ಸುರಹೊನ್ನೆಗೆ ಶುಭಾಶಯ..
ಮೊದಲಿಗೆ ಹೇಮಮಾಲಾ ಬಿ ಅವರಿಗೂ ಸುರಹೊನ್ನೆ ಬಳಗಕ್ಕೂ ಅನಂತ ವಂದನೆಗಳು,
ನಾನು ಸುರಹೊನ್ನೆ ಜಾಲತಾಣವನ್ನು ವೀಕ್ಷಿಸಲು ಶುರುಮಾಡಿದ್ದು ಸುಮಾರು ನಾಲ್ಕು ತಿಂಗಳಿನ ಈಚಿನಿಂದ. ಅದರ ನಂತರ ಕನಿಷ್ಟ ಪಕ್ಷ ಮೂರು ದಿನಕ್ಕೊಂದು ಬಾರಿಯಾದರೂ ಈ ಜಾಲತಾಣಕ್ಕೆ ಭೇಟಿನೀಡುತ್ತೇನೆ. ಬೇರೆ ಬೇರೆ ಉದ್ಯೋಗದಲ್ಲಿರುವ ಮಹಿಳಾಮಣಿಗಳೇ ಈ ಜಾಲತಾಣವನ್ನು ಮುನ್ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ನನ್ನಂಥಹ ಹೊಸ ಬರಹಗಾರರ ಲೇಖನಗಳನ್ನು ಪ್ರಕಟಿಸಿ ತಾವು ನೀಡುವ ಪ್ರೋತ್ಸಾಹವು ಯುವ ಬರಹಗಾರರಿಗೆ ಸ್ಪೂರ್ತಿಯಾಗುತ್ತಿದೆ. ಅದರಲ್ಲೂ ನನ್ನ ಲೇಖನಗಳು ಎಲ್ಲಾ ವರ್ಗದ ಓದುಗರಿಗೆ ರುಚಿಸುವಂಥದಲ್ಲ, ಕೇವಲ ಸೀಮಿತ ವರ್ಗದ ಓದುಗರ ಓದುವಿಕೆಗಾಗಿ ಇರುವಂಥಹ ಲೇಖನಗಳು. ಇಂಥಹ ಲೇಖನಗಳಿಗೆ ತಾವು ಪ್ರತ್ಯೇಕ ಕಾಲಂ ರಚಿಸಿರುವ ತಮ್ಮ ಔದಾರ್ಯಕ್ಕೆ ನಾನು ಚಿರ ಋಣಿ. ಅದಲ್ಲದೆ ನಾವು ಕಳುಹಿಸುವ ಲೇಖನಗಳನ್ನು ಅಪಲೋಡ್ ಮಾಡುವಾಗಿನ ಸಮಸ್ಯೆ ಏನಿರಬಹುದೆಂದು ನನಗೆ ನನ್ನದೇ ಬ್ಲಾಗ್‌ವೊಂದನ್ನು ಇತ್ತೀಚಿಗೆ ತೆರೆದು ಅದಕ್ಕೆ ಲೇಖನಗಳನ್ನು ಅಪ್ಲೋಡ್ ಮಾಡಿದಾಗಲೇ ತಿಳಿದದ್ದು. ಈ ಎಲ್ಲಾ ಸಮಸ್ಯೆಗಳ ಮಧ್ಯೆ ತಾವು ತಮ್ಮ ದೈನಂದಿನ ದಿನಚರಿಯ ಮಧ್ಯೆ ಇಂಥಹ ಸಾಹಸಕ್ಕೆ ಇಳಿದಿದ್ದೇ ಮಹಾನ್ ಸಾಧನೆ. ಬರವಣಿಗೆಯಲ್ಲಿ ಒಂದನೆ ತರಗತಿಯ ವಿದ್ಯಾರ್ಥಿಯಾದ ನನ್ನ ಲೇಖನಗಳನ್ನು ಪ್ರೋತ್ಸಾಹಿಸಿ ಸುರಹೊನ್ನೆ ಕುಟುಂಬದ ಸದಸ್ಯನನ್ನಾಗಿಸಿದಕ್ಕೆ ನಾನು ಆಭಾರಿಯಾಗಿದ್ದೇನೆ.
– ವಿಶ್ವನಾಥ ಪಂಜಿಮೊಗರು