ಭಾಷೆಗೆ ನಿಲುಕದ ಭಾವ..
ಸಾಮಾನ್ಯವಾಗಿ ಚಾರಣ/ನಡಿಗೆಯ ಸಮಯದಲ್ಲಿ ಸುಸ್ತಾದರೆ/ಬಾಯಾರಿದರೆ ತಿನ್ನುವುದಕ್ಕಿರಲೆಂದು ಒಂದಿಷ್ಟು ಚಾಕೋಲೇಟ್ಸ್ ಅನ್ನು ನನ್ನ ಕೈಚೀಲದಲ್ಲಿ ಇಟ್ಟುಕೊಳ್ಳುವುದು ನನ್ನ ಅಭ್ಯಾಸ. ಡಿಸೆಂಬರ್ 31,2016 ದಂದು ಒಡಿಶಾದ ಲೂನಾಪಾನಿಯ ಹಳ್ಳಿಯನ್ನು ದಾಟಿ, ‘ಚಿಲಿಕಾ ಸರೋವರ’ದ ಕಡೆಗೆ ನಡೆಯುತ್ತಿದ್ದೆವು. ಅಲ್ಲಿ ಕನಿಷ್ಟ 30 ವರ್ಷಗಳ ಹಿಂದಿನ ಅಪ್ಪಟ ಹಳ್ಳಿಯ ಚಿತ್ರಣವಿತ್ತು. ಗಲ್ಲಿಗಳಲ್ಲಿ ಆಟವಾಡುತ್ತಿದ್ದ ನಾಲ್ಕಾರು ಪುಟ್ಟಮಕ್ಕಳು ಕಾಣಿಸಿದರು. ಕೈಯಲ್ಲಿದ್ದ ಚಾಕೋಲೇಟ್ಸ್ ಅನ್ನು ಆ ಮಕ್ಕಳಿಗೆ ಕೊಟ್ಟೆ. ಹತ್ತು ಮಾರು ದೂರ ಹೋಗುವಷ್ಟರಲ್ಲಿ , 15-20 ಚಿಕ್ಕ ಮಕ್ಕಳು ನನ್ನ ಸುತ್ತುಮುತ್ತಲು ಬರಲಾರಂಭಿಸಿದಾಗ ನನಗೆ ಮುಜುಗರವಾಯಿತು! ಆ ಮಕ್ಕಳು ಏನೂ ಮಾತನಾಡದಿದ್ದರೂ ಅವರು ಯಾಕೆ ಬರುತ್ತಿದ್ದಾರೆಂದು ಗೊತ್ತಾಯಿತು. ತಪ್ಪು ನನ್ನದೇ. ಮುಜುಗರವಾಯಿತು, ಯಾಕೆಂದರೆ ಅಷ್ಟು ಮಕ್ಕಳಿಗೆ ಕೊಡಲು ನನ್ನ ಬಳಿ ಚಾಕೋಲೇಟ್ಸ್ ಇರಲಿಲ್ಲ.ಮಕ್ಕಳನ್ನು ನಿರಾಸೆಗೊಳಿಸಲು ಮನಸ್ಸಾಗಲಿಲ್ಲ.
ಏನು ಮಾಡಲಿ ಎಂದು ಆಲೋಚಿಸುತ್ತಿರುವಾಗ, ಗಲ್ಲಿಯ ತಿರುವಿನಲ್ಲಿ ಪೆಟ್ಟಿಗೆ ಅಂಗಡಿಯೊಂದು ಕಾಣಿಸಿತು. ಅಲ್ಲಿ ಲಭ್ಯವಿದ್ದ ಯಾವುದೋ ಸ್ಥಳೀಯ ಚಾಕೊಲೇಟ್ಸ್ ಪ್ಯಾಕೆಟ್ ಒಂದನ್ನು ಕೊಂಡೆ. ಮಕ್ಕಳು ಆಗಲೇ ಚಾಕೊಲೇಟ್ಸ್ ಗಾಗಿ ಕೈಚಾಚತೊಡಗಿದ್ದರು. ನಮ್ಮ ತಂಡದವರು ಮುಂದೆ ಹೋಗಿದ್ದರು. ತಂಡದ ನಾಯಕಿ ಗೋಪಮ್ಮ ಅವರು “ನೀವು ಎಲ್ಲಾ ಮಕ್ಕಳಿಗೆ ಚಾಕೊಲೇಟ್ಸ್ ಕೊಡ್ತೀನೆಂದರೆ ಸಾವಿರದ ಮೇಲೆ ಬೇಕು, ಬನ್ನಿ, ಲೇಟಾಗುತ್ತೆ “ ಅಂದರು. ಅದೇ ಅಂಗಡಿಗೆ ಹೊಂದಿಕೊಂಡಿದ್ದ ಮನೆಯ ಜಗಲಿಯ ಮೇಲೆ ಕುಳಿತಿದ್ದ ಅಜ್ಜಿಯೊಬ್ಬರು ನನ್ನ ಗಲಿಬಿಲಿಯನ್ನು ಕಂಡು ನಗುತ್ತಿದ್ದರು.
ಇದೇ ಸುಸಮಯ ಎಂದು ಆ ಚಾಕೊಲೇಟ್ಸ್ ಪ್ಯಾಕೆಟ್ ಅನ್ನು ಅಜ್ಜಿಯ ಕೈಗೆ ರವಾನಿಸಿ, ‘ಮಕ್ಕಳಿಗೆ ಹಂಚಿ, ನನಗೆ ಲೇಟಾಗುತ್ತದೆ’ ಎಂದು ಹಿಂದಿಯಲ್ಲಿ ಹೇಳಿದೆ. ಆಕೆಗೆ ಹಿಂದಿ ಬಾರದು, ನನಗೆ ಒಡಿಯಾ ಭಾಷೆ ಗೊತ್ತಿಲ್ಲ. ಒಟ್ಟಿನಲ್ಲಿ ಭಾಷೆಗೆ ನಿಲುಕದ, ಆದರೆ ಅರ್ಥವಾಗುವ ಭಾವ. ಅಜ್ಜಿ ನನ್ನ ತಲೆ ಮುಟ್ಟಿ ಆಶೀರ್ವದಿಸಿದರು. ಅವರ ಜೊತೆಗೆ ಒಂದು ಫೊಟೋ ಕ್ಲಿಕ್ಕಿಸಿಕೊಂಡು ಕೈಬೀಸಿ, ಓಡೋಡಿ, ತಂಡವನ್ನು ಸೇರಿದೆ.
– ಹೇಮಮಾಲಾ.ಬಿ
Beautifully narrated 🙂
ಚುಟುಕಾದ ಭಾವ ಲಹರಿ ..ಇಷ್ಟವಾಯ್ತು..