ದಶಮ ಸ್ಕಂದ – ಪೂರ್ವಾರ್ಧ –ಅಧ್ಯಾಯ – 3
ಶ್ರೀ ಬಾಲಕೃಷ್ಣ ಲೀಲೆ -3 – “ ಗೋಕುಲ ನಿರ್ಗಮನ”
ಕಾಲಕಾಲಕೆ ತನ್ನ ಅಚಿಂತ್ಯ ಅದ್ಭುತ
ಮಹಿಮೆಗಳ ತೋರುತ್ತಿದ್ದರೂ
ಯಶೋದೆ ನಂದಗೋಪರಿಗೂ, ಗೋಕುಲದ
ಗೋಪಾಲಕ, ಗೋಪಿಯರಿಗೂ
ಕೃಷ್ಣ ಕೇವಲ ತಮ್ಮ ಶಿಶುವೆಂಬ ಭಾವ ಮರೆಯಾಗದೆ
ಅವ ಸರ್ವೇಶ್ವರನೆಂಬ ಭಾವ ಮೂಡದಿದ್ದುದು
ಆ ಪರಮಪುರುಷನ ಅಗಾಧ ಮಾಯೆಯೇ ಸರಿ
ಗೋಕುಲದಿ ಶ್ರೀಕೃಷ್ಣ ಬಲರಾಮ ಜನ್ಮನಂತರದಿ ಅನೇಕ
ಉತ್ಪಾತಗಳು ಸಂಭವಿಸಿ
ಕೃಷ್ಣಪ್ರಾಣಪಹರಣ ಪ್ರಯತ್ನಗಳೆಲ್ಲವೂ
ವಿಫಲವಾದುದು ಭಗವತ್ ಅನುಗ್ರಹ
ಇಂತಹ ಅಪಾಯಕಾರೀ ಗೋಕುಲವ ನಿರ್ಗಮಿಸಿ
ಸಮೀಪದ ವೃಂದಾವನಕೆ ತೆರಳಬೇಕೆಂಬ
ವಯೋವೃದ್ಧ ಜ್ಙಾನವೃದ್ಧ ಉಪನಂದನನ
ಸಲಹೆಗೆ ಸಮ್ಮತಿಸಿ ಗೋಕುಲವ ನಿರ್ಗಮಿಸಿ
ವೃಂದಾವನ ಪ್ರವೇಶಕ್ಕೆ ಸಜ್ಜಾದರು
ಸಕಲ ಗೋಕುಲ ನಿವಾಸಿಗರು
ವೃಂದಾವನ, ಗೋವರ್ಧನ ಪರ್ವತ
ಯಮುನಾ ನದಿಯ ಬೀಡು
ಹಣ್ಣುಕಾಯಿ ಹೂ ತುಂಬಿದ ಮನೋಹರ ತಾಣ
ಯಮುನೆಯ ದಂಡೆಯ ಮರಳ ರಾಶಿ
ಮನೋಹರ ಬಯಲುಗಳಲಿ
ಬಲರಾಮ ಕೃಷ್ಣ ಗೋಪ ಬಾಲಕರ ವಿಹಾರ
ಕೃಷ್ಣನಾ ಕೊಳಲಿನಾ ಕರೆ
ಕಣ್ಣು ಮುಚ್ಚಾಲೆ, ಮರಕೋತಿಯಾಟದ
ಲಗ್ಗೆ ಚಂಡುಗಳನ್ನಾಡುವ ವಿವಿಧ ಬಾಲಕ್ರೀಡೆಗಳಲಿ
ನಲಿದು ಕುಣಿದು ಕುಪ್ಪಳಿಸಿ
ವೃಂದಾವನದಲಿ ನೆಲೆಯಾದರು ಗೋಪಕರು
ಕೃಷ್ಣ ಬಲರಾಮರೊಡಗೂಡಿ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44308

-ಎಂ. ಆರ್. ಆನಂದ, ಮೈಸೂರು

