ದಶಮ ಸ್ಕಂದ – ಉತ್ತರಾರ್ಧ – ಅಧ್ಯಾಯ – 7
ರುಕ್ಮಿಣಿ – 2
ದ್ವಾರಾವತಿಯಲಿ ಕೃಷ್ಣನರಮನೆಯಲಿ
ರುಕ್ಮಿಣೀದೂತ ಬ್ರಾಹ್ಮಣೋತ್ತಮನ
ಉಚಿತ ರೀತಿಯಲಿ ಸ್ವಾಗತಿಸಿದ ಕೃಷ್ಣ
ರುಕ್ಮಿಣಿ ಕಳುಹಿಸಿದ ಪತ್ರವ
ವಿಪ್ರನಿಂದ ಓದಿ ತಿಳಿದ
ಲಜ್ಜೆಯ ಹದ್ದನ್ನೂ ಮೀರಿ
ಕುಲ ಶೀಲ ರೂಪ ಸಂಪತ್ತು
ವಿದ್ಯೆ ವಯಸ್ಸುಗಳ ಲೋಕದಲ್ಲಿ
ಸಾಟಿಯಿಲ್ಲದ ಪುರುಷ ಸಿಂಹ
ಕೃಷ್ಣನ ಮನಸಾರೆ ವರಿಸಿದ
ರುಕ್ಮಿಣಿಯ ವಿವಾಹವು
ಧೂರ್ತ ಶಿಶುಪಾಲನೊಡನೆ
ಮರುದಿನವೇ ನಡೆಯಲಿದೆ ಎಂಬ
ವಿಷಯ ತಿಳಿದ ಕೃಷ್ಣ
ವಿಪ್ರನಿಗೆ
ರುಕ್ಮಿಣಿಗೆ ತನ್ನಲ್ಲಿರುವ ಅನುರಾಗದ ಪರಿಯೇ
ತನಗೂ ರುಕ್ಮಿಣಿಯ ಬಗೆಗಿನ
ಅನುರಾಗ ಅಪಾರ ಎಂದರುಹಿ
ಒಡನೆಯೇ ಬ್ರಾಹ್ಮಣನೊಂದಿಗೆ
ರಥಾರೂಢನಾಗಿ ಆ ರಾತ್ರಿಯೇ
ವಿದರ್ಭ ನಗರಿಗೆ ತಲುಪಿದಾ ಕೃಷ್ಣ
ವಿವಾಹ ಮಂಗಳ ಕಾರ್ಯಗಳ
ಭೀಷ್ಮಕರಾಜ ಪ್ರಾರಂಭಿಸೆ
ಅಂತಃಪುರದೀ ರುಕ್ಮಿಣೀದೇವಿ ಶಿಶುಪಾಲರಾದಿ
ಸರ್ವರಾಜರೂ ಆಗಮಿಸಿರ್ಪ
ವಾರ್ತೆಯ ತಿಳಿದು ಚಿಂತಿತಳಾಗಿರೆ
ದೂರದಲಿ ಬ್ರಾಹ್ಮಣೋತ್ತಮ ದೂತ ಕಾಣಿಸೆ
ಸಂತಸದಿ ರುಕ್ಮಿಣಿ
ನಗುಮೊಗದ ಬ್ರಾಹ್ಮಣನರುಹಿದ
ಕೃಷ್ಣಾಗಮನದ ವಿಷಯ ತಿಳಿದು
ವಿಪ್ರನ ಪಾದಗಳಿಗೆರಗಿದಳು
ಕೃಷ್ಣನೊಬ್ಬನೇ ಭೀಷ್ಮಕನ ರಾಜಧಾನಿಗೆ
ಹೊರಟ ಸುದ್ದಿ ತಿಳಿದ ಬಲರಾಮ
ಯಾದವ ಬಲದೊಡನೆ
ಪುರದ ಹೊರವಲಯದಿ ಬಂದು ಬೀಡುಬಿಟ್ಟ
ಯಾದವರೊಡನೆ ಬಂದ ಕೃಷ್ಣ ಬಲರಾಮರ
ಯುಕ್ತರೀತಿಯಲಾದರಿಸಿದ ಭೀಷ್ಮಕ
ಪಟ್ಟಣದ ಸ್ರ್ತೀಪುರುಷರೆಲ್ಲರೂ
ಕೃಷ್ಣನ ದಿವ್ಯ ರೂಪವನು ನೋಡಿ
ಪರಮಾನಂದದಿ ರುಕ್ಮಿಣಿಗೆ ಈತನೇ
ಯೋಗ್ಯ ವರನೆಂದು ಹಂಬಲಿಸಿ
ಅವಳ ಶಿಶುಪಾಲಗೆ ನೀಡುತ್ತಿದ್ದ
ರುಕ್ಮಿಯ ಶಪಿಸಿದರು
ಅತ್ತ ಅರಮನೆಯ ಬಳಿ ರಾಜಪುತ್ರಿಯು
ಅಂಬಿಕಾ ದರ್ಶನಕೆ ಹೊರಟ ಸಮಾರಂಭಕೆ
ಭೇರಿ ನಿಸ್ಸಾಳ ವಾದ್ಯಗಳು ಮೊಳಗೆ
ಅಗಾಧ ಚದುರಂಗ ಸೈನ್ಯ ರಕ್ಷಣೆಯಲಿ
ಮಂದಗಮನದಿ ಬರುತಿರ್ಪ
ರುಕ್ಮಿಣೀ ದೇವಿ ಗಿರಿಜಾ ಮಂದಿರವ ಹೊಕ್ಕು
ಭಕ್ತಿ ಭಾವದಿ ದೇವಿಯನು ಪೂಜಿಸಿ
ಕೃಷ್ಣಸ್ವಾಮಿಯೇ ಪತಿಯಾಗಲೆಂದು ಪ್ರಾರ್ಥಿಸೆ
