ಅದೊಂದು ಕೆರೆ…ಅಯ್ಯನಕೆರೆ
ಒಂದು ಸುಂದರ ಮುಂಜಾನೆ. ಈಗಷ್ಟೇ ಸೂರ್ಯ ನಿದ್ದೆಯಿಂದ ಎದ್ದಹಾಗಿತ್ತು. ಹೆಲ್ಮೆಟ್, ರೈಡಿಂಗ್ ಗಿಯರ್ ಗಳನ್ನು ಕಳಚುತ್ತಾ ಸುತ್ತಲೂ ಕಣ್ಣು ಹಾಯಿಸಿದೆ. ವಾವ್ ಅಂದಿತು ಮನಸ್ಸು. ಅದೇನೂ ಸದ್ದು ಮಾಡುತಿದ್ದ ಹೊಟ್ಟೆಯೂ ಥಟ್ಟಂತ ಸುಮ್ಮನಾಗಿ ಬಿಟ್ಟಿತ್ತು. ಹೊಸದಾಗಿ ಹಾಕಿರುವ ತಂತಿ ಬೇಲಿಯನ್ನು ದಾಟಿ ಮುಂದೆ ಸಾಗಿದವು ಕಾಲುಗಳು. ಕಣ್ಣಮುಂದೆ ತೆರೆದಿಟ್ಟಂತಿತ್ತು ಒಂದು ವರ್ಣಭರಿತ ಚಿತ್ರಪಟ.
ಅದೊಂದು ಕೆರೆ. ಗುಡ್ಡ ಬೆಟ್ಟಗಳ ನಡುವೆ ವಿಶಾಲವಾಗಿರುವ ಆ ಸುಂದರಿಯ ಹೆಸರೇ “ಅಯ್ಯನಕೆರೆ”. ಕಣ್ಣುಕುಕ್ಕುವ ಪ್ರಾಕೃತಿಕ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಇನ್ನೊಂದು ವಿಸ್ಮಯ ತಾಣ. ನಗರದಿಂದ 20 ಕಿ.ಮೀ ಉತ್ತರಕ್ಕೆ (ಕಡೂರು ಮಾರ್ಗದಲ್ಲಿ ,ಸಖರಾಯನಪಟ್ಟಣದ ಸಮೀಪ) ಸಾಗಿದರೆ ಈ ಸುಂದರ ಸರೋವರವನ್ನು ಕಾಣಬಹುದು. “ದೊಡ್ಡ ಮದಗದ ಕೆರೆ” ಎಂದೂ ಕರೆಯಲ್ಪಡುವ ಈ ಕೆರೆಯು, ಕರುನಾಡಿನ ಎರಡನೇ ದೊಡ್ಡ ಕೆರೆ ಎನ್ನಲ್ಪಡುತ್ತದೆ. ಸರಿ ಸುಮಾರು 900 ವರುಷಗಳ ಹಿಂದೆ ಈ ಪ್ರದೇಶದ ಅರಸರಾಗಿದ್ದ ರುಕ್ಮಾಂಗದರಾಯರ ಕಾಲದಲ್ಲಿ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಈ ಕೆರೆಯನ್ನು ಕಟ್ಟಿಸಲಾಯಿತು ಅನ್ನುತ್ತದೆ ಇತಿಹ್ಯ. ಮುಂದೆ ಹೊಯ್ಸಳರು, ಮೈಸೂರು ಒಡೆಯರು ಈ ಕೆರೆಯನ್ನು ಕಾಪಾಡುತ್ತಾ ಬಂದರು ಎನ್ನಲಾಗುತ್ತದೆ. ಇಂದಿಗೂ ಈ ಬೃಹತ್ತ್ ಕೆರೆಯು ಸುಮಾರು 15 ಸಾವಿರಕ್ಕೂ ಹೆಚ್ಚು ಹೆಕ್ಟೇರು ಕೃಷಿಭೂಮಿಗೆ ನೀರುಣಿಸುತ್ತದೆ.
ಶಾಂತವಾದ ಈ ಕೆರೆಗೆ ರಕ್ಷಕನಂತಿದೆ ಚಂದ್ರದ್ರೋಣ ಪರ್ವತ ಶ್ರೇಣಿ. ಹಸಿರು-ನೀಲಿ ಬಣ್ಣಗಳ ಆ ಸಮ್ಮಿಲನ ವರ್ಣನಾತೀತ. ಅದರಲ್ಲೂ ಕೋನಾಕಾರದ ಶಕುನಗಿರಿ ಬೆಟ್ಟ ಒಂದು ವಿಸ್ಮಯವೆ. ಕೆರೆಯ ಮಧ್ಯಭಾಗದಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿರುವ ನಡುಗಡ್ಡೆಯಲ್ಲಿ ನಿಂತರೆ ಅಬ್ಬಬ್ಬಾ ಎಂದು ಉದ್ಗಾರವೆತ್ತುದಂತೂ ಖಂಡಿತ.
ಗುಡಿಯ ಪಕ್ಕಕೆ ಇರುವ ಕಲ್ಲುಮಂಚದಲ್ಲಿ ಕುಂತಾಗ ಅನಿಸಿದ್ದು ಇಷ್ಟೇ “ಆಹಾ ಎಂತಾ ಸೊಬಗು, ನಮ್ಮೂರು” . ಅದ್ಯಾವುದೇ ವಿದೇಶಿ ತಾಣಕ್ಕೂ ಪೈಪೋಟಿ ಕೊಡಬಲ್ಲದು ನಮ್ಮ ಈ ಸುಂದರ ಸರೋವರ. ತುಂಬು ಪ್ರಕೃತಿಯನ್ನು ಇಷ್ಟಪಡುವ ಪ್ರತೀ ಒಬ್ಬರು ನೋಡಲೇ ಬೇಕಾದ ಒಂದು ಸುಂದರ ನೋಟವಿದೆಂದನಿಸಿತು ಅಲ್ಲಿಂದ ಮರಳುವಷ್ಟರಲ್ಲಿ.
,
– ಪಲ್ಲವಿ ಭಟ್, ಬೆಂಗಳೂರು
Very nice 🙂
ಥ್ಯಾಂಕ್ಸ್ ಶ್ರುತಿ 🙂
ಬಹಳ ಸುಂದರ ತಾಣ..ಸೊಗಸಾದ ನಿರೂಪಣೆ..
ಧನ್ಯವಾದಗಳು 🙂
ಪ್ರಕೃತಿಯ ಅದ್ಭುತ ವರ್ಣ. ಅದಕ್ಕಿಂತಲೂ ಸೊಗಸಾದ ವರ್ಣನೆ. Super Pallu
ಥ್ಯಾಂಕ್ಸ್ ಶ್ರೇಯಸ್ 🙂
ಪ್ರಕ್ರತಿಯ ಸೊಬಗನ್ನು ವಿವರಿಸುವ ಜೊತೆಗೆ ಸ್ಥಳದ ಇತಿಹಾಸವನ್ನು ಸಂಕ್ಷಿಪ್ತವಾಗಿ ಇಲ್ಲಿ ತಿಳಿಸಿದ್ದೀರಿ..
🙂
ಲೇಖನ ಒಳ್ಳೆದಾಯಿದು ಪಲ್ಲವಿ
ಥಾಂಕ್ ಯು 🙂