ರಾತ್ರೋರಾತ್ರಿಯಲ್ಲಾದ ಜ್ಞಾನೋದಯ!!

Share Button
Surekha

ಸುರೇಖಾ ಭಟ್ ಭೀಮಗುಳಿ

 

2103ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11  ಜನರ ತಂಡ) ಹೊನ್ನಾವರಕ್ಕೆ ಬಂದಿಳಿದಾಗ ಸೂರ್ಯ ನೆತ್ತಿಯ ಮೇಲಿದ್ದ. ಶರಾವತಿ ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಮೂಗೋಡು ಕಡೆಯ ಹಳ್ಳಿಗೆ ಹೋಗುವ ಡಿಂಗಿಯಲ್ಲಿ ಒಂದುವರೆ ಗಂಟೆ ದೋಣಿ ವಿಹಾರ. ನಂತರ ಹೊನ್ನಾವರದಿಂದ ಟೆಂಪೊ ಟ್ರಾವೆಲರ್ ನಲ್ಲಿ  ರಾಮತೀರ್ಥ ಮತ್ತು ಅಪ್ಸರ ಕೊಂಡಕ್ಕೆ ನಮ್ಮ ಪ್ರಯಾಣ. ಅಲ್ಲಿ ನೂರಾರು ಮೆಟ್ಟಿಲು ಹತ್ತಿ ಉದ್ಯಾನವನದಲ್ಲಿ ವಿಹರಿಸಿ, ಮತ್ತೊಂದು ಪಕ್ಕದಲ್ಲಿ ಬೆಟ್ಟ ಇಳಿದು, ಜಲಪಾತ ನೋಡಿ, ಮತ್ತೆ ಬೆಟ್ಟ ಹತ್ತಿ, ಸೂರ್ಯಾಸ್ತ ನೋಡಿಕೊಂಡು ಬೆಟ್ಟದಿಂದ ಇಳಿದು ಬರುವಾಗಲೇ ಕಾಲು ಕತೆ ಹೇಳುತ್ತಿತ್ತು. ರಾತ್ರಿ ನಾವು ಉಳಿದುಕೊಳ್ಳುವುದಕ್ಕಾಗಿ ಕುಮಟಾದಿಂದ 6 km ದೂರದಲ್ಲಿದ್ದ ಬಾಡ ಎಂಬ ಊರಿನಲ್ಲಿ ಮೊದಲೇ ಸ್ಥಳ ಕಾಯ್ದಿರಿಸಿದ್ದೆವು. ಅಲ್ಲಿದ್ದ “ಶ್ರೀ ಕನ್ನಿಕಾ ಪರಮೇಶ್ವರಿ ದೇವ -ಬಾಡ” ದೇವಾಲಯದ ಮೇಲಿನ ಕೊಠಡಿಯಲ್ಲಿ ಎರಡು ದಿನದ ವಾಸ್ತವ್ಯ. ಅಲ್ಲಿಯೇ ಒಂದು ಹವ್ಯಕರ ಮನೆಯಲ್ಲಿ ಊಟ ತಿಂಡಿ ವ್ಯವಸ್ಥೆ. ಹೊನ್ನಾವರದಿಂದ ಕುಮಟಾ- ಆಲ್ಲಿಂದ ಬಾಡ ತಲುಪಿದಾಗ ರಾತ್ರಿ 8.30. ಇಲ್ಲಿ ನೋಡಿದರೆ ದೇವಸ್ಥಾನ ನೂರೊಂದು ಮೆಟ್ಟಿಲಿನ ಮೇಲಿದೆ ! ಲಗ್ಗೇಜ್ ಹೊತ್ತುಕೊಂಡು ಕೊಠಡಿ ತಲುಪಿದಾಗ ಗೊತ್ತಾದದ್ದು- ಊಟ ಬೆಟ್ಟದ ಕೆಳಗಿರುವ ಭಟ್ಟರ ಮನೆಯಲ್ಲಿ ಎಂದು ! ಸರಿ. ಮತ್ತೆ ಇಳಿದು, ಊಟ ಮಾಡಿ, ಮತ್ತೆ ಹತ್ತಿ ಹೋದದ್ದಾಯಿತು. ದೇವಸ್ಥಾನದ ಮೇಲಿದ್ದ ಒಂದು ಕೊಠಡಿಯನ್ನು ನಮಗಾಗಿ ಬಿಟ್ಟು ಕೊಟ್ಟಿದ್ದರು. ನಾವು 11 ಜನರಿದ್ದ ಕಾರಣ ನಮಗೆ ಆದು ಸಾಲುತ್ತಿರಲಿಲ್ಲ. ಈ ಬಾಡ ಊರಿನ ಒಂದು ಕಡೆ ಅಘನಾಶಿನಿ ನದಿ ಸಮುದ್ರ ಸೇರುವ ಜಾಗ, ಇನ್ನೊಂದು ಕಡೆಯಿಂದ ಸುತ್ತುವರೆದ ಸಮುದ್ರ. ಕೋಣೆಯ ಹೊರಗೆ ನಿಂತರೆ ಸಮುದ್ರದ ಭೋರ್ಗರೆತ, ಆಕಾಶದಲ್ಲಿ ತಾರೆಗಳು- ಚಂದ್ರ-ತಂಪಾಗಿ ಬೀಸುತ್ತಿದ್ದ ತಂಗಾಳಿ !

ಒಮ್ಮೇಲೆ  ಬಾಲ್ಯ ನೆನಪಾಯಿತು. ಅಡಿಕೆ ಒಣಗಿಸುವುದಕ್ಕಾಗಿ, 10  ಅಡಿ ಎತ್ತರದ ಕಲ್ಲು ಕಂಬದ ಆಧಾರದ ಮೇಲೆ ನಿರ್ಮಿಸಿದ ಅಡಿಕೆ ದಬ್ಬೆಯ ಚಪ್ಪರ. ಚಂದ್ರಗ್ರಹಣ ನೋಡುವ ನೆಪದಲ್ಲಿ ನಮ್ಮ ಮಕ್ಕಳ ಸೈನ್ಯ ಚಪ್ಪರದಲ್ಲಿ ಮಲಗುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಎಚ್ಚರವಿರುವಷ್ಟು ಹೊತ್ತು ಚಂದ್ರ  ಗ್ರಹಣ ನೋಡುವುದು, ರೇಡಿಯೋದಲ್ಲಿ ಬರುತ್ತಿದ್ದ “ಆಕಾಶ ವೀಕ್ಷಣೆ” ಕಾರ್ಯಕ್ರಮದಲ್ಲಿ ಕೇಳಿ ತಿಳಿದ ವಿಷಯಗಳನ್ನು  ತಾನೇ ದೊಡ್ಡ ಖಗೋಲ ಶಾಸ್ತ್ರಜ್ಞನಂತೆ ವಿವರಿಸುತ್ತಿದ್ದ ಅಣ್ಣ. ನಾವಂತು ಕಣ್ಣು-ಬಾಯಿ ಬಿಟ್ಟುಕೊಂಡು ಕೇಳಿಸಿಕೊಳ್ಳುತ್ತಿದ್ದೆವು, ಎಷ್ಟು ಅರ್ಥವಾಗುತ್ತಿತ್ತೋ ದೇವರಿಗೇ ಗೊತ್ತು ! ಅಕ್ಕನಿಂದ ಗ್ರಹಣದ ಬಗ್ಗೆ ವಿವರಣೆ, ನಕ್ಷತ್ರ-ಗ್ರಹಕ್ಕೆ ವ್ಯತ್ಯಾಸ, ಸಪ್ತರ್ಷಿ ಮಂಡಲ ಗುರುತಿಸುವುದು, ಶುಕ್ರ, ಮಂಗಳ ಗ್ರಹಗಳನ್ನು ಪತ್ತೆ ಹಚ್ಚುತ್ತಿದ್ದೆವು. ಲಕ್ಷಾಂತರ ನಕ್ಷತ್ರದಿಂದ ಮಿನುಗುವ ಆಕಾಶ, ತಂಗಾಳಿಗೆ ತೂರಾಡುವ ಅಡಿಕೆ ಮರಗಳ ತೋಟ, ಮನೆಯ ಇನ್ನೊಂದೆಡೆ ದಟ್ಟ ಕಾಡು ! ಕಾಡಿನ ಕಡೆಯಿಂದ ಬೀಸಿಬರುವ ಗಾಳಿಯಲ್ಲಿ ಸುರಗೆ ಹೂವಿನ ಸುಗಂಧ ! ಎಲ್ಲವೂ ಚಂದ-ಚಂದ. ಯಾವ ಗಳಿಗೆಯಲ್ಲಿ ಕಣ್ಣು ಮುಚ್ಚಿ, ನಿದ್ರಾದೇವಿಗೆ ಶರಣಾಗುತ್ತಿದ್ದೆವೋ ? ಎಚ್ಚರವಾದಾಗಲೆಲ್ಲಾ ಚಂದ್ರಂಗೆ ಎಷ್ಟು ಗ್ರಹಣ ಹಿಡಿಯಿತು-ಬಿಟ್ಟಿತು ನೋಡುವುದು. ಬೆಳಿಗ್ಗೆ 3 ಕ್ಕೆಲ್ಲ ಚಳಿಚಳಿ. ಕಂಬಳಿ ಒಳಗೇ ದಾಳಿಯಿಡುತ್ತಿದ್ದ ಚಳಿರಾಯ ! 4ಕ್ಕೆಲ್ಲ ಪ್ರಕೃತಿ ಕರೆಯ ಅನಿವಾರ್ಯತೆ. ಎದ್ದು ನಡೆದರೆ ದಬ್ಬೆಗಳ ದಡ-ಬಡ ಶಬ್ದ. ಶಬ್ದದಿಂಗಾಗುವ ನಿದ್ರಾಭಂಗದಿಂದಾಗಿ ಅಪ್ಪನಿಂದ ಸಹಸ್ರನಾಮಾರ್ಚನೆ. ಪ್ರಕೃತಿಕರೆ ತೀರಿಸಿಕೊಂಡ ಮೇಲೆ ಮನೆಯೊಳಗೆ ಹೋಗುವುದೋ? / ಮತ್ತೆ ಚಪ್ಪರ  ಏರುವುದೋ ಎಂಬ ದ್ವಂದ್ವ ! ದಿನ ನಿತ್ಯದ ಹಾಸಿಗೆ ಚಪ್ಪರದ ಮೇಲಿರುತ್ತದಲ್ಲ ! ಬೇರೆ ದಾರಿ ಇಲ್ಲದೆ ಚಪ್ಪರ ಏರಿ- ಮುಸುಕು ಹಾಕಿ ಮಲಗಿದೆವೆಂದರೆ ಮೇಲಿಂದ ಸುರಿವ ಮಂಜಿನ ಹನಿಗಳು ! ಉಸಿರಾಡುವಷ್ಟೇ ಮಾರ್ಗ ತೆರೆದಿಟ್ಟು ಎರೆಡೆರೆಡು ಕಂಬಳಿಯೊಳಗೆ ಮುರುಟಿ ಮಲಗಿದೆವೆಂದರೆ, ಬೆಳಗಾಗುವುದನ್ನೇ ಕಾಯುವ ಅನಿವಾರ್ಯತೆ ! ಆದರೂ ಸೂರ್ಯ ಕಿರಣಗಳು ಕಣ್ಣಿಗೆ ಚುಚ್ಚಿದ ಮೇಲಷ್ಟೇ ಸರಿಯಾಗಿ ಎಚ್ಚರ. ಅರೆ ನಿದ್ದೆ- ಅರೆ ಎಚ್ಚರದ ಸ್ಥಿತಿ. ಸಾಕಪ್ಪಾ ಸಾಕು !  ಆದರೆ…. ಮರುದಿನ ಶಾಲೆಯಲ್ಲಿ ಗೆಳೆಯ-ಗೆಳತಿಯರೊಂದಿಗೆ ಹೇಳಿಕೊಳ್ಳುವಾಗ ನಾವೇನೋ ಸಾಹಸ(!?) ಮಾಡಿದ್ದೇವೆಂಬ ಭಾವ ! ಆಶ್ಚರ್ಯ ಎಂದರೆ ಮುಂದಿನ ಚಂದ್ರ ಗ್ರಹಣಕ್ಕೆ ಮತ್ತೆ ಚಪ್ಪರದಲ್ಲಿ ಪವಡಿಸಲು ಮನಸ್ಸು ಸಿದ್ಧವಾಗಿರುತ್ತಿತ್ತು !  ಮತ್ತೆ ಅದೇ ಕತೆ !

rooftop arecanut drying

 

ಇಂದು ದೇವಸ್ಥಾನದ ಮೇಲ್ಛಾವಣಿ ಮೇಲೆ ಕುಳಿತು, ನನ್ನ ಬಾಲ್ಯದ ಸಾಹಸ (!!??) ಹೇಳಿಕೊಂಡಾಗ, ಮಕ್ಕಳು ಉತ್ಸಾಹಗೊಂಡವು. ನಾವು ಒಟ್ಟು ಆರು ಜನ- ಸಮುದ್ರದ ಭೋರ್ಗರೆತಕ್ಕೆ ಕಿವಿಗೊಟ್ಟು, ಶುಭ್ರ ಆಕಾಶ, ಮಿನುಗುವ ನಕ್ಷತ್ರಗಳು, ತಂಪಾಗಿ ಬೀಸುವ ಗಾಳಿ. ಪ್ರಕೃತಿಯ ಸೊಬಗನ್ನು ಅಸ್ವಾದಿಸುತ್ತಾ, ಅಂದವನ್ನು ಕಣ್ಣಿಗೆ ತುಂಬಿಕೊಳ್ಳುತ್ತಾ ತೆರೆದ ಮೇಲ್ಛಾವಣಿಯಲ್ಲಿ ಮಲಗಿದ್ದಾಯ್ತು. ಕೆಳಗೆ ಒಂದು ಚಾಪೆ-ಹೊದೆಯಲು  ಎರಡು ಬೆಡ್ ಶೀಟ್ ಅಷ್ಟೆ !  ಹಿಂದಿನ ದಿನದಿಂದ ಆರಂಭವಾದ ರೈಲು ಪ್ರಯಾಣ, ದೋಣಿ ವಿಹಾರ, ರಾಮತೀರ್ಥ-ಅಪ್ಸರಕೊಂಡ-ಉಳಿದುಕೊಂಡಿದ್ದ ಬಾಡದಲ್ಲಿ ಮೆಟ್ಟಿಲು ಹತ್ತಿಳಿದ್ದಿದ್ದ ಪರಿಣಾಮ ಕಾಲುಗಳಷ್ಟೇ ಅಲ್ಲ, ದೇಹವೂ ದಣಿದಿತ್ತು, ಜೊತೆಗೆ ಆಗಷ್ಟೇ ಮುಗಿಸಿದ ತಣ್ಣೀರು ಸ್ನಾನದ ಪರಿಣಾಮ ಚಂದಕ್ಕೆ ನಿದ್ದೆ ಹತ್ತಿತ್ತು. ರಾತ್ರಿ ಒಂದು ಗಂಟೆಗೆ ಎಚ್ಚರವಾಗಿ ಇದ್ದಕ್ಕಿದ್ದಂತೆ ಜ್ಞಾನೋದಯವಾಯಿತು- ನಮ್ಮಲ್ಲಿ ಯಾರಿಗಾದರೂ ಆರೋಗ್ಯ ಕೈ ಕೊಟ್ಟರೆ ಮರುದಿನದ ಟ್ರಕ್ಕಿಂಗ್ ಕಾರ್ಯಕ್ರಮಗಳು ಹಾಳೆದ್ದು ಹೋಗುತ್ತವೆ ಎಂದು ! ಇಲ್ಲಿ ಮಲಗುವ ಮೊದಲು ದೇವಸ್ಥಾನದ ಮೇಲ್ಭಾಗದಲ್ಲಿ ಶೀಟ್ ಇಳಿಸಿದ ಜಾಗವನ್ನು ಗಮನಿಸಿದ್ದೆವು. ಅಲ್ಲಿ ಕೊಬ್ಬರಿ ಕಾಯಿಗಳು, ಮರಗೆಲಸ ಮುಗಿದಾಗ ಉಳಿಯುವ ಮರದ ತುಂಡುಗಳು, ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ದೇವಸ್ಥಾನದ ಸಕಲ ಬೇಡದ ವಸ್ತುಗಳ ಉಗ್ರಾಣ ಅದಾಗಿತ್ತು. ಮಧ್ಯದಲ್ಲಿ ಆರು-ಎಂಟು ಜನ ಮಲಗುವಷ್ಟು ಜಾಗ ಖಾಲಿ ಇತ್ತು. ಇಲಿ-ಹಲ್ಲಿ-ಹೆಗ್ಗಣ ಇತ್ಯಾದಿ ಪ್ರಾಣಿಗಳ ವಾಸಸ್ಥಾನ ಅದಾಗಿರಬಹುದೆಂಬ ಅನುಮಾನ !  ಅಲ್ಲಿ ಹೊರಗಡೆಗಿಂತ ಬೆಚ್ಚಗಿದ್ದ ಕಾರಣ,  ಬೇರೆ ದಾರಿ ಇಲ್ಲದೆ ಎಲ್ಲರನ್ನೂ ಅಲ್ಲಿಗೆ ಸ್ಥಳಾಂತರಿಸಿದ್ದಾಯಿತು !

ಮಲಗಿದ ಕೂಡಲೆ  ನಿದ್ದೆ ಬಂದು ಬಿಡುತ್ತದೆಯೇ ? ಅಲ್ಲಿ ಯಾವುದೋ ಪ್ರಾಣಿ “ಕುಂಯ್ಯಾ… ಕುಂಯ್ಯಾ…” ಎನ್ನುತ್ತಿದೆ. ಇಲಿ-ಹೆಗ್ಗಣಗಳನ್ನು ಹುಡುಕಿಕೊಂಡು ಹಾವು ಬಂದಿರಬಹುದೇ ? ಇದು ಹಾವಿಗೆ ಆಹಾರವಾದ ಇಲಿಯ ಚೀರಾಟವವಾಗಿರುವ ಸಾಧ್ಯತೆಯಿದೆಯೇ ? “ಹುಶ್.. ಹುಶ್…” ಎಂದು ಶಬ್ಧ ಮಾಡಿ, ಧೈರ್ಯ ಮಾಡಿ ಮಲಗಿದ್ದಾಯ್ತು. ಬೆಳಿಗ್ಗೆ ಎದ್ದು ನೋಡಿದರೆ, ಬುಟ್ಟಿಯೊಂದರಲ್ಲಿ ತನ್ನೈದು ಮರಿಗಳೊಂದಿಗೆ ಬೆಕ್ಕೊಂದು ಬೆಚ್ಚಗೆ ಮಲಗಿತ್ತು ! ಹೇಳದೆ ಕೇಳದೆ ತನ್ನ ಶಯನಮಂದಿರ(?)ಕ್ಕೆ ಅತಿಕ್ರಮಣ ಮಾಡಿದ ನಮ್ಮ ಮೇಲೆ ಬೆಕ್ಕು ತನ್ನ  ಪ್ರತಿರೋಧವನ್ನು ವ್ಯಕ್ತಪಡಿಸಿತ್ತು. ಅಥವಾ ಅದಕ್ಕೆ  ಭಯವಾಯಿತೇನೋ ? ಬಲ್ಲವರಾರು ? ಪಾಪ !

beach trekಮರುದಿನ ತದಡಿಯಿಂದ ಗೋಕರ್ಣದ ಓಂ ಬೀಚ್ ವರೆಗೆ ಸುಮಾರು 7 – 8 km ಕಡಲ ಪಕ್ಕದ ಗುಡ್ಡ-ಬೆಟ್ಟಗಳ ಕಡಿದಾದ ಭಾಗದಲ್ಲಿ ಏರುತ್ತಾ-ಇಳಿಯುತ್ತಾ ನಡೆದ ನಮ್ಮ ಟ್ರಕ್ಕಿಂಗ್ ಅದ್ಭುತವಾಗಿತ್ತು. ಮತ್ತೆ ಸಮುದ್ರ ಸ್ನಾನ. ಈಜಲು ಬರುತ್ತದೆ ಎಂಬ ಭಂಡ ಧೈರ್ಯದಿಂದ ಎದೆ ಮಟ್ಟದ ನೀರಿನವರೆಗೆ ಹೋದದ್ದು- ಒಮ್ಮೇಲೆ ತೆರೆಗಳ ಹೊಡೆತ ಜೋರಾದದ್ದು- ಸಮುದ್ರ ದಂಡೆಗೆ ಬರಬೇಕೆಂದುಕೊಂಡರೂ ಆಗದೆ ಒದ್ದಾಡಿದ್ದು- ತೆರೆಗಳು ಎರಡು ಮೀಟರ್ ತೀರದೆಡೆಗೆ ನೂಕಿ, ನಾಲ್ಕು ಮೀಟರ್ ಸಮುದ್ರದೆಡೆಗೆ ಕೊಂಡೊಯ್ಯುತ್ತಿದ್ದುದು- ಎಲ್ಲವೂ ಹೊಸ ಅನುಭವಗಳೇ. ಆದರೆ ಅದೂ ಒಂದು ತರ ಗಮ್ಮತ್ತಾಗಿತ್ತು !

ಮರುದಿನ “ಬಾಡ”ದ ಸಮುದ್ರ ತೀರದಲ್ಲೆ ಮರಳಿನಲ್ಲಿ ತೆರೆಗಳ ಜೊತೆ-ಜೊತೆಯಲ್ಲಿ 3 km ಟ್ರಕ್ಕಿಂಗ್ ಕಾಗಾಲದವರೆಗೆ. ತಿಂದನ್ನ ಕರಗ ಬೇಕಲ್ಲ – ಬೇರೆ ಕೆಲಸವಿಲ್ಲದವರು ಎಂದೆನ್ನಬಹುದೇನೋ ಟ್ರಕ್ಕಿಂಗ್ ನ ಖುಷಿಯ ಬಗ್ಗೆ ಗೊತ್ತಿಲ್ಲದ ಜನರು. ಅವರವರ ಹುಚ್ಚು ಅವರಿಗೆ. ನೀವೇನಂತೀರಿ ?

 

– ಸುರೇಖಾ ಭಟ್ ಭೀಮಗುಳಿ

6 Responses

  1. Niharika says:

    ವಾವ್…. ಸೂಪರ್ ಆಗಿದೆ ನಿಮ್ಮ ಬರಹ.

  2. Sneha Prasanna says:

    ಮೇಡಂ ತುಂಬಾ ಚೆನ್ನಾಗಿದೆ..

  3. RathnaJagadeesh says:

    ಚಂದ ಇತ್ತ್

  4. VINAY KUMAR V says:

    ಸೂಪರ್!
    ಟ್ರೆಕಿಂಗ್ ಮಜಾ ಅನುಭವಿಸಿದವರಿಗೆ ಮಾತ್ರ ಗೊತ್ತು.
    ತುಂಬಾ ಚೆನ್ನಾಗಿದೆ 🙂

  5. savithrisbhat says:

    ನಿಮ್ಮ ಟ್ರೆಕಿಂಗ್ ಅನುಭವ ,ಅದರೊದಿಗೆ ನಿಮ್ಮ ಬಾಲ್ಯದ ನೆನಪುಗಳು ಲೇಖನ ತು೦ಬಾ ಇಸ್ಟವಾಇತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: