ಉತ್ತರಜಿಲ್ಲೆಯಿಂ ದಕ್ಷಿಣಜಿಲ್ಲೆಗೂ ಕನ್ನಡ ಕಂಪನು ಬೀರುತಿದೆ…
ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಮತ್ತೆ ಬಂತು 2016 ರ ‘ಸಾಹಿತ್ಯ ಸಂಭ್ರಮ’. ಜನವರಿ 22 ರಿಂದ 24 ರ ವರೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಭವನವು ಹಿರಿ-ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತಿತ್ತು. ನಿಗದಿತ ಆಸನಗಳಲ್ಲದೆ, ಹೆಚ್ಚುವರಿಯಾಗಿ ಜಾಗ ಇರುವಲ್ಲೆಲ್ಲ ಕುರ್ಚಿಗಳನ್ನು ಹಾಕಲಾಗಿದ್ದು, ಅವೆಲ್ಲವೂ ಭರ್ತಿಯಾಗಿದ್ದುದು ಹಿಂದಿನ ಸಾಹಿತ್ಯ ಸಂಭ್ರಮದ ಯಶಸ್ಸಿಗೆ ಕೈಗನ್ನಡಿಯಾಗಿತ್ತು.
ಹಿಂದಿನ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದರಿಂದ ಅಯಾಚಿತವಾಗಿ ನನ್ನ ಮನಸ್ಸು ಹೋಲಿಕೆಗೆ ತೊಡಗುತಿತ್ತು. ತಂಗಾಳಿ ತೀಡಿದಂತೆ ನಡೆಯಬೇಕಾದ ಕಾರ್ಯಕ್ರಮದ ಪ್ರವೇಶದ್ವಾರದಲ್ಲಿಯೇ ಖಾಕಿಪಡೆ ಸುರಕ್ಷತಾ ದೃಷ್ಟಿಯಿಂದ ನಮ್ಮನ್ನು ತಪಾಸಣೆಗೊಳಪಡಿಸಿ ತಮ್ಮ ಕರ್ತವ್ಯವನ್ನು ಮೆರೆದರಾದರೂ ನಮಗೆ ವಿಮಾನ ನಿಲ್ದಾಣ ಹೊಕ್ಕಂತಾಯಿತು. ಪ್ರಸ್ತುತ ಸನ್ನಿವೇಶದಲ್ಲಿ ಅದು ಅನಿವಾರ್ಯವಾಗಿತ್ತು ಎಂಬುದು ಅಷ್ಟೇ ನಿಜ.
22 ಜನವರಿಯಂದು ಮೊದಲನೆಯದಾಗಿ ಪುಸ್ತಕ ಮಳಿಗೆಗಳನ್ನು ಶ್ರೀ ಕೆ.ಎನ್.ಶಾಂತಕುಮಾರ ಅವರು ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳು ಸುಶ್ರ್ಯಾವ್ಯವಾಗಿ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಹಾಡಿ ಸಮಾರಂಭಕ್ಕೆ ಕಳೆ ಕೊಟ್ಟರು. ಡಾ. ಚಂದ್ರಶೇಖರ ಕಂಬಾರ ಅವರು ದೀಪ ಬೆಳಗಿಸುವ ಮೂಲಕ ಸಾಹಿತ್ಯ ಸಂಭ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಹಿಂದಿನ ಸಾಹಿತ್ಯ ಸಂಭ್ರಮಗಳ ಆಯೋಜನೆ ಮತ್ತು ನಿರ್ದೇಶನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಎಂ.ಎಂ.ಕಲ್ಬುರ್ಗಿ ಅವರ ನೆನಪು ಹಲವಾರು ಬಾರಿ ಸಭಾಂಗಣದಲ್ಲಿ ಅನುರಣಿಸಿತು. ಡಾ.ಎಂ.ಎಂ.ಕಲ್ಬುರ್ಗಿ ಅವರು ಹಾಡಿದ್ದ ಲಾವಣಿಯ ದೃಶ್ಯ ಮತ್ತು ಧ್ವನಿ ಸುರುಳಿಯನ್ನು ಪ್ರದರ್ಶಿಸುವ ಮೂಲಕ 4 ನೆಯ ಸಾಹಿತ್ಯ ಸಂಭ್ರಮವನ್ನು ಅವರಿಗೆ ಗೌರವಪೂರ್ಣವಾಗಿ ಅರ್ಪಿಸಲಾಯಿತು.
ಪ್ರಾಸ್ತಾಪಿಕ ಭಾಷಣ ಮಾಡಿದ ಸಾಹಿತ್ಯ ಸಂಭ್ರಮ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಗಿರಡ್ಡಿ ಗೋವಿಂದ ರಾಜ ಅವರು “ಅತಿರೇಕಕ್ಕೆ ಹೋಗುತ್ತಿರುವ ಎಡ-ಬಲಗಳ ನಡುವೆ ಸಂವಾದವೇ ಸಾಧ್ಯವಾಗದ ಇಂದಿನ ಸ್ಥಿತಿಯಲ್ಲಿ ಅಂಥ ಸಂವಾದಕ್ಕೆ, ಮುಕ್ತ ಚರ್ಚೆಗೆ ವೇದಿಕೆಯನ್ನು ಒದಗಿಸುವುದು ಸಾಹಿತ್ಯ ಸಂಭ್ರಮದ ಉದ್ದೇಶ “ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಚಂದ್ರಶೇಖರ ಕಂಬಾರ ಅವರು “ ಹಿಂದಿನ ಕವಿಗಳಿಗೆ ವಸ್ತುವಿನ ಆಯ್ಕೆಯಲ್ಲಿ ಸಮಸ್ಯೆಯಿರಲಿಲ್ಲ. ಯಾರನ್ನು ಉದ್ದೇಶಿಸಿ ಕಾವ್ಯ ರಚಿಸುತ್ತೇವೆಂಬ ಸ್ಪಷ್ಟತೆ ಅವರಿಗಿತ್ತು. ಆದರೆ ಈಗಿನ ಕವಿಪ್ರತಿಭೆಗೆ ಇದೇ ದೊಡ್ಡ ಸವಾಲಾಗಿದೆ” ಅಂದರು. ಶ್ರೀ ಟಿ.ಪಿ. ಅಶೋಕ ಅವರು ವಿಮರ್ಶಾತ್ಮಕವಾಗಿ ಆಶಯ ಭಾಷಣ ಮಾಡಿದರು. ಪ್ರೊ. ಪ್ರಮೋದ ಗಾಯಿ ಅವರು ‘ ಡಾ.ಎಂ.ಎಂ.ಕಲಬುರ್ಗಿ ನೆನಪು’ ಪುಸ್ತಕವನ್ನು ಬಿಡುಗಡೆ ಮಾದಿದರು. ಹಿರಿಯ ಕವಿ ಶ್ರೀ ಚೆನ್ನವೀರ ಕಣವಿ, ಶ್ರೀ ಜಿ.ಎಸ್. ಅಮೂರ, ಡಾ.ರೋಹಿತ ನಾಯ್ಕರ್ ಮತ್ತು ಶ್ರೀ ಕೆ.ಎನ್. ಶಾಂತಕುಮಾರ ಉಪಸ್ಥಿತರಿದ್ದರು.
ಇದಾದ ನಂತರ ಆರಂಭವಾದ ಮೊದಲನೆಯ ಗೋಷ್ಠಿಯ ವಿಷಯ ‘ಅಸಹಿಷ್ಣುತೆ’. ಸ್ವಲ್ಪ ತಡವಾಗಿ ಆರಂಭಗೊಂಡ ‘ಅಸಹಿಷ್ಣುತೆ’ಯಿಂದ ಮೊದಲುಗೊಂಡು, ಪರ-ವಿರೋಧದ ವಿವಿಧ ಅಭಿಪ್ರಾಯ ಮತ್ತು ಟೀಕೆಗಳು ಕಟುವಾದ ದನಿಯಲ್ಲಿ ವ್ಯಕ್ತವಾದುವು. ಸೀಮಿತ ಕಾಲಾವಧಿಯಲ್ಲಿ 5 ಮಂದಿ ಸಂಪನ್ಮೂಲ ವ್ಯಕ್ತಿಗಳು ಮಾತನಾಡುವುದರ ಜತೆಗೆ ಸಂವಾದಕ್ಕೂ ಸಮಯವನ್ನು ಮೀಸಲಿಡಬೇಕಾದ ಅನಿವಾರ್ಯತೆಯಿಂದಾಗಿ ತಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗಲಿಲ್ಲ ಎಂಬ ಅಸಹಿಷ್ಣುತೆ ಸಭೆಯಲ್ಲಿಯೇ ಕಂಡು ಬಂತು. ಒಟ್ಟಾರೆಯಾಗಿ ಈ ಗೋಷ್ಠಿ ಚೆನ್ನಾಗಿ ಮೂಡಿ ಬಂದಿದ್ದರೂ, ಇದು ಈಗಾಗಲೇ ಬಹುಚರ್ಚಿತ ವಿಷಯವಾಗಿದ್ದು, ಈ ವೇದಿಕೆಯಲ್ಲಿ, ಯಾವುದೇ ಅಥವಾ ಅರ್ಥಪೂರ್ಣ ಫಲಿತಾಂಶ ಲಭಿಸುವ ಸಾಧ್ಯತೆ ಇಲ್ಲದಿರುವುದರಿಂದ, ಇದು ಗೋಷ್ಠಿಯಲ್ಲಿ ಪ್ರಥಮ ವಿಚಾರವಾಗಿ ಬಂದಿದ್ದು ಅಷ್ಟಾಗಿ ಶೋಭೆ ತರಲಿಲ್ಲ ಎಂಬ ಅಭಿಪ್ರಾಯ ಅಲ್ಲಲ್ಲಿ ಕೇಳಿ ಬಂತು.
ಕನ್ನಡಿಗರು ಐತಿಹಾಸಿಕ ಕಾದಂಬರಿಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂಬ ಸಂದೇಶವನ್ನು ರವಾನಿಸಲು ಪ್ರಖ್ಯಾತ ಕಾದಂಬರಿಗಳ ಆಯ್ದ ಭಾಗವನ್ನು ಓದುವ ಗೋಷ್ಠಿ ಆರಂಭವಾಯಿತು. ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಅವರು ತ.ರಾ.ಸು ಅವರ ‘ದುರ್ಗಾಸ್ತಮಾನ’ ಕಾದಂಬರಿಯ ಸನ್ನಿವೇಶವೊಂದನ್ನು ದೃಢ ದ್ವನಿ, ಹಾವ-ಭಾವ ಸಹಿತ ಮನಮುಟ್ಟುವಂತೆ ಓದಿದರು . ಶೀಮತಿ ವಿದ್ಯಾ ಶರ್ಮ ಅವರು ಬೆಟಗೇರಿ ಕೃಷ್ಣಶರ್ಮ ಅವರ ‘ಮಲ್ಲಿಕಾರ್ಜುನ’ ಕಾದಂಬರಿಯಲ್ಲಿ ಬರುವ ಪಟ್ಟಾಭಿಷೇಕ ಮತ್ತು ಪ್ರಮಾಣವಚನ ಸ್ವೀಕಾರದ ಭಾಗವನ್ನು ಸ್ವಾರಸ್ಯಕರವಾಗಿ ಓದಿದರು. ಶೀಮತಿ ಮಂಗಳಾ ಅವರು ಓದಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಚಿಕ್ಕವೀರರಾಜೇಂದ್ರ’ ಕಾದಂಬರಿಯು ಧಾರವಾಡದಲ್ಲಿ ಮಡಿಕೇರಿಯನ್ನು ಸೃಷ್ಟಿಸಿತು. ಮೊಹಮ್ಮದ್ ಪೈಗಂಬರ್ ಅವರ ಜೀವನವನ್ನಾಧರಿಸಿ ಶ್ರೀ ಬೊಳುವಾರು ಮೊಹಮ್ಮದ್ ಕುಂಞಿ ಅವರು ಬರೆದ ‘ಓದಿರಿ’ ಕಾದಂಬರಿಯಿಂದ ಆಯ್ದ ಪ್ರಶ್ನೆಗಳ ಸುರಿಮಳೆಯಂತೆ ಇದ್ದ ಭಾಗವನ್ನು ಓದಿದ ಶ್ರೀ ಎಂ.ಗಣೇಶ ಅವರು ಸಭಿಕರನ್ನು ಗಾಢಚಿಂತನೆಗೆ ಹಚ್ಚಿದರು. ಐತಿಹಾಸಿಕ ಕಾದಂಬರಿಯನ್ನು ಹೀಗೆಯೇ ಓದಿದರೆ ಅದರ ಸೊಗಸು ಅವಿರ್ಭಾವವಾಗಬಲ್ಲುದು ಅನಿಸಿತು.
ಪುಷ್ಕಳವಾದ ಭೋಜನದ ನಂತರ, ಶ್ರೀ ಆರ್.ಗಣೇಶ್ ಅವರು ನಡೆಸಿ ಕೊಟ್ಟ ಅಷ್ಠಾವಧಾನ ಕಾರ್ಯಕ್ರಮವು ಸಾಹಿತ್ಯ, ಸಂಸ್ಕೃತಿ ಮತ್ತು ಆಶುಪ್ರತಿಭೆಯ ಸಂಗಮವನ್ನು ಪರಿಚಯಿಸಿತು. ಕಾವ್ಯ ಕಟ್ಟುವ ಸವಾಲಿನಲ್ಲಿ ಅಡಿಗಡಿಗೆ ತಡೆಯೊಡ್ಡುವ ನಿಷೇಧಾಕ್ಷರವನ್ನು ನಿವಾರಿಸುತ್ತ, 5 x 5 ಚಚ್ಚೌಕದ ಸಂಖ್ಯಾಬಂಧದ ಯಾವುದೇ ಅಡ್ಡಸಾಲಿನಲ್ಲಿರುವ, ಲಂಬಸಾಲಿನಲ್ಲಿರುವ ಮತ್ತು ಕರ್ಣದಲ್ಲಿರುವ ಸಂಖ್ಯೆಗಳನ್ನು ಕೂಡಿಸಿದಾಗ 65 ಮೊತ್ತ ಬರುವಂತೆ ಸಂಖ್ಯೆಗಳನ್ನು ಹೇಳಬೇಕಿತ್ತು. ಅವಧಾನಿಗಳ ಏಕಾಗ್ರತೆಯನ್ನು ಭಂಗ ಮಾಡುವ ಉದ್ದೇಶದಿಂದಲೇ ಅಪ್ರಸ್ತುತ ಪ್ರಸಂಗಿಯು ಕೇಳುತ್ತಿದ್ದ ಕೀಟಲೆಯ ಪ್ರಶ್ನೆಗಳು ಮತ್ತು ಅವುಗಳಿಗೆ ಅವಧಾನಿಗಳು ಕೊಡುತ್ತಿದ್ದ ಹಾಸ್ಯಭರಿತ ಉತ್ತರಗಳು ಸಭಿಕರಿಗೆ ಉತ್ತಮ ರಂಜನೆ ಕೊಟ್ಟವು.
ಕಂದಪದ್ಯದ ಚಂದಸ್ಸಿನಲ್ಲಿ ಶಿವನ ಸೌಂದರ್ಯವನ್ನು ವರ್ಣಿಸುವ ಚೌಪದಿ ಸಿದ್ದವಾಯಿತು. ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ‘ಕೀರ್ತಿ’, ‘ಧಾರವಾಡ’, ‘ಅಟ್ಟ’ ಮತ್ತು ‘ಜಡಭರತ’ ಎಂಬ ಪದಗಳನ್ನು ಕೊಟ್ಟ ಪೃಚ್ಚಕರು ಆಶುಕವಿತೆಯನ್ನು ರಚಿಸುವ ಸವಾಲೊಡ್ಡಿದಾಗ, ಈ ಪದಗಳನ್ನು ಬಳಸಿ ಅತ್ಯಂತ ಅರ್ಥಪೂರ್ಣವಾದ ಚೌಪದಿಯನ್ನು ಅವಧಾನಿಗಳು ರಚಿಸಿದರು. ಹೀಗೆ ನಿಷೇಧಾಕ್ಷರಿ, ಸಮಸ್ಯಾ ಪೂರ್ತಿ, ಕಾವ್ಯವಾಚನ, ಅಶುಕವಿತೆ , ಅಪ್ರಸ್ತುತ ಪ್ರಸಂಗ ಮತ್ತು ಸಂಖ್ಯಾಬಂಧಗಳ ನಡುವೆ ಸರ್ಕಸ್ ನ ತಂತಿ ಮೇಲಿನ ನಡಿಗೆಯಂತೆ, ಆಯ ತಪ್ಪದಂತೆ, ಛಂದಸ್ಸಿಗೆ ಧಕ್ಕೆ ಬಾರದಂತೆ, ಅರ್ಥ ಮತ್ತು ಪ್ರಾಸ ಒಳಗೊಳ್ಳುವಂತೆ ಆಶುಪ್ರತಿಭೆಯನ್ನು ಮೆರೆಯುವುದು ಅಚ್ಚರಿಯೆನಿಸುತ್ತದೆ. ರಸಭರಿತ, ಹಾಸ್ಯಭರಿತ ಕಾರ್ಯಕ್ರಮವಾಗಿದ್ದ ಅಷ್ಟವಾಧಾನ ಒಂದು ಗಂಟೆಯಲ್ಲಿ ಮುಕ್ತಾಯವಾದಾಗ, ಅಷ್ಟು ಕಷ್ಟದ ಅಷ್ಟಾವಧಾನ ಇಷ್ಟು ಬೇಗನೇ ಮುಗಿಯಿತಲ್ಲ ಎಂಬ ಪ್ರಶಂಸೆಯೊಂದಿಗೆ ಸಭಿಕರು ಕರತಾಡನ ಮಾಡಿದರು.
ಮುಂದಿನ ಗೋಷ್ಠಿಯಾದ ‘ಸಂಶೋಧಕರೊಂದಿಗೆ ಮಾತುಕತೆಯಲ್ಲಿ” ಮಾತನಾಡಿದ ಡಾ.ಹಂಪ ನಾಗರಾಜಯ್ಯ ಅವರು ಕನ್ನಡವು ಸಂಸ್ಕೃತ ಮತ್ತು ಪ್ರಾಕೃತ ಎಂಬ ಎರಡು ತಾಯಂದಿರ ಹಾಲು ಕುಡಿದ ಭಾಷೆಯಾಗಿದ್ದು, ಇಂದು ಸಂಸ್ಕೃತಕ್ಕಿಂತಲೂ ಪ್ರಾಕೃತ ವಿಶ್ವವಿದ್ಯಾಲಯದ ಸ್ಥಾಪನೆಯ ಅಗತ್ಯ ಎದ್ದು ಕಾಣುತ್ತಿದೆ ಎಂದರು.
“ನಮಗೆ ಸಾಹಿತ್ಯ ಏಕೆ ಬೇಕು?” ಎಂಬ ಗೋಷ್ಠಿ ಆರಂಭಿಸಿದ ಹಿರಿಯ ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ‘ಪ್ರಕೃತಿ ಸಹಜವಾದದ್ದು, ಸಂಸ್ಕೃತಿ ಅದರ ಸುಧಾರಿತ ರೂಪ. ಮರದ ದಿಮ್ಮಿ ಪ್ರಕೃತಿ ಅದನ್ನು ಬಳಸಿ ತಯಾರಿಸುವ ಕಿಟಿಕಿ-ಬಾಗಿಲು-ಕುಸುರಿ ಕೆಲಸಗಳು ಸಂಸ್ಕೃತಿ. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ನಮ್ಮನ್ನು ಕೊಂಡೊಯ್ಯಲು ಸಾಹಿತ್ಯ ಬೇಕು ಎಂದು ಕೆಲವು ಉದಾಹರಣೆಗಳೊಂದಿಗೆ ವಿಶ್ಲೇಷಿಸಿದರು. ಇಲ್ಲಿಗೆ ಮೊದಲ ದಿನದ ಗೋಷ್ಠಿಗಳು ಸಂಪನ್ನಗೊಂಡವು. ಸಂಜೆ ಪಂ. ಕೈವಲ್ಯಕುಮಾರ ಗುರವ ಮತ್ತು ತಂಡದವರಿಂದ ಸೊಗಸಾದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿತ್ತು.
ಸಾಹಿತ್ಯ ಸಂಭ್ರಮದ ಎರಡನೆಯ ದಿನದಂದು “ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ” ಯ ಬಗ್ಗೆ ಬಿರುಸಿನ ಸಂವಾದ ಏರ್ಪಟ್ಟಿತು. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಕಂಡು ಬರುತ್ತಿರುವ ಲೋಪಗಳು ಮತ್ತು ಅನುಚಿತ ಭಾಷಾಪ್ರಯೋಗದ ಬಗ್ಗೆ ಕಟುವಾದ ವಿಮರ್ಶೆಗಳೂ ಆರಂಭವಾದುವು. ಸಮಯಾಭಾವವೂ ಇದಕ್ಕೆ ಪೂರಕವಾಗಿ ಚರ್ಚೆಯು ಅಪೂರ್ಣವಾಗಿ ಕೊನೆಗೊಂಡಂತಾಯಿತು.
ಹಳೆಗನ್ನಡ ಕಾವ್ಯಗಳ ಓದನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಹಮ್ಮಿಕೊಳ್ಳಲಾದ “ಹಳೆಗನ್ನಡ ಕಾವ್ಯ ಓದು” ಗೋಷ್ಠಿಯಲ್ಲಿ ಜನ್ನನ ‘ಯಶೋಧರ ಚರಿತೆ’, ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಮತ್ತು ಮುದ್ದಣನ ‘ರಾಮಶ್ವಮೇಧ’ದ ಆಯ್ದ ಭಾಗಗಳನ್ನು ಶ್ರೀಮತಿ ತಮಿಳ್ ಸೆಲ್ವಿ, ಶ್ರೀ ಕೃಷ್ಣಮೂರ್ತಿ ಹನೂರ ಮತ್ತು ಶ್ರೀ ಹುಲುಗಪ್ಪ ಕಟ್ಟೀಮನಿ ಅವರು ಸೊಗಸಾಗಿ ಓದಿ ಭಾವಾರ್ಥವನ್ನೂ ತಿಳಿಸಿದರು.
“ಇಂದೂ ಕಾಡುವ ಅಂದಿನ ಕೃತಿ” ಗೋಷ್ಥಿಯಲ್ಲಿ ರಾ.ಕು ಅವರ ‘ಗಾಳಿಪಟ’, ಮಧುರಚೆನ್ನ ಅವರ ‘ರಮ್ಯ ಜಿವನ’, ಹ.ಪಿ ಜೋಷಿಯವರ ‘ಮಾವಿನ ತೋಪು’ ಕೊಡಗಿನ ಗೌರಮ್ಮನವರ ‘ವಾಣಿಯ ಸಮಸ್ಯೆ’ ಕೃತಿಗಳ ಒಳಹೊರಗುಗಳನ್ನು ಚರ್ಚಿಸಿದಾಗ, ಈ ಪುಸ್ತಕಗಳನ್ನು ಕೊಂಡು ಓದಬೇಕೆನ್ನಿಸಿತು.
ಮಧ್ಯಾಹ್ನದ ರುಚಿಯಾದ ಊಟದ ನಂತರ ತೂಕಡಿಸುವುದು ಸಹಜ. ಆದರೆ ಅದ್ಬುತವಾಗಿ ಮೂಡಿ ಬಂದ ಉತ್ತರಕರ್ನಾಟಕದ ದೇಸೀ ಸೊಬಗಿನ ಜಾನಪದ ಹಾಡುಗಾರಿಕೆ ‘ಲಾವಣಿಯ ಲಾವಣ್ಯ’ ಸಭಿಕರಿಗೆ ಕಣ್ಣೆವೆ ಮುಚ್ಚಲು ಬಿಡದೆ, ಹೆಜ್ಜೆ ಹಾಕಿ ಕುಣಿಯುವಷ್ಟು ಉತ್ಸಾಹ ಬರಿಸಿತ್ತು. ಲಾವಣಿಯ ವಿವಿಧ ಪ್ರಕಾರಗಳಾದ ಶೃಂಗಾರ ಲಾವಣಿ, ಕಥಾ ಲಾವಣಿ, ವೀರ ಲಾವಣಿ ಇತ್ಯಾದಿಗಳನ್ನು ಶ್ರೀ ಅನಿಲ್ ದೇಸಾಯಿಯವರು ಬಲು ಸುಂದರವಾಗಿ ವಿವರಿಸಿದರು. ಡಪ್ಪು ವಾದ್ಯ ಮತ್ತು ಏಕತಾರಿಯ ಹಿಮ್ಮೇಳದೊಂದಿಗೆ, ಉಚ್ಛಸ್ಥಾಯಿಯ ಕಂಠದಲ್ಲಿ, ಶ್ರೀ ಬಸವರಾಜ ನೀಲಪ್ಪ ಹಡಗಲಿ ಮತ್ತು ಶ್ರೀಮತಿ ಯಲ್ಲವ್ವ ಬಸಪ್ಪ ಮಾದರ ಅವರು ಪ್ರಸ್ತುತ ಪಡಿಸಿದ ಸವಾಲ್-ಜವಾಬ್ ಮಾದರಿಯ ಹರ್ದೇಶಿ-ನಾಗೇಶಿ ಲಾವಣಿ ಸಭೆಯಲ್ಲಿ ಸಂಭ್ರಮದ ಸಂಚಲನವನ್ನುಂಟುಮಾಡಿತು.
‘ಸಾಹಿತಿಗಳೊಂದಿಗೆ ನಾವು’ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಾಹಿತಿಗಳೊಂದಿಗೆ ತಮಗಿದ್ದ ಒಡನಾಟದ ಸ್ವಾರಸ್ಯಕರ ಘಟನೆಗಳನ್ನು ರಸವತ್ತಾಗಿ ಬಣ್ಣಿಸಿದರು. ಗೋಷ್ಥಿಯ ನಿರ್ದೇಶಕರಾಗಿದ್ದ ಶ್ರೀ ಯಶವಂತ ಸರದೇಶಪಾಂಡೆಯವರ ಸಾರಥ್ಯದಲ್ಲಿ ಮೂಡಿ ಬಂದ ಈ ಗೋಷ್ಥಿಯಲ್ಲಿ ಸಭೆ ನಗೆಗಡಲಲ್ಲಿ ತೇಲಿತು.
ಮುಂದಿನ ಗೋಷ್ಠಿಯಲ್ಲಿ ಖ್ಯಾತ ಲೇಖಕರಾದ ಸಿ.ಪಿ.ಕೃಷ್ಣಕುಮಾರ ಅವರೊಂದಿಗೆ ನಡೆದ ಸಂವಾದದಲ್ಲಿ ಅವರ ಸಾಹಿತ್ಯಿಕ ಸಾಧನೆಗಳ ಬಗ್ಗೆ ವರ್ಚಿಸಲಾಯಿತು. ಶ್ರೀಮತಿ ಬಿ.ಜಯಶ್ರೀ ಮತ್ತು ತಂಡದವರಿಂದ ರಂಗಗೀತೆಗಳ ರಸಾನುಭೂತಿ ಪಡೆಯುವುದರೊಂದಿಗೆ ಎರಡನೆಯ ದಿನದ ಸಂಭ್ರಮಕ್ಕೆ ತೆರೆ ಬಿದ್ದಿತು.
ಮೂರನೆಯ ದಿನವಾದ 24 ಜನವರಿ 2016 ರಂದು, ‘ಸತ್ಯದೊಂದಿಗೆ ಪ್ರಯೋಗ’ ‘ಕನ್ನಡದಲ್ಲಿ ಇಷ್ಟೊಂದು ಮಹಾಕಾವ್ಯಗಳು ಏಕೆ? ‘ ‘ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು’ ‘ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು’ ಮತ್ತು ‘ಚಲನ ಚಿತ್ರ ಮಾಧ್ಯಮದ ಚಲನಶೀಲತೆ ‘ ಎಂಬ ವಿಭಿನ್ನ, ವಿಶಿಷ್ಟ ವಿಚಾರಗಳ ಬಗ್ಗೆ ವಿದ್ವತ್ಪೂರ್ಣ ಗೋಷ್ಠಿಗಳು ನಡೆದುವು. ಸಾಂದರ್ಭಿಕವಾಗಿ ತೇಲಿ ಬಂದ ನಗೆ ಚಟಾಕಿಗಳಿಗೆ ಲೆಕ್ಕವಿಟ್ಟವರಿಲ್ಲ. ಸಂಜೆ ಸಮಾರೋಪ ಸಾಮಾರಂಭವಾಯಿತು. ಇದಾದ ಮೇಲೆ ಪ್ರಶಸ್ತಿ ವಿಜೇತ ‘ಬರ ‘ ಚಲನ ಚಿತ್ರದ ಪ್ರದರ್ಶನದೊದಿಗೆ ಮೂರು ದಿನಗಳ ಸಾಹಿತ್ಯ ಸಂಭ್ರಮ ಕೊನೆಗೊಂಡಿತು.
ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿ ಬಂದಾದ ಮೇಲೆ ಅದು ಸಾಹಿತಿಗಳಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿ ಮತ್ತೆ ಮತ್ತೆ ಭಾಗವಹಿಸುವಂತೆ ಪ್ರೇರೇಪಿಸುತ್ತದೆಯೆಂದಾದರೆ, ಅದೇ ಕಾರ್ಯಕ್ರಮದ ಯಶಸ್ಸಿಗೆ ಲಭಿಸಿದ ಪ್ರಮಾಣ ಪತ್ರದಂತೆ. ಎರಡನೆಯ ಬಾರಿ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ ನನ್ನ ಅಭಿಪ್ರಾಯದಲ್ಲಿ ಈ ಕಾರ್ಯಕ್ರಮದ ಅಯೋಜನೆ, ನಿರ್ವಹಣೆ ಮತ್ತು ಧಾರವಾಡದ ಸಾಹಿತ್ಯಾಸಕ್ತ ಜನರ ಆದರಾತಿಥ್ಯ ಅವಿಸ್ಮರಣೀಯ ಮತ್ತು ಅನುಕರಣೀಯ. ಇದುವೇ ಸಂಭ್ರಮ, ಇದುವೇ ಸಂಸ್ಕೃತಿ, ಇದುವೇ ಭಾಷೆಯು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಪಸರಿಸುವ ಕಂಪು.
ನಮಗೆ ಈ ಸಂಭ್ರಮವನ್ನು ಇದನ್ನು ಒದಗಿಸಿಕೊಟ್ಟ ಸಾಹಿತ್ಯ ಸಂಭ್ರಮದ ಅಯೋಜಕ/ಸಂಘಟಕರೆಲ್ಲರಿಗೂ ಅನಂತ ವಂದನೆಗಳು. ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ಟು ನಾವು ಧಾರವಾಡಕ್ಕೆ ಬರಲು ಕಾರಣರಾದ ಸಾಹಿತ್ಯಾಸಕ್ತ ಶ್ರೀ ರಂಗಣ್ಣ ನಾಡಗೀರ್ ಅವರಿಗೆ ಕೃತಜ್ಞತೆಗಳು. ಈ ಸಾಹಿತ್ಯ ಸಂಭ್ರಮವು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನಡೆದು, ಇನ್ನೂ ಹೆಚ್ಚು ಸಾಹಿತ್ಯಾಸಕ್ತರನ್ನು ತಲಪಲಿ ಎಂಬುದು ನಮ್ಮ ಆಶಯ .
.
– ಹೇಮಮಾಲಾ.ಬಿ
ಕಣ್ಣೆದುರೇ ಸಾಹಿತ್ಯ ಸಂಭ್ರಮವನ್ನು ಆಸ್ವಾದಿಸಿದ ಅನುಭವವಾಯಿತು. ಸೊಗಸಾದ ನಿರೂಪಣೆ
ಸಾಹಿತ್ಯ ಸಂಭ್ರಮದ ಪಕ್ಷಿನೋಟ ಸಿಕ್ಕಿತು. ಅಸಹಿಷ್ಣುತೆ ಅವರವರ ಮನದ ಭಾವ . ಅಂಥ ಸಮಾರಂಭದಲ್ಲಿ ಸಾಹಿತ್ಯದ ಸೊಗಡು ಪ್ರಸ್ತುತ ಪಡಿಸಿದ್ದೇ ಆದ್ರೆ ಚೆನ್ನ. ಸಹಿಷ್ಣುತೆಯಿಂದ ಸಭಿಕರು ಎಲ್ಲವನ್ನೂ ಆಲಿಸಿದ್ದೇ ಸಹಿಷ್ಣುತೆಯ ಸೂಚಕ . ಹೋಗಲಿ. ಉಳಿದ ಹಾಗೆ ಅತ್ತ್ಯುತ್ತಮ ಸಭೆ ಎನ್ನಿಸುತ್ತದೆ .