ಸೋನೆ ಹನಿ ಹನಿದ ಹೊತ್ತು
ಆ ಸೋನೆ ಮಳೆ ಹನಿಯುವ
ಹೊತ್ತಿಗೆ ಸದ್ದಿಲ್ಲದೇ
ಚಿಗುರೊಡೆದ ಬಂಧವದು.
ಹನಿಯೆಂದರೆ ಕಲುಷಿತವಲ್ಲದ್ದು
ಶುದ್ಧ ಜಲವಷ್ಟೆ.
ಅದರ ಪ್ರೀತಿಯೂ ಅದರಂತೆ
ಅದಕ್ಕೆ ಪರ್ಯಾಯ ಪದವಿಲ್ಲವೆನ್ನುವಷ್ಟು
ಪರಿಶುದ್ಧ.
ಸುಡುವ ಬಿಸಿಗೆ ಕುದ್ದು
ಕಂದಿ ಕುಂದಿದ ಮನ
ಸಂತೈಸುವಂತೆ ಬಿದ್ದ ಸೋನೆ ಹನಿಗೆ
ಪುಳಕಗೊಂಡದ್ದೂ ಮೈಮರೆತು
ಮರುಳಾಗಿ ಹಾಡಿದ್ದೂ ಸಹಜವೇನಲ್ಲ.
ಈ ಹಿಂದೆ ಕಡು ಬಿಸಿಲೂ
ಸೋಕಿತ್ತು
ತಂಪು ಹನಿಯೂ ನೇವರಿಸಿತ್ತು.
ಅರೆಗಳಿಗೆಯೂ ಆ ತುಂತುರಿಗೆ
ಮುಖವೊಡ್ಡಿದ್ದು ನೆನೆದದ್ದು
ಈವರೆಗೂ ನೆನಪಿಲ್ಲ
ನೆಲಕ್ಕೆ.
ಬಹುಶ: ಇದು ನೆಲದಾಳಕ್ಕೆ
ಇಳಿದು ಹನಿದ ಸೋನೆ
ಹನಿಯಿರಬೇಕು. ಇಲ್ಲದಿದ್ದರೆ
ಬರಡಾಗಿದ್ದ ಅವಳೊಡಲು
ಜೀವ ಚೈತನ್ಯ ಪಡೆದು ಈ ನಮೂನೆಯಲ್ಲಿ
ಕವಿತೆಯಾಗಿ ಅರಳುವ ಹಂತ
ತಲುಪುತ್ತಿರಲಿಲ್ಲವೇನೋ.
ಆ ಸೋನೆ ಹನಿ ಹನಿದು
ಹೋದ ಮೇಲೆ ಅವಳು
ಅವಳಾಗಿಲ್ಲ.ಅದಕ್ಕೇ ನೆಲ
ಈಗ ಮೊದಲಿನಂತೆ ಯಾವುದಕ್ಕೂ
ಪರಿತಪಿಸುವುದಿಲ್ಲ.
,
– ಸ್ಮಿತಾ ಅಮೃತರಾಜ್.
Nice
ಉತ್ತಮ ಕವನ …ಹನಿ ಹನಿಯಾಗಿ ಕವನವೇ ಸುರಿದಂತಾಯಿತು.
Nice Smitha. so nice.