ಬ್ರಾಹ್ಮಣ ಮುತೈದೆಯರೂ ಕೃಷ್ಣಮೂರ್ತಿಯನ್ನೇ
ರಮಣನನ್ನಾಗಿ ಪಡೆ
ಎಂದಾಶೀರ್ವದಿಸಿದರು
ನಿಧಾನವಾಗಿ ದೇಗುಲದಿಂ ಹೊರಬಂದು
ತನ್ನ ರಥವೇರಲು ನೋಡುತಿರೆ
ಕೃಷ್ಣ ಮಿಂಚಿನಂತೆ
ಅವಳ ಬಳಿ ಬಂದು ಕೈಹಿಡಿದು
ಗರುಡಧ್ವಜದಿಂ ಅಲಂಕೃತ
ತನ್ನ ರಥವನ್ನೇರಿಸಿಕೊಂಡು
ಬಲರಾಮನೊಡನೆ ತಾನೂ ರಥವನೇರಿ
ನಿರ್ಭಯನಾಗಿ ಹೊರಟುಬಿಟ್ಟ
ಶಿಶುಪಾಲ ರುಕ್ಮಿ ಜರಾಸಂಧರ ಸೈನಿಕರು
ನೋಡು ನೋಡುತ್ತಿದಂತೆಯೇ ಅವರ ಕಣ್ಣೆದುರೇ
ಸಿಂಹವು ನರಿಗಳ ಗುಂಪಿನಿಂದ
ತನ್ನ ಆಹಾರವ ಎತ್ತಿಕೊಂಡಂತೆ
ರುಕ್ಮಿಣಿಯೊಡನೆ ಹೊರಟ ಕೃಷ್ಣ ಬಲರಾಮರ
ಬೆನ್ನಟ್ಟಿದ ಜರಾಸಂಧಾದಿ ಸೈನಿಕರಿಗೂ ಯಾದವರಿಗೂ
ನಡೆದ ಯುದ್ಧದಲಿ ಕೃಷ್ಣ ಬಲರಾಮರು
ವಿಜಯದ ನಗೆಬೀರಿ
ರುಕ್ಮಿಯ ವಧಿಸ ಹೊರಟಾಗ
ರುಕ್ಮಿಣಿಯ ಪ್ರಾರ್ಥನೆಗೆ ಓಗೊಟ್ಟು
ಅವನ ಕೊಲ್ಲದೇ ಬಿಟ್ಟರು
ದ್ವಾರಕಾನಗರಿಯಲಿ ಗುರುಗಳ
ಹಿರಿಯರ ಸಮಕ್ಷಮದಿ
ಅತ್ಯಂತ ವಿಜೃಂಭಣೆಯಿಂದ
ರುಕ್ಮಿಣಿಯ ವಿವಾಹವಾದ ಶ್ರೀ ಕೃಷ್ಣ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45008

-ಎಂ. ಆರ್. ಆನಂದ, ಮೈಸೂರು


ರುಕ್ಮಿಣಿ ಶ್ರೀಕೃಷ್ಣರ ವಿವಾಹ ಮಹೋತ್ಸವದ ಸಂಭ್ರಮ ನನ್ನಲ್ಲೂ ಮನೆ ಮಾಡಿತು. ಭಾಗವತದ ಚಂದದ ಭಾಗ ಮುದ ನೀಡಿತು.
ವಾವ್ ರುಕ್ಮಿಣಿ ಕೃಷ್ಣ ರ ವಿವಾಹ ಪ್ರಸಂಗ ಮನಕ್ಕೆ ಮುದ ತಂದಿತು..ಪ್ರಸಂಗದ ಅನಾವರಣ ಚೆನ್ನಾಗಿ ಮೂಡಿಬಂದಿದೆ
.ಸಾರ್
ಪ್ರಕಟಣೆಗಾಗಿ ಸುರಹೊನ್ನೆಯ ಸಂಪಾದಕರಿಗೆ ಧನ್ಯವಾದಗಳು
ನಮಸ್ತೆ. ಆನಂದ್ ಅವರೇ..
ಕುಂಡನೀಯ ನಗರವಂತೆ
ಭೀಷ್ಮಕರಾಯನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ
ನಿನಗೆ ಓಲೆ ಕಳುಹಿದಳಂತೆ
ಈ ಸಾಲುಗಳನ್ನು ನೆನಪು ಮಾಡಿದ ನಿಮ್ಮ ಬರಹ ಮುದನೀಡಿತು.. .. ಧನ್ಯವಾದಗಳು
Nice
ದುಷ್ಟರನ್ನು ದಮನಿಸಿ, ಕೃಷ್ಣ ರುಕ್ಮಿಣಿಯನ್ನು ವಿವಾಹವಾದ ಕಥಾಭಾಗ ಚೆನ್ನಾಗಿ ಮೂಡಿಬಂದಿದೆ.
ಪ್ರಕಟಿಸಿದ “ಸುರಹೊನ್ನೆ” ಗೂ ಪ್ರತಿಕಿಯಿಸಿದ ಸಹೃದಯ ವಾಚಕರಿಗೂ ಅನಂತಾನಂತ ಧನ್ಯವಾದಗಳು.