀರಿನಲ್ಲಿ ಪಾದಗಳು ಒದ್ದೆಯಾದರೂ ಮೊದಲಿನ ಪುಳಕವಿಲ್ಲ, ಪ್ರೀತಿ, ಪ್ರೇಮದ ಹಸಿ ವಾಸನೆಯೂ ಇಲ್ಲ. ಬೇಡಬೇಡವೆಂದರೂ ಸಿಹಿ ನೆನಪು ಕಹಿಯಾಗಿ ಕಾಡುತ್ತಿದೆ. ಇದೇ ತೀರದಲ್ಲಿ ನಾನು, ಅಲ್ಲಲ್ಲ ನಾವು, ಕಟ್ಟಿದ ಮರಳಿನ ಗೂಡುಗಳೆಷ್ಟೋ, ಅದರೊಳಗೆ ಕಂಡ ಕನಸುಗಳೆಷ್ಟೋ….!
ಪ್ರತೀ ಬಾರಿ ಅಲೆಗಳ ರಭಸಕ್ಕೆ ಮರಳಿನ ಮನೆ ಕುಸಿದಾಗ, ನೀ ನೀಡುತ್ತಿದ್ದ ಸಾಂತ್ವಾನ ನನ್ನ ಭುಜ ಬಳಸಿ ಕೊಡುತ್ತಿದ್ದ ಭರವಸೆ ಈವಾಗ ಹುಸಿನಗು ತರಿಸುತ್ತಿದೆ. ನನ್ನ ಮೊಣಕಾಲುಗಳ ದಾಟಿ ಮೇಲೆ ಬಂದ ನೀರು ನೀನು ಕೊಟ್ಟ ಚೂಡಿದಾರದ ಕಾಲುಗಳನ್ನು ಅಪ್ಪಿ ಮತ್ತೆ ನನ್ನನ್ನು ಸಡಿಲಗೊಳಿಸುತ್ತಿದೆ. ನಾವಾಡುತ್ತಿದ್ದ ನೀರಾಟ, ಚೆಲ್ಲಾಟ ಬೇರೆಯವರ ಕಿಚ್ಚು ಹಚ್ಚುತ್ತಿತ್ತು. ಆದರೆ ನಿನ್ನೆ ನೀನಾಡಿದ ಒರಟು ಮಾತು ನಿಜವಾದ ಆಟ ತೋರಿಸಿತ್ತು. ‘ಮಧುಕರ’ ಕೇವಲ ಮಧುವ ಹೀರಲು ಬಂದವನು ನೀನಾದೆ. ನನ್ನೊಳಗೆ ಸೇರಿ ಬೆಳೆಯುತ್ತಿರುವ ನಿನ್ನಂಶವನ್ನೂ ಕಡಲಾಳದೊಳಗೆ ಮುಳುಗಿಸುತ್ತಿದ್ದೇನೆ. ಕಾಲ ಕೆಳಗಿನ ಮರಳು ಜಾರುತ್ತಿದೆ, ಆದರೆ ಇಂದು ಹಿಡಿಯಲು ನಿನ್ನಾಸರೆಯೂ ಇಲ್ಲ, ಆಸೆಗಳೂ ಇಲ್ಲ.
ಕಣ್ಮುಚ್ಚುವ ಮೊದಲು ಕೊನೆಯ ಸಾರಿ ತೀರದ ಕಡೆ ನೋಡಿದರೆ, ಯಾರೋ ಕೂಗಿ ಕರೆಯುತ್ತಿದ್ದಂತೆ ದೇಹ ಹಗುರಾಗಿ ತೇಲಿಹೋಗಿತ್ತು. ಮತ್ತೆ ಕಣ್ತೆರೆದಾಗ ಅದೇ ತೀರದ ಮೇಲೆ ನಾನು ತಿರಸ್ಕರಿಸಿದ್ದ ಅತ್ತೆ ಮಗ ಬಾಳುಕೊಡಲು ಸಿದ್ಧನಾಗಿದ್ದ. ಮುಳುಗಿದ್ದವಳನ್ನು ಎತ್ತಿ ತಂದ ‘ಭಾಸ್ಕರ’ನ ಹೊಂಗಿರಣ ಸೂಸುತ್ತಿದ್ದಂತೆ ‘ಸೇವಂತಿ’ಯ ನಯನಗಳು ಮುತ್ತಿನಂತೆ ಹೊಳೆಯುತ್ತಿದ್ದವು.
— ಅಶೋಕ ಕೆ. ಜಿ, ಮಿಜಾರು.
ಚೆನ್ನಾಗಿದೆ ಕತೆ -ಸ್ಮಿತಾ
ಚಿಕ್ಕ, ಚೊಕ್ಕ ಕಥೆ, ಸೊಗಸಾಗಿದೆ..