‘ಅಮ್ಮ’ ನೆಂಬ ನೆಮ್ಮದಿ

Share Button
Malatesh AN

ಮಾಲತೇಶ. ಅ.ನಾಡಗೀರ್

ತಾಯಿ ನಂಬಿಕೆಗೆ ಕಾರಣ, ಆ ‘ಆತ್ಮ ವಿಶ್ವಾಸ’ದಿಂದ 

ತಾಯಿ ಇರುವಿಕೆಯ ಅರಿವು.

ತಾಯಿ ಇಲ್ಲದಿರುವಿಕೆ ಆವರಿಸಿದರೆ ಅಧೈರ್ಯಕ್ಕೆ ಕಾರಣ.

ಅಧೈರ್ಯದಿಂದ  ಮನಸ್ಸು ದುರ್ಬಲ. ಆಗ ದೇವರ  ಆನ್ವೇಷಣೆ.

ಕ್ರಮೇಣ ಭಯ ಭಕ್ತಿ ದೇವರ ಸಾಕಾರಕ್ಕೆ ಕಾರಣ.

 

ನಂಬಿಕೆ ಮತ್ತು ದೇವರ ವಿಷಯಕ್ಕೆ ಸಂಬಂಧಿಸಿದಂತೆ ವಿಕಾಸ ಹೇಗೆ ಸಾಗಿಬಂದಿದೆ ಎಂಬುದಕ್ಕೆ ಇಲ್ಲೊಂದು ನಮ್ಮ ನಿಮ್ಮ ನಿಜ ಜೀವನದ ನಿದರ್ಶನ:  ಬಾಲ್ಯದಲ್ಲಿ ನನ್ನನ್ನು ಪ್ರಥಮ ಬಾರಿಗೆ ಶಾಲೆಗೆ ಸೇರಿಸಿದ ಸಂದರ್ಭ, (ನನಗೆ ಆಗಿರುವ ಅನುಭವ ಬೇರೆಯವರಿಗೆ ಹೊರತೇನಲ್ಲ). ಸರ್ವೇ ಸಾಮಾನ್ಯ. ಎಲ್ಲಾ ಮಕ್ಕಳಿಗೂ ಸಹಜವಾಗಿ ಆಗುವಂತೆ ಏನೋ ಹೆದರಿಕೆ, ಕಾಣದ ಭಯದಿಂದ ಅಳುವುದು ಕರೆಯುವುದು ನಡೆದಿತ್ತು. ನನ್ನ ಅಮ್ಮ (ತಾಯಿ) ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ಜೊತೆ ಜೊತೆಯಲ್ಲೇ ಇದ್ದು ಶಾಲೆಗೆ ಕರೆದುಕೊಂಡು ಹೋಗಿ ಮನೆಗೆ ಕರೆದುಕೊಂಡು ಬರುತ್ತಿದ್ದಳು. ಅಮ್ಮ ಜೊತೆಗೆ ಇದ್ದಾಳೆ  ಎಂಬ ಭರವಸೆ. ಕೆಲವು ದಿನಗಳು ಹೀಗೆ ಕಳೆದವು. ಆಗ ಆ ಬಾಲ್ಯದ ದಿನಗಳು ತಾಯಿಯ ಸೀರೆ ಸೆರಗನ್ನು ಬಿಟ್ಟಿರುತ್ತಿರಲಿಲ್ಲ. ಕಾರಣ ಸ್ವಲ್ಪ ದಿನ ಅಲ್ಲೇ ತನ್ನ ಇರುವಿಕೆಯನ್ನು ತೋರಿಸಲು ಹಿಂದಿನ ಸಾಲಿನಲ್ಲಿ  ನಿಂತಿರುತ್ತಿದ್ದರು. ನಾನಾದರೋ ಅಮ್ಮನ ಉಡುವ ಸೀರೆ ಪರಿಚಯವನ್ನು ಗುರುತಿಸಿ ಅಮ್ಮ ಅಲ್ಲೇ ಸನಿಹದಲ್ಲಿ ಇರುವಿಕೆ ಖಚಿತಪಡಿಸಿಕೊಂಡು ನಿರಾಳದಿಂದ ಸಹಮಕ್ಕಳ ಜೊತೆ ನನ್ನಪಾಡಿಗೆ ಅಳುತ್ತಾ ಆಡುತ್ತಾ ಅಕ್ಕಪಕ್ಕ ಇರುವವರ ಕಡೆ ಗಮನ ಹರಿಸಿ ನಕ್ಕು ನಲಿಯುತ್ತಿದ್ದೆ. ಆತಂಕ  ಇರುತಿತ್ತು. ಆದರೂ ಅತ್ತ ಇತ್ತ ನೊಡುತ್ತ, ಹಿಂದೆ ಪದೇ ಪದೇ ನೋಡುತ್ತಾ ಅಮ್ಮನ ಇರುವಿಕೆಯನ್ನು ಖಚಿತ ಪಡಿಸಿಕೊಳ್ಳುತ್ತಿದ್ದೆ.

ಅಮ್ಮ ಇರುವುದನ್ನು ದೃಢಪಡಿಸಿಕೊಂಡು ನನ್ನಷ್ಟಿಗೆ ನಾನು ನನ್ನ ಜೊತೆಗಿನ ಮಕ್ಕಳ ಸಂಗಡ ಆಟದಲ್ಲಿ ತೊಡಗಿರುತ್ತಿದ್ದೆ. ಟೀಚರಮ್ಮ ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಾ, ಹಾಗೇನೆ ಮತ್ತೆ ಮತ್ತೆ ಅಮ್ಮನನ್ನು ಹಿಂತಿರುಗಿ ನೋಡುತ್ತಿದ್ದೆ,  ಅಮ್ಮ ಒಂದೇ ಕಡೆ ನಿಂತಿರದೆ  ಸ್ಥಳ ಬದಲಾಯಿಸುತ್ತಿದ್ದರು.  ಆ ಕಡೆ ಈ ಕಡೆ ನೋಡಿ ಅಲ್ಲೇ ಸುತ್ತಮುತ್ತ ನೋಡಿ ದಿನಗಳು ಕಳೆದಂತೆ ಅಮ್ಮ ಅಲ್ಲಿ ಇರುತ್ತಿರಲಿಲ್ಲ. ಆದರೆ ನನ್ನಲ್ಲಿ ನಂಬಿಕೆ ಮೊಳೆಯಿತು. ಆತ್ಮ ವಿಶ್ವಾಸ ಬರಲೆಂದು ಅಮ್ಮನು ಸಹ ನನಗೆ ಚಿರಪರಿಚಿತವಾದ ತನ್ನ ಸೀರೆಯ ತುಂಡನ್ನುಅಮ್ಮನು ಕಿಟಕಿಯ ಒಂದು ಸರಳಿಗೆ ಒಂದು ದಿನ ಕಟ್ಟಿ ಹೋಗಿದ್ದಳು. ಆಗ ನನ್ನ  ಅಮ್ಮ ಅಲ್ಲೇ ಇದ್ದಾಳೆಂದು ನಾನು ತಿಳಿದು ಹೇಗೂ ನನ್ನ ಅಮ್ಮ ನನ್ನ ಕೈಯನ್ನು ಬಿಡಲ್ಲ ಎಂಬ ಭರವಸೆ ಮೂಡಲು ಸುರುವಾಯ್ತು. ಅದು ಹಾಗೆ ಅಮ್ಮನ ಇರುವಿಕೆಯ ಸೂಚನೆ ಕೆಲವು ದಿನ ಮುಂದಿವರೆದಿರಬಹುದು. ತದನಂತರದಲ್ಲಿ ಅಮ್ಮನ ಜ್ಞಾಪಕ ನನಗೆ ಅಷ್ಟಾಗಿ ಆಗುತ್ತಿರಲಿಲ್ಲ. ಆಗ ನಾನು ನನ್ನಪಾಡಿಗೆ ಅಮ್ಮನ ಪರಿವೆಯಿಲ್ಲದೆ ಶಾಲೆಯ ಬೇರೆ ಮಕ್ಕಳೊಂದಿಗೆ ಆಟ ಪಾಠದಲ್ಲಿ ಮಗ್ನನಾಗಿ  ಬೆರತು ಬೆಳೆದೆನು. ಇದು ಮುಂದುವರೆದು ಭಯ ನಿವಾರಣೆ ಆಗಿ, ಅಮ್ಮನ ಇರುವಿಕೆ ಖಚಿತವಾಗಿ ಅದು ನಂಬಿಕೆ ಹುಟ್ಟಲು ಕಾರಣವಾಗಿರಬಹುದು. ಮುಖ್ಯವಾಗಿ ಇಲ್ಲಿ ಅಮ್ಮನ ಇರುವಿಕೆ ನಿಜವಾಗಿ ಇರಲಿಲ್ಲ. ಆದರೆ  ಮನಸ್ಸಲ್ಲಿ ಅವಳ ಇರುವಿಕೆಗೆ ಸೀರೆಯ ತುಂಡು ಸೂಚಿಸುತ್ತಿತ್ತು. ನೋವು ನಲಿವು, ಬೀಳುವುದು, ಏಳುವುದು ಹೀಗೆ ಆಟ ಪ್ರಾಮುಖ್ಯತೆ ಪಡೆಯಿತು.  ಬೇರೆಯಾವುದೂ  ನನಗೆ ಲೆಕ್ಕಕ್ಕೆಬಾರದಾಯ್ತು. ಆಗೊಮ್ಮೆ ಈಗೊಮ್ಮೆ ತಾಯಿಯನ್ನು ನೆನಪಿಸಿ ಕೊಳ್ಳುವುದು ಸಹಜವಾಗಿ ಕೂಡಲೇ ಮರೆತು ಬಿಡುತ್ತಿದ್ದೆ.

Mother child
ಹೀಗೆ, ಯಾವುದಾದರು ಅನಿರೀಕ್ಷಿತ ಕಡೆಯಿಂದ ಒಂದಲ್ಲ ಒಂದು ರೂಪದಲ್ಲಿ ಯಾರಾದರು ಬಂದು ನನಗೆ ಸಹಾಯ ಮಾಡಿದಾಗ ಅವರೇ ದೇವರಂತೆ ನನಗೆ ಒದಗಿ ಬಂದವರೆಂದು  ಅವರನ್ನೇ ದೇವರ ಸಮಾನ ಎಂಬ ಸತ್ಯವನ್ನು ಕಂಡುಕೊಂಡೆ. ಹಾಗೆ ನಮ್ಮ ಮಗುವಿನಂಥಾ ಶುದ್ಧ ಮನಸ್ಸಿಗೆ ಆ ಕ್ಷಣದಲ್ಲಿ ಉದ್ಭವಿಸುವುದು ಸಹಜ. ಹಾಗೆ ದೇವರ ಬಗ್ಗೆ ಭಯ, ಭಕ್ತಿ, ವಿಶ್ವಾಸ, ನಂಬಿಕೆ “ಕಷ್ಟಬಂದಾಗ ವೆಂಕಟರಮಣ” ಎಂಬ ಗಾದೆಯ ಹಾಗೆ ದೇವರ ಸೃಷ್ಟಿ ಎಲ್ಲರಲ್ಲೂ ಉದಯಿಸಿತೆಂದು ಎಂದು ಕಾಣುತ್ತದೆ. ಹೀಗೆ ಜೀವಂತ ವ್ಯಕ್ತಿಗಳು ನಮ್ಮ ಕಷ್ಟ ಕಾಲಕ್ಕೆ ಆಪದ್ಭಾಂಧವನಂತೆ ಬಂದವನು ನಮಗೆ ಕಾಣದ ಪ್ರತ್ಯಕ್ಷ ದೇವರು ವ್ಯಕ್ತವಾಗುವುದು ಪ್ರತ್ಯಕ್ಷವಾಗುವುದು ನಮ್ಮೊಳಗಿನ ಪರಿಶುದ್ಧಮನಸ್ಸಲ್ಲಿ. ಅಂದರೆ ಬೇರೆಯರಲ್ಲಿಯ  ಒಳ್ಳೆಯತನದಲ್ಲಿ, ಮಾನವೀಯತೆಯಲ್ಲಿ. ಭಯ ಮನಸ್ಸಿನ ಒಳಗಡೆ, ಆದರೆ ದೇವರ ಹುಡುಕಾಟ ಹೊರಗಡೆ. ಆಗ ಅವನ ಇರುವಿಕೆಗಾಗಿ ಹಾತೊರೆಯುವುದು ಚಡಪಡಿಸುವುದು. ದೇವರಿಗಾಗಿ ಹಂಬಲಿಸುವುದು.  ತಾಯಿ ನಂಬಿಕೆಗೆ ಕಾರಣ ಅಮ್ಮ ಪ್ರತ್ಯಕ್ಷ ದೇವರು, ಆ ಆತ್ಮವಿಶ್ವಾಸ ಮನದಲ್ಲಿದ್ದರೆ, ತಾಯಿಯ ಇರುವಿಕೆ ನಮ್ಮ ಅರಿವಿಗೆ ಬಂದಂತೆ ದೇವರಾದರೋ ನಮ್ಮ ಮನದಲ್ಲಿ ಅಂತರಂಗದಲ್ಲಿ ಇರುವನು. ತಾಯಿ ಇಲ್ಲದಿರುವಿಕೆ ಆವರಿಸಿದರೆ ಅಧೈರ್ಯಕ್ಕೆ ಕಾರಣವಾಗುವ ಹಾಗೆ ಮನಸ್ಸು ಅಧೈರ್ಯದಿಂದ  ದುರ್ಬಲಗೊಳ್ಳುವುದು. ಆಗ ದೇವರ  ಆನ್ವೇಷಣೆ (ತಾಯಿ ನೆನಪಿಗೆ ಬಂದಂತೆ) ಆವರಿಸಿ ಕ್ರಮೇಣ ಭಯ ಭಕ್ತಿ ದೇವರನ್ನು ಅರಿಸಿಕೊಂಡು ವಿಗ್ರಹರೂಪದಲ್ಲಿ ಸಾಕಾರವಾಗಲು ಕಾರಣ. ಇದು ನಮ್ಮಲ್ಲಿ ಸಾಗಿಬಂದು ದೇವರ ಕಲ್ಪನೆಗೆ ಮತ್ತು ವಿಕಸನಕ್ಕೆ ನಾವು ನಿಮಿತ್ಯ ಕಾರಣಪುರುಷರಾಗಿರುವೆವು ಅಲ್ಲವೇ? ಆದರೆ ಸಮಯಕ್ಕೆ ಒದಗಿಬಂದವನೇ ನೆಂಟ.

ಹಾಗೆ  ಪ್ರತಿಯೊಬ್ಬ ಜೀವಿಗಳಲ್ಲೂ ಆತ್ಮ ಎಂಬುದೊಂದಿದೆ. ಪ್ರತಿಯೊಬ್ಬರೂ ದೈವಾಂಶಸಂಭೂತರು. ಆ ದೇವರ ಅಂಶ ಎಲ್ಲರಲ್ಲೂ ಇದೆ ಹಾಗೆ ಆತ್ಮ ಆತ್ಮವನ್ನು ಗುರುತಿಸಿ ಒಪ್ಪಿಕೊಳ್ಳುವ ವಿದ್ಯೆಯೇ ಆತ್ಮವಿದ್ಯೆ ‘ಅಧ್ಯಾತ್ಮ’. ಇದಕ್ಕೆ ಜಾತಿ, ಮತ, ಬಣ್ಣ. ಹೆಣ್ಣು ಗಂಡು ಎಂಬ ಭೇಧಭಾವ ಇಲ್ಲ. ಎಲ್ಲರೂ ದೈವಾಂಶಸಂಭೂತರು. ಎಲ್ಲರಲ್ಲೂ ದೇವರಿದ್ದಾನೆ ಎಂಬ ಪ್ರಜ್ಞೆ ಅರಿಯಲು ಮನಸ್ಸು ಮಗುವಿನ ಮನಸ್ಸಿನಂತೆ ಪರಿಶುದ್ಧವಾಗಿದ್ದರೆ ಮಾತ್ರ ಸಾಧ್ಯ. ಅದು ಹೇಗೆಂದರೆ ಮಗುವಿನಂಥಾ ಮುಗ್ಧ ಮನಸ್ಸು ಆನಂದದ ನೆಲೆಬೀಡು ಎಂಬುವಂತೆ ನಿಶ್ಚಿತ. ಇದು ಸಹ ಬಾಳುವೆಯಾ ಸಂಕೇತ. ಇದು ನಮ್ಮ ಹವ್ಯಾಸವಾಗಲು ಸತತ ಯೋಗಾಭ್ಯಾಸ, ಸಾಕಾರಾತ್ಮಕ ಮನೋಭಾವ ಆಚರಣೆಗೆ ತರುವುದು ಬಹು ಮುಖ್ಯ. ಇದರಿಂದ ಶಾಂತಿ ಬೀಜ ವಿಶ್ವಕ್ಕೆ ಬಿತ್ತಲು ನಾವು ಕಾರಣೀಭೂತರಾಗಬೇಕು. ‘ನಾವು ಬಾಳುವುದಲ್ಲದೇ ಇತರರನ್ನು ಬಾಳಲು ಬಿಡು’ ಎಂಬ ಶಾಂತಿ ಸಂದೇಶ ಅಂತರ್ರಾಷ್ಠ್ರೀಯ ಯೋಗ ದಿನಾಚರಣೆಯ ಪ್ರತೀಕ.ಮನುಷ್ಯನು  ಮೊದಲು ಮಾನವನಾದಾಗ ಮಾತ್ರ ಸಾಮಾಜಿಕ ಸುಧಾರಣೆ ಮತ್ತು ದೈವಿಕತೆ ಗುಣಗಳನ್ನು ಹೊಂದುವುದರಿಂದ ಮಾತ್ರ ಜಗತ್ತಿನ ಪರಿವರ್ತನೆ ಸಾಧ್ಯ.

ಇದಕ್ಕಾಗಿ ನಾವೆಲ್ಲರೂ ಒಟ್ಟುಗೂಡಿ ಶ್ರಮಿಸಬೇಕಾಗುತ್ತದೆ.

 

 

 

– ಮಾಲತೇಶ.  ಅ.ನಾಡಗೀರ್   

2 Responses

  1. Shruthi Sharma says:

    ಪ್ರತಿಯೊಂದರಲ್ಲೂ ದೈವತ್ವವನ್ನು ಕಾಣುವ ಭಾರತೀಯತೆಯನ್ನು ಬರಹದ ಮೂಲಕ ಅಭಿವ್ಯಕ್ತಿಸಿದ್ದೀರಿ.. ಇಷ್ಟವಾಯಿತು..

  2. ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: