ಭಗವದ್ಗೀತೆಯಷ್ಟೇ ಮಹತ್ವಪೂರ್ಣವಾದ ಇನ್ನೊಂದು ಸನಾತನವೂ ಮಹೋನ್ನತವೂ ಆದ ಕೃತಿಯಿದೆ. ಅದೇ ಯೋಗವಾಸಿಷ್ಠ. ಬಹುಶಃ ಇದರ ಬಹುಗಾತ್ರದ ಕಾರಣವಾಗಿಯೇ ಹೆಚ್ಚು ಮಂದಿಗೆ ಗೊತ್ತಾಗಿಲ್ಲ ಮತ್ತು ಪ್ರಚಲಿತವಾಗಿಲ್ಲ. ಒಂದು ರೀತಿಯಲ್ಲಿ ಭಗವದ್ಗೀತೆಯು ಮಹಾಭಾರತದ ಒಂದಂಗವಾಗಿ ಕಾಣಿಸಿಕೊಂಡರೆ, ಈ ಯೋಗವಾಸಿಷ್ಠವು ರಾಮಾಯಣ ರಚಿತವಾದ ಕಾಲಘಟ್ಟದಲ್ಲಿ ಕಾಣಿಸಿಕೊಂಡಿತು. ರಾಮಾಯಣವೆಂಬ ದಿವ್ಯ ಭವ್ಯ ಆದಿಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳೇ ಇದರ ಕರ್ತೃ. ಶ್ರೀ ರಾಮಚಂದ್ರ ಹಾಗೂ ರಘುವಂಶದ ಕುಲಗುರುವಾದ ವಸಿಷ್ಠರ ನಡುವೆ ನಡೆದ ಆಧ್ಯಾತ್ಮಿಕ ಸಂವಾದವೇ ಯೋಗವಾಸಿಷ್ಠದ ತಿರುಳು. ‘ನಮ್ಮ ಈ ಜೀವಿತ, ಈ ರಾಜ್ಯ ಇವೆಲ್ಲ ಏಕೆ ಬೇಕೆಂದು’ ಪ್ರಭು ಶ್ರೀರಾಮನು ವಿರಾಗಿಯಾದಾಗ ವಸಿಷ್ಠ ಮಹರ್ಷಿಗಳು ಇದನ್ನು ಬೋಧಿಸಿದರೆಂದು ಪ್ರತೀತಿ. ಮಹಾಭಾರತದಲ್ಲೂ ಅಷ್ಟೇ: ಅರ್ಜುನನು ಕಂಗೆಟ್ಟಾಗ, ತನ್ನ ಸೋದರ ಸಂಬಂಧಿಗಳೊಂದಿಗೇ ಸಮರಕ್ಕೆ ನಿಂತಾಗ ಶ್ರೀ ಕೃಷ್ಣ ಪರಮಾತ್ಮನು ಗೀತೆಯನ್ನು ಬೋಧಿಸುತ್ತಾನೆ. ಹಾಗಾಗಿ ಇವೆರಡೂ ಕೃತಿಗಳಲ್ಲಿ ಸಾಮ್ಯತೆಯಿದೆ. ಭಗವದ್ಗೀತೆಯಲ್ಲಿ ಭಕ್ತಿ-ಕರ್ಮ-ಜ್ಞಾನಯೋಗಗಳು ವಿಶ್ಲೇಷಿತವಾದರೆ ಇದರಲ್ಲಿ ಅದ್ವೈತವು ಪ್ರತಿಪಾದಿತವಾಗಿದೆ. ಸುಮಾರು ಮೂವತ್ತೆರಡು ಸಾವಿರ ಶ್ಲೋಕಗಳಿರುವ ಈ ಹೆಬ್ಬೊತ್ತಗೆಯನ್ನು ಪರಿಷ್ಕರಿಸಿ, ಆರು ಸಾವಿರ ಶ್ಲೋಕಗಳಲ್ಲಿ ಹಿಡಿದಿಟ್ಟ ಗ್ರಂಥವನ್ನು ಲಘು ಯೋಗವಾಸಿಷ್ಠ ಎಂದು ಕರೆಯಲಾಗಿದೆ. ಒಟ್ಟು ಆರು ಸಂಪುಟಗಳಲ್ಲಿ ಇದು ನಿರೂಪಿತವಾಗಿದ್ದು, ಪ್ರತಿಯೊಂದು ಸಂಪುಟವನ್ನು ‘ಪ್ರಕರಣ’ ಎಂದು ಗುರುತಿಸಲಾಗಿದೆ. ಅವೇ ವೈರಾಗ್ಯ, ಮುಮುಕ್ಷು ವ್ಯವಹಾರ, ಉತ್ಪತ್ತಿ, ಸ್ಥಿತಿ, ಉಪಶಮನ ಮತ್ತು ನಿರ್ವಾಣ ಎಂಬ ಅಧ್ಯಾಯಗಳು. ಆಖ್ಯಾನವನ್ನು ಅಂದರೆ ಪ್ರತಿಪಾದಿತವಾಗಬೇಕಾದ ಮುಖ್ಯ ವಿಚಾರವನ್ನು ಉಪಾಖ್ಯಾನ ಅಂದರೆ ತತ್ಸಂಬಂಧೀ ಕತೆಗಳ ಮೂಲಕ ಬೋಧಿಸುವುದು ಇದರ ವೈಶಿಷ್ಟ್ಯ. ಮುಖ್ಯ ವಿಚಾರವೇ ಬ್ರಹ್ಮತತ್ತ್ವ. ಇದರಲ್ಲಿ ಬರುವ ಆಕರ್ಷಕ ಉಪಕತೆಗಳೇ ಉಪಾಖ್ಯಾನ. ಇದು ಕೇವಲ ಗ್ರಂಥವಲ್ಲ; ನಿತ್ಯ ಪಾರಾಯಣ ಮಾಡಬೇಕಾದ ಧಾರ್ಮಿಕವೂ ಆಧ್ಯಾತ್ಮಿಕವೂ ಆದ ಸತ್ಯವ್ರತ. ಭಾರತೀಯ ತತ್ತ್ವಶಾಸ್ತ್ರವು ಆತ್ಮ ಮತ್ತು ಮನಸ್ಸನ್ನು ಪರಿಭಾವಿಸಿದ ಬಗೆಯೇ ಇಲ್ಲಿ ಸುದೀರ್ಘವಾಗಿ ಚರ್ಚಿತವಾಗಿದೆ. ಜೀವನವೆಂದರೇನು? ಸುಖ ದುಃಖಗಳ ಅರ್ಥವೇನು? ಮನುಷ್ಯರೇಕೆ ಬಂಧಿಗಳು? ಈ ಗೋಚರ ಜಗತ್ತು ನಿಜವೇ? ಮೋಕ್ಷವೆಂಬುದು ನಿಜವಾಗಿಯೂ ಏನು? ಎಂಬ ರಾಮನ ಪ್ರಶ್ನೆಗಳಿಗೆ ವಸಿಷ್ಠರು ಉತ್ತರರೂಪವಾಗಿ ಆತ್ಮಜ್ಞಾನವನ್ನು ಉಪದೇಶಿಸುವರು. ಇದೇ ಯೋಗವಾಸಿಷ್ಠದ ಆಶಯ. ಹಾಗಾಗಿ ಇದನ್ನೊಂದು ಆಧ್ಯಾತ್ಮಿಕ ಮನೋವಿಜ್ಞಾನಕ್ಕೆ ಅತ್ಯದ್ಭುತವಾದ ಉದಾಹರಣೆಯನ್ನಾಗಿ ನೋಡಬಹುದು. ಇದಕ್ಕೆ ಮಹಾ ರಾಮಾಯಣ, ಆರ್ಷ ರಾಮಾಯಣ, ವಸಿಷ್ಠ ರಾಮಾಯಣ ಎಂಬ ಇತರ ಹೆಸರುಗಳೂ ಇವೆ.
ಜೀವನ ಕ್ಷಣಿಕ; ಆಸೆ ಆಕಾಂಕ್ಷೆಗಳೇ ಎಲ್ಲ ದುಗುಡಗಳ ಮೂಲ ಎಂಬುದನ್ನು ವೈರಾಗ್ಯ ಪ್ರಕರಣ ಅರುಹುತ್ತದೆ. ಒಂದರ್ಥದಲ್ಲಿ ಜೀವನದ ಅಸ್ಥಿರತೆಯನ್ನು ಆಳವಾಗಿ ಶೋಧಿಸುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಭಗವಾನರು ಆನಂತರ ಹೇಳಿದ್ದು ಇದೇ ಅರ್ಥದಲ್ಲಿ. ಮುಮುಕ್ಷು ಪ್ರಕರಣವು ಮುಕ್ತಿಯನ್ನು ಬಯಸುವವರ ಲಕ್ಷಣಗಳನ್ನು ವಿವರಿಸುವುದು. ವಿವೇಕ, ವೈರಾಗ್ಯ, ಶಾಂತಿ, ಸಾಧನೆ ಮತ್ತು ಸತ್ಸಂಗಗಳೇ ಅವು. ಹೊರಗಿನ ಜಗತ್ತು ಎಂಬುದು ನಮ್ಮ ಮನಸ್ಸಿನ ಸೃಷ್ಟಿ ಎನ್ನುತ್ತದೆ ಉತ್ಪತ್ತಿ ಪ್ರಕರಣ. ಒಳಗಿನ ಜಗತ್ತಷ್ಟೇ ನಮ್ಮ ಕೈಯಲ್ಲಿರುವುದು, ಹೊರಗಿನದು ಮಾಯಾ ಪ್ರಪಂಚ. ಸ್ಥಿತಿ ಪ್ರಕರಣವು ಮಾನವನ ಬಂಧನಕ್ಕೆ ಕಾರಣವಾದ ವಾಸನೆಗಳು, ಆಸೆಗಳು, ಅಹಂಕಾರ ಮತ್ತು ಚಿತ್ತದ ಚಂಚಲತೆಗಳನ್ನು ಕುರಿತು ಮಾತಾಡುತ್ತದೆ. ಉಪಶಮನದ ಪ್ರಕರಣವು ಧ್ಯಾನ, ವಿವೇಕ ಮತ್ತು ಆತ್ಮಪರಿಶೀಲನೆಗಳ ಮೂಲಕ ಮನಸ್ಸನ್ನು ಶಾಂತಗೊಳಿಸುವ ಪರಿಯನ್ನು ತಿಳಿಸುತ್ತದೆ. ನಿರ್ವಾಣ ಪ್ರಕರಣವೇ ಗ್ರಂಥದ ಪರಾಕಾಷ್ಠೆ. ಇಲ್ಲಿ ಬ್ರಹ್ಮಜ್ಞಾನ, ಜೀವಮುಕ್ತಿ ಕುರಿತ ವಿಶ್ಲೇಷಣೆಯಿದೆ. ಯೋಗವಾಸಿಷ್ಠದ ಮುಖ್ಯ ತತ್ತ್ವಗಳು: ನಮಗೆ ಕಾಣುವ ಈ ಬಾಹ್ಯ ಜಗತ್ತು ನಮ್ಮ ಮನಸ್ಸಿನ ಪ್ರತಿಬಿಂಬ. ಚಿತ್ತವೇ ಜಗತ್ತು ಎನ್ನುತ್ತದೆ ಈ ಮಹಾನ್ ಕೃತಿ. ಕನಸಿನಂತೆ ಕಾಣುವ ಈ ಲೋಕದಲ್ಲಿ ಯಾವುದೂ ಶಾಶ್ವತವಲ್ಲ. ಅದ್ವೈತ ವೇದಾಂತವು ಇದನ್ನೇ ಪ್ರತಿಪಾದಿಸುವುದು. ಆತ್ಮಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಇದು ತಂತಾನೇ ಲಭಿಸುವುದಲ್ಲ ಮನಸ್ಸೇ ಬಂಧನಕ್ಕೂ ಮುಕ್ತಿಕೂ ಕಾರಣ. ತತ್ತ್ವಜ್ಞಾನದ ಮುಂದಿನ ಹಂತವೇ ಆತ್ಮಜ್ಞಾನ. ತಾತ್ತ್ವಿಕರು ಅಲ್ಲಿಗೇ ನಿಲ್ಲದೆ ಇನ್ನೊಂದು ಹೆಜ್ಜೆ ಮುಂದಕ್ಕಿಟ್ಟರೆ ನಮ್ಮನ್ನು ನಾವೇ ಒಂದು ಅಂತರದಲ್ಲಿಟ್ಟು ಪರಿಶೋಧಿಸಲು ಸಾಧ್ಯವಿದೆಯೆಂದು ಈ ಕೃತಿ ಅಭಿಪ್ರಾಯಿಸುತ್ತದೆ.
ಇದರಲ್ಲಿ ಹಲವು ಆಕರ್ಷಕ ಕತೆಗಳಿವೆ. ‘ಲೀಲಾ’ ಕತೆಯಲ್ಲಿ ರಾಣಿ ಲೀಲಾಳು ತನ್ನ ಪತಿಯ ಸಾವಿನ ನಂತರ ಕಾಲ ಮತ್ತು ಜಗತ್ತಿನ ಭ್ರಮಾತ್ಮಕ ಸತ್ಯಗಳನ್ನು ಅರಿಯುತ್ತಾಳೆ. ‘ಲವಣ’ ಮಹಾರಾಜನ ಕತೆಯಲ್ಲಿ ಕಾಲದ ವ್ಯಾಖ್ಯಾನವು ವಿಭಿನ್ನವಾಗಿದೆ. ಈತನು ಒಂದೇ ಒಂದು ಕ್ಷಣದಲ್ಲಿ ತನ್ನ ಸಂಪೂರ್ಣ ಜೀವನದ ಅಷ್ಟೂ ಅನುಭವಗಳನ್ನು ಹೊಂದುತ್ತಾನೆ. ‘ಕರ್ಕಟಿ’ ಕತೆಯಲ್ಲಿ ಭಯಾನಕ ರಾಕ್ಷಸಿಯೊಬ್ಬಳು ಜ್ಞಾನವಂತಳಾಗಿ ಪರಿವರ್ತನೆಯಾಗುವ ಪವಾಡವಿದೆ. ‘ಚೂಡಾಲಾ ಮತ್ತು ಶಿಖಿಧ್ವಜ’ರ ಕತೆಯಲ್ಲಿ ಚೂಡಾಲಾ ತನ್ನ ಪತಿಗಿಂತ ಹೆಚ್ಚು ಪ್ರಬುದ್ಧಳೂ ಜ್ಞಾನಿಯೂ ಆಗಿರುತ್ತಾಳೆ. ಆಧ್ಯಾತ್ಮಿಕ ಸಿದ್ಧಿಯು ಲಿಂಗಾಧಾರಿತವಲ್ಲ ಎಂಬುದನ್ನು ಇದು ಸಂಕೇತಿಸುತ್ತದೆ. ಹಾಗಾಗಿ ಯೋಗವಾಸಿಷ್ಠವನ್ನು ಅದ್ವೈತ ಮೀಮಾಂಸೆಯ ದೃಷ್ಟಿಯಿಂದಲೂ ಯೋಗಶಾಸ್ತ್ರದ ದೃಷ್ಟಿಯಿಂದಲೂ ಪರಾಂಬರಿಸಬಹುದು. ಹಲವರು ಇದನ್ನು ಮನಶ್ಶಾಸ್ತ್ರದ ಕೆಲವು ಸಿದ್ಧಾಂತಗಳಿಂದಲೂ ವಿಶ್ಲೇಷಿಸುವರು. ಮುಖ್ಯವಾಗಿ ಇದರ ಸಾಹಿತ್ಯಕ ಭಾಷೆ ಮತ್ತು ಶೈಲಿಯನ್ನು ಗಮನಿಸಬೇಕು. ಉಪಮೆ, ರೂಪಕಗಳಿಂದ ತುಂಬಿದ ಇದರಲ್ಲಿ ಆ ಕಾಲಘಟ್ಟದಲ್ಲೇ ಸಂಸ್ಕೃತ ಭಾಷೆಯು ಪಡೆದ ಔನ್ನತ್ಯವೇನೆಂಬುದು ಮನವರಿಕೆಯಾಗುತ್ತದೆ. ಶ್ರೀ ರಾಮಚಂದ್ರನು ಸತತವಾಗಿ ಪ್ರಶ್ನಿಸುತ್ತಾನೆ, ಅದಕ್ಕೆ ವಸಿಷ್ಠರು ತರ್ಕದಿಂದ ಉತ್ತರಿಸುವ ಧಾಟಿಯು ಈ ಕೃತಿಯ ಶೈಲಿಯೇ ಆಗಿದೆ. ಹಾಗಾಗಿ ಇದು ಯಾವುದೇ ಅಂಧಶ್ರದ್ಧೆಯನ್ನು ಬಿತ್ತುವುದಿಲ್ಲ ಮತ್ತು ಅದನ್ನು ಪ್ರೋತ್ಸಾಹಿಸುವುದಿಲ್ಲ. ಕೇವಲ ಶಾಸ್ತ್ರಪಾಠ ಸಾಕಾಗದು; ಸ್ವಾನುಭವವೂ ಬೇಕೆಂಬುದನ್ನು ಈ ಕೃತಿ ಒತ್ತಾಯಿಸುತ್ತದೆ. ಹೀಗಾಗಿಯೇ ಇದು ಮುಂದೆ ಬಂದ ಹಲವು ಭಕ್ತಿ ಚಳವಳಿಗಳಿಗೆ ಪ್ರೇರಣೆಯಾಯಿತು. ಇದನ್ನು ಕೇವಲ ಒಂದು ಗ್ರಂಥವೆಂದು ನೋಡದೇ ನಮ್ಮಲ್ಲಿ ಅನವರತ ಹುಟ್ಟುವ ಆಳವಾದ ಪ್ರಶ್ನೆಗಳಿಗೆ ದೊರೆತ ಉತ್ತರ, ಸಂವಾದ ಎಂದು ಅರಿಯಬೇಕು. ದುಃಖದ ಮೂಲವು ಹೊರಗಿಲ್ಲ, ಅದಿರುವುದು ನಮ್ಮ ಮನಸ್ಸಿನಲ್ಲೇ ಎಂದೂ ಆತ್ಮಜ್ಞಾನವೇ ನಿಜಶಾಂತಿಯೆಂದೂ ಇದು ಬೋಧಿಸುತ್ತದೆ. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋ’ ಎಂಬುದು ಈ ಕೃತಿಯ ಶ್ಲೋಕಗಳಲ್ಲಿ ಒಂದು. ಮನುಷ್ಯನ ಬಂಧನಕ್ಕೂ ಮುಕ್ತಿಗೂ ಕಾರಣ ಮನಸ್ಸೇ. ಇದೇ ಯೋಗವಾಸಿಷ್ಠದ ಮೂಲತತ್ತ್ವ ಕೂಡ. ನಮ್ಮ ಅಜ್ಞಾನ, ಅಹಂಕಾರಗಳೇ ನಮ್ಮನ್ನು ಕಟ್ಟಿ ಆಳುತ್ತವೆ; ನಾವದರ ಕೈಗೊಂಬೆಯಾಗಿ ವರ್ತಿಸುತ್ತೇವೆ. ‘ಚಿತ್ತಮೇವ ಹಿ ಸಂಸಾರಃ ತಸ್ಮಾತ್ ಶಾಂತಿಂ ಸಮಾಚರೇತ್’ ಅಂದರೆ ಈ ಸಂಸಾರವೆಂಬುದು ಚಿತ್ತವೇ; ಇದರ ತೂಗುಯ್ಯಾಲೆಯನ್ನು ಹೊರಗಿದ್ದು ಗಮನಿಸಿದಾಗ ಮನಶ್ಶಾಂತಿ ಸಾಧಿತವಾಗುವುದು. ಇದರಲ್ಲಿ ಬರುವ ‘ಸಂಸಾರ’ ಎಂಬ ಪದವನ್ನು ವಿಶಾಲಾರ್ಥದಲ್ಲಿ ನೋಡಬೇಕು. ತ್ಯಾಗಿಗಳಿಗೆ ಮತ್ತು ಮಹಾನ್ ಚೇತನಗಳಿಗೆ ಈ ಜಗತ್ತೇ ಸಂಸಾರ. ನಮ್ಮಂಥ ಲೌಕಿಕರಿಗೆ ಕುಟುಂಬವೇ ಸಂಸಾರ. ದೇಶದ ಚುಕ್ಕಾಣಿ ಹಿಡಿದವರಿಗೆ ದೇಶವಾಸಿಗಳೇ ಸಂಸಾರ. ಇದೆಲ್ಲವೂ ಕೇವಲ ಮನದ ವಿಹಾರ. ನಾವು ಎಷ್ಟೆಷ್ಟು ಮನೋವೈಶಾಲ್ಯ ಹೊಂದುವೆವೋ ಅಷ್ಟಷ್ಟು ಇದರ ಗಾತ್ರ ಹೆಚ್ಚಾಗುತ್ತದೆ. ಸಂಕುಚಿತ ಮನಕ್ಕೆ ಏಕವ್ಯಕ್ತಿಯ ಜೀವನವೇ ಸಂಸಾರ. ‘ಯಥಾ ಪ್ರಾಪ್ತಸ್ಥಿತಿರ್ನಿತ್ಯಂ ಸ ಜ್ಞಾನೀ ಇತಿ ಕಥ್ಯತೇ’ ಅಂದರೆ ಎಂಥ ಸ್ಥಿತಿ ಎದುರಾದರೂ ಜ್ಞಾನಿಯದು ಸಮಚಿತ್ತ; ಸಮತೋಲನ ಮಾಡುವಲ್ಲಿ ಆತ ನಿಷ್ಣಾತ. ‘ಸ್ವಪ್ನದೃಷ್ಟಮಿವೇದಂ ಹಿ ಜಗತ್ ಪಶ್ಯತಿ ಪಂಡಿತಃ’ ಅಂದರೆ ಜ್ಞಾನಿಯಾದವರು ಈ ಜಗತ್ತನ್ನು ಕನಸಿನಂತೆಯೇ ಭಾವಿಸುವರು. ಕನಸು ಕಾಣುವವರೆಗೆ ಅದು ಸತ್ಯ; ಕಣ್ಣು ಬಿಟ್ಟ ಮೇಲೆ ಅದು ಅಸತ್ಯ. ನಾವು ಅದನ್ನೇ ನಿಜವೆಂದುಕೊಂಡರೆ ಅದರಂಥ ಭ್ರಮಾತ್ಮಕ ಇನ್ನೊಂದಿಲ್ಲ. ಹಾಗೆಯೇ ಈ ಮಾಯಾ ಪ್ರಪಂಚದ ಅಸ್ಥಿರತೆಯನ್ನು ಅರಿತವನು ಅದರಲ್ಲಿ ಅತಿಯಾಗಿ ಮುಳುಗಿ ತನ್ನನ್ನು ಕಳೆದುಕೊಳ್ಳುವುದಿಲ್ಲ. ‘ವೈರಾಗ್ಯದೇವ ಸಂಸಾರತರಣಂ ನಾನ್ಯಕರ್ಮಣಾ!’ ವಿರಾಗದಿಂದಷ್ಟೇ ಈ ಸಂಸಾರವನ್ನು ದಾಟಬಹುದು. ಇಂಥಲ್ಲಿ ವೈರಾಗ್ಯವೆಂದರೆ ಜೀವನದಿಂದ ವಿಮುಖವಾಗುವುದಲ್ಲ; ಅತಿಯಾಗಿ ಅಂಟಿಕೊಳ್ಳದಿರುವುದು. ‘ನ ಮೌನಂ ಕೇವಲಂ ವಾಚಾ ಮೌನಂ ಚಿತ್ತಸ್ಯ ನಿಗ್ರಹಃ’ ಅಂದರೆ ಮಾತಾಡದೇ ಇರುವುದು ಮಾತ್ರ ಮೌನವಲ್ಲ; ಮನದ ನಿಯಂತ್ರಣವೇ ನಿಜಮೌನ.
ಈ ಕೃತಿಯ ಬಹು ದೊಡ್ಡ ಗುಣವೆಂದರೆ ನಮ್ಮ ವಿಚಾರವಂತಿಕೆಯನ್ನು ಪ್ರಚೋದಿಸುವುದೇ ಆಗಿದೆ. ಧರ್ಮ, ಅಧ್ಯಾತ್ಮ, ವೈರಾಗ್ಯ, ಮೋಕ್ಷ ಎಂಬಿತ್ಯಾದೀ ಲೋಕೋತ್ತರದ ಹಾದಿಗಳನ್ನು ಕುರಿತು ಮಾತಾಡುವುದರ ಜೊತೆಗೇನೇ ಚಿಂತನೀಯ ಹೊಳಹುಗಳನ್ನು ಅಲ್ಲಲ್ಲಿ ದಾಖಲಿಸಿ, ನಿಜ ವಿಚಾರವಾದವನ್ನು ಪ್ರತಿಪಾದಿಸುತ್ತದೆ. ಇದೀಗ ವಿಚಾರವಾದವೆಂದರೆ ಶುಷ್ಕ ನಾಸ್ತಿಕತೆ, ಅತಿ ಬೌದ್ಧಿಕತೆ, ಭಾವರಹಿತ ಜೀವವಿಮುಖತೆ ಎಂದೇ ಆಗಿ ಹೋಗಿದೆ. ವಿಚಾರವಾದಿಗಳು, ಬುದ್ಧಿಜೀವಿಗಳು ಎಂದರೆ ದೈವನಂಬುಗೆಯಿಲ್ಲದ ಸಂಪ್ರದಾಯಗಳನ್ನು ಪಾಲಿಸದ ಕಡುಲೌಕಿಕಾಸಕ್ತ ಮಂದಿ ಎಂದೇ ತೀರ್ಮಾನಿಸಲಾಗಿದೆ. ಆದರೆ ಯೋಗವಾಸಿಷ್ಠದಲ್ಲಿ ಬಂದಿರುವ ವಿಚಾರವಂತಿಕೆ ಈ ರೀತಿಯದ್ದಲ್ಲ. ಚಿಂತನೆಯನ್ನು ಬಡಿದೆಬ್ಬಿಸುವಂಥ ಅಂತರ್ಯಾತ್ರೆಯನ್ನು ಪ್ರಚೋದಿಸುವಂಥ ಮಾತುಗಳು. ‘ಪಿ ಮೇರು ಸಮಂ ಪ್ರಾಜ್ಞಮಪಿ ಶೂರಮಪಿ ಸ್ಥಿರಂ; ತೃಣೀ ಕರೋತಿ ತೃಷ್ಣೈಕಾ ನಿಮೇಷೇಣ ನರೋತ್ತಮಂ’ (ಮೇರು ಪರ್ವತದಷ್ಟು ಮಹೋನ್ನತನಾದ ಜ್ಞಾನಿ, ಶೂರ ವೀರನನ್ನು ಸಹ ಒಂದು ಕ್ಷಣದ ದುರಾಸೆಯು ಹುಲ್ಲುಕಡ್ಡಿಯಷ್ಟು ಕೀಳಾಗುವಂತೆ ಮಾಡಿ ಬಿಡುವುದು.) ‘ನಿತ್ಯಂ ವಿಚಾರಯುಕ್ತೇನ ಭವಿತವ್ಯಂ ಮಹಾತ್ಮನಾ; ತಥಾಂಧಕೂಪೇ ಪತತಾಂ ವಿಚಾರೋ ಹ್ಯವಲಂಬನಂ’ (ಶ್ರೇಷ್ಠರಾದ ಮಹಾತ್ಮರು ವಿವೇಚನೆಯಿಂದಿರುವರು. ಯಾವುದೇ ಕೆಲಸ ಮಾಡುವ ಮುನ್ನ ಅದರೆಲ್ಲ ಸಾಧಕ ಬಾಧಕಗಳನ್ನು ವಿಚಾರಿಸುವರು. ಒಂದು ವೇಳೆ ಆತುರದಿಂದ ಕತ್ತಲಕೂಪಕ್ಕೆ ಬೀಳುವ ಪರಿಸ್ಥಿತಿ ಬಂದೊದಗಿದರೂ ಅಲ್ಲಿಂದ ಪಾರಾಗಲು ಸಮರ್ಪಕ ಆಲೋಚನೆ ನಡೆಸುವರು) ಇಲ್ಲಿ ಕತ್ತಲಬಾವಿ ಎಂದರೆ ನಮ್ಮನ್ನು ಕಟ್ಟಿ ಹಾಕಿದ ಸಂಸಾರ ಎಂದರಿಯಬೇಕು. ಸಂಸಾರ ಎಂದರೆ ಕೇವಲ ಗಂಡ ಹೆಂಡತಿ ಮಕ್ಕಳ ಕುಟುಂಬವಲ್ಲ; ನಾವು ಕಟ್ಟಿಕೊಂಡಿರುವ ಲೌಕಿಕದ ಎಲ್ಲ ನೆಲೆ ನಿಲುವು.
ಇಂದಿನ ಅತಿ ತುರ್ತೇ ಈ ವಿಚಾರಶೀಲತೆ. ಅದರಲ್ಲೂ ಸ್ವಂತದ್ದು ಎಂಬುದು ಕಾಣೆಯಾದ ಎಲ್ಲೆಲ್ಲೂ ಅನುಕರಣೆಯ ಅಂಧಕಾರ. ಸೃಜನಾತ್ಮಕತೆ ಕಣ್‌ಮರೆಯಾಗಿರುವ ದುಃಸ್ಥಿತಿಯಲ್ಲಿ ಈ ಮಾತು ಪ್ರಸ್ತುತ. ದಿನನಿತ್ಯದ ಬದುಕನ್ನು ಮಾರುಕಟ್ಟೆಯ ಜಾಹಿರಾತಿಗೂ ಚಿಂತನೀಯ ಬದುಕನ್ನು ಗೂಗಲ್, ಚಾಟ್ ಜಿಪಿಟಿಗೂ ಅರ್ಪಿಸಿ ಬಿಟ್ಟಿರುವ ದಿನಮಾನ. ‘ತಥಾಂಧಕೂಪೇ ಪತತಾಂ’ ನಾವು ಸಾರಾಸಾರಾ ವಿವೇಚನೆ ಮಾಡಿ, ಎಲ್ಲ ಮಗ್ಗಲುಗಳಲ್ಲಿ ನಿಂತು ಆಲೋಚಿಸಿ, ಮಾತಾಡುವ ಮತ್ತು ಕೆಲಸ ಮಾಡುವ ವ್ಯವಧಾನವನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಅಂತರ್ಜಾಲವು ಅನಿವಾರ್ಯವಾದರೂ ಅದರ ಔಚಿತ್ಯವನ್ನು ಮರೆತು, ಅದರ ಆಕರ್ಷಕ ಬಲೆಗೆ ಬಿದ್ದು ಬಂಧಿಗಳಾಗಿದ್ದೇವೆ. ಅಂತಹುದರಲ್ಲಿ ಯೋಗವಾಸಿಷ್ಠವು ಆಗಲೇ ಶಕಪೂರ್ವ ವರ್ಷದಲ್ಲೇ ಮುಂದಾಗುವ ಅನಾಹುತವನ್ನು ಎಚ್ಚರಿಸಿದೆ. ಒಂದೆಡೆ ನಮ್ಮ ಅಹಮಿನ ವಿಜೃಂಭಣೆಗಾಗಿ ಪರಿಸರ ನಾಶ, ಅಧಿಕಾರಕ್ಕಾಗಿ ಭೂಮಿಯನ್ನು ಸ್ಮಶಾನವಾಗಿಸುತ್ತಿರುವುದು, ಅತಿಯಾದ ರಾಸಾಯನಿಕಗಳ ಬಳಕೆಯಿಂದ ಶರೀರವು ಹಲವು ರೋಗಗಳ ಗೂಡಾಗಿರುವುದು, ಅಗತ್ಯವಿಲ್ಲದಿದ್ದರೂ ಆಡಂಬರದ ಜೀವನ ನಡೆಸಿ, ವಸ್ತುಗಳನ್ನು ಸಂಗ್ರಹಿಸಿ, ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿರುವುದು, ಜಾತಿ ಧರ್ಮಗಳ ಹೆಸರಿನಲ್ಲಿ ಒಡೆದಾಳುವ ಬಲವಂತರಿಗೇ ಜಯಕಾರ ಹಾಕುತ್ತಿರುವುದು, ಎಲ್ಲ ಧರ್ಮಕ್ಕಿಂತ ಮನುಷ್ಯಧರ್ಮ ಶ್ರೇಷ್ಠ ಎಂಬುದನ್ನು ಮರೆತು, ಮನುಕುಲವನ್ನು ಇರುವೆಯಂತೆ ಹೊಸಕಿ ಹಾಕುತ್ತಿರುವುದು, ನಾಗರಿಕರಾಗುವ ಹುಚ್ಚಿನಲ್ಲಿ ಬರ್ಬರತೆಯನ್ನು ಮೈಗೂಡಿಸಿಕೊಂಡಿರುವುದು ಒಂದೇ ಎರಡೇ ಹಲವು ಅನಾಹುತಗಳಲ್ಲಿ ನಾವು ಸಿಲುಕಿ ಸಾಯುತ್ತಿದ್ದೇವೆ. ನಾವೇ ಸೃಷ್ಟಿಯ ಕೇಂದ್ರವೆಂದು ಬೀಗುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ಯೋಗವಾಸಿಷ್ಠವು ವಿಚಾರಶೀಲತೆಯ ಮಹತ್ವವನ್ನು ಬೋಧಿಸಿರುವುದನ್ನು ಸ್ಮರಿಸಬೇಕು.
‘ಹಳತು ಹೊನ್ನು’ (Old is Gold) ಎಂಬ ಮಾತಿದೆ. ಅದರಂತೆ, ನಮ್ಮ ಪೂರ್ವಿಕರು ಆ ಕಾಲಮಾನದಲ್ಲೇ ಜೀವ ಜೀವನದ ಸಾರ ಸರ್ವಸ್ವವನ್ನೂ ಮಥಿಸಿ, ಕೃತಿರತ್ನವಾಗಿಸಿದ್ದಾರೆ. ತಿಂದುಂಡು ಮಲಗುವ ದೈನಂದಿನ ಕರ್ಮಗಳಾಚೆ ಇರುವ ಚಿಂತನಶೀಲತೆಯ ಸಕಲ ಆಯಾಮಗಳನ್ನು ಶೋಧಿಸಿ ಕೊಟ್ಟಿದ್ದಾರೆ. If you want a new idea, read an old book ಎಂಬುದು ಐವಾನ್ ಪಾವ್ಲೋವ್ ಎಂಬ ಚಿಂತಕನ ಮಾತು. ಹಾಗಾಗಿ ನಾವು ಆಗಿಂದಾಗ್ಗೆ ನಮ್ಮ ಸಿರಿವಂತ ಸಂಸ್ಕೃತಿಯ ಪಾರಂಪರಿಕ ಗ್ರಂಥಗಳತ್ತ ಕಣ್ಣು ಹಾಯಿಸಬೇಕು. ಇಂದಿನ ಎಷ್ಟೋ ಹೊಸ ಸಮಸ್ಯೆಗಳಿಗೆ ನಮ್ಮ ಬಳಿ ಇರುವ ಹಳೆಯ ಗ್ರಂಥರಾಶಿಯಲ್ಲಿ ಪರಿಹಾರಗಳಿರುತ್ತವೆ. ಕುವೆಂಪು ಅವರು ಹೇಳುವಂತೆ, ನಮ್ಮಜ್ಜಿ ಕಾಲದ ಹಳೆಯ ವಿನ್ಯಾಸದ ಚಿನ್ನಾಭರಣಗಳನ್ನು ಎಸೆಯದೇ, ಅವನ್ನು ಕರಗಿಸಿ, ಈಗಿನ ಹೊಸ ವಿನ್ಯಾಸಕ್ಕೆ ಮಾಡಿಸಿಕೊಳ್ಳುವ ಬುದ್ಧಿವಂತಿಕೆ ತೋರಬೇಕು. ಭಾವನೆ ಮತ್ತು ಆಲೋಚನೆಗಳಲ್ಲಿ ಆತ್ಯಂತಿಕ ಮಟ್ಟವನ್ನು ಮುಟ್ಟಿದ್ದ ಸಂಸ್ಕೃತ ಭಾಷೆಯ ಪ್ರಾಚೀನ ಕೃತಿಗಳನ್ನು ಕೊನೆಯಪಕ್ಷ ನಮ್ಮ ಭಾಷೆಯಲ್ಲಿರುವ ಅದರ ಅನುವಾದಗಳತ್ತ ಗಮನ ಹರಿಸಿದರೆ, ಏನನ್ನು ಕಳೆದುಕೊಂಡಿದ್ದೇವೆ? ಎಂಬುದು ಅರಿವಾಗುವುದು. ಇಂದಿನ ಕಣ್ಕಟ್ಟು ಮಾಯ್ಕಟ್ಟು ಜಗದ ಹಲವು ಹಳವಂಡಗಳಿಗೆ ಪರಿಹಾರವೂ ಲಭಿಸುವುದು. ಎಷ್ಟೋ ವರುಷಗಳಾದ ಮೇಲೆ ಆದಿಶಂಕರರು ಹೇಳಿದ ಮಾಯಾಸಿದ್ಧಾಂತದ ಬೀಜವು ಶಕಪೂರ್ವದ ಯೋಗವಾಸಿಷ್ಠದಲ್ಲೇ ಮೊಳೆತಿತ್ತೆಂಬುದನ್ನು ಅರಿಯಬಹುದು. ಇಂದಿನ ವರ್ಚುವಲ್ ರಿಯಾಲಿಟಿ ಅಂದರೆ ಮಿಥ್ಯಾವಾಸ್ತವವು ತಂತ್ರಜ್ಞಾನದ ಕೊಡುಗೆಯಾಗಿ ಬಂದಿರಬಹುದು. ಅದೇ ಆತ್ಮಜ್ಞಾನದ ರೂಪದಲ್ಲಿ ಈ ಕೃತಿಯಲ್ಲಿ ಅಡಗಿದೆ. ಇಂಥ ಅಶಾಂತ ಚಿತ್ತದಿಂದ ಆಗುವ ಹಲವು ಅನಾಹುತಗಳನ್ನು ತಡೆಗಟ್ಟಲು ಚಿತ್ತಶುದ್ಧಿ ಬೇಕೆಂದು ಆನಂತರ ಬಂದ ಪತಂಜಲಿ ಮುನಿವರೇಣ್ಯರು ಯೋಗಸಿದ್ಧಾಂತವನ್ನು ಪ್ರತಿಪಾದಿಸಿದರು. ಕರ್ಮ, ಭಕ್ತಿ, ಜ್ಞಾನ ಮತ್ತು ಯೋಗಗಳು ಕ್ರಮೇಣ ವಿಶ್ವವನ್ನೂ ವಿಶ್ವಾತ್ಮನನ್ನೂ ಅರಿಯುವ ಮಾರ್ಗಗಳಾಗಿ ರೂಪುಗೊಂಡವು. ಕರ್ಮಮಾರ್ಗವು ನಿತ್ಯದ ಕಾಯಕವನ್ನು ಅವಲಂಬಿಸಿರುವಂಥದು. ಭಕ್ತಿಮಾರ್ಗವು ಸರಳವಾದುದು; ಯಾರು ಬೇಕಾದರೂ ಶ್ರದ್ಧೆ ಮತ್ತು ನಂಬುಗೆಗಳ ಮೂಲಕ ಸಾಧಿಸಬಹುದಾದುದು. ಜ್ಞಾನ ಮಾರ್ಗವು ಪಂಡಿತರ ಹಾದಿ. ಯೋಗವು ಸಂತರ ಮತ್ತು ಸಿದ್ಧರ ದಾರಿ. ಇವೆಲ್ಲವೂ ಬೆಳಕಿನರಮನೆಗಿರುವ ಹಲವು ರಸ್ತೆಗಳಷ್ಟೇ. ಅವರವರ ಶಕ್ತ್ಯನುಸಾರ ಮತ್ತು ಧ್ಯೇಯ ಧೋರಣೆಯನುಸಾರ ಸಾಗಲು ಇರುವ ಆಯ್ಕೆಗಳು. ಎಲ್ಲದರ ಗಮ್ಯ ಜೀವಾತ್ಮನಲ್ಲಿರುವ ಪರಮಾತ್ಮನನ್ನು ಅರಿಯುವುದೇ ಆಗಿದೆ. ನಾನು ಎಂಬುದು ವಿಶ್ವದ ಒಂದು ಭಾಗ ಎಂತಲೂ ವಿಶ್ವವೆಂದರೆ ಅದರಲ್ಲಿ ನನ್ನದೂ ಒಂದಂಶ ಎಂತಲೂ ತಿಳಿಯುವುದೇ ಆತ್ಮಜ್ಞಾನ. ಇದನ್ನು ವಸಿಷ್ಠ ಮಹರ್ಷಿಗಳು ಯೋಗವಾಸಿಷ್ಠದಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಶ್ನೆಗುತ್ತರವಾಗಿ ಹೇಳುವರು.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ


