‘ತೆರೆದಂತೆ ಹಾದಿ’- ತೆರೆದುಕೊಂಡ ಪರಿ..

Share Button

ಸಂಕ್ರಾಂತಿಯ ಶುಭದಿನವಾದ 14 ಜನವರಿ 2017 ರಂದು, ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಾಹಿತ್ಯಸದನದಲ್ಲೊಂದು ಚಿಕ್ಕ ಕಾರ್ಯಕ್ರಮವನ್ನು ಬಹಳ ಚೊಕ್ಕವಾಗಿ ಆಯೋಜಿಸಿದ್ದರು. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾದ ಜಯಶ್ರೀ ಬಿ. ಕದ್ರಿ ಅವರ ಚೊಚ್ಚಲ ಕೃತಿ “ತೆರೆದಂತೆ ಹಾದಿ” ಎಂಬ ವೈಚಾರಿಕ ಬರಹಗಳ ಸಂಕಲನವನ್ನು ಸಂಘದ ವತಿಯಿಂದ ಬಿಡುಗಡೆಗೊಳಿಸಲಾಯಿತು.

ಸುಶ್ರಾವ್ಯವಾದ ಪ್ರಾರ್ಥನೆಯಿಂದ ಕಾರ್ಯಕ್ರಮವು ಆರಂಭಗೊಂಡಿತು . ಶ್ರೀ ವೈ.ಗಣರಾಜ್ ಅವರು ಆಹ್ವಾನಿತ ಅತಿಥಿಗಳಿಗೂ, ಆಗಮಿಸಿದ ಸಾಹಿತ್ಯಾಸಕ್ತರೆಲ್ಲರಿಗೂ ಸ್ವಾಗತ ಕೋರಿದರು.

ಕೃತಿಯನ್ನು ಅನಾವರಣಗೊಳಿಸಿದ ಡಾ.ಯು.ಮಹೇಶ್ವರಿ, ಸಂಯೋಜಕರು, ಭಾರತೀಯ ಭಾಷಾ ಅಧ್ಯಯನ ಕೇಂದ್ರ, ಕಣ್ಣೂರು ವಿ.ವಿ ಅವರು ಮಾತನಾಡುತ್ತಾ, ತಮ್ಮ ಶಿಷ್ಯೆಯಾದ ಜಯಶ್ರೀ ಬಿ. ಕದ್ರಿ ಅವರ ಪುಸ್ತಕವನ್ನು ಹೆಮ್ಮೆಯಿಂದಲೂ, ವಿಮರ್ಶಾತ್ಮಕವಾಗಿಯೂ, ಆಶೀರ್ವಾದಪೂರ್ವಕವಾಗಿಯೂ ವಿಶ್ಲೇಷಿಸುತ್ತಾ “ಈ ಕೃತಿಯಲ್ಲಿರುವ ಸ್ತ್ರೀ ಸಂವೇದಿಯಾದ, ಸಮಕಾಲೀನ ಚಿಂತನಶೀಲ ಬರಹಗಳ ಮೂಲಕ ಲೇಖಕಿಯ ಚಿಂತನೆಗಳು ಸಹೃದಯರೊಂದಿಗೆ ಸಂವಹನಗೊಳ್ಳಲಿ” ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಮನೋಹರ ಪ್ರಸಾದ್ ಸುದ್ದಿ ವಿಭಾಗ ಮುಖ್ಯಸ್ಥರು, ಉದಯವಾಣಿ, ಮಂಗಳೂರು ಇವರು ತಮ್ಮ ಚತುರ ನುಡಿಗಳ ಮೋಡಿಯಿಂದ ಸಭಿಕರನ್ನು ಮಂತ್ರಮುಗ್ದಗೊಳಿಸಿದರು. ಪ್ರಚಲಿತ ಸಾಮಾಜಿಕ ಸಮಸ್ಯೆಗಳು, ಶಿಥಿಲವಾಗುತ್ತಿರುವ ಕೌಟುಂಬಿಕ ಮೌಲ್ಯಗಳು, ಇವುಗಳ ನಡುವೆ ಪ್ರತಿಯೊಬ್ಬರಿಗೂ ಸಹಜವಾಗಿ ಇರುವ ತನ್ನನ್ನು ಗುರುತಿಸಿಕೊಳ್ಳಬೇಕೆಂಬ ಹಪಾಹಪಿ ಇತ್ಯಾದಿ ವಿಚಾರಗಳನ್ನು ತನ್ನ ಬರಹಗಳ ಮೂಲಕ ಹೊರಚೆಲ್ಲಿದ ಲೇಖಕಿಯ ಪ್ರಯತ್ನಗಳನ್ನು ಮೆಚ್ಚಿ, ಶುಭ ಹಾರೈಸಿದರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆಯಾದ ಡಾ.ಶೈಲಾ.ಯು ಅವರು, ತಮ್ಮ ಸಂಘದ ವತಿಯಿಂದ ಪ್ರಸ್ತುತ ವರ್ಷದ ಸಾಲಿನಲ್ಲಿ ಬಿಡುಗಡೆಯಾಗುತ್ತಿರುವ ಐದನೆಯ ಪುಸ್ತಕವಾದ ‘ತೆರೆದಂತೆ ಹಾದಿ’ಯು ಬಹಳಷ್ಟು ಜನರನ್ನು ತಲಪಲಿ ಹಾಗೂ ಸಂಘದ ಉದ್ದೇಶಗಳಿಗೆ ಇನ್ನಷ್ಟು ಜನ ಕೈಜೋಡಿಸುವಂತಾಗಲಿ ಎಂದು ಆಶಿಸಿದರು.

 

ಶ್ರೀಮತಿ ಜ್ಯೋತಿ ಚೇಳ್ಯಾರು ಅವರು ಸಾಂದರ್ಭಿಕವಾಗಿ, ಅರ್ಥಪೂರ್ಣವಾಗಿ ನಿರೂಪಿಸಿದರು. ಶ್ರೀಮತಿ ಜಯಶ್ರೀ ಬಿ.ಕದ್ರಿಯವರಿಂದ ಕೃತಿಯ ಬಗ್ಗೆ ಒಂದಿಷ್ಟು ಮಾತುಗಳು ಮತ್ತು ಧನ್ಯವಾದ ಸಮರ್ಪಣೆ ನೆರವೇರಿತು. ಕೊನೆಯದಾಗಿ ಎಲ್ಲರಿಗೂ ಲಘು ಉಪಾಹಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

ಖ್ಯಾತ ಸಾಹಿತಿಗಳಾದ ಶ್ರೀಮತಿ ಸಾರಾ ಅಬೂಬಕ್ಕರ್‍ , ಶ್ರೀಮತಿ ಗಂಗಾ ಪಾದೇಕಲ್ಲು, ಶ್ರೀಮತಿ ಮನೋರಮಾ ಭಟ್ , ಶ್ರೀಮತಿ ಇಂದಿರಾ ಹಾಲಂಬಿ, ಶ್ರೀಮತಿ ಪರಮೇಶ್ವರಿ ಲೋಕೇಶ್ವರ್ , ಶ್ರೀಮತಿ ಬಿ.ಎಂ.ರೋಹಿಣಿ, ಪ್ರೊ.ಎಚ್ .ಪಟ್ಟಾಭಿರಾಮ್ ಸೋಮಯಾಜಿ, ಶ್ರೀ ಕಲ್ಲೂರು ನಾಗೇಶ್ ಹಾಗೂ ಇನ್ನಿತರ ಸಾಹಿತ್ಯಾಸಕ್ತರ ಉಪಸ್ಥಿತಿ ಕಾರ್ಯಕ್ರಮಕ್ಕೆ ಶೋಭೆ ತಂದು ಕೊಟ್ಟಿತು.

‘ತೆರೆದಂತೆ ಹಾದಿ’ ಸಂಕಲನದಲ್ಲಿ , ಲೇಖಕಿಯ ವೃತ್ತಿಜೀವನದ ಅವಿಭಾಜ್ಯ ಅಂಗವಾದ ಯುವ ಮನಸ್ಸುಗಳೊಡನೆ ಒಡನಾಟ, ಸಾಹಿತ್ಯದ ವಿವಿಧ ಮಜಲುಗಳ ಸಂಚಾರದಲ್ಲಿ ಲಭ್ಯವಾಗುವ ಅನುಭವ ಮತ್ತು ಸ್ತ್ರೀಪರ ಚಿಂತನೆಗಳನ್ನು ಒಳಗೊಂಡ 55 ಬರಹಗಳಿವೆ. ‘ಒಗ್ಗರಣೆ ಸದ್ದಿನಲ್ಲಿ ಕಳೆದು ಹೋಗುವವರು’, ‘ಕೆಲಸವೂ ಮನೆಗೆಲಸವೂ’, ‘ಹಳ್ಳಿ ಹಕ್ಕಿಯ ಹಾಡು’, ‘ಕಾಲಿಗೆ ತೊಡರುವ ಸೀರೆಯೂ ಕಾಲಕ್ಕೆ ಅಳುಕುವ ನೀರೆಯೂ’, ‘ಇ-ಓದು ಮತ್ತು ಮಕ್ಕಳ ಸಾಹಿತ್ಯ’, ‘ಟೀನೇಜ್ ಎಂಬ ಅಗ್ನಿದಿವ್ಯ’, ‘ಸೈಬರ್ ಫೆಮಿನಿಸಂ’, ‘ಲಿಪ್ ಸ್ಟಿಕ್ ಫೆಮಿನಿಸಂ’ ಇತ್ಯಾದಿ ಬರಹಗಳು ತಮ್ಮ ಶೀರ್ಷಿಕೆಯ ವೈವಿಧ್ಯತೆಯಿಂದಲೇ ಗಮನ ಸೆಳೆಯುತ್ತವೆ.

ಆಕೃತಿ ಪ್ರಿಂಟ್ಸ್ , ಮಂಗಳೂರು ಅವರ ಮುದ್ರಣದಲ್ಲಿ 168 ಪುಟಗಳುಳ್ಳ ಪುಸ್ತಕವು ಸೊಗಸಾಗಿ ಮೂಡಿ ಬಂದಿದೆ.

 

– ಹೇಮಮಾಲಾ.ಬಿ 
,

4 Responses

  1. Pushpalatha Mudalamane says:

    ಅತ್ಯಂತ ಸಮರ್ಪಕ ವಾದ ವರದಿ ಹೇಮಾ !

  2. Manjula B S says:

    ಅಕ್ಕನವರಿಗೆ ಶುಭಾಶಯಗಳು.
    ಸಾಹಿತ್ಯ ಸೇವೆ ಮುಂದುವರೆಯಲಿ

  3. Shankari Sharma says:

    ಸಾಹಿತ್ಯ ಸೇವೆ ಮುಂದುವರಿಯಲಿ…ಉತ್ತಮ ಕೃತಿಗಳು ಮೂಡಿಬರಲೆಂದು…ಶುಭ ಹಾರೈಕೆಗಳು…

  4. Jayashree b kadri says:

    ಪ್ರತಿಕ್ರಿಯಿಸಿದ, ಹಾರೈಸಿದ ಎಲ್ಲರಿಗೆ ಕೃತಜ್ಞತೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: