ಪ್ರವಾಸ

ದೇವರ ದ್ವೀಪ ಬಾಲಿ : ಪುಟ-13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಂಕಿ ಫಾರೆಸ್ಟ್
‘ಬಾಲಿ’ ದ್ವೀಪದ ಉಬೂದ್  ಪಟ್ಟಣದಿಂದ 15 ಕಿಮೀ ದೂರದ   ‘ಸಂಘೇ’ (Sangeh)ಎಂಬ ಹಳ್ಳಿಯಲ್ಲಿ  ಕಪಿಗಳಿಗಾಗಿ ಮೀಸಲಾದ  ‘ಮಂಕಿ ಫಾರೆಸ್ಟ್’  ಅರಣ್ಯವಿದೆ. ಇದನ್ನು ಪವಿತ್ರ ಸ್ಥಳ ಎಂದು ಪರಿಗಣಿಸುತ್ತಾರೆ.   ಅರಣ್ಯದ ಆವರಣದಲ್ಲಿ ರಾಮ, ಲಕ್ಷಣ , ಸೀತೆ, ಹನುಮಂತ ಮೊದಲಾದ  ಬಾಲಿನೀಸ್  ರಾಮಾಯಣದ ಪಾತ್ರಗಳ ಪರಿಕಲ್ಪನೆಯ ಪತ್ರಿಮೆಗಳು ಹಾಗೂ ಗುಡಿಗಳಿವೆ.  ಕಡಿಮೆ  ಜನಸಂಚಾರ ಮತ್ತು ವಾಹನದಟ್ಟಣೆಯಿರುವ ಈ ಅಭಯಾರಣ್ಯದಲ್ಲಿ ಮಂಗಗಳು ಸ್ವಚ್ಚಂದವಾಗಿ ವಾಸಿಸುತ್ತವೆ.  ಟಿಕೆಟ್ ಕೌಂಟರ್ ನ ಪಕ್ಕದಲ್ಲಿ ಮಂಗಗಳಿಗೆ ಆಹಾರವಾಗಿ ಕೊಡಲು ಕಡಲೇಕಾಯಿ ಮತ್ತು ಜೋಳವನ್ನು ಮಾರುತ್ತಾರೆ. ಅರಣ್ಯದ ಒಳಗೆ ಸುಮಾರು 500 ಮೀ ನಷ್ಟು ಕಾಲುದಾರಿಯಲ್ಲಿ ನಾವು ನಡೆದಾಡಲು ಅನುಮತಿಯಿದೆ.   ಇಲ್ಲಿ ಕಪಿಗಳಿಗೆ ಪ್ರವಾಸಿಗರನ್ನು ನೋಡಿ ಮತ್ತು ಅವರಿಂದ ಆಹಾರವನ್ನು ಪಡೆದು ಅಭ್ಯಾಸವಾದ ಕಾರಣ, ನಿರ್ಭೀತಿಯಿಂದ ಪ್ರವಾಸಿಗರು ಕುಳಿತಿದ್ದಲ್ಲಿಗೆ ನಿಧಾನವಾಗಿ  ಬಂದು  ಕೈಯಿಂದಲೇ  ಕಡಲೇಕಾಯಿ ತಿನ್ನುತ್ತವೆ.  ಹೊಟ್ಟೆ ತುಂಬಿದ ಕಾರಣ ಇವುಗಳು ಆಕ್ರಮಣಕಾರಿಯಾಗಿರುವುದಿಲ್ಲ.    ಮಂಗಗಳು ಪ್ರವಾಸಿಗರ   ಭುಜವನ್ನೇರುವುದು, ಪಕ್ಕದಲ್ಲಿ ಕೂರುವುದು……ಹೀಗೆ ವಿವಿಧ ಭಂಗಿಯಲ್ಲಿ ಸೆಲ್ಫಿ ತೆಗೆಯಲು ಧಾರಾಳವಾಗಿ ಅವಕಾಶ   ಕೊಡುತ್ತವೆ.

07/09/2025 ರಂದು  ಚಂದ್ರಗ್ರಹಣವಿತ್ತು. ಹಾಗಾಗಿ ನಮ್ಮ ತಂಡದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಅವರು ನಮಗೆ  ರಾತ್ರಿಯ ಊಟದ ಬದಲು ಅವಲಕ್ಕಿ ಒಗ್ಗರಣೆ   ಕೊಡುತ್ತೇವೆ ಎಂದರು.  ಹೋಂ ಸ್ಟೇಗೆ  ಹಿಂತಿರುಗುವ ದಾರಿಯಲ್ಲಿ ಆ ಸಮಯದಲ್ಲಿ  ವಿಪರೀತ ವಾಹನ ದಟ್ಟಣೆಯು  ಬೆಂಗಳೂರಿನ ಕೆಲವು ರಸ್ತೆಗಳ ಟ್ರಾಫಿಕ್ ಜಾಮ್ ನೆನಪಿಸಿತು.  ಹೋಂ ಸ್ಟೇಗೆ ತಲಪಿ, ರುಚಿಯಾಗಿದ್ದ ಫಲಾಹಾರ ಸೇವಿಸಿ, ಸ್ವಲ್ಪ ಬೇಗನೇ ವಿಶ್ರಮಿಸಿದೆವು,  ಸ್ಥಳೀಯ ಮುಂಜಾನೆ 1.45 ಗಂಟೆಗೆ ಸಂಭವಿಸಲಿರುವ   ಚಂದ್ರಗ್ರಹಣವನ್ನು ವಿದೇಶದ ನೆಲದಲ್ಲಿ  ನೋಡಲು ಉತ್ಸುಕರಾಗಿದ್ದೆವು. ಆದರೆ ಅಲಾರ್ಮ್ ಇಟ್ಟುಕೊಂಡು ಆ ಸಮಯಕ್ಕೆ ಎದ್ದು ಹೊರಬಂದೆನಾದರೂ, ಆಗ  ಚಂದ್ರನಿಗೆ ಮೋಡ ಮರೆಯಾಗಿದ್ದ ಕಾರಣ ಗ್ರಹಣ ಗೋಚರಿಸಿಲಿಲ್ಲ. ಕೆಲವರು 2-3 ಬಾರಿ  ಬೇರೆ  ಸಮಯದಲ್ಲಿ ಬಂದು ಆಂಶಿಕವಾಗಿದ್ದ ಗ್ರಹಣವನ್ನು ನೋಡಿದ್ದರೆಂದು ಗೊತ್ತಾಯಿತು..   

08/09/2025 ರಂದು , ಬೆಳಗಿನ  ವಾಕಿಂಗ್, ಉಪಾಹಾರ ಮುಗಿಸಿ ಸಿದ್ಧರಾದೆವು. ಮಾರ್ಗದರ್ಶಿ ಮುದ್ದಣ ನಮ್ಮನ್ನು ‘ ಸರಿ ದೇವಿ’  ಎಂಬ ಹೆಸರಿನ ಚಿನ್ನ, ಬೆಳ್ಳಿ ಆಭರಣಗಳ ಮಾರಾಟದ ಮಳಿಗೆಗೆ ಕರೆದೊಯ್ದರು. ಆಭರಣಗಳ ವಿನ್ಯಾಸಗಳು ಸೊಗಸಾಗಿಯೇ ಇದ್ದರೂ,  ಬೆಲೆ ಜಾಸ್ತಿ ಎನಿಸಿತ್ತು.  ಪಕ್ಕದ ಇನ್ನೊಂದು ಕಡೆ ಮಗ್ಗದಲ್ಲಿ ಬಟ್ಟೇ ನೇಯುವುದು ಮತ್ತು ಬಟ್ಟೆಯ ಮೇಲೆ  ಬಾಟಿಕ್ ಪೈಂಟಿಂಗ್ ಮಾಡುವ ಪ್ರಾತ್ಯಕ್ಷಿಕೆ  ಇತ್ತು.  ಮಗ್ಗವನ್ನು ನೋಡುತ್ತಾ ನಮ್ಮ ಮಾರ್ಗದರ್ಶಿ ಮುದ್ದಣ ತನ್ನ ತಾಯಿಯನ್ನು ನೆನಪಿಸಿಕೊಂಡರು. ಬಹಳ ಪರಿಶ್ರಮಿ ಮಹಿಳೆಯಾಗಿದ್ದ ಆಕೆ, ಗರ್ಭವತಿಯಾಗಿದ್ದಗಲೂ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು.  ಹಾಗಾಗಿ, ಆರನೆಯ  ತಿಂಗಳಿನಲ್ಲಿ  ಜನಿಸಿದ  ಮಗುವೇ ‘ಮುದ್ದಣ’.  ಅವಧಿಪೂರ್ವವಾಗಿ ಜನಿಸಿದ ಮಗುವನ್ನು ಬದುಕಿಸಲು ಇನ್ನಿಲ್ಲದ ಕಾಳಜಿ ವಹಿಸಿದ್ದರಂತೆ.  ಪಕ್ಕದಲ್ಲಿದ್ದ ಮಾಲ್ ನಲ್ಲಿ ಹಲವಾರು ಕರಕುಶಲ ವಸ್ತುಗಳ  ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿತ್ತು. ನಾವು ಕೆಲವರು ಬಾಲಿಯ ನೆನಪಿಗಾಗಿ  ಪರ್ಸ್, ಟೋಪಿ ಇತ್ಯಾದಿ ಖರೀದಿಸಿದೆವು. 

ಉಬೂದ್ ನ ಹೋಂ ಸ್ಟೇಯಿಂದ  ‘ನುಸಾ ಡುವಾ’ (Nusa Dua) ಎಂಬಲ್ಲಿಗೆ  ಪ್ರಯಾಣಿಸಿದೆವು. ಈ ದಾರಿಯಲ್ಲಿ ಕಾಣಸಿಕ್ಕಿದ ಒಂದು ವೃತ್ತದಲ್ಲಿ  ರಾಮ ಸೇತುಬಂಧನದ ಸೊಗಸಾದ ಪ್ರತಿಮೆಗಳಿದ್ದುವು.  ಸುಮಾರು 40 ಕಿಮೀ ಪ್ರಯಾಣಿಸಿದ ನಂತರ  ಸರ್ವಧರ್ಮ ಭಾವೈಕ್ಯತೆ ಸಾರಲೆಂದು  ರಚಿಸಲಾದ   ‘ಪೂಜಾ ಮಂಡಲ’ ಎಂಬ  ಆರಾಧನಾ ಸ್ಥಳಗಳ ಸಮುಚ್ಛಯ ತಲಪಿದೆವು.  ಇಲ್ಲಿ ಒಂದೇ ಆವರಣದಲ್ಲಿ   ಹಿಂದೂ ದೇವಾಲಯ ಸಮುಚ್ಚಯ,  ಮಸೀದಿ, ಕೆಥೋಲಿಕ್ ಚರ್ಚ್ , ಪ್ರಾಟೆಸ್ಟಂಟ್ ಚರ್ಚ್  ಹಾಗೂ ಬೌದ್ಧರ ಮಂದಿರವಿದೆ.  ನಾವು ಹೋಗಿದ್ದ ಸಮಯ ನಿಶ್ಶಬ್ದವಾಗಿತ್ತು ಹಾಗೂ ಯಾವುದೇ ಆರಾಧನಾ ಸ್ಥಳಗಳಿಗೆ ಪ್ರವೇಶವಿರಲಿಲ್ಲ. ಇಲ್ಲಿ  ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ಇರುತ್ತಾರೆಯೇ ಎಂದು ಕೇಳಿದಾಗ,  ‘ಬಾಲಿ ದ್ವೀಪದಲ್ಲಿ ಎಲ್ಲಾ ಧರ್ಮದವರು ಸ್ನೇಹದಿಂದ ಇರುತ್ತಾರೆ, ಆದರೆ ಇಂಡೋನೇಶ್ಯಾದ ಎಲ್ಲಾ ಕಡೆ ಇದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಇಲ್ಲಿಯೂ ಕೆಲವೊಮ್ಮೆ ಆಯಾ ಧರ್ಮದವರ ವಿಶೇಷ ಪೂಜಾ ದಿನಗಳಂದು  ವಾಹನಗಳನ್ನು ಇನ್ನೊಂದು ಮಂದಿರದ ಎದುರು ಪಾರ್ಕ್ ಮಾಡಿದರೆ ಗಲಾಟೆಯಾಗುವುದಿದೆ’ ಎಂದು ವಾಸ್ತವವನ್ನು ಬಿಚ್ಚಿಟ್ಟರು ಮುದ್ದಣ.

