ಆಫೀಸ್‌ನಲ್ಲಿದ್ದ ಶಶಿಕಾಂತ್ ಮೊಬೈಲ್ ರಿಂಗಾದಾಗ ಗೊಣಗುತ್ತಲೇ ಮೊಬೈಲ್ ತೆಗೆದುಕೊಂಡ. ಆ ದಿನ ಒಂದು ಮುಖ್ಯವಾದ ಕೇಸ್ ಇತ್ತು. ಆದ್ದರಿಂದಲೇ ಅವನು ಒಂಭತ್ತು ಗಂಟೆಗೇ ಆಫೀಸ್‌ಗೆ ಬಂದು ಕೂತಿದ್ದ.
ಅವನು ಬೇಸರದಿಂದಲೇ ‘ಹಲೋ’ ಎಂದ.
“ನಮಸ್ಕಾರ. ನಾನು ಅಶ್ವಿನಿ.”
“ಅತ್ತಿಗೆ ನೀವು?” ಅವನ ಧ್ವನಿಯಲ್ಲಿ ಆಶ್ಚರ್ಯತುಂಬಿತ್ತು.
“ಹೌದು ನಾನೇ. ನಿಮ್ಮ ಹತ್ತಿರ ಮಾತನಾಡಬೇಕು. ನೀವು ಯಾವಾಗ ಬಿಡುವಾಗಿರ‍್ತೀರ?”
“ಯಾಕೆ?”
“ನಾನು ನಿಮ್ಮ ಆಫೀಸ್‌ಗೆ ಬರ‍್ತೇನೆ.”
“ಅತ್ತಿಗೆ ತಮಾಷೆ ಮಾಡ್ತಿದ್ದೀರಾ?”
“ತಮಾಷೆ ಅಲ್ಲ……..”
“ನೀವು ಬರೋದು ಬೇಡ. ಈದಿನ ನನಗೆ ಒಂದು ಮುಖ್ಯವಾದ ಕೇಸ್ ಇದೆ. ನಾಳೆ 11 ಗಂಟೆಗೆ ನಾನೇ ನಿಮ್ಮ ಮನೆಗೆ ಬರ‍್ತೇನೆ.”
“ನೀವು ಬರುವ ವಿಚಾರ ನಿಮ್ಮ ಫ್ರೆಂಡ್‌ಗೆ ಗೊತ್ತಾಗಬಾರದು.”
ಅವನಿಗೆ ತುಂಬಾ ಆಶ್ಚರ್ಯವಾಯಿತು.
“ಆಗಲಿ ಅತ್ತಿಗೆ ನಾನು ನಾಳೆ ಬರ‍್ತೀನಿ.”
ಆದಿನ ಅವನು ಕೇಸ್‌ನಲ್ಲಿ ಮುಳುಗಿಹೋದ. ರಾತ್ರಿ ಮಲಗುವಾಗ ಅಶ್ವಿನಿ ಕಾಲ್ ಮಾಡಿದ್ದು ನೆನಪಾಯಿತು. ಅಶ್ವಿನಿ ಅವನ ಆತ್ಮೀಯ ಗೆಳೆಯ ಡಾ|| ಅಭಯ್‌ಸಿಂಹನ ಹೆಂಡತಿ. ಅಭಯ್ ಅವನ ಮಾಧ್ಯಮಿಕ ಶಾಲೆಯ ಸಹಪಾಠಿ. ಹೈಸ್ಕೂಲು ಓದು ಮುಗಿಯುವವರೆಗೂ ಒಟ್ಟಿಗೆ ಓದಿದ್ದರು. ಅಭಯ್ ಪಿ.ಯು.ಸಿ. ನಂತರ ಮೆರಿಟ್ ಸೀಟ್ ಗಳಿಸಿ, ಮೈಸೂರು ಮೆಡಿಕಲ್ ಕಾಲೇಜು ಸೇರಿದ್ದ. ತುಂಬಾ ಬುದ್ಧಿವಂತ. ಸಧ್ಯ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದ. ಬಿಡುವಿಲ್ಲದೆ ಮನೆಯಲ್ಲಿ ಪ್ರಾಕ್ಟೀಸ್ ಮಾಡುತ್ತಾನೆಂದೂ, ತುಂಬಾ ಹಣ ಸಂಪಾದಿಸಿದ್ದಾನೆಂದೂ, ಹಣದ ಹುಚ್ಚು ಹಿಡಿದೆದೆಯೆಂದು ಜನ ಮಾತನಾಡುವುದನ್ನು ಅವನು ಕೇಳಿದ್ದ.
ಅಭಯ್ ಹಸ್ತಗುಣ ಚೆನ್ನಾಗಿತ್ತು. ಆಸ್ಪತ್ರೆಯಲ್ಲಿ ಒಳ್ಳೆಯ ಹೆಸರಿತ್ತು. ಬೇರೆ ಬೇರೆ ಉದ್ಯೋಗದಲ್ಲಿದ್ದರೂ ಅವರ ಸ್ನೇಹಕ್ಕೆ ಚ್ಯುತಿ ಬಂದಿರಲಿಲ್ಲ. ಅಭಯ್‌ನ ಆಯ್ದ ಕೆಲವೇ ಸ್ನೇಹಿತರುಗಳಲ್ಲಿ ಶಶಿಕಾಂತ್ ಒಬ್ಬನಾಗಿದ್ದ.
ಮರುದಿನ 11 ಗಂಟೆಗೆ ಅವನು ಅಭಯ್ ಮನೆಯಲ್ಲಿದ್ದ. ಅಭಯ್ ಇದ್ದಿದ್ದು ಜಯನಗರದಲ್ಲಿ. ಶಶಿಕಾಂತ್ ಮನೆ, ಆಫೀಸ್ ಎಲ್ಲವೂ ಬಸವನಗುಡಿಯಲ್ಲಿತ್ತು.
ಎರಡಂತಸ್ತಿನ ಭವ್ಯ ಬಂಗಲೆಯ ಮುಂದೆ ಕಾರು ನಿಲ್ಲಿಸಿ, ಶಶಿಕಾಂತ್ ಅಭಯ್ ಮನೆ ಪ್ರವೇಶಿಸಿ ಬೆಲ್ ಮಾಡಿದ. ಅಶ್ವಿನಿ ನಗುಮುಖದಿಂದ ಅವನನ್ನು ಸ್ವಾಗತಿಸಿದಳು.
“ಹೇಗಿದ್ದೀರಾ?”
“ಬದಲಾವಣೆ ಇಲ್ಲದ ಬದುಕು ನನ್ನದು. ನಾನು ಹೇಗಿರಲು ಸಾಧ್ಯ?”
“ಯಾಕೆ ಹಾಗಂತೀರಾ?”
“ಮೊದಲು ಕಾಫಿ ಕುಡಿಯಿರಿ. ಆಮೇಲೆ ಮಾತಾಡೋಣ. ಅವಳು ಅವನಿಗೆ ಕಾಫಿ ಕೊಟ್ಟು ಎದುರಿಗಿದ್ದ ಸೋಫಾದಲ್ಲಿ ಕುಳಿತಳು.
“ಅತ್ತಿಗೆ ವಿಷಯ ಹೇಳಿ.”
“ನನಗೆ ಡೈವೋರ್ಸ್ ಬೇಕು……….”
ಅವನು ಅವಳ ಮಾತು ಕೇಳಿ ಬೆಚ್ಚಿಬಿದ್ದ.
“ಅತ್ತಿಗೆ ಯಾಕೆ ಹೀಗೆ ಕೇಳ್ತಿದ್ದೀರಾ?”
“ಇದು ಬಹಳ ಯೋಚಿಸಿ ತೆಗೆದುಕೊಂಡ ನಿರ್ಧಾರ ಶಶಿಕಾಂತ್. ಯೋಚನೆಗಳಿಂದ ಒಳಗೇ ಕುದ್ದು ಸೋತುಹೋಗಿದ್ದೇನೆ.”
“ಡೈವೋರ್ಸ್ಗೆ ಕಾರಣಬೇಕಲ್ವಾ?”
“ಬೇಕಾದಷ್ಟು ಕಾರಣಗಳಿವೆ. ನೋಡುವವರಿಗೆ ನಮ್ಮದು ಸುಖೀ ಸಂಸಾರ. ಹೆಸರಾಂತ ಡಾಕ್ಟರ್ ಹೆಂಡತಿ, ಮುದ್ದಾದ 2 ಗಂಡುಮಕ್ಕಳು, ಲೆಕ್ಕವಿಲ್ಲದಷ್ಟು ಒಡವೆ, ವಸ್ತ್ರ, ಮನಸ್ಸು ಬಂದಂತೆ ಖರ್ಚು ಮಾಡಲು ಹಣ- ಇಷ್ಟು ಸಾಕಾ ಶಶಿಕಾಂತ್?”
“ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಅತ್ತಿಗೆ?”
“ನಾಲ್ಕು ಗೋಡೆಗಳು, ಛಾವಣಿ ಇದ್ದ ತಕ್ಷಣ ಮನೆಯಾಗಲ್ಲ. ಮನೆಯವರ ನಡುವೆ ಪ್ರೀತಿ, ವಿಶ್ವಾಸ, ಮಮತೆ, ವಾತ್ಸಲ್ಯದ ಅನುಬಂಧ ಇರಬೇಕು. ನಿಮ್ಮ ಫ್ರೆಂಡ್‌ಗೆ ಹೆಂಡತಿ, ಮಕ್ಕಳು, ತಂದೆ-ತಾಯಿ ಯಾರೂ ಬೇಡ. ದುಡ್ಡು ದುಡ್ಡಿದ್ದವರ ಜೊತೆ ಒಡನಾಟ ಅವರ ಪ್ರಪಂಚವಾಗಿದೆ.”
“ನೀವು ತಪ್ಪು ತಿಳಿದಿದ್ದೀರ……..”
“ಇಲ್ಲ…. ನಾನು ಸರಿಯಾಗಿ ಹೇಳ್ತಿದ್ದೇನೆ. ಮಕ್ಕಳು ತಂದೆಯ ಎದುರು ಮಾತನಾಡಲು ಹೆದರ‍್ತಾರೆ. ಅವರಿಗೂ ಮಕ್ಕಳ ಹತ್ತಿರ ಮಾತನಾಡಲು ಸಮಯವಿಲ್ಲ. ನನಗೂ ನಮ್ಮನೆಯ ಕೆಲಸದ ಜಾನೂಗೂ ಯಾವ ವ್ಯತ್ಯಾಸವೂ ಇಲ್ಲ. ಪಾರ್ಟಿ-ಗೀರ್ಟಿಗೆ ಹೋಗಬೇಕಾದಾಗ ಹೆಂಡತಿ ನೆನಪಾಗ್ತಾಳೆ. ನನಗಿಷ್ಟವಿಲ್ಲದಿದ್ರೂ ಒಡವೆ ಹಾಕಿಕೊಳ್ಳಬೇಕು, ಬೆಲೆ ಬಾಳುವ ಸೀರೆ ಉಡಬೇಕು.
ಪಾರ್ಟಿಯಿಂದ ಹಿಂದಿರುಗುವಾಗ ‘ನೀನು ದಡ್ಡಿ, ಹಳ್ಳಿಗುಗ್ಗು. ಡಾಕ್ಟರ್ ಸುಮಾಪರಾಂಜಪೆ, ಮಿಸೆಸ್ ಗೋವರ್ಧನ್ ಎಷ್ಟು ಸ್ಟೈಲಿಷ್ ಆಗಿ ರ‍್ತಾರೆ. ‘ನೀನು ನನ್ನ ಹೆಂಡತೀಂತ ಹೇಳಿಕೊಳ್ಳಲು ಅಸಹ್ಯ’ ಅಂತಾರೆ.”
“ನಿಮ್ಮದು ಅರೇಂಜ್ಡ್ ಮ್ಯಾರೇಜ್ ಅಲ್ವಾ?”
“ಹೌದು. ಮದುವೆಗೊತ್ತಾದಾಗ ಒಬ್ಬ ಡಾಕ್ಟರ್ ಕೈ ಹಿಡಿಯಲು ಪುಣ್ಯಮಾಡಿದ್ದೆ ಅನ್ನಿಸಿತ್ತು. ಈಗ ಇವರ ಬದಲು ಒಬ್ಬ ಬಡ ಕೂಲೀನ್ನ ಮದುವೆಯಾಗಿದ್ದರೂ ನಾನು ನೆಮ್ಮದಿಯಿಂದ ಇರ‍್ತಿದ್ದೆ.”
ಅವಳ ಮಾತಿನಿಂದ ಅವಳೆಷ್ಟು ನೊಂದಿದ್ದಾಳೆಂದು ಶಶಿಕಾಂತ್‌ಗೆ ಅರ್ಥವಾಯಿತು.
“ಅತ್ತಿಗೆ ನಾನು ಅಭಯ್ ಹತ್ತಿರ ಮಾತಾಡಲಾ?”
“ಬೇಡ. ಅವರು ಬದಲಾಗುವುದಿಲ್ಲ. ನಾನೂ ಕೂಡ ನನ್ನ ನಿರ್ಧಾರದಿಂದ ಬದಲಾಗಲ್ಲ.”
“ಅತ್ತಿಗೆ ನಿಮಗೆ ಕೆಲಸ ಇಲ್ಲ. ಡೈವೋರ್ಸ್ ತೆಗೆದುಕೊಂಡರೆ ಕಷ್ಟವಾಗಲ್ಲವಾ?”
“ನಮ್ಮ ಊರಿನಲ್ಲಿ ಸ್ವಂತ ಮನೆಯಿದೆ. ಕೇಟರಿಂಗ್ ಶುರು ಮಾಡ್ತೀನಿ. ಬೆಂಗಳೂರಿಗೆ 45 ಕಿ.ಮೀ ದೂರವಿರುವ ಮಾಲೂರು ನನ್ನ ತವರೂರು.”
“ಸಂತೋಷ್‌ಗೆ ಬಾಂಬೆ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಅಲ್ವಾ?”
“ಹೌದು. ರಿಸಲ್ಟ್ ಬಂದ ಕೂಡಲೇ ಹೋಗ್ತಾನೆ. ಸಂಜಯ್‌ದು ನಾಲ್ಕು ಸೆಮಿಸ್ಟರ್‌ಗಳಿವೆ. ಅವನು ಹಾಸ್ಟಲ್‌ನಲ್ಲೋ, ಫ್ರೆಂಡ್ಸ್ ಜೊತೆ ರೂಮ್‌ನಲ್ಲೋ ಇರ‍್ತಾನಂತೆ.”
“ನಿಮಗೆ ಖರ್ಚು ತೂಗಿಸಕ್ಕಾಗತ್ತಾ?”
“ಜೀವನಾಂಶ ಕೇಳ್ತೀನಿ. ನನ್ನ ಹತ್ರ ಹಣ ಇದೆ. ನಿಮ್ಮ ಫ್ರೆಂಡ್ ಮನೆ ಖರ್ಚಿಗೆ ಧಾರಾಳವಾಗಿ ಹಣ ಕೊಡ್ತಿದ್ರು. ಅದರಲ್ಲಿ ಸುಮಾರು ಹಣ ಉಳಿದಿದೆ. ಆ ಹಣ ಬಿಟ್ಟು ಹೋಗೋಣ ಅನ್ನಿಸಿತು. ನಾನು ಊಟ, ತಿಂಡಿ ಮಾಡಿ ಹಾಕಿ ಇಷ್ಟು ದಿನ ಮನೆ ನೋಡಿಕೊಂಡಿದ್ದಕ್ಕೆ ಸಂಬಳ ಬೇಡವಾ?” ಅನ್ನಿಸಿತು.
“ತುಂಬಾ ಕಟುವಾಗಿ ಮಾತಾಡ್ತಿದ್ದೀರಿ.”
“ಪರಿಸ್ಥಿತಿ ಮನುಷ್ಯನ ಮನಸ್ಥಿತಿಯನ್ನು ಬದಲಾಯಿಸತ್ತೆ. ನಮ್ಮ ಅತ್ತಿಗೆ ಜಾರಿಬಿದ್ದು ಕಾಲು ಫ್ರಾಕ್ಚರ್ ಆಗಿದೆ. ಅವರ ಅಕ್ಕನ ಮಗಳು ಒಂದು ತಿಂಗಳು ನೋಡಿಕೊಳ್ತಾರೆ. ಒಂದು ತಿಂಗಳ ನಂತರ ನಾನು ಹೋಗ್ತೀನಿ. ಅಷ್ಟರಲ್ಲಿ ಮಕ್ಕಳ ಸಮಸ್ಯೆಗಳು ಬಗೆಹರಿದಿರುತ್ತವೆ.”
“ಆಗಲಿ ಅತ್ತಿಗೆ. ನಿಮಗೆ ಯಾವಾಗ ನನ್ನ ಸಹಾಯ ಬೇಕೋ ಅವಾಗ ಕೇಳಿ.”
“ನಾನು ಡೈವೋರ್ಸ್ಗೆ ಅಪ್ಲೈ ಮಾಡಬೇಕು. ನೀವು ಪೇಪರ್‌ಗಳನ್ನು ಸಿದ್ದ ಮಾಡಿ. ನನಗೆ ಫೋನ್ ಮಾಡಿ ನಾನು ಬಂದು ಸೈನ್ ಮಾಡ್ತೀನಿ.”
“ಮಕ್ಕಳು ಸೆಟ್ಲ್ ಆದ ನಂತರ ಹೇಳಿ.”
“ಸಂತೋಷ್ ಬಗ್ಗೆ ಚಿಂತೆಯಿಲ್ಲ. ಅವನ ಫ್ರೆಂಡ್ಸ್ ಬಾಂಬೆಯಲ್ಲಿದ್ದಾರೆ. ಎರಡನೆಯವನಿಗೆ ಇರಲು ಸರಿಯಾದ ಜಾಗ ಸಿಗಬೇಕು.”
“ಅವನಿಗೆ ಕಾಲೇಜು ಹತ್ತಿರ ಅಕಾಮಿಡೇಷನ್ ಸಿಕ್ಕಿದರೆ ಒಳ್ಳೆಯದು. ನಾನೂ ಟ್ರೈ ಮಾಡ್ತೀನಿ.”
ಶಶಿಕಾಂತ್ ಅಶ್ವಿನಿಗೆ ಹೇಳಿ ಹೊರಟ.
ಹದಿನೈದು ದಿನಗಳಲ್ಲಿ ಸಂತೋಷ್ ರಿಸಲ್ಟ್ ಬಂತು. ತುಂಬಾ ಒಳ್ಳೆಯ ಅಂಕಗಳು ಬಂದಿದ್ದವು. ಅವನು ಬಾಂಬೆಗೆ ಹೋಗಿ ಕೆಲಸಕ್ಕೆ ಸೇರಬೇಕಿತ್ತು. ಅವನ ಫ್ರೆಂಡ್ ಅಕ್ಷಯ್ ಅಲ್ಲಿದ್ದ ಅವನ ರೂಮ್‌ನಲ್ಲಿ ಇಳಿದುಕೊಳ್ಳುವುದೆಂದುಕೊಂಡಿದ್ದ.
“ನಾವು ನಾಲ್ವರು ಸೇರಿ ಮನೆ ಮಾಡಿದ್ದೇವೆ. ನೀನೂ ನಮ್ಮ ಜೊತೆ ಇರು. ಬಸ್ಸು ಅನುಕೂಲವಿದೆ. ಬಾಂಬೆಗೆ ಬಂದ ಮೇಲೆ ಎಲ್ಲಾ ರೀತಿಯ ಓಡಾಟ ಅಭ್ಯಾಸವಾಗತ್ತೆ. ನೀನು ಧೈರ್ಯವಾಗಿ ಬಾ. ನಾನಿದ್ದೇನೆ.”
ಅಂದು ರಾತ್ರಿ ಅವನು ತಂದೆಗೆ ತಾನು ಬಾಂಬೆಗೆ ಹೋಗುವ ವಿಚಾರ ತಿಳಿಸಿದ.
“ನೀನು ಯಾಕೆ ಅಷ್ಟು ದೂರ ಹೋಗಬೇಕು? ಈ ಊರಿನಲ್ಲೇ ಕೆಲಸ ನೋಡು.”
“ನಾನು ಹೋಗಬೇಕೂಂತ ನಿರ್ಧಾರ ಮಾಡಿದ್ದೇನೆ. ಅಲ್ಲಿ ನನ್ನ ಫ್ರೆಂಡ್ಸ್ ಇದ್ದಾರೆ. ಅಡ್ಜಸ್ಟ್ ಆಗದಿದ್ರೆ ವಾಪಸ್ಸು ರ‍್ತೀನಿ.”
ಅಭಯ್ 25,000 ರೂ. ಕೊಟ್ಟು ಹೇಳಿದ.
“ಇಟ್ಟುಕೋ. ಖರ್ಚಿಗೆ ಬೇಕಾಗುತ್ತದೆ.”
ಅಶ್ವಿನಿ ತೆಗೆದುಕೊಳ್ಳುವಂತೆ ಸನ್ನೆ ಮಾಡಿದಳು. ರಾತ್ರಿ ಊಟ ಮುಗಿಸಿ ಅಭಯ್ ಬಾಲ್ಕನಿಯಲ್ಲಿ ಕುಳಿತು ಹಾಡು ಕೇಳುತ್ತಿದ್ದಾಗ ಅಶ್ವಿನಿ ಹಾಲು ತಂದಿಟ್ಟು ಅವನ ಎದುರು ಕುಳಿತಳು.
“ಏನು ವಿಷಯ?”
“ಅತ್ತಿಗೆ ಬಿದ್ದು ಕಾಲು ಫ್ರಾಕ್ಚರ್ ಆಗಿದೆ. ಅವರನ್ನು ನೋಡಿಕೊಳ್ಳಲು ನಾನು ಈ ಭಾನುವಾರ ಹೋಗ್ತಿದ್ದೇನೆ. ಸಂಜಯ್ ನನ್ನ ಜೊತೆ ಬರ‍್ತಿದ್ದಾನೆ.”
“ನೀನೇ ಯಾಕೆ ಹೋಗಬೇಕು?”
“ಅವರು ನನ್ನ ಅತ್ತಿಗೆ. ನನಗೆ ತಾಯಿ ಪ್ರೀತಿ ತೋರಿಸಿದ್ದಾರೆ. ಈಗಲೂ ಹೋಗಲ್ಲಾಂದ್ರೆ ಹೇಗೆ?”
“ನೀವೆಲ್ಲಾ ಹೋದರೆ ನಾನೊಬ್ಬನೇ ಆಗ್ತಿನಲ್ಲಾ?”
“ಒಬ್ಬರೇ ಇರುವುದನ್ನು ಅಭ್ಯಾಸಮಾಡಿಕೊಳ್ಳಿ. ನಾನು ನನ್ನ ತವರು ಮನೆಗೆ ಹೋಗಿ ಎಂಟುವರ್ಷ ಆಯಿತು.”
ಅಭಯ್ ಏನೂ ಹೇಳಲಿಲ್ಲ. ಅವಳು ಅಲ್ಲಿಂದ ಎದ್ದು ಹೋದಳು.
ಭಾನುವಾರ ತಾಯಿ-ಮಗ ಹೊರಟರು. ಅವಳು ಆಕಡೆ ಹೋಗಿ 8 ವರ್ಷಗಳಾಗಿದ್ದವು. ಈಗಿನ ಬದಲಾವಣೆಗಳ ಅರಿವಿರಲಿಲ್ಲ.
ಅವಳು ಮಾಲೂರು ತಲುಪಿದಾಗ 12 ಗಂಟೆಯ ಮೇಲಾಗಿತ್ತು. ಅವಳ ಅಣ್ಣ, ಅತ್ತಿಗೆಯ ಅಕ್ಕನ ಮಗಳು ರತ್ನ ಹೊರಗೆ ಬಂದು ಸ್ವಾಗತಿಸಿದರು.
“ಅಕ್ಕ ಹೇಗಿದ್ದೀರಾ? ಬನ್ನಿ ಒಳಗೆ.”
ತಾಯಿ-ಮಗ ಒಳಗೆ ಪ್ರವೇಶಿಸಿದರು.
“ಅಣ್ಣಾ ಹೇಗಿದ್ದೀಯ?”
“ನೀನೇ ನೋಡ್ತಿದ್ದೀಯಲ್ಲಮ್ಮಾ……….”
ಸೋತು ಹೋಗಿದ್ದ ಅಣ್ಣನನ್ನು ನೋಡಿ ಅವಳಿಗೆ ಅಯ್ಯೋ ಎನ್ನಿಸಿತು.
“ಅತ್ತಿಗೆ ಹೇಗಿದ್ದಾರೆ?”
“ಚೇತರಿಸಿಕೊಳ್ತಿದ್ದಾಳೆ. ನಡೆಯಬೇಕೂಂತ ಡಾಕ್ಟರ್ ಹೇಳ್ತಾರೆ. ಇವಳು ನೋವೂಂತ ಅಳ್ತಾಳೆ. ಈಗ ಊಟ ಮಾಡಿ ಮಲಗಿದಳು.”
“ಮಲಗಿರಲಿ. ಎಬ್ಬಿಸಬೇಡ.”
“ನೀವು ಕೈ, ಕಾಲು ತೊಳೆದು ಬನ್ನಿ……..”
ಅವಳು ರೂಂನಲ್ಲಿ ತಮ್ಮ ಸಾಮಾನುಗಳಿಟ್ಟು ಮಗನಿಗೆ ಟವಲ್ ಕೊಟ್ಟು ಬಚ್ಚಲುಮನೆ ತೋರಿಸಿದಳು. ಹಂಡೆಯಲ್ಲಿ ಬಿಸಿ ನೀರಿತ್ತು.
ಅವರು ಕೈಕಾಲು ತೊಳೆದು ಬರುವಷ್ಟರಲ್ಲಿ ರತ್ನ ಎಲೆ ಹಾಕಿದ್ದಳು.
“ಅಕ್ಕ.. ನಾವೆಲ್ಲಾ ಕೆಳಗೆ ಕುಳಿತು ಊಟ ಮಾಡುವವರು. ನಿಮಗೆ ಅಭ್ಯಾಸ ಮರೆತಿರಬಹುದು.”
“ಚಿಕ್ಕ ವಯಸ್ಸಿನಲ್ಲಿ ಕಲಿತಿದ್ದು ಮರೆಯಕ್ಕಾಗಲ್ಲ. ನನ್ನ ಮಕ್ಕಳೂ ಹೈಸ್ಕೂಲ್‌ಗೆ ಬರುವವರೆಗೂ ಕೆಳಗೇ ಕೂತು ಊಟ ಮಾಡ್ತಾ ಇದ್ದಿದ್ದು.
ರತ್ನ ಉಪ್ಪು, ಉಪ್ಪಿನಕಾಯಿ ಬಡಿಸಿ ಬಿಸಿಬಿಸಿ ಅನ್ನ, ಹುರುಳಿಕಾಯಿ ಪಲ್ಯ, ಸಾರು ಬಡಿಸಿದಳು. ಊಟ ರುಚಿಯಾಗಿತ್ತು. ಕಡೆದಿದ್ದ ಮಜ್ಜಿಗೆ ಊಟದ ರುಚಿ ಹೆಚ್ಚಿಸಿತು. ಊಟದ ನಂತರ ಸಂಜಯ್ ಮೊಬೈಲ್ ಹಿಡಿದು ಕುಳಿತ.
ಊಟವಾದ ನಂತರ ಅಣ್ಣ ತಂಗಿ ಹರಟಿದರು. ಬಾಲಕೃಷ್ಣ ತಂಗಿಯ ಗಂಡ, ಮಕ್ಕಳ ಯೋಗಕ್ಷೇಮ ವಿಚಾರಿಸಿದ.
“ಅಶ್ವಿನಿ, ನಿನ್ನ ಮನೆ ಖಾಲಿ ಆಗಿದೆ. ಕ್ಲೀನ್ ಮಾಡಿಸಿದ್ದೀನಿ. ನೀವು ಅಲ್ಲೇ ಇರಿ. ಸಂಜಯ್‌ಗೆ ಇಲ್ಲಿರಲು ಸಂಕೋಚ ಆಗಬಹುದು.”
“ಆಗಲಿ ನಾನು ಒಂದು ಘಳಿಗೆ ಮಲಗ್ತೇನೆ. ಅತ್ತಿಗೆ ಏಳುತ್ತಲೂ ಎಬ್ಬಿಸು.”
“ಆಗಲಮ್ಮ.”
“ಶಾಲಿನಿ ಎಲ್ಲಿ?”
“ಅವಳದು ಬಿ.ಎಸ್ಸಿ. ಮುಗಿಯಿತು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಾಳೆ. ಬೆಳಿಗ್ಗೆ ಹೋದರೆ ರಾತ್ರೀನೇ ಬರೋದು. ದೊಡ್ಡ ಅಂಗಡಿ. 10,000 ರೂ. ಸಂಬಳ ಕೊಡ್ತಾರೆ.”
ಅವಳಿಗೆ ಕರುಳು ಕಿವಿಚಿದಂತಾಯಿತು. ಸಂಜಯ್ ಹಾಲ್‌ನಲ್ಲಿದ್ದ ಮಂಚದ ಮೇಲೆ ಮಲಗಿದ್ದ. ಅವಳು ರೂಮು ಸೇರಿ ಸೂಟ್‌ಕೇಸ್ ತೆಗೆದಳು. ಅವಳ ಬಳಿ ಮೂರು ಲಕ್ಷ ಹಣವಿತ್ತು. ಒಂದು ಲಕ್ಷ ಹೊರಗಿಟ್ಟುಕೊಂಡು ಉಳಿದ ಹಣ ಸೂಟ್‌ಕೇಸ್‌ನಲ್ಲಿಟ್ಟು ಮಲಗಿದಳು.
ಸುಮಾರು 5-30ಗೆ ಅವಳಿಗೆ ಎಚ್ಚರವಾಯಿತು. ಅವಳು ಮುಖ ತೊಳೆದು ಬಂದಕೂಡಲೇ ರತ್ನ ಬಿಸಿ ಕಾಫಿ ತಂದಳು.
“ಸಂಜಯ್ ಅವನ ಫ್ರೆಂಡ್ ಜೊತೆ ಹೊರಗೆ ಹೋದ ಅಕ್ಕ.”
“ಈ ಊರಿನಲ್ಲಿ ಅವನಿಗೆ ಯಾವ ಫ್ರೆಂಡ್ ಇದ್ದಾರೆ?”
“ಯಾರಿಗೋ ಫೋನ್ ಮಾಡಿದ. ಅವನೇ ಬಂದು ಕರ‍್ಕೊಂಡು ಹೋದ.”
“ನೀನು ಎಲ್ಲಿರೋದು ರತ್ನ?”
“ನಾವಿರೋದು ಗೌರಿಬಿದನೂರಿನಲ್ಲಿ. ನಮ್ಮತ್ತೆಗೆ ನನ್ನನ್ನು ಕಳಿಸಲು ಇಷ್ಟವಿರಲಿಲ್ಲ. ‘ಸ್ಕೂಲಿಗೆ ಹೋಗೋ ಮಕ್ಕಳಿದ್ದಾರೆ. ನಿನ್ನ ಗಂಡಂಗೆ ಅಂಗಡಿ ಕೆಲಸಾನೇ ಆಗತ್ತೆ. ನನ್ನ ಯಾರು ನೋಡಿಕೊಳ್ತಾರೆ? ಅಡಿಗೆ-ತಿಂಡಿ ಯಾರು ಮಾಡ್ತಾರೇಂತ ಕೂಗಾಡಿದ್ರು. ನಮ್ಮನೆಯವರು ನಮ್ಮ ಪರಿಚಯದ ಹೆಂಗಸರನ್ನು ಅಡಿಗೆಗೆ ಗೊತ್ತು ಮಾಡಿದ್ರು. ಈ ಭಾನುವಾರ ಅವರೂ, ಮಕ್ಕಳು ಬರ‍್ತಾರೆ. ಅವರ ಜೊತೆ ನಾನು ಹೋಗ್ತೀನಿ.”
ಅಷ್ಟರಲ್ಲಿ ಸಾವಿತ್ರಿ ಎದ್ದ ಸೂಚನೆ ಬಂತು. ಸೊರಗಿಹೋಗಿದ್ದ ಅತ್ತಿಗೆಯನ್ನು ನೋಡಿ ಅವಳಿಗೆ ಅಳು ಬಂತು.
“ನನ್ನ ಅವಸ್ಥೆ ನೋಡಿದೆಯಾ ಅಶೂ. ನಾನು ಪರಾವಲಂಬಿ ಆಗಿಬಿಟ್ಟೆ.”
“ಅತ್ತಿಗೆ ಇದೆಲ್ಲಾ ತಾತ್ಕಾಲಿಕ ಇನ್ನು ಕೆಲವು ದಿನಗಳಲ್ಲಿ ನೀವು ಖಂಡಿತಾ ನಡೆಯುತ್ತೀರ. ನಾನು ನೀವು ನಡೆಯುವ ಹಾಗೆ ಮಾಡ್ತೀನಿ.”
“ಅದೆಲ್ಲಾ ಸುಳ್ಳು. ಡಾಕ್ಟರ್ ಫಿಸಿಯೋ ಥೆರಫಿಸ್ಟ್ ನ ಕಳಿಸ್ತೀನಿ. ಒಂದು ತಿಂಗಳು ಅವರು ಸಹಾಯ ಮಾಡ್ತಾರೆ. ಆಮೇಲೆ ನೀವು ನಡೆಯಬಹುದು” ಅಂದ್ರು. ಆದರೆ ನಿಮ್ಮ ಅಣ್ಣ ‘ಬೇಡ’ ಅಂದುಬಿಟ್ರು.”
“ನಾನು ಫಿಸಿಯೋ ಥೆರಫಿಸ್ಟ್ ನ ಕರಸ್ತೀನಿ. ನೀವು ಓಡಾಡುವ ಹಾಗೆ ಮಾಡಿದ ಮೇಲೇ ನಾನು ಊರು ಬಿಡೋದು. ಧೈರ್ಯವಾಗಿರಿ. ನೀವು ಬೇಗ ಹುಷಾರಾಗ್ತೀರ.”
“ಪದ್ಮ, ನಳಿನಿ ಇಬ್ಬರೂ ಬಂದು ನೋಡಿಕೊಂಡು ಹೋದರು. ಅವರಿಗೆ ಇರುವುದಕ್ಕೆ ಇಷ್ಟವಿತ್ತು. ಆದರೆ ಮನೆ ಜವಾಬ್ದಾರಿ ಇತ್ತಲ್ಲಾ- ಹೊರಟುಹೋದರು.
“ರತ್ನ ಬಂದು ನೋಡಿಕೊಂಡಳಲ್ಲಾ? ಇಲ್ಲದಿದ್ದರೆ ಶಾಲಿನಿಗೆ ತುಂಬಾ ಕಷ್ಟವಾಗೋದು.”
“ಹೌದು. ನೀನು ಹೇಳ್ತಿರೋದು ನಿಜ” ಎಂದರು ಸಾವಿತ್ರಿ.
ಶಾಲಿನಿ ಮನೆಗೆ ಬಂದಾಗ ಒಂಭತ್ತುವರೆಯಾಗಿತ್ತು. ಅವಳು ತಟ್ಟೆಹಿಡಿದುಕೊಂಡು ಅತ್ತೆಯ ಮುಂದೆ ಕುಳಿತಳು. ಅಶ್ವಿನಿ ಮಗನಿಗೆ ಶಾಲಿನಿಯ ಪರಿಚಯ ಮಾಡಿಸಿದಳು.
“ಇದೇನು ಅವಸ್ಥೆ ಶಾಲಿನಿ? ನೀನು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲೇ ಬೇಕಾ? ಬೇರೆ ಕೆಲಸ ಸಿಗಲ್ವಾ?”
“ಇಲ್ಲ ಅತ್ತೆ. ಬೇರೆ ಕೆಲಸಗಳಿಗೆ ಹಣ, ಇನ್‌ಫ್ಲೂಯನ್ಸ್ ಬೇಕು. ಆದರೆ ನನ್ನ ಹತ್ತಿರ ಅವೆರಡೂ ಇಲ್ಲ.”
“ನಿನಗೆ ಮುಂದಕ್ಕೆ ಓದಲು ಇಷ್ಟವಿಲ್ವಾ?”
“ಬಿ.ಎಡ್ ಮಾಡಲು ಇಷ್ಟ ಅತ್ತೆ. ಆದರೆ…..”
“ಆಗಲಿ ಅದರ ಬಗ್ಗೆ ಯೋಚಿಸೋಣ.”
(ಮುಂದುವರಿಯುವುದು)

ಸಿ.ಎನ್. ಮುಕ್ತಾ

