ಜೋಳಿಗೆಯಿಂದ ಹೋಳಿಗೆ: ರೂಪಕಲಾ ಆಳ್ವ ಪ್ರಬಂಧಗಳು
‘ಜೋಳಿಗೆಯಿಂದ ಹೋಳಿಗೆ’ ಮಂಗಳೂರಿನ ರೂಪಕಲಾ ಆಳ್ವ ಅವರ ಎರಡನೇ ಕೃತಿ. ಇದೀಗಾಗಲೇ ‘ನಾಟಿ’ ಎಂಬ ಜಾನಪದ ಸಂಬಂಧಿತ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿರುವ ರೂಪಕಲಾ ಅವರ ಲಲಿತ ಪ್ರಬಂಧಗಳ ಸಂಕಲನ ಇದು. ತಮ್ಮ ಪ್ರಾಸ್ತಾವಿಕ ಮುನ್ನುಡಿಯಲ್ಲಿ ಬಿ.ಎಮ್. ರೋಹಿಣಿ ಅವರು ಬರೆದಿರುವಂತೆ ‘ ಒಂದು ಸೂಕ್ಷ್ಮ ಕುಸುರಿತನ, ಕಲಾವಂತಿಕೆ, ಈ ಲೇಖನಗಳ ಪ್ರತೀ ಸಾಲುಗಳಲ್ಲೂ ಕಾಣಸಿಗುತ್ತದೆ. ಕವನ ಬರೆಯುವಾಗ ಹೇಗೆ ಪದಗಳನ್ನು ಬಹಳ ಅಳೆದು ತೂಗಿ ಆಯ್ಕೆ ಮಾಡುತ್ತಾರೋ , ಹಾಗೆ ಈ ಲೇಖನಗಳನ್ನು ಬರೆಯುವಾಗಲೂ ಲೇಖಕಿಯ ಸೂಕ್ಷ್ಮ ಪ್ರಜ್ಞೆಯನ್ನು ಗುರುತಿಸಬಹುದಾಗಿದೆ.
ನವ್ಯೋತ್ತರ ಭಾರತದ ಹೆಣ್ಣು ಅನುಭವಿಸುವ ವಿರೋಧಾಭಾಸಗಳು, ತಲ್ಲಣಗಳು , ಅವುಗಳನ್ನು ಅನುಸಂಧಾನಿಸುವ ಬಗೆ ವಿಶಿಷ್ಟವೂ ವಿನೂತನವೂ ಆಗಿದೆ. ಹೀಗಾಗಿಯೇ ‘ಬರಹ’ ಎನ್ನುವುದು ಮಹಿಳೆಯರ ಅಭಿವ್ಯಕ್ತಿ ಮಾಧ್ಯಮವಾಗಿ, ಪ್ರತಿಭಟನೆಯ ಮಾರ್ಗವಾಗಿ, ಅಸ್ಮಿತೆಯ ಸಂದೇಶವಾಗಿ ಮೂಡಿಬರುತ್ತಿದೆ. ರೂಪಕಲಾ ಆಳ್ವರು ತಮ್ಮ ‘ಮನದ ಮಾತು’ವಿನಲ್ಲಿ ಹೇಳುವಂತೆ ‘‘ಮಾತಲ್ಲಿ ಹೇಳಲಾಗದ ಮನದ ತಾಕಲಾಟಗಳು, ಗೊಂದಲಗಳು, ಬೇನೆ ಬೇಸರಗಳು, ಸಂತೋಷ-ನಗುವುಕ್ಕಿಸುವ ಕ್ಷಣಗಳನ್ನು ಬರಹಕ್ಕಿಳಿಸಿದಾಗ ಅವು ಹೊಸ ರೂಪ ಪಡೆದು ಎದ್ದು ನಿಂತಾಗ ಮನಸ್ಸಿಗಾಗುವ ಸಂಭ್ರಮ ಅಷ್ಟಿಷ್ಟಲ್ಲ.”
ತನ್ನ ಅಮ್ಮನ ಬಗ್ಗೆ ಆರ್ದ್ರ ಭಾವದಿಂದ ‘ಅಮ್ಮ ನೆನಪಾಗುತ್ತಾಳೆ’ ಪ್ರಬಂಧದಲ್ಲಿ ಬರೆಯುವ ರೂಪಕಲಾ ಅಮ್ಮ ಅನುಭವದ ಪ್ರಾಮಾಣಿಕತೆಯಿಂದ,ದಟ್ಟವಾದ ವಿವರಗಳಿಂದ ಆಪ್ತವೆನಿಸುತಾರೆ. ಕಣ್ಣಂಚಿನಲ್ಲಿ ನೀರು ಜಿನುಗಿಸುವ, ನಮ್ಮ ನಿಮ್ಮೆಲ್ಲರ ಅಮ್ಮನ ಚಿತ್ರಣ ಇದು.
ಒಂದು ಸುಸಂಸ್ಕೃತ ಮನಸ್ಸಿನ ಉತ್ತಮ ಅಭಿರುಚಿಯ ಹಾಸ್ಯ ಇಲ್ಲಿನ ಹೆಚ್ಚಿನ ಲೇಖನಗಳಲ್ಲಿ ಕಾಣಸಿಗುತದೆ. ‘ನಾಜ಼ಿ’ ಎಂದು ಹೆಸರಿಟ್ಟು ಅವರು ಜರ್ಮನ್ ಶೆಫೆರ್ಡ್ ನಾಯಿಯೊಂದನ್ನು ಸಾಕಿದ ಬಗೆಯಂತೂ ನಕ್ಕು ನಲಿಸುತ್ತದೆ. ಇದೇ ರೀತಿ ‘ಫ಼್ಲಾಟ್ ಸಂಸ್ಕೃತಿ’, ‘ಡ್ರೈವಿಂಗ್ ಕಲಿಯುವ ಪರಿಪಾಟಗಳು’, ನಗರದ ಬಸ್ ಗಳಲ್ಲಿನ ರಸ ಪ್ರಸಂಗಗಳು, ಅವರ ನವಿರಾದ, ಆಪ್ತವಾದ ಶೈಲಿಯಲ್ಲಿ ಮೂಡಿಬರುತ್ತವೆ.
ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಗೃಹಿಣಿಯಾಗಿರುವ ರೂಪಕಲಾ ಅವರ ಬರಹಗಳ ವಿಶಿಷ್ಟತೆ ಅವುಗಳಲ್ಲಿನ ಲಾಲಿತ್ಯ. ಯಾವುದೇ ‘ಇಸಂ’ಗಳು, ಐಡಿಯಾಲಜಿಯ ತಾಕಲಾಟಗಳಿಲ್ಲದ ಸಮ ಚಿತ್ತತೆಯ, ಹರ್ಷದ ಸೆಲೆಗಳನ್ನು ಕಂಡುಕೊಳ್ಳುವ ಮನಸ್ಠಿತಿ. ಲಘು ಧಾಟಿಯ ಬರಹಗಳೇ ಆದರೂ ಆಗೊಮ್ಮೆ ಈಗೊಮ್ಮೆ ಹೆಣ್ಣು ಜೀವದ , ಅದರಲ್ಲೂ ಗೃಹಿಣಿಯರ ಬವಣೆಯನ್ನು ಬಿಂಬಿಸುವ, ಒಂದು ರೀತಿಯ ನವಿರು ಹಾಸ್ಯದಿಂದಲೇ ಚಿಂತನೆಗೆ ಹಚ್ಚುವ ಬರಗಳೂ ಇಲ್ಲಿವೆ. ಕರಾವಳಿ ಲೇಖಕಿಯರ ಸಂಘದಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ರೂಪಕಲ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಇನ್ನಷ್ಟು ಮುಂದುವರಿಸಲಿ ಎಂದು ಹಾರೈಕೆ.
– ಜಯಶ್ರೀ ಬಿ ಕದ್ರಿ
ಹೊಸ ಪ್ರಬಂಧ ಸಂಕಲನದ ಬಗೆಗೆ ಕುತೂಹಲ ಮೂಡಿಸಿತ್ತಾ, ಚೊಕ್ಕವಾಗಿ ಪರಿಚಯಿಸಿದ್ದೀರಿ. ಧನ್ಯವಾದಗಳು.