ಗಾತ್ರದಿಂದ ನೋವ ಅಳೆಯಬಹುದೆ..
ಸಾಸಿವೆಗಿಂತಲೂ ಕಿರಿದು
ನುಣುಪುಗೆನ್ನೆಯ ಮೇಲೆ
ಪಡಿಮೂಡಿದ ಮೊಡವೆ
ಕೆಂಪಗೆ ಮುಖ ಊದಿಸಿಕೊಂಡು
ಕುಳಿತ್ತದ್ದು ನೋಡಿದರೆ..
ಥೇಟ್ ಹಿರಿಯತ್ತೆಯದ್ದೇ ಬಿಂಕ.
ಗಾತ್ರದಿಂದ ಯಾವುದನ್ನೂ
ಅಳೆಯಲಾಗುವುದಿಲ್ಲವೆಂಬುದು
ಮನದಟ್ಟಾಗುತ್ತಿದೆ ನಿಚ್ಚಳ.
ಸುಖ ದು;ಖ ಜೊತೆಗೆ
ಕಣ್ಣಿಗೆ ನಿಲುಕದ ನೋವೂ…
ಹುಟ್ಟಡಗಿಸಿಬಿಡುವೆನೆಂದು
ಬೇರು ಸಮೇತ ಚಿವುಟಿದರೆ..
ಪರಿವಾರ ಸಮೇತ ವಕ್ಕರಿಸಿದ್ದು
ಹೋರಾಟಕ್ಕೋ.. ಸಂತೈಸುವಿಕೆಗೋ..
ತೊಳಲಾಡುತ್ತಿದೆ ತರ್ಕಕ್ಕೆ ಸಿಗದೆ
ಮನ.
ಕೀವು ಗಾಯ ಗಂದೆ
ಹಾಲುಗೆನ್ನೆಯ ಮೇಲೆ
ಅಳಿಸಲಾಗದ ಚಂದ್ರ ಕಲೆ
ಕೈಗೂ ಕನ್ನಡಿಗೂ ಅಂಟಿದ ನಂಟಿನ
ನಡುವೆ ಪುಸಕ್ಕನೆ ಜಾರಿದ್ದು
ಬಯಸಿದರೂ ಬಸಿದಿಡಲಾಗದ
ವೇಳೆ.
ಗಟ್ಟಿಗೊಳ್ಳುತ್ತಿದೆ ನಿರ್ಧಾರ
ನಿವಾಳಿಸಲೇ ಬೇಕು ಲೋಪ
ಗಂದ ಚಂದ ಲೇಪ
ನಕಾರಿಲ್ಲದೆ ನಖಗಳನ್ನೆಲ್ಲಾ
ಕತ್ತರಿಸಿಬಿಡಿ
ಮುಖ ನೋಡಿದವರ ಉವಾಚ.
ಕೆಣಕಿದರೆ ಹುಷಾರ್! ಅಂತ
ಮೌನದಲ್ಲೇ ಕೊಟ್ಟ ಪ್ರಶ್ನೆಯ
ಏಟಿಗೆ ಪ್ರತ್ಯುತ್ತರ ಕೊಡಲು
ಕೆದಕುವ ಉಗುರು
ಕತೆ ಹೇಳುವ ಕನ್ನಡಿಯೂ
ಈಗ ಎದುರಿಗಿಲ್ಲ.
ಧಾರಾಳ ಹಗಲು
ಕಳೆಯಬಹುದಾಗಿದೆ ಈಗ
ಮನಬಂದಂತೆ ನಿರಾಳ.
– ಸ್ಮಿತಾ ಅಮೃತರಾಜ್, ಸಂಪಾಜೆ.
nice..
ನೈಸ್
ನೈಸ್ ಸ್ಮಿತಾ
ಚೆನ್ನಾಗಿದೆ…
ಮುಖದಲ್ಲಿ ಮೊಡವೆ ಮೂಡಿದಾಗ ಕಿರಿಕಿರಿ ಅನುಭವಿಸಿ ಗೊಣಗುವವರೇ ಜಾಸ್ತಿ…ಅಂತಹುದರಲ್ಲಿ ನಿಮಗೆ ಮೊಡವೆಯೂ ಕವಿತೆಗೆ ವಸ್ತುವಾಗಿದೆ! ಗ್ರೇಟ್ ಸ್ಮಿತಾ ಅವರೇ …ಕವನ ಸೂಪರ್!
ಮೊಡವೆ ಕವನದ ಹುಟ್ಟಿಗೆ ಕಾರಣವಾದ ಪರಿ ನಿಜಕ್ಕೂ ಅದ್ಬುತ . ತುಂಬಾ ಚೆನ್ನಾಗಿದೇ
interesting…..
ಮೊಡವೆ ಗೊಡವೆಗೆ ಹೋದರೆ? ಖಾತರಿ ಕಣ್ಣೀರ ತೊರೆ….nice Smitha Amrithraj..
ಎಂತಹ!! ಸುಂದರ ರಚನೆ
so sweet and nice