“ಸಂಗಮ- ಮೇಕೆದಾಟು”
ಸೋಮಾರಿ ಭಾನುವಾರದ ಪ್ರಯುಕ್ತ ಮಕ್ಕಳು ಯಥಾನುಶಕ್ತಿ ನಿದ್ದೆ ಮಾಡಿ ಎದ್ದಾಗಲೇ ಬೆಳಗಿನ 9 ದಾಟಿತ್ತು. ತಿಂಡಿ ಮಾಡುವಾಗ ಮಕ್ಕಳಿಗಷ್ಟೇ ಅಲ್ಲ – ನಮಗೂ ಕಳೆದ ವಾರದ ಹೊಗೆನೆಕಲ್ ನ ಕಿರುಪ್ರವಾಸದ ನೆನಪು ! ಇಂದು “ಮೇಕೆದಾಟಿಗೆ ಹೋಗೋಣ” ಎಂಬ ಪ್ರಸ್ತಾಪ ಮಕ್ಕಳ ಕಡೆಯಿಂದ. 31 ಮೇ 2008 ರಂದು ಒಮ್ಮೆ ಅಲ್ಲಿಗೆ ಹೋಗಿದ್ದೆವು. “ನಾನಾಗ ತುಂಬಾ ಚಿಕ್ಕವ. ಅದು ನನಗೆ ನೆನಪೇ ಇಲ್ಲ” ಎಂದ ಚಿಕ್ಕ ಮಗ. ಅವನಿಗೆ ಹೊಳೆ ನೀರಿನಲ್ಲಿ ಆಡುವ ಆಕರ್ಷಣೆ ! (ಕೆಸರು ಹೊಂಡದಲ್ಲಿ ಒಮ್ಮೆ ಮುಳುಗೆದ್ದ ಎಮ್ಮೆ ಮತ್ತೆ ಮತ್ತೆ ಕೆಸರು ಹೊಂಡವನ್ನೇ ನೆನೆವ ಹಾಗೆ !). ದೊಡ್ಡಮಗರಾಯನಿಗೆ ತನಗೆ ಸಿಕ್ಕ ಹೊಸ ನಿಕಾನ್ ಕ್ಯಾಮರಕ್ಕೆ ಒಂದಿಷ್ಟು ಆಹಾರ ಸಿಕ್ಕುತ್ತದಲ್ಲ ಎಂಬ ನಿರೀಕ್ಷೆ. ಮನೆಯಲ್ಲೇ ಇದ್ದು ಸಾಧಿಸುವ ಘನಕಾರ್ಯ ಏನೂ ಇರಲಿಲ್ಲ. ಪ್ರವಾಸ ಹೂಡುವುದರಲ್ಲಿ ನಾವಂತೂ ಯಾವಾಗಲೂ ಮುಂದು. ಅದು ಕೇವಲ ಮೋಜಿಗಾಗಿ ಎಂಬ ರೀತಿ ನಾವು ಯೋಚಿಸುವುದಿಲ್ಲ. ಮಕ್ಕಳನ್ನು ಪ್ರಕೃತಿಯೊಂದಿಗೆ ಬೆರೆಸುವ ಮಧುರ ಕ್ಷಣಗಳು ಅವು- ಎಂಬುದು ನಮ್ಮ ಅಭಿಪ್ರಾಯ.
ಮನೆಯಿಂದ ಹೊರಟಾಗ ಹನ್ನೊಂದು ದಾಟಿತ್ತು. 81 ಕಿಲೋಮೀಟರ್ ದೂರದ ಸಂಗಮ(ಅರ್ಕಾವತಿ ಮತ್ತು ಕಾವೇರಿ) ಕ್ಕೆ 2 ಗಂಟೆಯ ಪಯಣ. ಅಲ್ಲಿನ (ಅ)ವ್ಯವಸ್ಥೆಯ ಬಗ್ಗೆ ಮೊದಲೇ ತಿಳಿದಿದ್ದ ಕಾರಣ ಹೋಗುವಾಗಲೇ ಒಂದಷ್ಟು ಹಣ್ಣು, ಎರಡು ದೊಡ್ಡ ಬಾಟಲಿಯಲ್ಲಿ ನೀರು ಕೊಂಡುಯ್ಯುವುದು ನಮಗಿದ್ದ ಅನಿವಾರ್ಯತೆ. ಅಲ್ಲಿ ಬಟ್ಟೆ ಬದಲಾಯಿಸಲು ಅನುಕೂಲವಿಲ್ಲವೆಂದು ಮೊದಲೇ ತಿಳಿದ ಕಾರಣ ಉಡುಪಿನೊಳಗೇ ಈಜುಡುಗೆ ತೊಟ್ಟು ಸಿದ್ಧಳಾದೆ. ಅದರಿಂದ ಆಗುವ ಅನಾನುಕೂಲವೆಂದರೆ ಅನಿವಾರ್ಯವಾದರೂ ಎಲ್ಲೆಂದರಲ್ಲಿ ಪ್ರಕೃತಿಕರೆ ತೀರಿಸಿಕೊಳ್ಳುಲು ಆಗುವುದಿಲ್ಲ ! ಎರಡು ಗಂಟೆ ಪಯಣ ಮತ್ತು 4 ಕಿಲೋಮೀಟರ್ ದೂರದ ಮೇಕೇದಾಟು ನೋಡಿಬರಲು ಇನ್ನೊಂದು ಗಂಟೆ ಎಂದು ಅಂದಾಜಿಸಿಕೊಂಡು ಹೊರಟದ್ದಾಗಿತ್ತು. ಅನಿವಾರ್ಯವಾದರೆ ದೇವರೇ ಗತಿ !
ಸಂಗಮ ತಲುಪಿದಾಗ ಒಂದು ಗಂಟೆ ದಾಟಿತ್ತು. ಹೊಸದಾಗಿ ಎದ್ದುನಿಂತ ಸುಸಜ್ಜಿತ ಕಟ್ಟಡ ” ಸಂಗಮ ಮೈಯೂರ ಹೋಟೆಲ್ಸ್” ನವರ (KSTDC)ಲಾಡ್ಜ್ ಮತ್ತು ಹೋಟೆಲ್ ! ಅಬ್ಬಾ… ಇಲ್ಲಿ ಇದೊಂದರ ಅವಶ್ಯಕತೆ ಖಂಡಿತಾ ಇತ್ತು. ಕರಿದ ಮೀನುಗಳ ಸಂತೆಯಲ್ಲಿ ಹಣ್ಣು ಹೆಚ್ಚಿ ಮಾರುವ ಅಂಗಡಿಯ ನಮ್ಮ ನಿರೀಕ್ಷೆ ಸುಳ್ಳಾಯಿತು.. ಬಿಸ್ಕೆಟ್ಟು ಕೊಳ್ಳುವುದಕ್ಕೂ ನಿಲ್ಲಲು ಸಾಧ್ಯವಾಗದ ಭಯಂಕರ ವಾಸನೆ ! ಸ್ವ ಸೇವಾ ಹೋಟೆಲ್ ಆರಂಭವಾಗಿರುವುದು ನಮ್ಮ ಹೊಟ್ಟೆತುಂಬಿಸಿಕೊಳ್ಳುವುದಕ್ಕೆ ಮಾರ್ಗ ಸಿಕ್ಕಂತಾಯಿತು ಎಂಬ ಸಮಾಧಾನ !
ಸೊಂಟ ಮಟ್ಟದ ನೀರಿನಲ್ಲಿ ಅರ್ಕಾವತಿ ನದಿಯನ್ನು ದಾಟುವಾಗ ಹಣ್ಣು-ನೀರು-ಟೆವೆಲ್ ಇತ್ಯಾದಿ ಇದ್ದ ಚೀಲವನ್ನು- ಜೊತೆಗೆ ಚಪ್ಪಲಿಯನ್ನೂ- ಅಕ್ಷರಶಃ ತಲೆಮೇಲೆ (ಅಯ್ಯಪ್ಪ ಭಕ್ತರು ಇರುಮುಡಿ ಹೊರುವಂತೆ !) ಹೊತ್ತು, ಕೈ-ಕೈ ಹಿಡಿದು ಆಚೆ ದಡ ಸೇರಿದ್ದಾಯಿತು. ಅಲ್ಲಿಂದ ಸ್ಥಳೀಯ ಬಸ್ಸನ್ನೇರಿ ಕಲ್ಲು ಕೊಟರಿನ ರಸ್ತೆಯಲ್ಲಿ ಸಾಗುವಾಗ..ಕೊಟ್ಟ 60 ರೂಪಾಯಿಗೆ(ಒಬ್ಬರಿಗೆ) ಬಸ್ ತನ್ನಲ್ಲೆಷ್ಟು ಬಿಡಿ ಭಾಗಗಳಿವೆ ಎಂದು ಸಾರುವ ಜೊತೆ ಜೊತೆಯಲ್ಲಿ ನಮ್ಮ ದೇಹದಲ್ಲಿ ಎಷ್ಟು ಮೂಳೆಗಳಿವೆ ? ಎಲ್ಲೆಲ್ಲಿ ಸಂಧಿಗಳಿವೆ ? ಕೀಲುಗಳಿವೆ ? ಎಂಬ ಪರಿಚಯವನ್ನೂ ಮಾಡಿಸಿತ್ತು ! ಆದರೂ 2008 ರಲ್ಲಿದ್ದ ಬಸ್ ಗಿಂತ ಇಂದಿನದು ಚೆನ್ನಾಗಿತ್ತು !
ಮೇಕೆದಾಟು ಎಂಬುದು ಕಲ್ಲು ಬಂಡೆಗಳೇ ತುಂಬಿದ ಸ್ಥಳ. ಮೇಕೆಯೊಂದು ಅಲ್ಲಿರುವ ಕಲ್ಲೊಂದರಿಂದ ಜಿಗಿದು ಸಂಗಮದ ನಂತರದ ಭೋರ್ಗರೆಯುವ ನದಿಯನ್ನು ದಾಟಿತು ಎಂಬುದು ಕತೆ. ಅದೇ ಸ್ಥಳದಲ್ಲಿ ವಾರದ ಹಿಂದಷ್ಟೇ ಒಂದು ಸಾವು ಸಂಭವಿಸಿತ್ತು. ಚೆನ್ನಾಗಿ ಮೆಟ್ಟಿಲುಗಳನ್ನು ಮಾಡಿ, ಆ ಮೆಟ್ಟಿಲ ಮೇಲೆ ಇನ್ನೊಂದಿಷ್ಟು ಕಲ್ಲು ಜರಿದು, ಅಧ್ವಾನವೆದ್ದ ಮೆಟ್ಟಿಲುಗಳಿಗೆ ಮೇಲಿನಿಂದ ನೇರ ದಾರಿಯನ್ನೇ ಮುಚ್ಚಿಬಿಟ್ಟಿದರು ! ಆದರೂ ಪಕ್ಕದ ಕಳ್ಳ ದಾರಿಯಿಂದ ಪ್ರವಾಸಿಗಳ ಪ್ರವಾಹ ನಡೆದೇ ಇತ್ತು ! ಕಳ್ಳದಾರಿಯಲ್ಲೇ ಸಾಗಿ, ಮೆಟ್ಟಿಲಿಳಿದು, ಕಲ್ಲು ಬಂಡೆಗಳನ್ನೇರಿ, ಪ್ರಪಾತದಲ್ಲಿ ನುಗ್ಗಿ ಹರಿಯುತ್ತಿದ್ದ ನೀರ ಸೆಳವನ್ನೊಮ್ಮೆ ಕಣ್ತುಂಬಿಕೊಂಡು, ಕೊರೆದ ಕಲ್ಲಗಳನ್ನೊಮ್ಮೆ ವೀಕ್ಷಿಸಿದೆವು. ನೆತ್ತಿಯಲ್ಲಿ ಸೂರ್ಯ ಸುಡುತ್ತಿದ್ದರಿಂದ ಹೆಚ್ಚು ಹೊತ್ತು ಕಾದ ಕಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೂ ಆಗದೆ (!!??)… ಬಂಡೆಯಿಳಿದು…. ಕಲ್ಲಿನ ಮರೆಯಲ್ಲಿ ಕುಳಿತು- ಒಯ್ದಿದ್ದ ಕಿತ್ತಳೆಯೊಂದೊಂದನ್ನು ಹೊಟ್ಟೆಗಿಳಿಸಿದ್ದಾಯ್ತು. ಕೈಯಲ್ಲಿ ಮುದ್ರೆ ಹಿಡಿದುಕೊಂಡು(ತೋರುಬೆರಳು ಮಡಿಸಿ, ಮಧ್ಯ ಬೆರಳನ್ನೂ-ಉಂಗುರ ಬೆರಳನ್ನೂ-ಹೆಬ್ಬೆರಳನ್ನೂ ಜೋಡಿಸಿ ನಡೆದರೆ ಏರು ದಾರಿಯನ್ನು ಏದುಸಿರಿಲ್ಲದೆ ಹತ್ತಬಹುದು !- ಆಸಕ್ತರು ಪ್ರಯತ್ನಿಸಿ ನೋಡಬಹುದು) ಮೆಟ್ಟಿಲು ಹತ್ತಿ… ಬಸ್ಸು ನಿಲ್ದಾಣ ತಲುಪಿದಾಗ ಒಂದನೆಯ ಅಧ್ಯಾಯ ಸಂಪೂರ್ಣ….
ಯಾವುದೋ ಪುಣ್ಯಾತ್ಮ ಮಾರುತ್ತಿದ್ದ ಮಜ್ಜಿಗೆಗೆ ಒಂದಕ್ಕೆ ಎರಡರಷ್ಟು ನೀರು ಬೆರೆಸಿ ಕುಡಿದು ಹೊಟ್ಟೆ ತಂಪಾಗಿಸಿಕೊಂಡು, ಜಿನುಗುತ್ತಿದ್ದ ಬೆವರನ್ನೊರೆಸಿ, ಬಂದ ಬಸ್ಸನ್ನೇರಿ, ಪುನಃ ಸಂಗಮಕ್ಕೆ ಬಂದು ನೀರಿನಲ್ಲಿ ಬಿದ್ದಾಗ ( ಅಯ್ಯೋ… ಮತ್ತೆ ಎಮ್ಮೆ ಕೆಸರು ಹೊಂಡದಲಿ ಬಿದ್ದುಕೊಂಡ ನೆನಪು !) ಆಹಾ ಎಂಥ ಸುಖ ! ಹದವಾದ ಬಿಸಿಲು, (ಮೊದಲೇ ಸನ್ ಬರ್ನ್ ಕ್ರೀಮ್ ದಾರಾಳ ಲೇಪಿಸಿಕೊಂಡಿದ್ದರಿಂದ ಮುಖ-ಬೆನ್ನು-ಕೈಗಳು ಉರಿಯುತ್ತಿರಲಿಲ್ಲ …..) ಆಗಸದಲ್ಲಿ ತೇಲುವ ಮೋಡಗಳು …… ನಮ್ಮನ್ನಾವರಿಸಿದ ತಣ್ಣನೆಯ ನೀರು…. “ಸುಖವೆನ್ನುವುದಿದು ತಾನೆ ಮಂಕುತಿಮ್ಮ…..!” ಎಂದು ಗುನುಗುತ್ತಾ….
ಪ್ರವಾಹದ ವಿರುದ್ಧ ಈಜಿ, ಎಷ್ಟು ಕೈ-ಕಾಲು ಬಡಿದರೂ ಇದ್ದಲ್ಲೇ ಇರುವ ನಮ್ಮನ್ನು ನೋಡಿ ನಗುವ ಬೇರೆಯವರೊಂದಿಗೆ ನಾವೂ ನಕ್ಕು, ಪ್ರವಾಹಕ್ಕನುಗುಣವಾಗಿ ಈಜಿ, ಏನೋ ಸಾಧಿಸಿದವರಂತೆ ಕೈ-ಕಾಲು ಬಡಿದು, ತುಂಬಾ ದೂರ ಈಜಿದ ಸಂತಸದೊಂದಿಗೆ ಹೆಮ್ಮೆಯ ನೆಗೆಬೀರಿ ಸಂತಸಗೊಂಡೆವು- ಒಂದಿಷ್ಟು ಕೊಬ್ಬು ಕರಗಿಸಿಕೊಂಡೆವು ! ಹೊಳೆಯ ಮಧ್ಯದ ಬಂಡೆಯನ್ನೇರಿ, ಒಯ್ದಿದ್ದ ಉಳಿದ ಹಣ್ಣುಗಳನ್ನು ಮೆಲ್ಲುತ್ತಾ… ಪ್ರಕೃತಿಯನ್ನು ಆಸ್ವಾದಿಸುತ್ತಾ… ಏನೆಲ್ಲ ಸೊಬಗನ್ನು ಕಂಡೆವು ! ಮೀನು ಹಿಡಿಯುವ ಕಪ್ಪು ಕೊಕ್ಕರೆ ಮತ್ತು ಬೇರೆ ಬೇರೆ ಪಕ್ಷಿಗಳು, ತಲೆ ಮೇಲೇ ಹಾರುತ್ತಿದ್ದ ಹದ್ದು, ನೀರಲ್ಲಿದ್ದ ಮೀನಿಗಾಗಿ ಹೊಂಚುಹಾಕುತ್ತಾ ಬಾನಿನಲ್ಲಿ ಕ್ಷಣಕಾಲ ಇದ್ದ ಜಾಗದಲ್ಲೆ ರೆಕ್ಕೆ ಬಡಿಯುವ ಪಕ್ಷಿಯೊಂದರ ಸುಂದರ ದೃಶ್ಯಕಾವ್ಯ, ಒಂದೇ ಗಿಡದ ಸುತ್ತ ಸುತ್ತುತ್ತಿದ್ದ ಚಿಟ್ಟೆಗಳ ಪಡೆ…..
ಇತ್ತ…. ನೀರಿನಲ್ಲಿ ಕುಳಿತು ಬೀರು ಕುಡಿಯುವ, ಬಿರಿಯಾನಿ ತಿನ್ನುವ, ಸಿಗರೇಟು ಸೇದುವ ಹಮ್ಮೀರರು ! ತಮ್ಮ ದೇಹ ಸಿರಿಯನ್ನು(ಸಿಕ್ಸ್ ಪ್ಯಾಕ್ ಇಲ್ಲದ ಡೊಳ್ಳು ಹೊಟ್ಟೆಯನ್ನು ?) ತಾವೇ ಜಿಮ್ ಮಾಡಿದ ಬೆಳೆಸಿಕೊಂಡದ್ದೋ ಎಂಬಂತೆ ಮಾಂಸ ಖಂಡಗಳನ್ನು ಪ್ರದರ್ಶಿಸಿ – ಫೋಟೋಕ್ಕೆ ಪೋಸ್ ಕೊಡುವ ಪುರುಷ ಸಿಂಹಗಳು ! ಸಿಕ್ಕಿದ್ದೇ ಅವಕಾಶ ಎನ್ನುತ್ತ ಜೊತೆಗಾರನನ್ನು(ತಿಯನ್ನು) ನೀರಿನಲ್ಲಿ ಮುಳುಗಿಸಿ ಕಾಡುವ ಯುವ ಪ್ರೇಮಿಗಳು ! ತಮ್ಮ ಜೊತೆಗೆ ನಾಯಿಮರಿಯನ್ನೂ ಕಿರುಪ್ರವಾಸಕ್ಕೆ ಕರೆತಂದಿದ್ದ ಶ್ವಾನಪ್ರಿಯರು ! …. ಬೇಕಾದ್ದು ಬೇಡವಾದದ್ದು- ಎಲ್ಲ ನೋಟಗಳೂ ಉಚಿತ ! ಈ ಜಗತ್ತಿನಲ್ಲಿ ಬೇಡವಾದದ್ದು ಏನಿದೆ ? ಅದನ್ನು ನಾವು ನೋಡುವ ದೃಷ್ಟಿಯಲ್ಲಿ ಬದಲಾವಣೆ ಬೇಕಷ್ಟೇ…. ನಮಗೆ ಬೇಕಾದ್ದನ್ನು ನೋಡಿ ಆಸ್ವಾದಿಸುವ, ಬೇಡದ್ದನ್ನು ನಿರ್ಲಕ್ಷಿಸುವ ಆಯ್ಕೆ ನಮಗಿದ್ದೇ ಇದೆ. ಮಕ್ಕಳು ಸಿದ್ದಾರ್ಥನಂತೆ ಬಾಲ್ಯ ಕಳೆಯದಿರಲಿ…. ಬುದ್ದರಾಗದೇ ಇದ್ದರೂ ಸಾಮಾನ್ಯ ಮನುಷ್ಯರಾದರೆ ಸಾಕು !
ಇಚ್ಚೆ ಇದ್ದಷ್ಟು ಹೊತ್ತು ನೀರಾಡಿ, ಶಕ್ತಿ ಇದ್ದಷ್ಟು ಈಜಾಡಿ, “ಅಮ್ಮಾ… ವಾರಕ್ಕೊಮ್ಮೆ ಇಲ್ಲಿಗೆ… ಹೀಗೆ…. ಬರೋಣ” ಎನ್ನುವ ಮಕ್ಕಳನ್ನು ಓಲೈಸಿ, ದಡ ಸೇರಿ, ಒಯ್ದಿದ್ದ ಲುಂಗಿಯಿಂದ ತಾತ್ಕಾಲಿಕ ಮರೆ ನಿರ್ಮಿಸಿಕೊಂಡು, ವಸ್ತ್ರ ಬದಲಿಸಿದಾಯ್ತು, ಇನ್ನು ಹೊಟ್ಟೆ ಪೂಜೆಗಾಗಿ ಹೋಟೆಲ್ ಹೊಕ್ಕರೆ ಕಂಡದ್ದೇನು ? ಖಾಲಿ ಖಾಲಿ ಮೇಜು ಖುರ್ಚಿಗಳು ! ಏನು ಸಿಕ್ಕಬಹುದೆಂದು ವಿಚಾರಿಸಿದಾಗ ತಿಳಿದದ್ದು, ಚಪಾತಿ, ಕರಿ(ವೆಜ್ ಕರಿ ಮತ್ತು ಫಿಶ್ ಕರಿಗೆ ಒಂದೇ ಮಸಾಲೆಯಾ ? ಒಬ್ಬನೇ ಮಾಡಿದ್ದಾ ?), ವೆಜ್ ಪಲಾವ್ ಇಂತಹ ಒಂದೆರಡು ಖಾದ್ಯವನ್ನುಳಿದು ಉಳಿದಿದ್ದೆಲ್ಲವೂ ಶಾಖಾಹಾರಿಯೇ ! ಮಸಾಲೆ ದೋಸೆ/ಸೆಟ್ ದೋಸೆ ತಿನ್ನುವ ಆಸೆಯನ್ನಿಟ್ಟುಕೊಂಡು ಹೋಟೆಲ್ ಪ್ರವೇಶಿಸಿದ ನಮಗೆ ನಿರಾಸೆ ಆದದ್ದು ಸತ್ಯ !
ಮೇಕೆ ದಾಟು ಬಿಟ್ಟು ಸರಿಯಾಗಿ ಹತ್ತು ಕಿಲೋಮೀಟರ್ ಗೆ ಬಲದಿಕ್ಕಿಗೆ “ಚುಂಚಿ ಫಾಲ್ಸ್ – 6 ಕಿಲೋಮೀಟರ್” ಎಂಬ ಫಲಕ ಕಾಣಿಸಿತು. ಇನ್ನೂ ಬೆಳಕಿತ್ತು… ಹೇಗಿದ್ದರೂ ಅದನ್ನು ನೋಡುವುದಕ್ಕಾಗಿಯೇ ಬರಲಾಗುವುದಿಲ್ಲ. ನೋಡಿಯೇ ಬಿಡುವಾ… ಎನ್ನುತ್ತಾ… ಕಾರನ್ನು ಬಲಕ್ಕೆ 6 ಕಿಲೋ ಮೀಟರ್ ಓಡಿಸಿದ್ದಾಯ್ತು. ಬೆಟ್ಟದ ಮಟ್ಟಸದ ಜಾಗದಲ್ಲಿ ಒಂದಷ್ಟು ಕಾರುಗಳು ನಿಂತಿದ್ದವು…. 35 ರೂ ತೆತ್ತು ಕಾರು ನಿಲ್ಲಿಸಿ…. ಮುಂದಿನ ಬೆಟ್ಟದವರೆಗೆ ನಡಿಗೆ ! ನಡುವೆ ಒಂದು ನೀರಿನ ಛಾನಲ್ ದಾಟಿ… ಸೆವೆದ ದಾರಿಯಲ್ಲಿ ಸುಮಾರು 30 ನಿಮಿಷ ನಡೆದು, ಬೆಟ್ಟವಿಳಿದರೆ …. ಕಲ್ಲು ಬಂಡೆಗೆ ಮುಖಾಮುಖಿಯಾಗಿ ದೊಡ್ಡದೊಂದು ಜಲಪಾತ ! ಬೇಸಿಗೆಯಲ್ಲೇ ಹೀಗಿದೆ… ಇನ್ನು ಮಳೆಗಾಲದಲ್ಲಿ ಇದರ ಸೌಂದರ್ಯ ಹೇಗಿರಬಹುದು ? ಎಂಬ ಕಲ್ಪನೆ ! ಇಷ್ಟು ದೂರ ನಡೆದದ್ದೂ ಸಾರ್ಥಕವಾಯಿತು… ಇಲ್ಲಿ ಹೀಗೊಂದು ಜಲಪಾತವಿದೆ ಎಂಬುದೇ ಇಷ್ಟು ದಿನ ತಿಳಿದಿರಲಿಲ್ಲ… ಕತ್ತಲಾಗುವ ಮೊದಲು ಮುಖ್ಯರಸ್ತೆ ಸೇರಿಕೊಳ್ಳಬೇಕು ಎಂಬ ತರಾತುರಿಯಲ್ಲಿ ತಿರುಗಿ ಹೊರಟರೆ ಕಾಲುಗಳು ಸಹಕರಿಸಲು ಒಪ್ಪಲಿಲ್%B