ಶಿವ-ಪಾರ್ವತಿಯರ ‘ನಿವಾಸದ’ ಸುತ್ತುಮುತ್ತ…
25 ಫೆಬ್ರವರಿ 2017ರಂದು, ನೇಪಾಳದ ಕಟ್ಮಂಡುವಿನ ವಿಮಾನನಿಲ್ದಾಣದಿಂದ, ಪರ್ವತ ಶ್ರೇಣಿಯ ದರ್ಶನಕ್ಕಾಗಿ ಇರುವ ಪುಟಾಣಿ ವಿಮಾನದಲ್ಲಿ ಕುಳಿತಿದ್ದೆವು. 20 ಜನ ಕೂರಬಹುದಾದ ಈ ವಿಮಾನವು , ಸುಮಾರು ಮುಕ್ಕಾಲು ಗಂಟೆಯ ಕಾಲ ಧವಳ ಕಿರೀಟ ಹೊತ್ತ ಅನೇಕ ಪರ್ವತಗಳ ಸುತ್ತುಮುತ್ತ ಹಾರಾಡತೊಡಗಿತು. ಪ್ರತಿಯೊಬ್ಬರಿಗೂ ಕಿಟಿಕಿಬದಿಯ ಸೀಟು ಇರುತ್ತದೆ. ಈ ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಒಬ್ಬಳು ಗಗನಸಖಿ ಇದ್ದರು. ಆಕೆ, ಆಗಾಗ ‘ ನಿಮ್ಮ ಎಡಕ್ಕೆ ನೋಡಿ ..ಕಾಂಚನಜುಂಗಾ…ಬಲಕ್ಕೆ.. ಲ್ಹೋತ್ಸೆ ….ನುಪ್ಸೆ …..ಅನ್ನಪೂರ್ಣ….. ಗಣೇಶ… ಮನ್ಸಾಲ್ .. ಗೌರಿಶಂಕರ…ಮೌಂಟ್ ಎವರೆಸ್ಟ್ ಬಂತು…ಇದು 29029 ಅಡಿ ಎತ್ತರದಲ್ಲಿದೆ’ ಇತ್ಯಾದಿ ವಿವರಣೆ ಕೊಡುತ್ತಿದ್ದಳು.
ಪ್ರತಿಯೊಬ್ಬರನ್ನೂ ಒಂದು ಬಾರಿ ಕಾಕ್ ಪಿಟ್ ಗೆ ಕರೆಸಿ, ವಿಮಾನದ ಮುಂಭಾಗದ ಮೂಲಕ ಪರ್ವತಶ್ರೇಣಿಗಳನ್ನು ವೀಕ್ಷಿಸಲು ಅವಕಾಶ ಕೊಟ್ಟಳು. ನಿಜಕ್ಕೂ ಅದ್ಭುತ ದೃಶ್ಯವದು. ಶಿವ-ಪಾರ್ವತಿಯರ ಆವಾಸ ಸ್ಥಾನ ಎಂದು ನಂಬಲಾದ ಈ ಪರ್ವತಶ್ರೇಣಿಗೆ ಒಂದು ಪ್ರದಕ್ಷಿಣೆ ಮಾಡಿದ ಸುಯೋಗ ನಮ್ಮದಾಯಿತು.
ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಹಿಮಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಿದ ಸಾಹಸಿಗರು ಕೆಲವೇ ಮಂದಿ. ಹಿಮಾಲಯದ ಪರ್ವತ ಶ್ರೇಣಿಗಳನ್ನು ಎತ್ತರದಿಂದ, ಆದರೆ ಶಿಖರಗಳು ನಿಚ್ಚಳವಾಗಿ ಕಾಣಿಸುವಷ್ಟು ಹತ್ತಿರದಿಂದ, ನೋಡಿದ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳು ಎಂಬುದು ಖುಷಿಯ ವಿಷಯ.ಸಡಗರ, ಸಂಭ್ರಮದಿಂದ ಈ ದೃಶ್ಯಗಳನ್ನು ಅಸ್ವಾದಿಸುತ್ತಿರುವಾಗ ಕಾಲ ಸ್ಥಬ್ದವಾಗಬಾರದೇ ಅನಿಸಿತ್ತು. ಮುಕ್ಕಾಲು ಗಂಟೆಯ ಈ ಪ್ರವಾಸಿ ವಿಮಾನಯಾನಕ್ಕೆ ತಗಲುವ ವೆಚ್ಚ 7000/- ರೂ. ನೇಪಾಳದ ಹಲವಾರು ವಿಮಾನ ಸೇವಾ ಸಂಸ್ಥೆಯವರು ಈ ಪ್ರಯಾಣವನ್ನು ಆಯೋಜಿಸುತ್ತಾರೆ. ಶಿವ-ಪಾರ್ವತಿಯರ ‘ಅಧಿಕೃತ ನಿವಾಸದ’ ಹತ್ತಿರ ಹೋದುದ್ದಕ್ಕೆ ಸಾಕ್ಷಿಯಾಗಿ, ಪ್ರಯಾಣಿಸಿದ ಎಲ್ಲರಿಗೂ ಒಂದು ಸ್ಮರಣಿಕೆಯಾಗಿ ಒಂದು ಸರ್ಟಿಫಿಕೇಟ್ ಕೊಟ್ಟರು.
.
– ಹೇಮಮಾಲಾ.ಬಿ