ಅಲ್ಲಿಂದ ಮುಂದುವರಿದು ಸುಮಾರು ಒಂದು ಗಂಟೆ ಪ್ರಯಾಣಿಸಿ  ‘ಪಾಂಟೈ ಪಾಂಡವ’ ಎಂದು ಸ್ಥಳೀಯ ಭಾಷೆಯಲ್ಲಿ ಕರೆಯಲಾಗುವ ಕಡಲ ತೀರಕ್ಕೆ ಬಂದೆವು. ಇಲ್ಲಿ ಕಡಲ ತೀರ ಸ್ವಚ್ಚವಾಗಿತ್ತು.  ತಿಂಡಿ, ತಿನಿಸುಗಳ ಅಂಗಡಿಗಳ ಜೊತೆಗೆ  ಸಾಹಸಿ ಪ್ರವೃತ್ತಿಯವರಿಗಾಗಿ ಪಾರಾ ಗೈಂಡಿಂಗ್ ಸಾಹಸ ಕ್ರೀಡೆಗೆ ಅವಕಾಶವಿತ್ತು.  ಮಾರ್ಗದ  ಗೋಡೆಯಲ್ಲಿ  ಕೊರೆದ  ಪ್ರತ್ಯೇಕ   ಗುಡಿಗಳಲ್ಲಿ ಕುಂತಿ ಮತ್ತು ಯುಧಿಷ್ಟಿರ, ಅರ್ಜುನ, ಭೀಮ, ನಕುಲ, ಸಹದೇವ  ಪ್ರತಿಮೆಗಳನ್ನು ಇರಿಸಿದ್ದರು.  ನಮ್ಮ  ದೇಶದಲ್ಲಿ ರಾಮಾಯಣ , ಮಹಾಭಾರತದ ಪಾತ್ರಗಳು ಜನಜೀವನದಲ್ಲಿ ಅದೆಷ್ಟು ರೂಢಿಗತವಾಗಿದೆಯೆಂದರೆ, ಪ್ರತಿ ಜಿಲ್ಲೆಯಲ್ಲಿಯೂ  ಯಾವುದೋ ಸ್ಥಳ, ಬೆಟ್ಟ, ನದಿ , ಸರೋವರ ಇತ್ಯಾದಿಗಳು ರಾಮ, ಸೀತೆ, ಲಕ್ಷ್ಮಣರ ಕತೆ ಹೇಳುತ್ತವೆ.  ಹಲವಾರು ಬೆಟ್ಟಗಳಲ್ಲಿ ಭೀಮನ ಹೆಜ್ಜೆ ಗುರುತಿರುತ್ತದೆ. ಇಂತಹ ಪರಿಕಲ್ಪನೆಯು, ಹಿಂದೂ ಮಹಾ ಸಾಗರದ ಪೂರ್ವದ ಕಿನಾರೆಯಾದ ಬಾಲಿಯ ನೆಲದಲ್ಲಿಯೂ ಹಾಸುಹೊಕ್ಕಾಗಿದೆ ಎಂಬುದು ರೋಚಕ ಅನುಭೂತಿ ಕೊಡುತ್ತದೆ.

ನಮ್ಮ ವಾಹನವನ್ನು ನಿಲ್ಲಿಸಿದ್ದ  ಜಾಗದಲ್ಲಿ. ರಾಕೇಶ್ ಅವರು ತಯಾರಿಸಿ ತಂದಿದ್ದ ವಾಂಗಿಭಾತ್, ಕೇಸರಿಭಾತ್, ಮೊಸರನ್ನದೊಂದಿಗೆ ಮಧ್ಯಾಹ್ನದ ಊಟ ಸಂಪನ್ನವಾಯಿತು.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44284

ಹೇಮಮಾಲಾ.ಬಿ. ಮೈಸೂರು

2 Comments on “ದೇವರ ದ್ವೀಪ ಬಾಲಿ : ಪುಟ-13

  1. ಪ್ರವಾಸ ಕಥನ ಮನಕ್ಕೆ ಮುದಕೊಡುತ್ತಿದೆ ಗೆಳತಿ ಹೇಮಾ..ಸೊಗಸಾದ ನಿರೂಪಣೆ ಗಮನ ಸೆಳೆಯುತ್ತದೆ..ಹಾಕುವ ಚಿತ್ರ ..ಮತ್ತೆ ಮತ್ತೆ ನೋಡಿಕೊಳ್ಳುತ್ತಾ ಓದುವ ಹಾಗಿರುತ್ತೇ… ಪ್ರವಾಸ ಕಥನ ಶೈಲಿ ನಿಮ್ಮ ಕೈಹಿಡಿದಿದೆ ..ಚಿನ್ನಾಗಿ ದುಡಿಸಿಕೊಳ್ಳಿ..

  2. ಬಹಳ ಸೊಗಸಾಗಿದೆ. ಒಂದು ರೀತಿ ಮನಸಿಗೆ ಹಿತ ನೀಡುವ ಪ್ರವಾಸ ಕಥನ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *