ಅವಳ ಪತ್ರಗಳು….ಮನುಷ್ಯ ಮತ್ತು ಪ್ರೀತಿ
ಅವಳ ಪತ್ರಗಳು
ಮೊದಮೊದಲು
ಅವಳ ಪತ್ರಗಳು ಸುದೀರ್ಘವಾಗಿರುತ್ತಿದ್ದವು
ಅವುಗಳಲ್ಲಿ ಎಲ್ಲವೂ ಇರುತ್ತಿದ್ದವು
ಸುಖ ದು:ಖ
ನೋವು ನಲಿವು
ಕೋಪತಾಪ
ಉಕ್ಕುತ್ತಿದ್ದವು
ಆಗಾ ಬಿಕ್ಕುತ್ತಿದ್ದವು!
ಆಮೇಲಾಮೇಲೆ
ಅವು ಪುಟ್ಟದಾಗತೊಡಗಿದವು
ಸ್ವವಿವರಗಳು ಮರೆಯಾಗಿ
ವಿಚಾರಣೆಗಳು ಶುರುವಾದವು
ಕಾಲ ಸರಿದಂತೆ
ಅವೂ ಇಲ್ಲವಾಗಿ
ಬರೀ ಪ್ರಶ್ನೆಗಳು
ಹರಿದಾಡತೊಡಗಿದವು
ನಂತರದಲ್ಲಿ
ಬರಿ ಆಜ್ಞೆಗಳು ಉಳಿದುಕೊಂಡವು
ಕೊನೆಕೊನೆಗೆ
ತಲುಪಿದ್ದಕ್ಕೆ ಉತ್ತರಿಸು
ಎಂಬಲ್ಲಿಗೆ ಬಂದು ನಿಂತವು
ಕೊನೆಯ ಪತ್ರದಲ್ಲಂತು
ಕನಿಷ್ಠ ತಾರೀಖನ್ನೂ
ಅವಳು ಬರೆದಿರಲಿಲ್ಲ!
ಮನುಷ್ಯ ಮತ್ತು ಪ್ರೀತಿ
ಮನುಷ್ಯ ಪ್ರೀತಿಸುತ್ತಾನೆ
ದ್ವೇಷಿಸುತ್ತಾನೆ
ಮೋಹಿಸುತ್ತಾನೆ
ವ್ಯಾಮೋಹದ ದಳ್ಳುರಿಯಲ್ಲಿ
ದಹಿಸುತ್ತಾನೆ!
ಪ್ರೀತಿಸುವಾಗ ಕವಿತೆ ಬರೆದು
ದ್ವೇಷಿಸುವಾಗ ಕತ್ತಿ ಮಸೆದು
ಅವುಡುಗಚ್ಚಿ ನಿಲ್ಲುತ್ತಾನೆ
ಅವಳಿಗಾಗಿ ಕವಿತೆ ಬರೆದವನು
ಅವಳಿಂದಲೇ ಕತ್ತಿಯನೂ ಹಿಡಿಯಬಲ್ಲ
ಕೋವಿ ಹಿಡಿದ ಕೈಗಳಿಂದ
ಅವಳ ಗಲ್ಲವ ಒಲುಮೆಯಲ್ಲಿ ಸ್ಪರ್ಶಿಸಬಲ್ಲ
ಪಾಪದ ಮನುಷ್ಯ
ಪ್ರೀತಿಸುತ್ತಾನೆ ದ್ವೇಷಿಸುತ್ತಾನೆ
ಕಾಲದ ಹಾದಿಯಲ್ಲಿ!
ಮನುಷ್ಯರು…ಕೇವಲ ಮನುಷ್ಯರು