(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಥೈಲ್ಯಾಂಡಿನಲ್ಲಿರುವ ಮೂರೂವರೆ ವಜ್ರಗಳು ಯಾವುವು ಗೊತ್ತೆ? ಮೊದಲನೆಯ ವಜ್ರ – ವಿಶ್ವಖ್ಯಾತ ಕ್ಯಾಬರೆ ಶೋ ‘ಆಲ್ಕಝಾರ್ ಶೋ’. ಎರಡನೆಯ ವಜ್ರ ‘ಚಿನ್ನದ ಬುದ್ಧ’ ಹಾಗೂ ಮೂರನೆಯ ವಜ್ರ ನನಗೆ ಹಕ್ಕಿಯಂತೆ ಹಾರುವ ಅನುಭವ ನೀಡಿದ ‘ಪ್ಯಾರಾಸೈಲಿಂಗ್’. ಇನ್ನರ್ಧ ವಜ್ರ ‘ಥಾಯ್ ಮಸಾಜ್.’
‘ಆಲ್ಕಝಾರ್ ಶೋ’ – ಪಟ್ಟಾಯ ನಗರದ ಪ್ರಖ್ಯಾತ ಶೋ ಆಲ್ಕಝಾರ್ ಶೋ. ಇದೊಂದು ವಿಶ್ವವಿಖ್ಯಾತ ಕ್ಯಾಬರೆ ಶೋ. ಇದರಲ್ಲಿ ನೂರಾರು ಕಲಾವಿದರು ಭಾಗವಹಿಸುತ್ತಾರೆ. ಎಲ್ಲಾ ಸುಂದರ ಕಲಾವಿದರೂ ಮಂಗಳಮುಖಿಯರು ಅಂದರೆ ಟ್ರಾನ್ಸ್ ಜೆಂಡರ್. 1981 ರಲ್ಲಿ ಆರಂಭವಾದ ಈ ಶೋ, ಅದ್ಭುತವಾದ ಸಂಗೀತ, ನೃತ್ಯ ಮತ್ತು ನಾಟಕದ ಮಧುರ ಸಂಗಮ. ಇಲ್ಲಿ ಅತ್ಯಾಧುನಿಕ ಧ್ವನಿ ವ್ಯವಸ್ಥೆ ಹಾಗೂ ಬೆಳಕಿನ ವ್ಯವಸ್ಥೆ ಇದ್ದು ಪ್ರವಾಸಿಗರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದೆ. ಕ್ಯಾಬರೆ ಶೋ ಎಂದೇ ಪ್ರಖ್ಯಾತಿ ಹೊಂದಿದ್ದರೂ ಅಶ್ಲೀಲತೆಯ ಸೋಂಕು ಇಲ್ಲದ ಭವ್ಯವಾದ ಸಾಂಸ್ಕೃತಿಕ ಶೋ. ಇಲ್ಲಿ ನಡೆಯುವ ನೃತ್ಯ ರೂಪಕಗಳು ಕೇವಲ ಥಾಯ್ ದೇಶದ ಸಂಸ್ಕೃತಿಯನ್ನು ಬಿಂಬಿಸದೆ ವಿವಿಧ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳು ಈ ಶೋನಲ್ಲಿ ಸೇರಿವೆ. ಕಲಾವಿದರು ಥಾಯ್ ಸಾಂಪ್ರದಾಯಿಕ ನೃತ್ಯ, ಚೈನೀಸ್ ಮತ್ತು ಪರ್ಷಿಯನ್ ನೃತ್ಯಗಳು, ಪಾಶ್ಚಿಮಾತ್ಯ ಪಾಪ್ ಸಂಗೀತ ಹಾಗೂ ಭಾರತೀಯ ಬಾಲಿವುಡ್ ಶೈಲಿಯ ನೃತ್ಯಗಳನ್ನೂ ಪ್ರಸ್ತುತ ಪಡಿಸುತ್ತಾರೆ. ಈ ಥಿಯೇಟರ್ ನಲ್ಲಿ 1200 ಪ್ರೇಕ್ಷಕರು ಕುಳಿತು ನೃತ್ಯಗಳನ್ನು ವೀಕ್ಷಿಸಬಹುದು.
ಈ ಶೋನಲ್ಲಿ ಭಾಗವಹಿಸುವ ಕಲಾವಿದರು ತಮ್ಮ ಅದ್ಭುತವಾದ ವೇಷಭೂಷಣಗಳಿಗೆ ಹೆಸರಾಗಿದ್ದಾರೆ. ಬಣ್ಣಬಣ್ಣದ ರೆಕ್ಕೆಗಳು, ಹೊಳೆಯುವ ಉಡುಪುಗಳು, ವಿಶಿಷ್ಟ ಅಲಂಕಾರಗಳು ನಮ್ಮನ್ನು ಮಂತ್ರಮುಗ್ಧಗೊಳಿಸಿದವು. ಈ ಶೋನಲ್ಲಿ ಪಾಲ್ಗೊಳ್ಳುವ ನಾನ್ನೂರಕ್ಕೂ ಹೆಚ್ಚು ಕಲಾವಿದರು ತಮ್ಮ ಅದ್ಭುತ ಅಭಿನಯ ಮತ್ತು ಸೌಂದರ್ಯಕ್ಕೆ ಹೆಸರಾದವರು. ಶೋ ಮುಗಿದ ನಂತರ ಕಲಾವಿದರು ಥಿಯೇಟರ್‌ನ ಹೊರಗೆ ಬಂದು ನಿಂತು ನಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಿದ್ಧ. ಫೋಟೋ ತೆಗೆಸಿಕೊಂಡ ನಂತರ ಟಿಪ್ಸ್ ಕೊಡುವುದನ್ನು ಮರೆತೀರಾ ಜೋಕೆ.
ಹದಿನೈದು ವರ್ಷಗಳ ಹಿಂದೆ ಯೂರೋಪ್ ಪ್ರವಾಸ ಹೋದಾಗ ಪ್ಯಾರಿಸ್ಸಿನ ‘ಲಿಡೋ ಕ್ಯಾಬರೆ ಶೋ’ ನೋಡಲು ಹೋಗಿರಲಿಲ್ಲ. ಆ ಶೋಗೆ ಪ್ರತ್ಯೆಕವಾಗಿ ನೂರು ಯೂರೋ ಅಂದರೆ 11,000 ರೂಗಳನ್ನು ಕೊಡಿ ಎಂದು ನಮ್ಮ ತಂಡದ ಮ್ಯಾನೇಜರ್ ಕೇಳಿದಾಗ, ನಮಗೆ ಕ್ಯಾಬರೆ ನೋಡಲು ಮುಜುಗರ ಎನ್ನಿಸಿ, ಟಿಕೆಟ್ ಕೊಳ್ಳಲಿಲ್ಲ. ಕ್ಯಾಬರೆ ಎಂದಾಕ್ಷಣ, ನನಗೆ ನೆನಪಾದದ್ದು ಅಂದಿನ ಚಲನಚಿತ್ರಗಳಲ್ಲಿ ಅರೆನಗ್ನರಾಗಿ ಕ್ಯಾಬರೆ ನೃತ್ಯ ಮಾಡುತ್ತಿದ್ದ ‘ಹೆಲೆನ್’, ‘ಜ್ಯೋತಿಲಕ್ಷ್ಮಿ’ ಮುಂತಾದವರು. ಅಂದು ಮಡಿವಂತಿಕೆಯ ಮುಸುಕು ಹೊದ್ದಿದ್ದ ನಮಗೆ ಕ್ಯಾಬರೆ ಎಂದಾಕ್ಷಣ ಸಂಕೋಚ, ನಾಚಿಕೆ, ಗಾಬರಿ ಎಲ್ಲಾ ಏಕಕಾಲದಲ್ಲಿ ಉಂಟಾಗಿದ್ದವು. ಆದರಿಂದು ಥೈಲ್ಯಾಂಡಿನ ಸಮುದ್ರ ತೀರಗಳಲ್ಲಿ ಇಣುಕಿದ ಮೇಲೆ, ಅಲ್ಲಿ ಈಜುಡುಗೆ ಧರಿಸಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಪಾಶ್ಚಿಮಾತ್ಯ ಹೆಣ್ಣುಗಳನ್ನು ಕಂಡಮೇಲೆ, ಕ್ಯಾಬರೆ ನೃತ್ಯಗಳು ಯಾವುದೇ ಮುಜುಗರವನ್ನು ಉಂಟುಮಾಡಲಿಲ್ಲ.
ಚಿನ್ನದ ಬುದ್ಧ – ಬೌದ್ಧ ಧರ್ಮದ ಅನುಯಾಯಿಗಳೇ ಹೆಚ್ಚಿರುವ ಈ ನಗರದಲ್ಲಿ ಮತ್ತೊಂದು ಅದ್ಭುತ ನಮಗಾಗಿ ಕಾಯುತ್ತಿತ್ತು. ಅಪ್ಪಟ ಚಿನ್ನದ ಬುದ್ದನ ಪ್ರತಿಮೆಯು ಬ್ಯಾಂಕಾಂಕಿನ ವಾಟ್ ಟ್ರೈಮಿಟ್ ಎಂಬ ದೇವಸ್ಥಾನದಲ್ಲಿದೆ. ಈ ದೇಗುಲವು ಚೈನಾಟೌನ್ ಹತ್ತಿರದಲ್ಲಿದ್ದು, ಇದು ವಿಶ್ವದ ಅತಿ ದೊಡ್ಡ ಅಪ್ಪಟ ಬಂಗಾರದ ಪ್ರತಿಮೆ ಆಗಿದೆ. ಈ ವಿಗ್ರಹವು ಸುಮಾರು ಐದೂವರೆ ಟನ್ ತೂಕವಿದ್ದು ಹದಿನೈದು ಅಡಿ ಎತ್ತರವಿದೆ. ಅಬ್ಬಾ, ಚಿನ್ನದ ರೇಟು ಗಗನೆಕ್ಕೇರಿರುವ ಈ ಕಾಲದಲ್ಲಿ ಐದೂವರೆ ಟನ್ ಅಂದರೆ ಐದು ಸಾವಿರದ ಐನೂರು ಕೆ.ಜಿ. ತೂಕದ ಚಿನ್ನದ ಬುದ್ಧನ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಹೊರಟೆವು. ಈ ಪ್ರತಿಮೆಯನ್ನು ‘ಫ್ರಾ ಮಹಾ ಮಂದೋಪ್’ ಎಂಬ ಭವ್ಯವಾದ ನಾಲ್ಕು ಅಂತಸ್ತಿನ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಾಲು ಬಿಳುಪಿನ ಮಾರ್ಬಲ್‌ನಿಂದಲೇ ನಿರ್ಮಿಸಲಾಗಿರುವ ದೇಗುಲದ ರಚನೆ ಅತ್ಯಂತ ಆಕರ್ಷಕವಾಗಿದೆ. ಪ್ರವೇಶ ದ್ವಾರದಲ್ಲಿ ಕಾವಲು ಕಾಯುತ್ತಿರುವ ಸಿಂಹಗಳು ಗಾಂಭೀರ್ಯದಿಂದ ಕುಳಿತಿದ್ದು, ‘ನೋಡಿ ನಮ್ಮ ಸೊಬಗನ್ನು’ ಎಂದು ಹೇಳುವಂತೆ ಭಾಸವಾಗುತ್ತದೆ. ಎರಡನೆಯ ಅಂತಸ್ತಿನಲ್ಲಿ ವಲಸಿಗರಾಗಿ ಬಂದ ಚೀನೀಯರ ಇತಿಹಾಸ, ಅವರು ಮಾಡುತ್ತಿದ್ದ ಚಿನ್ನ ಮತ್ತು ರೇಷ್ಮೆಯ ವ್ಯಾಪಾರ, ವಹಿವಾಟು ಹಾಗೂ ಅವರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಗೋಡೆಗಳ ಮೇಲೆ ರಚಿಸಲಾಗಿದೆ. ಮೂರನೆಯ ಅಂತಸ್ತಿನಲ್ಲಿ ಈ ಚಿನ್ನದ ಬುದ್ಧ ವಿಗ್ರಹದ ವಿಶೇಷತೆಗಳು, ಇದನ್ನು ನಿರ್ಮಾಣ ಮಾಡಿದ ರಾಜವಂಶಸ್ಥರ ಇತಿಹಾಸವನ್ನು ನಮ್ಮ ಮುಂದಿಡಲಾಗಿದೆ. ದೇಗುಲದ ನೆಲ ಅಂತಸ್ತಿನಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಇದ್ದವು.
ಈ ವಿಗ್ರಹವನ್ನು ಸುಮಾರು ಏಳು ನೂರು ವರ್ಷಗಳ ಹಿಂದೆ ಸುಖೋಥೈ ರಾಜವಂಶಸ್ಥರಿಂದ ನಿರ್ಮಿಸಲಾಗಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಇದು ಥೈಲ್ಯಾಂಡಿನ ಸುಖೋಥೈ ಕಾಲದ ವಾಸ್ತುಶಿಲ್ಪದ ಮಾದರಿಯಲ್ಲಿದೆ. ಅಬ್ಬಾ ಐದೂವರೆ ಟನ್ ಇರುವ ಚಿನ್ನದ ವಿಗ್ರಹವನ್ನು ನಿರ್ಮಾಣ ಮಾಡಿದ ರಾಜರು ಅದೆಷ್ಟು ಸಂಪತ್ತನ್ನು ಹೊಂದಿದ್ದಿರಬಹುದು ಎಂದು ಊಹೆ ಮಾಡಲೂ ಅಸಾಧ್ಯ. ಈ ವಿಗ್ರಹವನ್ನು ಶತ್ರುಗಳಿಂದ ರಕ್ಷಿಸಲು ಬಹಳ ಕಾಲದವರೆಗೆ ಸಿಮೆಂಟ್ ಪ್ಲಾಸ್ಟರ್‌ನಿಂದ ಮುಚ್ಚಿಡಲಾಗಿತ್ತು. 1955 ರಲ್ಲಿ ಇದನ್ನು ಹೊಸ ದೇಗುಲಕ್ಕೆ ಸ್ಥಳಾಂತರಿಸುವಾಗ ಆಕಸ್ಮಿಕವಾಗಿ ಪ್ಲಾಸ್ಟರ್ ಒಡೆದು ಒಳಗಿದ್ದ ಹೊಳೆಯುವ ಬಂಗಾರದ ವಿಗ್ರಹ ಕಂಡಾಗ ಎಲ್ಲರೂ ಬೆಚ್ಚಿ ಬಿದ್ದರು. ಥಳ ಥಳ ಹೊಳೆಯುವ ಹೊನ್ನಿನ ಬುದ್ಧನ ವಿಗ್ರಹವನ್ನು ಭವ್ಯವಾದ ದೇಗುಲದಲ್ಲಿ ಪ್ರತಿಷ್ಠಾಪಿಸಿದರು. ಇಂದು ಈ ದೇಗುಲ ಬೌದ್ಧರ ಉಪಾಸನಾ ಸ್ಥಳವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವೂ ಆಗಿದೆ.
ನಾವು ಬುದ್ಧನ ವಿಗ್ರಹದ ಮುಂದೆ ನಿಂತು ಭಕ್ತಿಭಾವದಿಂದ ವಂದಿಸುತ್ತಾ ಪ್ರದಕ್ಷಿಣೆ ಹಾಕಿದೆವು. ಬುದ್ಧನ ವಿಗ್ರಹದ ಸುತ್ತಲೂ ಪವಿತ್ರವಾದ ಜಲ ತುಂಬಿದ ಬಟ್ಟಲುಗಳನ್ನು ಇಡಲಾಗಿತ್ತು. ಬೌದ್ಧ ಸನ್ಯಾಸಿಗಳು ದೇಗುಲದ ಸುತ್ತಲಿದ್ದ ಗಂಟೆಗಳನ್ನು ತೂಗುತ್ತಾ, ಮಂತ್ರಗಳನ್ನು ಪಠಿಸುತ್ತಾ ಮಂದಿರದ ಸುತ್ತ ಪ್ರದಕ್ಷಣೆ ಹಾಕುತ್ತಿದ್ದರು. ಶಾಂತ ಮುಖಭಾವವುಳ್ಳ ಈ ಪ್ರತಿಮೆಯನ್ನು ನೋಡುತ್ತಾ ನಿಂತ ನಮ್ಮ ಮನದಲ್ಲಿ ಸಂತಸ, ನೆಮ್ಮದಿಯ ಅಲೆಗಳು ಚಿಮ್ಮುತ್ತಿದ್ದವು. ಮಲೇಷ್ಯಾ ಹಾಗೂ ಥೈಲ್ಯಾಂಡಿನಲ್ಲಿ ಇರುವ ಭವ್ಯವಾದ ಬುದ್ಧನ ಮೂರ್ತಿಗಳನ್ನು ನೋಡುವುದೇ ಒಂದು ದಿವ್ಯವಾದ ಅನುಭೂತಿ.
ಪ್ಯಾರಾಸೈಲಿಂಗ್ – ಪ್ರವಾಸಿಗರನ್ನು ಆಕರ್ಷಿಸಲು ಹಲವು ಬಗೆಯ ಸಾಹಸಮಯ ಜಲಕ್ರೀಡೆಗಳನ್ನು ಆಯೋಜಿಸಿರುವ ರಾಷ್ಟ್ರ ಥೈಲ್ಯಾಂಡ್. ನಮ್ಮನ್ನೆಲ್ಲಾ ಒಂದು ಸ್ಪೀಡ್ ಬೋಟಿನ ಮೂಲಕ ಒಂದು ಹಡಗಿನ ಬಳಿ ಕರೆದೊಯ್ದರು. ನಮ್ಮ ಗುಂಪಿನಲ್ಲಿದ್ದ ಸಾವಿತ್ರಿಯವರು ಸಮುದ್ರ ನಡಿಗೆ ಮಾಡಲು ತಯಾರಾಗಿ ಹೊರಟರು. ಒಂದಿಬ್ಬರು ಸ್ನಾರ್ಕ್ಲಿಂಗ್ ಮಾಡಲು ಸಿದ್ದರಾದರು. ನಾನು ಯಜಮಾನರ ಜೊತೆ ಎಲ್ಲರನ್ನೂ ನೋಡುತ್ತಾ ಡೆಕ್ ಮೇಲೆ ಕುಳಿತೆ. ನಮ್ಮ ಮುಂದೆ ಪ್ಯಾರಾಸೈಲಿಂಗ್ ಎಂಬ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದ ಕೆಲವರು ಕ್ಯೂನಲ್ಲಿ ನಿಂತಿದ್ದರು. ನಾನೂ ಆಸೆಗಣ್ಣಿನಿಂದ ಅವರನ್ನೇ ನೋಡುತ್ತಾ ಇದ್ದೆ. ಅದರ ಟಿಕೆಟ್ ಬೆಲೆ 2,500 ರೂಗಳು. ನಮ್ಮ ತಂಡದ ನಾಲ್ಕು ಜನ ಪ್ಯಾರಾಸೈಲಿಂಗ್ ಮಾಡಿ, ಉತ್ಸಾಹದಿಂದ ಅವರ ಅನುಭವ ಹೇಳುತ್ತಿದ್ದಾಗ ನಾನು ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದೆ. ಆಗ ನನ್ನ ಅವಸ್ಥೆ ನೋಡಿದ ನನ್ನ ಪತಿ ‘ನಿನಗೆ ಪ್ಯಾರಾಸೈಲಿಂಗ್ ಮಾಡಲು ಆಸೆಯಿದ್ದರೆ ಹೋಗು’ ಎಂದರು. ಅದೇಕ್ಷಣ ನಾನು ಎದ್ದು ನಮ್ಮ ಪ್ರವಾಸಿ ತಂಡದವರೊಲ್ಲಬ್ಬರಾದ ನಟರಾಜ್ ಬಳಿ ಸಾಗಿ ‘ಥೈಲ್ಯಾಂಡ್ ಕರೆನ್ಸಿ ಇದ್ದರೆ ಕೊಡಿ’ ಎಂದು ಕೇಳಿದೆ. ಅವರು, ‘ಇಲ್ಲಿ ಭಾರತದ ರೂಪಾಯಿಗಳನ್ನೂ ತೆಗೆದು ಕೊಳ್ಳುತ್ತಾರೆ. ನೀವು ಯು.ಪಿ.ಐ. ಮೂಲಕ ಇವರಿಗೆ ಹಣ ಕಳುಹಿಸಬಹುದು.’ ಎಂದರು. ನನ್ನ ಮೊಬೈಲಿನಲ್ಲಿ ರೋಮಿಂಗ್ ಸೌಲಭ್ಯ ಇರಲಿಲ್ಲವಾದ್ದರಿಂದ, ಟಿಕೆಟ್‌ಗೆ ಹಣ ಕಳುಹಿಸಲು ಸಾಧ್ಯವಾಗಲಿಲ್ಲ. ಸ್ನೇಹಮಯಿಯಾಗಿದ್ದ ನಟರಾಜ್, ‘ಮೇಡಂ, ನಿಮ್ಮ ಟಿಕೆಟ್‌ಗೆ ಹಣವನ್ನು ನಾನು ಕಳುಹಿಸುತ್ತೇನೆ. ನೀವು ನನಗೆ ಕ್ಯಾಷ್ ಕೊಡಿ’ ಎಂದಾಗ ನನಗೆ ಸ್ವರ್ಗ ಮೂರೇ ಗೇಣು. ಆ ಹಡಗಿನ ಡೆಕ್ ಮೇಲಿದ್ದವರು ನನಗೆ ಪ್ಯಾರಾಸೈಲಿಂಗ್‌ಗೆ ಅವಶ್ಯವಾದ ಉಡುಗೆ ತೊಡಿಸಿದರು. ಆ ಜಾಕೆಟ್ ಬಿಗಿಯಾಗಿ ನನ್ನ ಕತ್ತು, ಬೆನ್ನು ನೋಯುತ್ತಿದ್ದವು. ನಾನು ಸರತಿ ಸಾಲಿನಲ್ಲಿ ನಿಂತು, ನನ್ನ ಪಾಳಿಗೆ ಕಾಯುವಾಗ ಮನಸ್ಸು ಹೇಳುತ್ತಿತ್ತು, ‘ನಿನಗಾಗಲೇ 72 ವರ್ಷಗಳು, ವಯಸ್ಸಾಗಿದೆ, ಈ ಸಾಹಸ ಬೇಕೇ?’ ‘ಇರಲಿ, ಯೋಗ ಮಾಡುತ್ತೀಯ, ಆರೋಗ್ಯವಾಗಿದ್ದೀಯ, ಹೋಗು, ಈಗ ಹಿಂದೆ ಸರಿಯಬೇಡ’ ಎಂದು ಇನ್ನೊಂದು ಮನಸ್ಸು ಹೇಳುತ್ತಿತ್ತು. ಅಷ್ಟರಲ್ಲಿ ನನ್ನ ಸರತಿ ಬಂದೇ ಬಿಟ್ಟಿತು. ನನ್ನ ಕೈ ಕಾಲುಗಳಿಗೆ ಆ ಪ್ಯಾರಾಸೈಲಿಂಗ್‌ನ ಹಗ್ಗಗಳನ್ನು ಜೋಡಿಸಿದರು. ನಾನು ನಿಧಾನವಾಗಿ ಜಾಗಿಂಗ್ ಮಾಡುತ್ತಲೇ ಇದ್ದೆ. ತರಬೇತುದಾರರಲ್ಲಿ ಒಬ್ಬ ಚಿಂಪಾಂಜಿಯ ಹಾಗೆ ಕುಣಿಯುತ್ತಾ ನನ್ನಲ್ಲಿ ಉಲ್ಲಾಸ ಮೂಡಿಸಿದ, ‘ಹಡಗಿನ ತುದಿಗೆ ಹೋದಾಗ, ಜೋರಾಗಿ ಓಡಬೇಕು’ ಎಂದು ಸೂಚನೆ ನೀಡಿದ. ಆ ವಿಶಾಲವಾದ ಸಮುದ್ರದ ಮೇಲೆ ಹೇಗೆ ತಾನೆ ಓಡಲಿ ಎಂಬ ಗೊಂದಲ ಮನದ ತುಂಬಾ. ಜಾಗಿಂಗ್ ಮಾಡುತ್ತಲೇ ಹಡಗಿನ ತುದಿಗೆ ಬಂದಾಗ, ಸಿಬ್ಬಂದಿ ವರ್ಗದವರು ನನ್ನನ್ನು ಜೋರಾಗಿ ಸಮುದ್ರದತ್ತ ತಳ್ಳಿದರು. ‘ಅಯ್ಯೋ, ನಾನು ಸಮುದ್ರದಲ್ಲಿ ಮುಳುಗಿದೆ’ ಎಂಬ ಭಾವ ಮೂಡುವಷ್ಟರಲ್ಲಿ ಆ ಪ್ಯಾರಾಚೂಟ್ ಗಾಳಿಗೆ ತೆರೆದುಕೊಳ್ಳುತ್ತಾ ನನ್ನನ್ನು ಹೂವಿನಂತೆ ಎತ್ತಿ ಹಿಡಿದು ಮೇಲಕ್ಕೆ ಕರದೊಯ್ದಿತ್ತು. ನಾನು ಹಕ್ಕಿಯಂತೆ ಹಾರಲು ಆರಂಭಿಸಿದ್ದೆ, ನನ್ನ ಕೆಳಗಿತ್ತು ವಿಶಾಲವಾದ ಸಮುದ್ರ, ಸಂಭ್ರಮದಿಂದ ನನ್ನವರ ಕಡೆ ತಿರುಗಿ ಕೈ ಬೀಸಿದೆ. ಹಡಗಿನಿಂದ ದೂರವಾಗುತ್ತಿದ್ದಂತೆ ಒಂದು ಕ್ಷಣ ಎದೆಬಡಿತ ಹೆಚ್ಚಾದ ಅನುಭವ. ಆದರೆ ಸಮುದ್ರದ ನೀಲವರ್ಣ, ಅದರ ಮೇಲೆ ಹೊಳೆಯುವ ಸೂರ್ಯ ಕಿರಣಗಳ ಅದ್ಭುತ ದೃಶ್ಯ. ಭೂಮಿಯ ಮೇಲೆ ಕೇಳಿ ಬರುತ್ತಿದ್ದ ಗದ್ದಲಕ್ಕಿಂತ ಭಿನ್ನವಾಗಿ ಆಗಸದಲ್ಲಿ ಸುಳಿಯುವ ವಾಯುವಿನ ಪಿಸು ಮಾತು ಕೇಳಿ ಬರುತ್ತಿತ್ತು. ನಾನೇ ಅದೃಷ್ಟವಂತೆ, ಆಗಸದಲ್ಲಿ ಹಕ್ಕಿಯಂತೆ ಹಾರುತ್ತಾ ಭೂಮಿಯ ಮೇಲಿದ್ದ ಬೆಟ್ಟ ಗುಡ್ಡಗಳನ್ನು, ನನ್ನ ಕೆಳಗೆ ಹರಡಿದ್ದ ವಿಶಾಲವಾದ ನೀಲವಾದ ಸಮುದ್ರವನ್ನು ನೋಡುವ ಅದೃಷ್ಟ ಅಂದು ನನ್ನದಾಗಿತ್ತು. ಪ್ಯಾರಾಸೈಲಿಂಗ್ ತುಂಬಾ ಸುರಕ್ಷಿತವಾದ ಜಲಕ್ರೀಡೆ, ಎಲ್ಲಾ ವಯಸ್ಸಿನವರೂ ಈ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಬಹುದು. ಹತ್ತರಿಂದ ಹದಿನೈದು ನಿಮಿಷ ಕಳೆದಿರಬಹುದು, ಆಗಸದಲ್ಲಿ ಹಕ್ಕಿಯಂತೆ ತೇಲುತ್ತಾ, ದೂರ ಬಹುದೂರ ಸಾಗಿದವಳನ್ನು ಮತ್ತೆ ಹಡಗಿನತ್ತ ಎಳೆತರಲಾಯಿತು. ಇಳಿಯುವಾಗಲೂ ಜೋಪಾನ, ನೆಲ ತಲುಪುವ ಕ್ಷಣದಲ್ಲಿ ಒಂದೆರೆಡು ಹೆಜ್ಜೆ ಓಡಲು ಸಿದ್ದರಾಗಬೇಕು, ಇಲ್ಲವಾದರೆ ಮುಗ್ಗರಿಸಿ ಬೀಳುವುದು ಖಂಡಿತ.
ಪ್ಯಾರಾಸೈಲಿಂಗ್‌ನ ಮತ್ತೊಂದು ಹಂತ ಡಿಪ್ಪಿಂಗ್ – ಆಗಸದಲ್ಲಿ ಹಾರುತ್ತಿರುವಾಗ ನಿಮ್ಮನ್ನು ನಿಧಾನವಾಗಿ ಕೆಳಗಿಳಿಸಿ ಕಾಲುಗಳು ನೀರನ್ನು ಸ್ಪರ್ಶಿಸುವಂತೆ ಮಾಡುತ್ತಾರೆ. ತಕ್ಷಣವೇ ಮತ್ತೆ ಆಕಾಶದತ್ತ ಮೇಲೆ ಎಳೆಯುತ್ತಾರೆ. ಇದು ಅತ್ಯಂತ ಖುಷಿ ನೀಡುವ ಅನುಭವ. ನನಗಂತೂ ಪ್ಯಾರಾಸೈಲಿಂಗ್ ಅತ್ಯಂತ ರೋಮಾಂಚನಕಾರಿ ಅನುಭವ ನೀಡಿತ್ತು. ಇದು ನಿಸರ್ಗದ ಸೌಂದರ್ಯವನ್ನು ಸವಿಯಲು ಬಯಸುವವರಿಗೆ ಒಂದು ಅದ್ಭುತ ಅನುಭವ.
ಪಟ್ಟಾಯ ಕಡಲತೀರಕ್ಕೆ ಹೋದವರಿಗೆ ಮತ್ತಷ್ಟು ಮನರಂಜನೆ ಲಭ್ಯ. ‘ಬನಾನಾ ರೈಡ್’ಅಂದರೆ ಬಾಳೆಹಣ್ಣಿವ ಆಕಾರದ ಉದ್ದನೆಯ ಬೋಟ್‌ನಲ್ಲಿ ಇಬ್ಬರು ಅಥವಾ ಮೂವರು ಕುಳಿತು ಹುಟ್ಟು ಹಾಕುತ್ತಾ ಸಾಗುವುದು. ಸಮುದ್ರದ ಅಲೆಗಳು ಅಪ್ಪಳಿಸಿದಾಗ ಈ ಬೋಟು ಮುಗುಚಿ ಬೀಳುವುದೂ ಉಂಟು. ಮತ್ತೆ ಬೋಟನ್ನೇರಿ ಕುಳಿತು ಸಾಗುವ ಕ್ಷಣ ಮಜವೋ ಮಜ. ಹೀಗೆ ಏಳುತ್ತಾ ಬೀಳುತ್ತಾ ಬನಾನ ಬೋಟ್‌ನಲ್ಲಿ ಕುಳಿತು ಒಂದು ಸುತ್ತು ಹಾಕಿದೆವು. ಹದಿಹರೆಯದವರು ಸ್ಪೀಡ್‌ಬೋಟ್‌ನಲ್ಲಿ ಕುಳಿತು ರೊಯ್ಯೆಂದು ಅಲೆಗಳನ್ನು ಹೊಡೆದೆಬ್ಬಿಸುತ್ತಾ ಸಾಗಿದರು. ಸಾಹಸಿಗಳು ಮೋಟಾರ್ ಬೋಟ್‌ನಲ್ಲಿ ನಿಂತೇ ಸಾಗಿದ್ದು ಅಚ್ಚರಿ ಮೂಡಿಸಿತ್ತು.
ಥೈಲ್ಯಾಂಡ್ ಪ್ರವಾಸವು ಒಂದು ಮರೆಯಲಾಗದ ಸುಂದರ ಅನುಭವ. ಇಲ್ಲಿನ ಬೌದ್ಧ ದೇಗುಲಗಳು ಇವರ ಶ್ರೀಮಂತ ಸಂಸ್ಕೃತಿಯನ್ನು ತೋರಿಸುತ್ತವೆ. ದೇಗುಲದ ಶಾಂತವಾತಾವರಣ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಇಲ್ಲಿನ ನೀಲಿ ಬಣ್ಣದ ಸಮುದ್ರ ಮತ್ತು ಬಿಳಿ ಮರಳಿನ ತೀರಗಳು ಸ್ವರ್ಗದಂತೆ ಭಾಸವಾಗುತ್ತವೆ. ನೊಂಗ್ ನೂಚ್ ಉದ್ಯಾನವನ ಪ್ರಕೃತಿಪ್ರೇಮಿಗಳಿಗೆ ಒಂದು ಹಬ್ಬವಿದ್ದಂತೆ. ಸಫಾರಿ ವರ್ಲ್ಡ್ನಲ್ಲಿ ಆಯೋಜಿಸಲಾಗಿರುವ ಪ್ರಾಣಿಗಳ ಪ್ರದರ್ಶನಗಳು ಪ್ರವಾಸಿಗರಿಗೆ ಮನರಂಜನೆ ನೀಡುತ್ತವೆ. ನಗರದ ಯೋಜನೆ ಮತ್ತು ಆಧುನಿಕ ಸೌಲಭ್ಯಗಳು ಇಲ್ಲಿನ ಆಡಳಿತಾತ್ಮಕ ಶಿಸ್ತನ್ನು ತೋರಿಸುತ್ತದೆ. ಥೈಲ್ಯಾಂಡ್ ಪ್ರವಾಸವು ಕೇವಲ ಒಂದು ಪ್ರವಾಸವಾಗಿ ಉಳಿಯದೆ ಹೊಸ ಸಂಸ್ಕೃತಿಯನ್ನು ಅರಿಯುವ ಮತ್ತು ಬದುಕಿನ ಏಕತಾನತೆಯಿಂದ ಹೊರಬಂದು ಮರುಚೈತನ್ಯ ಪಡೆಯುವ ಸಾಧನ.
ಕೊನೆಯ ಮಾತು – ಪ್ರವಾಸ ಎಂದಾಕ್ಷಣ ಹೆಣ್ಣು ಮಕ್ಕಳಿಗೆ ಶಾಪಿಂಗ್ ನೆನಪಾಗುವುದು ಸಹಜ ಅಲ್ಲವೇ? ಸಿಂಗಪೂರ್‌ನಲ್ಲಿ ವಸ್ತುಗಳ ಬೆಲೆ ಹೆಚ್ಚು, ಮಲೇಷ್ಯಾದಲ್ಲಿ ಸ್ವಲ್ಪ ಕಡಿಮೆ, ಆದರೆ ಥೈಲ್ಯಾಂಡಿನಲ್ಲಿ ಎಲ್ಲಾ ವಸ್ತುಗಳೂ ಕಡಿಮೆ ದರದಲ್ಲಿ ಸಿಗುವುದು ಎಂಬ ಭಾವ ನಮ್ಮಲ್ಲಿ ಮೂಡಿತ್ತು. ಕಾರಣ ಗೊತ್ತೆ ಒಂದು ಸಿಂಗಾಪುರ್ ಡಾಲರ್‌ಗೆ 64 ರೂಗಳು, ಮಲೇಶಿಯಾದ ಕರೆನ್ಸಿ ಒಂದು ರಿಂಗಿತ್‌ಗೆ 24 ರೂಗಳು, ಹಾಗೂ ಥೈಲ್ಯಾಂಡಿನ ಒಂದು ಬಾತ್‌ಗೆ ಕೇವಲ ಎರಡೂವರೆ ರೂಗಳು. ಒಂದು ವಸ್ತುವಿನ ಬೆಲೆ ಐದು ಡಾಲರ್ ಎಂದು ಸಿಂಗಪೂರ್‌ನಲ್ಲಿ ಹೇಳಿದಾಕ್ಷಣ ನಮ್ಮ ಮನಸ್ಸು ಎಷ್ಟು ರೂಗಳು ಎಂದು ಲೆಕ್ಕ ಹಾಕಿ ‘ಅಯ್ಯೋ, 320 ರೂಗಳಾಗುತ್ತೆ, ದುಬಾರಿಯಾಯಿತು’ ಎಂದೆನ್ನಿಸುತ್ತಿತ್ತು. ಅದೇ ವಸ್ತುವಿನ ಬೆಲೆಯನ್ನು ಐದು ರಿಂಗಿತ್ ಎಂದು ಮಲೇಷ್ಯಾದಲ್ಲಿ ಹೇಳಿದಾಗ ‘ನಾವು 120 ರೂಗಳಾಯಿತು, ಬೇಡ ಬಿಡು’ ಎಂದುಕೊಂಡೆವು. ಇನ್ನು ಥೈಲ್ಯಾಂಡಿಗೆ ಬಂದಾಗ ವಸ್ತುವಿನ ಬೆಲೆ ‘ಐದು ಬಾತ್’ ಎಂದಾಗ, ಹನ್ನೆರೆಡೂವರೆ ರೂಗಳು ಎಂದು ಲೆಕ್ಕ ಹಾಕಿದವರು ಖುಷಿಯಾಗಿ ಶಾಪಿಂಗ್ ಮಾಡಿದೆವು. ಆದರೂ ಚೌಕಾಸಿ ಮಾಡುವುದನ್ನು ಬಿಡಲಿಲ್ಲ, ಒಮ್ಮೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವಾಗ, ‘ನೀವು ಭಾರತೀಯರಲ್ಲವೆ? ಚೌಕಾಸಿ ಮಾಡಿ ಮಾಡಿ ನಮ್ಮ ತಲೆ ತಿನ್ನುತ್ತೀರಾ’ ಎಂದಾಗ ಕೋಪ ನೆತ್ತಿಗೇರಿತ್ತು, ಆದರೆ ವ್ಯಾಪಾರಿಯು ಸತ್ಯವನ್ನೇ ಹೇಳುತ್ತಿದ್ದ.
ಇನ್ನು ಸಮಯದ ವ್ಯತ್ಯಾಸ, ಸಿಂಗಪೂರ್ ಮತ್ತು ಮಲೇಷ್ಯಾದಲ್ಲಿ ನಮಗಿಂತ 2.30 ಗಂಟೆ ಮುಂದೆ ಅವರ ಕಾಲ, ಆದರೆ ಥೈಲ್ಯಾಂಡಿನವರು ನಮಗಿಂತ ಒಂದೂವರೆ ಗಂಟೆ ಮುಂದೆ. ಪ್ರವಾಸಕ್ಕೆ ಹೋದವರು ಮನೆಗೆ ಕರೆ ಮಾಡಲು ಈ ಸಮಯವನ್ನು ಲೆಕ್ಕ ಹಾಕಿಯೇ ಕರೆ ಮಾಡಬೇಕು. ಇಲ್ಲವಾದರೆ ನಾವು ಅಂದಿನ ಪ್ರವಾಸ ಮುಗಿಸಿ, ಊಟ ಮುಗಿಸಿ ಬರುವಾಗ ಹತ್ತು ಗಂಟೆಯಾಗಿದ್ದು ನಾವು ಊರಿಗೆ ಕರೆ ಮಾಡಿದರೆ ಅಲ್ಲಿ ಹನ್ನೆರೆಡೂವರೆಯಾಗಿದ್ದು ಅವರ ನಿದ್ರೆ ಕೆಡಿಸಿದಂತಾಗುವುದಲ್ಲವೇ? ರೋಮಿಂಗ್ ಕರೆನ್ಸಿ ಹಾಕಿಸಿಕೊಳ್ಳದೇ ಇದ್ದವರು, ಹೊಟೇಲುಗಳಲ್ಲಿ ಇರುವ ವೈಫೈ ಬಳಸಿ, ಫ್ರೀಯಾಗಿ ವಿಶ್ವದ ಯಾವ ಮೂಲೆಗೆ ಬೇಕಾದರೂ ಕರೆ ಮಾಡಬಹುದು.
ಹಲವು ದಿನಗಳ ಕನಸಾಗಿದ್ದ ಸಿಂಗಪೂರ್ ಪ್ರವಾಸ ಯಶಸ್ವಿಯಾಗಿ ಮುಗಿದಿತ್ತು. ಇನ್ನು ಮನೆಗೆ ಹೊರಡುವ ಸಮಯ. ಮನಸ್ಸು ಗರಿಗೆದರಿ ಹಾಡಿತ್ತು. ಎಲ್ಲಿಗೇ ಹೋದರೂ ಮನೆಯ ನೆನಪು ಕಾಡುವುದು ಸಹಜ ಅಲ್ಲವೇ? ಬೆಂಗಳೂರಿನ ವಿಮಾನ ನಿಲ್ದಾಣದಿಂದ ಶಿವಮೊಗ್ಗಾಕ್ಕೆ ಹೋಗುವುದೂ ಒಂದು ಬಗೆಯ ಸರ್ಕಸ್ಸೇ. ನಮ್ಮ ಲಗೇಜನ್ನು ಹೊತ್ತು ಟ್ಯಾಕ್ಸಿ ಹಿಡಿದು ರೈಲ್ವೇ ನಿಲ್ದಾಣಕ್ಕೆ ಹೋಗಬೇಕು, ಶಿವಮೊಗ್ಗಾಕ್ಕೆ ಹೋಗುವ ರೈಲಿನಲ್ಲಿ ದೊಡ್ಡ ದೊಡ್ಡ ಸೂಟ್‌ಕೇಸುಗಳನ್ನು ಇಡುವುದೇ ಪ್ರಯಾಸದ ಕೆಲಸ. ಅದರೆ ಈ ಬಾರಿ ವಿವೇಕ್ ಟ್ರಾವೆಲ್ಸ್ ನವರು ನಮಗಾಗಿ ಒಂದು ಸ್ಲೀಪರ್ ಕೋಚಿನ ವ್ಯವಸ್ಥೆ ಮಾಡಿದ್ದರು. ರಾತ್ರಿ ಹನ್ನೆರೆಡು ಗಂಟೆಗೆ ಬೆಂಗಳೂರನ್ನು ತಲುಪಿದ ನಾವು, ಲಗೇಜನ್ನು ಆ ವಾಹನದಲ್ಲಿ ಹಾಕಿ, ದಾರಿಯಲ್ಲಿ ಉಪಹಾರ ಮುಗಿಸಿ, ನಂತರ ನೆಮ್ಮದಿಯಾಗಿ ನಿದ್ರೆ ಮಾಡಿದೆವು. ಬೆಳಿಗ್ಗೆ ಆರಕ್ಕೆ ಶಿವಮೊಗ್ಗಾ ತಲುಪಿದಾಗಲೇ ಎಚ್ಚರ. ಆಗ್ನೇಯ ಏಷ್ಯಾದ ಮೂರು ರಾಷ್ಟ್ರಗಳಲ್ಲಿ ಪ್ರವಾಸ ಮಾಡಿ ಸುಂದರವಾದ ನೆನಪುಗಳನ್ನು ಹೊತ್ತು ‘ಹೋಂ ಸ್ವೀಟ್ ಹೋಂ’ ತಲುಪಿದೆವು.
(ಮುಗಿಯಿತು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45405
ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ



